2015 ಅಧಿಕ ವರ್ಷ ಅಲ್ಲ, ಅಧಿಕ ಕ್ಷಣ!

0
795

Leap Second2ಬೆಂಗಳೂರು: ಕ್ಷಣ ಕ್ಷಣವೂ ಅಮೂಲ್ಯ. ಅಧಿಕ ವರ್ಷದಂತೆಯೇ 2015ನ್ನು ಅಧಿಕ ಸೆಕೆಂಡಿನ ವರ್ಷ ಎನ್ನಬಹುದು. ಅಂದರೆ ಈ ವರ್ಷದ ಸಮಯಕ್ಕೆ ಒಂದು ಸೆಕೆಂಡು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಇದರಿಂದಾಗಿ 2015ರ ಜೂನ್‌ 30ರ ಮಧ್ಯರಾತ್ರಿ ಹಲವಾರು ವೆಬ್‌ಸೈಟ್‌ಗಳು ಕ್ರ್ಯಾಶ್‌ ಆಗುವುದಕ್ಕೂ ಕಾರಣವಾಗಬಹುದು.

ಅಂದು ಮಧ್ಯರಾತ್ರಿ 23:59:59 (ಗಂಟೆ:ನಿಮಿಷ:ಸೆಕೆಂಡು) ಬಳಿಕ, 23:59:60 ಎಂದು ಪ್ಯಾರಿಸ್‌ನಲ್ಲಿರುವ ಅಂತಾರಾಷ್ಟ್ರೀಯ ಭೂ ಪರಿಭ್ರಮಣ ಸೇವೆಯು (IERS) ಜಾಗತಿಕ ಪರಮಾಣು ಗಡಿಯಾರದ ಸಮಯವನ್ನು (ಅಣುಗಳ ಕಂಪನ ಆಧರಿಸಿ ರಚಿಸಲಾಗಿರುವ ಕರಾರುವಾಕ್ಕಾಗಿರುವ ಗಡಿಯಾರ) ಅಧಿಕೃತವಾಗಿ ಬದಲಾಯಿಸಲಿದೆ. ಪ್ರತಿ ರಾತ್ರಿಯೂ ಅದು 00:00:00 ಎಂದು ಬದಲಾಗುತ್ತದೆಯಾದರೆ, ಆ ರಾತ್ರಿ ಮಾತ್ರ ವಿಶಿಷ್ಟ.

ಯಾಕಾಗಿ…
ವಿಜ್ಞಾನಿಗಳು ಹೇಳುವಂತೆ, ಭೂಮಿಯ ತಿರುಗುವಿಕೆಯು ದಿನಕ್ಕೆ ಒಂದು ಸೆಕೆಂಡಿನ ಎರಡುಸಾವಿರದ ಒಂದನೇ ಭಾಗದಷ್ಟು ವಿಳಂಬವಾಗುತ್ತಲೇ ಬಂದಿದೆ. ಇದಕ್ಕೆ ನೈಸರ್ಗಿಕ ಕಾರಣಗಳಿವೆ. ಅಲ್ಲಲ್ಲಿ ಆಗುವ ಭೂಕಂಪಗಳು, ಸಮುದ್ರದಲೆಗಳ ಉಬ್ಬರ-ಇಳಿತ ಮತ್ತು ವಾತಾವರಣದಲ್ಲಾಗುವ ಇತರ ಬದಲಾವಣೆಗಳು ಭೂಮಿಯ ಸಹಜ ಸುತ್ತುವಿಕೆಗೆ ಅಡಚಣೆಯೊಡ್ಡುತ್ತವೆ.

ಏನಾಗುತ್ತದೆ…
ಜನ ಸಾಮಾನ್ಯರ ಮೇಲೆ ಯಾವುದೇ ಪರಿಣಾಮವಾಗದಿದ್ದರೂ, ಜಾಗತಿಕ ಪರಮಾಣು ಗಡಿಯಾರವನ್ನು ಅವಲಂಬಿಸಿರುವ ಕಂಪ್ಯೂಟರ್‌ ಸಿಸ್ಟಂಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ದಶಕಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ನಾವು ಜಿಪಿಎಸ್‌ ಸೇರಿದಂತೆ ಕಂಪ್ಯೂಟರ್‌ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಕಂಪ್ಯೂಟರಿನ ಅಥವಾ ವೆಬ್‌ ಸೈಟುಗಳ ಸರ್ವರ್‌ನ ಸಮಯವನ್ನು ಜಾಗತಿಕ ಸಮಯಕ್ಕೆ ನಿಖರವಾಗಿ ಹೊಂದಿಸಬೇಕಾಗುವುದರಿಂದ ಈಗ ಹೆಚ್ಚು ಕಳಕಳಿ.

ಅಂದರೆ, 23:59:59 ರ ಸಮಯಕ್ಕೆ ನಿರ್ದಿಷ್ಟ ಕಾರ್ಯ ಮಾಡುವಂತೆ ಕಂಪ್ಯೂಟರನ್ನು ನಾವು ಹೊಂದಿಸಿಟ್ಟರೆ, ಒಂದು ಸೆಕೆಂಡು ದಿಢೀರನೇ ಬದಲಾದಾಗ, ಏನು ಮಾಡಬೇಕೆಂಬುದನ್ನು ತಿಳಿಯದೆ ಕಂಪ್ಯೂಟರೇ ಗೊಂದಲಕ್ಕೀಡಾಗುತ್ತದೆ. ಅದರೊಳಗಿನ ವ್ಯವಸ್ಥೆಯೆಲ್ಲವೂ ಬುಡಮೇಲಾಗುತ್ತದೆ. ಉದಾಹರಣೆಗೆ, ಆ ಸಮಯದಲ್ಲೇ ಒಂದು ಇಮೇಲ್‌ ಬರುತ್ತದೆಯೆಂದಿಟ್ಟುಕೊಳ್ಳೋಣ; ಎಲ್ಲವೂ ಕ್ಷಣ ಮಾತ್ರದಲ್ಲಿ ನಡೆಯುವುದರಿಂದ, ದಿಢೀರನೇ ಒಂದು ಸೆಕೆಂಡು ಕಳೆದುಹೋದಾಗ ಈ ಇಮೇಲ್‌ ಗೊಂದಲಕ್ಕೀಡಾಗಿ, ಸರ್ವರ್‌ನ ನಿಗದಿತ ಪಥದಿಂದ ಬೇರೆಯೇ ಪಥಕ್ಕೆ ಸರಿಯಬಹುದು; ಇಮೇಲ್‌ ನಾಪತ್ತೆಯಾಗಲೂಬಹುದು.

ಯಾವಾಗಿನಿಂದ…
1972ರಲ್ಲಿ ಈ ರೀತಿಯಾಗಿ ಹೆಚ್ಚುವರಿ ಸೆಕೆಂಡು ಸೇರಿಸುವ ಪ್ರಕ್ರಿಯೆ ಆರಂಭವಾದ ಬಳಿಕ ಇದುವರೆಗೆ 25 ಬಾರಿ ಗಡಿಯಾರವನ್ನು ಮರುಹೊಂದಿಸಲಾಗಿದೆ. 1979ರವರೆಗೂ ವರ್ಷಕ್ಕೊಮ್ಮೆ ಹೆಚ್ಚುವರಿ ಸೆಕೆಂಡು ಸೇರಿಸಲಾಗುತ್ತಿತ್ತು. ಆ ಬಳಿಕ ಬದಲಾವಣೆಯ ಸಮಯದ ಅಂತರ ಹೆಚ್ಚಾಗಿದೆ. ಆದರೆ, ಕಂಪ್ಯೂಟರುಗಳು ಹಾಗೂ ವೆಬ್‌ ಸರ್ವರ್‌ಗಳು ಪರಮಾಣು ಗಡಿಯಾರಗಳ ಸಮಯದ ಜತೆ ಸಮ್ಮಿಳಿತವಾಗುವ (ಸಿಂಕ್ರನೈಸ್‌) ಪ್ರಕ್ರಿಯೆ ಹೆಚ್ಚಾಗಿರುವುದರಿಂದಾಗಿ, ಅವುಗಳ ಮೇಲೆ ದುಷ್ಪರಿಣಾಮವೂ ಹೆಚ್ಚು.

ಹಿಂದೆ ಏನಾಗಿತ್ತು…
2012ರಲ್ಲಿಯೂ ಒಂದು ಸೆಕೆಂಡು ಹೆಚ್ಚುವರಿ ಸೇರಿಸಲಾಗಿತ್ತು. ಈ ಸಂದರ್ಭದಲ್ಲಿಮೋಝಿಲ್ಲಾ, ರೆಡ್ಡಿಟ್‌, ಫೋರ್‌ಸ್ಕೇರ್‌, ಯೆಲ್ಪ್, ಲಿಂಕ್ಡ್ಇನ್‌ ಮುಂತಾದ ವೆಬ್‌ಸೈಟ್‌ಗಳು ಕ್ರ್ಯಾಶ್‌ ಆಗಿದ್ದವು; ಮಾತ್ರವಲ್ಲದೆ ಲಿನಕ್ಸ್ ಆಪರೇಟಿಂಗ್‌ ಸಿಸ್ಟಂ ಹಾಗೂ ಜಾವಾ ಆಧಾರಿತ ಪ್ರೋಗ್ರಾಂಗಳು ಕೂಡ ಬಾಧೆಗೀಡಾಗಿದ್ದವು.

ವೈ2ಕೆಗಿಂತ ಹೇಗೆ ಭಿನ್ನ…
2000ನೇ ವರ್ಷಕ್ಕೆ ಕಾಲಿಟ್ಟಾಗ ವೈ2ಕೆ (ಇಯರ್‌ ಟು ಕಿಲೋ) ಬಗ್‌ ಎಲ್ಲರನ್ನೂ ಧೃತಿಗೆಡಿಸಿತ್ತು. ಇದಕ್ಕೆ ಕಾರಣವೆಂದರೆ, ವಿಶೇಷವಾಗಿ ವರ್ಷವನ್ನು  ಕೊನೆಯ ಎರಡೇ ಅಂಕಿಗಳನ್ನು ಬಳಸಿ ಗುರುತಿಸುವಾಗ ಕಂಪ್ಯೂಟರಿಗೆ ಗೊಂದಲವಾಗುವುದು ಸಹಜ (ಉದಾಹರಣೆಗೆ, 2000ನೇ ಇಸವಿ ಹಾಗೂ 1900ನೇ ಇಸವಿ – ಎರಡನ್ನೂ “00” ಎಂದು ಗುರುತಿಸುವಾಗ). ಇದೇನೋ ಸಾವಿರ ವರ್ಷಗಳಿಗೊಮ್ಮೆ ಬರುವ ಸಮಸ್ಯೆಯಾದರೆ, ಒಂದು ಸೆಕೆಂಡು ಸೇರ್ಪಡೆಯು ಪದೇ ಪದೇ ಆಗುತ್ತಿರುವ ಸಂಕೀರ್ಣ ಸಮಸ್ಯೆ.

ಪರಿಹಾರವಿದೆಯೇ…
ಇದಕ್ಕೆ ತಂತ್ರಾಂಶ ದಿಗ್ಗಜ ಗೂಗಲ್‌ ಕಂಪನಿಯು ಒಂದು ಪರಿಹಾರ ಕಂಡುಕೊಂಡಿದೆ. ಕೋಡ್‌ ಮೂಲಕವೇ ಎಲ್ಲವೂ ನಡೆಯಬೇಕಾಗಿರುವುದರಿಂದ, ಅದು 2011ರಲ್ಲಿ ತನ್ನದೇ ಆದ “ಲೀಪ್‌ ಸ್ಮಿಯರ್” ಎಂಬ ತಂತ್ರಜ್ಞಾನವನ್ನು ರೂಪಿಸಿ, ನಿರ್ದಿಷ್ಟ ಸಮಯಕ್ಕೆ ಮೊದಲೇ ತಾನಾಗಿ ಈ ಹೆಚ್ಚುವರಿ ಸಮಯವನ್ನು ಹೊಂದಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದೆ. ಅಂದರೆ, ಆ ಹೆಚ್ಚುವರಿ ಸೆಕೆಂಡನ್ನು ಮಿಲಿ ಸೆಕೆಂಡುಗಳಾಗಿ ವಿಂಗಡಿಸಿ, ಕಾಲದ ಈ ಪುಟ್ಟ ಭಾಗಗಳನ್ನು ಸಿಸ್ಟಂಗೆ ಇಡೀ ದಿನ ಊಡಿಸುವ ಪ್ರಕ್ರಿಯೆಯಿದು. ಆ ಮಧ್ಯರಾತ್ರಿ ಒಮ್ಮೆಗೇ ಒಂದು ಸೆಕೆಂಡು ಸೇರಿಸುವ ಬದಲಾಗಿ, ಇಡೀ ದಿನದಲ್ಲೇ ಸ್ವಲ್ಪ ಸ್ವಲ್ಪವೇ ಮಿಲಿ ಸೆಕೆಂಡುಗಳನ್ನು ಸೇರ್ಪಡಿಸಿ, ಸಮಯಕ್ಕೆ ಬದ್ಧವಾಗಿರುವುದು.

ಪರ-ವಿರೋಧ…
ಈ ಹೆಚ್ಚುವರಿ ಸೆಕೆಂಡು ಸೇರ್ಪಡೆಯನ್ನು ಅಮೆರಿಕ ವಿರೋಧಿಸುತ್ತಾ ಬಂದಿದ್ದು, ಸಮಸ್ಯೆಗಳೇ ಜಾಸ್ತಿ ಎಂಬುದು ಅದರ ವಾದ. ಆದರೆ, ಇದಕ್ಕೆ ಬೇರೆ ರಾಷ್ಟ್ರಗಳ ಸಹಮತವಿಲ್ಲ. ಉದಾಹರಣೆಗೆ, ಬ್ರಿಟನ್‌, ಅಧಿಕ ಕ್ಷಣದ ಸೇರ್ಪಡೆ ಬೇಕು ಎನ್ನುತ್ತಿದೆ. ಯಾಕೆಂದರೆ, ಅದರ ಬದಲಾವಣೆ ನಿಲ್ಲಿಸಿಬಿಟ್ಟರೆ, ಸೂರ್ಯನ ಚಲನೆ ಆಧಾರಿತವಾಗಿ ಸಮಯ ನಿರ್ಧರಿಸುವ ಗ್ರೀನ್ವಿಚ್‌ ಮೀನ್‌ ಟೈಮ್‌ಗೆ (ಜಿಎಂಟಿ) ಅರ್ಥವೇ ಬಾರದು, ಜಿಎಂಟಿ ಕೂಡ ನಿಖರವಾಗಿರಲಾರದು ಎನ್ನುತ್ತದೆ ಅದು.

ಎಲ್ಲ ಕಂಪನಿಗಳೂ ಗೂಗಲ್‌ನಂತಹಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲದಿರುವುದರಿಂದ, ಆ ದಿನ, ಆ ಸಮಯಕ್ಕೆ ಕೆಲವು ವೆಬ್‌ ಸೈಟ್‌ಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಆ ಸಮಯಕ್ಕೆ ನಿಮಗೆ ಬರಬಹುದಾದ ಇಮೇಲ್‌ ನಾಪತ್ತೆಯಾಗಲೂಬಹುದು.

ವಿಜಯ ಕರ್ನಾಟಕದ ಮುಖಪುಟದಲ್ಲಿ ಜನವರಿ 09, 2015: ಅವಿನಾಶ್ ಬಿ.

LEAVE A REPLY

Please enter your comment!
Please enter your name here