ಸಾಫ್ಟ್‌ವೇರ್ ಇಲ್ಲದೆಯೇ ಪಿಡಿಎಫ್!

0
598

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ: ಡಿಸೆಂಬರ್ 02, 2013

ಯಾವುದೇ ಲೇಖನ, ಡಾಕ್ಯುಮೆಂಟ್‌ಗಳು, ಮಹತ್ವದ ದಾಖಲೆಗಳು, ಆನ್‌ಲೈನ್ ಬಿಲ್‌ಗಳು, ಆನ್‌ಲೈನ್ ರಶೀದಿಗಳೆಲ್ಲವನ್ನೂ ಸುರಕ್ಷಿತವಾಗಿ ಇರಿಸಿಕೊಳ್ಳುವ ಒಂದು ಫಾರ್ಮ್ಯಾಟ್ ಎಂದರೆ ಪಿಡಿಎಫ್ (ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್). ಪ್ರಕಟವಾಗಿರುವ ಬಹುಮುಖ್ಯ ಲೇಖನಗಳನ್ನು ಕಾಯ್ದಿಟ್ಟುಕೊಳ್ಳಲು, ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪುಸ್ತಕಗಳನ್ನು ಓದಲು ಕೂಡ ಪಿಡಿಎಫ್ ನಮೂನೆಯು ನೆರವಾಗುತ್ತದೆ.

ಅಡೋಬಿ ಕಂಪನಿಯು ಪಿಡಿಎಫ್‌ಗೆ ಪ್ರಸಿದ್ಧಿ ಪಡೆದಿದೆ. ಅದರ ಪಿಡಿಎಫ್ ರೀಡರ್ ತಂತ್ರಾಂಶ ಉಚಿತವಾಗಿ ಲಭ್ಯವಿದೆ, ಆದರೆ ಪಿಡಿಎಫ್ ರೈಟರ್ (ಯಾವುದೇ ದಾಖಲೆಯನ್ನು ಪಿಡಿಎಫ್‌ಗೆ ಪರಿವರ್ತಿಸುವ ತಂತ್ರಾಂಶ) ಮಾತ್ರ ಉಚಿತವಲ್ಲ. ಆದರೂ ಕೂಡ ದುಬಾರಿ ವೆಚ್ಚದ ಸಾಫ್ಟ್‌ವೇರ್‌ಗಳನ್ನು ಖರೀದಿಸದೆಯೇ ಯಾವುದೇ ಡಾಕ್ಯುಮೆಂಟ್‌ಗಳನ್ನು ಉಚಿತವಾಗಿ ಪಿಡಿಎಫ್ ಮಾಡಿಕೊಳ್ಳಬಹುದು. Free PDF converter ಅಂತ ಅಂತರ್ಜಾಲದಲ್ಲಿ ಸರ್ಚ್ ಮಾಡಿದರೆ (ಗೂಗಲ್ ಅಥವಾ ಬಿಂಗ್ ಸರ್ಚ್ ಎಂಜಿನ್‌ಗಳ ಮೂಲಕ) ಸಾಕಷ್ಟು ಉಚಿತ ತಂತ್ರಾಂಶಗಳ ಪಟ್ಟಿಯೇ ಕಂಡುಬರುತ್ತದೆ. ಅವುಗಳಲ್ಲಿ doPDF.com ನಲ್ಲಿ ದೊರೆಯುವ ತಂತ್ರಾಂಶದ ಬಗ್ಗೆ ಈ ಹಿಂದೆ ತಿಳಿಸಿದ್ದೆ. ಇದಲ್ಲದೆ, ಆನ್‌ಲೈನ್‌ನಲ್ಲೇ ಪಿಡಿಎಫ್ ಮಾಡಬಲ್ಲ ಸಾಕಷ್ಟು ವ್ಯವಸ್ಥೆಗಳಿದ್ದರೂ, ಅದಕ್ಕಾಗಿ ನೀವು ಸೇವೆ ಒದಗಿಸುವ ತಾಣಗಳಿಗೆ ಹೋಗಬೇಕಾಗುತ್ತದೆ.

ಈಗ, ನಾನಿಲ್ಲಿ ಹೇಳಹೊರಟಿರುವುದು, ನಿಮ್ಮ ಸಿಸ್ಟಂನಲ್ಲಿ ಯಾವುದೇ ಬೇರೆ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದೆಯೇ ಪಿಡಿಎಫ್ ಮಾಡಬಹುದಾದ ಒಂದು ವಿಧಾನದ ಬಗ್ಗೆ. ಇಷ್ಟೇ ಅಲ್ಲ, ನಿಮಗೆ ಯಾವುದಾದರೂ ಮಹತ್ವದ ಇಮೇಲ್ ಬಂದಿದ್ದರೆ, ಅದನ್ನು ಭದ್ರವಾಗಿ ಪಿಡಿಎಫ್ ರೂಪದಲ್ಲಿ ಕಾಯ್ದಿಟ್ಟುಕೊಳ್ಳಬೇಕೆಂದು ನೀವು ಬಯಸಿದರೆ, ಅದಕ್ಕೂ ಅನುಕೂಲವಾದ ಒಂದು ವ್ಯವಸ್ಥೆ ಇದೆ. ಅದುವೇ pdfconvert.me.

ಇದು ಹೇಗೆ ಕೆಲಸ ಮಾಡುತ್ತದೆ?
ಇಮೇಲ್ ಅನ್ನು ಪಿಡಿಎಫ್ ಆಗಿ ಪರಿವರ್ತಿಸಲು ಹೆಚ್ಚೇನೂ ಕೆಲಸವಿರುವುದಿಲ್ಲ. ನಿಮಗೆ ಬಂದಿರುವ ಇಮೇಲ್ ಅನ್ನು pdfconvert@pdfconvert.me ಎಂಬ ಮೇಲ್ ವಿಳಾಸಕ್ಕೆ ಫಾರ್ವರ್ಡ್ ಮಾಡಿಬಿಡಿ. ಅಷ್ಟೆ. ಒಂದೆರಡು ನಿಮಿಷಗಳಲ್ಲಿ ಆ ಇಮೇಲ್‌ನ ಪ್ರತಿಯು ಪಿಡಿಎಫ್ ರೂಪದಲ್ಲಿ ಪ್ರತ್ಯುತ್ತರದ ಇಮೇಲ್‌ಗೆ ಅಟ್ಯಾಚ್‌ಮೆಂಟ್ ಆಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಬೀಳುತ್ತದೆ.

ನಿಮ್ಮಲ್ಲಿ ಯಾವುದೇ ಎಂಎಸ್ ವರ್ಡ್, ಎಕ್ಸೆಲ್ ಅಥವಾ ಪವರ್‌ಪಾಯಿಂಟ್ ದಾಖಲೆಗಳಿದ್ದರೂ ಕೂಡ, ಅದನ್ನೂ ಸುಲಭವಾಗಿ ಪಿಡಿಎಫ್ ರೂಪಕ್ಕೆ ಪರಿವರ್ತಿಸಿಕೊಳ್ಳಬಹುದು. ಅದಕ್ಕೆ ನೀವು ಈ ಅಟ್ಯಾಚ್‌ಮೆಂಟ್‌ಗಳನ್ನು ಕಳುಹಿಸಬೇಕಾಗಿರುವುದು attachconvert@pdfconvert.me ಎಂಬ ಇಮೇಲ್ ವಿಳಾಸಕ್ಕೆ. ಕಳುಹಿಸಿದ ತಕ್ಷಣ, ಅವುಗಳ ಪಿಡಿಎಫ್ ರೂಪಗಳು ಅಟ್ಯಾಚ್‌ಮೆಂಟ್ ಆಗಿ ನಿಮಗೆ ಮರಳಿ ಬರುತ್ತವೆ. ಆದರೆ ಗಮನಿಸಿ; ಹಲವು ಫೈಲ್‌ಗಳಿವೆ ಎಂದುಕೊಂಡು ಒಂದೇ ಬಾರಿ ಮೇಲ್‌ಗೆ ಅಟ್ಯಾಚ್ ಮಾಡಿ ಕಳುಹಿಸಬೇಡಿ. ಹಾಗೆ ಮಾಡಿದರೆ ನಿಮಗೆ ವಾಪಸ್ ಬರೋದು ಮೊದಲನೇ ಫೈಲ್‌ನ ಪಿಡಿಎಫ್ ಮಾತ್ರ.

ಇನ್ನೂ ಒಂದು ಅನುಕೂಲವಿದೆ. ಯಾವುದಾದರೂ ವೆಬ್ ತಾಣದಲ್ಲಿ ಒಂದು ಪುಟ ನಿಮಗೆ ಆಸಕ್ತಿ ಮೂಡಿತು ಅಂತಿಟ್ಟುಕೊಳ್ಳಿ. ಅದನ್ನು ತಕ್ಷಣಕ್ಕೆ ಓದಲು ಸಮಯವಿಲ್ಲ, ಸಮಯವಾದಾಗ ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಆರಾಮವಾಗಿ ಓದಬೇಕೆಂದುಕೊಳ್ಳುತ್ತೀರಿ. ಹಾಗಿದ್ದರೆ, ಆ ಪುಟದ ವಿಳಾಸವನ್ನು (ಯುಆರ್‌ಎಲ್) ಇಮೇಲ್‌ನ ಸಂದೇಶ ಭಾಗದಲ್ಲಿ ಪೇಸ್ಟ್ ಮಾಡಿ webconvert@pdfconvert.me ಎಂಬ ಇಮೇಲ್ ವಿಳಾಸಕ್ಕೆ ಕಳುಹಿಸಿ. ಕೆಲವೇ ಕ್ಷಣಗಳಲ್ಲಿ ಆ ಪುಟದ ಪಿಡಿಎಫ್ ನಿಮ್ಮ ಇನ್‌ಬಾಕ್ಸ್‌ನಲ್ಲಿರುತ್ತದೆ. ಕೆಲವೊಂದು ಕಡೆ ಇಂಟರ್ನೆಟ್‌ಗೆ ಫಿಲ್ಟರ್ ಅಥವಾ ಕೆಲವು ಸೈಟುಗಳನ್ನು ಬ್ಲಾಕ್ ಮಾಡಿರುವ ಸಂದರ್ಭದಲ್ಲಿ, ಆ ಪುಟದಲ್ಲಿ ಲಭ್ಯವಿರುವ ಪೂರ್ತಿ ಮಾಹಿತಿಯನ್ನು ನೋಡಲು ಇದು ಅನುಕೂಲ.

pdfconvert.me ಗೆ ನೀವು ಕಳುಹಿಸುವ ಇಮೇಲ್ ಗೌಪ್ಯವಾಗಿರುತ್ತದೆಯೇ? ಈ ಸೈಟಿನ ಷರತ್ತುಗಳು ಮತ್ತು ನಿಯಮಗಳ ಪುಟದಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ರೂಪ ಪರಿವರ್ತನೆ (ಪಠ್ಯದಿಂದ ಪಿಡಿಎಫ್) ಸಂದರ್ಭದಲ್ಲಿ ಮಾತ್ರವೇ ಅವರ ಸರ್ವರ್‌ನಲ್ಲಿ ನಿಮ್ಮ ಇಮೇಲ್ ಸ್ಟೋರ್ ಆಗಿರುತ್ತದೆ.

ಆದರೆ, ಇದರಲ್ಲಿ ಪರೀಕ್ಷಿಸಿ ನೋಡಿದಾಗ, ಈ ಪಿಡಿಎಫ್ ವ್ಯವಸ್ಥೆಯು ಯೂನಿಕೋಡ್ ಅಕ್ಷರಶೈಲಿಯಾಗಲೀ, ನುಡಿ, ಬರಹ, ಶ್ರೀಲಿಪಿಯಲ್ಲಿ ಬರೆದಿರುವ ದಾಖಲೆಗಳನ್ನು ಬೆಂಬಲಿಸುವುದಿಲ್ಲವೆಂಬುದು ತಿಳಿಯಿತು. ಅಂದರೆ, ಪಿಡಿಎಫ್‌ನಲ್ಲಿ ಅಕ್ಷರಗಳು ಜಂಕ್ ರೂಪದಲ್ಲಿ ಕಾಣಿಸುತ್ತದೆ. ಹೀಗಾಗಿ, ಕನ್ನಡದ ದಾಖಲೆಗಳನ್ನು ಪಿಡಿಎಫ್ ಮಾಡಲು doPDF ತಂತ್ರಾಂಶವನ್ನೇ ಬಳಸಬಹುದು.

ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಇಮೇಲ್ ಬಳಸುತ್ತಿದ್ದರೂ ಕೂಡ, ಈ ರೀತಿಯ ಇಮೇಲ್ ಮೂಲಕ ಪಿಡಿಎಫ್ ತರಿಸಿಕೊಳ್ಳುವ ವ್ಯವಸ್ಥೆಯ ಅನುಕೂಲ ಪಡೆದುಕೊಳ್ಳಬಹುದು. ಅದಲ್ಲದಿದ್ದರೆ, ಕಂಪ್ಯೂಟರಿನಂತೆಯೇ ಪಿಡಿಎಫ್ ಕನ್ವರ್ಟರ್ ಆ್ಯಪ್‌ಗಳು ಆಯಾ ಆ್ಯಪ್ ಸ್ಟೋರ್‌ಗಳಲ್ಲಿಯೂ ಸಿಗುತ್ತವೆ.

LEAVE A REPLY

Please enter your comment!
Please enter your name here