ಶಿಕ್ಷಣವೀಗ ಜನ್ಮಸಿದ್ಧ ಹಕ್ಕು; ಶುಲ್ಕಕ್ಕೆ ಕಡಿವಾಣ ಬಿದ್ದೀತೇ?

0
282

ಸ್ವಾತಂತ್ರ್ಯ ದೊರೆತ ಆರು ದಶಕಗಳ ಬಳಿಕ ಇಂಥದ್ದೊಂದು ಐತಿಹಾಸಿಕ ಹೆಜ್ಜೆ ಇಡಲು ಮನಸ್ಸು ಮಾಡಿದ ಕೇಂದ್ರ ಸರಕಾರಕ್ಕೆ ಸಲಾಂ. ಇನ್ನೀಗ ಶಿಕ್ಷಣ ಎಂಬುದು ಪ್ರತೀ ಮಗುವಿನ ಮೂಲಭೂತ ಹಕ್ಕು. ಅಂದರೆ, 6ರಿಂದ 14 ವರ್ಷಗಳ ನಡುವಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂಬುದು ಏಪ್ರಿಲ್ 1ರ ಶುಭದಿನದಂದು ಭಾರತ ಸರಕಾರ ಜಾರಿಗೊಳಿಸಿದ ಕಾಯಿದೆಯ ಸಾರಾಂಶ.

ಈ ವಿಷಯದಲ್ಲಿ ಬಹುಶಃ ಎಲ್ಲರಿಗೂ ಹೆಚ್ಚು ಕಾಡುವುದು ಶಿಕ್ಷಣವು ‘ಉಚಿತ’ ಎಂಬ ಪದ. ಉಚಿತ ಎಂದ ಕೂಡಲೇ ನೆನಪಾಗುವುದು ಹಣ, ಹಣ ಮತ್ತು ಹಣ. ಅಂದರೆ ಶಾಲೆಯ ಫೀಸು. ಇಂದು ಗ್ರಾಮೀಣ ಪ್ರದೇಶದಲ್ಲಾಗಲೀ, ಅಥವಾ ಪಟ್ಟಣ ಪ್ರದೇಶದಲ್ಲಾಗಲೀ ಮಕ್ಕಳು ಶಿಕ್ಷಣ ಪಡೆಯದೇ ಇರುವುದಕ್ಕೆ ಇದುವೇ ಪ್ರಮುಖ ಅಡ್ಡ ಗೋಡೆಯಲ್ಲವೇ? ಶಿಕ್ಷಣದ ಮಹತ್ವದ ಅರಿವಿನ ಕೊರತೆಯಿಂದಾಗಿ ಕೆಲವೇ ಮಂದಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ ಎಂಬುದು ಬಿಟ್ಟರೆ, ಹೆಚ್ಚಿನವರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸದೇ ಇರಲು ಪ್ರಧಾನ ಕಾರಣವೇ ಈ ಶಿಕ್ಷಣ ಶುಲ್ಕವೆಂಬ ಪೀಡೆ; ಕ್ಯಾಪಿಟೇಶನ್ ಶುಲ್ಕ, ಸೇವಾ ಶುಲ್ಕ, ಕಟ್ಟಡ ನಿಧಿ, ಮೂಲಸೌಕರ್ಯ ನಿಧಿ ಎಂಬಿತ್ಯಾದಿ ನಾನಾ ಹೆಸರಿನಲ್ಲಿ ಕರೆಯಲ್ಪಡುತ್ತಿರುವ ಡೊನೇಶನ್ ಎಂಬ ಸುಲಿಗೆ.

ಇಂದು ಶಿಕ್ಷಣ ಸಂಸ್ಥೆಗಳೆಂದರೆ ಧನವೆಂಬ ರಕ್ತ ಹೀರುವ ಕೇಂದ್ರಗಳಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಗ್ರಾಮೀಣ ಪ್ರದೇಶದಲ್ಲಿಯೂ ಈಗ ಸಾಕಷ್ಟು ಶೈಕ್ಷಣಿಕ ಜಾಗೃತಿ ಮೂಡಿದೆ. ಆದರೆ ಎಲ್ಲದರಲ್ಲಿಯೂ ಮುಂದುವರಿದಿರುವ ಹಣೆಪಟ್ಟಿ ಹೊತ್ತ ಹಾಗೂ ಶೈಕ್ಷಣಿಕ ಜಾಗೃತಿ ಅದ್ಯಾವಾಗಲೋ ಮೂಡಿಬಿಟ್ಟಿದ್ದ ಪಟ್ಟಣಗಳಲ್ಲಿ? ಹೌದು ಇಲ್ಲಿ ಶೈಕ್ಷಣಿಕ ‘ಜಾಗೃತಿ’ ಕೂಡ ಮುಂದುವರಿದಿದೆ! ಹೇಗೆ? ನನ್ನ ಮಗ ಲಕ್ಷಾಂತರ ಫೀಸು ಕಟ್ಟಿ ಇಂತಹಾ ಪ್ರತಿಷ್ಠಿತ ಶಾಲೆಯಲ್ಲಿ ಕಲಿಯುತ್ತಿದ್ದಾನೆ ಎಂದು ಹೇಳಿಕೊಳ್ಳುವ ಹೆಮ್ಮೆ, ಪ್ರತಿಷ್ಠೆಗೆ ಕಟ್ಟುಬಿದ್ದಿರುವ ಪೋಷಕ ವೃಂದದ ಮೂಲಕ!

ತಮ್ಮ ಮಗ ಆಚೆಮನೆಯ ಮಗುವಿಗಿಂತ ಹೆಚ್ಚು ಪ್ರತಿಷ್ಠಿತ, ದುಬಾರಿ ಶಾಲೆಯಲ್ಲಿ ಕಲಿಯಬೇಕು ಎಂಬ ಈ ಒಣ ಪ್ರತಿಷ್ಠೆಯಂತೂ ಉಳ್ಳವರ ಪಾಲಿಗೆ ಪೈಪೋಟಿಯ ಆಯುಧವಾಗಿದ್ದರೆ, ದಿನಕ್ಕೆ ಎರಡು ತುತ್ತಿನ ಕೂಳಿಗೆ ಕಷ್ಟಪಡುವ ಕುಟುಂಬಗಳ ಪಾಲಿಗೊಂದು ಅನಿವಾರ್ಯ ಅನಿಷ್ಟ. ಉಳ್ಳವರು ಕೊಡುತ್ತಾರೆ, ಇಲ್ಲದಿರುವವರಿಗೂ ಅದೇ ಶುಲ್ಕದ ಮಾನದಂಡ! ಹೀಗಾಗಿ ಅವರು ಕುಗ್ಗಿ ಹೋಗುತ್ತಾರೆ.

ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಿಸಬೇಕು, ಅವನು ವಿದ್ಯಾವಂತನಾಗಿ ದೊಡ್ಡ ಹುದ್ದೆಗೇರಿ ಭಾರೀ ಸಂಪಾದಿಸಬೇಕೆಂಬುದು ಪ್ರತಿಯೊಬ್ಬ ಅಪ್ಪ ಅಮ್ಮಂದಿರ ಹಂಬಲ, ತುಡಿತ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು.

ಅವುಗಳು ನೀಡುವ ಶಿಕ್ಷಣದಿಂದ ರ‌್ಯಾಂಕ್ ಲಭಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದು ನಿಜಕ್ಕೂ ಜೀವನ ರೂಪಿಸಲು ಪೂರಕವಾಗುತ್ತದೆಯೇ? ಇದು ಇಲ್ಲಿರುವ ಪ್ರಶ್ನೆ. ಬರೇ ರ‌್ಯಾಂಕ್ ಗಳಿಸುವುದಕ್ಕಾಗಿಯೇ ಮಕ್ಕಳನ್ನು ರೂಪಿಸುವುದಲ್ಲ ಎಂಬುದನ್ನು ಕೂಡ ತಿಳಿದುಕೊಳ್ಳಬೇಕಾಗಿದೆ ಈ ಶಿಕ್ಷಣ ಸಂಸ್ಥೆಗಳು.

ಇಲ್ಲಿ ರ‌್ಯಾಂಕ್ ಗಳಿಸಲು ಮಕ್ಕಳ ಮೇಲೆ ಸಿಕ್ಕಾಪಟ್ಟೆ ಒತ್ತಡ ಹೇರಲಾಗುತ್ತದೆ ಎಂಬುದನ್ನು ಅಲ್ಲಗಳೆಯಲಾದೀತೇ? ಮಣಭಾರದ ಚೀಲ ಹೊತ್ತು ಭವ್ಯ ಕನಸಿನೊಂದಿಗೆ, ಬಾಲ್ಯದ ಆಟಗಳನ್ನೆಲ್ಲಾ ಮರೆತು ಕೋಚಿಂಗ್ ಹೆಸರಿನಲ್ಲಿ ಮನೆಗೆ ಬಂದ ಮೇಲೂ ‘ಶಾಲೆಗೆ’ ಹೋಗುವ ಎಷ್ಟು ಮಕ್ಕಳಿಲ್ಲ? ಈ ರ‌್ಯಾಂಕ್ ಪದ್ಧತಿಯೇ, ಶಿಕ್ಷಣದ ಶುಲ್ಕ ಹೆಚ್ಚಿಸಿ ಭರ್ಜರಿ ಲಾಭ ಗಳಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಕೊಳ್ಳೆ ಹೊಡೆಯುವ ಅತ್ಯುತ್ತಮ ಆಯುಧ ಎಂಬುದನ್ನು ಅಲ್ಲಗಳೆಯಲಾದೀತೇ? ಅಂದರೆ ರ‌್ಯಾಂಕ್ ಬಂದಿತೆಂದರೆ, ಶಾಲಾ ಆಡಳಿತಕ್ಕೆ ಫೀಸು ಹೆಚ್ಚಿಸಿಕೊಳ್ಳಲು ಇರುವ ಮತ್ತೊಂದು ಆಯುಧ ದೊರೆತಂತೆ!

ಅದಕ್ಕೇ ಹೇಳಿದ್ದು, ಇಂದು ಶಿಕ್ಷಣ ಎಂಬುದು ಉದ್ಯಮವಾಗುತ್ತಿದೆ. ಭಾವೀ ಭವ್ಯ ಪ್ರಜೆಗಳು ಎಂದು ಹಣೆಪಟ್ಟಿ ಕಟ್ಟಿಕೊಂಡ ಮಕ್ಕಳ ಪೋಷಕರನ್ನು ಇನ್ನಿಲ್ಲದಂತೆ ಹಿಂಡಲಾಗುತ್ತದೆ. ಬುದ್ಧಿವಂತ, ಬಡ ಮಕ್ಕಳು ಸೊರಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆ ಇಟ್ಟಿದ್ದು ಸ್ವಾಗತಾರ್ಹ.
ಕಾಯಿದೆಯಿಂದೇನಾಗುತ್ತದೆ?
* ಅಂದಾಜು ಲೆಕ್ಕಾಚಾರದಂತೆ ದೇಶದ ಸುಮಾರು 92 ಲಕ್ಷ (6ರಿಂದ 14 ವಯೋಮಿತಿಯ) ಶಿಕ್ಷಣ ವಂಚಿತ ಮಕ್ಕಳ ಬಾಳು ಹಸನಾಗುತ್ತದೆ. ಶಾಲೆಗೆ ಹೋಗಲಾಗದ ಮಕ್ಕಳನ್ನು ಶಾಲೆಗೆ ಸೇರಿಸುವ ಹೊಣೆ ರಾಜ್ಯ ಸರಕಾರಗಳು ಮತ್ತು ಸ್ಥಳೀಯಾಡಳಿತೆಗಳದ್ದು.
* ಶಾಲೆ ವಂಚಿತ ಅಥವಾ ಶಾಲೆ ಬಿಟ್ಟ ಮಕ್ಕಳನ್ನು ಹುಡುಕಿ, ವಯಸ್ಸಿಗನುಗುಣವಾಗಿ ಆಯಾ ತರಗತಿಗೆ ಸೇರಿಸುವುದು ಆಯಾ ಪ್ರದೇಶದ ಶಾಲಾ ಆಡಳಿತ ಸಮಿತಿ ಅಥವಾ ಸ್ಥಳೀಯ ಆಡಳಿತೆಯ ಹೊಣೆ. ಈ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಉಚಿತ ಮತ್ತು ಕಡ್ಡಾಯ.
* ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳಿಗಾಗಿ ಶೇ.25 ಮೀಸಲಾತಿ ಕೊಡಬೇಕಾಗುತ್ತದೆ. (ಇದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎಂಬುದೇ ಎಲ್ಲರನ್ನೂ ಕಾಡುತ್ತಿರುವ ಕುತೂಹಲ!)
* ಕಾಯಿದೆ ಜಾರಿಗೆ ರಾಜ್ಯ ಸರಕಾರಗಳಿಗೆ ತಲಾ 25 ಸಾವಿರ ಕೋಟಿ ರೂ. ಕೇಂದ್ರೀಯ ಅನುದಾನ. ಮುಂದಿನ ಐದು ವರ್ಷಕ್ಕೆ ಈ ಯೋಜನೆಗಾಗಿ 1.71 ಲಕ್ಷ ಕೋಟಿ ರೂ. ಬೇಕಾಗುತ್ತದೆ ಎಂದು ಕೇಂದ್ರವು ಅಂದಾಜಿಸಿದೆ.
* ಕಾಯಿದೆ ಪ್ರಕಾರ ಯಾವುದೇ ಶಾಲೆಯೂ ಪ್ರವೇಶಾನುಮತಿ ನಿರಾಕರಿಸುವಂತಿಲ್ಲ ಮತ್ತು ಸೂಕ್ತ ತರಬೇತಾದ ಶಿಕ್ಷಕರನ್ನು ಹೊಂದಿರಬೇಕು, ಆಟದ ಮೈದಾನ ಮತ್ತು ಮೂಲಸೌಕರ್ಯಗಳಿರಬೇಕು. ವರ್ಷದೊಳಗೆ ಎಲ್ಲ ಶಾಲೆಗಳಲ್ಲಿ ತರಬೇತಾದ ಶಿಕ್ಷಕರ ಸಹಿತ ಮೂಲ ಸೌಕರ್ಯ ಹೊಂದಿರಬೇಕು.
* ಶಾಲೆಗಳಲ್ಲಿ ಕಠಿಣ ಶಿಕ್ಷೆ ಇರುವುದಿಲ್ಲ ಮತ್ತು ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸುವವರೆಗೆ ಮುಂದಿನ ತರಗತಿಗೆ ಬಡ್ತಿ ಪಡೆಯಲು ಪರೀಕ್ಷೆಗಳ ಅಂಕಗಳು ಮಾನದಂಡವಾಗುವುದಿಲ್ಲ.
* ಇದರ ಅನುಸಾರ, ಒಂದು ಕಿ.ಮೀ. ನಡೆದುಹೋಗಬಹುದಾದ ವ್ಯಾಪ್ತಿಯಲ್ಲೇ ಪ್ರಾಥಮಿಕ ಶಾಲೆಗಳಿರಬೇಕು. ಅಂದರೆ ಕಿಲೋಮೀಟರಿಗೊಂದು ಪ್ರಾಥಮಿಕ ಶಾಲೆ. (ಎಷ್ಟು ಸುಂದರ ಕನಸು ಅಲ್ಲವೇ?)

ಈ ಮಧ್ಯೆ, ಈ ಕಾಯಿದೆಯನ್ನು ಈಗಾಗಲೇ ಕೆಲವು ಧನದಾಹಿ ಶಿಕ್ಷಣ ಸಂಸ್ಥೆಗಳು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವುದನ್ನೂ ಗಮನಿಸಬೇಕು.

ಇದರ ನಡುವೆ, ಶಿಕ್ಷಕರ ಕೊರತೆಯಿರುವ ಶಾಲೆಗಳು, ಏಕೋಪಾಧ್ಯಾಯ ಶಾಲೆಗಳು, ಕೊಠಡಿಯಿಲ್ಲದೆ ಮೈದಾನದ ಮರದ ಕೆಳಗೆ ನಡೆಯುತ್ತಿರುವ ಶಾಲೆಗಳು ಹೊಸ ಭರವಸೆಯಲ್ಲಿರುವಂತೆಯೇ, ಶಿಕ್ಷಕರನ್ನು ಜನಗಣತಿ, ಪಲ್ಸ್ ಪೋಲಿಯೋ ಇತ್ಯಾದಿ ಸರಕಾರಿ ಕಾರ್ಯಕ್ರಮಗಳಿಗೆ ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ.

ನಿಜಕ್ಕೂ ಈ ಕಾಯಿದೆ ಸಮರ್ಥವಾಗಿ, ಭ್ರಷ್ಟಾಚಾರರಹಿತವಾಗಿ, ಇಚ್ಛಾಶಕ್ತಿಯೊಂದಿಗೆ ಜಾರಿಗೆ ಬಂದಲ್ಲಿ, ಭವಿಷ್ಯ ಭದ್ರವಾಗಿರುವುದರಲ್ಲಿ ಸಂದೇಹವಿಲ್ಲ ಮತ್ತು ಎಲ್ಲರಿಗೂ ಸಮಾನ ಗುಣಮಟ್ಟದ ಶಿಕ್ಷಣ ದೊರೆಯುವುದು ಒಳ್ಳೆಯ ಸಂಗತಿಯೇ. ಆದರೆ ಇದೇನೂ ಅಷ್ಟು ಸುಲಭವಲ್ಲ. ಲಕ್ಷಾಂತರ ಮಂದಿ ಶಿಕ್ಷಕರ ನೇಮಕವಾಗಬೇಕಿದೆ, ಪಾಠ ಶಾಲೆಗಳಿಗೆ ಲಕ್ಷಾಂತರ ಕೊಠಡಿಗಳು ಮತ್ತಿತರ ಮೂಲಸೌಕರ್ಯಗಳ ಅಗತ್ಯವಿದೆ. ಇದೆಲ್ಲ ಆದರೆ ಸರಕಾರದ ಉದ್ದೇಶವು ಸಾರ್ಥಕವಾಗಬಹುದು.

ಶಿಕ್ಷಣ ಸಂಸ್ಥೆಗಳ ಧನದಾಹದ ಮೇಲೆ ಕಡಿವಾಣ ಹಾಕಿ, ಶಿಕ್ಷಣವೂ ಉದ್ಯಮವಾಗದಂತೆ ತಡೆಯಬೇಕು. ಎಲ್ಲರಿಗೂ ಸಮಾನ ಶುಲ್ಕ, ಸಮಾನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದರೆ, ಕೇಂದ್ರ ಸರಕಾರದ ಈ ಉದ್ದೇಶ ಖಂಡಿತಾ ಸಫಲತೆ ಪಡೆಯಬಹುದು. ನೀವೇನಂತೀರಿ?
[ವೆಬ್‌ದುನಿಯಾ ಪ್ರಕಟಿತ]

LEAVE A REPLY

Please enter your comment!
Please enter your name here