ಕೋಪದ ತಾಪ…!

4
882

Butterfly.gif   ಆತ್ಮೀಯರೇ, ನಿಮ್ಮ ಕೋಪ (ಶಾರ್ಟ್ ಟೆಂಪರ್) ತಹಬದಿಗೆ ತರಲು ಇದು ಸಹಾಯಕವಾಗಬಹುದು ಎಂದು ಭಾವಿಸಿದ್ದೇನೆ. ಯೋಚಿಸಿ ನೋಡಿ. ಯಾವುದೇ ರೀತಿಯಲ್ಲಿ ಟೆಂಪರ್ ಕಳೆದುಕೊಳ್ಳದೆ, ಇದರ ಕೊನೆಯ ಸಾಲಿನವರೆಗೂ ತಾಳ್ಮೆಯಿಂದ ಓದಿ.

   ಒಂದಾನೊಂದು ಕಾಲದಲ್ಲಿ ಪ್ರತಿಯೊಂದಕ್ಕೂ ಸಿಡುಕುವ ಅಂದರೆ ಶಾರ್ಟ್ ಟೆಂಪರ್ ಉಳ್ಳ ಹುಡುಗನೊಬ್ಬನಿದ್ದ.

   ಒಂದು ದಿನ ಅವನ ಅಪ್ಪ, ಅವನಿಗೆ ಮೊಳೆಗಳು ತುಂಬಿದ ಚೀಲವೊಂದನ್ನು ಕೊಟ್ಟು, ನೋಡು ಮಗಾ, ನೀನು ಪ್ರತಿಬಾರಿ ಟೆಂಪರ್ ಕಳೆದುಕೊಂಡಾಗ, ಒಂದು ಸುತ್ತಿಗೆ ತೆಗೆದುಕೊಂಡು, ಇದರಲ್ಲಿರುವ ಮೊಳೆಯನ್ನು,  ನೋಡು…. ಆ…. ಅಲ್ಲಿ ಕಾಣುತ್ತಿರುವ ನಮ್ಮ ಮನೆಯ ಮರದ ಗೇಟಿಗೆ ಹೊಡೆಯಬೇಕು ಎಂದು ಸೂಚನೆ ನೀಡಿದ.

   ಸರಿ, ಮೊದಲ ದಿನವೇ ಈ ಹುಡುಗ 48 ಮೊಳೆಗಳನ್ನು ಗೇಟಿಗೆ ಹೊಡೆದುಬಿಟ್ಟ.
ವಾರಗಳುರುಳಿದಂತೆ, ದಿನಂಪ್ರತಿ ಈ ಹುಡುಗ ಗೇಟಿಗೆ ಬಡಿಯುವ ಮೊಳೆಗಳ ಸಂಖ್ಯೆ ಕಡಿಮೆಯಾಗತೊಡಗಿತು. ಅಂದರೆ ಇವನ ಕೋಪ ತಾಪ ಶಮನವಾಗುತ್ತಾ ಬಂತು. ಇದಕ್ಕೆ ಪ್ರಮುಖ ಕಾರಣ, ಈ ಮೊಳೆಗಳನ್ನು ಕಷ್ಟಪಟ್ಟು ಗೇಟಿಗೆ ಬಡಿಯುವ ಬದಲು ಕೋಪವನ್ನು ನಿಯಂತ್ರಿಸುವುದೇ ಸುಲಭ ಎಂಬುದು ಅವನ ಅರಿವಿಗೆ ಬಂತು.

   ಕೊನೆಗೊಂದು ದಿನ ಬಂತು. ಆ ದಿನ ಈ ಹುಡುಗ ಒಂದೇ ಒಂದು ಮೊಳೆಯನ್ನೂ ಗೇಟಿಗೆ ಬಡಿದಿರಲಿಲ್ಲ. ಅಂದರೆ ಆತನ ಮನಸ್ಸು ತಾಳ್ಮೆಗೆ ಒಗ್ಗಿಹೋಗಿತ್ತು.

   ವಿಷಯವನ್ನು ಈ ಹುಡುಗ ಅಪ್ಪನಿಗೆ ಹೇಳಿದ. ಆದರೆ ತಂದೆ ಬಿಡಬೇಕಲ್ಲ. ನೀನು ಕೋಪವನ್ನು ಎಷ್ಟರವರೆಗೆ ನಿಯಂತ್ರಿಸಿಕೊಳ್ಳುತ್ತೀಯೋ, ಅಷ್ಟರವರೆಗೆ ಪ್ರತಿದಿನ, ದಿನಕ್ಕೊಂದರಂತೆ ಮೊಳೆಗಳನ್ನು ಆ ಗೇಟಿನಿಂದ ತೆಗೆಯುತ್ತಿರಿ ಎಂದು ಸೂಚನೆ ನೀಡಿದ.

   ದಿನಗಳು, ವಾರಗಳು, ತಿಂಗಳುಗಳು ಉರುಳಿದವು. "ಎಲ್ಲಾ ಮೊಳೆಗಳನ್ನು ಗೇಟಿನಿಂದ ಕಿತ್ತು ಹಾಕಿಬಿಟ್ಟೆ ಅಪ್ಪಾ" ಎಂದು ಈ ಹುಡುಗ ಹೇಳುವ ದಿನ ಬಂತು. ವಿಷಯ ತಿಳಿಸಿದಾಗ, ಚತುರ ತಂದೆ, ಮಗನನ್ನು ಆ ಮರದ ಗೇಟಿನ ಬಳಿಗೆ ಕರೆದುಕೊಂಡು ಹೋದ.
ಮಗನ ಮುಖವನ್ನೇ ನೋಡುತ್ತಾ ತಂದೆ ಹೇಳುತ್ತಾನೆ:

   "ಒಳ್ಳೆಯದನ್ನೇ ಮಾಡಿದೆ ಮಗಾ, ಆದರೆ ಆ ಮರದ ಗೇಟಿನತ್ತ ಒಮ್ಮೆ ನೋಡಿಬಿಡು…. ಅದರ ಮೈಮೇಲೆ ಎಷ್ಟೊಂದು ತೂತುಗಳು…. ಆ ಗೇಟು ಹಿಂದಿನಂತಾಗುವುದು ಎಂದಿಗೂ ಸಾಧ್ಯವಿಲ್ಲ…..

   ನೀನು ಕೋಪಾವೇಶದಲ್ಲಿ ಏನನ್ನಾದರೂ ಕೂಗಾಡಿಬಿಟ್ಟರೆ, ಆ ಮಾತುಗಳು ಉಳಿದವರ ಮನಸ್ಸಿನಲ್ಲಿ ಇದೇ ರೀತಿಯ ಅಚ್ಚಳಿಯದ ರಂಧ್ರಗಳನ್ನು ಉಳಿಸುತ್ತವೆ.
ನೀನು ಕೋಪದಿಂದ ಒಬ್ಬ ವ್ಯಕ್ತಿಗೆ ತಿವಿಯಬಹುದು, ಕೋಪ ಶಮನವಾದಾಗ ಚಾಕುವನ್ನು ಹೊರಕ್ಕೆಳೆಯಬಹುದು. ನೀನು ಎಷ್ಟೇ ಬಾರಿ "ಸಾರಿ" ಎಂದು ಹೇಳಿದರೂ, ಆ ಗಾಯವಿದೆಯಲ್ಲ…. ಅದು ಎಂದಿಗೂ ಮಾಸಲಾರದು."

   "ಶಾರೀರ"ದ ಗಾಯ ಕೂಡ "ಶರೀರ"ದ ಗಾಯದಷ್ಟೇ ಗಾಢವಾದದ್ದು, ಶಕ್ತಿಯುತವಾದದ್ದು.

ಹೇಗನಿಸುತ್ತದೆ? ಹೌದಲ್ಲವೇ? ಯೋಚನೆ ಮಾಡಿ….10_1_5.gif

4 COMMENTS

  1. ಪ್ರಿಯ ಅವಿ, ನಿಮ್ಮ ಕಥೆ ಸೊಗಸಾಗಿದೆ. ಆದರೆ ಪ್ರತಿ ಬಾರಿ ತಾಳ್ಮೆಗೆಟ್ಟಾಗಲೆಲ್ಲಾ ಮೊಳೆ ಜಡಿಯಬೇಕಾದ ಕರ್ಮ ಮತ್ತಷ್ಟು ತಾಳ್ಮೆಗೆಡಿಸುವುದಿಲ್ಲವೇ. ಬಹುಶಃ ಆ ಹುಡುಗನಿಗೆ ಮೊಳೆ ಹೊಡೆಯುವಷ್ಟು ತಾಳ್ಮೆ ಇರದಿದ್ದರಿಂದ ಅದರ ಗೋಜಿಗೇ ಹೋಗಲಿಲ್ಲವೇನೊ. ಏನಂತೀರಿ?

  2. ಸಾರಥಿ ಅವರೆ,
    ಇದು ತಾಳ್ಮೆಯ ಪರೀಕ್ಷಾ ಕೇಂದ್ರ. ತಾಳಿದವನು ಬಾಳಿಯಾನು ಎಂಬುದೇ ಇದರ ಸಂದೇಶ.

  3. ಎನಿಗ್ಮಾಟಿಕ್ಯಾಷ್ ಅವರೆ,
    ಬ್ಲಾಗಿಗೆ ಬಂದು ಒಳ್ಳೇ ಕಥೆ ಅಂದಿದ್ದಕ್ಕೆ ಥ್ಯಾಂಕ್ಸ್.
    ನೀವು ಯಾರು, ಎಲ್ಲಿಂದ ಅಂತ ತಿಳಿದುಕೊಳ್ಳಬಹುದೇ?

LEAVE A REPLY

Please enter your comment!
Please enter your name here