ಮಹಿಳಾ ದಿನ ವಿಶೇಷ: ಹೆಣ್ಣು ಹುಡುಕೋ ಕಾಲವಿದು!

0
496

[ನಾವು ಸರ್ವತಂತ್ರ ಸ್ವತಂತ್ರರು, ನಾವೀಗ ಪುರುಷರಿಗೆ ಸರ್ವ ಸಮಾನರು ಮತ್ತು ಪುರುಷರಿಗಿಂತಲೂ ಒಂದು ಕೈ ಮೇಲೆ ಎಂದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಬದಲಾಗಿದೆ ಇಂದು ಮಹಿಳೆಯರ ಸ್ಥಾನ ಮಾನ. ಇಂದು (ಮಾರ್ಚ್ 8) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ತನ್ನಿಮಿತ್ತ ಒಂದು ಮೇಲ್ನೋಟವಿದು.]

ಒಂದು ಕಾಲವಿತ್ತು, “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” (ಸ್ವತಂತ್ರಗಳಾಗಲು ಸ್ತ್ರೀ ಅರ್ಹಳಲ್ಲ) ಅಂತ ಕಟ್ಟಾ ಸಂಪ್ರದಾಯಸ್ಥರು ಭಾವಿಸಿದ್ದ ಕಾಲವದು. ಹೆಣ್ಣು ಎಂದರೆ ಅಡುಗೆ ಮನೆಗೋ, ಗೃಹ ಕೃತ್ಯಕ್ಕೋ ಸೀಮಿತ, ಅವಳನ್ನು ಓದಿಸಿ ಮಾಡುವುದಾದರೂ ಏನು ಎಂಬಂತಹಾ ಉಡಾಫೆ ಮನೋಭಾವ ಸಮಾಜದಲ್ಲಿ ಜಡ್ಡುಗಟ್ಟಿತ್ತು.

ನೀವು ಅವ್ರ ಮದ್ವೆಗೆ ಹೋಗಿದ್ರಾ….
ಇನ್ನು, ನೀವು ಸಾಕಷ್ಟು ಮದುವೆ ಸಮಾರಂಭಗಳಿಗೆ ಹೋಗಿದ್ದಿರಬಹುದು. ದಶಕದ ಹಿಂದೆ, ನಾವು ನೀವು ಚಿಕ್ಕವರಿರುವಾಗ ವಿವಾಹ ಸಮಾರಂಭಕ್ಕೆ ಹೋಗಿದ್ದಕ್ಕೂ ಇಂದಿನ ವಿವಾಹ ಸಮಾರಂಭದಲ್ಲಿಯೂ ಆಗಿರುವ ಬದಲಾವಣೆಯನ್ನು ಗುರುತಿಸಿದ್ದೀರಾ?

ಹಿಂದೆ ಮದುವೆಗೆ ಹೋಗುವುದೆಂದರೆ, ತಮ್ಮ ಮನೆಮಗಳಿಗೊಂದು ಸಮರ್ಥ ಗಂಡು ಹುಡುಕುವುದೇ ಹೆಣ್ಣು ಹೆತ್ತವರ ಮೂಲ ಉದ್ದೇಶ. ಎಲ್ಲಾದರೂ ಒಂದು ಗಂಡು ಹೊಂದಿಸಿಕೊಡಿ ಅಂತ ಗೋಗರೆಯುವ ಸಂದರ್ಭಗಳಿದ್ದವು.

ಆದರೀಗ? ಪರಿಸ್ಥಿತಿ ಉಲ್ಟಾಪಲ್ಟಾ ! ಗಂಡಿಗೇ ಹೆಣ್ಣು ಹುಡುಕುವ ಕಾಲವಿದು. ಮಗನಿಗೊಂದು ಎಲ್ಲಾದರೂ ಹೆಣ್ಣಿದ್ದರೆ ಹೇಳಿ ಸ್ವಾಮೀ ಅಂತ ಗಂಡು ಹೆತ್ತವರೇ ಹುಡುಕಾಡುತ್ತಿರುವುದನ್ನು, ಆಕೆ ಒಪ್ತಾಳಾ ಒಮ್ಮೆ ಕೇಳಿಬಿಡಿ ಅಂತ ಯಾಚನಾ ಧ್ವನಿಯಲ್ಲಿ ಹೇಳುತ್ತಿರುವುದನ್ನು ನಾನು ಅದೆಷ್ಟೋ ಮದುವೆಗಳಲ್ಲಿ ನೋಡಿದ್ದೇನೆ, ಕಿವಿಯಾರೆ ಕೇಳಿದ್ದೇನೆ. ಇಂಥ ಪ್ರಸಂಗಗಳು ನಿಮ್ಮ ಗಮನಕ್ಕೂ ಬಂದಿದ್ದಿರಬಹುದು.

ಯಾಕೆ ಹೀಗಾಗಿದೆ?
ಒಂದು ಪೀಳಿಗೆಯ ಹಿಂದೆ, ತಾವು ಈ ಭೂಮಿಗೆ ಬಂದಿದ್ದೇ ಹೆಣ್ಣಿನಿಂದ ಎಂಬ ಅಲ್ಪಜ್ಞಾನವೂ ಇಲ್ಲದೆ, ‘ಹೆಣ್ಣು ಮಕ್ಕಳು ಜನಿಸಲೇಬಾರದು, ಅದೊಂದು ಶಾಪವಿದ್ದಂತೆ’ ಎಂದು ಭಾವಿಸಿದ ಅದೆಷ್ಟೋ ಕುಟುಂಬಗಳು ನಿರ್ನಾಮವಾಗಿದ್ದನ್ನು ನಾವು ಕೇಳಿದ್ದೇವೆ. ಹೆಣ್ಣು ಮಗು ಬೇಡ ಅಂತ ಭ್ರೂಣಹತ್ಯೆಗೆ ಮುಂದಾದವರ ಕಥೆಗಳನ್ನೂ ಕೇಳಿದ್ದೇವೆ. ಹೆಣ್ಣು ಹೆತ್ತರೆ ಆಕೆ ಹೆಣ್ಣೇ ಅಲ್ಲ ಎಂದು ತುಚ್ಛೀಕರಿಸಿದವರನ್ನೂ ನೋಡಿದ್ದೇವೆ. ಅವಳಿಗೇಕೆ ಕಲಿಸುವುದು ಎಂಬ ಅವಜ್ಞೆಯ ಧೋರಣೆಯೂ ಜೊತೆಗೇ ಇತ್ತಲ್ಲಾ… ಎರಡು ದಶಕದ ಹಿಂದಿನ ಈ ಪರಿಸ್ಥಿತಿಯಿಂದಾಗಿ ಇಂದು ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಕುಸಿತವಾಗಲು ಅಥವಾ ಅವರಿಗೆ ಬೇಡಿಕೆ ಹೆಚ್ಚಲು ಈ ಅಂಶಗಳೂ ಕಾರಣವಾಗಿದ್ದಿರಬಹುದು.

ಆದರೀಗ ಕಾಲ ಬದಲಾಗಿದೆ. ಹೆಣ್ಣು ಇಂದು ಗಂಡಿಗೆ ಸಮದಂಡಿಯಾಗಿ, ಎಲ್ಲ ಕ್ಷೇತ್ರಗಳಲ್ಲಿಯೂ ಆವರಿಸಿಕೊಂಡಿದ್ದಾಳೆ. ಉದ್ಯೋಗ ಕ್ಷೇತ್ರದಲ್ಲಿ ಆಕೆಗೇ ಮೊದಲ ಮಣೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾಳೆ ಎಂಬ ನಂಬಿಕೆ. ಮತ್ತು ಗಂಡಸರ ಹೆಸರು ಭ್ರಷ್ಟಾಚಾರದಲ್ಲಿ ಹೆಚ್ಚು ಕೇಳಿಬರುತ್ತಿರುವುದರಿಂದ, ಕಂಪನಿಗಳು ಕೂಡ ಮಹಿಳೆಯರಿಗೇ ಹೆಚ್ಚು ಮಣೆ ಹಾಕುತ್ತಿವೆ ಎಂಬುದು ನನ್ನ ಗಮನಕ್ಕೂ ಬಂದಿದೆ. ಉದ್ಯೋಗ ನೇಮಕಾತಿಗಳಲ್ಲಿ ಅವರಿಗೆ ಆದ್ಯತೆ ದೊರೆಯುತ್ತಿರುವುದು ಇದೇ ಕಾರಣಕ್ಕಾಗಿಯೇ ಅಲ್ವೇ?ಆಕೆ ಅಡುಗೆಮನೆಗೋ, ಗೃಹಕೃತ್ಯಕ್ಕೋ ಸೀಮಿತವಾಗಿಲ್ಲ. ಹೆಣ್ಣು ಕಲಿತರೆ ಇಡೀ ಕುಟುಂಬವೇ ಕಲಿತಂತೆ ಎಂಬ ನಾಣ್ಣುಡಿಗೆ ಅನುಗುಣವಾಗಿ ಆಕೆಯಿಂದು ಸುಶಿಕ್ಷಿತಳಾಗಿದ್ದಾಳೆ.

ಮನೆಯಲ್ಲಿ ಮಾತ್ರವೇ ಅಲ್ಲ, ಆಫೀಸಿನಲ್ಲಿಯೂ ಸೈ ಅನ್ನಿಸಿಕೊಂಡು ಬದಲಾವಣೆಯ ಪರ್ವ ಕಾಲದಲ್ಲಿದ್ದಾಳೆ ಆಕೆ. ಸಂಪ್ರದಾಯದ ಹೊಸಿಲು ತುಳಿದು, ಒಂದು ಕಂಪನಿಯ ಬಾಸ್ ಆಗುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದ್ದಾಳೆ. ಸ್ತ್ರೀ ಸಮಾನತೆಯ ಭಾವನೆ ಜಾಗೃತವಾಗಿದೆ. ನಾವೇನು ಕಡಿಮೆ ಎಂದು ಕೇಳುತ್ತಿದ್ದಾಳೆ. ಅವಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತಿದೆ. ಮದುವೆ ವಿಷಯದಲ್ಲಿಯೂ ಆಕೆಗೆ ಆಯ್ಕೆಗಳಿವೆ. ತಾನು ಮದುವೆಯಾಗಬೇಕಿರುವ ಗಂಡು ತನಗಿಂತ ಹೆಚ್ಚಲ್ಲದಿದ್ದರೂ, ತನ್ನಷ್ಟಾದರೂ ಕಲಿತಿರಬೇಕು ಎಂದು ಧೈರ್ಯವಾಗಿ ಹೇಳತೊಡಗಿದ್ದಾಳೆ. ನೌಕರಿ ದೊರೆಯುವ ನಿಟ್ಟಿನಲ್ಲಿ ಪ್ರಾಮಾಣಿಕತೆಗೆ ಗಂಡು-ಹೆಣ್ಣಿನ ಮಧ್ಯೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ.

ಹಿಂದೆ, ಗಂಡುಗಳು “ನಾನು ಮದುವೆಯಾಗುವವಳು ಹಾಗಿರಬೇಕು, ಹೀಗಿರಬೇಕು” ಅಂತೆಲ್ಲಾ ಕಂಡಿಶನ್ ಹಾಕುತ್ತಿದ್ದರು. ಆದರೆ, ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದೆ. ನಾನು ಮದುವೆಯಾಗುವ ಗಂಡು, ಬೆಂಗ್ಳೂರಲ್ಲಿ ಕೆಲಸದಲ್ಲಿರಬೇಕು, ಪಟ್ಟಣದಲ್ಲಿರಬೇಕು, ಅವನಿಗೊಂದು ಮನೆ ಇರಬೇಕು ಅಥವಾ ಇಂತಿಷ್ಟು ಸಂಬಳವಾದರೂ ಇರಬೇಕು. ಹಾಗಿದ್ದರೆ ಮಾತ್ರ ಮದುವೆಗೆ ಒಪ್ತೀನಿ ಅಂತ ಧೈರ್ಯವಾಗಿ ಹೇಳಲಾರಂಭಿಸಿದ್ದಾಳೆ ಹೆಣ್ಣು. ಮೇಲ್ನೋಟಕ್ಕಿದು ಸ್ವಾರ್ಥ ಎಂದು ಕಂಡುಬಂದರೂ, ತನಗೂ ಬದುಕಲು ಹಕ್ಕಿದೆ, ತನ್ನ ಭವಿಷ್ಯ ಭದ್ರವಾಗಿರಬೇಕು ಎಂಬ ಒಳನೋಟವನ್ನೂ ನಾವಿಲ್ಲಿ ಗುರುತಿಸಬಹುದು. ಪ್ರಬುದ್ಧತೆಯಿಲ್ಲದ ಕೆಲವರು ಇದಕ್ಕೆ ಅಪವಾದವಾಗಿಯೂ ಇರಲಾರರು ಅಂತೇನಿಲ್ಲ. ಆದರೆ ಬಹುಸಂಖ್ಯಾತರ ಯೋಚನೆಯಿದು.

ಹಾಗಾದರೆ, ಸ್ತ್ರೀ ಎಷ್ಟು ಸುರಕ್ಷಿತಳು?

ಈಗ ಗಾಂಧೀಜಿ ಹೇಳಿರುವ “ನಡುರಾತ್ರಿಯಲ್ಲಿ ಸ್ತ್ರೀ ಒಬ್ಬಂಟಿಯಾಗಿ ನಡೆದುಹೋಗುವಂತಾಗಬೇಕು” ಎಂಬ ಕಂಟೆಕ್ಸ್ಟ್‌ನಲ್ಲಿ ನೋಡಿದರೆ ಅವಳು ಸುರಕ್ಷಿತಳಾಗಿದ್ದಾಳೆಯೇ?

ಗಾಂಧೀಜಿ ಕಂಡ ಆ ಕನಸಿನ ಪರಿಸ್ಥಿತಿ ಇಂದು ಪಟ್ಟಣಗಳಲ್ಲಿ ಮೇಲ್ನೋಟಕ್ಕೆ ಸೃಷ್ಟಿಯಾಗಿದೆ. ಇದು ನಿಜಕ್ಕೂ ಸ್ತ್ರೀ-ಸ್ವಾತಂತ್ರ್ಯವೇ? ಇಂದು ಮಹಿಳೆಯೆಷ್ಟು ಸುರಕ್ಷಿತ? ದಿನ ಬೆಳಗಾಗೆದ್ದರೆ, ಕಾರು ಚಾಲಕನಿಂದ ಅತ್ಯಾಚಾರ, ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಮನೆ ಕೆಲಸದಾತನಿಂದ ಅತ್ಯಾಚಾರ ಯತ್ನ, ಪ್ರೊಫೆಸರ್‌ರಿಂದಲೇ ಲೈಂಗಿಕ ಕಿರುಕುಳ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬೇಕಿದ್ದರೆ ‘ಸಹಕರಿಸ’ಬೇಕು ಎಂಬ ಒತ್ತಾಯ, ವರದಕ್ಷಿಣೆಗಾಗಿ ಹಿಂಸೆ…. ಇವನ್ನೆಲ್ಲಾ ನಾವು ಇಂದು ಹಾಡುಹಗಲಲ್ಲೇ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಇದಕ್ಕೆ ಕಠಿಣ ಕಾನೂನು ಮತ್ತು ಸಾಮಾಜಿಕ ಜಾಗೃತಿ ಮೂಡಿಸಬೇಕಾಗಿರುವುದು ಅತ್ಯಗತ್ಯ.

ಬಹುಶಃ ಇಂತಿಷ್ಟು ಮೀಸಲಾತಿ ಕೊಡಿ ಎಂದು ಯಾಚಿಸುವ ಪರಿಸ್ಥಿತಿಯಲ್ಲಿಲ್ಲ ಈಗ ಮಹಿಳೆ, ಆಕೆ ಸ್ವಸಾಮರ್ಥ್ಯದಿಂದಲೇ ಮೇಲೆ ಬರಬಲ್ಲಳು ಎಂಬುದನ್ನು ನಾವಿಂದು ಹಲವು ಕ್ಷೇತ್ರಗಳಲ್ಲಿ ಕಾಣುತ್ತಿದ್ದೇವೆ. ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್, ಕರ್ನಾಟಕದ ಮಂತ್ರಿ ಶೋಭಾ ಕರಂದ್ಲಾಜೆ, ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಟೆನಿಸ್ ಪಟು ಸಾನಿಯಾ ಮಿರ್ಜಾ, ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಕುಂದಾಪುರದ ಚಿನ್ನದ ಹುಡುಗಿ ಅಶ್ವಿನಿ ಅಕ್ಕುಂಜಿ… ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರತಿಭೆ ಪ್ರದರ್ಶಿಸುತ್ತಿರುವುದು ಅರ್ಹತೆಯ ಬಲದಿಂದಲೇ ಅಲ್ಲವೇ? ಇಂಥವರು ಸಮಾಜಕ್ಕೆ ಸ್ಫೂರ್ತಿ.

ಸಾಂಸಾರಿಕವಾಗಿ ಹೇಳಬಹುದಾದರೆ ಮುದ್ದಿನ ಮಗಳಾಗಿ, ಒಲುಮೆಯ ತಾಯಿಯಾಗಿ, ಅಕ್ಕರೆಯ ಪತ್ನಿಯಾಗಿ, ಅಕ್ಕನಾಗಿ, ತಂಗಿಯಾಗಿ, ಸೊಸೆಯಾಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾ, ಸಮಾಜದಲ್ಲಿಯೂ ಮೇಲ್ದರ್ಜೆಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವ ಮಹಿಳೆಯರು ಇಂದು ಅಬಲೆಯಾಗುಳಿದಿಲ್ಲ, ಸಬಲರಾಗಿದ್ದಾರೆ. ಇಂತಹಾ ಸಬಲತೆಯು ಗ್ರಾಮೀಣ ಪ್ರದೇಶಗಳಿಗೆ ಇನ್ನೂ ವಿಸ್ತರಣೆಯಾಗಬೇಕಿದೆ, ಈ ಬಗ್ಗೆ ಜನರ ಮನ ಬದಲಾಗಬೇಕಿದೆ.
[ವೆಬ್‌ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here