ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಜನವರಿ 20, 2014)
ಸಾಮಾಜಿಕ ಜಾಲ ತಾಣಗಳಲ್ಲಿ ಯಾರ್ಯಾರೋ ಫ್ರೆಂಡ್ ಆಗ್ತಾರೆ, ದೂರದಲ್ಲೆಲ್ಲೋ ಇದ್ದವರು ಆತ್ಮೀಯರಾಗಿಬಿಡುತ್ತಾರೆ, ನಿಮ್ಮ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಾರೆ, ಒಂದೊಳ್ಳೆಯ ಚರ್ಚೆ ನಡೆಯುತ್ತದೆ. ಸಮಾಜದ ಆಗುಹೋಗುಗಳ ಬಗ್ಗೆ, ಒಳಿತು ಕೆಡುಕುಗಳ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತದೆ ಮತ್ತು ಅಲ್ಲೊಂದು ಅವಾಸ್ತವಿಕ ಸಾಮಾಜಿಕ ಜಗತ್ತು ಸೃಷ್ಟಿಯಾಗಿರುತ್ತದೆ.
ಇಷ್ಟೆಲ್ಲಾ ಆಗುವ ಹೊತ್ತಿಗೆ, ಯಾವಾಗ ಫೋಟೋಗಳನ್ನೂ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಆಯ್ಕೆ ಬಂದಿತೋ, ಆಗಿನಿಂದ ಫೇಸ್‌ಬುಕ್ ಬಳಕೆದಾರರದು ಒಂದೇ ವೇದನೆ, ರೋದನೆ… ಫೋಟೋಗಳಿಗೆ ಟ್ಯಾಗ್ ಮಾಡಿದರೆ ಜೋಕೆ ಎಂಬ ಸಾರಾಂಶವುಳ್ಳ ಎಚ್ಚರಿಕೆ. ಈ ಎಚ್ಚರಿಕೆ ಸಾತ್ವಿಕವಾಗಿಯೂ ಇರಬಹುದು, ವ್ಯಂಗ್ಯವಾಗಿಯೂ ಇರಬಹುದು, ರೋಷಭರಿತವಾಗಿಯೂ ಇರಬಹುದು.
ಕಾರಣವಿಷ್ಟೆ. ಯಾರಾದರೂ ತಮ್ಮ ಟೈಮ್‌ಲೈನ್‌ನಲ್ಲಿ ತಮಗಿಷ್ಟವಾದ ಫೋಟೋ ಅಪ್‌ಲೋಡ್ ಮಾಡುತ್ತಾರೆ. ಅಷ್ಟೇ ಆದರೆ ಸುಮ್ಮನಿರಬಹುದಿತ್ತು. ಆದರೆ, ಆ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗಲೇ, “ನಿಮ್ಮ ಮಿತ್ರರನ್ನು ಟ್ಯಾಗ್ ಮಾಡಿ” ಎನ್ನುವ ಆಯ್ಕೆಯೊಂದನ್ನು ಒತ್ತಿ, ಫ್ರೆಂಡ್ಸ್ ಪಟ್ಟಿಯಲ್ಲಿರುವ ಹಲವಾರು ಹೆಸರುಗಳನ್ನು ಸೇರಿಸುತ್ತಾ ಹೋಗುತ್ತಾರೆ.
ಇದರ ಬಗ್ಗೆ ಒಂದು ನೋಟಿಫಿಕೇಶನ್ (ಸೂಚನಾ ಸಂದೇಶ) ಆಯಾ ಹೆಸರಿನವರಿಗೆ ಹೋಗುತ್ತದೆ. ಅಷ್ಟೇ ಆದರೂ ತೊಂದರೆಯಿರಲಿಲ್ಲ. ಅವರ ಸ್ನೇಹಿತರು ಸಾವಿರ ಸಾವಿರ ಸಂಖ್ಯೆಯಲ್ಲಿ ಆ ಫೋಟೋ ಲೈಕ್ ಮಾಡಿದರೆ, ಕಾಮೆಂಟ್ ಮಾಡಿದರೆ, ಬೈದಾಡಿದರೆ… ಹೊಗಳಿದರೆ… ಎಲ್ಲದಕ್ಕೂ ನೋಟಿಫಿಕೇಶನ್ ಬರುತ್ತಲೇ ಇರುತ್ತವೆ! ಮೊಬೈಲ್‌ನಲ್ಲಿ ಫೇಸ್‌ಬುಕ್ ಲಾಗಿನ್ ಆಗಿದ್ದರಂತೂ ಫೇಸ್‌ಬುಕ್ ಸೂಚನಾ ಸಂದೇಶ ಬಂತೆಂಬ ಧ್ವನಿ ಪದೇ ಪದೇ ಗುಂಯ್‌ಗುಡುತ್ತಲೇ ಇರುತ್ತದೆ. ಕಚೇರಿಯಲ್ಲಿದ್ದಾಗ ಇದರಷ್ಟು ಕಿರಿಕಿರಿ ಬೇರೆ ಇರಲಾರದು. ಸಂಬಂಧವೇ ಇಲ್ಲದ ಫೋಟೋಗಳಿಗೆ ಟ್ಯಾಗ್ ಆಗಿದ್ದನ್ನು ನೋಡಿದಾಗ ಮನಸ್ಸು ಆಕ್ರೋಶಿತವಾಗುತ್ತದೆ, ವಿಶೇಷವಾಗಿ ಮಿತ್ರವರ್ಗದ ಸಂಖ್ಯೆ ಹೆಚ್ಚಿರುವ ಫೇಸ್‌ಬುಕ್ ಬಳಕೆದಾರರಿಗೆ.
ಈ ‘ತಾಗಿಸುವ’ ಪ್ರಕ್ರಿಯೆಯಿಂದಾಗಿಯೇ ಹಲವು ‘ಫೇಸ್‌ಬುಕ್’ ಸ್ನೇಹಗಳು ಮುರಿದುಬಿದ್ದದ್ದೂ ಇವೆ ಎಂದರೆ ಖಂಡಿತಾ ಉತ್ಪ್ರೇಕ್ಷೆಯಾಗಲಾರದು. ಫೇಸ್‌ಬುಕ್ಕಿಗರ ಮೊರೆಗೆ ಓಗೊಟ್ಟಿರುವ ಫೇಸ್‌ಬುಕ್, ಟ್ಯಾಗ್ ಮಾಡದಂತೆ ಪೂರ್ತಿಯಾಗಿ ತಡೆಯುವ ಆಯುಧ ನೀಡಿಲ್ಲವಾದರೂ, ಟ್ಯಾಗ್ ಮಾಡುವವರಿಗೆ ಸುಲಭವಾಗಿ ಶಾಸ್ತಿ ಮಾಡುವ ಆಯ್ಕೆಯೊಂದನ್ನು ತೀರಾ ಇತ್ತೀಚೆಗೆ ನೀಡಿದೆ.
ಮೊದಲು ನೀವು ಮಾಡಬೇಕಾದದ್ದೆಂದರೆ, ಫೇಸ್‌ಬುಕ್‌ನ ಸೆಟ್ಟಿಂಗ್ಸ್‌ನಲ್ಲಿ, ಪ್ರೈವೆಸಿ ಸೆಟ್ಟಿಂಗ್ಸ್ ಎಂಬಲ್ಲಿ ಹೋಗಿ. ಎಡಭಾಗದಲ್ಲಿ Timeline and Tagging ಅಂತ ಇರುತ್ತದೆ. ಅದರಲ್ಲಿ ಸಾಕಷ್ಟು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. Who can add things to my timeline? ಎಂಬುದರ ಅಡಿ, ಯಾರು ನಿಮ್ಮ ಟೈಮ್‌ಲೈನ್‌ಗೆ ಪೋಸ್ಟ್ ಮಾಡಬಹುದು ಅಂತ ಇರುವಲ್ಲಿ “Only Me” ಅಥವಾ “Friends” ಆಯ್ಕೆ ಮಾಡಿ. ಎರಡನೆಯದು, ಈ ಪೋಸ್ಟನ್ನು ರಿವ್ಯೂ ಮಾಡಬೇಕೇ ಎಂಬ ಆಯ್ಕೆ. ಅದನ್ನು “ಆನ್” ಇರುವಂತೆ ನೋಡಿಕೊಳ್ಳಿ. ಅಲ್ಲೇ ಕೆಳಗೆ, ‘ಜನ ಟ್ಯಾಗ್ ಮಾಡಿದರೆ ಹೇಗೆ ನಿಭಾಯಿಸಲಿ’ ಎಂಬ ಶೀರ್ಷಿಕೆಯಲ್ಲಿ, ಫೇಸ್‌ಬುಕ್‌ನಲ್ಲಿ ನಿಮ್ಮ ಹೆಸರಿನ ಟ್ಯಾಗ್ ಕಾಣಿಸಿಕೊಳ್ಳುವ ಮೊದಲು ಮರುವಿಮರ್ಶಿಸುವ (review) ಆಯ್ಕೆಯನ್ನು ‘ON’ ಮಾಡಿಕೊಳ್ಳಿ. ಇಷ್ಟು ಪೂರ್ವ ತಯಾರಿ.
ಈಗ, ನಿಮ್ಮನ್ನು ಯಾವುದೋ ಫೋಟೋಗೆ ತಾಗಿಸಿದ್ದಾರೆ (ಟ್ಯಾಗ್ ಮಾಡಿದ್ದಾರೆ) ಅಂತ ನಿಮಗೆ ಸೂಚನೆ ಬಂದೇ ಬರುತ್ತದೆ. ಆ ಸೂಚನಾ ಸಂದೇಶವನ್ನು ಕ್ಲಿಕ್ ಮಾಡಿದರೆ ನೇರವಾಗಿ ಟೈಮ್‌ಲೈನ್ ಮರುಪರಿಶೀಲಿಸುವ ಆಯ್ಕೆ ದೊರೆಯುತ್ತದೆ. ಅಲ್ಲಿ ಕಾಣಿಸುವ ಎರಡು ಬಟನ್‌ಗಳಲ್ಲಿ ‘Hide’ ಒತ್ತಿದರೆ, ಈ ಚಿತ್ರವು ನಿಮ್ಮ ಟೈಮ್‌ಲೈನ್‌ನಿಂದ (ಟೈಮ್‌ಲೈನ್ ಎಂದರೆ, ನಿಮ್ಮದೇ ವಾಲ್, ನೀವು ಏನನ್ನು ಪೋಸ್ಟ್ ಮಾಡುತ್ತೀರೋ, ಅವೆಲ್ಲವೂ ಕಾಣಿಸಿಕೊಳ್ಳುವ ಸ್ಥಳ) ಮರೆಯಾಗುತ್ತದೆ. ಬೇರೆಯವರಿಗೂ ಯಾರಿಗೂ ಕಾಣಿಸುವುದಿಲ್ಲ. Hide ಮಾಡಿದ ತಕ್ಷಣ Report/Remove Tag ಎಂಬ ಕೊಂಡಿಯೊಂದು ಗೋಚರಿಸುತ್ತದೆ.
ನೀವು ಕರುಣಾಮಯಿಯಾದರೆ, ಮೊದಲ ಆಯ್ಕೆ (I want to remove this tag) ಕ್ಲಿಕ್ ಮಾಡಿ ಸುಮ್ಮನಿರಬಹುದು. ಅದಕ್ಕೆ ಬರುವ ಯಾವುದೇ ಲೈಕ್‌ಗಳು ಅಥವಾ ಕಾಮೆಂಟ್‌ಗಳ ಬಗ್ಗೆ ನೋಟಿಫಿಕೇಶನ್ ನಿಮ್ಮ ಬಳಿ ಸುಳಿಯುವುದಿಲ್ಲ. ಕಂಟಿನ್ಯೂ ಅಂತ ಒತ್ತಿದರೆ, ಮತ್ತೆ ಮೂರು ಆಯ್ಕೆಗಳು ದೊರೆಯುತ್ತವೆ – ಟ್ಯಾಗ್ ತೆಗೆಯುವ, ಈ ಪೋಸ್ಟನ್ನು ತೆಗೆಯಲು ನಿಮ್ಮ ಸ್ನೇಹಿತರಿಗೆ ಸೂಚನೆ ನೀಡುವ ಮತ್ತು ನೇರವಾಗಿ ಬ್ಲಾಕ್ ಮಾಡುವ ಆಯ್ಕೆಗಳವು. ಬೇಕಾದುದನ್ನು ಆಯ್ದುಕೊಳ್ಳಿ.
ಮೇಲೆ ಹೇಳಿದ ಮೊದಲ ಆಯ್ಕೆಯ ಬಳಿಕ, ಉಳಿದವು ನಿಜಕ್ಕೂ ನಿಮಗೆ ಸಿಕ್ಕಾಪಟ್ಟೆ ಕೋಪ ಬಂದಿದ್ದರೆ ಪ್ರಯೋಗಿಸಲು ಇರುವಂಥವು. ಕಿರಿಕಿರಿಯುಂಟು ಮಾಡುವ, ಅಸಭ್ಯ, ದ್ವೇಷಪೂರಿತ, ಹಾನಿಕಾರಕ ಫೋಟೋಗಳ ಬಗ್ಗೆ ನೇರವಾಗಿ ಫೇಸ್‌ಬುಕ್‌ಗೆ ಸುಳಿವು ನೀಡುವುದಕ್ಕಾಗಿಯೇ ಇವು ಇವೆ. ಅವುಗಳನ್ನು ಕ್ಲಿಕ್ ಮಾಡಿದರೆ, ಫೇಸ್‌ಬುಕ್ಕೇ ಅಂತಹಾ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಗಳೂ ಇವೆ.
ಟ್ಯಾಗ್ ಮಾಡದಂತೆ ತಡೆಯುವ ಯಾವುದೇ ಆಯುಧವನ್ನು ಫೇಸ್‌ಬುಕ್ ಇನ್ನೂ ಕೊಟ್ಟಿಲ್ಲವಾದರೂ, ಟ್ಯಾಗ್ ಮಾಡಿದ ವ್ಯಕ್ತಿಗೆ ನೇರವಾಗಿ ಮನವಿ ಮಾಡುವ, ಎಚ್ಚರಿಕೆ ನೀಡುವ ಆಯ್ಕೆ ದೊರೆತಿದೆ.