ಚಾರ್ಲಿ ಚಾಪ್ಲಿನ್ನೂ… ಮಾಧ್ಯಮಗಳೂ…

6
1210

ಮಿತ್ರರೇ,
ಬೈಂದೂರು ಸಮೀಪದ ಒತ್ತಿನೆಣೆ ಕಡಲ ತೀರದಲ್ಲಿ ಸೋಮೇಶ್ವರ ದೇವಸ್ಥಾನದ ಎದುರು ಬಳಿ ಚಾರ್ಲಿ ಚಾಪ್ಲಿನ್ ಪ್ರತಿಮೆ ವಿವಾದ ಎಲ್ಲರಿಗೂ ತಿಳಿದಿದೆ. ದೇಶದಲ್ಲಿ, ಈ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಪತ್ರಿಕೆಗಳು, ಟಿವಿ ಚಾನೆಲುಗಳಿವೆ. ಆದರೂ ಈ ವಿಷಯದಲ್ಲಿ ಸತ್ಯಾಂಶ ಏನು ಎಂಬುದು ಜನರಿಗೆ ಇನ್ನೂ ಅಸ್ಪಷ್ಟವಾಗಿದೆ.

ದೇವಸ್ಥಾನದ ಎದುರೇ ಆ ಚಾಪ್ಲಿನ್ ಪ್ರತಿಮೆ ಯಾಕೆ ಸ್ಥಾಪಿಸಬೇಕು ಎಂದು ಸ್ಥಳೀಯರು ಅಡ್ಡಿಪಡಿಸಿದ್ದಾರೆ ಅಂತ ಒಂದು ವಾದ. ಆತ ಕ್ರಿಶ್ಚಿಯನ್. ಈ ಕಾರಣಕ್ಕೆ ನಮ್ಮ ದೇಶದಲ್ಲಿ ಆತನ ಪ್ರತಿಮೆ ಯಾಕೆ ಬೇಕು ಅಂತ ಮತ್ತೊಂದು ವಾದ. ಈ ವಿಷಯವನ್ನೇ ಮುಂದಿಟ್ಟು ಪತ್ರಿಕೆಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದವು.

ಸಿಆರ್‌ಝಡ್ ಪ್ರದೇಶದಲ್ಲಿ ಈ ಪ್ರತಿಮೆ ಸ್ಥಾಪಿಸಲು ನಿರ್ದೇಶಕ ಹೇಮಂತ್ ಹೆಗಡೆ ಜಿಲ್ಲಾಧಿಕಾರಿಯಿಂದ ಮೌಖಿಕ ಅನುಮತಿಯಷ್ಟೇ ಪಡೆದುಕೊಂಡಿದ್ದಾರೆ ಎಂದೂ ವರದಿಗಳು ತಿಳಿಸಿವೆ. ಒಂದು ಕೋಟಿ ಚಿತ್ರಕ್ಕೆ 35 ಲಕ್ಷ ರೂಪಾಯಿಯನ್ನು ಈ ಪ್ರತಿಮೆಗೇ ವ್ಯಯಿಸುತ್ತಾರೇಕೆ ಎಂಬುದು ಮತ್ತೊಂದು ಪ್ರಶ್ನೆ. ಇದು ಶಾಶ್ವತ ಪ್ರತಿಮೆಯಲ್ಲ, ಶೂಟಿಂಗ್ ಮಾಡಿದ ಬಳಿಕ ತೆಗೆಯಲಾಗುತ್ತದೆ ಎಂಬುದು ಇನ್ನೊಂದು ಮಾಹಿತಿ. ಸೋಮೇಶ್ವರದ ಇತಿಹಾಸ ಪ್ರಸಿದ್ಧ ದೇವಸ್ಥಾನದ ಎದುರು ಅದರ ಗೋಪುರಕ್ಕಿಂತ ಹೆಚ್ಚು ಎತ್ತರಕ್ಕೆ ಈ ಪ್ರತಿಮೆ ಸ್ಥಾಪಿಸಿ, ದೇವಳದ ಪಾವಿತ್ರ್ಯ ಹಾಳುಗೆಡಹಲಾಗುತ್ತದೆ ಎನ್ನುತ್ತದೆ ಮತ್ತೊಂದು ಮಾಹಿತಿ. ಅವರೇಕೆ ಮಸೀದಿ ಎದುರು ಅಥವಾ ಚರ್ಚ್ ಎದುರು ಇಂಥ ಪ್ರತಿಮೆ ಸ್ಥಾಪಿಸುವ ಧೈರ್ಯ ಮಾಡಲಿಲ್ಲ ಎಂಬುದು ಮತ್ತೊಂದು ಉಗ್ರ – ವಾದ.

ಟೈಮ್ಸ್ ಆಫ್ ಇಂಡಿಯಾ ವರದಿಹೀಗೆಲ್ಲ ಗಾಳಿ ಸುದ್ದಿಗಳಿರುವಾಗ, ಟೈಮ್ಸ್ ಆಫ್ ಇಂಡಿಯಾದ ದೆಹಲಿ ಆವೃತ್ತಿಯಲ್ಲಿ “ಕ್ರಿಶ್ಚಿಯನ್ ಚಾಪ್ಲಿನ್ ಮೇಲೆ ಬಿಜೆಪಿ ದಾಳಿ” ಎಂದು ಐದು ಕಾಲಂ ಲೀಡ್ ಸುದ್ದಿ ಪ್ರಕಟಿಸಿತು. ಮಂಗಳೂರು ಆವೃತ್ತಿಯಲ್ಲಿ “ಈ ಕಲ್ಚರ್ ಪೊಲೀಸಿಂಗ್‌ಗೆ ನಾಗರಿಕ ಸಮಾಜದ ಧಿಕ್ಕಾರ” ಎಂಬ ತಲೆಬರಹದೊಂದಿಗೆ ರಾಷ್ಟ್ರಮಟ್ಟದ ಸುದ್ದಿಯಾಯಿತು. ಹಿಂದೂ ತಾಲಿಬಾನ್‌ಗಳು, ಹಿಂದೂ ಜೋಕರ್‌ಗಳು, ಹಿಂದೂ ಮೂಲಭೂತವಾದಿಗಳು ಎಂದೆಲ್ಲಾ ದೊಡ್ಡ ಚರ್ಚೆಯೇ ನಡೆಯಿತು. ಬುದ್ಧಿವಂತರ ಜಿಲ್ಲೆ, ತಾಳುವಿಕೆಗೆ ಹೆಸರಾದವರ ತಾಣ, ಕರಾವಳಿಯ ಮಾನ ಹರಾಜಾಯಿತು.

ಇಷ್ಟೆಲ್ಲಾ ಆಗುವುದರಲ್ಲಿ ಮಾಧ್ಯಮಗಳ ಪಾತ್ರ ಎಷ್ಟು? ಸತ್ಯಾಂಶವೇನು? ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ಇದು ನಿಜಕ್ಕೂ ಪಬ್ಲಿಸಿಟಿ ಸ್ಟಂಟ್ ಆಗಿತ್ತೇ? ಪ್ರತಿಮೆ ಸ್ಥಾಪನೆಗೆ ಪ್ರಯತ್ನಿಸಿದ್ದು ಸಿಆರ್‌ಝಡ್ ಪ್ರದೇಶದಲ್ಲಿ ಆಗಿರುವುದರಿಂದ, ಇದರಲ್ಲಿ ತಮ್ಮ ತಪ್ಪು ಇರುವುದರಿಂದ ಹೇಮಂತ್ ಹೆಗಡೆ ಪೊಲೀಸರಿಗೆ ದೂರು ನೀಡಲಿಲ್ಲ ಎಂದು ಇಂದಿನ ಪತ್ರಿಕೆಗಳು ಹೇಳುತ್ತವೆ. ಪಬ್ಲಿಸಿಟಿಗಾಗಿ ಈ ರೀತಿ ಒಂದು ಸಭ್ಯ ಊರಿನ ಹೆಸರೇ ಹಾಳು ಮಾಡುವಷ್ಟರ ಮಟ್ಟಕ್ಕೆ ಇಳಿಯುವುದು (ಇಳಿದಿದ್ದರೆ) ಎಷ್ಟು ಸರಿ ಮತ್ತು ಇದಕ್ಕೆ ಮಾಧ್ಯಮಗಳು ಈ ರೀತಿ ಹಿಂದು-ಮುಂದು ನೋಡದೆ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಮಾಡುವುದು ಎಷ್ಟು ಸರಿ? ಆರಂಭಿಕ ವರದಿಗಳಲ್ಲಿ ಗೊಂದಲಗಳೇ ತುಂಬಿರುವುದರಿಂದ ನನಗೂ ಯಾವುದು ಸರಿ ಯಾವುದು ತಪ್ಪು ಎಂಬುದು ಗೊಂದಲ.

ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸದೇ ಇರುವುದು ಮಾಧ್ಯಮಗಳ ಜವಾಬ್ದಾರಿ ಆಗಿರುವುದರಿಂದ ಬಲ್ಲವರು ಯಾರಾದರೂ ಮಾಹಿತಿ ನೀಡುವಿರೇ? ಜನರಿಗೆ, ದೇಶಕ್ಕೆ, ವಿಶ್ವಕ್ಕೆ ಸತ್ಯಾಂಶವನ್ನೇ ತೋರಿಸಿಕೊಟ್ಟು ನಮ್ಮ ಜವಾಬ್ದಾರಿಯನ್ನು ತೋರಿಸಿಕೊಡುವುದು, ಸಮಾಜದ ಹಿತರಕ್ಷಣೆ ಒಳಿತಲ್ಲವೇ?

6 COMMENTS

  1. ಅವಿನಾಶ್ ಸರ್,

    ನನಗೂ ಇದರ ಬಗ್ಗೆ ಗೊಂದಲವಿದೆ…ಇವತ್ತಿನ ಪೇಪರಿನಲ್ಲಿ ಮತ್ತೆ ಹೆಗಡೆಯವರು ಪ್ರತಿಮೆ ಸ್ಥಾಪಿಸುವುದಿಲ್ಲವೆಂದು ಹೇಳಿದ್ದಾರೆ….

  2. ಸತ್ಯಾಂಶವೇನೋ ಗೊತ್ತಿಲ್ಲ. ಒಟ್ಟಾರೆ ಮಾಧ್ಯಮದವರು ನಮ್ಮ ಕರಾವಳಿಯ ಹೆಸರು ಹಾಳು ಮಾಡಲು ಪಣ ತೊಟ್ಟಿದ್ದರೆಯೋ ಎಂದು ಸಂಶಯ ಮೂಡುತ್ತದೆ… ಈಗೀಗ ಮಾಧ್ಯಮದವರನ್ನು ನಂಬುವಂತಿಲ್ಲ. ಚರ್ಚ್ ಘಟನೆಯಿಂದ ಹಿಡಿದು ಈ ಘಟನೆಯವರೆಗೆ ಇಲಿ ಬಂದಲ್ಲಿ ಹುಲಿ ಬಂತು ಎಂದು ಪ್ರಚಾರ ಮಾಡ್ತಿದ್ದಾರೆ. ಮೇಲಿನ ಘಟನೆಯ ಸತ್ಯಾಂಶವನ್ನು ತಿಳಿಯಲು ಆ ಜಾಗಕ್ಕೆ ಹೋಗಿ ಅಲ್ಲಿಯವರನ್ನೇ ಕೇಳುವುದು ಒಳಿತು…

  3. ಇ೦ತಹ ಯೋಚನೆ ಬೈ೦ದೂರಿನವರು ಯಾರು ಮಾಡಿರಲಿಕ್ಕಿಲ್ಲ.. ಆದ್ರೆ ಒ೦ದ೦ತೂ ಗ್ಯಾರ೦ಟಿ ಈ TOI/CNN-IBN ಮೊದಲ್ಗೊ೦ಡು ದರಿದ್ರ ಮಾಧ್ಯಮದವ್ರು ಕರಾವಳಿ ಹೆಸ್ರು ಎಲ್ಲಾ ಹಾಳು ಮಾಡಿ ಹಾಕಿದ್ರು… Its better to call TOI as ‘TOI’let paper..

  4. @ ಶಿವು
    ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಅಲ್ವಾ… ದೇವಸ್ಥಾನದೆದುರೇ ಪ್ರತಿಮೆ ಕಟ್ಟುತ್ತೇವೆ ಎಂಬ ಬಗ್ಗೆ ಒಂದಿನಿತು ಪರಿಜ್ಞಾನ ಬೇಡ್ವೇ ಅವರಿಗೆ…

    @ ಪ್ರದೀಪ್
    ಹೌದು, ಮಾಧ್ಯಮಗಳ, ವಿಶೇಷವಾಗಿ ಟಿವಿ ಚಾನೆಲ್ಲುಗಳ ವಿಶ್ವಾಸಾರ್ಹತೆ ಬಗ್ಗೆಯೇ ಸಂದೇಹ ಮೂಡುತ್ತಿದೆ. ಇದರ ಬಗ್ಗೆ ಮಾಧ್ಯಮಗಳಲ್ಲಿರುವವರು ಎಚ್ಚರಿಕೆ ವಹಿಸಬೇಕಷ್ಟೆ.

    @ ಪ್ರಮೋದ್,
    ಹಹಹ. ಅಲ್ಲ, ಆ ಪೇಪರಿಗೂ ಒಂದು ಸಂಪಾದಕರು ಅಂತ ಇರಲ್ಲವೇ? ಸಾಮಾಜಿಕ ಸಾಮರಸ್ಯದಲ್ಲಿ ಮಾಧ್ಯಮಗಳಿಗೂ ಜವಾಬ್ದಾರಿಯಿದೆ ಅಂತ ತಿಳಿಸಿಕೊಡಬೇಕಾಗಿದೇಂತ ಕಾಣಿಸುತ್ತದೆ.

  5. ಅವಿನಾಶರೇ, ಎಚ್ಚರವಿಲ್ಲದೇ ಇದನ್ನೆಲ್ಲ ಮಾಧ್ಯಮದವರು ಮಾಡುತ್ತಿದಾರೆಂದು ಅನ್ನಿಸುತ್ತದೆಯೇ? ಖಂಡಿತವಾಗಿಯೂ ಇಲ್ಲ. ಆಗುತ್ತಿರುವ ಘಟನಾವಳಿಗಳನ್ನು ನೋಡುತ್ತಿದ್ದರೆ ಎಲ್ಲಾ ಪೂರ್ವಯೋಜಿತ ಹುನ್ನಾರವೆಂದೆನಿಸುವುದಿಲ್ಲವೇ… (ಅಂದ ಹಾಗೆ, ನನ್ನ ಹೆಸರು ಪ್ರದೀಪ್, ಸಂದೀಪ್ ಅಲ್ಲ)

  6. ಪ್ರದೀಪ್,
    ಪೂರ್ವ ಯೋಜಿತ? ಇರಬಹುದು. ಪ್ರಚಾರಕ್ಕೊಂದು ನೆಗೆಟಿವ್ ತಂತ್ರ ಅಷ್ಟೆ.

    (ಹೆಸರು ಸರಿಪಡಿಸಿದ್ದೇನೆ. ಕ್ಷಮೆಯಿರಲಿ. 🙂 )

LEAVE A REPLY

Please enter your comment!
Please enter your name here