ನಗರ ಬದುಕಿನ ಮಧ್ಯೆ ಮರೆಯಾದ ನಾಗರಿಕತೆ

0
263

ನಗರ ಜೀವನ ಶೈಲಿಯು ಮಾನವೀಯ ಸಂಬಂಧಗಳನ್ನು, ಕೌಟುಂಬಿಕ ಬೆಸುಗೆಯನ್ನು, ಮಾನವೀಯತೆಯನ್ನು ಕರಗಿಸುತ್ತದೆಯೇ? ಆಧುನಿಕತೆಯ ಅಲೆಗಳ ನಡುವೆ ಎಲ್ಲಿ ಮರೆಯಾಗುತ್ತಿದೆ ಮಾನವೀಯತೆ ಎಂಬುದು ಚರ್ಚಿಸಬೇಕಾದ ಸಂಗತಿ.

ಇದೇನು ನಗರ ಬದುಕಿನ ಸಂಕೀರ್ಣತೆಯೋ, ಮಧ್ಯಮವರ್ಗದ ಸುಶಿಕ್ಷಿತ ಜನಾಂಗವನ್ನು ಕಾಡುತ್ತಿರುವ ಕೆಲಸದೊತ್ತಡದ ಪರಿಣಾಮವೋ, ನಗರೀಕರಣದ ಮೋಜಿನ ಗೋಜಲಾದ ಪರಿಸ್ಥಿತಿಯೋ, ಸುಖ ಲೋಲುಪತೆಯ ತೀರದ ಬಯಕೆಯ ವಿಕ್ಷಿಪ್ತತೆಯೋ, ಅವಸರದ ಬದುಕಿನ ತಲ್ಲಣವೋ…

ದೆಹಲಿಯ ನೋಯಿಡಾದಲ್ಲಿ 14ರ ಹರೆಯದ ಅರುಷಿ ಎಂಬ ಹೆಣ್ಣುಮಗಳನ್ನು ತಂದೆಯೇ ಕೊಂದುಬಿಟ್ಟ, ಇತ್ತೀಚೆಗೆ ಬೆಂಗಳೂರಿನಲ್ಲಿ ಅಮಿತ್ ಎಂಬ ಟೆಕ್ಕೀಯೊಬ್ಬ ಪತ್ನಿಯನ್ನೇ ಕೊಂದ, ಮೊನ್ನೆ ಮೊನ್ನೆ ಮುಂಬಯಿಯಲ್ಲಿ ಟಿವಿ ನಿರ್ಮಾಪಕ ನೀರಜ್ ಗ್ರೋವರ್‌ನನ್ನು ಆತ್ಮೀಯರಾಗಿದ್ದವರೇ ಕೊಂದರು, ಅದಕ್ಕೆ ಮೊದಲು ತಲ್ಲಣಗೊಳಿಸಿದ್ದ ನಿಥಾರಿ ಹತ್ಯಾಕಾಂಡ… ಇವೆಲ್ಲಾ ಕೇವಲ ಇತ್ತೀಚಿನ ಉದಾಹರಣೆಗಳಷ್ಟೇ. ಇವೆಲ್ಲ ನಡೆದದ್ದು ನಿರಕ್ಷರಿಗಳು ಹೆಚ್ಚಿರುವ ಯಾವುದೋ ಕುಗ್ರಾಮದಲ್ಲಲ್ಲ. ಮೇಲ್ವರ್ಗದವರಿರುವ, ಸ್ವಲ್ಪ ಹೆಚ್ಚೇ ಅನಿಸುವಷ್ಟು ಓದು-ಬರಹ ಕಲಿತವರು ಕೇಂದ್ರೀಕೃತವಾಗಿರುವ ಜಗಮಗಿಸುವ ಪಟ್ಟಣಗಳಲ್ಲಿ.

ಭಾರತವು ತಾಂತ್ರಿಕವಾಗಿ ಎಷ್ಟೊಂದು ಮುಂದುವರಿಯುತ್ತಿದೆಯೋ, ಮಾನವ ಬದುಕಿನ ಲಾಲಸೆಗಳು, ಸುಖಜೀವನದ ತುಡಿತಗಳು ಕೂಡ ಅದಕ್ಕಿಂತಲೂ ಹೆಚ್ಚು ಧಾವಂತದಿಂದ ಚಿಗಿತುಕೊಳ್ಳುತ್ತಿವೆ. ಇಲ್ಲಿ ಕುಟುಂಬ, ಆತ್ಮೀಯತೆ ಮುಂತಾದ ಸೂಕ್ಷ್ಮ ಬೆಸುಗೆಗಳಿಗೆ ಬೆಲೆ ಇರುವುದಿಲ್ಲ. ಭಾವನೆಗಳು ಮನದಂತರಾಳದಲ್ಲಿ ಗುಪ್ತಗಾಮಿನಿಯಾಗಿರುತ್ತವೆ. ಅದ್ಯಾವುದೋ ಕೆಟ್ಟ ಕ್ಷಣದಲ್ಲಿ ಮನಸ್ಸಿನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಮಾನವ, ಏನೇನೋ ಅನಾಹುತ ಮಾಡುತ್ತಾನೆ. ಅದು ಘಟಿಸಿದ ಬಳಿಕ ಬಹುಶಃ ಒತ್ತಡವೆಲ್ಲಾ, ಉದ್ವಿಗ್ನತೆಯೆಲ್ಲಾ ಶಮನವಾದಂತೆ ಪಶ್ಚಾತ್ತಾಪದ ಮುದ್ದೆಯಾಗಿಬಿಡುತ್ತಾನೆ.

ಕಾರಣಗಳು?

ಕೆಲಸದೊತ್ತಡ ಮತ್ತು ಭಾವನಾತ್ಮಕ ಅವಲಂಬನೆಯ ತುಡಿತ ಇವೆರಡು ಇಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಅನ್ನುವುದು ಗಮನಿಸಬೇಕಾದ ಸಂಗತಿ. ಇದರೊಂದಿಗೆ ಬಡವ ಮತ್ತು ಶ್ರೀಮಂತರ ನಡುವಣ ಅಂತರ ಹೆಚ್ಚಾಗುತ್ತಿದ್ದು, ನಗರೀಕರಣದಿಂದಾಗಿ ಅರ್ಥವ್ಯವಸ್ಥೆಯು ಧ್ರುವೀಕರಣಗೊಂಡು ಜನರಲ್ಲಿ ಹತಾಶೆ, ಸಿಟ್ಟು ಹೆಚ್ಚಾಗುತ್ತಿದೆ. ಈ ಹತಾಶೆಯು ಹೊರಬರುವ ರೀತಿ ಮಾತ್ರ ಭಯಾನಕ ಪರಿಣಾಮಕ್ಕೆ ಕಾರಣವಾಗುತ್ತಿದೆ.

ಇವೆಲ್ಲದರ ಮೇಲೆ ಕಿರೀಟವಿಟ್ಟಂತೆ ಮತ್ತೊಂದು ಕಾರಣವನ್ನೂ ನಾವು ಪಟ್ಟಿ ಮಾಡಬಹುದು. ಅದು ನಮ್ಮ ಪೊಲೀಸ್ ವ್ಯವಸ್ಥೆ. ಹಿಂದೆ ಪೊಲೀಸರೆಂದರೆ ಭಯಪಡುವ ಸ್ಥಿತಿ ಇತ್ತು. ಅಷ್ಟರ ಮಟ್ಟಿಗೆ ಶಿಸ್ತು ಬೆಳೆಸಿಕೊಂಡಿದ್ದರವರು. ಇಂದೇನಾಗಿದೆ? ಕಾನೂನು ರಕ್ಷಕರ ಕೈಯೇ ಕೊಳೆ ಮೆತ್ತಿಕೊಂಡಿದೆ. ಲಂಚ-ಭ್ರಷ್ಟಾಚಾರಗಳಿಂದಾಗಿ ಪೊಲೀಸ್ ವ್ಯವಸ್ಥೆಯ ಮೇಲೆ ಜನರ ಪಾಸಿಟಿವ್ ನಂಬಿಕೆಯ ಮಟ್ಟ ಧರಾಶಾಯಿಯಾಗಿದೆ. ಪೊಲೀಸರು ಕೂಡ ಆಮಿಷಗಳಿಗೆ ಸುಲಭವಾಗಿ ತುತ್ತಾಗಬಲ್ಲರು ಎಂಬ ಮನೋಭಾವ ಬೆಳೆದಿದೆ. ಹೀಗಾಗಿ ಇಂದು ಪೊಲೀಸರೆಂದರೆ ಹೆದರಬೇಕಾಗಿಲ್ಲವೆಂಬ ಸ್ಥಿತಿ. ಹತ್ತು ಹದಿನೈದು ವರ್ಷಗಳ ಹಿಂದಕ್ಕೆ ತಿರುಗಿ ನೋಡಿ. ಅಲ್ಲಿ ಪೊಲೀಸ್ ಎಂಬ ಪದಕ್ಕೆ ಯಾವ ರೀತಿಯ ಭಯಪೂರಿತ ಗೌರವವಿತ್ತು…!

ಈಗ, ಪೊಲೀಸರ ಕಾರ್ಯಕ್ಷಮತೆಯ ಮೇಲೆ ಈ ಕಪ್ಪು ಚುಕ್ಕೆ ಬರುವುದಕ್ಕೆ ಕಾರಣಗಳು ಕೂಡ ಹಲವು. ದುರಾಸೆ ಎಂಬುದು ಸರ್ವಾಂತರ್ಯಾಮಿ ಸತ್ಯ. ಇದರೊಂದಿಗೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಅವುಗಳ ತನಿಖೆಯ ಒತ್ತಡ. ಈ ಅಂಶವನ್ನೂ ನಾವು ಕಡೆಗಣಿಸುವಂತಿಲ್ಲ. ಇನ್ನೂ ಒಂದು ವಿಷಯವಿದೆ. ವಿಶ್ವಸಂಸ್ಥೆಯ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ 222ರಷ್ಟು ಪೊಲೀಸ್ ಬಲ ಬೇಕು. ಆದರೆ, ಭಾರತದಲ್ಲಿ ಇದರ ಪ್ರಮಾಣ ಲಕ್ಷಕ್ಕೆ 122 ಮಾತ್ರ ಎನ್ನುತ್ತದೆ ಒಂದು ಅಂಕಿ ಅಂಶ.

ಲವ್ ಮತ್ತು ಸೆಕ್ಸ್

ಅದು ಒತ್ತಟ್ಟಿಗಿರಲಿ. ಮಾನವ ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ನಗರ ಜೀವನ ಶೈಲಿಯ ಪರಿಣಾಮವೋ ಎಂಬುದು ಚಿಂತಿಸಬೇಕಾದ ಸಂಗತಿ. ಇತ್ತೀಚೆಗೆ ದೇಶದಲ್ಲಿ ನಡೆದ ಹತ್ಯಾ ಘಟನೆಗಳನ್ನು ಅವಲೋಕಿಸಿದಾಗ ವೇದ್ಯವಾಗುವ ಒಂದು ವಿಷಯವೆಂದರೆ ಈ ಹತ್ಯೆಗಳೊಂದಿಗೆ ಥಳುಕು ಹಾಕಿಕೊಂಡಿರುವ ಲವ್ ಮತ್ತು ಸೆಕ್ಸ್. ಗ್ರಾಮೀಣ ಪ್ರದೇಶಗಳಲ್ಲೂ ಲವ್ ಮತ್ತು ಸೆಕ್ಸ್ ಎಂಬುದು ಮರ್ಡರ್‌ನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯಾದರೂ, ನಗರ ಪ್ರದೇಶದಲ್ಲಿ ಇದಕ್ಕೆ ಹೆಚ್ಚಿನ ಒತ್ತು. ಯಾಕೆಂದರೆ ಇಲ್ಲಿ ಪ್ರಚಾರವೂ ಹೆಚ್ಚು ದೊರೆಯುತ್ತದೆ, ಸುಶಿಕ್ಷಿತ ಸಮಾಜವೇ ಇದರಲ್ಲಿ ಭಾಗಿಯಾಗಿರುತ್ತದೆ.

ಕಳ್ಳ ಕಾಕರು ಆಧುನಿಕ ಯುಗಕ್ಕೆ ತಕ್ಕಂತೆ ತಮ್ಮ ಕದಿಯುವ ಪ್ರಮಾಣವನ್ನೂ, ವಿಧಾನವನ್ನೂ ಅಭಿವೃದ್ಧಿಪಡಿಸಿಕೊಂಡು ದರೋಡೆಕೋರರು ಎಂಬ ಮಟ್ಟಿಗೆ ತಮ್ಮನ್ನು ‘ಬಡ್ತಿ’ ಮಾಡಿಕೊಂಡಿದ್ದಾರೆ. ಆದರೆ ಅಶಿಕ್ಷಿತ ವರ್ಗದಲ್ಲೇ ಹೆಚ್ಚಾಗಿ ಕಂಡುಬರುತ್ತಿದ್ದ ಕೊಲೆ ಎಂಬ ಜೀವ ತೆಗೆಯುವ ಕಾಯಕವೊಂದು ಸುಶಿಕ್ಷಿತ ವರ್ಗಕ್ಕೂ ಬಿಡಲಾಗದಂತೆ ಅಂಟಿಕೊಳ್ಳಲಾರಂಭಿಸಿದೆ ಎಂದರೆ, ಆಧುನೀಕರಣದ ತುಡಿತದಲ್ಲಿ ಸಂಬಂಧಗಳು ಕರಗುತ್ತಿವೆಯೇ ಎಂಬುದನ್ನು ಯೋಚಿಸಬೇಕಾಗುತ್ತದೆ.

ಧಾವಂತದ ಯುಗ

ಅವಿಭಕ್ತ ಕುಟುಂಬ ಎಂಬ ಭಾರತೀಯ ಸಂಪ್ರದಾಯವೊಂದು ಸದ್ದಿಲ್ಲದೆ ಮರೆಯಾಗುತ್ತಾ ನಾನು, ನನ್ನದು ಎಂಬಷ್ಟರ ಮಟ್ಟಿಗೇ ಕುಟುಂಬ ಜೀವನ ಪದ್ಧತಿ ಸಂಕುಚಿತಗೊಂಡಿತು. ಬಹುಶಃ ಆಧುನಿಕತೆಯ ಅನಿವಾರ್ಯತೆಯೂ ಅನ್ನಬಹುದು. ಅಲ್ಲೇ ಮಾನವೀಯ ಸಂಬಂಧಗಳ ಕೊಂಡಿಯೊಂದು ಕಳಚಿಕೊಂಡಿತ್ತು. ನಗರೀಕರಣದಲ್ಲಿ ಎಲ್ಲರೂ ನನ್ನವರೇ – ‘ವಸುಧೈವ ಕುಟುಂಬಕಂ’ ಎಂಬ ಮನೋವೃತ್ತಿ ಬೆಳೆಸುವುದು ಅನಿವಾರ್ಯವಾಯಿತು. ದುಡಿತದ ತುಡಿತ ಇನ್ನಿಲ್ಲದಂತೆ ಬೆಳೆಯಿತು. ನಮಗಾಗಿ, ನಮ್ಮವರಿಗಾಗಿ ಸಮಯವಿಲ್ಲದಂತಾಯಿತು. ನನಗದು ಬೇಕು, ಅದನ್ನು ಪಡೆದೇ ಸಿದ್ಧ, ಅದಕ್ಕಾಗಿ ಏನು ಮಾಡಲೂ ಸಿದ್ಧ ಎಂಬ ಹಂಬಲ ಪ್ರ-ಬಲವಾಗತೊಡಗಿತು. ಏನಿದ್ದರೂ ಫಟಾಫಟ್ ಸಿಗಬೇಕು ಎಂಬ ಮಹದಾಕಾಂಕ್ಷೆ ಬೆಳೆಯಿತು.

ಅವಸರದ ಯುಗದಲ್ಲಿ ಕಾರ್ಯದೊತ್ತಡ ಖಂಡಿತವಾಗಿಯೂ ಹೆಚ್ಚು. ಈ ಮನೋದ್ವೇಗವೆಂಬುದು ಹೇಗೆ ನಮ್ಮ ಆರೋಗ್ಯವನ್ನು ಸದ್ದಿಲ್ಲದೆ ಹಾಳುಗೆಡಹುತ್ತಿದೆಯೋ, ಮನದೊಳಗಿನ ಆಕಾಂಕ್ಷೆಗಳನ್ನೂ, ಬಯಕೆಗಳನ್ನೂ ಹತ್ತಿಕ್ಕಿಕೊಳ್ಳಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಯಿತು. ಅದು ಲಾಲಸೆಯೋ, ದುರಾಸೆಯೋ ಆಗಿ ಪರಿವರ್ತನೆಗೊಂಡು ಅಂದುಕೊಂಡದ್ದು ಕೈಗೆ ಸಿಗದಿದ್ದಾಗ, ಕೈಗೆ ಸಿಕ್ಕರೂ ಮಾನಮರ್ಯಾದೆ ಹರಾಜಾಗುವ ಪ್ರಸಂಗ ಬಂದಾಗ, ಮನದೊಳಗೆ ಸುಪ್ತವಾಗಿದ್ದ ಲಾಲಸೆಯಿ ಘಟಸ್ಫೋಟವಾಗಿ ಆಗಬಾರದ್ದು ಆಗಿಹೋಗುತ್ತದೆ. ಅಲ್ಲಿಗೆ ಲಾವಾರಸ ಶಾಂತ! ಬಹುಶಃ ಇತ್ತೀಚೆಗೆ ನಡೆಯುತ್ತಿರುವ ಕೌಟುಂಬಿಕ ಕೊಲೆ ಪ್ರಕರಣಗಳನ್ನು ಈ ರೀತಿ ವಿಶ್ಲೇಷಿಸಬಹುದೇನೋ.

ನರಕಜೀವನವಾಗುತ್ತಿದೆಯೇ ನಗರಜೀವನ?

ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದ ವರದಿ ನೋಡಿದರೆ ತಿಳಿಯುತ್ತದೆ. 2006ರಲ್ಲಿ ದೇಶದಲ್ಲಿ ನಡೆದ ಕೊಲೆಗಳ ಹಿಂದೆ ಪ್ರೇಮ ವ್ಯವಹಾರಗಳು ಮತ್ತು ಲೈಂಗಿಕ ಕಾರಣದ ಪಾಲು ಅತ್ಯಧಿಕ. ಪಂಜಾಬ್, ದೆಹಲಿ, ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಂತೂ ಕೊಲೆಗಳಿಗೆ ಇವುಗಳ ಪಾಲು ಅತ್ಯಧಿಕ.

ಅಖಿಲ ಭಾರತ ಮಟ್ಟದಲ್ಲಿ ನಡೆದ ಕೊಲೆಗಳಲ್ಲಿ ವೈಯಕ್ತಿಕ ದ್ವೇಷದ ಪ್ರೇರಣೆಯ ಪ್ರಮಾಣ ಶೇ.10, ಆಸ್ತಿ ವಿವಾದದ ಪ್ರಮಾಣ ಶೇ.8 ಮತ್ತು ಪ್ರೇಮ-ಲೈಂಗಿಕ ಕಾರಣಗಳಿಗಾಗಿ ನಡೆದ ಕೊಲೆಗಳ ಪ್ರಮಾಣ ಶೇ.7. ಶೇ.64ರಷ್ಟು ಕೊಲೆಗಳು ಇತರ ಬೇರೆ ಬೇರೆ ಕಾರಣಗಳಿಗಾಗಿ ನಡೆದವುಗಳು ಎನ್ನುತ್ತದೆ ಲಭ್ಯವಿರುವ ದಾಖಲೆಗಳು.

ಕಾಮಲಾಲಸೆ ಮತ್ತು ಪ್ರೇಮ ವ್ಯವಹಾರದಿಂದ ಪ್ರೇರಣೆ ಪಡೆದು ನಡೆದ ಶೇ.10ಕ್ಕೂ ಹೆಚ್ಚು ಕೊಲೆಗಳಿಗೆ ಕಾರಣವೆಂದರೆ ನಗರೀಕರಣ ಅಂತ ಪರಿಭಾವಿಸಬಹುದು. ಯಾಕೆಂದರೆ, ಹೆಚ್ಚು ನಗರೀಕರಣವಾಗಿರದ ರಾಜ್ಯಗಳಾದ ಬಿಹಾರ, ಅಸ್ಸಾಂ, ಚತ್ತೀಸ್‌ಗಢ ಅಥವಾ ಒರಿಸ್ಸಾಗಳಲ್ಲಿ ಆಸ್ತಿ ವಿವಾದ ಇಲ್ಲವೇ ವೈಯಕ್ತಿಕ ದ್ವೇಷದಿಂದ ಹೆಚ್ಚು ಹತ್ಯೆಗಳು ನಡೆದಿವೆ. ದೆಹಲಿ, ಪಂಜಾಬ್, ಗುಜರಾತ್, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಪ್ರೇಮ-ಕಾಮದ ಕೊಲೆಗಳ ಸಂಖ್ಯೆ ಹೆಚ್ಚಾಗಿದ್ದರೆ, ತಮಿಳುನಾಡು, ಗೋವಾ, ದಾದ್ರ ಮತ್ತು ನಗರ್ ಹವೇಲಿ, ಸಿಕ್ಕಿಂ ಮತ್ತು ಮಧ್ಯಪ್ರದೇಶದಲ್ಲಿ ನಡೆದ ಕೊಲೆಗಳಿಗೂ ಶೇ.10ರಷ್ಟು ಕಾರಣ ಇದೇ ಪ್ರೇಮ-ಕಾಮ.

ಇನ್ನೊಂದೆಡೆ, ಉತ್ತರಾಂಚಲ, ರಾಜಸ್ಥಾನ ಹಾಗೂ ಬಿಹಾರದಲ್ಲಿ ಶೇ.4, ಅಸ್ಸಾಂನಲ್ಲಿ ಶೇ.2, ಜಮ್ಮು ಕಾಶ್ಮೀರ, ಪ.ಬಂಗಾಳ, ಕೇರಳ, ಮೇಘಾಲಯಗಳಲ್ಲಿ ತಲಾ ಶೇ.1 ಹಾಗೂ ಇತರ ರಾಜ್ಯಗಳಾದ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಅಂಡಮಾನ್-ನಿಕೋಬಾರ್, ದಾಮನ್ ಮತ್ತು ಡಿಯು, ಪಾಂಡಿಚೇರಿ, ಚಂಡೀಗಢಗಳಲ್ಲಿ ನಗಣ್ಯ ಎನಿಸುವಷ್ಟರ ಪ್ರಮಾಣದಲ್ಲಿ ಈ ಪ್ರೇಮ-ಕಾಮಕ್ಕೆ ಸಂಬಂಧಿಸಿದ ಹತ್ಯೆಗಳು ನಡೆದಿವೆ.

ಇದನ್ನು ಗಮನಿಸಿದರೆ ನಗರೀಕರಣಕ್ಕೂ ಈ ಕೊಲೆಗೂ ಸಂಬಂಧವಿದೆ ಎಂಬುದು ಅರಿವಿಗೆ ಬರುವ ಸಂಗತಿ. ಹಾಗಾದರೆ ನಗರ ಜೀವನ ಶೈಲಿಯು ಮಾನವೀಯ ಸಂಬಂಧಗಳನ್ನು, ಕೌಟುಂಬಿಕ ಬೆಸುಗೆಯನ್ನು, ಮಾನವೀಯತೆಯನ್ನು ಕರಗಿಸುತ್ತದೆಯೇ? ಆಧುನಿಕತೆಯ ಅಲೆಗಳ ನಡುವೆ ಎಲ್ಲಿ ಮರೆಯಾಗುತ್ತಿದೆ ಮಾನವೀಯತೆ ಎಂಬುದು ಚರ್ಚಿಸಬೇಕಾದ ಸಂಗತಿ.

LEAVE A REPLY

Please enter your comment!
Please enter your name here