ಅಂತರ್ಜಾಲ ಸ್ವಾತಂತ್ರ್ಯಕ್ಕಾಗಿ ನೆಟ್ಟಿಗರ ಗಟ್ಟಿ ಧ್ವನಿ

0
712

Avi-Mahiti@Tantrajnanaಇಂಟರ್ನೆಟ್‌ನಲ್ಲಿ ಯೂಟ್ಯೂಬ್ ಆಗಿರಲಿ, ವೆಬ್ ಸೈಟ್ ಆಗಿರಲಿ, ವಾಟ್ಸಾಪ್ ಇರಲಿ, ಫೇಸ್ ಬುಕ್ ಇರಲಿ, ಅಥವಾ ಟ್ವಿಟರೇ ಆಗಿರಲಿ; ಎಲ್ಲ ಮಾಹಿತಿಯೂ ಸಮಾನ. ನಿರ್ದಿಷ್ಟ ಮಾಹಿತಿಯನ್ನು ಮಾತ್ರ ಉಚಿತವಾಗಿ ನೀಡಿ, ಉಳಿದವುಗಳಿಗೆ ತಡೆಯೊಡ್ಡುವ ಅಥವಾ ಅವುಗಳಿಗೆ ನಿಧಾನಗತಿಯ ಇಂಟರ್ನೆಟ್ ಸಂಪರ್ಕ ಒದಗಿಸುವ ಅಧಿಕಾರ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ಮುಖ್ಯವಾಗಿ ಟೆಲಿಕಾಂ ಆಪರೇಟರುಗಳಿಗೆ) ಇಲ್ಲ. ಎಲ್ಲವೂ ಸಮಾನವಾಗಿ, ಮುಕ್ತವಾಗಿ ದೊರೆಯುವಂತಾಗಬೇಕು. ಇಲ್ಲಿ ಎಲ್ಲವೂ ನ್ಯೂಟ್ರಲ್ ಎಂಬುದು ನೆಟ್ಟಿಗರ ಕೂಗು. ಇದುವೇ ನೆಟ್ ನ್ಯೂಟ್ರಾಲಿಟಿ.

ಒಂದೆಡೆ, ‘ಜನರ ಬಳಿಗೆ ತಂತ್ರಜ್ಞಾನ, ನಮ್ಮದು ಡಿಜಿಟಲ್ ಇಂಡಿಯಾ’ ಅಂತೆಲ್ಲಾ ಕೇಂದ್ರ ಸರಕಾರ ಆವೇಗದಿಂದ, ಆವೇಶದಿಂದ ಟ್ವಿಟರ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳನ್ನೆಲ್ಲಾ ಜನಪ್ರಿಯವಾಗಿಸುತ್ತಿದ್ದರೆ, ಇತ್ತ, ಟೆಲಿಕಾಂ ಆಪರೇಟರುಗಳು ಡಿಜಿಟಲ್ ಕ್ರಾಂತಿಯ ಮೂಲಾಧಾರವಾಗಿರುವ ಇಂಟರ್ನೆಟ್ ಅನ್ನು ತಮ್ಮ ಮುಷ್ಟಿಯೊಳಗಿರಿಸಿಕೊಳ್ಳುವ ‘ತಂತ್ರ’ಜ್ಞಾನಕ್ಕೆ ಒತ್ತು ನೀಡುತ್ತಿದ್ದಾರೆ. ತತ್ಫಲವಾಗಿಯೇ ಅಂತರ್ಜಾಲದಲ್ಲಿ ನೆಟ್ಟಿಗರು ಗಟ್ಟಿಯಾಗಿಯೇ ಧ್ವನಿ ಎತ್ತ ತೊಡಗಿದ್ದಾರೆ. ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನವಿದು, ನಮಗೆ ಇಂಟರ್ನೆಟ್ ಸ್ವಾತಂತ್ರ್ಯ ಬೇಕು,’ ‘ನೆಟ್ ನ್ಯೂಟ್ರಾಲಿಟಿ’ ಬೇಕೇಬೇಕು ಎಂದು ಆಂದೋಲನವನ್ನೇ ಆರಂಭಿಸಿದ್ದಾರೆ. ಆನ್‌ಲೈನ್‌ನಲ್ಲಂತೂ ಜಾತಿ, ವರ್ಗ, ಪಕ್ಷ ಭೇದವಿಲ್ಲದೆ ಈ ಆಂದೋಲನವು ಒಗ್ಗಟ್ಟು ಸೃಷ್ಟಿಸಿದೆ. ಇದು ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಟ. ಇದು ಅವಾಸ್ತವಿಕ ಜಗತ್ತಿನಲ್ಲಾಗುತ್ತಿರುವ ರಕ್ತ ರಹಿತ ಕ್ರಾಂತಿ.

ಅಂತರ್ಜಾಲದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿರುವ, ನಾವು ನೆಚ್ಚಿಕೊಂಡಿರುವ ಟೆಲಿಕಾಂ ಆಪರೇಟರುಗಳನ್ನು ಯದ್ವಾತದ್ವಾ ದೂಷಿಸಲು ಕಾರಣವಾಗಿರುವ ವಿಷಯವೇ “ನೆಟ್ ನ್ಯೂಟ್ರಾಲಿಟಿ” ಅಥವಾ ಅಂತರ್ಜಾಲ ಸಮಾನತೆ, ಅಂತರ್ಜಾಲ ಅಲಿಪ್ತತೆ ಅಥವಾ ಸರಳವಾಗಿ ಹೇಳಬಹುದಾದರೆ, ‘ಇಂಟರ್ನೆಟ್ ಸ್ವಾತಂತ್ರ್ಯ’. ಇದರ ವ್ಯಾಖ್ಯಾನವೂ ಇದೇ. ಜಗತ್ತೇ ಅಂಗೈಯಲ್ಲಿ ಎಂಬ ಪರಿಕಲ್ಪನೆಗೆ ಹೇತುವಾಗಿರುವ ಇಂಟರ್ನೆಟ್ ಮತ್ತು ಅದರಲ್ಲಿರುವ ಎಲ್ಲ ವಿಷಯಗಳೂ ಎಲ್ಲರಿಗೂ ಸಮಾನವಾಗಿ, ಸಮಾನ ವೇಗದಲ್ಲಿ, ಯಾವುದೇ ಕಡಿವಾಣಗಳಿಲ್ಲದೆ ಸ್ವತಂತ್ರವಾಗಿ ದೊರೆಯುವಂತಾಗಬೇಕು; ಅದರಲ್ಲಿ ಕೆಲವು ಮಾಹಿತಿಗಳಿಗೆ ಹೆಚ್ಚು ಸಮಾನತೆ ಇರಬಾರದು, ಎಲ್ಲವೂ ಸಮಾನವಾಗಿರಬೇಕು ಎಂಬುದೇ ನೆಟ್ ನ್ಯೂಟ್ರಾಲಿಟಿ ಪರವಾಗಿ ಧ್ವನಿ ಎತ್ತುತ್ತಿರುವವರ ಏಕೈಕ ಉದ್ದೇಶ. ‘ನಾನು ಹಣ ಪಾವತಿಸುತ್ತೇನೆ, ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆ; ಬೇರೆಯವರು ನನ್ನ ಮೇಲೆ ಇದನ್ನಷ್ಟೇ ನೋಡು ಅಂತ ಹೇರುವ ಹಾಗಿಲ್ಲ’ ಎಂಬುದೇ ನೆಟ್ ಸಮಾನತೆಯ ಮೂಲ ಮಂತ್ರ.

ಏನಿದು…
ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ. ಒಂದು ಅಮ್ಯೂಸ್‌ಮೆಂಟ್ ಅಥವಾ ಥೀಮ್ ಪಾರ್ಕ್‌ಗೆ ಹೋಗುತ್ತೀರಿ. ಅದರೊಳಗೆ ಪ್ರವೇಶಿಸಬೇಕಿದ್ದರೆ ನಾಲ್ಕೈದು ನೂರು ರೂಪಾಯಿ ಪ್ರವೇಶ ಶುಲ್ಕ ನೀಡುತ್ತೀರಿ. ವಿಶಾಲವಾದ ಆ ಪ್ರದೇಶದೊಳಗೆ ಹೊಕ್ಕರೆ, ನೀರಿನಲ್ಲಿ ಈಜಾಡಲು, ಜಲ ಕ್ರೀಡೆ ಆಡುವುದಕ್ಕೆ, ಜಾರು ಬಂಡಿಯಲ್ಲಿ ಕೂರಲು, ಓಲಾಡುವ ಹಡಗಿನಲ್ಲಿ ಕೂರಲು, ಅದರೊಳಗಿರುವ ಗುಹೆಯೊಳಗೆ ಹೋಗಲು… ಇಪ್ಪತ್ತೈದೋ, ಮೂವತ್ತೋ ರೂಪಾಯಿ ಪ್ರತ್ಯ-ಪ್ರತ್ಯೇಕವಾಗಿಯೇ ಪಾವತಿಸಬೇಕಾಗುತ್ತದೆ. ಇನ್ನು, ಹೊರಗಡೆ 10 ರೂಪಾಯಿಗೆ ಸಿಗುವ ಕಾಫಿ/ಕೂಲ್ ಡ್ರಿಂಕ್ಸ್/ಐಸ್ ಕ್ರೀಮ್‌ಗೆ 30-40 ರೂಪಾಯಿ ನೀಡಲೇಬೇಕಾಗುತ್ತದೆ. ಒಳಗೆ ಹೋಗುವುದಕ್ಕೇ ಅಷ್ಟು ದುಡ್ಡು ಕೊಡುತ್ತೀರಿ, ಅದರೊಳಗಿನ ಪ್ರತಿಯೊಂದಕ್ಕೂ ಪ್ರತ್ಯೇಕ ಶುಲ್ಕ. ಇದುವೇ ನೆಟ್ ನ್ಯೂಟ್ರಾಲಿಟಿಗೆ ಕಂಟಕವೊಡ್ಡುವ, ಟೆಲಿಕಾಂ ಆಪರೇಟರುಗಳು/ಇಂಟರ್ನೆಟ್ ಸೇವಾ ಪೂರೈಕದಾರರ ಹೊಸ ಕಾರ್ಯ ತಂತ್ರ.

ಹೇಗಿದು…
ಟಾಟಾ, ಏರ್‌ಟೆಲ್, ವೀಡಿಯೋಕಾನ್, ಝೀ, ಸನ್ ಮುಂತಾದವುಗಳು ಡಿಟಿಹೆಚ್ (ಡೈರೆಕ್ಟ್ ಟು ಹೋಮ್ – ಟಿವಿ ವೀಕ್ಷಣೆಗಾಗಿ) ಸೇವೆ ನೀಡಲಾರಂಭಿಸಿದ್ದು, ಕೇಬಲ್ ಆಪರೇಟರುಗಳು ಕೂಡ, ನಿರ್ದಿಷ್ಟ ಚಾನೆಲ್‌ಗಳ ಗುಚ್ಛಗಳನ್ನು ತಯಾರಿಸಿ, ಸುದ್ದಿ ಚಾನೆಲ್‌ಗಳು, ಯೂಟ್ಯೂಬ್ ವೀಡಿಯೊಗಳು, ಮನರಂಜನೆ, ಹಾಡು, ಫ್ಯಾಶನ್, ಕ್ರೀಡೆ… ಹೀಗೆ ಪ್ರತ್ಯೇಕ ಪ್ಯಾಕ್‌ಗಳನ್ನು ಹೇಗೆ ಸಿದ್ಧಪಡಿಸಿವೆಯೋ…. ಅದೇ ರೀತಿ ಮುಂದೊಂದು ದಿನ ನಮಗೆ ಬೇಕಾದ ಇಂಟರ್ನೆಟ್ ತಾಣವನ್ನು/ಆ್ಯಪ್‌ಗಳನ್ನು ಯಾವುದೇ ಸಮಸ್ಯೆಯಿಲ್ಲದೆ ನೋಡಬೇಕಿದ್ದರೆ ಇಂತಿಷ್ಟು ಹಣ ಪಾವತಿಸಬೇಕಾಗಬಹುದು. ‘ತುಂಬಾ ಸ್ಲೋ, ಓಪನ್ ಆಗ್ತಾನೇ ಇಲ್ಲ’ ಅಂತ ದೂರು ನೀಡಿದರೆ, ‘ಈ ಪ್ಯಾಕ್ ಹಾಕಿಸಿಕೊಳ್ಳಿ, ತಿಂಗಳಿಗೆ 20 ರೂಪಾಯಿ’ ಅಂತ ಸೇವಾ ಪೂರೈಕೆದಾರರು ಹೇಳಬಹುದು.

ಮತ್ತೊಂದೆಡೆ, ನಿರ್ದಿಷ್ಟ ಟೆಲಿಕಾಂ ಆಪರೇಟರ್‌ಗಳ ಸೇವೆಗೆ ಚಂದಾದಾರರಾಗುವ ಗ್ರಾಹಕರು ಆಯ್ದ ಆ್ಯಪ್/ಸೇವೆ/ವಬ್ ತಾಣಗಳನ್ನು ಉಚಿತವಾಗಿ ಪಡೆಯುತ್ತಾರೆ. ಇದರ ವೆಚ್ಚವನ್ನು ಆಯಾ ಕಂಪನಿಗಳು ಟೆಲಿಕಾಂ ಕಂಪನಿಗಳಿಗೆ ಭರಿಸುತ್ತವೆ. ಹೀಗಿರುವಾಗ, ಟೆಲಿಕಾಂ ಕಂಪನಿಯು ತನಗೆ ಹಣ ನೀಡುವ ಕಂಪನಿಯ ತಾಣಗಳನ್ನು ಮಾತ್ರ ತನ್ನ ಗ್ರಾಹಕರಿಗೆ ತಲುಪಿಸುತ್ತದೆ. ಉಳಿದವುಗಳನ್ನು ವೀಕ್ಷಿಸುವ ಅವಕಾಶ ದೊರೆಯುವುದಿಲ್ಲ ಅಥವಾ ಅದಕ್ಕಾಗಿ ಹೆಚ್ಚುವರಿ ಹಣ ತೆರಬೇಕಾಗುತ್ತದೆ. ಅವರು ಕೊಟ್ಟದ್ದನ್ನಷ್ಟೇ ನಾವು ಉಚಿತವಾಗಿ, ಮುಕ್ತವಾಗಿ ವೀಕ್ಷಿಸಬೇಕು, ಅದುವೇ ಪ್ರಸಾದ ಅಂತ ಒಪ್ಪಿಕೊಳ್ಳಬೇಕು.

ಯಾಕಾಗಿ?
ಇಂಟರ್ನೆಟ್ ಬಂದ ನಂತರ ಟೆಲಿಕಾಂ ಆಪರೇಟರುಗಳ ಲಾಭಕ್ಕೆ (ಆದಾಯಕ್ಕಲ್ಲ, ನೆನಪಿರಲಿ) ಪ್ರಧಾನವಾಗಿ ಕತ್ತರಿ ಬಿದ್ದಿದ್ದು ವಾಟ್ಸಾಪ್, ವೈಬರ್, ಸ್ಕೈಪ್, ಹೈಕ್, ಹ್ಯಾಂಗೌಟ್ಸ್ ಮುಂತಾದ ಸಾಮಾಜಿಕ ಸಂವಹನದ ಕಿರು ತಂತ್ರಾಂಶಗಳಿಂದಾಗಿ. ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡರೆ, ಸಂದೇಶವನ್ನು ಮಾತ್ರವಲ್ಲದೆ, ಇತ್ತೀಚೆಗೆ ಕರೆಗಳನ್ನು ಕೂಡ (ದೇಶ-ವಿದೇಶಗಳೆಂಬ, ದೂರ-ಸಮೀಪವೆಂಬ ಭೇದವಿಲ್ಲದೆ) ಉಚಿತವಾಗಿಯೇ ಮಾಡಬಹುದು. ಆದರೆ, ಈ ಸೇವೆಗಳಿಗೆ ಮೂಲಾಧಾರವಾಗಿರುವ ಇಂಟರ್ನೆಟ್ ಸಂಪರ್ಕವನ್ನು ಟೆಲಿಕಾಂ ಆಪರೇಟರುಗಳೇ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೂಡ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿದೆ, ಗ್ರಾಮೀಣ ಪ್ರದೇಶದ ಜನರು ಕೂಡ ಇಂಟರ್ನೆಟ್ ಎಂಬ ಮಾಯಾ ಜಾಲದ ಆಕರ್ಷಣೆ ಹೆಚ್ಚಿಸಿಕೊಂಡಿದ್ದಾರೆ ಎಂದು ಅಧಿಕೃತ ವರದಿಗಳೇ ಹೇಳಿವೆ. ಬಳಕೆ ಹೆಚ್ಚಾಗುವಲ್ಲಿ ಲಾಭ ನೋಡಲೇಬೇಕಲ್ಲ? ಅದಕ್ಕಾಗಿಯೇ ತಕರಾರು ಶುರುವಾಗಿದ್ದು.

ಭಾರತದಲ್ಲಿ ಹೊತ್ತಿದ ಕಿಡಿ
ಕಳೆದ ವರ್ಷಾಂತ್ಯದಲ್ಲಿ ಏರ್‌ಟೆಲ್ ಕಂಪನಿಯು ಇಂಟರ್ನೆಟ್ ಬಳಕೆಗಾಗಿ ಡೇಟಾ ಪ್ಯಾಕ್ ಹಾಕಿಸಿಕೊಂಡವರಿಗೆ ಒಂದು ಶಾಕ್ ನೀಡಿತ್ತು. ಅನ್‌ಲಿಮಿಟೆಡ್ ಅಥವಾ ಇಂತಿಷ್ಟು ಜಿಬಿ ಬಳಕೆಯ ಮಾಸಿಕ ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡವರೂ ಕೂಡ ವಾಟ್ಸಾಪ್, ವೈಬರ್, ಸ್ಕೈಪ್ ಮುಂತಾದ ಓವರ್ ದಿ ಟಾಪ್ (ಸರಳವಾಗಿ ಹೇಳುವುದಾದರೆ, ಇಂಟರ್ನೆಟ್ ಪೂರೈಕೆದಾರರ ಅವಲಂಬನೆಯೊಂದಿಗೆ ಸೇವೆ ಸಲ್ಲಿಸುವ) ಆ್ಯಪ್ ಬಳಕೆಗಾಗಿ, ವಿಶೇಷವಾಗಿ ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ (VoIP) ಬಳಸಬೇಕಿದ್ದರೆ, ಪ್ರತ್ಯೇಕ ಪ್ಯಾಕ್ ಹಾಕಿಸಿಕೊಳ್ಳಬೇಕು ಎಂಬ ಸೂಚನೆ ಬಂದಿತ್ತು. ಅಂತರ್ಜಾಲದಲ್ಲಿ ವಿಹರಿಸುತ್ತಿದ್ದವರೆಲ್ಲರೂ ಇದರ ವಿರುದ್ಧ ಸಿಡಿದೆದ್ದರು. ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಏರ್‌ಟೆಲ್ ವಿರುದ್ಧ ಸಮರವನ್ನೇ ಸಾರಲಾಯಿತು. ಕೊನೆಗೂ ಒತ್ತಡಕ್ಕೆ ಮಣಿದ ಏರ್‌ಟೆಲ್, ಈ ಪ್ರತ್ಯೇಕ ಪ್ಯಾಕ್ ಖರೀದಿ ಕ್ರಮವನ್ನು ಕೈಬಿಡಬೇಕಾಯಿತು.

ವಿವಾದದ ಬೆಂಕಿಗೆ ತುಪ್ಪ
‘ಸರ್ವರಿಗೂ ಕೈಗೆಟಕುವ ಇಂಟರ್ನೆಟ್’ ಎಂಬ ಪರಿಕಲ್ಪನೆಯೊಂದಿಗೆ ಕೆಲವು ವರ್ಷಗಳ ಹಿಂದೆ ಜಗತ್ತಿನ ಸಾಫ್ಟ್‌ವೇರ್ ದಿಗ್ಗಜ ಕಂಪನಿಗಳೆಲ್ಲ ಸೇರಿಕೊಂಡು, ಇಂಟರ್ನೆಟ್ ಡಾಟ್ ಆರ್ಗ್ (Internet.org) ಎಂಬ ಒಕ್ಕೂಟವನ್ನು ಸ್ಥಾಪಿಸಿಕೊಂಡವು. ಇದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕನಸಿನ ಕೂಸು. ಆದರೆ, ಫೆಬ್ರವರಿ ತಿಂಗಳಲ್ಲಿ ನಡೆದ ಬೆಳವಣಿಗೆಯಲ್ಲಿ, ರಿಲಯನ್ಸ್ ಕಂಪನಿಯ ಮೂಲಕವೇ ಇಂಟರ್ನೆಟ್ ಡಾಟ್ ಆರ್ಗ್ ತಾಣವು ಭಾರತಕ್ಕೆ ಬಂದಿತು. ಇದರ ಮೂಲಕವಾಗಿ 30ಕ್ಕೂ ಹೆಚ್ಚು ವೆಬ್ ತಾಣಗಳನ್ನು ರಿಲಾಯನ್ಸ್ ಗ್ರಾಹಕರು ಮಾತ್ರ ಉಚಿತವಾಗಿ ವೀಕ್ಷಿಸಬಹುದಾಗಿದೆ. ಫೋಟೋಗಳೇ ಹೆಚ್ಚಾಗಿರುವ ಫೇಸ್‌ಬುಕ್ ತಾಣದಲ್ಲಿ ಫೋಟೋಗಳು ಮಸುಕಾಗಿ ಕಾಣಿಸುತ್ತವೆ. ಅವುಗಳನ್ನು ಸರಿಯಾಗಿ ನೋಡಬೇಕಿದ್ದರೆ ಹೆಚ್ಚುವರಿ ಡೌನ್‌ಲೋಡ್ ಶುಲ್ಕ ನೀಡಬೇಕಾಗುತ್ತದೆ.

ಇತ್ತೀಚೆಗೆ ಭಾರತಿ ಏರ್‌ಟೆಲ್ ಕೂಡ ಏರ್‌ಟೆಲ್ ಝೀರೋ ಎಂಬ ಇದೇ ರೀತಿಯ, ‘ಉಚಿತ’ ವ್ಯವಸ್ಥೆಯನ್ನು ಜಾರಿಗೊಳಿಸಿದಾಗಲಂತೂ ನೆಟ್ಟಿಗರು ಉರಿದೆದ್ದರು. ಉರಿವ ಬೆಂಕಿಗೆ ತುಪ್ಪವೋ ಎಂಬಂತೆ, ಜನಪ್ರಿಯ ಆನ್‌ಲೈನ್ ಖರೀದಿ ತಾಣವಾಗಿರುವ ಫ್ಲಿಪ್ ಕಾರ್ಟ್ ಕೂಡ ಏರ್‌ಟೆಲ್ ಝೀರೋ ವ್ಯವಸ್ಥೆಯೊಳಗೆ ಸೇರಿಕೊಂಡಿತು ಮತ್ತು ನೆಟ್ಟಿಗರ ಆಕ್ರೋಶ ಭುಗಿಲೆದ್ದ ಬೆನ್ನಿಗೇ, ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ, ಅಷ್ಟೇ ವಾಗವಾಗಿ ಅದರಿಂದ ಹೊರಬಂದು, ನೆಟ್ ನ್ಯೂಟ್ರಾಲಿಟಿಗೆ ಬೆಂಬಲಿಸಿತು.

ಅಂತರ್ಜಾಲದಲ್ಲೀಗ ಜಾತಿ-ಮತ-ಪಂಥ-ಪಕ್ಷ ಭೇದವಿಲ್ಲ. ಕೇವಲ ಎರಡು ಬಣಗಳಿವೆ, ನೆಟ್ ನ್ಯೂಟ್ರಾಲಿಟಿ ಪರ ಹಾಗೂ ವಿರೋಧ. ಈ ಚರ್ಚೆಯೀಗ ಇಂಟರ್ನೆಟ್ ಮಾತ್ರವೇ ಅಲ್ಲ, ಎಲ್ಲ ಗೋಡೆಗಳನ್ನೂ ಮೀರಿ, ಸಾಮಾನ್ಯ ಆಟೋ ನಿಲ್ದಾಣಕ್ಕೂ ಬಂದು ನಿಂತಿದೆ. ದೇಶದಲ್ಲಷ್ಟೇ ಅಲ್ಲದೆ, ಭಾರತದ ನೆಟ್ ನ್ಯೂಟ್ರಾಲಿಟಿ ಪರ ಹೋರಾಟವು ವಿದೇಶೀ ಸುದ್ದಿ ಮಾಧ್ಯಮಗಳಲ್ಲೂ ಸದ್ದು ಮಾಡುತ್ತಿದೆ. ಇದು ಇಂಟರ್ನೆಟ್ ಶಕ್ತಿ. ಜನ ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕಾದವರು ನಮ್ಮನ್ನು ಆಳುವವರು.

———–
ಸ್ಪ್ಯಾಮ್ ಅಲ್ಲವಿದು ವೀಡಿಯೊ
ಎಐಬಿ ಕಾಮಿಡಿ ಗ್ರೂಪ್ ಈ ಬಗ್ಗೆ ಜನರ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸಲೆಂದೇ ವೀಡಿಯೊ ರೂಪಿಸಿ ಇಂಟರ್ನೆಟ್‌ನಲ್ಲಿ ಹರಿಯಬಿಟ್ಟಿದೆ. ಮೊದಲೇ ಉರಿದೆದ್ದಿದ್ದ ನೆಟ್ಟಿಗರು ಇದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಹೋದರು. ಆದರೆ, ಈ ಪ್ರಮಾಣದಲ್ಲಿ ಶೇರ್ ಆಗುತ್ತಿರುವುದನ್ನು ನೋಡಿ, ಫೇಸ್‌ಬುಕ್‌ನ ಸ್ವಯಂಚಾಲಿತ ವ್ಯವಸ್ಥೆ (ಅಲ್ಗಾರಿದಂ), ಈ ವೀಡಿಯೊವನ್ನು ಸ್ಪ್ಯಾಮ್ ಎಂದು ಗುರುತಿಸಿ, ನಿರ್ಬಂಧಿಸಿಯೇಬಿಟ್ಟಿತು. ಬಳಿಕ, ಅಂತರ್ಜಾಲಿಗರ ಕೋರಿಕೆಯ ಮೇರೆಗೆ ಫೇಸ್‌ಬುಕ್ ಈ ವೀಡಿಯೊವನ್ನು ‘ನಿರ್ಬಂಧ’ ವ್ಯಾಪ್ತಿಯಿಂದ ಬಿಡುಗಡೆಗೊಳಿಸಿತು. ಹೀಗಾಗಿ ಮತ್ತೆ ಕಾಣಿಸಿಕೊಂಡಿದೆ ಈ ವೀಡಿಯೊ.

ಟ್ರಾಯ್‌ಗೆ ಮೇಲ್ ಬೌನ್ಸ್
ಅಂತರ್ಜಾಲಿಗರ ಆಂದೋಲನದ ಪರಿಣಾಮವಾಗಿ ಒಂದೇ ದಿನಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಇಮೇಲ್‌ಗಳು ರವಾನೆಯಾದ ಹಿನ್ನೆಲೆಯಲ್ಲಿ, ಜನಾಭಿಪ್ರಾಯ ಸಂಗ್ರಹಣೆಗಾಗಿ ಟ್ರಾಯ್ ನೀಡಿದ್ದ ಇಮೇಲ್ ವಿಳಾಸಕ್ಕೆ ಕಳುಹಿಸಿದ ಉತ್ತರಗಳೆಲ್ಲ ಕಳೆದ ವಾರ ಬೌನ್ಸ್ ಆಗತೊಡಗಿದ್ದವು. ಕಾರಣ, ರಾಶಿ ರಾಶಿ ಪತ್ರಗಳ ಆಗಮನ. ಇದುವರೆಗೆ ಸುಮಾರು 10 ಲಕ್ಷ ಮಂದಿ ನೆಟ್ ನ್ಯೂಟ್ರಾಲಿಟಿ ವಿರೋಧಿಸಿ ಇಮೇಲ್ ಕಳುಹಿಸಿದ್ದರು ಎಂದು ಈ ಆಂದೋಲನದ ನೇತೃತ್ವ ವಹಿಸಿರುವ ತಂಡದ ಟ್ವಿಟರ್ ಖಾತೆ @neutrality_in ಹೇಳಿಕೊಂಡಿದೆ. ಬಹುಶಃ ದೇಶದ ನೀತಿ ನಿಯಮಾವಳಿ ರೂಪಿಸುವ ನಿಟ್ಟಿನಲ್ಲಿ ಈ ಮಟ್ಟದಲ್ಲಿ ಆಂದೋಲನ ನಡೆದ ಇತಿಹಾಸವಿಲ್ಲ.

——
ನೆಟ್ ನ್ಯೂಟ್ರಾಲಿಟಿ ಅಂದರೆ…
ಸಿಂಪಲ್ಲಾಗಿ ಹೇಳುವುದಾದರೆ, ಕಾನೂನುಬದ್ಧವಾಗಿರುವ ಯಾವುದೇ ಮಾಹಿತಿ, ವೆಬ್ ತಾಣ ಮತ್ತು ವೆಬ್ ಅಥವಾ ಆ್ಯಪ್ ಸೇವೆಯು ಇಂಟರ್ನೆಟ್ ಸೇವೆ ಪೂರೈಕೆದಾರರ (ಐಎಸ್‌ಪಿ – ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಸ್) ಯಾವುದೇ ಅಡಚಣೆಗಳು, ನಿರ್ಬಂಧಗಳಿಲ್ಲದೆ ಎಲ್ಲರಿಗೂ ಸಮಾನವಾಗಿ ದೊರೆಯುವಂತಾಗಬೇಕು.

ನ್ಯೂಟ್ರಲ್ ಆಗಿಲ್ಲದಿದ್ದರೇನಾಗುತ್ತದೆ…
ಇಂಟರ್ನೆಟ್ ಸೇವಾ ಪೂರೈಕೆದಾರರು (ಉದಾಹರಣೆಗೆ ಟೆಲಿಕಾಂ ಆಪರೇಟರುಗಳು) ನಿರ್ದಿಷ್ಟ ಕಂಪನಿಗಳಿಂದ ಹಣ ಪಡೆದು ಅವರ ವೆಬ್ ತಾಣಗಳನ್ನು, ಆ್ಯಪ್ ಸೇವೆಯನ್ನು ತಮ್ಮ ಗ್ರಾಹಕರಿಗೆ ವೇಗವಾಗಿ ದೊರೆಯುವಂತೆ ಮಾಡಬಹುದು ಮತ್ತು ತಮಗೆ ಹಾಗೂ ತಮಗೆ ಹಣ ನೀಡಿದ ಕಂಪನಿಗಳ ಪರವಾಗಿರುವ ಅಂಶಗಳನ್ನು ಮಾತ್ರವೇ ಗ್ರಾಹಕರಿಗೆ ತಲುಪಿಸಬಹುದು. ಅವರು ನೀಡಿದ್ದೇ ಪ್ರಸಾದ ಎಂದು ಒಪ್ಪಿಕೊಳ್ಳಬೇಕಷ್ಟೆ.

ದೂರಗಾಮಿ ಪರಿಣಾಮವೇನು….
ತಮ್ಮದೇ ಯೋಜನೆಗಳ ಮೂಲಕ ಮೊಬೈಲ್ ಸೇವಾ ಕಂಪನಿಗಳು ನಿರ್ದಿಷ್ಟ ಸೇವೆಗೆ ನಿರ್ದಿಷ್ಟ ಕಂಪನಿಯೇ ಸೂಕ್ತ ಎಂಬ ಸಂದೇಶವನ್ನು ಪರೋಕ್ಷವಾಗಿ ಬಿಂಬಿಸುವುದರಿಂದಾಗಿ, ಆ ಕಂಪನಿ ಏಕಸ್ವಾಮ್ಯ ಸಾಧಿಸುವ ಸಾಧ್ಯತೆ ಹೆಚ್ಚು. ಉದಾ. ಯಾವುದಾದರೊಂದು ಉತ್ಪನ್ನ ಖರೀದಿಸಬೇಕಿದ್ದರೆ, ನೀವು ನಿರ್ದಿಷ್ಟ ನೆಟ್‌ವರ್ಕ್ ಮೂಲಕ ನಿರ್ದಿಷ್ಟ ವೆಬ್‌ಸೈಟಿಗೇ ಹೋಗಬೇಕು. ಬೇರೆ ಜಾಲ ತಾಣದಲ್ಲಿ ಅದನ್ನು ಖರೀದಿಸಲೆಂದು ಹೋದರೆ, ಇಂಟರ್ನೆಟ್ ನಿಧಾನಗತಿಯಿಂದಾಗಿ ರೋಸಿ ಹೋಗಿ, ‘ಬೇಡಪ್ಪಾ ಇದರ ಸಹವಾಸ, ಸರಿಯಾಗಿ ಸಂಪರ್ಕ ದೊರೆಯುವ ತಾಣದ ಮೂಲಕವೇ ಹೋಗೋಣ’ ಎಂಬ ಒತ್ತಡಕ್ಕೆ ಸಿಲುಕಬಹುದು. ಏಕಸ್ವಾಮ್ಯ ಸಾಧಿಸಲು ನಾವೂ ಪರೋಕ್ಷವಾಗಿ ಕಾರಣವಾಗಬಹುದು. ಕಂಪನಿಗಳ ಸಿದ್ಧ ಸೂತ್ರಕ್ಕೆ ಬಡ ಗ್ರಾಹಕರು ಬದ್ಧರಾಗಿರಬೇಕಾಗುತ್ತದೆ.

ಅಮೆರಿಕದಲ್ಲಿ ನೆಟ್ ನ್ಯೂಟ್ರಾಲಿಟಿ
ತಂತ್ರಜ್ಞಾನದಲ್ಲಿ ಮುಂದಿರುವ ಅಮೆರಿಕದಲ್ಲಿ ಕೂಡ ಅಲ್ಲಿನ ಸರಕಾರವು ನೆಟ್ ನ್ಯೂಟ್ರಾಲಿಟಿಗೆ ಬೆಂಬಲಿಸಲೇಬೇಕಾಗಿ ಬಂದು, ಎರಡು ತಿಂಗಳ ಹಿಂದೆ ಕಾನೂನಿಗೆ ಅಂಕಿತ ಹಾಕಿತ್ತು. ಆನ್‌ಲೈನ್ ಸಂಪರ್ಕವನ್ನು ನಿಧಾನ ಮತ್ತು ವೇಗದ ಸಂಪರ್ಕ ಎಂದು ವಿಂಗಡಿಸುವಂತಿಲ್ಲ ಎಂದು ಈ ಕಾನೂನು ಹೇಳುತ್ತದೆ. ಅಲ್ಲದೆ, ಯಾವುದೇ ಸಭ್ಯ, ಸಹ್ಯ ಮಾಹಿತಿಯನ್ನು ಇನ್ನೊಬ್ಬರಿಗೆ ಅಥವಾ ಪ್ರತಿಸ್ಫರ್ಧಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿರ್ಬಂಧ, ನಿಬಂಧನೆಗಳನ್ನು ಹೇರುವಂತಿಲ್ಲ ಎಂಬುದು ಈ ಕಾಯ್ದೆಯ ಪ್ರಮುಖಾಂಶ.

ನೆಟ್ ಬಳಕೆದಾರರಾಗಿ ನಾವೇನು ಮಾಡಬೇಕು
ತಕ್ಷಣವೇ http://www.netneutrality.in/ ಎಂಬಲ್ಲಿಗೆ ಹೋಗಿ, ಅಲ್ಲಿ ಟ್ರಾಯ್ ಸಿದ್ಧಪಡಿಸಿರುವ ಪ್ರಶ್ನಾವಳಿಗಳಿಗೆ, ನೆಟ್ ನ್ಯೂಟ್ರಾಲಿಟಿಯನ್ನು ಸಂರಕ್ಷಿಸುವಂತಹಾ ಸಿದ್ಧ ಉತ್ತರಗಳುಳ್ಳ ಟೆಂಪ್ಲೇಟ್ ದೊರೆಯುತ್ತದೆ. Submit your response ಎಂಬ ಬಟನ್ ಕ್ಲಿಕ್ ಮಾಡಿ, ಉತ್ತರಗಳನ್ನು ಓದಿ, ನಿಮಗೆ ಬೇಕಿದ್ದರೆ ಬದಲಾಯಿಸಿಕೊಳ್ಳಬಹುದು. ನಂತರ Submit ಮಾಡಲು ಪ್ರಶ್ನೋತ್ತರವನ್ನು ಕಾಪಿ ಮಾಡಿಕೊಳ್ಳುವ ಆಯ್ಕೆ ದೊರೆಯುತ್ತದೆ. ನಿಮ್ಮ ಇಮೇಲ್ ಮೂಲಕ ಅದನ್ನು advqos@trai.gov.in ಗೆ ಏಪ್ರಿಲ್ 24ರೊಳಗೆ ತಲುಪುವಂತೆ ಕಳುಹಿಸಿದರಾಯಿತು. ಮತ್ತೊಂದೆಡೆ https://www.change.org/ ನಲ್ಲಿ ಈಗಾಗಲೇ ನೆಟ್ ಬಳಕೆದಾರರು ಟ್ರಾಯ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಲಕ್ಷಾಂತರ ಮಂದಿ ಈಗಲೂ ಅರ್ಜಿ ಸಲ್ಲಿಸುತ್ತಿದ್ದಾರೆ.

ಕೇಂದ್ರದ ಭರವಸೆ
ನೆಟ್ ಸಮಾನತೆ ಬಗ್ಗೆ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಜನಾಂದೋಲನದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್, ಮುಕ್ತ ಅಂತರ್ಜಾಲವನ್ನು ಬೆಂಬಲಿಸಿದ್ದಾರೆ. ಜನ ಸಾಮಾನ್ಯರು ಯಾವುದೇ ತಾರತಮ್ಯವಿಲ್ಲದೆ ಇಂಟರ್ನೆಟ್ ಬಳಸುವಂತಾಗಬೇಕು ಎಂದಿರುವ ಅವರು, ಈ ಕುರಿತು ಟೆಲಿಕಾಂ ನಿಯಂತ್ರಕ (ಟ್ರಾಯ್) ಬದಲಾಗಿ ಟೆಲಿಕಾಂ ಇಲಾಖೆಯೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಆರು ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದ್ದು, ಮುಂದಿನ ತಿಂಗಳು ಸಮಿತಿಯು ಟೆಲಿಕಾಂ ಇಲಾಖೆಗೆ ತನ್ನ ಶಿಫಾರಸುಗಳನ್ನು ಸಲ್ಲಿಸಲಿದೆ.

ಟ್ರಾಯ್ ಮಾಡಿದ್ದೇನು
ಓವರ್ ದಿ ಟಾಪ್ (ಒಟಿಟಿ) ಅಂದರೆ ಸರಳವಾಗಿ ಹೇಳುವುದಾದರೆ, ಟೆಲಿಕಾಂ ಆಪರೇಟರುಗಳು ನೀಡುವ ಇಂಟರ್ನೆಟ್ ಸೇವೆಯನ್ನು ಬಳಸಿ, ತಮ್ಮದೇ ಸೇವೆ ಒದಗಿಸುವ ಅಪ್ಲಿಕೇಶನ್‌ಗಳ (ಆ್ಯಪ್) ಮೇಲೆ ನಿಯಂತ್ರಣ ಹೇರಬೇಕೇ ಬೇಡವೇ ಎಂಬ ಕುರಿತು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದೆ. ಮಾರ್ಚ್ 27ರಿಂದ ಇದು ಆರಂಭವಾಗಿದ್ದು, ಏಪ್ರಿಲ್ 24ರವರೆಗೆ ಮಾತ್ರ ಕಾಲಾವಕಾಶವಿದೆ. ಇದಕ್ಕೆ ಪ್ರತಿ-ವಾದಗಳನ್ನು ಸಲ್ಲಿಸಲು ಮೇ 8ರವರೆಗೆ ಕಾಲಾವಕಾಶವಿದೆ. ಆದರೆ, ಜನ ಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸಲು, ಜನರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಹೇಳಲು ಟ್ರಾಯ್ ವಿಫಲವಾಗಿದೆ ಎಂಬ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಟೆಲಿಕಾಂ ಕಂಪನಿಗಳ ಒತ್ತಡಕ್ಕೆ ಟ್ರಾಯ್ ಸಿಲುಕುತ್ತಿದೆ ಎಂದೂ ನೆಟ್ಟಿಗರು ಆಕ್ರೋಶದಿಂದ ನುಡಿದಿದ್ದಾರೆ.

ನೆಟ್ ನ್ಯೂಟ್ರಾಲಿಟಿಯ ಪ್ರಮುಖ 3 ಪರಿಣಾಮಗಳು
* ಪ್ರತಿಸ್ಫರ್ಧಿಗಳ ವೆಬ್ ತಾಣಗಳಿಗೆ ತಡೆ ಅಥವಾ ನಿರ್ಬಂಧ ಹೇರುವುದು
* ಪ್ರತಿಸ್ಫರ್ಧಿಗಳ ವೆಬ್ ತಾಣಗಳಿಗೆ ಪ್ರವೇಶವನ್ನು ವಿಳಂಬವಾಗಿಸುವುದು
* ಹಣ ನೀಡಿದ ಸಂಸ್ಥೆಗಳ ಮಾಹಿತಿಗೆ ಆದ್ಯತೆ ನೀಡಿ, ಬಳಕೆದಾರರಿಗೆ ಕ್ಷಿಪ್ರವಾಗಿ ರವಾನಿಸುವುದು

ನೆಟ್ಟಿಗರ ಹೋರಾಟದ ಕ್ಷಿಪ್ರ ಪರಿಣಾಮಗಳು
ಏರ್‌ಟೆಲ್ ಜೀರೋ ವ್ಯವಸ್ಥೆಯಿಂದ ಹೊರಬಂದ ಫ್ಲಿಪ್‌ಕಾರ್ಟ್
ಇಂಟರ್ನೆಟ್ ಡಾಟ್ ಆರ್ಗ್‌ನಿಂದ ಹೊರಬಂದ ಕ್ಲಿಯರ್ ಟ್ರಿಪ್, ಎನ್‌ಡಿಟಿವಿ
ನೆಟ್ ನ್ಯೂಟ್ರಾಲಿಟಿಯನ್ನು ಇಂಟರ್ನೆಟ್ ಡಾಟ್ ಆರ್ಗ್ ವಿರೋಧಿಸುವುದಿಲ್ಲ ಎಂದು ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟನೆ
ಏರ್‌ಟೆಲ್ ಜೀರೋ ಮುಕ್ತ ವ್ಯವಸ್ಥೆಯಾಗಿದ್ದು, ಪಾವತಿ ಕೇಂದ್ರವಲ್ಲ ಎಂದು ಏರ್‌ಟೆಲ್ ಸ್ಪಷ್ಟನೆ
ನೆಟ್ ನ್ಯೂಟ್ರಾಲಿಟಿಗೆ ಟೈಮ್ಸ್ ಗ್ರೂಪ್, ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಒಕ್ಕೂಟ (IMAI), ಅಮೆಜಾನ್ ಸಹಿತ ಹಲವು ಸಂಸ್ಥೆಗಳ ಬೆಂಬಲ

ಟೆಕ್ ನೌ: ಅವಿನಾಶ್ ಬಿ. ವಿಜಯ ಕರ್ನಾಟಕ ಏಪ್ರಿಲ್ 20, 2015

LEAVE A REPLY

Please enter your comment!
Please enter your name here