ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ-100: ನವೆಂಬರ್ 3, 2014
ಕಂಪ್ಯೂಟರ್‌ನಲ್ಲೇನಾದರೂ ಸಮಸ್ಯೆ ಬಂದರೆ ದುರಸ್ತಿಗಾಗಿ ಒಯ್ಯುವ ಮುನ್ನ ನಾವೇ ಮಾಡಬಹುದಾದ ಕೆಲವೊಂದು ಮೂಲಭೂತ ಪರಿಹಾರ ಕ್ರಮಗಳ ಬಗ್ಗೆ ಕಳೆದ ವಾರ ಹೇಳಿದ್ದೆ. ಈ ಬಾರಿ, ಕಂಪ್ಯೂಟರ್‌ನ ವೇಗ ಹೆಚ್ಚಿಸಲು ಮತ್ತೊಂದಿಷ್ಟು ಸಲಹೆಗಳಿವೆ. ಇದು ಕೊಂಚ ಮಟ್ಟಿಗೆ ಸರಳ ಅಲ್ಲ ಅನ್ನಿಸುವುದರಿಂದ ನಿಮ್ಮ ಸ್ನೇಹಿತ ವರ್ಗದಲ್ಲಿರುವ ಕಂಪ್ಯೂಟರ್ ತಜ್ಞರ ನೆರವು ಬೇಕಾಗಬಹುದು.
ಮೊದಲನೆಯದಾಗಿ ಕಂಪ್ಯೂಟರಿನಲ್ಲಿ ಇರುವ RAM ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಹಳೆಯ ಕಂಪ್ಯೂಟರುಗಳಲ್ಲಾದರೆ 512 ಎಂಬಿ ಅಥವಾ 1 ಜಿಬಿ ಇರಬಹುದು. ಆದರೆ, ತೀರಾ ಇತ್ತೀಚಿನ ಆವಶ್ಯಕತೆಯೆಂದರೆ ಕನಿಷ್ಠ 2ರಿಂದ 4 GB ಯಷ್ಟು RAM. ನಿಮ್ಮ ಡೆಸ್ಕ್‌ಟಾಪ್ ಕಂಪ್ಯೂಟರಿನಲ್ಲಿ ಅಷ್ಟಿಲ್ಲ ಎಂದಾದರೆ ಚಿಂತಿಸಬೇಕಾಗಿಲ್ಲ. ಅದರ RAM ಹೆಚ್ಚಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ RAM ಬೆಲೆ ಹೆಚ್ಚೇನೂ ಇರುವುದಿಲ್ಲ. ನಿಮ್ಮ ಕಂಪ್ಯೂಟರಿನ ಕಾರ್ಯಾಚರಣಾ ವ್ಯವಸ್ಥೆಗೆ (ವಿಂಡೋಸ್ ಎಕ್ಸ್‌ಪಿ, ವಿಂಡೋಸ್ 7, ವಿಂಡೋಸ್ 8, ಮ್ಯಾಕ್, ಉಬುಂಟು ಇತ್ಯಾದಿ ಆಪರೇಟಿಂಗ್ ಸಿಸ್ಟಂ) ಎಷ್ಟು RAM ಬೇಕೆಂದು ಸೂಚಿಸಿರುತ್ತಾರೋ, ಅದಕ್ಕಿಂತ ಕನಿಷ್ಠ ದುಪ್ಪಟ್ಟು RAM ಅಳವಡಿಸಿಕೊಂಡರೆ, ಕಂಪ್ಯೂಟರು ಚೆನ್ನಾಗಿ ಕೆಲಸ ಮಾಡಬಲ್ಲುದು. ಲ್ಯಾಪ್‌ಟಾಪ್‌ಗಳಲ್ಲಿ RAM ಸುಲಭವಾಗಿ ಹೆಚ್ಚಿಸುವ ಅನುಕೂಲಗಳು ಇಲ್ಲ.
ಇನ್ನೊಂದು ಸಂಗತಿಯಿದೆ. ತೀರಾ ಹೆಚ್ಚು ಪ್ರೋಗ್ರಾಂಗಳನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದರೆ, ಕಂಪ್ಯೂಟರ್ ಖಂಡಿತವಾಗಿಯೂ ಸುಸ್ತಾದಂತೆ ವರ್ತಿಸಬಹುದು. ವಿಭಿನ್ನ ತಂತ್ರಾಂಶಗಳನ್ನು ಅಳವಡಿಸಿಕೊಂಡರೆ ಪರವಾಗಿಲ್ಲ, ಅವುಗಳು ರನ್ ಆಗುತ್ತಾ ಇದ್ದರೆ RAM ಬಳಸಿಕೊಳ್ಳುತ್ತಾ ಇರುತ್ತವೆ, ಡಿಸ್ಕ್ ಸ್ಪೇಸ್ ಬಳಸುತ್ತವೆ ಹಾಗೂ ನೆಟ್ವರ್ಕನ್ನೂ ಬಳಸುತ್ತಿರುತ್ತವೆ. ಇವೆಲ್ಲವೂ ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಿದ್ದರೆ ಕಂಪ್ಯೂಟರ್ ಸಹಜವಾಗಿ ಸ್ಲೋ ಆಗುತ್ತದೆ. ಇತ್ತೀಚೆಗೆ, ಯಾವುದಾದರೂ ವೆಬ್‌ಸೈಟಿಂದ ಏನನ್ನಾದರೂ ಡೌನ್‌ಲೋಡ್ ಮಾಡುವಾಗಲೋ, ಅಥವಾ ತಂತ್ರಾಂಶವನ್ನೇ ಡೌನ್‌ಲೋಡ್ ಮಾಡಿ ಅಳವಡಿಸಿಕೊಳ್ಳುವಾಗಲೋ, ಅದರ ಜತೆಗೇ ಬೇರೆ ಸಾಫ್ಟ್‌ವೇರ್‌ಗಳನ್ನೂ ಅಳವಡಿಸಿ ಬಲವಂತವಾಗಿ ಕಳುಹಿಸಲಾಗುತ್ತದೆ. ಇನ್‌ಸ್ಟಾಲ್ ಮಾಡುವಾಗ ಪ್ರತಿಯೊಂದು ಸಂದೇಶವನ್ನೂ ಓದದಿದ್ದರೆ, ಬ್ರೌಸರುಗಳಿಗೆ ಟೂಲ್‌ಬಾರ್, ಸರ್ಚ್ ಎಂಜಿನ್ ಮುಂತಾದ ಅನಗತ್ಯ ತಂತ್ರಾಂಶಗಳೂ ಸೇರಿಕೊಂಡುಬಿಡುತ್ತವೆ. ಇವೆಲ್ಲವೂ ಸೇರಿಕೊಂಡು, ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಾ ನಿಮ್ಮ ಕಂಪ್ಯೂಟರನ್ನು ನಿಧಾನವಾಗಿಸಬಹುದು. ಈ ಬಗ್ಗೆ ತೀರಾ ಎಚ್ಚರ ವಹಿಸಬೇಕಾಗುತ್ತದೆ. ಸರಿಯಾಗಿ ಓದಿ, ವಿಶೇಷವಾಗಿ ಹೆಚ್ಚುವರಿ ತಂತ್ರಾಂಶ ಇನ್‌ಸ್ಟಾಲ್ ಮಾಡಿಕೊಳ್ಳಬೇಕೇ ಬೇಡವೇ ಎಂಬ ಸಂದೇಶವನ್ನು ಓದಿದ ಬಳಿಕವೇ ಚೆಕ್ ಗುರುತು ಮಾಡಬೇಕು.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಕಂಪ್ಯೂಟರ್ ಆನ್ ಆಗುವಾಗ ಸ್ವಯಂಚಾಲಿತವಾಗಿ ಕೆಲವೊಂದು ಸಾಫ್ಟ್‌ವೇರ್ ಕೂಡ ರನ್ ಆಗಲಾರಂಭಿಸುತ್ತವೆ. ಇದರಿಂದಾಗಿ ಬೂಟಿಂಗ್ ಸಮಯ ವಿಳಂಬವಾಗುತ್ತದೆ. ಏನೆಲ್ಲಾ ರನ್ ಆಗುತ್ತಿದೆ ಎಂಬುದನ್ನು ನೋಡಬಹುದಾದ ಒಂದು ಪ್ರಮುಖ ಸ್ಥಳವೆಂದರೆ, ಬಲಭಾಗದ ಕೆಳಮೂಲೆಯ ಸಿಸ್ಟಂ ಟ್ರೇಯಲ್ಲಿರುವ ಐಕಾನ್‌ಗಳು. ಪ್ರತಿಯೊಂದಕ್ಕೂ ರೈಟ್-ಕ್ಲಿಕ್ ಮಾಡಿ, Options ಕ್ಲಿಕ್ ಮಾಡಿ, ಆಫ್ ಮಾಡುವ ಆಯ್ಕೆ ದೊರೆಯುತ್ತದೆ. ಸ್ವಲ್ಪ ಹೆಚ್ಚು ತಿಳಿದಿದ್ದರೆ, ಸ್ಟಾರ್ಟ್ ಬಟನ್ ಕ್ಲಿಕ್ ಮಾಡಿ, Run ಎಂಬ ಬಾಕ್ಸ್‌ನಲ್ಲಿ (ಅಥವಾ ವಿಂಡೋಸ್ ಬಟನ್ + R) MSConfig ಅಂತ ಟೈಪ್ ಮಾಡಿ ಎಂಟರ್ ಕೊಡಿ. ಅಲ್ಲಿ Startup ಎಂಬ ಟ್ಯಾಬ್ ನೋಡಿದಾಗ ಕಾಣಿಸುವ ಪಟ್ಟಿಯಿಂದ ನಮಗೆ ಬೇಡವಾದ (ಗೊತ್ತಿದ್ದರೆ ಮಾತ್ರ) ಪ್ರೋಗ್ರಾಂಗಳನ್ನು ಅನ್‌ಚೆಕ್ ಮಾಡಬಹುದು. ಅಲ್ಲಿ ಡಿಸೇಬಲ್ ಮಾಡಿದರೆ, ತಂತ್ರಾಂಶವೇನೂ ಡಿಲೀಟ್ ಆಗುವುದಿಲ್ಲ. ನೆನಪಿಡಿ, ಸಿಸ್ಟಂ ಸರಿಯಾಗಿ ಕೆಲಸ ಮಾಡಬೇಕಿದ್ದರೆ ಕೆಲವೊಂದು ತಂತ್ರಾಂಶಗಳು ರನ್ ಆಗುತ್ತಿರಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ತಜ್ಞ ಸ್ನೇಹಿತರ ಸಲಹೆ ಪಡೆದೇ ಇದನ್ನು ಮಾಡಿ. ಎಲ್ಲ ಆದ ಮೇಲೆ ರೀಸ್ಟಾರ್ಟ್ ಮಾಡಬೇಕಾಗುತ್ತದೆ.
ಇನ್ನೊಂದಿಷ್ಟು ಸಲಹೆಗಳು ಇಲ್ಲಿವೆ. ಏಕಕಾಲದಲ್ಲಿ ಹಲವು ಸಾಫ್ಟ್‌ವೇರ್‌ಗಳನ್ನು ರನ್ ಮಾಡುವುದು ಕೂಡ ಕಂಪ್ಯೂಟರಿನ ವಿಳಂಬ ಗತಿಗೆ ಕಾರಣವಾಗಬಹುದು. ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿ, ಹೆಚ್ಚು ಬ್ರೌಸರ್ ಟ್ಯಾಬ್‌ಗಳಿದ್ದರೆ ಕ್ಲೋಸ್ ಮಾಡಿ, ಓಪನ್ ಆಗಿರುವ ಡಾಕ್ಯುಮೆಂಟುಗಳ ಸಂಖ್ಯೆ ಕಡಿಮೆ ಮಾಡಿ; 2-3 ದಿನಕ್ಕೊಮ್ಮೆ ಬ್ರೌಸರ್ ಕ್ಯಾಶ್ (cache) ಕ್ಲಿಯರ್ ಮಾಡುತ್ತಾ ಇರಿ, 2-3 ತಿಂಗಳಿಗೊಮ್ಮೆ ಹಾರ್ಡ್ ಡಿಸ್ಕನ್ನು ಡೀಫ್ರ್ಯಾಗ್ಮೆಂಟ್ ಮಾಡುತ್ತಾ ಇರಿ; ಹಾಗೂ ನಿಮ್ಮ ಡೆಸ್ಕ್‌ಟಾಪ್‌ಗೆ ಸಾಕಷ್ಟು ಜಾಸ್ತಿ ಭಾರವಿರುವ ಚಿತ್ರಗಳ ಬದಲಾಗಿ, ಸೀದಾ ಸಾದಾ ಬ್ಯಾಕ್‌ಗ್ರೌಂಡ್ ಚಿತ್ರ ಹಾಕಿಕೊಳ್ಳಿ, ಇಲ್ಲದೇ ಇದ್ದರೆ ಮತ್ತೂ ಒಳ್ಳೆಯದು ಮತ್ತು ಒಳ್ಳೆಯ ಆ್ಯಂಟಿ ವೈರಸ್ ಮೂಲಕ ಸ್ಕ್ಯಾನ್ ಮಾಡುತ್ತಿರಿ. ನಿಮ್ಮ ಸಿಸ್ಟಂನ ಆ ವೇಗ ನೋಡಿ ಆವಾಗ!
ಟೆಕ್-ಟಾನಿಕ್: ಕ್ಯಾಪಿಟಲ್ -ಸ್ಮಾಲ್ ಪರಿವರ್ತನೆ
ಎಂಎಸ್ ವರ್ಡ್ ಡಾಕ್ಯುಮೆಂಟ್‌ನಲ್ಲಿ ಏನಾದರೂ ಇಂಗ್ಲಿಷಿನಲ್ಲಿ ಟೈಪ್ ಮಾಡಿರುತ್ತೀರಿ. ಅದೀಗ ಕ್ಯಾಪಿಟಲ್ ಅಕ್ಷರ (ದೊಡ್ಡಕ್ಷರ)ದಲ್ಲಿ ಮೂಡಿ ಬಂದಿದೆ ಎಂದಿಟ್ಟುಕೊಳ್ಳೋಣ. ಅಥವಾ ನೀವು ಟೈಪ್ ಮಾಡಿದ ವಾಕ್ಯದ ಅಕ್ಷರಗಳೆಲ್ಲವನ್ನೂ ಸಣ್ಣಕ್ಷರಗಳಿಗೆ ಪರಿವರ್ತಿಸಬೇಕೆಂದು ನೀವು ಇಚ್ಛಿಸುತ್ತೀರಿ. ಇಲ್ಲವೇ, ವಾಕ್ಯ ರೂಪದಲ್ಲಿ (ಮೊದಲ ಅಕ್ಷರ ಕ್ಯಾಪಿಟಲ್) ಇರಬೇಕೆಂದು ನೀವು ಬಯಸಿದರೆ, ಎಂಎಸ್ ವರ್ಡ್‌ನಲ್ಲಿ ಸುಲಭ ಮಾರ್ಗವೊಂದಿದೆ. ಕಂಟ್ರೋಲ್ ಎ (Ctrl+A) ಮಾಡಿದರೆ, ಎಲ್ಲವೂ ಸೆಲೆಕ್ಟ್ ಆಗುತ್ತದೆ, ನಂತರ ಶಿಫ್ಟ್ + ಎಫ್3 ಕೀಲಿ ಒಮ್ಮೆ ಒತ್ತಿದರೆ, ದೊಡ್ಡಕ್ಷರಕ್ಕೂ, ಮತ್ತೊಮ್ಮೆ ಒತ್ತಿದರೆ ಸಣ್ಣಕ್ಷರಕ್ಕೂ, ಪುನಃ ಒತ್ತಿದರೆ ವಾಕ್ಯಾಕ್ಷರ ರೂಪಕ್ಕೆ ಇಂಗ್ಲಿಷ್ ಪಠ್ಯವು ಪರಿವರ್ತನೆಯಾಗುತ್ತದೆ.
Thanks sir