Instagram Tips: ಫೋಟೋ ಸೇವ್ ಮಾಡಲು, ಸ್ಟೇಟಸ್ hide ಮಾಡಲು ಹೀಗೆ ಮಾಡಿ

0
522

ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಫೇಸ್‌ಬುಕ್‌ಗಿಂತಲೂ ಯುವ ಜನಾಂಗವನ್ನು ಇದು ಆಕರ್ಷಿಸುತ್ತಿದೆ. ಟಿಕ್‌ಟಾಕ್ ನಿಷೇಧದ ಬಳಿಕ ಹೆಚ್ಚು ಯುವಜನರು ಈ ಫೋಟೋ, ವಿಡಿಯೊ ಹಂಚಿಕೊಳ್ಳಲು ಇರುವ ಉಚಿತ ಸಾಮಾಜಿಕ ಜಾಲ ತಾಣದತ್ತ ಆಕರ್ಷಿತರಾಗಿದ್ದಾರೆ. ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ಬಳಸಲು ಆರಂಭಿಸಿರುವವರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ.

ಮುಖ್ಯವಾಗಿ ಇನ್‌ಸ್ಟಾಗ್ರಾಂನಲ್ಲಿ ಸೆಟ್ಟಿಂಗ್ಸ್ ವಿಭಾಗ ಎಲ್ಲಿದೆ ಎಂಬುದೇ ಕೆಲವರಿಗೆ ಗೊಂದಲ. ಇದಕ್ಕಾಗಿ, ಇನ್‌ಸ್ಟಾಗ್ರಾಂ ಪ್ರೊಫೈಲ್‌ಗೆ ಹೋಗಿ (ಬಲ ಕೆಳ ತುದಿಯಲ್ಲಿರುವ ಪ್ರೊಫೈಲ್ ಫೋಟೋ ಒತ್ತಿ), ಅಲ್ಲಿಂದ, ಬಲ ಮೇಲ್ತುದಿಯಲ್ಲಿರುವ ಹ್ಯಾಂಬರ್ಗರ್ ಮೆನು (ಮೂರು ಗೆರೆ) ಕ್ಲಿಕ್ ಮಾಡಿ, ಕೆಳಭಾಗದಲ್ಲಿ ‘ಸೆಟ್ಟಿಂಗ್ಸ್’ ಗೋಚರಿಸುತ್ತದೆ.

ಉತ್ತಮ ಗುಣಮಟ್ಟದ ಫೋಟೋ ಸೇವ್ ಮಾಡಿಕೊಳ್ಳಲು:
ಇನ್‌ಸ್ಟಾಗ್ರಾಂ ಫೋಟೋ ಅಥವಾ ವಿಡಿಯೊ ಸೇವ್ ಮಾಡಿಕೊಳ್ಳಲು ಆಯ್ಕೆಯಿಲ್ಲ. ಆದರೆ, ನಾವು ಪೋಸ್ಟ್ ಮಾಡಿದ ಫೋಟೋಗಳನ್ನು ನಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಳ್ಳಲು ಅವಕಾಶವಿದೆ. ಇನ್‌ಸ್ಟಾಗ್ರಾಂನಲ್ಲೇ ಫೋಟೋಗಳನ್ನು ಸುಂದರವಾಗಿ ಮಾಡಬಲ್ಲ ಎಡಿಟಿಂಗ್ ಆಯ್ಕೆ ಇದೆ. ಫೋಟೋ ತಿದ್ದುಪಡಿ, ವಿಶೇಷ ಅಲಂಕಾರ, ಬಣ್ಣ ಬದಲಾಯಿಸುವುದೇ ಮುಂತಾದ ಎಡಿಟಿಂಗ್ ಆಯ್ಕೆಗಳೂ ಇಲ್ಲಿರುವುದರಿಂದ, ಬೇರೆಡೆ ಹಂಚಿಕೊಳ್ಳಲು ಉತ್ತಮ ರೆಸೊಲ್ಯುಶನ್ ಇರುವ ಈ ಫೋಟೋಗಳನ್ನು ಸೇವ್ ಮಾಡಿಕೊಳ್ಳುವುದು ಹೇಗೆಂಬುದೇ ಚಿಂತೆ! ಇದಕ್ಕಾಗಿ, ಸೆಟ್ಟಿಂಗ್ಸ್‌ನಲ್ಲಿ ‘ಅಕೌಂಟ್’ ಕ್ಲಿಕ್ ಮಾಡಿ, ‘Original Posts’ ಅಂತ ಇರುವುದನ್ನು ಒತ್ತಿದಾಗ, ‘ಸೇವ್ ಒರಿಜಿನಲ್ ಪೋಸ್ಟ್ಸ್’ ಆಯ್ಕೆ ಕಾಣಿಸುತ್ತದೆ. ಅದನ್ನು ಆನ್ ಮಾಡಿಟ್ಟುಕೊಂಡರಾಯಿತು.

ಪೋಸ್ಟ್ ಮಾಡಿದ ಫೋಟೋ, ವಿಡಿಯೊಗಳನ್ನು ಸೇವ್ ಮಾಡಿಟ್ಟುಕೊಳ್ಳುವ ಆಯ್ಕೆಯೂ ಅಲ್ಲೇ ಗೋಚರಿಸುತ್ತದೆ. ಪೋಸ್ಟ್ ಮಾಡುವ ‘ಪ್ಲಸ್’ ಬಟನ್ ಒತ್ತಿದಾಗ ಫೋಟೋ ಸೇರಿಸಿ, ಬೇಕಾದಂತೆ ಎಡಿಟ್ ಮಾಡಿ. ಶೇರ್ ಮಾಡಿದಾಗ, ಉತ್ತಮ ರೆಸೊಲ್ಯುಶನ್ ಇರುವ, ಎಡಿಟ್ ಆಗಿರುವ ಫೋಟೋ ನಮ್ಮ ಮೊಬೈಲ್ ಫೋನ್‌ನ ಗ್ಯಾಲರಿಯಲ್ಲೂ ಸೇವ್ ಆಗುತ್ತದೆ. ಅಲ್ಲಿಂದ ಅದನ್ನು ನಮಗೆ ಬೇಕಾದ ಕಡೆಗಳಲ್ಲಿ ಬಳಸಬಹುದು.

ಆನ್‌ಲೈನ್ ಸ್ಟೇಟಸ್ ಮಾಹಿತಿ ಅಡಗಿಸುವುದು:
ವಾಟ್ಸ್ಆ್ಯಪ್ ಅಥವಾ ಮೆಸೆಂಜರ್‌ನಂತೆ ಇನ್‌ಸ್ಟಾಗ್ರಾಂನಲ್ಲಿಯೂ ನೀವು ಆನ್‌ಲೈನ್ ಆಗಿರುವುದು ಬೇರೆಯವರಿಗೆ ತಿಳಿಯಬಾರದೆಂದು ಬಯಸಿದರೆ ಅದನ್ನೂ ಹೊಂದಿಸಬಹುದು. ಇದಕ್ಕಾಗಿ ಮೇಲೆ ಹೇಳಿದಂತೆಯೇ ಸೆಟ್ಟಿಂಗ್ಸ್ ವಿಭಾಗಕ್ಕೆ ಹೋಗಿ, ‘ಪ್ರೈವೆಸಿ’ ಕ್ಲಿಕ್ ಮಾಡಿ, ‘Show Activity Status’ ಎಂಬುದನ್ನು ಆಫ್‌ಗೆ (ಎಡಕ್ಕೆ) ಸ್ಲೈಡ್ ಮಾಡಿದರಾಯಿತು. ಇನ್‌ಸ್ಟಾಗ್ರಾಂ ಚಾಟ್‌ನಲ್ಲಿ ನಾವು ಸಕ್ರಿಯರಾಗಿದ್ದೇವೆ ಎಂಬುದನ್ನು ಸೂಚಿಸುವ ಹಸಿರು ಬಟನ್ ಕಾಣಿಸದಂತೆ ಮಾಡುವುದಕ್ಕೂ ಈ ವಿಧಾನ ನೆರವಾಗುತ್ತದೆ.

ಸುರಕ್ಷತೆ:
ಇನ್‌ಸ್ಟಾಗ್ರಾಂ ಖಾತೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಎರಡು ಹಂತದ ದೃಢೀಕರಣ ವ್ಯವಸ್ಥೆಯಿದೆ. ಅದನ್ನೂ ಬಳಸಿಕೊಳ್ಳಿ. ಇದಕ್ಕಾಗಿ, ಸೆಟ್ಟಿಂಗ್ಸ್ ವಿಭಾಗಕ್ಕೆ ಹೋಗಿ ‘ಸೆಕ್ಯುರಿಟಿ’ ಕ್ಲಿಕ್ ಮಾಡಿ, Two-Factor Authentication ಎಂಬುದನ್ನು ಒತ್ತಿ, ಆಥೆಂಟಿಕೇಶನ್ ಆ್ಯಪ್ ಅಥವಾ ಎಸ್ಎಂಎಸ್ ಮೂಲಕ ಎರಡನೇ ಹಂತದ ದೃಢೀಕರಣಕ್ಕೆ ನೀವು ಆಯ್ಕೆ ಮಾಡಿಕೊಳ್ಳಬಹುದು.

My Article Published in Prajavani on 14 Aug 2020

LEAVE A REPLY

Please enter your comment!
Please enter your name here