ಅಂತಕನ ಆತಂಕ ಮರೆಸಲೀ ನವ ವಸಂತ

8
1428

ಮುಗಿಯಿತು ಎಂಬ ಉದ್ಗಾರವೇ ಹೊಸದೊಂದು ಆರಂಭದ ಮುನ್ಸೂಚನೆ. ಮೊನ್ನೆ ಮೊನ್ನೆಯಷ್ಟೇ ಮನೆಯ ಗೋಡೆಯಲ್ಲಿದ್ದ ಕ್ಯಾಲೆಂಡರ್ ಬದಲಾಯಿಸಿದ್ದವಲ್ಲ…? ಇಷ್ಟು ಬೇಗ ಕಳೆದು ಹೋಯಿತೇ ಈ ಒಂದು ವರ್ಷ? ಅಬ್ಬ, ಹೇಗಾದ್ರೂ ಮುಗೀತು. ಇಷ್ಟೊಂದು ದುರಂತಮಯ ವರ್ಷ ಇದುವರೆಗೆ ಕಂಡಿಲ್ಲ ಅನ್ನೋ ಭಾವನೆ ಸುಳಿದು ಮಾಯವಾಗುತ್ತದೆ. ಬಹುಶಃ ಇದು ಪ್ರತಿಯೊಬ್ಬರನ್ನೂ ಪ್ರತಿ ವರ್ಷವೂ ಕಾಡುವ ಸಂಗತಿ ಎಂಬುದೇ ವಿಶೇಷ. ನೋವಿಗೆ ಕೊನೆಯಿಲ್ಲ ಹೇಗೆಯೋ, ಹಾಗೆಯೇ ನಲಿವಿಗೂ ಕೂಡ. ನೋವಿನ ಹಿಂದೆ ನಲಿವಿನ ಮೆರವಣಿಗೆ. ಇದು ಜೀವನ.

ಸಂಘ ಜೀವಿಯಾದ ಮಾನವನಿಗೆ ಸಂಭ್ರಮಿಸುವುದಕ್ಕೆ ಕಾರಣಗಳು ಬೇಕಿಲ್ಲ. ಕ್ರಿಸ್ತ ಶಕೆ ಆರಂಭವಾದ ದಿನ ಎಂಬ ಕಾರಣಕ್ಕೆ ಜನವರಿ 1ನ್ನು ವಿಶ್ವವೇ ಹೊಸ ವರ್ಷದ ದಿನ ಎಂದು ಒಪ್ಪಿಕೊಂಡು ಅಪ್ಪಿಕೊಂಡು ಸಂಭ್ರಮದಿಂದ ನಲಿದಾಡುತ್ತಿದ್ದರೆ, ಇಂಗ್ಲಿಷ್ ಕ್ಯಾಲೆಂಡರನ್ನೇ ಅನುಸರಿಸುವ ಭಾರತೀಯರೂ ಇದನ್ನು ಆಚರಿಸುವುದರಲ್ಲಿ ತಪ್ಪಿಲ್ಲ ಎಂಬ ಸಮರ್ಥನೆಯೊಂದಿಗೆ, ಮತ್ತೊಂದು ಹೊಸ ವರ್ಷದಾಚರಣೆ ಬಂದಿದ್ದಂತೂ ನಿಜ.

ಹಳೆಯ ನೋವುಗಳನ್ನು ಮರೆತು, ಹೊಸ ನಿರೀಕ್ಷೆಗಳಿಗೆ ಒಡ್ಡಿಕೊಳ್ಳುವುದೋ, ಅಥವಾ ಹೊಸ ಹೊಸದಾದ ಚಿತ್ರ ವಿಚಿತ್ರ ನೋವುಗಳಿಗೆ ಮನಸ್ಸನ್ನು ಸಜ್ಜುಗೊಳಿಸುವುದೋ… ಜನರು ಇದನ್ನು ಬಹಿರಂಗದಲ್ಲಿ ಅಲ್ಲದಿದ್ದರೂ ಆಂತರಂಗಿಕವಾಗಿ ವಿಭಿನ್ನವಾಗಿ, ವೈವಿಧ್ಯಮಯವಾಗಿ ವ್ಯಾಖ್ಯಾನಿಸಬಹುದು. ಇಂಥದ್ದೊಂದು ನಿರಾಶಾವಾದಕ್ಕೆ ಕಾರಣವೇನು? ಸಂದು ಹೋದ ವರ್ಷವು ಅಚ್ಚಳಿಯದಂತೆ ಪಡಿಮೂಡಿಸಿದ ದುರಂತಮಯ ಕ್ಷಣಗಳು, ಹಿಂಸಾ ಸರಣಿಗಳು, ರಾಜಕಾರಣಿಗಳ ಅರಾಜಕ ನೀತಿಗಳು, ಮತ್ತು ಇನ್ನೇನು ಈ ವರ್ಷ ಮುಗಿಯಿತೆನ್ನುವಾಗ ಧುತ್ತನೇ ಎದುರಾದ ಹಣಕಾಸಿನ ಬಿಕ್ಕಟ್ಟು, ಜತೆಗೇ ಮುಂಬಯಿ ದಾಳಿಯ ಕರಾಳ ಮುಖ.

ಕಾಲನಿಗೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಈ ಮಾತು ನೋವಿನ ಕ್ಷಣಗಳಿಗೂ ಹೊರತಲ್ಲ. ಕಾಲನ ಬದಲಾವಣೆ ಅನಿವಾರ್ಯ. ಹಳೆಯ ಯುಗ ಕಳೆದು ಹೊಸ ಯುಗವೊಂದರ ಉದಯವಾಗುತ್ತಲೇ ಹೊಸ ಹೊಸ ನಿರೀಕ್ಷೆಗಳು, ಸಡಗರ ಸಂಭ್ರಮಗಳ ಚಿಲುಮೆಯಾಗಲು, ಹೊಸ ವರ್ಷದ ಆಚರಣೆಯು ಒಂದು ವೇದಿಕೆ ಒದಗಿಸುತ್ತದಷ್ಟೆ. ಯಾಕೆಂದರೆ ಮನುಷ್ಯ ಯಾವತ್ತೂ ಭವ್ಯ ಭವಿತವ್ಯದ ನಿರೀಕ್ಷೆಯಲ್ಲೇ ಬದುಕುತ್ತಿರುವವನು. ಈಗೇನಿದ್ದರೇನಂತೆ, ಮುಂದೊಂದು ದಿನ ಎಲ್ಲವೂ ಸರಿ ಹೋದೀತು ಅಂತ ಆ ವರ್ಷದಲ್ಲಿ ಕುಗ್ಗಿ ಹೋದವರು ಆಶಾಭಾವನೆಯಿಂದ ಹೊಸ ವರ್ಷಕ್ಕೆ ಕಾಲಿಟ್ಟರೆ, ಈಗಿನ ಸುಖ ಸಂತಸಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು, ಜೀವನವನ್ನು ಪರಿಪೂರ್ಣವಾಗಿ ಅನುಭವಿಸಲು ಮಗದೊಂದು ವರುಷ ಬಂದು ಪುನರಪಿ ಅವಕಾಶ ನೀಡಲಿದೆ ಎಂಬ ಯೋಚನೆ, ಅದಾಗಲೇ ಸುಖ ಸಂತೋಷದಲ್ಲಿ ತೇಲಾಡುತ್ತಿರುವವರ ಮನದಲ್ಲಿ.

ಈ ನಿರೀಕ್ಷೆಗಳೇ ತಾನೇ ಮಾನವ ಜೀವನವನ್ನು ರಂಗು ರಂಗಾಗಿಸುವುದು? ಆತನ ಮನದ ಈ ತುಡಿತಗಳೇ ಬರಲಿರುವ ಭವಿಷ್ಯತ್ತಿನ ಸವಾಲುಗಳನ್ನು ಎದುರಿಸಲು ಪ್ರೇರಣೆಯೂ ಆಗುತ್ತದೆ. ಕವಿವಾಣಿಯಂತೆ, ಬಯಕೆ ತೋಟದ ಬೇಲಿಯೊಳಗೆ ಹೊಸ ನಿರೀಕ್ಷೆಗಳು ರಿಂಗಣಿಸುತ್ತಲೇ ಇರುತ್ತವೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ? ಅಂತಲೂ ಕೇಳಿದ್ದಾರೆ ಅಡಿಗರು. ಕವಿಯ ಆಶಯವೇನಿತ್ತೋ… ಆದರೆ ಈ ಸಾಲು ನೀಡುವ ಅರ್ಥ ನೂರಾರು. ಇದರ ಕೊನೆಯಲ್ಲಿ ದೃಢ ಭಾವ ಇಲ್ಲ, ಬದಲಾಗಿ ಪ್ರಶ್ನಾರ್ಥಕ ಚಿಹ್ನೆಯಿದೆ. ಬದುಕು ಕೂಡ ಇದೇ ರೀತಿ ಪ್ರಶ್ನಾರ್ಥಕವಾಗಿಯೇ ಮುನ್ನಡೆಯುತ್ತಿರುವ ಪಯಣ.

ಹೊಸ ವರ್ಷದ ಮೆಟ್ಟಿಲೇರುವ ಮುಂಚೆಯೊಮ್ಮೆ ಹಳೆಯ ವರ್ಷದ ಮೆಟ್ಟಿಲಲ್ಲಿ ನಿಂತು, ಏರಿ ಬಂದ ಪಯಣದ ಹಾದಿಯ ಹಿಂದೊಮ್ಮೆ ದೃಷ್ಟಿ ಹರಿಸಿ, ಶನಿ ಹೋಯಿತು ಅಂತ ಹಳೆಯ ನೋವುಗಳನ್ನೆಲ್ಲಾ ಮರೆತು ನೆಮ್ಮದಿಯ ನಿಟ್ಟುಸಿರಿನೊಂದಿಗೆ ಹೊಸ ಬದುಕಿಗೆ ಅಡಿಯಿಡೋಣ. ಬದುಕು ಭವಿತವ್ಯ ಸವಿಜೇನಾಗಲಿ, ಸುಖದ ಗೂಡಾಗಲಿ, ಸಂತಸದ ಹೊನಲಾಗಲಿ.

ನಾಳೆ ಎಲ್ಲವೂ ಬದಲಾಗುತ್ತದೆ, ಹೊಸ ಸಂವತ್ಸರ, ಹೊಸ ರೂಪ, ಹೊಸ ಹೊಳಪು, ಹೊಳ ದಿಕ್ಕು, ಹೊಸ ಗಾಳಿ, ಹೊಸತನದ ಕ್ಷಣಗಳನು ವರ್ಷಧಾರೆಯಾಗಿಸಲಿ ಎಂಬ ನಿರೀಕ್ಷೆಯೊಂದಿಗೆ…

ಹೊಸ ವರ್ಷಕ್ಕೆ ಸರ್ವರಿಗೂ ಶುಭಾಶಯಗಳು.
(ವೆಬ್‌ದುನಿಯಾದಲ್ಲಿ ಪ್ರಕಟ)

8 COMMENTS

  1. ಸಾರ್,

    ಹೊಸ ವರ್ಷಕ್ಕೆ ಅರ್ಥಪೂರ್ಣ ಬರವಣಿಗೆ.. ….

    ಹೊಸ ವರ್ಷದ ಶುಭಾಶಯಗಳು…..
    ಶಿವು.

  2. ತಮಗೂ ಹೊಸ ವರುಷದ ಶುಭಾಶಯಗಳು ಸರ್..ನಿರೀಕ್ಷೆ, ಭರವಸೆಗಳೆಲ್ಲಾ ಈಡೇರಲಿ.
    -ತುಂಬುಪ್ರೀತಿ,
    ಚಿತ್ರಾ

  3. ಶಿವು ಅವರೆ,
    ಹೊಸ ವರ್ಷ ಹರ್ಷಮಯವಾಗಿರಲಿ. ನಿಮ್ಮ ಕ್ಯಾಮರದಿಂದಲೂ ಹೊಸ ಹೊಸ ಚಿತ್ರಗಳು ಬರಲಿ 🙂

  4. ಚಿತ್ರಾ,
    ಹಾರೈಕೆಗೆ ಪ್ರೀತಿ, ಆರೈಕೆಯ ಹಾರೈಕೆ. ಭಾವನೆಗಳ ಶರಧಿಯಲ್ಲಿ ಸಿಹಿ ಸಿಹಿ ಪದಗುಚ್ಛಗಳಿರಲಿ.

  5. ಶೆಟ್ಟರೆ, ಬ್ಲಾಗಿಗೆ ಇಣುಕಿ ಹಾರೈಸಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ,.

LEAVE A REPLY

Please enter your comment!
Please enter your name here