ಆ್ಯಪ್ ಇನ್‌ಸ್ಟಾಲ್ ಮಾಡುವಾಗ Error ತೋರಿಸುತ್ತಿದೆಯೇ?: ಹೀಗೆ ಮಾಡಿ…

0
268

App error
ತ್ತೀಚೆಗೆ ಹೊಸದಾಗಿ ಆಂಡ್ರಾಯ್ಡ್ ಫೋನ್ ಖರೀದಿಸಿದವರು ಕೆಲವರು ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡುವಾಗ ‘Screen Overlay Detected’ ಅಂತ ಒಂದು ಎರರ್ ಮೆಸೇಜ್ ಬರ್ತಿದೆ ಅಂತ ನನ್ನಲ್ಲಿ ಹೇಳಿದ್ದರು. ಏನು ಮಾಡಿದರೂ ಇದು ಹೋಗುತ್ತಿಲ್ಲ ಎಂಬುದು ಅವರ ದೂರು. ನಾನೂ ಹೊಸದೊಂದು ಫೋನ್‌ನಲ್ಲಿ ಪರಿಶೀಲಿಸಿ ನೋಡಿದಾಗ ತಿಳಿಯಿತು, ಇದೆಲ್ಲ ಆಂಡ್ರಾಯ್ಡ್‌ನ ಹೊಸ ಕಾರ್ಯಾಚರಣೆ ವ್ಯವಸ್ಥೆಯ ಸೆಟ್ಟಿಂಗ್ ವೈಶಿಷ್ಟ್ಯವೆಂಬುದು. ಹೀಗಾಗಿ, ಮಾರ್ಷ್‌ಮೆಲೋ ಹಾಗೂ ನೌಗಾಟ್ ಎಂಬ ಆಂಡ್ರಾಯ್ಡ್‌ನ ತೀರಾ ಇತ್ತೀಚಿನ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಹೊಂದಿರುವ ಫೋನ್ ಬಳಸುತ್ತಿರುವ ಉಳಿದವರಿಗೂ ಈ ಮಾಹಿತಿ ಉಪಯೋಗಕ್ಕೆ ಬರಬಹುದು. ಹಳೆಯ ಫೋನುಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

ಏನಿದು ಸಮಸ್ಯೆ ಅಂತಂದುಕೊಂಡು ಫ್ಯಾಕ್ಟರಿ ಡೇಟಾ ರೀಸೆಟ್ ಮಾಡಿ ನೋಡಿದರೂ ಈ ಎರರ್ ಮತ್ತೆ ಕಾಣಿಸಿಕೊಂಡಿತು. ಕೆಲವೊಂದು ಅಪ್ಲಿಕೇಶನ್‌ಗಳನ್ನು (ಆ್ಯಪ್) ಇನ್‌ಸ್ಟಾಲ್ ಮಾಡುವಾಗ, ಆ್ಯಪ್ ಪ್ರಾರಂಭಿಸುವಾಗ ಮಾತ್ರವಲ್ಲದೆ, ಕೆಲವೊಮ್ಮೆ ಏನಾದರೂ ಕೆಲಸ ಮಾಡುತ್ತಿರುವಾಗಲೂ ಧುತ್ತನೇ ಎರರ್ ಕಾಣಿಸಿಕೊಳ್ಳುತ್ತಿತ್ತು. ಮತ್ತಷ್ಟು ಕಸರತ್ತು ಮಾಡಿದಾಗ ವಿಷಯ ತಿಳಿಯಿತು. ಇಂಥ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ?

ಆ್ಯಪಲ್ ಅಥವಾ ವಿಂಡೋಸ್ ಫೋನುಗಳಲ್ಲಾದರೆ ಇಂಥ ಸಮಸ್ಯೆಗಳಿಗೆ ಪರಿಹಾರ ಸಿಗುವುದು ತುಂಬ ಕಷ್ಟ. ಆದರೆ ಆಂಡ್ರಾಯ್ಡ್ ಸಾಧನಗಳಲ್ಲಿ ಹಾಗಲ್ಲ. ಇದು ಮುಕ್ತ ತಂತ್ರಾಂಶವಾಗಿರುವುದರಿಂದ, ಸಾಕಷ್ಟು ಆ್ಯಪ್‌ಗಳು ಕೂಡ ಲಭ್ಯವಿರುತ್ತವೆ. ಕೆಲವೊಮ್ಮೆ ಫೋನ್ ತಯಾರಿಕಾ ಕಂಪನಿಗಳು ಕೂಡ ತಮ್ಮ ಫೋನುಗಳಲ್ಲಿ ಕಾರ್ಯಾಚರಣಾ ವ್ಯವಸ್ಥೆಯನ್ನು ‘ತಿರುಚಿ’ ಇದಕ್ಕೆ ಪರಿಹಾರ ನೀಡಬಹುದಾದ ಅಂಶಗಳನ್ನೂ ಸೇರಿಸಿರುತ್ತವೆ. ಒಂದು ಸ್ವಲ್ಪ ಹುಡುಕಬೇಕಷ್ಟೆ.

ಇದಕ್ಕೆ ಪ್ರಧಾನ ಕಾರಣವೆಂದರೆ, ಮಾರ್ಷ್‌ಮೆಲೋ ಹಾಗೂ ನೌಗಾಟ್ ಎಂಬ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆಯಲ್ಲಿ, ಯಾವುದೇ ಆ್ಯಪ್ ಓಪನ್ ಆಗಿದ್ದರೆ, ಅದರ ಮೇಲೆ ಬೇರೊಂದು ಆ್ಯಪ್ ವ್ಯಾಪಿಸಿಕೊಳ್ಳಬಹುದಾದ ‘Draw over other apps’ ಎಂಬ ವ್ಯವಸ್ಥೆಯಿದೆ. ಹೇಗೆಂದರೆ, ಫೇಸ್‌ಬುಕ್ ಮೆಸೆಂಜರ್ ಅಳವಡಿಸಿಕೊಂಡವರು, ಚಾಟ್ ಹೆಡ್ಸ್ ಎಂಬ ಫೇಸ್‌ಬುಕ್ ಪ್ರೊಫೈಲ್ ಗುಳ್ಳೆಗಳು ಸ್ಕ್ರೀನ್ ಮೇಲೆ ಇರುವುದನ್ನು ನೋಡಿರಬಹುದು. ಸ್ಕ್ರೀನ್‌ನ ಮೇಲೆ ವ್ಯಾಪಿಸುವುದು ಎಂದರೆ ಇದೇ.

ಒಂದು ಉದಾಹರಣೆಯೆಂದರೆ, ಮೊಬೈಲ್ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುವ ನಮ್ಮ, ಮಾತ್ರವಲ್ಲದೆ ಮಕ್ಕಳ ಕಣ್ಣುಗಳ ಸುರಕ್ಷತೆಗೆ ಟ್ವಿಲೈಟ್ ಎಂಬ ಆ್ಯಪ್ ಅಳವಡಿಸಿಕೊಳ್ಳಲು ಹಿಂದೊಮ್ಮೆ ಸಲಹೆ ನೀಡಿದ್ದೆ. ಇದು ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ಬೆಳಕಿನ ಪ್ರಖರತೆಯನ್ನು ತಗ್ಗಿಸುತ್ತದಷ್ಟೇ ಅಲ್ಲದೆ, ಕಣ್ಣಿಗೆ ಅತ್ಯಂತ ಹಾನಿಕಾರವಾದ ಬ್ಲೂ-ರೇ (ನೀಲ ಕಿರಣಗಳ) ಪರಿಣಾಮವನ್ನೂ ತಗ್ಗಿಸಲು ಸ್ಕ್ರೀನ್‌ನ ಬಣ್ಣವನ್ನು ಡಾರ್ಕ್ ಮಾಡುತ್ತದೆ. ಇದನ್ನು ಅಳವಡಿಸಿಕೊಂಡಿದ್ದರೆ, ಹೊಸದಾಗಿ ಕೆಲವೊಂದು ಆ್ಯಪ್ ಇನ್‌ಸ್ಟಾಲ್ ಮಾಡುವಾಗ, ಇಂಟರ್ನಲ್ ಸ್ಟೋರೇಜ್, ಕಾಂಟ್ಯಾಕ್ಟ್ಸ್ ಮುಂತಾದ ಆ್ಯಪ್‌ಗಳನ್ನು ನೋಡಲು ನಮ್ಮ ಅನುಮತಿ (ಪರ್ಮಿಶನ್) ಕೇಳುತ್ತಾ ಹೋಗುತ್ತದೆ. ನಾವು ಅನುಮತಿ ಕೊಟ್ಟಾಗ, ‘ಸ್ಕ್ರೀನ್ ಓವರ್‌ಲೇ’ ಎರರ್ ತೋರಿಸುತ್ತದೆ.

ಪರಿಹರಿಸುವುದು ಹೇಗೆ?
ಸಮಸ್ಯೆಯು ಸಂಕೀರ್ಣವೆಂದು ಕಂಡುಬಂದರೂ ಪರಿಹಾರ ತುಂಬಾ ಸುಲಭ. ಹೆಚ್ಚಿನ ಸಂದರ್ಭದಲ್ಲಿ ಈ ಎರರ್ ಕಾಣಿಸಿಕೊಳ್ಳಲು ಕಾರಣವೆಂದರೆ, ಟ್ವಿಲೈಟ್, ನೈಟ್ ಮೋಡ್, ಮಾಸ್ಕ್ ಚಾಟ್ ಮುಂತಾಗಿ ಇತ್ತೀಚೆಗೆ ಅಳವಡಿಸಿಕೊಂಡಿರುವ ಆ್ಯಪ್‌ಗಳು. ಅವು ಹಿನ್ನೆಲೆಯಲ್ಲಿ ಚಲಾವಣೆಯಲ್ಲಿರುವ ಸಂದರ್ಭ, ಹೊಸ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಎರರ್ ಕಾಣಿಸಿಕೊಳ್ಳಬಹುದು. ಹೊಸ ಆ್ಯಪ್ ಲಾಂಚ್ ಮಾಡಲು ಇವುಗಳೇ ತಡೆಯೊಡ್ಡುತ್ತವೆ ಅಂತ ನಿಮಗೆ ತಿಳಿಯುವುದೇ ಇಲ್ಲ. ಹೀಗಾಗಿ, ನಿರ್ದಿಷ್ಟ ಆ್ಯಪ್‌ನಿಂದಾಗಿಯೇ ಈ ಸಮಸ್ಯೆ ಬಂದಿದೆ ಎಂಬುದನ್ನು ಯೋಚಿಸಿ ನೋಡಿದರೆ ಪರಿಹಾರ ಸುಲಭ. ಸಮಸ್ಯೆ ಪರಿಹರಿಸಿಕೊಳ್ಳುವ ಅತ್ಯಂತ ಸುಲಭ ವಿಧಾನವೆಂದರೆ, ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಇಂಥ ಆ್ಯಪ್‌ಗಳನ್ನು (ಟ್ವಿಲೈಟ್, ಮಾಸ್ಕ್ ಚಾಟ್ ಮುಂತಾದವನ್ನು) ಡಿಸೇಬಲ್ ಮಾಡುವುದು ಅಥವಾ ಅದರ ಕಾರ್ಯವನ್ನು ನಿಲ್ಲಿಸುವುದು (Pause ಮಾಡುವುದು). ಆ್ಯಪ್ ಇನ್‌ಸ್ಟಾಲ್ ಆದಮೇಲೆ ಪುನಃ ಆನ್ ಮಾಡಬಹುದು.

ಮತ್ತೊಂದು ವಿಧಾನವೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಈ ಎರರ್ ಕಾಣಿಸಿಕೊಳ್ಳುವಾಗಲೇ, ಸಂಬಂಧಿಸಿದ ಅನುಮತಿ ನೀಡುವುದಕ್ಕಾಗಿ ಸೆಟ್ಟಿಂಗ್ಸ್‌ಗೆ ಲಿಂಕ್ ಕೂಡ ಕಾಣಿಸುತ್ತದೆ. ಅಲ್ಲೇ ಕ್ಲಿಕ್ ಮಾಡಿದರೆ, Apps that can appear on top ಅನ್ನುವ ಸ್ಕ್ರೀನ್ ಕಾಣಿಸುತ್ತದೆ. ಅಲ್ಲಿ ಅನುಮತಿ ಕೊಟ್ಟರೆ, ಹೊಸ ಆ್ಯಪ್ ಇನ್‌ಸ್ಟಾಲ್ ಆಗುತ್ತದೆ.

ಇಲ್ಲದಿದ್ದರೆ, ನೇರವಾಗಿ ಸೆಟ್ಟಿಂಗ್ಸ್ ಎಂಬಲ್ಲಿ, ಅಪ್ಲಿಕೇಶನ್ಸ್‌ಗೆ ಹೋಗಿ, ಅಪ್ಲಿಕೇಶನ್ ಮ್ಯಾನೇಜರ್ ಎಲ್ಲಿದೆ ಅಂತ ನೋಡಿ. ಅಲ್ಲಿ, ‘ಮೋರ್’ ಆಯ್ಕೆ ಅಥವಾ ಮೂರು ಚುಕ್ಕಿ ಗುರುತು (ಬೇರೆ ಬೇರೆ ಫೋನ್ ಮಾಡೆಲ್‌ಗಳಲ್ಲಿ ಸೆಟ್ಟಿಂಗ್ಸ್ ಕೊಂಚ ವಿಭಿನ್ನವಾಗಿರುತ್ತದೆ) ಇದ್ದರೆ, ಮುಂದಿನ ಆಯ್ಕೆ ಕಾಣಿಸುತ್ತದೆ. Apps that can appear on top ಎಂಬುದನ್ನು ಆಯ್ಕೆ ಮಾಡಿ, ನಿರ್ದಿಷ್ಟ ಆ್ಯಪ್‌ಗೆ ಅನುಮತಿ ಕೊಟ್ಟರೆ ಸಾಕಾಗುತ್ತದೆ. ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಎರರ್ ಕಾಣಿಸಿಕೊಳ್ಳುವುದಿಲ್ಲ.

ಜನಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಅವಿನಾಶ್ ಬಿ. 26 ಜೂನ್ 2017

LEAVE A REPLY

Please enter your comment!
Please enter your name here