WhatsApp ನಿಂದ ಡಿಲೀಟ್ ಆದ ಫೋಟೋ/ವೀಡಿಯೊ ಮರಳಿ ಪಡೆಯುವುದು ಹೇಗೆ?

0
718

WhatsApp Deleted photo recoveryವಾಟ್ಸ್ಆ್ಯಪ್ ಎಂಬ ಕಿರು ಸಂವಹನ ವೇದಿಕೆಯು ಈದಿನಗಳಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ನೂರಾರು ಗ್ರೂಪುಗಳಿಗೆ ಯಾರ್ಯಾರೋ ಸೇರಿಸಿರುತ್ತಾರೆ, ಕೆಲವೊಂದು ಅತ್ಯುಪಯುಕ್ತ ಮಾಹಿತಿಗಳು ವಿನಿಮಯವಾಗುತ್ತವೆಯಾದರೂ, ಅದರಲ್ಲಿ ಬರುವ ಫೋಟೋ, ವೀಡಿಯೋಗಳನ್ನು ಡೌನ್‌ಲೋಡ್ ಮಾಡಿದರೆ, ಮೊಬೈಲ್ ಫೋನ್‌ನಲ್ಲಿ ಸ್ಪೇಸ್ (ಸ್ಥಳಾವಕಾಶ) ಕೊರತೆ ಕಾಡುತ್ತದೆ. ಹೀಗಾಗಿ ಡೌನ್‌ಲೋಡ್ ಮಾಡಿದ ಫೈಲುಗಳಲ್ಲಿ ಅನಗತ್ಯ ಫೈಲುಗಳನ್ನು ಆಯಾ ದಿನವೇ ರಾತ್ರಿ ಮಲಗುವ ಮುನ್ನ ಒಮ್ಮೆ ಡಿಲೀಟ್ ಮಾಡಿಟ್ಟುಕೊಂಡುಬಿಟ್ಟರೆ, ಮರು ದಿನ ಮತ್ತಷ್ಟು ಡೌನ್‌ಲೋಡ್ ಮಾಡಲು ಹೆಚ್ಚು ಸ್ಥಳಾವಕಾಶ ಸಿಗುವಂತಾಗುತ್ತದೆ. ಜತೆಗೆ, ಒಮ್ಮೆಗೇ ನೂರಾರು ಫೈಲುಗಳನ್ನು ಡಿಲೀಟ್ ಮಾಡುವುದಕ್ಕಿಂತ ಆಯಾ ದಿನದ ಫೈಲುಗಳನ್ನು ಕ್ಲಿಯರ್ ಮಾಡಿಕೊಳ್ಳುವುದು ಸುಲಭ.

ಒಮ್ಮೊಮ್ಮೆ ಹಲವಾರು ಫೈಲುಗಳನ್ನು ಏಕಕಾಲದಲ್ಲಿ ಡಿಲೀಟ್ ಮಾಡಿದಾಗ ಕೈತಪ್ಪಿ, ಕೆಲವೊಂದು ಅಗತ್ಯವಿರುವ ಫೈಲುಗಳೂ ಡಿಲೀಟ್ ಆಗಿಬಿಡುತ್ತವೆ. ಅದನ್ನು ಕಳುಹಿಸಿದವರಿಂದ ಮತ್ತೆ ತರಿಸಿಕೊಳ್ಳುವುದು ಹೆಚ್ಚುವರಿ ಕೆಲಸ. ಇದಕ್ಕಾಗಿಯೇ ಈಗ ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅದೆಂದರೆ, ಆಡಿಯೋ, ವೀಡಿಯೋ ಮತ್ತು ಫೋಟೋ ಮತ್ತಿತರ ಫೈಲುಗಳನ್ನು ನೀವು ಡಿಲೀಟ್ ಮಾಡಿದರೆ, ಅದು ವಾಟ್ಸ್ಆ್ಯಪ್ ಸರ್ವರ್‌ನಿಂದ ತಕ್ಷಣವೇ ಡಿಲೀಟ್ ಆಗುವುದಿಲ್ಲ. 30 ದಿನಗಳ ಕಾಲಾವಕಾಶ ಇರುತ್ತದೆ. ಅಷ್ಟರೊಳಗೆ ನೀವು ಮತ್ತೊಮ್ಮೆ ಅದೇ ಸಂದೇಶವನ್ನು ನೋಡಿದರೆ, ಪುನಃ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಗೋಚರಿಸುತ್ತದೆ.

ಮೊದಲೆಲ್ಲ ನಮ್ಮ ಫೋನ್ ಗ್ಯಾಲರಿಯಿಂದ ವಾಟ್ಸ್ಆ್ಯಪ್ ಫೈಲುಗಳನ್ನು ಅಳಿಸಿ ಹಾಕಿದರೆ, ಮರಳಿ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಇರಲಿಲ್ಲ. ಅಂದರೆ ಅದು ವಾಟ್ಸ್ಆ್ಯಪ್ ಸರ್ವರ್‌ನಿಂದಲೇ ಅಳಿಸಿ ಹೋಗುತ್ತಿತ್ತು. ಮಸುಕಾದ ಚಿತ್ರ ಮಾತ್ರ ಕಾಣಿಸುತ್ತಿತ್ತು. ಈಗ ಹಾಗಲ್ಲ. ನಿಮ್ಮಲ್ಲಿರುವ ವಾಟ್ಸ್ಆ್ಯಪ್ ಅನ್ನು ಹೊಚ್ಚ ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಂಡರೆ, ಅದು ಸ್ಪಷ್ಟವಾಗಿಯೇ ಕಾಣಿಸುತ್ತದೆ, ಅದರ ಮೇಲೆ ಬೆರಳಿನಿಂದ ಸ್ಪರ್ಷಿಸಿದರೆ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಮರಳಿ ಕಾಣಿಸುತ್ತದೆ.

ಆದರೆ ಇಲ್ಲೊಂದು ಸಂಗತಿಯನ್ನು ನಾವು ಗಮನಿಸಬೇಕು. ನಿಮ್ಮ ಸ್ನೇಹಿತರು ಅಥವಾ ಗ್ರೂಪಿನ ಮೂಲಕ ಬಂದ ಆ ಸಂದೇಶವನ್ನು ನೀವು ವಾಟ್ಸ್ಆ್ಯಪ್‌ನಿಂದಲೇ ಡಿಲೀಟ್ ಮಾಡಿರಬಾರದು. ಗ್ಯಾಲರಿಯ ಮೂಲಕ ಅಥವಾ ಫೈಲ್ ಎಕ್ಸ್‌ಪ್ಲೋರರ್ ಮೂಲಕವಾಗಿ ಬ್ರೌಸ್ ಮಾಡಿ ಡಿಲೀಟ್ ಮಾಡಿದ ಫೈಲುಗಳಿಗೆ ಮಾತ್ರ ಈ ನಿಯಮ ಅನ್ವಯ.

ಇಷ್ಟಲ್ಲದೆ, ನೀವು ಡೌನ್‌ಲೋಡ್ ಮಾಡಿಕೊಳ್ಳದಿರುವ ಫೋಟೋ, ವೀಡಿಯೋ ಫೈಲುಗಳು ಕೂಡ 30 ದಿನಗಳ ಕಾಲ ಮಾತ್ರ ಸರ್ವರ್‌ನಲ್ಲಿ ಇರುತ್ತವೆ. ಹೀಗಾಗಿ, ಕಳೆದ ತಿಂಗಳು ಯಾರೋ ಕಳುಹಿಸಿದ ಫೈಲನ್ನು ಈಗ ಡೌನ್‌ಲೋಡ್ ಮಾಡಿಕೊಳ್ಳುತ್ತೇನೆಂದು ಹೋದರೆ, ಅದು ಸಾಧ್ಯವಾಗುವುದಿಲ್ಲ.

ಮೊಬೈಲ್‌ನಲ್ಲಿ ವಾಟ್ಸ್ಆ್ಯಪ್ ಫೈಲುಗಳು ತುಂಬದಂತೆ ಏನು ಮಾಡಬಹುದು?
ವಾಟ್ಸ್ಆ್ಯಪ್ ಮೂಲಕ ದಿನವೊಂದಕ್ಕೆ ಬರುವ ಫೈಲುಗಳು ನೂರಾರಿದ್ದರೆ, ಕೆಲವರಿಗೆ ಸಾವಿರಾರು. ಅವುಗಳೆಲ್ಲವೂ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆದರೆ ಕೆಲವೇ ದಿನಗಳಲ್ಲಿ ಮೊಬೈಲ್‌ನ ಮೆಮೊರಿ (ಸ್ಥಳಾವಕಾಶ) ಭರ್ತಿಯಾಗಿಬಿಟ್ಟು, ‘ಫೈಲ್ ಡೌನ್‌ಲೋಡ್ ಆಗುವುದಿಲ್ಲ, ಮೆಮೊರಿ ಡಿಲೀಟ್ ಮಾಡಿ’ ಎಂಬ ಸಂದೇಶ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ವಾಟ್ಸ್ಆ್ಯಪ್ ಸೆಟ್ಟಿಂಗ್ಸ್‌ಗೆ ಹೋಗಿ (ಬಲ ಮೇಲ್ಭಾಗದಲ್ಲಿರುವ ಮೂರು ಲಂಬ ಚುಕ್ಕಿಗಳನ್ನು ಕ್ಲಿಕ್ ಮಾಡಿ), ಅಲ್ಲಿ ‘ಡೇಟಾ ಆ್ಯಂಡ್ ಸ್ಟೋರೇಜ್ ಯೂಸೇಜ್’ ಎಂಬುದನ್ನು ಒತ್ತಿಬಿಡಿ. ನಂತರ ‘ಮೀಡಿಯಾ ಆಟೋ ಡೌನ್‌ಲೋಡ್’ ಎಂಬಲ್ಲಿ “ವೆನ್ ಯೂಸಿಂಗ್ ಮೊಬೈಲ್ ಡೇಟಾ” ಮತ್ತು ಇತರ ಆಯ್ಕೆಗಳಿರುತ್ತವೆ. ಒಂದೊಂದಾಗಿ ಸ್ಪರ್ಶಿಸಿ, ಆಗ ಧುತ್ತನೇ ತೆರೆದುಕೊಳ್ಳುವ ಪಾಪ್-ಅಪ್ ವಿಂಡೋದಲ್ಲಿ ಎಲ್ಲ ಬಾಕ್ಸ್‌ಗಳಲ್ಲಿನ ಟಿಕ್ ಗುರುತುಗಳನ್ನು ತೆಗೆದುಬಿಡಿ (ಅನ್‌ಚೆಕ್ ಮಾಡಿ). ಇದರರ್ಥ, ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಬಾರದೆಂದು ನೀವು ಸೆಟ್ಟಿಂಗ್ ಮಾಡಿಕೊಳ್ಳುತ್ತೀರಿ ಅಂತ.

ಇನ್ನು, ಇಂಟರ್ನೆಟ್ ಸಂಪರ್ಕವಿರುವ ಕಂಪ್ಯೂಟರ್ ಬಳಸುತ್ತಿದ್ದರೆ, Web.WhatsApp.com ಎಂಬ ತಾಣಕ್ಕೆ ಬ್ರೌಸರ್ ಮೂಲಕ ಹೋಗಿ, ನಿಮ್ಮ ವಾಟ್ಸ್ಆ್ಯಪ್ ಖಾತೆಗೆ ಲಾಗಿನ್ ಆಗಿ. ಅಲ್ಲೇ ನಿಮಗೆ ಬೇಕಾಗಿರುವ ಫೋಟೋ, ವೀಡಿಯೋ ಫೈಲುಗಳನ್ನು ನೋಡುತ್ತಾ ಇರಬಹುದು. ಇಲ್ಲಿ ಡೌನ್‌ಲೋಡ್ ಮಾಡುವ ಅಗತ್ಯವಿರುವುದಿಲ್ಲ. ಕಂಪ್ಯೂಟರಿನ ತಾತ್ಕಾಲಿಕ ಫೋಲ್ಡರ್‌ಗೆ ಅದು ಡೌನ್‌ಲೋಡ್ ಆಗುತ್ತದಷ್ಟೇ. ಇದಕ್ಕಾಗಿಯೇ ವಾಟ್ಸ್ಆ್ಯಪ್ ತಾಣದಲ್ಲಿ ಕಂಪ್ಯೂಟರಿಗೆ ಅಳವಡಿಸಿಕೊಳ್ಳಬಹುದಾದ ತಂತ್ರಾಂಶವೂ ದೊರೆಯುತ್ತದೆ. ಅದನ್ನೂ ಬಳಸಬಹುದು.ನೋಡಿ, ಬೇಕಾಗಿರುವುದನ್ನು ಮಾತ್ರವೇ ಮರಳಿ ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರ ಮತ್ತೊಂದು ಅನುಕೂಲವೆಂದರೆ, ಯಾವುದೇ ಫೈಲನ್ನು ಡೌನ್‌ಲೋಡ್ ಮಾಡದೆಯೇ ಬೇರೊಬ್ಬರಿಗೆ ಅಥವಾ ಬೇರೊಂದು ಗ್ರೂಪಿಗೆ ಫಾರ್ವರ್ಡ್ ಮಾಡಲೂಬಹುದು. ಕಂಪ್ಯೂಟರಲ್ಲೇ ಎಲ್ಲವೂ ನಡೆಯುವುದರಿಂದ ನಿಮ್ಮ ಮೊಬೈಲ್ ಫೋನ್‌ನಲ್ಲಿ ಸ್ಥಳಾವಕಾಶಕ್ಕೇನೂ ಅಪಾಯವಿರುವುದಿಲ್ಲ.

ಈಗ ಹೊಸದಾಗಿ ಆ್ಯಪ್‌ಗೆ ಪರಿಚಯಿಸಲಾಗಿರುವ ವೈಶಿಷ್ಟ್ಯವು ಕಂಪ್ಯೂಟರ್‌ನಲ್ಲಿ ವಾಟ್ಸ್ಆ್ಯಪ್ ಬಳಸುತ್ತಿದ್ದವರಿಗೆ ಹಿಂದಿನಿಂದಲೇ ಲಭ್ಯವಿತ್ತು. ಅಂದರೆ, ಮೊಬೈಲ್ ಫೋನ್‌ನಿಂದ ಡಿಲೀಟ್ ಆಗಿದ್ದ ಫೈಲನ್ನು ಕಂಪ್ಯೂಟರ್ ಮೂಲಕ ವಾಟ್ಸ್ಆ್ಯಪ್‌ಗೆ ಲಾಗಿನ್ ಆಗಿ, ಮರಳಿ ಪಡೆದುಕೊಳ್ಳಬಹುದಿತ್ತು. ಇಲ್ಲಿಯೂ ಸಂದೇಶವೇ ಡಿಲೀಟ್ ಆಗಿದ್ದರೆ ಮರಳಿ ಪಡೆಯಲಾಗುವುದಿಲ್ಲ ಎಂಬ ನಿಯಮ ಅನ್ವಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಕಿರು ಸಾಮಾಜಿಕ ಸಂದೇಶವಾಹಕ ತಾಣವಾಗಿರುವ ವಾಟ್ಸ್ಆ್ಯಪ್ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ, ಅದೆಷ್ಟೋ ವೈಶಿಷ್ಟ್ಯಗಳು ಈಗಾಗಲೇ ಇವೆ. ಅವುಗಳಲ್ಲಿ ಬಹುತೇಕರಿಗೆ ಗೊತ್ತಿಲ್ಲದೇ ಇರುವ ಮತ್ತೊಂದು ವೈಶಿಷ್ಟ್ಯವೇ ‘ಸರ್ಚ್’. ಇತ್ತೀಚೆಗೆ ವಾಟ್ಸ್ಆ್ಯಪ್ ಸಂದೇಶವೊಂದು ಬಂದಿತ್ತು, ಅದು ಯಾವಾಗ, ಯಾವ ಗ್ರೂಪಲ್ಲಿ ಬಂದಿತ್ತು ಅಥವಾ ಯಾರಿಂದ ಬಂದಿತ್ತು ಎಂಬುದು ನೆನಪಾಗುತ್ತಿಲ್ಲ. ಆದರೆ ಅದರ ನಿರ್ದಿಷ್ಟವಾದ ಪದವೊಂದು ನೆನಪಾಗುತ್ತಿದೆಯೆಂದಾದರೆ, ವಾಟ್ಸ್ಆ್ಯಪ್ ತೆರೆದಾಗ ಮೇಲ್ಭಾಗದಲ್ಲಿರುವ ಸರ್ಚ್ ಬಟನ್‌ನಲ್ಲಿ ಆ ಪದವನ್ನು ಟೈಪ್ ಮಾಡಿದರೆ ಸಾಕು. ವಾಟ್ಸ್ಆ್ಯಪ್ ಆ ಪದವಿರುವ ಸಂದೇಶಗಳನ್ನು ಯಾವುದೇ ಗ್ರೂಪಲ್ಲಿ ಅಥವಾ ನಿರ್ದಿಷ್ಟ ಚಾಟ್‌ನಲ್ಲಿ ಇದ್ದರೆ ಹುಡುಕಿ ತೋರಿಸುತ್ತದೆ.

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 21 ಮೇ 2018 by ಅವಿನಾಶ್ ಬಿ.

LEAVE A REPLY

Please enter your comment!
Please enter your name here