ಕಳೆದ ತಿಂಗಳಾಂತ್ಯದಲ್ಲಿ ಎಟಿಎಂ ಸ್ಕಿಮ್ಮರ್‌ಗಳಿಂದಾಗಿ ಹಲವಾರು ಮಂದಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಸುದ್ದಿಯೊಂದಿಗೆ, ಇದರಲ್ಲಿ ಸಕ್ರಿಯವಾಗಿದ್ದ ನೈಜೀರಿಯಾ ಗ್ಯಾಂಗನ್ನು ಬಂಧಿಸಿರುವುದೂ ಸದ್ದು ಮಾಡಿತ್ತು. ಬೆಂಗಳೂರು, ಮೈಸೂರು, ರಾಮನಗರ, ಚಿತ್ರದುರ್ಗದಲ್ಲಿ ಈ ಗ್ಯಾಂಗ್ ಸಕ್ರಿಯವಾಗಿತ್ತು. ಎಟಿಎಂ ಸ್ಕಿಮ್ಮಿಂಗ್‌ನಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡವರ ಕಥೆಯನ್ನು ಇತ್ತೀಚಿನ ವರ್ಷಗಳಲ್ಲಿ ಕೇಳುತ್ತಲೇ ಇದ್ದೇವೆ. ಬ್ಯಾಂಕುಗಳು ನೀಡುವ ಎಟಿಎಂ ಕಾರ್ಡು ನಮ್ಮ ಕೈಯಲ್ಲೇ ಭದ್ರವಾಗಿದ್ದರೂ, ನಮ್ಮ ಖಾತೆಯಿಂದ ಅವರು ಹಣವನ್ನು ಹೇಗೆ ಲೂಟಿ ಮಾಡುತ್ತಿದ್ದರು ಎಂಬುದು ಜನಸಾಮಾನ್ಯರಿಗೆ ಅರ್ಥವಾಗದ ಸಂಗತಿ. ಹಾಗಿದ್ದರೆ ನಾವು ತಂತ್ರಜ್ಞಾನದ ಹೊಸ ಪಿಡುಗಿನಿಂದ ಹೇಗೆ ಸುರಕ್ಷಿತವಾಗಿರಬಹುದು ಎಂಬ ಮಾಹಿತಿ ಇಲ್ಲಿದೆ.
* ಸ್ಕಿಮ್ಮರ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಂಡರೆ ಎಚ್ಚರಿಕೆ ವಹಿಸಲು ಸುಲಭವಾಗುತ್ತದೆ. ಒಂದನೆಯದು, ಎಟಿಎಂನಲ್ಲಿ ನಿಮ್ಮ ಪಿನ್ ಸಂಖ್ಯೆಯನ್ನು ತಿಳಿದುಕೊಳ್ಳಲು, ಕೀಪ್ಯಾಡ್‌ಗಳ ಮೇಲ್ಭಾಗದಲ್ಲಿ ಎಲ್ಲಿಯಾದರೂ ಕಣ್ಣಿಗೆ ಕಾಣಿಸದಂತಹಾ ಕ್ಯಾಮೆರಾಗಳನ್ನು ಇಟ್ಟಿರಬಹುದು. ಇದು ಪುಟ್ಟ ಪೆಟ್ಟಿಗೆಯೊಳಗೂ ಇರಬಹುದು. ಎಚ್ಚರಿಕೆಯಿಂದ ಪರಿಶೀಲಿಸಿಕೊಳ್ಳಿ.
* ಎರಡನೆಯದೆಂದರೆ, ಎಟಿಎಂ ಕಾರ್ಡ್ ಒಳಗೆ ಹೋಗುವ ಕಾರ್ಡ್ ರೀಡರ್ ಜಾಗದಲ್ಲಿಯೂ ಅದರೊಳಗಿನ ದತ್ತಾಂಶವನ್ನು ನಕಲು ಮಾಡಲು ಸಣ್ಣ, ಕಣ್ಣಿಗೆ ಗೋಚರಿಸದ ಹಾಳೆಯೊಂದನ್ನು (ಸ್ಕಿಮ್ಮರ್ ಪ್ಲೇಟ್) ಅಳವಡಿಸಿರಬಹುದು. ಫಕ್ಕನೇ ಇದನ್ನು ತಿಳಿಯುವುದು ಕಷ್ಟ. ಈ ಸ್ಕಿಮ್ಮರ್ ಮೂಲಕ ಎಟಿಎಂ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್‌ನ ಚಿಪ್‌ನೊಳಗೆ ಅಡಕವಾಗಿರುವ ದತ್ತಾಂಶವನ್ನು ನಕಲು ಮಾಡಿ, ನಕಲಿ ಎಟಿಎಂ ಕಾರ್ಡ್ ತಯಾರಿಸಿ, ಕ್ಯಾಮೆರಾದಲ್ಲಿ ದಾಖಲಾದ ಪಿನ್ ಸಂಖ್ಯೆಯ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಬಹುದಾಗಿದೆ. ಸ್ಕಿಮ್ಮಿಂಗ್ ತಂತ್ರಜ್ಞಾನದ ಮೂಲಕ ಜನರು ಹಣ ಕಳೆದುಕೊಳ್ಳುವುದು ಹೀಗೆ.
* ಕಾರ್ಡ್ ರೀಡರ್ ಇರುವ ಜಾಗವನ್ನೊಮ್ಮೆ ಗಮನವಿಟ್ಟು ಪರಿಶೀಲಿಸಿ. ಬೆರಳಿನಿಂದ ಮುಟ್ಟಿ ನೋಡಿ. ಎರಡನೇ ಪದರ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ಅನುಕೂಲಕರ.
* ಕೀಪ್ಯಾಡ್‌ನಲ್ಲೂ ಮತ್ತೊಂದು ಪದರ ಅಥವಾ ಅಂಟಿನಂತಹಾ ವಸ್ತು ಏನಾದರೂ ಇದೆಯೇ ಎಂದು ಗಮನವಿಟ್ಟು ಪರಿಶೀಲಿಸಿ.
* ಗೊತ್ತಿಲ್ಲದ ವ್ಯಕ್ತಿಗಳು ನಿಮ್ಮ ಪರಿಸರದಲ್ಲಿ ಅಂಗಡಿ, ಹೋಟೆಲ್ ಅಥವಾ ಬೇರಾವುದೇ ಮಳಿಗೆ ಹಾಕಿ, ಕಾರ್ಡ್ ಮೂಲಕ ಪಾವತಿಸುವುದನ್ನು ಕಡ್ಡಾಯ ಮಾಡಬಹುದು. ಹೀಗಾಗಿ ಇಂಥ ಅಪರಿಚಿತರ ಕಾರ್ಡ್ ಸ್ವೈಪಿಂಗ್ ಯಂತ್ರದ ಬಗ್ಗೆ ಯಾವತ್ತೂ ಸಂದೇಹವಿರಲಿ.
* ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಜವಾನರು ಇರಲೇಬೇಕು ಎಂಬ ನಿಯಮವಿದ್ದರೂ, ಕೆಲವು ಕಡೆ ಇರುವುದಿಲ್ಲ. ಈ ರೀತಿಯಾಗಿ, ಸೆಕ್ಯುರಿಟಿ ಗಾರ್ಡ್‌ಗಳಿಲ್ಲದ ಎಟಿಎಂಗೆ ಕಾಲಿಡಲೇಬೇಡಿ. ಹೀಗೆ ಮಾಡಿದರೆ ಬಹುತೇಕ ನೀವು ಸುರಕ್ಷಿತರಾದಂತೆ.
* ಎಲ್ಲಕ್ಕಿಂತ ಒಳ್ಳೆಯ ಸಲಹೆ ಎಂದರೆ, ನೀವು ಬಳಸುವ ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಲಿಂಕ್ ಆಗಿರುವ ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇರಿಸಬಾರದು. ಹಣ ಜಾಸ್ತಿ ಇದ್ದರೆ ಅದನ್ನು ನಿಶ್ಚಿತ ಠೇವಣಿಯೋ ಅಥವಾ ಬೇರೆ ಯಾವುದಾದರೂ ಉಳಿತಾಯ ನಿಧಿಯಲ್ಲಿಯೋ ಕಾಯ್ದಿಟ್ಟುಕೊಳ್ಳಿ.
Published in Prajavani on 12 Dec 2019 by ಅವಿನಾಶ್ ಬಿ.