ವಿಂಡೋಸ್ 10: ನೀವು ತಿಳಿದಿರಬೇಕಾದ 6 ಸಂಗತಿಗಳು

ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯ 10ನೇ ಆವೃತ್ತಿಯ ಬಗ್ಗೆ ಕಳೆದ ವಾರ ಮುನ್ನೋಟವನ್ನು ಪ್ರದರ್ಶಿಸಿದ್ದು, ವಿಂಡೋಸ್ ಬಳಕೆದಾರರಲ್ಲಿ ಆಸೆ ಚಿಗುರಿಸಿದೆ. ಈ ವರ್ಷದಲ್ಲೇ ಇದು ಗ್ರಾಹಕರಿಗೆ ಲಭ್ಯವಾಗಲಿದ್ದು, ವಿಂಡೋಸ್ 7 ಹಾಗೂ 8 ಬಳಕೆದಾರರಿಗೆ ಉಚಿತ ಅಪ್‌ಗ್ರೇಡ್ ರೂಪದಲ್ಲಿ ದೊರೆಯಲಿದೆ. ಹೊಸ ಬ್ರೌಸರ್ ಘೋಷಣೆ, ವಿಂಡೋಸ್ ಫೋನ್‌ಗಳಲ್ಲಿ ಪ್ರಸಿದ್ಧಿ ಪಡೆದಿರುವ ಕೋರ್ಟನಾ ಎಂಬ ಆಪ್ತಸಹಾಯಕ ತಂತ್ರಾಂಶವು ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗೂ ಬರಲಿರುವುದು ಮತ್ತು ಗೂಗಲ್ ಗ್ಲಾಸ್ ಹೋಲುವ 3ಡಿ ಕನ್ನಡಕ ಕೂಡ ಮಾರುಕಟ್ಟೆಗೆ ಬರಲಿದೆ. ಅವುಗಳ ಮೇಲೆ ಒಂದಿಷ್ಟು ಬೆಳಕು…

ಉಚಿತ ಅಪ್‌ಗ್ರೇಡ್
Windows10ಈಗಾಗಲೇ ವಿಂಡೋಸ್ 7 ಹಾಗೂ ವಿಂಡೋಸ್ 8 (8.1) ಆವೃತ್ತಿಯ ಕಾರ್ಯಾಚರಣಾ ವ್ಯವಸ್ಥೆ ಬಳಸುತ್ತಿರುವವರಿಗೆ ವಿಂಡೋಸ್ 10 ಉಚಿತ ಅಪ್‌ಗ್ರೇಡ್ ಆಗಿ ದೊರೆಯಲಿದೆ. ವಿಂಡೋಸ್ 7 ಬೆಂಬಲವನ್ನು ಮೈಕ್ರೋಸಾಫ್ಟ್ ಈಗಾಗಲೇ ನಿಲ್ಲಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲೊಂದು ಲಕ್ಷ್ಮಣರೇಖೆ ಇದೆ. ಮೊದಲ ವರ್ಷ ಅಪ್‌ಗ್ರೇಡ್ ಮಾಡಿಕೊಂಡರೆ ಮಾತ್ರ ಉಚಿತ. ಒಂದು ವರ್ಷ ದಾಟಿದ ಮೇಲೆ ವಿಂಡೋಸ್ 8ರಿಂದ ವಿಂಡೋಸ್ 10ಕ್ಕೆ ಬದಲಾಗಗಬೇಕೆಂದುಕೊಂಡರೆ ಹಣ ಪಾವತಿಸಬೇಕಾಗುತ್ತದೆ.

ಡೆಸ್ಕ್‌ಟಾಪ್‌ಗೆ ಕೋರ್ಟನಾ
ನಮಗೆ ಬಂದ ಸಂದೇಶಗಳನ್ನು ಓದಿ ಹೇಳುವ, ನಾವು ಹೇಳಿದ್ದನ್ನು ಟೈಪ್ ಮಾಡುವ, ಸರ್ಚ್ ಮಾಡಿ ನಮ್ಮ ಮುಂದಿಡುವ ಆಪ್ತ ಸಹಾಯಕನಂತೆ ಕೆಲಸ ಮಾಡುವ ಆ್ಯಪ್ ಕೋರ್ಟನಾ, ಇನ್ನು ಮುಂದೆ ವಿಂಡೋಸ್ 10ರ ಡೆಸ್ಕ್‌ಟಾಪ್/ಲ್ಯಾಪ್‌ಟಾಪ್ ಕಂಪ್ಯೂಟರುಗಳಿಗೂ ಲಭ್ಯವಾಗಲಿದೆ.

ಗೇಮಿಂಗ್
ಎಲ್ಲ ವಿಂಡೋಸ್ 10 ಸಾಧನಗಳಲ್ಲಿ ಎಕ್ಸ್‌ಬಾಕ್ಸ್ ಒನ್ ಎಂಬ ಗೇಮಿಂಗ್ ಆ್ಯಪ್ ಇರಲಿದೆ. ಇದು ಮೈಕ್ರೋಸಾಫ್ಟ್‌ನ ಗೇಮಿಂಗ್ ಕನ್ಸೋಲ್ ಆಗಿರುವ ಎಕ್ಸ್‌ಬಾಕ್ಸ್ ಲೈವ್ ಜತೆಗೆ ಸಂಪರ್ಕಿಸಲು ನೆರವಾಗುತ್ತದೆ. ಅದರ ಬಳಕೆದಾರರೊಂದಿಗೆ ಆನ್‌ಲೈನ್‌ನಲ್ಲಿ ಆಟವನ್ನೂ ಆಡಬಹುದಾಗಿದೆ. ಗೇಮ್‌ಗಳನ್ನು ನಿಲ್ಲಿಸಿ, ರೆಕಾರ್ಡ್ ಮಾಡಿಕೊಳ್ಳುವ, ಎಕ್ಸ್‌ಬಾಕ್ಸ್ ಒನ್‌ನಿಂದ ವಿಂಡೋಸ್ 10 ಸಾಧನಕ್ಕೆ ಗೇಮ್‌ಗಳನ್ನು ಸ್ಟ್ರೀಮ್ ಮಾಡುವ ಆಯ್ಕೆಯೂ ದೊರೆಯಲಿದೆ.

ಹೋಲೋಲೆನ್ಸ್
ಮೈಕ್ರೋಸಾಫ್ಟ್ ಕಾರ್ಯಕ್ರಮದಲ್ಲಿ ಗಮನ ಸೆಳೆದ ಅಂಶವೆಂದರೆ, ಗೂಗಲ್ ಗ್ಲಾಸ್ ಎಂಬ ಕನ್ನಡಕವನ್ನು ಹೋಲುವ 3ಡಿ ಸಾಧನ. ಇದರ ಹೆಸರು ಹೋಲೋಲೆನ್ಸ್. 3ಡಿ ಚಿತ್ರಗಳನ್ನು ನೋಡಲು ಅನುಕೂಲ ಕಲ್ಪಿಸುತ್ತದೆ. ಎಕ್ಸ್‌ಬಾಕ್ಸ್ ಮೂಲಕ ಗೇಮಿಂಗ್‌ನಲ್ಲಿ ತೊಡಗಿಕೊಂಡವರಿಗೆ ಇದು ಅದ್ಭುತ ಅನುಭವ ನೀಡಲಿದೆ. ಜತೆಗೆ ಹೋಲೋ ಸ್ಟುಡಿಯೋ ಎಂಬ ಆ್ಯಪ್ ಇದೆ. ಹೋಲೋಗ್ರಾಂ ರಚಿಸಲು ಇದು ನೆರವಾಗುತ್ತದೆ.

ಹೊಸ ಬ್ರೌಸರ್
ಇಂಟರ್ನೆಟ್ ಎಕ್ಸ್‌ಪ್ಲೋರರ್ ಎಂಬ ಬ್ರೌಸರ್‌ನಿಂದ ಜನರು ದೂರವಾಗಿ ಗೂಗಲ್ ಕ್ರೋಮ್ ಅಥವಾ ಫೈರ್‌ಫಾಕ್ಸ್ ಬ್ರೌಸರ್‌ಗಳತ್ತ ಹೋಗದಂತೆ ತಡೆಯಲು ಮೈಕ್ರೋಸಾಫ್ಟ್, ತನ್ನದೇ ಆದ ಹೊಸ, ಹಗುರವಾದ ಬ್ರೌಸರ್ ಒಂದನ್ನು ತಯಾರಿಸಿ ನೀಡುತ್ತಿದೆ. ಇದರ ಹೆಸರು ಸ್ಪಾರ್ಟನ್ ಬ್ರೌಸರ್. ಆರಂಭದಲ್ಲಿ ಫೋನ್‌ಗೆ ಮಾತ್ರ ಲಭ್ಯವಿರುವ ಇದು, ಬೇರೆ ಸಾಧನಗಳಿಗೂ ನಿಧಾನವಾಗಿ ಬರಲಿವೆ.

ಮೊಬೈಲ್
ವಿಂಡೋಸ್ 8.1 ಇರುವ, ಆದರೆ ಅತ್ಯಾಧುನಿಕ ಹಾರ್ಡ್‌ವೇರ್ ಹೊಂದಿರುವ ಲುಮಿಯಾ ಸ್ಮಾರ್ಟ್‌ಫೋನ್‌ಗಳಿಗೆ ಉಚಿತವಾಗಿ ವಿಂಡೋಸ್ 10 ದೊರೆಯಲಿದೆ. ನಾಲ್ಕು ವರ್ಷಗಳಿಂದ ಚಾಲ್ತಿಯಲ್ಲಿರುವ ರೂಪ ವಿನ್ಯಾಸವನ್ನೇ ಹೊಂದಿರಲಿದೆಯಾದರೂ ಒಂದಿಷ್ಟು ಆಧುನೀಕೃತ ವ್ಯವಸ್ಥೆ ಇದರಲ್ಲಿ ಇರುತ್ತದೆ. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಫ್ಯಾಬ್ಲೆಟ್, ಸ್ಮಾರ್ಟ್‌ಫೋನ್ … ಹೀಗೆ ವಿಭಿನ್ನ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಒಂದೇ ಆಪರೇಟಿಂಗ್ ಸಿಸ್ಟಂ ಕೆಲಸ ಮಾಡುತ್ತದೆ. ಹೀಗಿದ್ದರೆ, ಒಂದು ಸಾಧನದಲ್ಲಿ ಉದಾಹರಣೆಗೆ ಕಂಪ್ಯೂಟರಿನಲ್ಲಿ ಒಂದು ಕೆಲಸ ಆರಂಭಿಸಿದರೆ, ಸ್ಮಾರ್ಟ್‌ಫೋನ್‌ನಲ್ಲೂ ಅದನ್ನು ಮುಂದುವರಿಸಲು ಅನುಕೂಲವಾಗುತ್ತದೆ. ‘ವಿಂಡೋಸ್ ಫೋನ್’ ಸಾಫ್ಟ್‌ವೇರ್ ಹೆಸರಿನಿಂದ ‘ಫೋನ್’ ಎಂಬುದು ಸಂಪೂರ್ಣವಾಗಿ ಮರೆಯಾಗಲಿದೆ.
ವಿಜಯ ಕರ್ನಾಟಕದಲ್ಲಿ ಜ.26, 2015

Leave a Reply

Your email address will not be published. Required fields are marked *