ಟೆಕ್-ಟ್ರಿಕ್ಸ್: ಕಂಪ್ಯೂಟರಿನಲ್ಲಿ WhatsApp: ಹೇಗೆ, ಏನು, ಎತ್ತ…

0
706

WhatsApp Webಕಳೆದ ವಾರ ವಾಟ್ಸ್ಆ್ಯಪ್ ಎಂಬ ಮೆಸೆಂಜರ್ ಸೇವೆ ಕಂಪ್ಯೂಟರಿನಲ್ಲೂ ಕೆಲಸ ಮಾಡುತ್ತದೆ ಎಂಬ ಹೊಸ ಸಿಸ್ಟಂ ಬಿಡುಗಡೆಯು ಸಾಕಷ್ಟು ಸದ್ದು ಮಾಡಿತು. ಎಲ್ಲರೂ ಮೊದಲಾಗಿ ತಿಳಿದುಕೊಳ್ಳಬೇಕಾದ ಅಂಶವೆಂದರೆ, ಮೊಬೈಲ್‌ನಲ್ಲಿ ಇಂಟರ್ನೆಟ್ ಸಂಪರ್ಕ, ಮತ್ತು ವಾಟ್ಸ್ಆ್ಯಪ್ ಮೆಸೆಂಜರ್ ಆನ್ ಆಗಿದ್ದರೆ ಮಾತ್ರವೇ ಕಂಪ್ಯೂಟರಿನಲ್ಲಿಯೂ ಇದು ಕೆಲಸ ಮಾಡುತ್ತದೆ. ಎರಡೂ ಕಡೆ ಇಂಟರ್ನೆಟ್ ಬೇಕಾಗುತ್ತದೆ. ಇದು ಫೇಸ್‌ಬುಕ್ ಮೆಸೆಂಜರ್, ಗೂಗಲ್ ಹ್ಯಾಂಗೌಟ್, ಸ್ಕೈಪ್ ಮುಂತಾದವುಗಳಂತೆ ಪ್ರತ್ಯೇಕ ವ್ಯವಸ್ಥೆಯಲ್ಲ. ಕಚೇರಿಯಲ್ಲೋ, ಮನೆಯಲ್ಲೋ ಕಂಪ್ಯೂಟರಲ್ಲಿ ಕೆಲಸ ಮಾಡುತ್ತಿರುವಾಗ ವಾಟ್ಸ್ಆ್ಯಪ್ ಸಂದೇಶಗಳಿಗೆ ಉತ್ತರಿಸಲು ಕಂಪ್ಯೂಟರನ್ನೇ ಬಳಸಬಹುದು ಎಂಬುದು ಮತ್ತು ಫೋಟೋ/ವೀಡಿಯೋಗಳನ್ನು ನಮ್ಮ ಕಂಪ್ಯೂಟರಿಗೆ ಸೇವ್ ಮಾಡಿಕೊಂಡು, ಮೊಬೈಲ್‌ನಿಂದ ಅಳಿಸಬಹುದು ಎಂಬುದಷ್ಟೇ ಇದರ ಅನುಕೂಲ. ಕಂಪ್ಯೂಟರಿನಲ್ಲಿ ವಾಟ್ಸ್ಆ್ಯಪ್ ಪ್ರೊಫೈಲ್ ಚಿತ್ರ ಬದಲಾಯಿಸುವುದಾಗಲೀ, ಸಂಪರ್ಕ ಸಂಖ್ಯೆ ಎಡಿಟ್ ಮಾಡುವುದಾಗಲೀ ಸಾಧ್ಯವಿಲ್ಲ. ಮತ್ತೊಂದು ವಿಚಾರವೆಂದರೆ, ಗೂಗಲ್‌ನ ಕ್ರೋಮ್ ಬ್ರೌಸರ್‌ನಲ್ಲಿ ಮಾತ್ರವೇ ಇದು ವರ್ಕ್ ಆಗುತ್ತದೆ. ಅಲ್ಲದೆ, ಸದ್ಯಕ್ಕೆ ಐಫೋನ್ ಬಳಕೆದಾರರಿಗೆ ಈ ವ್ಯವಸ್ಥೆ ಲಭ್ಯ ಇರುವುದಿಲ್ಲ.

ಹಾಗಿದ್ದರೆ ಇದನ್ನು ಹೇಗೆ ಸೆಟ್ ಮಾಡುವುದು? ಮೊದಲನೆಯದಾಗಿ ನಿಮ್ಮ ವಾಟ್ಸ್ಆ್ಯಪ್ ಅಪ್‌ಡೇಟ್ ಆಗಿರಬೇಕು (2.11.505 ಆವೃತ್ತಿ). ಇದನ್ನು ಪರೀಕ್ಷಿಸಲು, ವಾಟ್ಸ್ಆ್ಯಪ್‌ನ ಸೆಟ್ಟಿಂಗ್ಸ್ (ಬಲ ಮೇಲ್ತುದಿಯಲ್ಲಿರುವ ಮೂರು ಚುಕ್ಕೆಗಳು) ಎಂಬಲ್ಲಿ, Help ಎಂಬಲ್ಲಿ ಹೋಗಿ, About ನೋಡಿದರೆ ತಿಳಿಯುತ್ತದೆ. ಇಲ್ಲದಿದ್ದರೆ ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್‌ಡೇಟ್ ಮಾಡಿಕೊಳ್ಳಿ. ನಂತರ, ಕಂಪ್ಯೂಟರಿನಲ್ಲಿ web.whatsapp.com ಎಂಬಲ್ಲಿ ಹೋಗಿ. ಅಲ್ಲಿ ಚೌಕಾಕಾರದ ಕಪ್ಪುಬಿಳುಪಿನ ಕ್ಯುಆರ್ ಕೋಡ್ ಇರುವ ಚಿತ್ರದ ಬಾಕ್ಸ್ ಇರುತ್ತದೆ. ಈಗ ಫೋನ್‌ನಲ್ಲಿ ವಾಟ್ಸ್ಆ್ಯಪ್ ತೆರೆದು, ಸೆಟ್ಟಿಂಗ್ಸ್‌ನ ಮೂರು ಚುಕ್ಕೆಗಳನ್ನು ಒತ್ತಿ, ಡ್ರಾಪ್‌ಡೌನ್ ಮೆನುವಿನಲ್ಲಿ ಕಾಣಿಸುವ WhatsApp Web ಕ್ಲಿಕ್ ಮಾಡಿ. (ಚಿತ್ರ ನೋಡಿ) ವಾಟ್ಸ್ಆ್ಯಪ್ ಮೂಲಕ ಕ್ಯಾಮೆರಾ ಓಪನ್ ಆದಾಗ, ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ಕಾಣಿಸುವ ಕ್ಯುಆರ್ ಕೋಡ್ ಮೇಲೆ ಕ್ಯಾಮೆರಾ ಹಿಡಿಯಿರಿ. ಸ್ಕ್ಯಾನ್ ಆದ ಬಳಿಕ ಕಂಪ್ಯೂಟರ್ ಹಾಗೂ ಮೊಬೈಲ್ ಸಂಪರ್ಕವಾದ ಸೂಚನೆ ನಿಮಗೆ ದೊರೆಯುತ್ತದೆ. ಅಷ್ಟೆ. ಕಂಪ್ಯೂಟರಿನಲ್ಲೇ ನೀವು ವಾಟ್ಸ್ಆ್ಯಪ್ ಸಂಭಾಷಣೆ ಮುಂದುವರಿಸಬಹುದು. ಮೊಬೈಲ್‌ನಲ್ಲಿ ಅದು ತನ್ನಿಂತಾನೇ ಸಿಂಕ್ರನೈಸ್ ಆಗುತ್ತದೆ.
-‘ಅವೀ’

LEAVE A REPLY

Please enter your comment!
Please enter your name here