ನಾವೇಕೆ ಮನುಷ್ಯರನ್ನು ಪ್ರೀತಿಸಬೇಕು?

6
1211

ಹೌದಲ್ವಾ… ಈ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀವಾ? ಮನುಷ್ಯರನ್ನು ಬಿಟ್ಟು ಪ್ರಾಣಿಗಳನ್ನು ಪ್ರೀತ್ಸೋದಾ ಅಂತ ಕೆಲವರು ಕೇಳಬಹುದು. ಅದಿರ್ಲಿ, ಮನುಷ್ಯನ ಸಂಬಂಧಗಳ ಬಗ್ಗೆ ಒಂದಷ್ಟು ಮಾತು. ಪ್ರೇಮದ ಬಲೆಯೋ, ಮಾತೃವಾತ್ಸಲ್ಯವೋ, ಸಹೋದರತೆಯ ಪ್ರೀತಿಯೋ, ಮೈತ್ರಿಯ ಆತ್ಮೀಯತೆಯೋ… ಇವೆಲ್ಲವೂ ಮನುಷ್ಯ-ಮನುಷ್ಯರ ನಡುವಣ ಪ್ರೀತಿಗೆ ಹೇತುವಾಗುತ್ತದೆ ಎಂಬುದು ಹಾಲಿನಷ್ಟೇ ಬೆಳ್ಳಗಿನ ಸತ್ಯ.

ಈ ರೀತಿಯ ಯಾವುದೇ ಒಂದು ಅನುಬಂಧವನ್ನು, ಮಾನವೀಯ ಸಂಬಂಧವನ್ನು ಬೆಸೆಯುವ ಅತ್ಯಂತ ಸೂಕ್ಷ್ಮ ಎಳೆಗಳಲ್ಲಿ ಅತಿಮುಖ್ಯವಾದುದೆಂದರೆ ಮಾತು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅಂತ ಹಿರಿಯರು ಹೇಳಿದ್ದು ಬರೇ ಇದೇ ಕಾರಣಕ್ಕೆ. ಒಂದು ಮಾತಿನ ಮೇಲೆಯೇ ನಮ್ಮ ನಡುವಿನ ಸಂಬಂಧ ನಿಂತಿದೆ. ಇದು ಅತ್ಯಂತ ಪವಿತ್ರವೂ, ಕುಸುಮದಷ್ಟು ಕೋಮಲವೂ ಆದ ಬಂಧ.

ಪ್ರೀತಿ ಎಂಬುದು ಬರೇ ಇನ್‌ಕಮಿಂಗ್ ಎಂದಾದರೆ ಬದುಕಿಗೆ ಅರ್ಥವಿಲ್ಲ. ಔಟ್ ಗೋಯಿಂಗ್ ಕೂಡ ಇದ್ದರೆ, ಅಂದರೆ ಪ್ರೀತಿಯು ಕೊಟ್ಟು ತೆಗೆದುಕೊಳ್ಳುವಂತಿದ್ದರೆ ಅದಕ್ಕಿಂತ ಸುಮಧುರ ಸುಂದರ ಜೀವನ ಮತ್ತೊಂದಿಲ್ಲ.

ಮಾತು ಮನೆ ಕೆಡಿಸುತ್ತದೆ ಎಂಬುದು ಎಷ್ಟು ಸತ್ಯವೋ, ಮಾತು ಮನವನ್ನೂ ಕೆಡಿಸಬಲ್ಲುದು. ಈ ಪ್ರೀತಿ ಮತ್ತು ಮಾತು ಎಂಬುದು ಒಂದಕ್ಕೊಂದು ಪೂರಕವಾಗಿದ್ದರೆ ಬದುಕು ಚೆನ್ನ ಚೆನ್ನ. ಈ ಪ್ರೀತಿಯ ಬಂಧಕ್ಕೆ ಆಘಾತವಾಗುವುದು ಯಾವಾಗ? ಮಾತು ತಪ್ಪಿದಾಗ ಅಥವಾ ತಪ್ಪು ಮಾತು ನುಡಿದಾಗ! ಅಂದರೆ ಮಾತಿಗೂ ಮನಸಿಗೂ ನೇರಾನೇರ ಸಂಬಂಧ.

ಹೌದು. ಒಬ್ಬರ ಮೇಲೆ ಪೂರ್ತಿಯಾಗಿ ಪ್ರೀತಿಯ ಧಾರೆ ಎರೆಯುತ್ತೇವೆ. ಒಡಹುಟ್ಟಿದ ತಂಗಿ ಇಲ್ಲ ಅಂತ, ಪಕ್ಕದ ಮನೆಯವರೋ, ಅಥವಾ ಜತೆಯಲ್ಲಿ ಕೆಲಸ ಮಾಡುತ್ತಿರುವವರನ್ನೋ ತಂಗಿಯಾಗಿ ಸ್ವೀಕರಿಸಿ, ಅವರಿಗೆ ಬಂಧುವಾಗಿ, ಅಣ್ಣನಾಗಿ, ಮಮತೆಯನ್ನು ಧಾರೆಯೆರೆಯುತ್ತೇವೆ. ಅಂಥವರಿಗೆ ಪ್ರೀತಿ ತೋರಿಸದಿದ್ದರೂ ಪರವಾಗಿಲ್ಲ, ದ್ವೇಷ ಮಾಡಲು ಯಾವುದಾದರೂ ಕಾರಣಗಳಿರುತ್ತವೆಯೇ? ಖಂಡಿತಾ ಇರುವುದಿಲ್ಲ. ಹಾಗಿರುವುದರಿಂದ ಅವರಿಗೆ ನಮ್ಮ ಸೋದರ ಪ್ರೀತಿಯನ್ನು ಧಾರೆಯೆರೆಯುತ್ತೇವೆ.

ಅಂಥವರು ನಮ್ಮನ್ನೇ ಅನುಸರಿಸಬೇಕು, ನಾವು ಹೇಳಿದ್ದನ್ನೇ ಕೇಳಬೇಕು ಎಂಬ ಭಾವನೆ ಬಂದರೆ ಅದು ಪ್ರೀತಿಯಲ್ಲ, ಸ್ವಾರ್ಥ. ಅಂಥ ಭಾವನೆಯಿಲ್ಲದೆ, ಅವರು ನಮ್ಮವರು, ನಮ್ಮಂತೆಯೇ ಒಳ್ಳೆಯ ಹಾದಿಯಲ್ಲಿ ಮುಂದುವರಿಯಬೇಕು, ಜೀವನದಲ್ಲಿ ಮೇಲೆ ಬರಬೇಕು ಎಂಬ ಭಾವನೆಯೊಂದಿಗೆ ನಿಷ್ಕಳಂಕ ಪ್ರೀತಿಯನ್ನು ನೀಡಿದಾಗ ಅದಕ್ಕೆ ಅರ್ಹರಾದವರು ಇದರ ಹಿಂದಿನ ನಿಸ್ವಾರ್ಥ ಪ್ರೀತಿಯನ್ನು ಗುರುತಿಸಿದರೆ ಜೀವನವೇ ಸ್ವರ್ಗ.

ಆದರೆ ತಪ್ಪು ಹಾದಿ ತುಳಿದಾಗ ತಿದ್ದಿ ತಿಳಿಹೇಳುವುದನ್ನೇ ದಬ್ಬಾಳಿಕೆ, ಶೋಷಣೆ ಅಂತ ಅವರು ತಿಳಿದುಕೊಂಡರೆ? ವಿನಾಕಾರಣ ಕೋಪಿಸಿಕೊಂಡು, ಬೆನ್ನಿಗೆ ಚೂರಿ ಹಾಕಿದರೆ? ನಿನ್ನಿಂದಾಗಿ ನನ್ನ ಜೀವನ ನರಕವಾಯ್ತು ಅಂತ ವೃಥಾರೋಪ ಮಾಡಿದರೆ? ಬೇರೆಯವರ ಮಾತು ಕೇಳಿ ನನ್ನನ್ನು ತುಳಿಯಲು ನೋಡ್ತಾ ಇದ್ದೀಯಾ ಅಂತ ಕನಸು ಮನಸಿನಲ್ಲೂ ಯೋಚಿಸದ ಆರೋಪ ಮಾಡಿದರೆ? ನಿರ್ವ್ಯಾಜ, ನಿಷ್ಕಳಂಕ, ಫಲಾಪೇಕ್ಷೆಯಿಲ್ಲದ, ನಿಸ್ವಾರ್ಥ ಪ್ರೀತಿಯ ಹೊಳೆ ಹರಿಸಿದವರ ಪಾಡು ಯೋಚಿಸಿ ನೋಡಿ!

ಆದರೂ, ಏನೂ ತಪ್ಪು ಮಾಡದೇ ಇದ್ದಾಗ, ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ ಕೇಡು ಬಯಸದೇ ಇದ್ದರೂ, ‘ನನ್ನನ್ನು ತುಳಿಯಲು ನೋಡ್ತಾ ಇದ್ದೀಯಾ’ ಎಂಬ ಆರೋಪ ಬಂದಾಗ, ಮಾತು ಮೌನವಾಗುತ್ತದೆ, ಮನಸ್ಸು ಮುರಿಯುತ್ತದೆ, ಹೃದಯ ಭಾರವಾಗುತ್ತದೆ. ಈ ಸಂಬಂಧಗಳ ಬಗೆಗೇ ಒಂದು ರೀತಿಯ ಆತಂಕವೂ ಒಡಮೂಡುತ್ತದೆ.

ಯಾಕೋ ಇತ್ತೀಚೆಗೆ ನನ್ನ ಜೀವನದಲ್ಲಿ ನಡೆದ ಘಟನೆಯೊಂದು ನನ್ನನ್ನು ತೀರಾ ವಿಚಲಿತಗೊಳಿಸಿತ್ತು. ಕೆಲಸವಿಲ್ಲದೆ ಸುಮ್ಮನಿದ್ದಾಗ ಈ ಒಂದು ಯೋಚನಾ ಲಹರಿ.

ಹೌದು. ಜೀವನದ ಪ್ರತಿಯೊಂದು ಘಟನೆಯೂ ನನಗೆ ಕಲಿಸಿದ ಪಾಠ ಅಪಾರ. ಇದೂ ಒಂದು ಕನಸು, ಇದೂ ಒಂದು ಪಾಠ ಅಂತ ತಿಳ್ಕೊಂಡಿದ್ದೇನೆ. ಏನಂತೀರಿ?

6 COMMENTS

  1. ಅವಿ, ನಾವೇಕೆ ಮನುಷ್ಯರನ್ನು ಪ್ರೀತಿಸಬೇಕು? – ಪ್ರತಿಯೊಬ್ಬನಿಗೂ ಕಾಡಿರಬಹುದಾದ ಪ್ರಶ್ನೆ. ಆದರೆ ನಾವ್ಯಾಕೆ ಮನುಷ್ಯರನ್ನೇ ಪ್ರೀತಿಸಬೇಕು ? ಪ್ರೀತಿ ಮನುಷ್ಯ ಮಾತ್ರವಲ್ಲ, ಇಡೀ ಜೀವ ಸಂಕುಲವನ್ನೇ ಆವರಿಸಿರುವ ಗುಣ ವಿಶೇಷ. ಹಾಗಿದ್ದಾಗ ಅದಕ್ಕೆ ಭಾಜನವಾಗುವ ಜೀವ ಯಾವುದಾದರೇನು ? ಮನುಷ್ಯ ಮಾತ್ರರನ್ನು ಒಲುಮೆಗೆ ಈಡಾಗಿಸಿದಾಗ ಮನಸ್ಸು ಹಿಂತಿರುಗಿ ಅದನ್ನೇ ಕೇಳುತ್ತದೆ. ಆದರೆ ಪ್ರಾಣಿಯನ್ನೋ ಪ್ರಕೃತಿಯನ್ನೋ ಪ್ರೀತಿಸಿದಾಗ ಮನಸ್ಸು ಏನೂ ಕೇಳಲ್ಲ; ಆದರೂ ಆನಂದ ಎಂಬುದು ಹೊಳೆಯಾಗಿ ಹರಿದುಬರುತ್ತದೆ. ಮನುಷ್ಯನ ಚಂಚಲತೆ ಅವನನ್ನು ಸದಾ ಶುಭ್ರವಾಗಿರಲು ಬಿಡಲಾರದು ಅವೀ.. ನಿರೀಕ್ಷೆಯೇ ಇಲ್ಲದೆ ಪ್ರೀತಿಸುವ ಸಾಮರ್ಥ್ಯ ನಮಗಿದ್ದಾಲ್ಲಿ & ಅವರು ಏನೇ ಮಾಡಿದರೂ ತಡಕೊಂಬ ಸಂತ(ತೆ) ನಾವಾದಲ್ಲಿ ಮಾತ್ರ ಮಾನವರನ್ನು ಪ್ರೀತಿಸಬೇಕು ಅಂತ ನನ್ನ ಭಾವನೆ. ಪ್ರೀತಿಯ ಬಗ್ಗೆ ಬರೆಯುತ್ತಾ ಹೋದರೆ ಮೈಯೆಲ್ಲಾ ಕೈ …. ಈಗ ಇಷ್ಟು ಸಾಕು..

  2. ಶಮ… ಹೌದು. ಪ್ರೀತಿಗೆ ಜೀವಸಂಕುಲದ ಭೇದವಿಲ್ಲ. ನಿಸ್ವಾರ್ಥ ಭಾವದ ಪ್ರೀತಿಯಿದೆಯಲ್ಲ… ಅದು ಕೊಡುವಷ್ಟು ಸಂತೋಷ ಬೇರಾವುದರಿಂದಲೂ ಪಡೆಯಲು ಸಾಧ್ಯವಿಲ್ಲ ಅನ್ನೋದಂತೂ ನಿಜ. ಕೆಲವು ಬಾರಿ ನಮಗೆ ಅದು ಬೂಮರಾಂಗ್‌ನಂತೆ ಬಡಿದಾಗ ನೋವಾಗೋದು ಕೂಡ ಸಹಜ.
    ಧನ್ಯವಾದ

  3. ಸುಶ್ರುತ ಅವರೆ,
    ಪ್ರೀತಿಯ ಮೇಲಲ್ಲವೇ ಜೀವನ ನಿಂತಿರೋದು…
    ನಮ್ಮ ನಿಮ್ಮ ನಂಬಿಕೆಗೆ ಎಂದಿಗೂ ಘಾಸಿಯಾಗದಿರಲಿ…

  4. ಅವಿ,
    ಪ್ರೀತಿ, ನನ್ನದೂ ಗಟ್ಟಿ ನಂಬಿಕೆಯ ಶಕ್ತಿ. ಅದಿಲ್ಲದೆ ಬದುಕು ಅಸಹನೀಯವಾಗುತ್ತಿತ್ತು. ನಾವೆಲ್ಲ ನಿಂತಿರೋದು ಅದೇ ಶಕ್ತಿ ಮೇಲೆ. ನಮ್ಮ ಹೆತ್ತವರ, ಒಡಹುಟ್ಟಿದವರ, ಜೊತೆಗಾರರಾದವರ ಮೇಲಿನ ಪ್ರೀತಿಯಿಂದ ಮತ್ತು ನಮ್ಮ ಮೇಲಿನ ಪ್ರೀತಿಯಿಂದಲೂ.

    ನಿನ್ನನ್ನು ವಿಚಲಿತಗೊಳಿಸಿದ ಘಟನೆಯನ್ನು ಅಳಿಸಿಹಾಕಲಾಗದು. ಆದರೆ, ಅದರ ಘಾತವನ್ನು ಕಾಲ ಮರೆಸೀತು. ಅಂತಹ ಇನ್ನಷ್ಟು ಘಟನೆಗಳು ನಿನ್ನ ಜೀವನದಲ್ಲಿ ಬಾರದಿರಲಿ ಎನ್ನುವ ಹಾರೈಕೆಯೊಂದಿಗೆ, ಹೊಸವರ್ಷಕ್ಕೂ ಶುಭಾಶಯಗಳು; ನಿನಗೂ ನಿನ್ನ ಮನೆಯವರೆಲ್ಲರಿಗೂ.

  5. ಜ್ಯೋತಿ ಅವರೆ,
    ಕಾಲವೇ ಎಲ್ಲ ನೋವನ್ನೂ ಮರೆಸುತ್ತದೆ ಎಂಬುದು ದಿಟವಾದರೂ, ಆಗೊಮ್ಮೆ ಈಗೊಮ್ಮೆ ಅಂಥದ್ದು ಕಾಡುತ್ತಿರುತ್ತದೆ. ಬಹುಶಃ ನಮಗೆ ಮುಂದಿನ ಹೆಜ್ಜೆ ಇಡಲು ಎಚ್ಚರಿಕೆಯ ಕರೆಗಂಟೆಯಂತೆ ಅಂತ ತಿಳಿದುಕೊಳ್ತೀನಿ.
    ನಿಮ್ಮ ಹಾರೈಕೆಗೆ ಧನ್ಯವಾದ.

LEAVE A REPLY

Please enter your comment!
Please enter your name here