ಬೀಗದ ಮಧ್ಯೆ ತಂತ್ರಜ್ಞಾನ ಬಳಸಿ ಬೀಗಿದ ಯಕ್ಷಗಾನ: ಆನ್‌ಲೈನ್‌ನಲ್ಲಿ ಭರಪೂರ ಲೈವ್!

0
502

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ದಿನಗಳಲ್ಲಿ ಮಾನವ ಕಲಿತ ಪಾಠ ಅಷ್ಟಿಷ್ಟಲ್ಲ. ರಾತ್ರಿಗಳನ್ನು ಬೆಳಗಾಗಿಸುವ ಕರಾವಳಿಯ ರಮ್ಯಾದ್ಭುತ ಕಲೆಯಾದ ಯಕ್ಷಗಾನವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಕಲಾವಿದರನೇಕರು ಯಕ್ಷಗಾನ ಮೇಳಗಳ ತಿರುಗಾಟ (ಸಂಚಾರ) ಪ್ರದರ್ಶನಗಳು ದಿಢೀರ್ ರದ್ದಾದ ಬಳಿಕ ಕಂಗೆಟ್ಟಿದ್ದರು. ಅಂಥವರಿಗೆ ಕಲಾಭಿಮಾನಿ ದಾನಿಗಳು ನೆರವನ್ನೂ ನೀಡಿದ್ದಾರೆ, ಯಕ್ಷಗಾನ ಅಕಾಡೆಮಿಯೂ ಎಲ್ಲ ವೃತ್ತಿಪರ ಕಲಾವಿದರಿಗೆ ಸರ್ಕಾರದಿಂದ ನೆರವು ದೊರಕಿಸುವಲ್ಲಿ ಶ್ರಮ ಪಟ್ಟಿದೆ.

ಲಾಕ್‌ಡೌನ್ ದಿನಗಳಲ್ಲಿ ತಂತ್ರಜ್ಞಾನದ ಸದುಪಯೋಗ ಮಾಡಿಕೊಂಡ ಅದೆಷ್ಟೋ ವೃತ್ತಿಪರ ಕಲಾವಿದರು, ಹವ್ಯಾಸಿಗಳು, ಯಕ್ಷಗಾನ ವಿದ್ಯಾರ್ಥಿಗಳ ಸಮೂಹ – ಇವರೆಲ್ಲರೂ ತಾವಿದ್ದ ಮನೆಯೊಳಗಿಂದಲೇ ವಿನೂತನವಾಗಿ ಆಲೋಚಿಸಿ, ದಿನಕ್ಕೊಂದು ಎಂಬಂತೆ ವಿನೂತನ ವಿಡಿಯೊಗಳನ್ನು ಆನ್‌ಲೈನ್ ಜಗತ್ತಿಗೆ ಹರಿಯಬಿಟ್ಟರು. ಇದೇ ಸಂದರ್ಭದಲ್ಲಿ ಪ್ರಜಾವಾಣಿ ಕೂಡ ಯಕ್ಷಗಾನ ಕಲೆಯ ಸೌಂದರ್ಯವನ್ನು ಫೇಸ್‌ಬುಕ್ ಲೈವ್ ಮೂಲಕವಾಗಿ ಯಕ್ಷಗಾನೇತರ ಕಲಾರಾಧಕರಿಗೂ ಉಣಬಡಿಸಲು ಆರಂಭಿಸಿತು. ಕೊಳಗಿ ಕೇಶವ ಹೆಗಡೆ, ಸುಬ್ರಹ್ಮಣ್ಯ ಧಾರೇಶ್ವರ, ಪುತ್ತಿಗೆ ರಘುರಾಮ ಹೊಳ್ಳರು ಇವರಿಂದ ಯಕ್ಷಗಾನದ ಹಾಡುಗಳಷ್ಟೇ ಅಲ್ಲದೆ, ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರದ ಶಿಷ್ಯರು ನಡೆಸಿಕೊಟ್ಟ ಗಾಯನ ವೈಭವವನ್ನೂ ಪ್ರಜಾವಾಣಿಯು ನೇರ ಪ್ರಸಾರ ಮಾಡಿಸಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಕಲಾ ದಿಗ್ಗಜರ ಸಮಾಗಮದೊಂದಿಗೆ ಏಳು ದಿನಗಳ ಕಾಲ ಲೈವ್ ತಾಳಮದ್ದಳೆ ಕೂಟವು ಯೂಟ್ಯೂಬ್‌ನಲ್ಲಿ ಪ್ರಸಾರವಾಗಿ ಈಗಾಗಲೇ ಜನಮನ ಸೂರೆಗೊಂಡಿದ್ದರೆ, ‘ಮಗನ ಆಟ, ಅಪ್ಪನ ಪೇಚಾಟ’ ಹೆಸರಿನ ಹಾಸ್ಯಭರಿತ ವಿಶಿಷ್ಟ ತುಳು ಯಕ್ಷಗಾನವು ಕೂಡ ಜೂ.2ರ ಮಂಗಳವಾರ ಸಂಜೆ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಕಂಡಿತು.

ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಮತ್ತು ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ಯಕ್ಷಸಾಂಗತ್ಯ ಸಪ್ತಕ ಹೆಸರಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹವು ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ, ಜೂ.03ರಿಂದ ಆರಂಭವಾಗಿದ್ದು, ಜೂ.10ರವರೆಗೆ ಏಳು ದಿನಗಳ ಕಾಲ ನೇರ ಪ್ರಸಾರವಾಯಿತು.

ಇದರ ಮಧ್ಯೆ, ಜೂ.7ರ ಭಾನುವಾರದಂದು ಸ್ವರಾಭಿಷೇಕ ಹೆಸರಿನಲ್ಲಿ ‘ಯಕ್ಷಾರಾಧಕರು, ಕೈಕಂಬ’ ವತಿಯಿಂದ ಪ್ರಸಿದ್ಧ ಭಾಗವತರಾದ (ಹಾಡುಗಾರರು) ಪುತ್ತಿಗೆ ರಘುರಾಮ ಹೊಳ್ಳ, ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ ಅವರ ಗಾಯನ ವೈಭವವು ಯೂಟ್ಯೂಬ್‌ನಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನೇರ ಪ್ರಸಾರವಾಯಿತು.

ಜೂ.11ರಿಂದ 13
ಕೊರೊನಾ ಆರಂಭದ ದಿನಗಳಲ್ಲಿ ‘ಕೊರೊನಾಸುರ ಕಾಳಗ’ ಎಂಬ ಒಂದು ಗಂಟೆಯ ಯಕ್ಷಗಾನವನ್ನು ಸಿದ್ಧಪಡಿಸಿ ಯೂಟ್ಯೂಬ್ ಮೂಲಕ ಜಗತ್ತಿಗೆ ಪಸರಿಸಿದ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು, ಇದೀಗ ವೇಷಭೂಷಣಗಳೊಂದಿಗೆ ಯಕ್ಷಗಾನ ಪ್ರದರ್ಶನವನ್ನೇ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲು ನಿರ್ಧರಿಸಿತು. ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ – ಇದರ ಸಹಕಾರದಿಂದ ಮೂರು ದಿನಗಳ ಕಾಲ ಪ್ರಸಿದ್ಧ ಕಲಾವಿದರಿಂದ ಕಂಸವಧೆ, ಸೀತಾ ಕಲ್ಯಾಣ, ಇಂದ್ರಜಿತು ಕಾಳಗ ಪ್ರಸಂಗಗಳನ್ನೊಳಗೊಂಡ ‘ಆನ್‌ಲೈನ್ ಆಟ’ವು ಜೂ.11ರಿಂದ 13ರವರೆಗೆ ಪ್ರತಿದಿನ ಸಂಜೆ ನಡೆಯಿತು.

ಜೂ.13, ಶನಿವಾರ
ಯಕ್ಷರಂಗ, ಯುಎಸ್ಎ ವತಿಯಿಂದ ಪ್ರಸಿದ್ಧ ಹಿಮ್ಮೇಳ, ಮುಮ್ಮೇಳ ಕಲಾವಿದರನ್ನು ಒಳಗೊಂಡ ‘ಪಾದುಕಾ ಪ್ರದಾನ’ ಯಕ್ಷಗಾನ ಪ್ರಸಂಗವು ಜೂ.13ರಂದು ಭಾರತೀಯ ಕಾಲಮಾನ ರಾತ್ರಿ 8:30ರಿಂದ ನಡೆಯಿತು. ಕಲಾವಿದರು: ಅನಂತ ಹೆಗಡೆ ದಂತಳಿಗೆ, ಗಣಪತಿ ಭಾಗ್ವತ್, ದಿವಾಕರ ಹೆಗಡೆ, ಸಂಕದಗುಂಡಿ ಗಣಪತಿ ಭಟ್, ಶ್ರೀಪಾದ ಹೆಗಡೆ ಕ್ಯಾಲಿಫೋರ್ನಿಯಾ.

ಜೂ.14, ಭಾನುವಾರ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ, ಪುತ್ತಿಗೆ ರಘುರಾಮ ಹೊಳ್ಳರ ನಿರ್ದೇಶನದಲ್ಲಿ, ‘ಬ್ರಹ್ಮ ಕಪಾಲ’ ಪಾರಂಪರಿಕ ಯಕ್ಷಗಾನವು ಯೂಟ್ಯೂಬ್ ಮೂಲಕ ನೇರ ಪ್ರಸಾರ ಕಾಣಲಿದ್ದು, ಜೂ.21ರ ಭಾನುವಾರ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನವೂ ಲೈವ್ ಪ್ರಸಾರವಾಯಿತು.

ಆನಂತರವೂ ಉಜಿರೆಯಲ್ಲಿ ಸಾಕಷ್ಟು ಯಕ್ಷಗಾನ ಪ್ರಸಂಗಗಳು ನೇರ ಪ್ರಸಾರ ಕಂಡವು.

ಇವೆಲ್ಲವುಗಳ ಮಧ್ಯೆ, ಯಕ್ಷಗಾನ ಕಲಾವಿದರು, ವಿದ್ಯಾರ್ಥಿಗಳು ವಿನೂತನ ಪ್ರಯೋಗಗಳನ್ನು ತಾವಿದ್ದ ಸ್ಥಳದಿಂದಲೇ ಜಾಲತಾಣಗಳಿಗೆ ಹಂಚಿಕೊಳ್ಳುತ್ತಿದ್ದು, ಯಕ್ಷಗಾನ ಕಲಾ ರಸಿಕರು, ಮನೆಯಿಂದಲೇ ಎಲ್ಲವನ್ನೂ ಸವಿಯುತ್ತಿದ್ದಾರೆ. ಎಲ್ಲ ಕಲಾ ಚಟುವಟಿಕೆಗಳೂ, ಅಭಿಮಾನಿಗಳ ಕೈಲಾದಷ್ಟು ನೆರವಿನ ಆಶಯದೊಂದಿಗೆ ಯಕ್ಷಗಾನವನ್ನೇ ನೆಚ್ಚಿ ಬದುಕು ಸಾಗಿಸುತ್ತಿದ್ದ ಕಲಾವಿದರ ಬದುಕಿಗೆ ಕೊಂಚ ಮಟ್ಟಿಗೆ ಆಧಾರವಾಗಬಲ್ಲ ಸದುದ್ದೇಶವನ್ನು ಹೊಂದಿದೆ ಮತ್ತು ಇವೆಲ್ಲವೂ ಉಚಿತವಾಗಿಯೇ ಕಲಾಭಿಮಾನಿಗಳ ಮನೆಗೆ, ಮನಕ್ಕೆ ತಲುಪಿವೆ.

ಆನ್‌ಲೈನ್ ನೋಡುವುದಕ್ಕೂ ನೇರವಾಗಿ ಇಂತಹ ಪ್ರದರ್ಶನಗಳನ್ನು ಕಾಣುವುದಕ್ಕೂ ಅಜಗಜಾಂತರವಿದೆ. ಅಂತರ ಕಾಯ್ದುಕೊಳ್ಳುವ ನಿಯಮದ ಪ್ರಕಾರ, ಪ್ರೇಕ್ಷಕರಿಲ್ಲದೆ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಕಲಾವಿದರದು. ಇದೀಗ ಕೊರೊನಾ ಲಾಕ್‌ಡೌನ್ ಸಂಕಷ್ಟವೆಲ್ಲ ನಿವಾರಣೆಯಾಗಿ, ಪ್ರತ್ಯಕ್ಷ ಯಾವಾಗ ನೋಡುತ್ತೇವೆಯೋ ಎಂಬ ತುಡಿತ ಅಭಿಮಾನಿಗಳದು.

ಯಕ್ಷಗಾನದ ವೈಶಿಷ್ಟ್ಯ
ಯಕ್ಷಗಾನ ಕಲೆಯು ಇತರ ಕಲೆಗಳಂತಲ್ಲ. ಗಾಯನ, ನರ್ತನ, ವಾದನ, ಅಭಿನಯ, ವೇಷಭೂಷಣ, ಸಾಹಿತ್ಯ, ಆಶು ವಾಕ್ಪಟುತ್ವದೊಂದಿಗೆ ನೀತಿಬೋಧನೆ – ಇವೆಲ್ಲವುಗಳನ್ನೂ ಮೇಳೈಸಿದ ಸರ್ವಾಂಗೀಣ ಸುಂದರವಾದ ಕಲೆಯಾಗಿ ಇದು ಉಳಿದ ಕಲೆಗಳಿಗಿಂತ ಎದ್ದು ಕಾಣುತ್ತದೆ. ಯಕ್ಷಗಾನ ಪ್ರದರ್ಶನಕ್ಕೆ ಸಿನಿಮಾ, ನಾಟಕದಂತೆ ಸ್ಕ್ರಿಪ್ಟ್, ಪೂರ್ವತಯಾರಿ ಏನೂ ಇರುವುದಿಲ್ಲ. ಕಲೆಯನ್ನು ಚೆನ್ನಾಗಿ ಕಲಿತು, ಓದೋದುತ್ತಲೇ ಜ್ಞಾನ ಹೆಚ್ಚಿಸಿಕೊಂಡು ರಂಗವೇರಿ ಆಶು ಪ್ರದರ್ಶನ ನೀಡುವ ವಿಶಿಷ್ಟ ಕಲೆಯಿದು. ಯಕ್ಷಗಾನಕ್ಕೆ ಮೂಲಧಾರವಾಗಿರುವ ಪ್ರಸಂಗ ಪಠ್ಯಗಳನ್ನು ಕಲ್ಪಿಸಿಕೊಟ್ಟಿರುವ ಮಹಾನ್ ಕವಿಗಳಿಂದ ಲಭ್ಯವಾದ ಛಂದೋಬದ್ಧವಾದ ಹಾಡುಗಳು ಈ ಕಲೆಗೆ ಸಾಹಿತ್ಯಕ ಮೆರುಗು ನೀಡುತ್ತದೆ. ಇಂಥ ಕಲೆಯನ್ನು ನೆಚ್ಚಿಕೊಂಡವರು ಲಾಕ್‌ಡೌನ್‌ನಿಂದಾಗಿ ಸುಮ್ಮನೇ ಕುಳಿತಿಲ್ಲ, ಕಾಲದ ಅನಿವಾರ್ಯತೆಗೆ ಒದಗಿಬಂದ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಂಡರು, ತಮ್ಮೊಳಗಿನ ಕಲಾವಿದನನ್ನು ಸದಾ ಜಾಗೃತ ಸ್ಥಿತಿಯಲ್ಲಿರಿಸಿಕೊಳ್ಳುವಲ್ಲಿ ಯಶಸ್ವಿಯೂ ಆದರು. ಕಲೆಯೊಂದು ನಿಂತ ನೀರಾಗದೆ, ಕಾಲದ ಬದಲಾವಣೆಗೆ ತಕ್ಕಂತೆ ಸ್ಪಂದಿಸಿದರೆ ಅದರ ಏಳಿಗೆಗೆ ಎಣೆಯೆಂಬುದಿಲ್ಲ ಎಂಬ ಮಾತಿಗೆ ಯಕ್ಷಗಾನ ಸಾಕ್ಷಿಯಾಯಿತು.

ಪ್ರಜಾವಾಣಿಯಲ್ಲಿ ಪ್ರಕಟಿತ

LEAVE A REPLY

Please enter your comment!
Please enter your name here