ವಿಂಡೋಸ್-8 ಕೇವಲ 699 ರೂ.ಗೆ ಅಪ್‌ಗ್ರೇಡ್: ಜ.31ವರೆಗೆ ಮಾತ್ರ

0
626

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-20 (ಜನವರಿ 14, 2013)

ಕಂಪ್ಯೂಟರುಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ (ಕಾರ್ಯಾಚರಣಾ ವ್ಯವಸ್ಥೆ)ಗಳು ಕಾಲದಿಂದ ಕಾಲಕ್ಕೆ ಆಧುನೀಕರಣವಾಗುತ್ತಲೇ ಇವೆ. ವಿಂಡೋಸ್‌ನಲ್ಲಿ ಸದ್ಯಕ್ಕೆ ಕನ್ನಡ ಕಾಣಿಸುವ ಎಕ್ಸ್‌ಪಿ, ವಿಸ್ತಾ ಮತ್ತು ನಂತರದ ವಿಂಡೋಸ್ 7 ಆವೃತ್ತಿಗಳನ್ನು ಹೆಚ್ಚಿನವರು ಬಳಸುತ್ತಿದ್ದರೆ, ಈ ಸಾಲಿಗೆ ಹೊಸ ಸೇರ್ಪಡೆ ವಿಂಡೋಸ್ 8. ಇದು ಸ್ಮಾರ್ಟ್‌ಫೋನ್ ಮೊಬೈಲ್‌ನಂತೆಯೇ ‘ಟಚ್’ಸ್ಕ್ರೀನ್ ಆಯ್ಕೆಯೊಂದಿಗೆ ಆಧುನಿಕ ತಂತ್ರಜ್ಞಾನದಿಂದ ಕೂಡಿದೆ. ಇದಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳಲು ಒಂದು ಲಾಭದಾಯಕ ಅವಕಾಶವಿಲ್ಲಿದೆ…

ಮಾರುಕಟ್ಟೆಯಲ್ಲಿ ಅಂದಾಜು 10-12 ಸಾವಿರ ರೂ. ಬೆಲೆ ಬಾಳುವ ವಿಂಡೋಸ್ 8 ರ ಪ್ರೋ ಆವೃತ್ತಿಯನ್ನು ಕೇವಲ 699 ರೂ. ತೆತ್ತು ನಿಮ್ಮದಾಗಿಸಿಕೊಳ್ಳಬಹುದು. ಜನವರಿ 31ರೊಳಗೆ ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡರೆ ಇದು ಸಾಧ್ಯ. ಇದನ್ನು ಪಡೆಯಲು ಏನು ಮಾಡಬೇಕೆಂಬ ಮಾಹಿತಿ ಇಲ್ಲಿದೆ.

* ನಿಮ್ಮ ಕಂಪ್ಯೂಟರು ವಿಂಡೋಸ್ 7 ಕಾರ್ಯಾಚರಣೆ ವ್ಯವಸ್ಥೆಯಲ್ಲಿರಬೇಕು (ವಿಂಡೋಸ್ 7 ಹೋಂ ಬೇಸಿಕ್, ಹೋಂ ಪ್ರೀಮಿಯಮ್, ಪ್ರೊಫೆಶನಲ್ ಅಥವಾ ಅಲ್ಟಿಮೇಟ್ ಆವೃತ್ತಿ) ವಿಂಡೋಸ್ 7 ಸ್ಟಾರ್ಟರ್ ಆವೃತ್ತಿ ಆಗುವುದಿಲ್ಲ.

* ಅದನ್ನು ನೀವು ಕಳೆದ ವರ್ಷದ (2012) ಜೂನ್ 2ರ ಬಳಿಕ ಖರೀದಿಸಿರಬೇಕು.

* ಇದು ಲೈಸೆನ್ಸ್ ಇರುವ ಪ್ರತಿಯಾಗಿರಬೇಕು (ಪೈರೇಟೆಡ್ ಕಾಪಿಗಳಿಗೆ ಅವಕಾಶವಿಲ್ಲ). ನೋಂದಾಯಿಸುವಾಗ ಅದರ ಪ್ರಾಡಕ್ಟ್ ಕೀ ನಮೂದಿಸುವ ಅಗತ್ಯವಿರುತ್ತದೆ.

* ಈ ತಿಂಗಳ 31ರವರೆಗೆ ಮಾತ್ರ ಈ ಕೊಡುಗೆ ಲಭ್ಯವಿರುತ್ತದೆ. ಅಷ್ಟರೊಳಗೆ ಖರೀದಿಸಿ ಅದನ್ನು ವಿಂಡೋಸ್ ವೆಬ್‌ಸೈಟಲ್ಲಿ (https://windowsupgradeoffer.com/en-IN/Registration) ನೋಂದಾಯಿಸಿಕೊಳ್ಳಬೇಕು (ಹೆಸರು, ಖರೀದಿಸಿದ ಮಳಿಗೆ, ನಿಮ್ಮ ಇಮೇಲ್ ವಿಳಾಸ, ಫೋನ್ ನಂಬರ್ ಮುಂತಾದ ಬಿಲ್ಲಿಂಗ್ ವಿವರಗಳು, ವಿಳಾಸ ಮತ್ತು ವಿಂಡೋಸ್ 7ರ ಪ್ರಾಡಕ್ಟ್ ಕೀ ಎಲ್ಲವನ್ನೂ ನಮೂದಿಸಬೇಕಾಗುತ್ತದೆ). ಬಳಿಕ ಡೌನ್‌ಲೋಡ್ ಮಾಡಿಕೊಳ್ಳಲು 2013ರ ಫೆಬ್ರವರಿ 28ರವರೆಗೆ ಸಮಯವಿದೆ.

* ನೋಂದಾಯಿಸಿದ ಬಳಿಕ ನಿಮ್ಮ ಇಮೇಲ್ ವಿಳಾಸಕ್ಕೊಂದು ಪ್ರೊಮೋ ಕೋಡ್ ಕಳುಹಿಸಲಾಗುತ್ತದೆ. ವೆಬ್‌ಸೈಟಿನಲ್ಲೇ ವಿಂಡೋಸ್ 8 ಖರೀದಿಸುವಾಗ ಆ ಕೋಡ್ ನಮೂದಿಸಿದ ಬಳಿಕವಷ್ಟೇ ಈ ಕೊಡುಗೆ (699 ರೂ.) ನಿಮಗೆ ಕಾಣಿಸುತ್ತದೆ.

* ಕಳೆದ ಜೂನ್‌ಗಿಂತ ಹಿಂದೆ ಖರೀದಿಸಿದ ವಿಂಡೋಸ್ 7, ಎಕ್ಸ್‌ಪಿ, ವಿಸ್ಟಾ ಮುಂತಾದ ಆಪರೇಟಿಂಗ್ ಸಿಸ್ಟಂಗಳನ್ನು ವಿಂಡೋಸ್ 8ಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳಲು ನೀಡಬೇಕಾಗಿರುವ ಮೊತ್ತ ಸುಮಾರು 1999 ರೂ.

* ಇಂಟರ್ನೆಟ್ ಸಂಪರ್ಕವಿದ್ದರೆ, ಮನೆಯಲ್ಲೇ ವಿಂಡೋಸ್ 8ಕ್ಕೆ ಅಪ್‌ಗ್ರೇಡ್ ಮಾಡಿಸಿಕೊಳ್ಳಬಹುದು (ಸುಮಾರು 2 ಜಿಬಿಯಷ್ಟು ತಂತ್ರಾಂಶ ಡೌನ್‌ಲೋಡ್ ಆಗುತ್ತದೆ.) ಡಿವಿಡಿಯಲ್ಲಿ ಬೇಕೆಂದರೆ ಹೆಚ್ಚುವರಿಯಾಗಿ 1060 ರೂ. ಹಾಗೂ ಸಾಗಾಟ ವೆಚ್ಚ 280 ರೂ. ಪಾವತಿಸಬೇಕಾಗುತ್ತದೆ.

* ನಿಮ್ಮ ಕಂಪ್ಯೂಟರ್ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ಕನಿಷ್ಠ 1 ಗಿಗಾಹರ್ಟ್ಸ್ ಪ್ರೊಸೆಸರ್, 1 ಜಿಬಿ ರಾಂ, 16 ಜಿಬಿ ಹಾರ್ಡ್ ಡಿಸ್ಕ್ ಸ್ಪೇಸ್, ಗ್ರಾಫಿಕ್ಸ್ ಕಾರ್ಡ್ ಮುಂತಾದ ತಂತ್ರಾಂಶಗಳನ್ನು ಹೊಂದಿರಬೇಕು. ಟಚ್ ಸ್ಕ್ರೀನ್‌ನ ಅನುಭವ ನಿಮಗೆ ಅಗತ್ಯವೆಂದಾದರೆ, ಅದಕ್ಕೆ ತಕ್ಕನಾಗಿ ಮಾನಿಟರ್ ಬದಲಾಯಿಸಿಕೊಳ್ಳಬೇಕು.

ನಿಮ್ಮ ಕಂಪ್ಯೂಟರಲ್ಲಿ ಈಗಿರುವ ಫೈಲುಗಳು, ಪ್ರೋಗ್ರಾಂಗಳು ವಿಂಡೋಸ್ 8ದಲ್ಲಿ ಹೊಂದುತ್ತದೆಯೇ ಅಂತ ತಿಳಿದುಕೊಳ್ಳಲು http://windows.microsoft.com/en-IN/windows-8/upgrade-to-windows-8 ಎಂಬಲ್ಲಿರುವ ಒಂದು ಅಪ್‌ಗ್ರೇಡ್ ಅಸಿಸ್ಟೆಂಟ್ ಎಂಬ ಫೈಲ್ ಡೌನ್‌ಲೋಡ್ ಮಾಡಿಕೊಂಡು ರನ್ ಮಾಡಿದರೆ, ಅದು ನಿಮ್ಮ ಕಂಪ್ಯೂಟರನ್ನು ಶೋಧಿಸಿ ಎಲ್ಲ ವಿವರಗಳನ್ನು ಒಪ್ಪಿಸುತ್ತದೆ ಮತ್ತು ಅದರ ಮೂಲಕವೇ ನೀವು ವಿಂಡೋಸ್ 8 ಖರೀದಿ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ನಿಮ್ಮ ಫೈಲುಗಳು/ಪ್ರೋಗ್ರಾಂಗಳನ್ನು ಹಾಗೆಯೇ ಉಳಿಸಿಕೊಳ್ಳುವ ವ್ಯವಸ್ಥೆಯೂ ಇದೆ.

ಮೈಕ್ರೋಸಾಫ್ಟ್ ಕಂಪನಿಯು ವಿಂಡೋಸ್ ಎಕ್ಸ್‌ಪಿಗೆ ಶೀಘ್ರದಲ್ಲೇ ತನ್ನ ಬೆಂಬಲವನ್ನು ನಿಲ್ಲಿಸಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ 10-12 ಸಾವಿರ ಬೆಲೆ ಬಾಳುವ ವಿಂಡೋಸ್ 8ರ ಪ್ರೋ ಆವೃತ್ತಿಯು ಕೇವಲ 699 ರೂ.ಗೆ ಸಿಗುತ್ತದೆಯೆಂದಾದರೆ ಇದು ಖಂಡಿತಾ ಲಾಭದಾಯಕವೇ.

LEAVE A REPLY

Please enter your comment!
Please enter your name here