Samsung Galaxy A22: ಉತ್ತಮ ಕ್ಯಾಮೆರಾ, ಬ್ಯಾಟರಿಯ ‘ಸ್ಮಾರ್ಟ್’ ಫೋನ್

0
432

ಅತ್ಯಾಧುನಿಕ 5G ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯು ಭಾರತಕ್ಕೆ ಬರುವ ಮೊದಲು ಸಾಕಷ್ಟು ಸಂಖ್ಯೆಯಲ್ಲಿ 4ಜಿ ಅಥವಾ ಎಲ್‌ಟಿಇ ಗ್ರಾಹಕರನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಇತ್ತೀಚೆಗಷ್ಟೇ ತನ್ನ ‘ಎ’ ಸರಣಿಯಲ್ಲಿ ಎ-22 ಮಾದರಿಯ ಸ್ಮಾರ್ಟ್ ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 ಫೋನ್ ಹೇಗಿದೆ ಎಂದು ತಿಳಿದುಕೊಳ್ಳೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 ಫೋನ್ ವಿನ್ಯಾಸವು ಪ್ರೀಮಿಯಂ ನೋಟ ಹೊಂದಿದೆ. ನೋಡಿದ ತಕ್ಷಣ ಗಮನ ಸೆಳೆಯುವುದೆಂದರೆ ಅದರಲ್ಲಿ ಕರ್ವ್ಡ್ ಅಂಚುಗಳುಳ್ಳ ಪ್ರೀಮಿಯಂ ನೋಟ, ದೊಡ್ಡ ಬ್ಯಾಟರಿ ಇದ್ದರೂ ಸ್ಲಿಮ್ ಆಗಿರುವುದು ಮತ್ತು ನಾಲ್ಕು ಕ್ಯಾಮೆರಾಗಳ ಸೆಟಪ್. 6.4 ಇಂಚು ಸ್ಕ್ರೀನ್‌ನ ಇನ್ಫಿನಿಟಿ ‘ಯು’ HD+ ಸೂಪರ್ AMOLED ಡಿಸ್‌ಪ್ಲೇ ಇರುವುದರಿಂದ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತವೆ. 90Hz ರಿಫ್ರೆಶ್ ರೇಟ್ ಇರುವ ಕಾರಣ, ವಿಡಿಯೊಗಳು, ಗೇಮಿಂಗ್ ಅಥವಾ ಸ್ಕ್ರಾಲಿಂಗ್ ವೇಳೆ ಯಾವುದೇ ವಿಳಂಬದ ಸಮಸ್ಯೆ ಗೋಚರಿಸುವುದಿಲ್ಲ. ತೆಳುವಾದ ಮತ್ತು ಹಗುರವಾದ ಸಾಧನವಿದಾಗಿದ್ದು, ಕೈಯಲ್ಲಿ ಹಿಡಿದುಕೊಳ್ಳಲು ಅನುಕೂಲಕರ. ಪವರ್ ಬಟನ್‌ನಲ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ. ಹಿಂಭಾಗದಲ್ಲಿ ನಾಲ್ಕು ಸೆನ್ಸರ್‌ಗಳ ಕ್ಯಾಮೆರಾ ವ್ಯವಸ್ಥೆಯಿದೆ. ಕೆಳಭಾಗದಲ್ಲಿ ಟೈಪ್ ಸಿ ಯುಎಸ್‌ಬಿ ಪೋರ್ಟ್, ಇಯರ್‌ಫೋನ್‌ಗಾಗಿ 3.5 ಮಿಮೀ ಜ್ಯಾಕ್, ಮೈಕ್ ಹಾಗೂ ಒಂದು ಸ್ಪೀಕರ್ ಗ್ರಿಲ್ ಇದೆ.

ಕ್ಯಾಮೆರಾ
48 ಮೆಗಾಪಿಕ್ಸೆಲ್ ಸಾಮರ್ಥ್ಯದ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ವ್ಯವಸ್ಥೆಯಿರುವ ಪ್ರಧಾನ ಕ್ಯಾಮೆರಾ ಸೆನ್ಸರ್ ಜೊತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ, ತಲಾ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಡೆಪ್ತ್ ಹಾಗೂ ಮ್ಯಾಕ್ರೋ ಕ್ಯಾಮೆರಾಗಳಿವೆ. ಈ ಕ್ವಾಡ್ (ನಾಲ್ಕು) ಕ್ಯಾಮೆರಾಗಳ ಸೆಟಪ್, ಫೋಟೋಗ್ರಫಿ ಆಸಕ್ತರಿಗೆ ಇಷ್ಟವಾದೀತು. ವಿಶೇಷವಾಗಿ ಮ್ಯಾಕ್ರೋ ಕ್ಯಾಮೆರಾದ ಮೂಲಕ ಹತ್ತಿರದ ವಸ್ತುಗಳ ಶಾಟ್‌ನಲ್ಲಿ ಚಿತ್ರಗಳು ಸ್ಪಷ್ಟವಾಗಿ ಮೂಡಿಬಂದು, ಹಿನ್ನೆಲೆ ಮಸುಕಾಗುವ ಮೂಲಕ (ಬೊಕೇ ಪರಿಣಾಮ) ಗಮನ ನೀಡಬೇಕಾದ ವಸ್ತುವು ಎದ್ದು ಕಾಣುತ್ತದೆ. ಪೋರ್ಟ್ರೇಟ್ ಚಿತ್ರಗಳಿಗೆ ಡೆಪ್ತ್ ಕ್ಯಾಮೆರಾ ಮತ್ತಷ್ಟು ಸ್ಪಷ್ಟತೆಯನ್ನು ನೀಡುತ್ತದೆ. 48MP ಕ್ಯಾಮೆರಾಕ್ಕೆ ಒಐಎಸ್ ಸೌಕರ್ಯವು ಮಂದ ಬೆಳಕಿನಲ್ಲಿ, ವಸ್ತುವಿನ ಮೇಲೆ ಹೆಚ್ಚು ಬೆಳಕಿರುವಂತೆ ನೋಡಿಕೊಳ್ಳುವುದರಿಂದ, ಫೊಟೋ ಹಾಗೂ ವಿಡಿಯೊಗಳು ಉತ್ತಮವಾಗಿ ಮೂಡಿಬರುತ್ತವೆ. ಅದೇ ರೀತಿ, 8 ಮೆಗಾಪಿಕ್ಸೆಲ್ ಸಾಮರ್ಥ್ಯದ ಅಲ್ಟ್ರಾ ವೈಡ್ ಕ್ಯಾಮೆರಾ ಮೂಲಕ 123 ಡಿಗ್ರಿ ನೋಟದಲ್ಲಿ ವಿಸ್ತಾರವಾದ ಫೋಟೊಗಳನ್ನು ಸೆರೆಹಿಡಿಯಬಹುದು.

ಇನ್ನು, ಸೆಲ್ಫೀ ಪ್ರಿಯರಿಗಾಗಿ 13 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಆಕರ್ಷಕ ಸ್ವ-ಚಿತ್ರಗಳನ್ನು ನೀಡುತ್ತವೆ. ಅಷ್ಟೇ ಅಲ್ಲ, ದೂರದಲ್ಲಿ ಮೊಬೈಲ್ ಹಿಡಿದುಕೊಂಡು ಕೈ ಸನ್ನೆ ಮಾಡಿದಾಗ ಸೆಲ್ಫೀ ಸೆರೆಹಿಡಿಯುವ ವೈಶಿಷ್ಟ್ಯವು ಗಮನ ಸೆಳೆಯುತ್ತದೆ.

ಬ್ಯಾಟರಿ, ಸ್ಟೋರೇಜ್
5000mAh ಶಕ್ತಿಶಾಲಿ ಬ್ಯಾಟರಿ, 15W ಅಡಾಪ್ಟಿವ್ ವೇಗದ ಚಾರ್ಜಿಂಗ್ ವ್ಯವಸ್ಥೆ ಇದೆ. ಸಾಮಾನ್ಯ ಬಳಕೆಯೊಂದಿಗೆ, ಗೇಮಿಂಗ್, ವೀಡಿಯೊ ವೀಕ್ಷಣೆ – ಎಲ್ಲ ಸೇರಿ ಒಂದು ದಿನ ಅಥವಾ ಕಡಿಮೆ ಬಳಕೆಯಿದ್ದರೆ ಮೂರು ದಿನ ಬ್ಯಾಟರಿ ಚಾರ್ಜ್ ಬರುತ್ತದೆ. 6GB RAM ಹಾಗೂ 128GB ಸಂಗ್ರಹಣಾ ಸಾಮರ್ಥ್ಯದೊಂದಿಗೆ, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ಯಷ್ಟೂ ಡಿಜಿಟಲ್ ಫೈಲ್‌ಗಳನ್ನು ಶೇಖರಿಸಿಟ್ಟುಕೊಳ್ಳಬಹುದು.

ಸೈಡ್ ಪ್ಯಾನೆಲ್
ಕರ್ವ್ಡ್ ಅಂಚುಗಳು ಫೋನನ್ನು ಆಕರ್ಷಕವಾಗಿಸುತ್ತದೆ. ಈ ದಿನಗಳಲ್ಲಿ ಸಾಕಷ್ಟು ಆ್ಯಪ್‌ಗಳು ಅಗತ್ಯವಿರುವುದರಿಂದ, ಅವುಗಳಲ್ಲಿ ಸದಾ ಬಳಕೆಯಲ್ಲಿರುವವುಗಳನ್ನು ಒಂದೆಡೆ ನೋಡುವಂತಾಗಲು ಸೈಡ್ ಪ್ಯಾನೆಲ್ ಇದೆ. ಅಂದರೆ, ಬಲಭಾಗದ ಅಂಚಿನಲ್ಲಿ ಕಂಡೂ ಕಾಣದಂತಿರುವ ಒಂದು ಗೆರೆಯಂತೆ ಗೋಚರಿಸುವ ಜಾಗವನ್ನು ಸ್ಪರ್ಶಿಸಿದಾಗ ಪ್ಯಾನೆಲ್ ತೆರೆದುಕೊಳ್ಳುತ್ತದೆ. ಅದರಲ್ಲಿ ಆ್ಯಪ್‌ಗಳನ್ನು, ಅಥವಾ ಪದೇ ಪದೇ ಕರೆ ಮಾಡುವ ವ್ಯಕ್ತಿಗಳ ಸಂಪರ್ಕ ಸಂಖ್ಯೆಗಳು ಅಥವಾ ಬೇರೆ ಟೂಲ್‌ಗಳನ್ನು ಶಾರ್ಟ್‌ಕಟ್ ರೂಪದಲ್ಲಿ ಇಲ್ಲಿ ಜೋಡಿಸಿಟ್ಟುಕೊಳ್ಳುವ ಆಯ್ಕೆ ಉಪಯುಕ್ತವಾಗಿದೆ.

ಆಂಡ್ರಾಯ್ಡ್ 11 ಆಧಾರಿತ ಒನ್ ಯುಐ ಕೋರ್ ಕಾರ್ಯಾಚರಣಾ ವ್ಯವಸ್ಥೆಯು ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್ ಬೆಸೆದು ವೇಗದ, ಸುಲಲಿತ ಕಾರ್ಯಾಚರಣೆಗೆ, ಆ್ಯಪ್‌ಗಳನ್ನು ಕ್ಷಿಪ್ರವಾಗಿ ಬದಲಿಸಲು ಅನುಕೂಲವಾಗುತ್ತದೆ.

ಸ್ಯಾಮ್‌ಸಂಗ್ ಸದಸ್ಯರಾದರೆ ಸಾಧನವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಯಾವುದೇ ಸಮಸ್ಯೆಗಳಿದ್ದರೆ ಸ್ವಯಂಚಾಲಿತವಾಗಿ ತಪಾಸಣೆ ಮಾಡುವುದು, ಕಾರ್ಯಾಚರಣೆಯನ್ನು ಸುಗಮಗೊಳಿಸುವುದು – ಇವೆಲ್ಲವೂ ಸಾಧ್ಯ.

ಸ್ಮಾರ್ಟ್ ವೈಶಿಷ್ಟ್ಯಗಳು
ಜೊತೆಗೆ ಎಂದಿನಂತೆಯೇ ಸನ್ನೆ ಮತ್ತು ಚಲನೆ ಆಧಾರಿತವಾಗಿ ಕೆಲವೊಂದು ಕೆಲಸಗಳನ್ನು ಮಾಡಬಹುದು. ಈ ಸ್ಮಾರ್ಟ್ ವೈಶಿಷ್ಟ್ಯಗಳಲ್ಲಿ ಸ್ಕ್ರೀನ್ ಆನ್ ಅಥವಾ ಆಫ್ ಮಾಡಲು ಡಬಲ್ ಟ್ಯಾಪ್ ಮಾಡುವುದು, ನೋಡುತ್ತಿರುವಾಗ ಸ್ಕ್ರೀನ್ ಸದಾ ಆನ್ ಇರುವಂತೆ ಮಾಡುವುದು, ಸ್ಕ್ರೀನ್ ಮೇಲೆ ಕೈಯಿರಿಸಿದಾಗ ಮ್ಯೂಟ್ ಮಾಡುವುದು, ಫಿಂಗರ್‌ಪ್ರಿಂಟ್ ಸೆನ್ಸರ್ ಮೂಲಕ ಆ್ಯಪ್‌ಗಳನ್ನು ತೆರೆಯುವುದು ಅಥವಾ ಮುಚ್ಚುವುದು, ಸೆಲ್ಫೀ ತೆಗೆದುಕೊಳ್ಳಲು ಅಂಗೈಯನ್ನು ದೂರದಿಂದಲೇ ಸ್ವೈಪ್ ಮಾಡುವುದು – ಇವೆಲ್ಲವೂ ಅನುಕೂಲಕರವಾಗಿವೆ.

  • ಪ್ರಮುಖ ವೈಶಿಷ್ಟ್ಯಗಳು
  • 2GHz, 1.8GHz ಒಕ್ಟಾಕೋರ್ ಪ್ರೊಸೆಸರ್
  • 186 ಗ್ರಾಂ ತೂಕ
  • ಡ್ಯುಯಲ್ ನ್ಯಾನೋ ಸಿಮ್ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್
  • 159.3 x 73.6 x 8.4 ಮಿಮೀ ಸುತ್ತಳತೆ
  • ಬ್ಯಾಟರಿ 5000mAh
  • ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್
  • 6GB RAM / 128GB ಸ್ಟೋರೇಜ್
  • ಕ್ವಾಡ್ ಕ್ಯಾಮೆರಾ: 48.0 MP + 8.0 MP + 2.0 MP + 2.0 MP
  • Super AMOLED 6.4 ಇಂಚು ಡಿಸ್‌ಪ್ಲೇ
  • ಬೆಲೆ: ₹18,499

Samsung Galaxy A22 Review published in Prajavani on 28 Jul 2021

LEAVE A REPLY

Please enter your comment!
Please enter your name here