ಉಚಿತ ಲಸಿಕೆ ನೋಂದಣಿ ಹೆಸರಲ್ಲೂ ಸೈಬರ್ ವಂಚನೆ: ಬಲೆಗೆ ಬೀಳದಿರಿ!

0
409

ಸಂಕಷ್ಟ ಕಾಲದಲ್ಲೇ ವಂಚನೆ ಮಾಡುವುದು, ಲಾಭ ಮಾಡಿಕೊಳ್ಳುವುದು ಹೇಗೆಂದು ಕೆಲವು ಅಸ್ವಸ್ಥ ಮನಸ್ಸುಗಳು ನಿರಂತರವಾಗಿ ತುಡಿಯುತ್ತಿರುತ್ತವೆ. ಜಗತ್ತಿನಲ್ಲಿ ಏನೇ ಸುದ್ದಿ ಅಥವಾ ಸದ್ದು ಮಾಡುತ್ತಿರಲಿ; ಈ ಟ್ರೆಂಡಿಂಗ್ ವಿಷಯಗಳನ್ನೇ ಉಪಯೋಗಿಸಿ ದುಡ್ಡು ಮಾಡಿಕೊಳ್ಳಲು ಸೈಬರ್ ಕ್ರಿಮಿನಲ್‌ಗಳು ಕಾಯುತ್ತಾ ಇರುತ್ತಾರೆ.ಉದಾಹರಣೆಗೆ, ಆದಾಯ ತೆರಿಗೆ ಮರುಪಾವತಿಸಲಾಗುತ್ತದೆ ಎಂದೋ, ನಿಮ್ಮ ಬ್ಯಾಂಕ್ ಖಾತೆ ಸುರಕ್ಷಿತವಾಗಿರಿಸಿಕೊಳ್ಳಿ ಎಂದೋ, ಎಟಿಎಂ ಕಾರ್ಡ್ ನೋಂದಾಯಿಸದಿದ್ದರೆ ಸ್ಥಗಿತವಾಗುತ್ತದೆ ಎಂದೋ, ಉಚಿತ 4ಜಿ ಇಂಟರ್ನೆಟ್ ಸೌಕರ್ಯ ಪಡೆಯಿರಿ ಎಂಬುದೇ ಮುಂತಾಗಿ ಸಂದೇಶಗಳನ್ನು ಕಳುಹಿಸಿ ಜನರನ್ನು ಈಗಾಗಲೇ ಹಲವು ಕುತಂತ್ರಿ ಮನಸ್ಸುಗಳು ವಂಚಿಸಿವೆ. ಇದಕ್ಕೆ ಹೊಸ ಸೇರ್ಪಡೆ, ಕೋವಿಡ್-19 ಲಸಿಕೆ.

ಇಂಟರ್ನೆಟ್ ಕ್ರಾಂತಿ ಮತ್ತು ಆಂಡ್ರಾಯ್ಡ್ ಫೋನ್‌ಗಳು ಬಹುತೇಕ ಎಲ್ಲರ ಕೈಗೆಟಕಿರುವುದರಿಂದ ಸೈಬರ್ ವಂಚನೆ ಪ್ರಕರಣಗಳಲ್ಲೂ ಏರಿಕೆಯಾಗಿವೆ. ಸೈಬರ್ ವಂಚನೆಯ ಜಾಡಿನ ಅರಿವಿಲ್ಲದವರಷ್ಟೇ ಅಲ್ಲದೆ ಕೆಲವೊಮ್ಮೆ ಸುಶಿಕ್ಷಿತರೇ ಇಂಥ ವಂಚನೆಯ ಬಲೆಗೆ ಸಿಲುಕುತ್ತಾರೆ. ಈ ಕಾರಣಕ್ಕಾಗಿ, ನಾವಷ್ಟೇ ಅಲ್ಲದೆ, ನಮಗೆ ತಿಳಿದಿರುವ ಎಲ್ಲರಿಗೂ ಈ ಮಾಹಿತಿ ಹಂಚಿಕೊಂಡು ಅವರನ್ನೂ ರಕ್ಷಿಸಬೇಕೆಂಬ ಉದ್ದೇಶದಿಂದ ಈ ಜಾಗೃತಿ ಲೇಖನ.

ಈಗಾಗಲೇ ಸರ್ಕಾರವು 18 ವಯಸ್ಸಿಗಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಿ, “ಇದನ್ನು ಎಲ್ಲರೂ ಪಡೆದುಕೊಳ್ಳಿ, ಕೋವಿಡ್-19 ಮಹಾಮಾರಿಯಿಂದ ರಕ್ಷಿಸಿಕೊಳ್ಳಿ” ಎಂದು ಮನವಿ ಮಾಡಿಕೊಂಡಿದೆ. ಲಸಿಕೆ ತೆಗೆದುಕೊಳ್ಳುವುದರ ವಿರುದ್ಧ ಅಪಪ್ರಚಾರ ಆಗುತ್ತಿರುವ ನಡುವೆಯೇ, ಕೋವಿಡ್ ಲಸಿಕೆ ತಕ್ಷಣ ಪಡೆಯಲು ಅಥವಾ ಲಸಿಕೆಗಾಗಿ ನಿಮ್ಮ ಹೆಸರನ್ನು ಉಚಿತವಾಗಿ ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಎಂಬ ಸಂದೇಶವೊಂದು ಲಿಂಕ್ ಸಹಿತ ಹರಿದಾಡುತ್ತಿದೆ.

ಆದರೆ ಇದು ಅಧಿಕೃತವಲ್ಲ. ಸರ್ಕಾರ ಕಳುಹಿಸಿರುವ ಸಂದೇಶವೂ ಅಲ್ಲ. ದುರುದ್ದೇಶಪೂರಿತ ಅಥವಾ ಕುತಂತ್ರಾಂಶವನ್ನು ನಮ್ಮ ಮೊಬೈಲ್‌ಗೆ ಸೇರಿಸಿ, ಅದರಿಂದ ದತ್ತಾಂಶ ಕದಿಯುವ ಸೈಬರ್ ಕ್ರಿಮಿನಲ್‌ಗಳ ಹುನ್ನಾರವಿದು.

ವಂಚನೆ ಹೇಗೆ?
ಈ ಸಂದೇಶದಲ್ಲಿರುವ ಲಿಂಕ್ ಕ್ಲಿಕ್ ಮಾಡಿದಾಗ, ನಮ್ಮ ಮೊಬೈಲ್ ಫೋನ್‌ಗೆ ಒಂದು ಆ್ಯಪ್ ಡೌನ್‌ಲೋಡ್ ಆಗುತ್ತದೆ ಮತ್ತು ಮಾಹಿತಿ ಕದಿಯುವ ಕೆಲಸ ಆರಂಭಿಸುತ್ತದೆ. ನಿಮ್ಮ ಹೆಸರು, ಇಮೇಲ್ ವಿಳಾಸ, ವಯಸ್ಸು, ಊರು, ಬಳಸುತ್ತಿರುವ ಆ್ಯಪ್, ಫೋನ್‌ನಲ್ಲಿರಬಹುದಾದ ಬ್ಯಾಂಕಿಂಗ್ ಮಾಹಿತಿ, ಆಧಾರ್ ಮತ್ತಿತರ ಮಾಹಿತಿಗಳೆಲ್ಲವನ್ನೂ ಕದಿಯುವುದು ಈ ಕುತಂತ್ರಾಂಶದ ಕೆಲಸ.

ಈ ರೀತಿಯಾಗಿ ಬಳಕೆದಾರರ ಮಾಹಿತಿಯನ್ನು ವಂಚನೆಯ ಮೂಲಕ ಕದ್ದು, ವಿವಿಧ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಕಂಪನಿಗಳು ಬಳಕೆದಾರರ ದತ್ತಾಂಶ ಸಂಚಯ (ಡೇಟಾಬೇಸ್) ಸಂಗ್ರಹಿಸಿ, ಆಗಾಗ್ಗೆ ತಮ್ಮ ಉತ್ಪನ್ನಗಳ ಜಾಹೀರಾತು ಕಳುಹಿಸಲು ಈ ಮಾಹಿತಿಯನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಇದಲ್ಲದೆ, ಫೋನ್‌ನಲ್ಲಿರುವ ಬ್ಯಾಂಕಿಂಗ್ ಆ್ಯಪ್‌ಗಳಲ್ಲಿ ಅಥವಾ ಇ-ಕಾಮರ್ಸ್ ಆ್ಯಪ್‌ಗಳಲ್ಲಿ ಶೇಖರವಾಗಿರುವ ಬಳಕೆದಾರರ ಹೆಸರು, ಪಾಸ್‌ವರ್ಡ್ ಸಂಗ್ರಹಿಸಿ, ಖಾತೆಯಿಂದ ಹಣ ಎಗರಿಸುವುದಕ್ಕೂ ಇಂಥಹಾ ಕುತಂತ್ರಾಂಶಗಳನ್ನು ಬಳಸಿಕೊಳ್ಳಬಹುದಾಗಿದೆ.

ಇತ್ತೀಚೆಗಷ್ಟೇ ವಾಟ್ಸ್ಆ್ಯಪ್‌ನಲ್ಲಿ ಸಂದೇಶವೊಂದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ, ಅದು ನಮ್ಮ ಫೋನ್‌ನಲ್ಲಿದ್ದ ಎಲ್ಲ ಸಂಪರ್ಕ ಸಂಖ್ಯೆಗಳಿಗೆ ಸ್ವಯಂಚಾಲಿತವಾಗಿ ರವಾನೆಯಾಗುತ್ತಲೇ ಇತ್ತು. ಈ ‘ಪಿಂಕ್ ವಾಟ್ಸ್ಆ್ಯಪ್’ ಮಾಲ್‌ವೇರ್ ಬಗ್ಗೆಯೂ ಪ್ರಜಾವಾಣಿ ಎಚ್ಚರಿಸಿತ್ತು. ಈಗಿನ ಎಸ್ಸೆಮ್ಮೆಸ್ ಸಂದೇಶವೂ ಬಹುತೇಕ ಇದೇ ರೀತಿ ಕೆಲಸ ಮಾಡುತ್ತದೆ. ನಮ್ಮ ಫೋನ್‌ನಿಂದ ಅಯಾಚಿತವಾಗಿಯೇ ಬೇರೆಯವರಿಗೆ ಈ ಲಿಂಕ್ ಇರುವ ಸಂದೇಶ ರವಾನೆಯಾಗುತ್ತದೆ.

ಈ ಸಂದೇಶದಲ್ಲಿರುವ ವಿಷಯವು ಓದಿದ ತಕ್ಷಣ ವಿಶ್ವಾಸಾರ್ಹ ಎಂದೇ ತೋರುತ್ತದೆ. ಆರಂಭದಲ್ಲಿ ಕೋವಿಡ್-19 ಎಂಬ ಹೆಸರನ್ನೇ ಹೊತ್ತುಕೊಂಡಿದ್ದ ಆ್ಯಪ್, ನಂತರ ವ್ಯಾಕ್ಸಿನ್ ರಿಜಿಸ್ಟರ್ ಅಂತ ಬದಲಿಸಿಕೊಂಡಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವುದಿಲ್ಲ. ಬಾಹ್ಯ ಸರ್ವರ್‌ನಿಂದ ಲಿಂಕ್ ಮೂಲಕ ಡೌನ್‌ಲೋಡ್ ಆಗುವ ಮಾಲ್‌ವೇರ್ (ಕುತಂತ್ರಾಂಶ) ಇದು.

ಹೀಗಾಗಿ, ಅನಗತ್ಯವಾಗಿ ಯಾವುದೇ ಲಿಂಕ್‌ಗಳನ್ನು ಎಲ್ಲೇ ಬಂದರೂ (ಎಸ್ಎಂಎಸ್, ಇಮೇಲ್, ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತಿತರ ಸೋಷಿಯಲ್ ಮೀಡಿಯಾ) ಕ್ಲಿಕ್ ಮಾಡಲೇಬೇಡಿ. ಗೂಗಲ್ ಪ್ಲೇ ಸ್ಟೋರ್‌ನಿಂದಲೇ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಪೂರ್ಣ ಅಲ್ಲದಿದ್ದರೂ ಹೆಚ್ಚು ಸುರಕ್ಷಿತ. ಹಾಗೂ, ಕೋವಿಡ್-19 ಲಸಿಕೆಗಾಗಿ ಆರೋಗ್ಯ ಸೇತು ಆ್ಯಪ್ ಅಥವಾ Cowin ವೆಬ್ ಸೈಟ್ www.cowin.gov.in ಮೂಲಕವಷ್ಟೇ ನೋಂದಾಯಿಸಿಕೊಳ್ಳಬಹುದು ಎಂಬುದು ಗಮನದಲ್ಲಿರಲಿ.

My Article Published in Prajavani on 11/12 May 2021

LEAVE A REPLY

Please enter your comment!
Please enter your name here