ಫೋನ್‌ನಲ್ಲಿ ಇಂಟರ್ನೆಟ್ ಬಳಕೆ ವೆಚ್ಚ ನಿಯಂತ್ರಿಸಲು ಹೀಗೆ ಮಾಡಿ

0
811

Preview Day Ahead Of Mobile World Congress 2015ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಗಳಿಂದ ತಿಳಿದುಬಂದಿರುವ ಅಂಶ. ಮುಖ್ಯವಾಗಿ ಮತ್ತು ಅತಿ ಸಾಮಾನ್ಯವಾಗಿ ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು, ಇಮೇಲ್, ವಾಟ್ಸಾಪ್, ವಿಚಾಟ್, ಸ್ಕೈಪ್ ಮುಂತಾದ ಚಾಟಿಂಗ್ ಅಪ್ಲಿಕೇಶನ್‌ಗಳು ಸ್ಮಾರ್ಟ್ ಫೋನ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತವೆ. ಆದರೆ, ಇಂಟರ್ನೆಟ್ ಬಳಕೆಯ ದರ (ಡೇಟಾ ಶುಲ್ಕ) ಹೆಚ್ಚಳವಾಗುತ್ತಿರುವುದು ನಮ್ಮ ಸ್ಮಾರ್ಟ್ ಫೋನ್ ಚಟುವಟಿಕೆಯ ಮೇಲೆ ಕಡಿವಾಣ ಹೇರುತ್ತಿದೆ.

‘ನಾನೇನೂ ಡೌನ್‌ಲೋಡ್ ಮಾಡಿಕೊಂಡಿಲ್ಲ, ಆದರೂ ಒಂದು ರೂಪಾಯಿ ಕಟ್ ಆಯಿತು ಎಂಬ ಸಂದೇಶ ಬಂದಿದೆ, ಯಾಕೆ?’ ಅಂತ ಹಲವರು ನನ್ನನ್ನು ಕೇಳಿರುವುದರಿಂದಾಗಿ, ಈ ಬಗ್ಗೆ ತಿಳಿಯದಿರುವವರಿಗಾಗಿ ಈ ಮಾಹಿತಿ. ನೀವೇನನ್ನಾದರೂ ಡೌನ್‌ಲೋಡ್ ಮಾಡಿದರಷ್ಟೇ ಡೇಟಾಕ್ಕೆ ಶುಲ್ಕವಾಗುತ್ತದೆ ಎಂದುಕೊಂಡರೆ ಅದು ತಪ್ಪು. ಯಾವುದೇ ವೆಬ್ ಸೈಟಿಗೆ ಭೇಟಿ ನೀಡಿದ ತಕ್ಷಣ, ಒಂದಷ್ಟು ಕಿಲೋಬೈಟ್‌ನಷ್ಟು ಡೇಟಾ ನಮ್ಮ ಸ್ಮಾರ್ಟ್‌ಫೋನ್‌ನ ತಾತ್ಕಾಲಿಕ ಫೋಲ್ಡರ್‌ಗೆ ಡೌನ್‌ಲೋಡ್ ಆಗುತ್ತದೆ. ಹೀಗೆ ಡೌನ್‌ಲೋಡ್ ಆಗಿರುವ ಕುಕೀಗಳು ಅಥವಾ cache ಎಂಬ ತಾತ್ಕಾಲಿಕ ಇಂಟರ್ನೆಟ್ ಫೈಲ್‌ಗಳಿಂದಾಗಿಯೇ ನಿರ್ದಿಷ್ಟ ವೆಬ್ ಪುಟಗಳು ನಮ್ಮ ಸಾಧನದಲ್ಲಿ ಗೋಚರಿಸುತ್ತವೆ.

ಬಳಕೆದಾರರಿಗೆ ಖರ್ಚು ಹೆಚ್ಚಾಗದಂತಿರಲು ಬಹುತೇಕ ವೆಬ್‌ಸೈಟ್‌ಗಳು ಫೋನ್‌ಗಳಿಗಾಗಿಯೇ ಪ್ರತ್ಯೇಕವಾದ ಮೊಬೈಲ್ ವೆಬ್ ಡೊಮೇನ್‌ಗಳನ್ನು ಸಿದ್ಧಪಡಿಸಿರುತ್ತಾರೆ. ಚಿತ್ರಗಳಿದ್ದರೆ, ಅವುಗಳು ಕೂಡ ತಾತ್ಕಾಲಿಕ ಇಂಟರ್ನೆಟ್ ಫೈಲ್‌ಗಳ ರೂಪದಲ್ಲಿ ಸಾಧನಕ್ಕೆ ಡೌನ್‌ಲೋಡ್ ಆಗುವುದರಿಂದ ಇಂಥ ತಾಣಗಳಲ್ಲಿ ಫೋಟೋಗಳನ್ನು ಬಳಸುವುದಿಲ್ಲ ಅಥವಾ ತೀರಾ ಕಡಿಮೆ ಬಳಸಲಾಗುತ್ತದೆ. (ಉದಾ. m.timesofindia.com).

ಮೊಬೈಲ್ ಸೇವಾ ಕಂಪನಿಗಳು ಇಂಟರ್ನೆಟ್ ಬಳಕೆಗೆ ಸಾಕಷ್ಟು ಶುಲ್ಕ ವಿಧಿಸುತ್ತವೆ. ಪೈಪೋಟಿಯಿಂದಾಗಿ 10 ಕೆಬಿಗೆ 1 ಪೈಸೆ, 2 ಪೈಸೆ, 5 ಪೈಸೆ ಮುಂತಾಗಿ ವಿಭಿನ್ನ ದರಗಳಿವೆ. ಅಂದರೆ, ಸಾಮಾನ್ಯ 1 ಎಂಬಿ ಗಾತ್ರದ ಒಂದು ಫೋಟೋ ಡೌನ್‌ಲೋಡ್ ಮಾಡಿಕೊಂಡರೆ 10-15 ರೂಪಾಯಿಯಾಗಬಹುದು. ಪೋಸ್ಟ್ ಪೇಯ್ಡ್ ಸಂಪರ್ಕ ಹೊಂದಿದ್ದರೆ, ಮೊದಲೇ ನಿಗದಿತ ಮಿತಿಯ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಆದರೆ ಪ್ರೀಪೇಯ್ಡ್ ಬಳಕೆದಾರರಿಗೂ ಇಂಟರ್ನೆಟ್ ವೆಚ್ಚ ತಗ್ಗಿಸುವ ನೆಟ್‌ಪ್ಯಾಕ್‌ಗಳು ಲಭ್ಯ ಎಂಬ ಮಾಹಿತಿ ಗ್ರಾಮಾಂತರ ಭಾಗದಲ್ಲಿರುವ ಹಲವರಿಗೆ ಇನ್ನೂ ತಿಳಿದಿಲ್ಲ. ಇಂತಹಾ ನೆಟ್ ಪ್ಯಾಕ್ ಬಳಸಿದರೆ ತಿಂಗಳಿಗೆ 1 ಜಿಬಿ (ಅಂದರೆ 1024 ಎಂಬಿ) ಡೇಟಾ ಪ್ಯಾಕ್‌ಗಳು 150ರಿಂದ 260 ರೂ.ವರೆಗಿನ ದರದಲ್ಲಿ ಲಭ್ಯವಿದೆ (2ಜಿ ಅಥವಾ 3ಜಿ ಸಂಪರ್ಕದ ಆಧಾರದಲ್ಲಿ) ದಿನದ, ವಾರದ, 15 ದಿನಗಳ ಪ್ಯಾಕ್‌ಗಳೂ ಲಭ್ಯ ಇವೆ. ನಿಮ್ಮ ಊರಿನಲ್ಲಿ 3ಜಿ ಸಂಪರ್ಕ ಅಷ್ಟು ಚೆನ್ನಾಗಿಲ್ಲವೆಂದಾದರೆ, ಕಡಿಮೆ ವೆಚ್ಚದ 2ಜಿ ಡೇಟಾ ಪ್ಯಾಕ್ ಹಾಕಿಸಿಕೊಳ್ಳಬಹುದು. ಇನ್ನು ಕೆಲವು ಮೊಬೈಲ್ ಸೇವಾ ಕಂಪನಿಗಳು, ವಾರ್ಷಿಕ ಪ್ಲ್ಯಾನ್ ಕೂಡ ನೀಡುತ್ತವೆ. ಆಗಾಗ್ಗೆ ರಿಯಾಯಿತಿ ದರದ ಪ್ಲ್ಯಾನ್ ಘೋಷಿಸುವ ಮೊಬೈಲ್ ಸೇವಾ ಕಂಪನಿಗಳೂ ಇವೆ. ನಿಮಗೆ ಎಸ್ಎಂಎಸ್ ಮೂಲಕ ಈ ಬಗ್ಗೆ ಮಾಹಿತಿ ಬರುತ್ತಿರಬಹುದು.

ಡೇಟಾ ದರದಲ್ಲಿ ಉಳಿತಾಯ ಮಾಡುವ ಬಗ್ಗೆ ಮೂರು ಪ್ರಮುಖ ಸಲಹೆಗಳು ಇಲ್ಲಿವೆ. ಒಂದನೆಯದು, ಫೇಸ್‌ಬುಕ್‌ನಲ್ಲಿ ಗರಿಷ್ಠ ಡೇಟಾ ಡೌನ್‌ಲೋಡ್ ಆಗುತ್ತದೆ ಮತ್ತು ಬ್ಯಾಟರಿಯನ್ನೂ ಸಾಕಷ್ಟು ಹೀರಿಕೊಳ್ಳುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಫೇಸ್‌ಬುಕ್ ಬಳಕೆ ಮಾಡಿ.

ಎರಡನೆಯದೆಂದರೆ, ಸ್ಮಾರ್ಟ್‌ಫೋನ್‌ಗಳ ಸೆಟ್ಟಿಂಗ್‌ನಲ್ಲಿ, ಮೊಬೈಲ್ ಡೇಟಾ ಎಂದಿರುವಲ್ಲಿ ಆನ್ ಅಥವಾ ಆಫ್ ಮಾಡುವ ಬಟನ್ ಇರುತ್ತದೆ. ಬೇಕಾದಾಗ ಮಾತ್ರ ಇಂಟರ್ನೆಟ್ ಆನ್ ಮಾಡಿದರೆ, ಡೇಟಾ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಬಹುದು.

ಮೂರನೆಯದೆಂದರೆ, ವಾಟ್ಸಾಪ್ ಬಳಸುತ್ತಿರುವವರು, ಅದರ ಸೆಟ್ಟಿಂಗ್ಸ್‌ನಲ್ಲಿ, ಚಾಟ್ ಸೆಟ್ಟಿಂಗ್ಸ್ ಎಂದಿರುವಲ್ಲಿ ನೋಡಿದಾಗ, Media Auto download ಎಂದು ಬರೆದಿರುವುದು ಕಾಣಿಸುತ್ತದೆ. ಅದರಲ್ಲಿ When Using Mobile Data ಅಂತ ಇರುವಲ್ಲಿ ಕ್ಲಿಕ್ ಮಾಡಿದರೆ, ಚಿತ್ರ, ಆಡಿಯೋ, ವೀಡಿಯೋ ಎಂಬ ಚೆಕ್ ಬಾಕ್ಸ್‌ನ ಟಿಕ್ ಗುರುತುಗಳನ್ನು ತೆಗೆದುಬಿಡಿ. ಹೀಗೆ ಮಾಡಿದಾಗ, ಸ್ನೇಹಿತರ ವಲಯದಿಂದ ಬಂದ ಎಲ್ಲವೂ ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಆಗುವುದು ತಪ್ಪುತ್ತದೆ, ಬೇಕಾದ್ದನ್ನು ಮಾತ್ರ ಸ್ಪರ್ಶಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಿಂದ ಸಾಧನದ ಆಂತರಿಕ ಸ್ಥಳಾವಕಾಶವನ್ನೂ ಉಳಿಸಬಹುದಾಗಿದೆ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ ಮಾರ್ಚ್ 09, 2015]

LEAVE A REPLY

Please enter your comment!
Please enter your name here