ಜಯಲಲಿತಾ ಜೈಲಿಗೆ; ನಮಗೆ, ನಮ್ಮ ರಾಜಕಾರಣಿಗಳಿಗೆ ಪಾಠ ಇದೆ…

0
744

ಜಯಲಲಿತಾ ಜೈಲಿಗೆ ಹೋಗಿದ್ದು ಬಿಸಿಬಿಸಿ ಚರ್ಚೆಯ ಸಂಗತಿ; ಅದು ಕೂಡ ತಮಿಳುವಿರೋಧಿ ಸೆಂಟಿಮೆಂಟುಗಳು ಜಾಸ್ತಿ ಇರೋ ಬೆಂಗಳೂರಲ್ಲಿ… ಇಂತಹಾ ಪರಿಸ್ಥಿತಿಯಲ್ಲಿ ತಮಿಳುನಾಡಿನಿಂದ ಅದೆಷ್ಟು ಜನ ಇಲ್ಲಿ ಬಂದರು, ಜಯಲಲಿತಾರಿಗಾಗಿ ಅವರ ರಾಜ್ಯದಲ್ಲಿ ಅದೆಷ್ಟು ಮಂದಿ ಅತ್ತರು, ಅದೆಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡರು ಹಾಗೂ ಹೃದಯಾಘಾತದಿಂದ ಸಾವನ್ನಪ್ಪಿದರು! ಯಾಕೆ ಹೀಗೆ, ಆಕೆ ಏನು ಮಾಡಿದ್ದರು… ನಮ್ಮ ರಾಜಕಾರಣಿಗಳಿಗಿಂತ ಜಯಾ ಹೇಗೆ ಭಿನ್ನ?

ಈ ಪ್ರಸಂಗದಿಂದ ಎರಡು ಸಂದೇಶಗಳಿವೆ. ಒಂದನೆಯದು ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆ. ಪ್ರಬಲವಾದ ಪ್ರಾದೇಶಿಕ ಪಕ್ಷವಿದ್ದರೆ, ಖಂಡಿತವಾಗಿ ನಾಡು ಏಳಿಗೆಯಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ತಮಿಳುನಾಡು. ತಮ್ಮ ಏಳಿಗೆಗೆ ನಿಜವಾಗಿಯೂ ಕಂಕಣಬದ್ಧರಾಗಿ ದುಡಿದು, ಜನಸೇವೆ ಎಂಬ ಪದಕ್ಕೆ ಅರ್ಥ ಕಲ್ಪಿಸಿಕೊಟ್ಟ ರಾಜಕಾರಣಿಯನ್ನು ಜನರು ಕೂಡ ಅಷ್ಟೇ ಇಷ್ಟ ಪಡುತ್ತಾರೆ, ಪ್ರೀತಿ ಮಾಡುತ್ತಾರೆ, ಆರಾಧಿಸುತ್ತಾರೆ, ಅವರಿಗಾಗಿ ಕಣ್ಣೀರು ಸುರಿಸುತ್ತಾರೆ.

ಎರಡನೆಯ ಸಂದೇಶ… ನಮಗೆ…!

ನಮ್ಮ ರಾಜಕಾರಣಿಗಳಿಗೆ. ಜಯಲಲಿತಾ ಅದೆಷ್ಟು ಭ್ರಷ್ಟಾಚಾರ ಮಾಡಿದ್ದಾರೋ, ಹಣ ಮಾಡಿದ್ದಾರೋ ಎಂಬುದು ನಮಗೆ ಗೊತ್ತಿಲ್ಲ. ಆದರೆ, ತಮಿಳುನಾಡಲ್ಲೇ ಆರು ವರ್ಷ ಇದ್ದ ನನಗೆ ಅಲ್ಲಿ ಕಂಡಿದ್ದು ಜನರ ಕಲ್ಯಾಣ. Alternate ಆಗಿ ಜಯಲಲಿತಾ ಹಾಗೂ ಕರುಣಾನಿಧಿ ಸರಕಾರಗಳು ಅಲ್ಲಿ ಅಧಿಕಾರಕ್ಕೇರುತ್ತಿದ್ದವು. ಅಲ್ಲಿ ಜನರಿಗೆ ಏನೆಲ್ಲಾ ಸಿಕ್ಕುತ್ತಿತ್ತು! ಸಿರಿವಂತರು, ಬಡವರು ಎಂಬ ಭೇದವಿಲ್ಲದೆ ಎಲ್ಲರಿಗೂ ಒಂದು ರೂಪಾಯಿ ಅಕ್ಕಿ, ಪಡಿತರದಲ್ಲೇ ಸಕ್ಕರೆ, ಗೋಧಿ, ಎಣ್ಣೆ, ಸೋಪು, ಮುಂತಾದ ಜೀವನಾವಶ್ಯಕವಾದ ಬಹುತೇಕ ವಸ್ತುಗಳು… ಬಡವರಿಗೆ ಹೆಚ್ಚು ಪ್ರಮಾಣದಲ್ಲಿ ಸಿಗುತ್ತಿತ್ತು. ಪೊಂಗಲ್ ಹಬ್ಬಕ್ಕೆ ಎಲ್ಲ ಮನೆಗಳಿಗೆ ಹಬ್ಬ ಮಾಡಲು ಬೇಕಾದ ಆಹಾರ ಸಾಮಗ್ರಿಗಳ ಕೊಡುಗೆ; ಟಿವಿ, ಲ್ಯಾಪ್‌ಟಾಪ್, ಗ್ರೈಂಡರ್, ಮಿಕ್ಸರ್, ಹಸುಗಳು, ಮಾಂಗಲ್ಯಭಾಗ್ಯ… ಒಂದೇ ಎರಡೇ! ಅಲ್ಲಿನ ಬಸ್ಸು ಪ್ರಯಾಣ ದರ ನೋಡಿ, ವಿದ್ಯುತ್ ದರ ನೋಡಿ…. ಎಲ್ಲವೂ ತೀರಾ ಕಡಿಮೆ. ಸರಕಾರದ ಖಜಾನೆಯಿಂದಲೇ… ಅಂದರೆ ಜನರು ಕಟ್ಟಿದ ತೆರಿಗೆ ಹಣ ಜನರಿಗೇ ಹೋಗುತ್ತಿತ್ತು.

ಅದರಲ್ಲಿ ರಾಜಕಾರಣಿಗಳು ಏನನ್ನೂ ನುಂಗುತ್ತಿರಲೇ ಇಲ್ಲ ಎಂದೇನಲ್ಲ. ಆದರೆ ನಮ್ಮವರಿಗೆ ಹೋಲಿಸಿದರೆ, ಜನರಿಗೆ ಕೂಡ ಭರ್ಜರಿ ಪ್ರಮಾಣದಲ್ಲಿ ಫಲ ಉಣಿಸುತ್ತಿದ್ದರು. ಕನಿಷ್ಠ ವೋಟು ಕೊಟ್ಟಿದ್ದಾರೆ ಮತ್ತು ಮುಂದೆಯೂ ಸಿಗಬೇಕೆಂಬ ಬದ್ಧತೆಯಾದರೂ ಇರುತ್ತದೆ ಅವರಲ್ಲಿ. ಇಲ್ಲಿನ ಜನ ನಾಯಕರನ್ನು ನೋಡಿ! ತಾವು ಮತ್ತು ತಮ್ಮ ಸುತ್ತಮುತ್ತಲಿನವರು ಮಾತ್ರ ಕೋಟಿ ಕೋಟಿ ಮಾಡುತ್ತಾರೆ. ಜನರಿಗೆ ಏನೂ ಇಲ್ಲ…. ಪಡಿತರ ಆಹಾರ ಧಾನ್ಯ ಯಾರಿಗೆ ಎಷ್ಟು ಸಿಗುತ್ತದೆ? ಅನ್ನಭಾಗ್ಯದ ಹಣ, ಮತ್ತು ಅಕ್ಕಿಯನ್ನು ನುಂಗುವವರನ್ನು ನೋಡಿದ್ದೇವೆ, ಕೇಳಿದ್ದೇವೆ. ಜನರ ಭೂಮಿಯನ್ನು ನುಂಗುತ್ತಿದ್ದಾರೆ, ಆದರೂ ಜೈಲು ಶಿಕ್ಷೆ ಆಗ್ತಿಲ್ಲ…

ಜಯಲಲಿತಾಗೆ ಬೇರೆ ರಾಜ್ಯದ ನ್ಯಾಯಾಲಯದ ಮೂಲಕವಾಗಿ ಶಿಕ್ಷೆಯಾಗಿದೆ. ಭ್ರಷ್ಟಾಚಾರ ಆರೋಪಗಳ ವಿಚಾರಣೆಗಳೆಲ್ಲವೂ ಬೇರೆ ರಾಜ್ಯಗಳಲ್ಲೇ ನಡೆದರೆ ಹೇಗಿರುತ್ತದೆ! ಯಾರು, ಎಷ್ಟು ಮಂದಿ ಜೈಲಿನಲ್ಲಿರುತ್ತಾರೆ? ಯೋಚಿಸಿ ನೋಡಿ!

LEAVE A REPLY

Please enter your comment!
Please enter your name here