ನಿನ್ನೆ ರಜಾ ದಿನ. ಹೀಗೇ ಚೆನ್ನೈಯ ಶಾಪಿಂಗ್ ತಾಣವಾಗಿರುವ ಟಿ.ನಗರದ ರಂಗನಾಥನ್ ಸ್ಟ್ರೀಟ್ ಅತ್ಯಂತ ಜನಪ್ರಿಯ. ಅಲ್ಲಿಗೆ ಹೋಗೋಣ ಅಂತ ಮನಸ್ಸು ಮಾಡಿದವನೇ ಬೈಕನ್ನೇರಿ ಹೊರಟುಬಿಟ್ಟೆ. ವೆಸ್ಟ್ ಮಾಂಬಳಂ ರೈಲು ನಿಲ್ದಾಣ ಪಕ್ಕ ಬೈಕು ನಿಲ್ಲಿಸಿ, ರೈಲ್ವೇ ಬ್ರಿಜ್ ದಾಟಿದರೆ ಅದು ನೇರವಾಗಿ ಇಳಿಯೋದು ರಂಗನಾಥನ್ ಸ್ಟ್ರೀಟ್‌ಗೆ.
ಈ ದಾರಿ ಆಯ್ದುಕೊಳ್ಳಲು ಕಾರಣವೂ ಇದೆ. ಮಾಮೂಲಿಯಾಗಿ ಪಾನಗಲ್ ಪಾರ್ಕ್ ಮೂಲಕವಾಗಿ ಈ ಸ್ಥಳಕ್ಕೆ ಬರೋದಂದ್ರೆ ಆಗದ ಮಾತು. ಭಾನುವಾರವಾದುದರಿಂದ ಕಾಲಿಡಲು ಜಾಗವಿರೋದಿಲ್ಲ. ಚೆನ್ನೈಗರು ಶಾಪಿಂಗ್‌ಪ್ರಿಯರು. ಭಾನುವಾರವಂತೂ ಇಲ್ಲಿ… ಅದೇನೋ ಹೇಳ್ತಾರಲ್ಲ… ಸಾಸಿವೆ ಕಾಳು ಚಿಮ್ಮಿಸಿದರೆ ಕೆಳಗೆ ಬೀಳೋದಿಲ್ಲ ಅಂತ. ಹಾಗಿರುತ್ತೆ ಪರಿಸ್ಥಿತಿ.
ಅಗಲ ಕಿರಿದಾದ ರಸ್ತೆ. ಆ ರಸ್ತೆಯನ್ನೇ ಕಬಳಿಸಿಕೊಂಡು ತಮ್ಮ ಪೆಟ್ಟಿಗೆಯಿಟ್ಟು ಕೂಗಾಡುತ್ತಿರುವ ಬೀದಿಬದಿ ವ್ಯಾಪಾರಿಗಳು. ಮುಂದೆ ಹೋಗಬೇಕಿದ್ದರೆ ಇರುವೆ ಸಾಲಿನಂತೆ ಸಾಗಬೇಕು. ಮುಂದೆ ಹೋಗುತ್ತಾ ಇರುತ್ತಾರೆ, ಅವರನ್ನು ನಾವು ಹಿಂಬಾಲಿಸಬೇಕು. ಎದುರಿನಿಂದಲೂ ಬರ್ತಾ ಇರ್ತಾರೆ.
ಹಾಗೇ ಒಂದು ಯೋಚನೆ. ಸುಮ್ನೆ ನಮ್ಮ ಮುಂದಿರುವವರ ಹಿಂದೆಯೇ ಹೆಜ್ಜೆ ಹಾಕುತ್ತಾ ಹೋದರೆ ರಸ್ತೆಯ ಮತ್ತೊಂದು ತುದಿ ಮುಟ್ಟುವುದಕ್ಕೆ ಕನಿಷ್ಠ ಒಂದು ಗಂಟೆಯಾದರೂ ಬೇಕು. ಎಲ್ಲೋ ಯೋಚಿಸುತ್ತಾ, ಮುಂದಿದ್ದವರು ಹೆಜ್ಜೆ ಹಾಕುವುದನ್ನೇ ಅನುಸರಿಸುತ್ತಾ ಇದ್ದರೆ ಬೇಗಬೇಗನೇ ಹೋಗುವುದು ಸಾಧ್ಯವಿಲ್ಲ. ಏನೇನೋ ಆಲೋಚನೆಗಳನ್ನೆಲ್ಲಾ ಬಿಟ್ಟು ನಿಮ್ಮ ಗಮನವನ್ನೊಮ್ಮೆ ಗಮ್ಯ ಸ್ಥಾನ ತಲುಪುವುದರ ಮೇಲೇ ಕೇಂದ್ರೀಕರಿಸಿ ನೋಡಿ. ಒಂದು ಸ್ವಲ್ಪ ಎಡೆ ಸಿಕ್ಕರೂ ತೂರಿಕೊಂಡು ಬಿಡಿ… ಹತ್ತು ನಿಮಿಷದಲ್ಲಿ ಆ ರಸ್ತೆಯ ಮತ್ತೊಂದು ತುದಿ ತಲುಪಿರುತ್ತೀರಿ.
ಹೀಗೆಯೇ ಜೀವನವೂ ಅಲ್ಲವೇ? ಅಜ್ಜ ನೆಟ್ಟ ಆಲದ ಮರವನ್ನೇ ಜೋತು ಬೀಳುವುದಕ್ಕಿಂತ, ಒಂದಷ್ಟು ಡಿಫರೆಂಟಾಗಿ ಯೋಚಿಸಿ. ಮತ್ತೊಬ್ಬರು ಹಾಕಿಕೊಟ್ಟ ದಾರಿಯಲ್ಲೇ ನಡೆದು ಹೋದರೆ ಗಮ್ಯ ಸ್ಥಾನ ತಲುಪಬಹುದು. ಆದರೆ ಬೇಗನೇ ತಲುಪಲು ಶಾರ್ಟ್‌ಕಟ್ ಏನಾದರೂ ಇದೆಯೇ? ಬೇಗನೇ ಹೇಗೆ ಗುರಿ ತಲುಪಬಹುದು ಎಂದು ಭಿನ್ನವಾಗಿ ಯೋಚಿಸಿದರೆ…?
ಎಲ್ಲ ಕಾರ್ಯಗಳೂ ಹಾಗೆಯೇ. ಎಲ್ಲವೂ ನಮ್ಮ ಆಲೋಚನೆಯನ್ನೇ ಅವಲಂಬಿಸಿದೆ. ಒಂದು ತಂಡದ ನಾಯಕ ಏಕಪ್ರಕಾರವಾಗಿ ಯೋಚಿಸಿ, ಒಂದು ಕಾರ್ಯಯೋಜನೆ ರೂಪಿಸಿರಬಹುದು. ತಂಡದ ಸದಸ್ಯರೆಲ್ಲರೂ ಅದನ್ನು ಅನುಸರಿಸಲಿ ಅಂತ. ನಾವು ಅದಕ್ಕೇ ಜೋತು ಬೀಳದೆ, ಹೊಸ ಮಾರ್ಗವೇನಾದರೂ ಶೋಧಿಸಿದರೆ, ಒಂದಷ್ಟು ರಿಸ್ಕ್ ತೆಗೆದುಕೊಂಡು, ನುಗ್ಗಿ ನಡೆದರೆ… ಎಷ್ಟು ಬೇಗನೇ ಗಮ್ಯ ಸ್ಥಾನ ತಲುಪಬಹುದಲ್ಲ…
So… Think Differently, Act Differently!!!
“ಟಿ.ನಗರದ ರಂಗನಾಥನ್ ಸ್ಟ್ರೀಟ್” ಓದಿಕೊಂಡಾಗ ತಟ್ಟನೆ ನೆನಪಾದದ್ದು ವಸುಧೇಂದ್ರರ “ನಮ್ಮಮ್ಮ ಅಂದ್ರೆ ನನಗಿಷ್ಟ” ಕಥೆ, ಸಂತೆಯಲ್ಲು ಚಿಂತನೆಗೆ ಹಚ್ಚುವ ನಿಮಗೊಂದು ಧನ್ಯವಾದ.
-ಅಮರ
ಅಮರ ಅವರೆ,
ಬ್ಲಾಗಿಂಗ್ ಆರಂಭಿಸಿದ್ಮೇಲೆ ಎಲ್ಲೇ ಹೋದರೂ ಮನಸ್ಸಿನೊಳಗೆ ಒಂದು ತುಡಿತ ಇರುತ್ತೆ… ಬ್ಲಾಗಿಗೆ ಏನು ಬರೆಯೋದು ಅಂತ… ಅಥವಾ ಮನಸ್ಸಿನಲ್ಲಿ ಬಂದ ಮಹಾಪೂರಗಳಲ್ಲಿ ಯಾವುದನ್ನು ಬ್ಲಾಗಿಗೆ ಹಾಕೋದು ಅಂತ… 🙂 ಬಹುಶಃ ಇದು ನಮ್ಮ ನಿಮ್ಮೆಲ್ಲರ ಸಮಸ್ಯೆಯೂ ಆಗಿರಬಹುದು….
ಧನ್ಯವಾದ.
ಬರ್ತಾ ಇರಿ.