13 ಮತ್ತು ಶುಕ್ರವಾರ: ಮಳೆಯೆಂಬ ಹುಚ್ಚು ಪ್ರೀತಿ

0
580

Rainಬಹುಶಃ ಈ ಮಳೆಗಾದರೂ ನನ್ ಮೇಲೆ ಹುಚ್ಚು ಪ್ರೀತಿಯೋ ಏನೋ… ಮಂಗಳೂರು ಬಿಟ್ಟು ದಶಕವೇ ಸಂದಿದೆ. ಇವನಿಗೋ ಮಂಗಳೂರು ಮಳೆಯ ವೈಭವವನ್ನು ಸವಿಯಲೆಂದು ಆ ಮಳೆಗಾಲದಲ್ಲಿ ಹೋಗಲು ಪುರುಸೊತ್ತಿಲ್ಲ. ಹೀಗಾಗಿ ಇವನು ಆಫೀಸ್ ಬಿಡುವಾಗಲೇ ಒಂದಿಷ್ಟು ಜೋರಾಗಿ ಹೊಡಿಬಡಿಯುತ್ತಾ ಸುರಿದರೆ ಇವನ ಮೈಮನವೂ ತಂಪಾದೀತೆಂಬ ಹರಕೆ ಹಾರೈಕೆ ಇರಬೇಕು ಬಹುಶಃ ಆ ಮಳೆಗೆ.

ಹೌದು, ಕಳೆದ ಒಂದ್ಹತ್ತು ದಿನಗಳ ಕತೆ ಇದುವೇ. ನಾನು ಆಫೀಸು ಬಿಡುವ ಸಮಯವೇನೂ ನಿಶ್ಚಿತವಲ್ಲ. ನಾನು ಹೊರಡೋ ಮೊದಲು ಮಳೆ ಸುರಿದರೂ, ಆಗಷ್ಟೇ ನಿಂತರೂ, ನಾನು ಹೊರಟ ಬಳಿಕವಂತೂ ಅದೆಲ್ಲಿರುತ್ತೋ… ಈ ಮಳೆ ಹಾಜರ್. ನನಗೆ ಜಲಯಾತ್ರೆ ಮತ್ತು ಜಡಿಮಳೆ ಯಾತ್ರೆ. ರೈನ್ ಕೋಟ್ ಇದ್ದರೂ ಚಂಡಿಯಾಗುತ್ತಲೇ ಸಾಗುವ ಸುಖವಿದೆಯಲ್ಲ… ಮಂಗಳೂರ ಮಳೆಯ ನೆನಪು. ಮಳೆಯ ಹನಿಗಳು ಜೋರಾಗಿ ಬೀಳತೊಡಗಿದರೆ, ನನ್ನ ಸುತ್ತಮುತ್ತ ನನಗೆ ಕಾಂಪಿಟಿಷನ್ ಕೊಟ್ಟು ಬೈಕಲ್ಲಿ ಬರುವವರೆಲ್ಲರೂ ಅಂಗಡಿ ಬದಿಯೋ, ಮರದ ಬದಿಯೋ ನಿಲ್ಲಿಸಿ ಒದ್ದೆಯಾಗದಂತೆ ತಪ್ಪಿಸಿಕೊಳ್ಳುತ್ತಿದ್ದರೆ, ಮಂಗಳೂರು ಮಳೆ ಸವಿದ ನನಗೆ ಇದೆಲ್ಲ ಲೆಕ್ಕವೇ ಅಲ್ಲ. ಪಟಪಟ ಹನಿಯ ಸದ್ದು ರೈನ್ ಕೋಟಿಗೆ, ಹೆಲ್ಮೆಟಿಗೆ ಬಡಿದು, ಮುಖಕ್ಕೂ ಚಿಮುಕಿಸುವಾಗ ಸಿಗುವ ಸುಖದ ನೆನಪು.

ಬೆಂಗಳೂರಲ್ಲಿ ಆಗೊಮ್ಮೆ ಈಗೊಮ್ಮೆ ಈ ಪರಿಯ ಜಡಿಮಳೆಯಲ್ಲಿ ಬೈಕ್ ಸವಾರಿ ಮಾಡಿದ್ದೆ, ಆದರೆ ಬರೋಬ್ಬರಿ ಅರ್ಧ ಮುಕ್ಕಾಲು ಗಂಟೆ ಮಳೇಯಲ್ಲೇ ಪಯಣಸುಖ ಅನುಭವಿಸಿದ್ದು ಇದೇ ಮೊದಲು. ಇದು ಅಕ್ಟೋಬರ್ ಮಳೆಯಂತೆ. ಚುಮುಚುಮು ಚಳಿಯಲ್ಲಿ ಸ್ವೆಟರ್ ಹಾಕಿಕೊಂಡು ತಿರುಗಾಡಬೇಕಾಗಿರೋ ಕಾಲ. ಆದರೆ ರೈನ್ ಕೋಟೇ ಬೇಕಾಗುವಂತಾಗಿದೆ.

ಆದರೂ ಈ ಎರಡ್ಮೂರು ದಿನಗಳ ನನ್ನ ಈ ಸವಾರಿಯ ಕನವರಿಕೆಗೆ ಮತ್ತು ಲಹರಿಯ ತೇಲಾಡುವಿಕೆಗೆ ದಿಢೀರನೇ ಬ್ರೇಕ್ ಹಾಕಿ ವಾಸ್ತವ ಲೋಕಕ್ಕೆ ಇಳಿಸುವುದು ಈ ಹೊಂಡಾ ಗುಂಡಿಗಳಪ್ಪ, ಥತ್, ಎಂಜಾಯ್ ಮಾಡಕ್ಕೂ ಬಿಡಲ್ಲ ಅಂದ್ಕೊಂಡ್ರೂ ಹೊಂಡದೊಳು ಬೈಕ್ ನೆಗೆದೇಳುವುದು ಕೂಡ ಒಂಥರಾ ಎಂಜಾಯೇ…

ಮತ್ತೆ ಬಂದಳಾಕೆ: ನಿಜ್ವಾಗ್ಲೂ ಹೌದು, ಈವತ್ತು ಅವಳಿಂದ ತಪ್ಪಿಸಿಕೊಳ್ಳಲೆಂದು ಆಫೀಸಿಂದ ಬೇಗನೇ ಹೊರಟಿದ್ದೆ. ಸಮಯ ತಪ್ಪಿಸಿ.

ಸಾಗಿದೆ ಮುಂದೆ ಮುಂದೆ. ಎರಡು ಕಿ.ಮೀ. ಸಾಗಿರಬೇಕು. ಬಂದಳಲ್ಲಾ ಆಕೆ, ಗುಡುಗು ಸಿಡಿಲಿನೊಂದಿಗೆ. ಧಡ ಧಡನೆ ಬಂದು ಅಪ್ಪಿದಾಗ ನಾನು ನೀರಾದೆ. ಒದ್ದೆಯಾದೆ.

ರೈನ್ ಕೋಟ್ ಹಾಕಿಯೇಬಿಟ್ಟೆ ಅವಳು ಮತ್ತೆ ಕಚಗುಳಿಯಿಟ್ಟ ಖುಷಿಯಿಂದ. ಮಂಗಳೂರ ಜಡಿಮಳೆ ನನ್ನ ಬಳಿ ಮತ್ತೆ ಬಂದಿತ್ತು, ಖುಷಿಪಡಿಸಲೆಂದು. ನಾನು ಟೆಸ್ಟ್ ಮಾಡಲೆಂದು ಇವತ್ತು ಟೈಮ್ ತಪ್ಪಿಸಿ ಬಂದ್ರೂನೂ ಬಳಿ ಬಂದಿತ್ತು ಅದರ ಪ್ರೀತಿ.

ಲಾಲ್‌ಬಾಗ್ ರೋಡಲ್ಲಿ ಬೈಕು ಓಡಲಿಲ್ಲ, ತೇಲುತ್ತಾ ಹೋಯಿತು. ಆಹಾ..‌ ಕೆರೆ ಮೇಲೆ ಬೈಕ್ ಓಡಿಸ್ತಿರೋ ಅನುಭವ. ಮಧ್ಯೆ ಮಧ್ಯೆ ಗುಂಡಿ ಸಿಕ್ಕಾಗಲೇ ಗೊತ್ತಾಗಿದ್ದು ಬೈಕು ರಸ್ತೆಯ ಮೇಲೇ ಓಡ್ತಿದೆ ಅಂತ. 😀

ಗುಂಡಿ ಇಲ್ಲದಿರಲೆಂದು ಗುಂಡಿಗೆಯಲ್ಲಿ ಪ್ರಾರ್ಥನೆ, ಜತೆಗೆ ನಮ್ಮೂರ ಮಳೆಯ ನಾಸ್ಟಾಲ್ಜಿಯಾ.

ಲಾಲ್‌ಬಾಗ್ ವೆಸ್ಟ್ ಗೇಟಿಂದ ಬಸವನಗುಡಿಯತ್ತ ಸಾಗಿದಾಗ ಮೆಟ್ರೋ ಫ್ಲೈಓವರ್ ಕೆಳಗೆ ಟೂವೀಲರ್‌ಗಳ ರಾಶಿ ರಾಶಿ, ಅವರೆಲ್ಲ ಮಳೆಯಿಂದ ರಕ್ಷಣೆಗಾಗಿ ನಿಂತಿದ್ದರು. ಆದರೆ, ನನ್ನ ಜೊತೆಯಲಿ ಮಳೆಯಲಿ ರೋಡಲಿ ನಾನೊಬ್ಬನೇ… ರಾಜ ಮಾರ್ಗ. ನೀರು ಸಿಂಪಡಿಸುತ್ತಾ ಸಾಗಿದೆ. ಎಕ್ಸಲರೇಟರ್ ಅದುಮಿದ್ದೇ ಅದುಮಿದ್ದು. ಬಸವನಗುಡಿ ಫ್ಲೈ ಓವರಲ್ಲಿ ಓವರ್‌ಫ್ಲೈ flying ಥರಾ ಅನುಭವ. ಕಣ್ಣು ಮಿಟುಕಿಸುವುದರೊಳಗೆ ಶಂಕರಪುರ ಕ್ರಾಸ್ ಸಿಗ್ನಲ್ ಬಳಿ ಗುಂಡಿಗೆ ಚಕ್ರವು ಧುಮ್ಮಿಕ್ಕಿದಾಗಲೇ ರಸ್ತೆಯಲ್ಲಿದ್ದೇನೆಂಬುದು ಗೊತ್ತಾಗಿತ್ತು. ಗುಂಡಿ ಎಚ್ಚರಿಸಿದಾಗಲೇ ನಾನು ಚಂಡಿ ಪುಂಡಿಯಾಗಿದ್ದು ತಿಳಿದದ್ದು.

ಮನೆ ತಲುಪಿದಾಗ ಮಳೆ ನಿಂತಿತ್ತು. ನನ್ನನ್ನು ಮನೆವರೆಗೆ ತಲುಪಿಸಲೆಂದೇ ಬಂದಂತಿತ್ತು. ಇದಲ್ಲವೇ ಅದರ ಪ್ರೀತಿ? 🙂

ಆದರೆ, 13ನೇ ತಾರೀಕು ಹಾಗೂ ಶುಕ್ರವಾರ ಮಿಳಿತವಾದರೆ, ಯಾವತ್ತೂ ಕರಾಳ ದಿನವೆಂಬ ಊಹೆ. ಹೌದು, ಈ ದಿನ ಇದು ಎಷ್ಟೊಂದು ಭಯಾನಕ ಮಳೆ ಅಂತ ಗೊತ್ತಾಗಿದ್ದು ಟೀವಿ ಚಾನೆಲ್‌ಗಳನ್ನು ನೋಡಿದ ಬಳಿಕವೇ! ಐವರು ನೀರು ಪಾಲಾದರಂತೆ ಬೆಂಗಳೂರಲ್ಲೇ! ಆ ಕತ್ತಲಲ್ಲಿನ ಅಪಾಯದ ಪರಿವೆಯಿಲ್ಲದೆ ಮಳೆ ಸವಿಯುತ್ತಾ ಬಂದ ನನ್ನನ್ನು ಸೇಫಾಗಿ ಮನೆ ತಲುಪಿಸಿದ್ದಕ್ಕೆ ಥ್ಯಾಂಕ್ಯೂ ಮಳೆಯೇ! ಉಳಿದವರ ಮೇಲೂ ಕರುಣೆಯಿರಲಿ. ಧನದಾಹಿ ಭ್ರಷ್ಟರಿಂದಾಗಿ ಕಾಲುವೆಗಳು ಹರಿದು, ರಸ್ತೆಯೆಲ್ಲೋ, ಗುಂಡಿಯೆಲ್ಲೋ, ಹಳ್ಳವೆಲ್ಲೋ, ಕೆರೆಯೆಲ್ಲೋ ತಿಳಿಯದೆ ಅದೆಷ್ಟು ಜೀವಗಳು ಬಲಿಯಾದವು! ಅವರ ಮೇಲೂ ಕರುಣೆ ತೋರಿಸು ಓ ಮಳೆರಾಯ.

LEAVE A REPLY

Please enter your comment!
Please enter your name here