ಜಮೀನು, ಫ್ಲ್ಯಾಟ್ ಖರೀದಿ: ಮೋಸ ಹೋಗದಂತೆ ತಡೆಯುವ ಆ್ಯಪ್ ‘ದಿಶಾಂಕ್’

0
335

Dishankಸರಕಾರಿ ಭೂಮಿ ಅಥವಾ ಅತಿಕ್ರಮಿತ ಭೂಮಿಯನ್ನು ಖರೀದಿಸದಂತೆ ಜನರನ್ನು ಎಚ್ಚರಿಸಲು ಹೊಸದೊಂದು ಆಂಡ್ರಾಯ್ಡ್ ಆ್ಯಪ್ ಅಣಿಯಾಗಿದೆ. ಭೂಗಳ್ಳರು, ಅತಿಕ್ರಮಣಕಾರರ ಹಾವಳಿ ತಡೆಗೂ ಇದು ನೆರವಾಗಲಿದೆ.

ದಿಶಾಂಕ್ (DISHAANK) ಎಂಬ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಅಳವಡಿಸಿಕೊಂಡರೆ ಅದರ ಪ್ರಯೋಜನ ಪಡೆಯಬಹುದು. ನೀವು ನಿಂತ ಜಾಗದ ಸರ್ವೇ ನಂಬರ್ ಯಾವುದು ಎಂಬುದನ್ನು ಅದು ತಿಳಿಸುತ್ತದೆ. ಜಿಪಿಎಸ್ ಆಧರಿಸಿ ನಾವಿರುವ ಸ್ಥಳವನ್ನು ಈ ಆ್ಯಪ್ ಗುರುತಿಸುತ್ತದೆ. ನಂತರ ಅದು ಯಾವ ಸರ್ವೇ ನಂಬರಿಗೆ ಸೇರಿದೆ, ಸರಕಾರಿ ಜಮೀನೋ, ಕೆರೆ ಪ್ರದೇಶವೋ, ಕಾಲುವೆ ಪ್ರದೇಶವೋ ಎಂದು ತಿಳಿಸುತ್ತದೆ. ರಾಜ್ಯದ ಸರ್ವೇ ಸೆಟ್ಲ್‌ಮೆಂಟ್ಸ್ ಹಾಗೂ ಭೂದಾಖಲೆಗಳ ಇಲಾಖೆಯಿಂದ ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಜನರ ಉಪಯೋಗಕ್ಕಾಗಿ ಅಳವಡಿಸಲಾಗಿದೆ.

ಮನೆ ಮಾಡಿಕೊಳ್ಳವುದು ಎಲ್ಲರ ಕನಸು. ಈ ಧಾವಂತದಲ್ಲಿ ಜಾಗದ ಹಿಂದೆ-ಮುಂದೆ ವಿಚಾರಿಸುವಲ್ಲಿ ಕೆಲವೊಮ್ಮೆ ಎಡವುತ್ತೇವೆ ನಾವು. ಇದೇ ರೀತಿ, ಕೆರೆ ಅಥವಾ ರಾಜಾ ಕಾಲುವೆಯನ್ನು ಅತಿಕ್ರಮಿಸಿ ನಿರ್ಮಿಸಲಾದ ಫ್ಲ್ಯಾಟ್‌ಗಳನ್ನು, ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಇತ್ತೀಚೆಗೆ ಕೆಡವಿದಾಗ, ಅದೆಷ್ಟೋ ಜನರ ಕನಸು ನುಚ್ಚುನೂರಾಗಿ, ಇದ್ದದ್ದೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ಮನ ಕಲಕುವ ಘಟನೆಗಳನ್ನು ನಾವು ಕೇಳಿದ್ದೇವೆ. ಇದು ಜಾಗದ ಅತಿಕ್ರಮಣದ ಕುರಿತು ಅರಿವಿಲ್ಲದೆ ಆದ ತಪ್ಪು. ಇಂಥ ತಪ್ಪು ಮರುಕಳಿಸದಂತೆ ಜನರಿಗೆ ಉಪಯೋಗವಾಗಲು ಈ ಆ್ಯಪ್ ರೂಪಿಸಲಾಗಿದೆ.

ಇದನ್ನು ರೂಪಿಸಿದವರು ಬೆಂಗಳೂರಿನ ಸರ್ವೇ ಕಮಿಶನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್. ಬಿಟೆಕ್ ಪದವೀಧರರೂ ಆಗಿರುವ ಮುನೀಶ್ ಈಗಾಗಲೇ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಾಜ್ಯಾದ್ಯಂತ ಸರ್ವೇ ನಕಾಶೆಯನ್ನು ಇದು ತೋರಿಸುತ್ತದೆ.

ನೀವಿರುವ ಸ್ಥಳದಲ್ಲಿ ದಿಶಾಂಕ್ ಆ್ಯಪ್ ತೆರೆದರೆ, ಹಿನ್ನೆಲೆಯಲ್ಲಿ ಸೆಟಲೈಟ್ ಮ್ಯಾಪ್ ಅಥವಾ ಗೂಗಲ್ ಮ್ಯಾಪ್ ಸಹಿತವಾಗಿ, ಆ ಸ್ಥಳದ ಸರ್ವೇ ಸಂಖ್ಯೆಯನ್ನು ತಿಳಿಯಲು ಅನುಕೂಲ ಮಾಡಿಕೊಡುತ್ತದೆ. ಅದೇ ರೀತಿಯಾಗಿ, ನೀವು ಅದರಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕ ಮಾಡಿ ಸರ್ವೇ ಸಂಖ್ಯೆಯನ್ನು ನಮೂದಿಸಿದರೆ, ಅದರ ನಕಾಶೆ ಕಾಣಸಿಗುತ್ತದೆ.

ಇದರ ಮುಖ್ಯ ಉದ್ದೇಶವೆಂದರೆ, ಯಾವುದೇ ವ್ಯಕ್ತಿಯು ಜಮೀನು ಖರೀದಿಗೆ ಮುಂದಾದಾಗ ಅದರ ಸರ್ವೇ ನಂಬರ್ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು. ಇದರೊಂದಿಗೆ ಸರಕಾರಿ ಜಮೀನನ್ನು, ಕೆರೆಗೆ ಮೀಸಲಿಟ್ಟ ಭೂಮಿಯನ್ನು ಅಥವಾ ಕಾಲುವೆಗಳನ್ನು ಅತಿಕ್ರಮಿಸಲಾದ ಜಮೀನನ್ನು ಖರೀದಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು.

ವಿಕದಲ್ಲಿ ಮಾ.30, 2018ರಂದು ಪ್ರಕಟಿತ

LEAVE A REPLY

Please enter your comment!
Please enter your name here