ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ – 83: ಜುಲೈ 07, 2014
ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವರು ಸ್ಪೈವೇರ್, ಮಾಲ್‌ವೇರ್, ವೈರಸ್ ಎಂಬಿತ್ಯಾದಿ ಪದಗಳ ಬಗ್ಗೆ ಕೇಳಿದ್ದೀರಿ. ಹೀಗೆಂದರೆ ಏನು ಮತ್ತು ಹೇಗೆ ನಿಮ್ಮ ಕಂಪ್ಯೂಟರಿಗೆ ಹಾನಿಕಾರಕ ಎಂಬ ಬಗ್ಗೆ ಗೊಂದಲದಲ್ಲಿದ್ದೀರಾ? ಇಲ್ಲಿದೆ ಒಂದಿಷ್ಟು ಉಪಯುಕ್ತ ಮಾಹಿತಿ.
ವೈರಸ್ ನಮ್ಮ ದೇಹಕ್ಕೂ ಸೋಂಕುತ್ತದೆ. ಹೀಗೆ ಸೋಂಕುವ ಅವು ದೇಹದ ಜೀವಕೋಶಗಳನ್ನೇ ತದ್ರೂಪಿ ವೈರಸ್ ಸೃಷ್ಟಿಯ ಫ್ಯಾಕ್ಟರಿಗಳಾಗಿ ಪರಿವರ್ತಿಸಿ ದೇಹವಿಡೀ ಜ್ವರವೋ ಅಥವಾ ಬೇರಾವುದೋ ಕಾಯಿಲೆಯೋ ಹರಡಲು ಕಾರಣವಾಗುತ್ತದೆ. ಅದೇ ರೀತಿ ಈ ತಾಂತ್ರಿಕ ವೈರಸ್ ಕೋಡ್ ಕೂಡ ಏನೂ ತಿಳಿಯದ ಪ್ರೋಗ್ರಾಂನೊಳಗೆ ಪ್ರವೇಶಿಸಿ, ಆ ಪ್ರೋಗ್ರಾಂ ರನ್ ಆಗುವಾಗ ಈ ವೈರಸ್ ಕೂಡ ರನ್ ಆಗಿ, ಬೇರೆ ಪ್ರೋಗ್ರಾಂಗಳಿಗೆ, ಅಪ್ಲಿಕೇಶನ್‌ಗಳಿಗೆ ಅಥವಾ ಇಡೀ ಕಂಪ್ಯೂಟರಿಗೆ ಹರಡುತ್ತದೆ.
ತಾಂತ್ರಿಕ ಭಾಷೆಯಲ್ಲಿ ವೈರಸ್ ಎಂದರೆ, ನಾವು ಸೋಂಕುಪೀಡಿತ ಪ್ರೋಗ್ರಾಂ ಚಲಾಯಿಸಿದಾಗ ತಾನು ಕೂಡ ಸಕ್ರಿಯವಾಗುವ ಒಂದು ತಂತ್ರಾಂಶ. ಹೆಚ್ಚಾಗಿ, ಪೂರ್ವನಿರ್ಧರಿತ ದಿನದಂದು ಈ ವೈರಸ್ ಕೋಡ್ ಸಕ್ರಿಯಗೊಳ್ಳುವಂತೆ ಪ್ರೋಗ್ರಾಂ ಮಾಡಬಹುದಾಗಿದೆ. ಹಿಂದೆಲ್ಲಾ ವೈರಸ್‌ಗಳು ಕಂಪ್ಯೂಟರನ್ನು ಹಾಳುಗೆಡಹುವಂತೆ ಕಿಲಾಡಿಗಳು, ಕಿಡಿಗೇಡಿಗಳ ಮೂಲಕ ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಅವು ಮಾಹಿತಿ ಕದಿಯುವ ತಂತ್ರಜ್ಞಾನವಾಗಿ ಬೆಳೆದುಬಿಟ್ಟಿದೆ.
ವರ್ಮ್ಸ್ ಕೂಡ ವೈರಸ್‌ನಂತೆಯೇ ಇರುವ ಕೋಡ್, ಆದರೆ ಇಲ್ಲಿ ನಾವು ಸೋಂಕುಪೀಡಿತ ಪ್ರೋಗ್ರಾಂ ಅನ್ನು ರನ್ ಮಾಡಲೇಬೇಕೆಂದಿಲ್ಲ. ತಾನಾಗಿಯೇ ಬೇರೆ ಕಂಪ್ಯೂಟರಿಗೆ ನಕಲಾಗುವ ಇದು, ಸ್ವಯಂ ಆಗಿ ರನ್ ಆಗುತ್ತದೆ ಮತ್ತು ತದ್ರೂಪಿ ಫೈಲ್‌ಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತದೆ. ಇದು ಇಂಟರ್ನೆಟ್‌ನಲ್ಲಿ ಸಾಕಷ್ಟು ಬ್ಯಾಂಡ್‌ವಿಡ್ತ್ ಕಬಳಿಸುತ್ತದೆ. ಇದರಿಂದ ವೆಬ್ ಬ್ರೌಸಿಂಗ್ ನಿಧಾನವಾಗುತ್ತದೆ ಮತ್ತು ಸಾಕಷ್ಟು ಡೇಟಾ (ಇಂಟರ್ನೆಟ್ ದತ್ತಾಂಶ) ನಷ್ಟವಾಗುತ್ತದೆ. ನೆಟ್‌ವರ್ಕ್‌ಗೆ ಕನೆಕ್ಟ್ ಆಗಿದ್ದರೆ, ಕೆಲಸ ಸ್ಲೋ ಆಗುತ್ತದೆ.
ಟ್ರೋಜನ್ ಎಂಬ ಹಾನಿಕಾರಕ ಪ್ರೋಗ್ರಾಂಗಳು, ನೋಡಲು ನಮಗೆ ಪರಿಚಯವಿರುವ ಅಪ್ಲಿಕೇಶನ್‌ಗಳಂತೆಯೇ ಕಾಣಿಸುತ್ತವೆ. ಓಪನ್ ಮಾಡಿದರೂ ಕೆಲವೊಮ್ಮೆ ಆಯಾ ಪ್ರೋಗ್ರಾಂನಂತೆಯೇ ಆರಂಭದಲ್ಲಿ ಕೆಲಸ ಮಾಡುತ್ತದೆ, ಆದರೆ ನಿಧಾನವಾಗಿ ತನ್ನ ಅಸಲಿ ಮುಖ ತೋರಿಸಲಾರಂಭಿಸುತ್ತದೆ. ಅದಕ್ಕೇ ಹೇಳುವುದು, ಇಮೇಲ್ ಅಥವಾ ಸಂದೇಶ ಸೇವೆಗಳ ಮೂಲಕವಾಗಿ ಯಾವುದೇ ಫೈಲ್ (ಫೋಟೋ, ಡಾಕ್ಯುಮೆಂಟ್, ವೀಡಿಯೋ, ಆಡಿಯೋ… ಇತ್ಯಾದಿ) ಬಂದರೆ, ಅದನ್ನು ಓಪನ್ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು. ಅಪರಿಚಿತರು ಕಳುಹಿಸಿದ ಇಮೇಲ್‌ಗಳಲ್ಲಿ ‘ಈ ಅಟ್ಯಾಚ್‌ಮೆಂಟ್ ಓಪನ್ ಮಾಡಿ’ ಎಂಬ ಸಂದೇಶದೊಂದಿಗೆ, “ನಿಮ್ಮ ಬಿಲ್ ಲಗತ್ತಿಸಿದ್ದೇನೆ, ಓಪನ್ ಮಾಡಿ, ಚೆಕ್ ಮಾಡಿಕೊಳ್ಳಿ” ಎಂದೋ, “ಅಟ್ಯಾಚ್‌ಮೆಂಟ್ ಓಪನ್ ಮಾಡಿ, ಉಚಿತ ಬಹುಮಾನದ ವಿವರಗಳಿವೆ” ಎಂದೋ, ಅಥವಾ ‘ಈ ಫಾರ್ಮ್ ಭರ್ತಿ ಮಾಡಿ ತಕ್ಷಣ ಕಳುಹಿಸಿ’ ಎಂಬಂತೆಯೋ, ವಿಭಿನ್ನ ರೀತಿಯ ಪ್ರಚೋದನಾತ್ಮಕ ಸಂದೇಶಗಳಿರಬಹುದು. ಇವುಗಳನ್ನಂತೂ ಸಾರಾಸಗಟಾಗಿ ನಿರ್ಲಕ್ಷಿಸಬಹುದು. ಯಾಕೆಂದರೆ, ಯಾವುದೇ ಕಂಪನಿ ಗುರುತು ಪರಿಚಯವಿಲ್ಲದ ವ್ಯಕ್ತಿಗೆ ವಿನಾ ಕಾರಣ ಉಚಿತ ಕೊಡುಗೆ ನೀಡುವುದಾದರೂ ಯಾಕೆ? ಎಂದೊಮ್ಮೆ ಯೋಚಿಸಿದರೆ ಸಾಕು.
ವೈರಸ್‌ಗಳು, ವರ್ಮ್‌ಗಳು ಹಾಗೂ ಟ್ರೋಜನ್ ಎಂಬ ಹೆಸರುಗಳು ಈ ಹಾನಿಕಾರಕ ಪ್ರೋಗ್ರಾಂಗಳು ಹೇಗೆ ಪ್ರಸಾರವಾಗುತ್ತವೆ ಎಂಬುದನ್ನು ಅವಲಂಬಿಸಿವೆ. ಉಳಿದವೆಲ್ಲಾ, ಏನು ಮಾಡಬಲ್ಲವು ಎಂಬುದರ ಆಧಾರದಲ್ಲಿ ಹೆಸರು ಗಳಿಸಿಕೊಂಡಿರುತ್ತವೆ. ಉದಾಹರಣೆಗೆ, ಸ್ಪೈವೇರ್ ಎಂಬ ಪ್ರೋಗ್ರಾಂ ನಿಮ್ಮ ಕಂಪ್ಯೂಟರಿನ ಮೇಲೆ ಕಳ್ಳಗಣ್ಣಿಡುತ್ತದೆ, ಗೌಪ್ಯವಾಗಿ ಸ್ಪೈ (ಗೂಢಚರ) ಮಾದರಿಯಲ್ಲಿ ಸೇರಿಕೊಂಡು, ನಿಮ್ಮ ಎಲೆಕ್ಟ್ರಾನಿಕ್ ಸಾಧನದಲ್ಲಿ ಸಂಗ್ರಹವಾಗಿರುವ ಪಾಸ್‌ವರ್ಡ್ ಮತ್ತಿತರ ವೈಯಕ್ತಿಕ ಮಾಹಿತಿಯನ್ನು ಕದ್ದು, ಸಂಬಂಧಪಟ್ಟ ಗಮ್ಯ ಸ್ಥಾನಕ್ಕೆ ರವಾನಿಸುತ್ತದೆ.
ಅದೇ ರೀತಿಯಾಗಿ ಆ್ಯಡ್‌ವೇರ್‌ಗಳೂ ಇವೆ. ಯಾವುದೇ ವೆಬ್ ಪುಟ ತೆರೆದಾಗ ಜಾಹೀರಾತಿನ ವಿಂಡೋ ಪಾಪ್-ಅಪ್ ಆಗುತ್ತದೆ. “ಉಚಿತ ಅದ್ಭುತ ತಂತ್ರಾಂಶ, ಇಲ್ಲಿ ಡೌನ್‌ಲೋಡ್ ಮಾಡಿ” ಎಂದೋ, “ನಿಮಗೆ ಲಾಟರಿ ಹೊಡೆದಿದೆ, ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ” ಎಂದೋ ಪ್ರೇರೇಪಣೆ ನೀಡುತ್ತವೆ. ಕ್ಲಿಕ್ ಮಾಡಿದರೆ, ಅದರ ಜತೆಗೆ ಸೇರಿಕೊಂಡಿರುವ ಸ್ಪೈವೇರ್ ನಿಮ್ಮ ಮಾಹಿತಿಯನ್ನು ಕದಿಯಬಲ್ಲುದು (ಎಲ್ಲ ಜಾಹೀರಾತುಗಳು ಹೀಗಿರಲೇಬೇಕಿಲ್ಲ, ಸಾಚಾ ಜಾಹೀರಾತುಗಳೂ ಇರುತ್ತವೆ).
ಇದೂ ಅಲ್ಲದೆ, ಸ್ಕೇರ್‌ವೇರ್, ರ‍್ಯಾನ್ಸಮ್‌ವೇರ್, ಬಾಟ್, ರೂಟ್‌ಕಿಟ್ ಮುಂತಾದವು ಕೂಡ ಇದ್ದು, ಅವು ಹೆಸರಿಗೆ ತಕ್ಕಂತೆ ಹಾನಿ ಮಾಡುತ್ತವೆ. ಇನ್ನು ಮಾಲ್‌ವೇರ್ ಎಂದರೇನು? ಈ ಮೇಲಿನ ಎಲ್ಲ ದುರುದ್ದೇಶಪೂರಿತ, ಹಾನಿಕಾರಕ ತಂತ್ರಾಂಶಗಳನ್ನು ಒಟ್ಟಾಗಿ ಮಾಲ್‌ವೇರ್‌ಗಳೆನ್ನುತ್ತಾರೆ. ಇಂಗ್ಲಿಷಿನ ಮಲೀಷಿಯಸ್ ಸಾಫ್ಟ್‌ವೇರ್ ಎಂಬುದರ ಹೃಸ್ವರೂಪವಿದು. ಇವೆಲ್ಲವುಗಳಿಂದ ಪಾರಾಗಲು ನಾವು ಆ್ಯಂಟಿವೈರಸ್ ತಂತ್ರಾಂಶ ಬೇಕೆಂದು ಹೇಳುತ್ತೇವೆ. ಆದರೆ, ಅದು ನಿಜಕ್ಕೂ ಆ್ಯಂಟಿ-ಮಾಲ್‌ವೇರ್ ಆಗಿರಬೇಕು, ಅಂದರೆ, ಎಲ್ಲ ರೀತಿಯ ಹಾನಿಕಾರಕ ತಂತ್ರಾಂಶಗಳಿಂದ ರಕ್ಷಣೆ ನೀಡುವಂತಿರಬೇಕು ಎಂಬುದು ಗಮನದಲ್ಲಿರಲಿ.
ಟೆಕ್-ಟಾನಿಕ್: ಕಂಪ್ಯೂಟರ್ ಸ್ಲೋ ಆಗಿದೆಯಾ?
ಕಂಪ್ಯೂಟರ್ ಕ್ಯಾಬಿನೆಟ್ ಅನ್ನು ಯಾರು ಕೂಡ ಓಪನ್ ಮಾಡಬಹುದು. ಆದರೆ, ನಮಗೆ ತಿಳಿದಿಲ್ಲದ ಭಾಗಗಳನ್ನು ಮುಟ್ಟಲು ಹೋಗಬಾರದು ಎಂಬ ಮೂಲಭೂತ ಪರಿಜ್ಞಾನ ಇರಲಿ. ಕಂಪ್ಯೂಟರಿಗೆ ಧೂಳು ಹಿಡಿದಿದ್ದರೆ, ಅದಕ್ಕಾಗಿಯೇ ಲಭ್ಯವಿರುವ ಸಣ್ಣ ವಾಕ್ಯೂಮ್ ಕ್ಲೀನರ್ ಮೂಲಕ ಅಥವಾ ಪುಟ್ಟ ಬ್ರಶ್/ಹತ್ತಿಬಟ್ಟೆಯ ಮೂಲಕ ಧೂಳು ತೆಗೆಯಿರಿ. ಅದರೊಳಗಿರುವ ಫ್ಯಾನ್ ಸರಿಯಾಗಿ ತಿರುಗುತ್ತಿದೆಯೇ ಪರೀಕ್ಷಿಸಿಕೊಳ್ಳಿ. ಅಂತೆಯೇ, ನಿಮ್ಮ ಕಂಪ್ಯೂಟರಿನ ರೀಸೈಕಲ್ ಬಿನ್, ಇಂಟರ್ನೆಟ್ ಟೆಂಪರರಿ ಫೈಲ್‌ಗಳು, ಟೆಂಪ್ ಫೈಲ್‌ಗಳನ್ನು ಡಿಲೀಟ್ ಮಾಡಿ. ಮತ್ತು, ಪಿಸಿ ಕ್ಯಾಬಿನೆಟ್ ಸುತ್ತಮುತ್ತ ಗಾಳಿಯಾಡಲು ಸಾಕಷ್ಟು ಜಾಗವಿರುವುದನ್ನು ಖಾತ್ರಿಪಡಿಸಿಕೊಳ್ಳಿ.