ಹಗರಣದಲ್ಲಿ ಸತ್ಯವೇಕೆ ಹೊರಬರೋದಿಲ್ಲ ಗೊತ್ತಾ?

0
680

ಇದು ಈ ನೂರಿಪ್ಪತ್ತು ಕೋಟಿ ಬಡ ಪ್ರಜೆಗಳ ಪ್ರಶ್ನೆ. ಈ ರಾಜಕಾರಣಿಗಳು ಸಾಕಷ್ಟು ದುಡ್ಡು ತಿಂತಾರೆ, ಯಾವ್ಯಾವುದೋ ಯೋಜನೆಗಳ ನೆಪದಲ್ಲಿ ತಮಗೆ, ತಮ್ಮವರ ಜೇಬಿಗೆ ಕೋಟಿ ಕೋಟಿ ಹಣ ಇಳಿಸಿಕೊಳ್ತಾರೆ. ಬೊಬ್ಬೆ ಜೋರಾದಾಗ ತನಿಖೆಗೊಂದು ಆಯೋಗ ಎಂದು ರಚಿಸಿ, ಅದರ ನೆಪದಲ್ಲಿಯೂ ಕೋಟಿ ಕೋಟಿ ಖರ್ಚು ಮಾಡಿ, ಸತ್ಯಾಂಶ ಕೊನೆಗೂ ಹೊರ ಬಾರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗ್ತಾರೆ. ಹೀಗಾಗಿ, ದೇಶವನ್ನು ಮುನ್ನಡೆಸಿ ಎಂದು ಓಟು ಕೊಟ್ಟು, ಆರಿಸಿ ಕಳುಹಿಸಿದ ಮತದಾರನ ತಲೆಗೆ ದೊಡ್ಡ ಟೊಪ್ಪಿ!

ಈಗಷ್ಟೇ ಒಂದು ವರದಿ ಓದಿದೆ. ಭೂಕಂಪ, ಸುನಾಮಿ ಬಂದು ಧ್ವಂಸವಾಗಿದ್ದ ಪುಟ್ಟ ದ್ವೀಪರಾಷ್ಟ್ರ ಜಪಾನ್‌ನಲ್ಲಿ ಹೆದ್ದಾರಿಯೊಂದು ಇನ್ನಿಲ್ಲದಂತೆ ಹಾಳಾಗಿತ್ತು. ಕೇವಲ ಆರೇ ದಿನಗಳಲ್ಲಿ ಅದು ದುರಸ್ತಿಯಾಗಿದೆ! ಮಾರ್ಚ್ 11ರಂದು ಸುನಾಮಿಯಿಂದಾಗಿ ಧ್ವಂಸಗೊಂಡಿದ್ದ ಟೋಕಿಯೋದ ನಕಾ ಎಂಬಲ್ಲಿನ ಗ್ರೇಟ್ ಕಾಂಟೋ ಹೆದ್ದಾರಿಯ ದುರಸ್ತಿ ಕಾರ್ಯ ಮಾ.17ಕ್ಕೇ ಆರಂಭವಾಯಿತು. ಮಾ.23ರ ರಾತ್ರಿ ನೋಡಿದರೆ, ಏನೂ ಆಗಿಲ್ಲವೆಂಬಂತಿತ್ತು ಆ ಹೆದ್ದಾರಿ!

ಎಲ್ಲರಿಗೂ ನೆನಪಿದೆ. ಅಮೆರಿಕದೊಂದಿಗೆ ಪರಮಾಣು ಬಳಕೆ ಕುರಿತು ಅದೇನೋ ಒಪ್ಪಂದ ಮಾಡಿಕೊಳ್ತಾರೆ, ಅದರ ಬಗ್ಗೆ ಜನತೆಗೆ ಸಂಪೂರ್ಣ ಮಾಹಿತಿ ಇಲ್ಲ ಮತ್ತು ಇದರಿಂದ ದೇಶಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಅಂದಿನ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ತೆಗೆದುಕೊಂಡ ಪರಿಣಾಮವಾಗಿ 2008ರಲ್ಲಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಹುತೇಕ ಪತನಗೊಂಡಂತಿತ್ತು.

ತನಗೆ ಸದನದಲ್ಲಿ ಬಹುಮತವಿದೆ ಎಂದು ತೋರಿಸಿಕೊಳ್ಳಲು ಈ ‘ನಾವು ಜನ ನಾಯಕರು, ಆಮ್ ಆದ್ಮೀಯ ಉದ್ಧಾರಕರು’ ಎಂದೆಲ್ಲಾ ಬೊಗಳೆ ಹೊಡೆಯುವವರು ಮಾಡಿದ್ದಾದರೂ ಏನು? ಕೇಳಿದರೆ ನಾಚಿಕೆಯಾಗುತ್ತದೆ. ಹೆಸರೆತ್ತಿದರೆ, ನಾವು ಗಾಂಧೀಜಿ ತತ್ವ ಸಿದ್ಧಾಂತಗಳಿಗೆ ಬದ್ಧರಾದವರು ಎನ್ನುತ್ತಾ, ಗಾಂಧಿ ತಾತ ಬೋಧಿಸಿದ್ದ ಸತ್ಯ, ಧರ್ಮ, ನ್ಯಾಯ, ನೀತಿ ಎಂಬೆಲ್ಲಾ ಪದಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ. ಇವೆಲ್ಲವೂ ಕಳೆದ ಕೆಲವು ವರ್ಷಗಳಿಂದ ಎಲ್ಲೋ ಕೇಳಿದ ಶಬ್ಧಗಳಾಗಿ ಬಿಟ್ಟಿದ್ದಂತೂ ಸತ್ಯಸ್ಯ ಸತ್ಯ. ಎಲ್ಲೆಲ್ಲೂ ಭ್ರಷ್ಟಾಚಾರ, ಅಧಿಕಾರಲಾಲಸೆ ಮತ್ತು ಏನಾದರೂ ಸಿಗುತ್ತದೆ ಎಂದಾದರೆ ದೇಶವನ್ನೇ ಒತ್ತೆಯಿಡಲು ಹೇಸದ ರಾಜಕಾರಣಿಗಳ ಮನಸ್ಥಿತಿ! ಥೂ ಅನ್ನಿಸದೇ ಇರದು.

ಈಗ ಕಾಸಿಗಾಗಿ ಓಟು, ಓಟಿಗಾಗಿ ಕಾಸು ಅಥವಾ ನೋಟಿಗಾಗಿ ಓಟು ಎಂಬಿತ್ಯಾದಿಯಾಗಿ ಕೇಳಿಬರುತ್ತಿರುವ ಮಾತುಗಳೇ ಸಾಕು ಇಡೀ ದೇಶದ ಮಾನ ಹರಾಜು ಹಾಕಲು. ಆಮೇಲೆ ನಾವೇ ಸೂಪರ್ ಪವರ್ ಆಗ ಹೊರಟಿದ್ದೇವೆ ಎಂದುಕೊಳ್ಳುತ್ತಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಏನಾಗುತ್ತಿದೆ? ರಾಜಕಾರಣಿಗಳು ಧನದಾಹಿಗಳಾಗಿದ್ದಾರೆ, ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಾರೆ, ಈ ತಪ್ಪುಗಳ ಸರಣಿ ಮುಂದುವರಿಯುತ್ತಲೇ ಇರುತ್ತದೆ. ತನಿಖೆ ಮಾಡಿಸುತ್ತೇವೆ ಎನ್ನುತ್ತಾ ಸಮಿತಿ ರಚಿಸುತ್ತಾರೆ, ಕೋಟಿ ಕೋಟಿ ವ್ಯಯಿಸುತ್ತಾರೆ. ಒಟ್ಟಿನಲ್ಲಿ ನಾವು ಕಟ್ಟುವ ತೆರಿಗೆ ಹಣವು ದೇಶದ ಖಜಾನೆಯಿಂದ ಸೂರೆ ಹೋಗುತ್ತಲೇ ಇದೆ! ಆದರೆ ಸತ್ಯ ಮಾತ್ರ ಎಂದಿಗೂ ಹೊರಬರುವುದಿಲ್ಲ.

ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದೇ ಕರೆಸಿಕೊಳ್ಳುತ್ತಿದ್ದ ಮಾಧ್ಯಮ ರಂಗವೂ ದಯನೀಯ ಮಟ್ಟಕ್ಕೆ ತಲುಪಿದೆ. ರಾಜಕಾರಣಿಗಳ ಎಂಜಲಿಗೆ ಕೈಯೊಡ್ಡುವ ಕೆಲವು ಮಾಧ್ಯಮಗಳ ಮಂದಿಯಿಂದಾಗಿ ಜನ ಸಾಮಾನ್ಯನಿಗಂತೂ ನ್ಯಾಯ ಸಿಗುತ್ತಿಲ್ಲ. ರೋಸಿ ಹೋಗಿದ್ದಾನೆ ಮತದಾರ.

ಈ ಓಟಿಗಾಗಿ ನೋಟು ಎಂಬ ಪ್ರಕರಣವನ್ನೇ ತೆಗೆದುಕೊಳ್ಳಿ. ಮನಮೋಹನ್ ಸಿಂಗ್ ಸರಕಾರ ಉರುಳದಂತೆ, ವಿಶ್ವಾಸಮತ ಯಾಚನೆ ವೇಳೆ ಪರವಾಗಿ ಮತ ಹಾಕಲು ಒಬ್ಬೊಬ್ಬ ಸಂಸದನಿಗೆ 25 ಕೋಟಿ ರೂ. ಆಮಿಷವೊಡ್ಡಲಾಗಿತ್ತು ಎಂಬ ಆರೋಪ ಕೇಳಿ ಬಂದಾಗಲೇ, ನಮ್ಮ ವ್ಯವಸ್ಥೆ ಎಷ್ಟು ಕೀಳುಮಟ್ಟಕ್ಕೆ ತಲುಪಿತ್ತು ಎಂಬುದು ಖಚಿತವಾಗಿತ್ತು. ವಿಕಿಲೀಕ್ಸ್ ಕೂಡ ಇದನ್ನು ಬಹಿರಂಗಪಡಿಸಿರುವುದು ದೃಢವಾದಾಗ, ಸಂಸತ್ತಿನಲ್ಲಿ ನೋಟುಗಳನ್ನೇ ಪ್ರದರ್ಶಿಸಿದ ಹೀನಾತಿಹೀನ ಪ್ರಕರಣ ಘಟಿಸಿದ ಮೂರು ವರ್ಷಗಳ ಬಳಿಕ ದೊಡ್ಡ ಕೋಲಾಹಲ ನಡೆಯಿತು. ಈ ಕೋಲಾಹಲಕ್ಕೊಂದು ತಾತ್ವಿಕ ಅಂತ್ಯ ತಲುಪುತ್ತದೆ ಎಂದು ನಿರೀಕ್ಷಿಸಿದವರಿಗೆ ನಿರಾಸೆಯಾಯಿತು.

ಯಾಕೆ? ಸಂಸತ್ ಕಲಾಪ ನೋಡಿದವರಿಗೆ ಇದು ವೇದ್ಯವಾಗುತ್ತದೆ. ಲಂಚ ಕೊಟ್ಟು ಸರಕಾರ ಉಳಿಸಿಕೊಳ್ಳುವುದು ನಮ್ಮ ವ್ಯವಸ್ಥೆಯ ದುರಂತ, ದೇಶದ ಸಾರ್ವಭೌಮತೆಗೆ ಧಕ್ಕೆ, ಇಂಥದ್ದು ಮುಂದಾದರೂ ನಡೆಯದಂತೆ ನಾವೆಲ್ಲಾ ಸೇರಿ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದರತ್ತ ಸಾಗಬೇಕಿದ್ದ ಚರ್ಚೆಯು, ವೈಯಕ್ತಿಕ ಟೀಕೆಗಳಿಗೆ, ನಿಂದನೆಗಳಿಗೆ, ‘ಅವರಿಗಿಂತ ನಾನು ಮೇಲೆ’ ಎಂಬ ತಮ್ಮ ಮಾತಿನ ವೈಖರಿಯನ್ನು ಪ್ರದರ್ಶಿಸುವ ವೇದಿಕೆಯಾಗಿ ಪರಿವರ್ತಿಸಲ್ಪಟ್ಟಿತೇ ಹೊರತು, ಸತ್ಯಾಂಶವನ್ನು ಓಟು ಕೊಟ್ಟ ಜನತೆಗೆ ತಿಳಿಯಪಡಿಸುವ ಪ್ರಯತ್ನವೇ ನಡೆಯಲಿಲ್ಲ.

ಕೊನೆಗೆ ಈ ಚರ್ಚೆ ಯಾವುದರತ್ತ ತಿರುಗಿತೆಂದರೆ, ಓಟಿಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿ ಟಿವಿ ಚಾನೆಲ್ ಮಾಡಿದ ಸ್ಟಿಂಗ್ ಆಪರೇಶನ್ (ಕುಟುಕು ಕಾರ್ಯಾಚರಣೆ)ಯನ್ನು ಮಾಡಿಸಿದ್ದು ಬಿಜೆಪಿ ಎಂಬ ತೆಹಲ್ಕಾ ಪತ್ರಿಕೆಯ ವರದಿಯನ್ನು ಆಧರಿಸಿ ಕೋಲಾಹಲ ನಡೆಯಿತು. ಕಾರ್ಯಾಚರಣೆ ಯಾರು ಮಾಡಿಸಿದರೇನು, ಅಲ್ಲಿ ಏನು ನಡೆದಿದೆ ಎಂಬುದು ಮುಖ್ಯವಾಗಬೇಕೇ ಹೊರತು, ಅದು ಯಾಕೆ, ಯಾರಿಂದ ಎಂಬುದೆಲ್ಲಾ ಅಪ್ರಸ್ತುತವಾಗುತ್ತದೆ. ಅಲ್ಲಿಗೆ ಚರ್ಚೆಯ ದಿಕ್ಕು ತಪ್ಪಿತು. ಇನ್ನು ನಮ್ಮಂಥ ಜನಸಾಮಾನ್ಯರಿಗೆ ಸತ್ಯ ತಿಳಿಯುವುದೇ ಇಲ್ಲ ಎಂಬುದು ಅಲ್ಲಿಗೆ ದೃಢಪಟ್ಟಿತು.

ಸ್ವಲ್ಪ ಹಿಂದಕ್ಕೆ ಗಮನ ಹರಿಸಿದರೆ, ಮೊನ್ನೆ ಮೊನ್ನೆ ಪ್ರಜಾಪ್ರಭುತ್ವ ವ್ಯವಸ್ಥೆಗೇ ಎದುರಾದ ಮತ್ತೊಂದು ಘಟನೆ ‘ನೀರಾ ರಾಡಿಯಾ ಟೇಪ್ ಬಹಿರಂಗ’ ಪ್ರಕರಣದತ್ತ ನೋಡಿ. ಒಂದು ದೇಶದ ಚುನಾಯಿತ ಸರಕಾರದಲ್ಲಿ ಯಾರು ಸಚಿವರಾಗಬೇಕು ಎಂಬುದೆಲ್ಲಾ ಈ ಕಾರ್ಪೊರೇಟ್ ಲಾಬಿಗಳ ಕೈಯಲ್ಲಿರುತ್ತದೆ, ಮತದಾರರಿಗೆ ಯಾವುದೇ ಮಣೆ ಇಲ್ಲ ಎಂಬಂತಹಾ ಪರಿಸ್ಥಿತಿ ಬಯಲಾಗಿತ್ತು. ನೀರಾ ರಾಡಿಯಾ ಎಂಬಾಕೆಯ ಟೆಲಿಫೋನ್ ಮಾತುಕತೆಗಳು, ಪತ್ರಕರ್ತರಾದ ವೀರ್ ಸಾಂಘ್ವಿ, ಬರ್ಖಾ ದತ್ ಮತ್ತು ರಾಜಕಾರಣಿಗಳು, ಕಾರ್ಪೊರೇಟ್ ದೊರೆಗಳ ನಡುವಿನ ಟೆಲಿಫೋನ್ ಸಂಭಾಷಣೆ ಬಯಲಾಗಿತ್ತು. ಇಲ್ಲಿಯೂ ಪ್ರಜಾಪ್ರಭುತ್ವಕ್ಕೇ ಧಕ್ಕೆ ಬಂದಿತ್ತು ಎಂಬುದು ಯಾರಿಗಾದರೂ ಅರ್ಥವಾಗುವ ಅಂಶ. ಆದರೆ, ಸರಕಾರ ಮಾಡಿದ್ದೇನು? ಈ ಟೇಪುಗಳು ಹೇಗೆ ಬಹಿರಂಗವಾದವು ಎಂಬುದೇ ಅದರ ತನಿಖೆಯ ಗುರಿಯಾಗಿ, ಇನ್ನು ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿತೇ ಹೊರತು, ಈ ರೀತಿಯಾಗಿ ಸರಕಾರದ ನೀತಿ ನಿಯಮಾವಳಿಗಳನ್ನು ನಿರ್ಧರಿಸುವಾಗ ಲಾಬಿಗಳಿಗೆ ಮಣಿಯುವುದು ತಪ್ಪು ಎಂಬುದನ್ನು ನಮ್ಮನ್ನಾಳುವವರು ಅರಿತುಕೊಳ್ಳಲೇ ಇಲ್ಲ! ಎಂಥಾ ದುರಂತ ನಮ್ಮದು!

ಒಟ್ಟಿನಲ್ಲಿ, ಈ ರಾಜಕಾರಣಿಗಳು ಹೀಗೆಯೇ, ಅವರೆಂದಿಗೂ ಸುಧಾರಣೆಯಾಗೋದಿಲ್ಲ, ಜನರ ತೆರಿಗೆ ಹಣದಲ್ಲಿ ತಿಂದು ತೇಗುತ್ತಲೇ ಇರುತ್ತಾರೆ ಎಂಬಂತಹಾ ಮನಸ್ಥಿತಿಯಲ್ಲಿ ಜನ ಸಾಮಾನ್ಯರು ಮಾಧ್ಯಮಗಳನ್ನಾದರೂ ಒಂದಿಷ್ಟು ಆಶಾವಾದದಿಂದ ನೋಡಿದ್ದರು. ಇವರಾದರೂ ಅಧಿಕಾರಸ್ಥರ ಹಗರಣಗಳನ್ನು, ಲಂಚದ ಆಟಾಟೋಪವನ್ನು, ಕ್ರಿಮಿನಲ್ ಕೃತ್ಯಗಳನ್ನು, ಬಯಲಿಗೆಳೆಯುತ್ತಾರೆ, ಅಧಿಕಾರಸ್ಥರನ್ನು ಸರಿದಾರಿಗೆ ತರುತ್ತಾರೆ ಎಂದು ಆಸೆಯ ಕಂಗಳಿಂದ ನೋಡುತ್ತಿದ್ದ ದಿನಗಳಿದ್ದವು. ಆದರೆ ಈಗೇನಾಗಿದೆ? ಇದೀಗ ಮಾಧ್ಯಮಗಳು ಕೂಡ ಜನರ ಕಣ್ಣಿಗೆ ಮಣ್ಣೆರಚುತ್ತಾ, ತಮಗೆ ಮನಬಂದಂತಹಾ ವರದಿಗಳನ್ನು, ದೃಶ್ಯಗಳನ್ನು ಮಾತ್ರವೇ ತೋರಿಸುತ್ತಾ, ಬಡಪಾಯಿ ಪ್ರಜೆಗಳಿಗೆ ದಿಕ್ಕಿಲ್ಲದಂತೆ ಮಾಡುತ್ತಿವೆ. ಮುಳುಗುತ್ತಿದ್ದವರಿಗೆ ಆಸರೆಯಾಗಿದ್ದ ಒಂದೇ ಒಂದು ಹುಲ್ಲು ಕಡ್ಡಿ ಕೂಡ ಕೆಟ್ಟು ಕೆರ ಹಿಡಿಯತೊಡಗಿದೆ.

ಇನ್ನು ಭೋಪಾಲ್ ದುರಂತ, ಬೋಫೋರ್ಸ್ ಲಂಚ ಹಗರಣ, ಜೆಎಂಎಂ ಸಂಸದರ ಖರೀದಿ, ಸೈಂಟ್ ಕಿಟ್ಸ್, ಸಿಡಬ್ಲ್ಯುಜಿ (ಕಾಮನ್ವೆಲ್ತ್), ಓಟಿಗಾಗಿ ನೋಟು, 2ಜಿ… ಏನೇನೋ ಹಗರಣಗಳು ಆಗಿ ಹೋಗಿವೆ. ಇವುಗಳ ತನಿಖೆಯಲ್ಲಿ ಸತ್ಯಾಂಶವೆಂದಿಗೂ ಹೊರಬರುವುದಿಲ್ಲ ಎಂಬುದು ಖಚಿತ. ಯಾಕೆಂದರೆ, ಹಗರಣ ಹೇಗೆ ನಡೆಯಿತು ಎಂಬುದರ ಬದಲಾಗಿ, ಹಗರಣದಲ್ಲಿ ಯಾರನ್ನು ಹೇಗೆ ಸಿಲುಕಿಸಿಹಾಕಬಹುದು ಎಂಬ ತೇಜೋವಧೆ ಯತ್ನಗಳೇ ಹೆಚ್ಚು ನಡೆಯುತ್ತವೆ. ನಮಗೆ ಏನೂ ಗೊತ್ತಿಲ್ಲ ಎನ್ನುತ್ತಾರೆ ನಮ್ಮದೇ ದೇಶದ ಪ್ರಧಾನಿ. ನಾನು ಅಸಹಾಯಕ ಎಂದೂ ಒಂದೆಡೆ ಹೇಳಿಕೊಳ್ಳುತ್ತಾರೆ. ನಮ್ಮನ್ನು ಜನರು ಮತ್ತೆ ಅಧಿಕಾರ ಕೊಟ್ಟು ಆರಿಸಿ ಕಳುಹಿಸಿದ್ದಾರೆ, ಹೀಗಾಗಿ ನಾವು ಸ್ವಚ್ಛ ಸುಂದರ ಎನ್ನುತ್ತಾರೆ ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರದ ಮಹಾನ್ ಪ್ರಧಾನಿ. ನಮ್ಮಲ್ಲೇನೂ ಹಗರಣ ನಡೆದಿಲ್ಲ, ಹಿಂದಿನ ಸರಕಾರಗಳು ಏನು ಮಾಡಿದ್ದವೋ ಅದೇ ನೀತಿಯನ್ನಷ್ಟೇ ಅನುಸರಿಸುತ್ತಿದ್ದೇವೆ ಎನ್ನುತ್ತಿದ್ದಾರೆ ನಮ್ಮ ಮುಖ್ಯಮಂತ್ರಿ.

ನಮ್ಮನ್ನು ಆಳುವವರು ಹೀಗೆ ಹೇಳುತ್ತಾರೆ. ಹಗರಣಗಳಿಗೆ, ಹಣ ನುಂಗುವ ಪ್ರಕ್ರಿಯೆಗಳಿಗೆ ಯಾರು ಉತ್ತರದಾಯಿ? ಸರಕಾರವೇ ಅಥವಾ ಪ್ರತಿಪಕ್ಷಗಳೇ? ಎಂಬುದು ಯಾರಿಗೂ ಬೇಡವಾದ ವಿಷಯವಾಗಿಬಿಟ್ಟಿದೆ. ಹಗರಣದ ಮೂಲ ಪತ್ತೆ ಹಚ್ಚುವ ಬದಲು, ಅದನ್ನು ಬಯಲುಪಡಿಸಿದವರು ಯಾರು ಎಂಬುದೇ ಮುಖ್ಯವಾಗಿಬಿಡುತ್ತದೆ. ಆಡಳಿತವನ್ನು ಸರಿಪಡಿಸಬೇಕಿರುವ ಮಹತ್ವದ ಜವಾಬ್ದಾರಿ ಹೊತ್ತಿರುವ ಪತ್ರಿಕೆಗಳು, ಟಿವಿ ಮಾಧ್ಯಮಗಳು ರಾಜಕಾರಣಿಗಳ ಬಲದಲ್ಲೇ ಸಾಗುತ್ತಿರುವಂತೆ, ಒಂದೊಂದು ಪಕ್ಷದ ಕಡೆ ವಾಲಿಕೊಂಡಿವೆ. ಹಾಗಿದ್ದರೆ, ಸತ್ಯ ಹೊರಬರುವುದಾದರೂ ಹೇಗೆ? ಸೂಕ್ತ ಕ್ರಮ ಕೈಗೊಳ್ಳುವುದಾದರೂ ಹೇಗೆ? ಇಂಥಾ ಪರಿಸ್ಥಿತಿಯಲ್ಲಿ ಈ ದೇಶದ ಪರಿಸ್ಥಿತಿ ಇನ್ನೆಲ್ಲಿಗೆ ಮುಟ್ಟಬಹುದು? ಲಿಬಿಯಾ, ಈಜಿಪ್ಟ್, ಸಿರಿಯಾ, ಯೆಮೆನ್ ಮುಂತಾದೆಡೆಗಳಲ್ಲಿ ಸರ್ವಾಧಿಕಾರಿ ಆಡಳಿತದ ವಿರುದ್ಧ ಜನರೇ ಸಿಡಿದೆದ್ದದ್ದು ನೆನಪಿಗೆ ಬರುತ್ತದೆಯೇ?
[ವೆಬ್‌ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here