ಆ್ಯಪಲ್ ಸಾಧನಗಳಿಗೆ iOS 15: ಉಪಯುಕ್ತ 6 ಹೊಸ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

0
647

ಐಫೋನ್ ಬಳಕೆದಾರರಿಗೆ ಕಳೆದ ವಾರದಿಂದ (ಸೆ.21) ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 15 ಬಿಡುಗಡೆಯಾಗಿದೆ. ಆರು ವರ್ಷದ ಹಿಂದಿನ ಐಫೋನ್ 6S ನಂತರದ ಎಲ್ಲ ಐಫೋನ್‌ಗಳಿಗೆ ಇದು ಲಭ್ಯ. ಇತ್ತೀಚೆಗೆ ಹೊಸದಾಗಿ ಬಿಡುಗಡೆಯಾದ ಐಫೋನ್ 13ರಲ್ಲಿ ಇರುವುದು ಐಒಎಸ್ 15 ಕಾರ್ಯಾಚರಣಾ ವ್ಯವಸ್ಥೆ. ಐಒಎಸ್ 15ರ ಉಪಯುಕ್ತ ಆರು ವೈಶಿಷ್ಟ್ಯಗಳು ಇಲ್ಲಿವೆ:

ಸಫಾರಿ ವಿಳಾಸ ಪಟ್ಟಿ: ಐಫೋನ್‌ನ ಸಫಾರಿ ಬ್ರೌಸರ್‌ನಲ್ಲಿ ಅಡ್ರೆಸ್ ಬಾರ್ (ಯುಆರ್‌ಎಲ್ ನಮೂದಿಸುವ ಸ್ಥಳ) ಸ್ಕ್ರೀನ್‌ನ ಕೆಳಭಾಗಕ್ಕೆ ವರ್ಗವಾಗಿದೆ. ಇದು ಒಂದು ಕೈಯಲ್ಲಿ ಕೆಲಸ ಮಾಡುವಾಗ ಅನುಕೂಲಕರ. ಆದರೆ, ಇದು ಬೇಡವೆಂದಾದರೆ, ಮೇಲ್ಭಾಗದಲ್ಲೇ ಅಡ್ರೆಸ್ ಬಾರ್ ಇರಿಸಬಹುದು. ಇದಕ್ಕೆ ಅಡ್ರೆಸ್ ಪಟ್ಟಿಯ ಪಕ್ಕದಲ್ಲೇ ಇರುವ AA ಎಂಬುದನ್ನು ಒತ್ತಿದಾಗ, ವಿಳಾಸ ಪಟ್ಟಿಯನ್ನು ಮೇಲ್ಭಾಗದಲ್ಲಿ ಇರಿಸಲು ಆಯ್ಕೆ ದೊರೆಯುತ್ತದೆ.

ಫೋಕಸ್ ಮೋಡ್: ಐಒಎಸ್ 15ರಲ್ಲಿ ಫೋಕಸ್ ಮೋಡ್ ಎಂಬುದು ಮುಖ್ಯವಾಗಿ ಗಮನ ಸೆಳೆದ ಅಂಶ. ಇದು ಒಂದು ರೀತಿಯಲ್ಲಿ ಫೋನ್ ಸದ್ದು ಮಾಡದಂತೆ ಇರಿಸುವ ‘ಡು ನಾಟ್ ಡಿಸ್ಟರ್ಬ್’ ಮೋಡ್ ಇದ್ದಂತೆಯೇ. ಕಂಟ್ರೋಲ್ ಸೆಂಟರ್‌ನಲ್ಲಿ (ಹೋಮ್ ಸ್ಕ್ರೀನ್‌ನಲ್ಲಿ ಬಲ ಮೇಲ್ಭಾಗದಿಂದ ಕೆಳಗೆ ಸ್ವೈಪ್ ಮಾಡಿದಾಗ ಸಿಗುವ ನಿಯಂತ್ರಣ ಕೇಂದ್ರ) ಅಥವಾ ಸೆಟ್ಟಿಂಗ್ಸ್‌ನಲ್ಲಿ ಹೋದರೆ ‘ಫೋಕಸ್’ ಗೋಚರಿಸುತ್ತದೆ. ಅದನ್ನು ಒತ್ತಿದಾಗ ‘ಡು ನಾಟ್ ಡಿಸ್ಟರ್ಬ್’ ಮೋಡ್ ಇರುತ್ತದೆ. ಅದರ ಕೆಳಗೆ, ‘ವೈಯಕ್ತಿಕ’ ಆಯ್ಕೆ ಮೂಲಕ, ನಮಗೆ ಬೇಕಾದ ವಿಷಯದಲ್ಲಿ ಮಾತ್ರವೇ ಗಮನ (ಫೋಕಸ್) ಇರಿಸುವಂತೆ, ಅಂದರೆ ಅತ್ಯಗತ್ಯ ಆ್ಯಪ್‌ಗಳಿಂದ ಮಾತ್ರ ನೋಟಿಫಿಕೇಶನ್‌ಗಳನ್ನು ತೋರಿಸುವಂತೆಯೂ, ನಾವು ಕಾರ್ಯವ್ಯಸ್ತವಾಗಿದ್ದೇವೆಂಬುದನ್ನು ಉಳಿದವರಿಗೆ ಕಾಣಿಸುವಂತೆಯೂ ಹೊಂದಿಸಬಹುದು. ಯಾರಿಂದ ಫೋನ್ ಅಥವಾ ಸಂದೇಶ ಬಂದರೆ ಕಾಣಿಸಬೇಕು ಎಂಬುದಾಗಿ ಕೆಲವೇ ಸಂಪರ್ಕ ಸಂಖ್ಯೆಗಳನ್ನು ಇಲ್ಲಿ ಹೊಂದಿಸಬಹುದು. ಕಚೇರಿ ಕೆಲಸ, ನಿದ್ರಾ ಸಮಯವನ್ನೂ ಇಲ್ಲೇ ಹೊಂದಿಸಬಹುದು. ಫೋನ್ ರಿಂಗ್ ಅಥವಾ ನೋಟಿಫಿಕೇಶನ್ ಧ್ವನಿಯು ನಿಮಗೆ ತೊಂದರೆಯುಂಟುಮಾಡದು. ‘ಫೋಕಸ್’ ಆನ್ ಇರುವಾಗ ಕಚೇರಿ ಅಥವಾ ನಿರ್ದಿಷ್ಟ ಕೆಲಸಕ್ಕೆ ಬೇಕಾದ ಆ್ಯಪ್‌ಗಳು ಮಾತ್ರವೇ ಕಾಣಿಸುವಂತೆ ಸ್ಕ್ರೀನ್ ಹೊಂದಿಸಬಹುದಾಗಿರುವುದು ಮತ್ತೊಂದು ವಿಶೇಷ.

ಫೇಸ್‌ಟೈಮ್‌ನಲ್ಲಿ ಪೋರ್ಟ್ರೇಟ್ ಮೋಡ್: ಫೋಟೊಗಳಲ್ಲಿ ಹಿನ್ನೆಲೆಯನ್ನು ಮಸುಕಾಗಿಸಬಲ್ಲ ಪೋರ್ಟ್ರೇಟ್ ಮೋಡ್ ಅನ್ನು ಈಗ ವಿಡಿಯೊ ಕರೆ ಮಾಡಲು ಬಳಸುವ ಆ್ಯಪಲ್‌ನ ಫೇಸ್‌ಟೈಮ್ ಆ್ಯಪ್‌ನಲ್ಲಿ ಕೂಡ ಪರಿಚಯಿಸಲಾಗಿದೆ. ಗೂಗಲ್ ಮೀಟ್, ಝೂಮ್, ಸ್ಕೈಪ್ ಇತ್ಯಾದಿಗಳಲ್ಲಿ ಈ ಆಯ್ಕೆ ಈಗಾಗಲೇ ಇದೆ.

ನೋಟಿಫಿಕೇಶನ್ ಸಾರಾಂಶ: ನಿರ್ದಿಷ್ಟ ಆ್ಯಪ್‌ನಿಂದ ಹಲವು ನೋಟಿಫಿಕೇಶನ್‌ಗಳು ಬರುವಾಗ ಅವುಗಳಿಗೆಲ್ಲವೂ ಒಂದು ಗುಚ್ಛವಾಗಿ ಬರುತ್ತವೆ. ಹೀಗಾಗಿ ಪ್ರತಿಯೊಂದಕ್ಕೂ ಹಲವು ಬಾರಿ ಧ್ವನಿ ಮೊಳಗುವ ಸಮಸ್ಯೆ ಇರುವುದಿಲ್ಲ. ಅವುಗಳನ್ನು ಒಂದೊಂದಾಗಿ ನೋಡುವ ಆಯ್ಕೆ ಅಲ್ಲಿಂದಲೇ ದೊರೆಯುತ್ತದೆ.

ಲೈವ್ ಟೆಕ್ಸ್ಟ್: ಆಂಡ್ರಾಯ್ಡ್‌ನಲ್ಲಿರುವ ಗೂಗಲ್ ಲೆನ್ಸ್ ಮಾದರಿಯಲ್ಲಿ, ಅದಕ್ಕಿಂತಲೂ ಉತ್ತಮ ವೈಶಿಷ್ಟ್ಯಗಳನ್ನು ಲೈವ್ ಟೆಕ್ಸ್ಟ್ ಎಂಬ ವೈಶಿಷ್ಟ್ಯದ ಮೂಲಕ ಪರಿಚಯಿಸಲಾಗಿದೆ. ಕ್ಯಾಮೆರಾ ಆನ್ ಮಾಡಿದ ತಕ್ಷಣ, ಬಲ ಮೂಲೆಯಲ್ಲಿ ಒಂದು ಪಾರದರ್ಶಕವಾದ ಪುಟ್ಟ ಬಾಕ್ಸ್‌ ಕಾಣಿಸುತ್ತದೆ. ಯಾವುದೇ ಮುದ್ರಿತ ಪಠ್ಯ, ಬೋರ್ಡ್ ಅಥವಾ ಕೈಬರಹವಿದ್ದರೆ, ಆ ಬಾಕ್ಸ್ ಒತ್ತಿದ ತಕ್ಷಣ ಅಲ್ಲಿಂದ ಪಠ್ಯವನ್ನು ನಕಲಿಸಲು ಅಥವಾ ಅದರ ಬಗ್ಗೆ ಸರ್ಚ್ ಎಂಜಿನ್ ಮೂಲಕ ಹುಡುಕುವುದಕ್ಕೆ ಅಲ್ಲಿಂದಲೇ ಆಯ್ಕೆ ಗೋಚರಿಸುತ್ತದೆ. ಚಿತ್ರದಲ್ಲಿ ಫೋನ್ ಸಂಖ್ಯೆಯಿದ್ದರೆ ಆ ಸಂಖ್ಯೆಗೆ ನೇರವಾಗಿ ಡಯಲ್ ಮಾಡಬಹುದು. ಇದರಲ್ಲಿ ಇಂಗ್ಲಿಷ್ ಮತ್ತು ಹಲವಾರು ವಿದೇಶೀ ಭಾಷೆಗಳಿಗೆ ಬೆಂಬಲವಿದೆ. ಗೂಗಲ್ ಲೆನ್ಸ್‌ನಂತೆ ಕನ್ನಡಕ್ಕೆ ಬೆಂಬಲ ಬಂದಿಲ್ಲ.

ಪಠ್ಯದ ಗಾತ್ರ ಬದಲು: ಐಒಎಸ್ 15ರಲ್ಲಿ ಹೊಸದಾಗಿ ಪರಿಚಯಿಸಿದ ವೈಶಿಷ್ಟ್ಯವೆಂದರೆ, ಪಠ್ಯದ ಗಾತ್ರವನ್ನು ಹೋಂಸ್ಕ್ರೀನ್‌ಗೆ ಬೇರೆ, ನಿರ್ದಿಷ್ಟ ಆ್ಯಪ್‌ಗಳಿಗೆ ತಕ್ಕಂತೆ ಬೇರೆಯದಾಗಿಯೇ ಹೊಂದಿಸಬಹುದು. ಹಿಂದೆಲ್ಲಾ ಒಂದು ಪಠ್ಯದ ಗಾತ್ರ ಬದಲಿಸಿದರೆ ಅದು ಪೂರ್ತಿ ಐಫೋನ್‌ಗೆ (ಎಲ್ಲ ಆ್ಯಪ್‌ಗಳಿಗೆ) ಅನ್ವಯವಾಗುತ್ತಿತ್ತು. ಈಗ ಹಾಗಿಲ್ಲ. ಏನು ಮಾಡಬೇಕೆಂದರೆ, ಮೊದಲು ಸೆಟ್ಟಿಂಗ್ಸ್‌ನಲ್ಲಿ ಕಂಟ್ರೋಲ್ ಸೆಂಟರ್‌ಗೆ ಹೋಗಿ, Text Size ಎಂಬುದನ್ನು ಮೇಲ್ಭಾಗಕ್ಕೆ (ಹಸಿರು ಪ್ಲಸ್ ಗುರುತು ಒತ್ತಿ) ಸೇರಿಸಿಕೊಳ್ಳಬೇಕು. ನಂತರ ಯಾವುದಾದರೂ ಒಂದು ಆ್ಯಪ್ ತೆರೆದು, ಕಂಟ್ರೋಲ್ ಸೆಂಟರ್‌ನಲ್ಲಿ ಪಠ್ಯದ ಗಾತ್ರದ ಐಕಾನ್ (AA) ಒತ್ತಿದರೆ, ಅಲ್ಲಿಯೇ ಪಠ್ಯ ಗಾತ್ರ ಬದಲಿಸುವ ಆಯ್ಕೆ ಕಾಣಿಸುತ್ತದೆ. ಅದನ್ನು ಎಲ್ಲ ಆ್ಯಪ್‌ಗಳಿಗೂ ಅನ್ವಯಿಸಬೇಕೇ ಅಥವಾ ಆ ಆ್ಯಪ್‌ಗೆ ಮಾತ್ರ ಪಠ್ಯ ಬದಲಿಸಬೇಕೇ ಎಂದು ಆಯ್ಕೆ ಮಾಡಿಕೊಳ್ಳಬಹುದು.

My Article Published in Prajavani on 28/29 Sept 2021

LEAVE A REPLY

Please enter your comment!
Please enter your name here