ಆನ್‌ಲೈನ್ ಸಜ್ಜನಿಕೆ

0
627

Online sajjanikeಅಂದು ಸಮಾಜ ಜೀವಿಗಳಾಗಿದ್ದೆವು, ಆದರಿಂದು ಸಾಮಾಜಿಕ ಮಾಧ್ಯಮ ಜೀವಿಗಳು ನಾವು. ವಾಸ್ತವ, ಕಣ್ಣೆದುರಿರುವ ಸಮಾಜಕ್ಕಿಂತಲೂ ಭ್ರಮಾ ವಾಸ್ತವದ ಸೋಷಿಯಲ್ ಮೀಡಿಯಾಕ್ಕೆ ಹೆಚ್ಚು ಹತ್ತಿರವಾಗುತ್ತಿದ್ದೇವೆ. ಮಾತೆತ್ತಿದರೆ, ‘ವಾಟ್ಸಾಪ್‌ನಲ್ಲಿ ನೋಡಿದೆ, ಫೇಸ್‌ಬುಕ್‌ನಲ್ಲಿ ಓದಿದೆ’ ಎಂಬ ಮಾತು ನಮ್ಮ ಬಾಯಿಯಿಂದ ಅಯಾಚಿತವಾಗಿಯೇ ಬರುತ್ತದೆ. ಇದು ಸಂಘ ಜೀವಿ ಮಾನವನು ಆ್ಯಪ್‌ಗಳೆಂಬ ಅಂತರ್ಜಾಲದ ಅಂಗಜೀವಿಯಾಗಿ ರೂಪಾಂತರವಾಗುತ್ತಿರುವ ಬಗೆ ಮತ್ತು ಅತಿಯಾದರೆ ಅಮೃತವೂ ವಿಷ ಎಂಬ ಮಾತನ್ನು ಮತ್ತೆ ನೆನಪಿಸುವ ಪ್ರಕ್ರಿಯೆ.

‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ವಿಶಾಲಾರ್ಥವಿರುವ, ಆದರೆ ನಿರ್ದಿಷ್ಟ ಪರಿಧಿ ಇಲ್ಲದ ವ್ಯಾಖ್ಯಾನವುಳ್ಳ ಎರಡು ಪದಗಳ ಗುಚ್ಛವನ್ನು ನಾವಿಂದು ‘ಅಭಿವ್ಯಕ್ತಿಯ ಸ್ವೇಚ್ಛೆ’ ಎಂದು ಪರಿಗಣಿಸಿದ್ದೇವೆ. ನಮ್ಮವರಿಗೆ ಅಥವಾ ಇತರರಿಗೆ ಇದರಿಂದ ನೋವಾಗುತ್ತದೆ, ಮಾನಹರಣವಾಗುತ್ತದೆ ಎಂದೆಲ್ಲಾ ಯೋಚಿಸುವುದಿಲ್ಲ. ಹೇಳಿಕೇಳಿ ಅವಸರದ ಯುಗವಿದು, ಸಹಿಷ್ಣುತೆ ಕಡಿಮೆ, ಜತೆಗೆ ಆಲೋಚಿಸುವ ಶಕ್ತಿಯೂ. ಏನು ಮಾಡುತ್ತಿದ್ದೇವೆ, ಏನು ಬರೆಯುತ್ತಿದ್ದೇವೆ ಎಂಬ ಬಗ್ಗೆ ಹಿಂತಿರುಗಿ ನೋಡುವ ಬುದ್ಧಿ ದೂರವಾಗುತ್ತಿದೆ. ತತ್ಪರಿಣಾಮವೇ ಒಳಿತು-ಕೆಡುಕು ಆಲೋಚಿಸುವ ಪ್ರಜ್ಞೆ ಮಸುಕಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟವಾದ ಒಂದು ಕಾರ್ಟೂನ್‌ಗಾಗಿ, ಒಂದು ಹೇಳಿಕೆಗಾಗಿ ಜನ ದೊಂಬಿ ಮಾಡಿರುವುದನ್ನು ಕೇಳಿದ್ದೇವೆ, ಲೈಕ್ ಮಾಡಿದ್ದಕ್ಕಾಗಿ ಜೈಲು ಸೇರಿರುವುದನ್ನೂ ಕಂಡಿದ್ದೇವೆ. ವಿವಾದದ ಒಂದು ಸಣ್ಣ ಕಿಡಿಯನ್ನು ಧಗ ಧಗನೆ ಹೊತ್ತಿ ಉರಿಯುವಂತೆ ಮಾಡಬಲ್ಲ ಶಕ್ತಿ ಈ ಸೋಷಿಯಲ್ ಮೀಡಿಯಾಕ್ಕಿದೆ. ಅಂತಹಾ ಶಕ್ತಿಯುಳ್ಳ ಪ್ರಬಲ ಮಾಧ್ಯಮವಿದು ಎಂದು ತಿಳಿದಿದ್ದೂ ತಪ್ಪು ಮಾಡುತ್ತೇವೆ.

ಅಂಗೈಯಲ್ಲಿ ಅವಾಸ್ತವಿಕ ಜಗತ್ತು
ಕೈಯಲ್ಲೊಂದು ಇಂಟರ್ನೆಟ್ ಸಂಪರ್ಕವುಳ್ಳ ಸ್ಮಾರ್ಟ್ ಫೋನ್, ಮತ್ತು ಅದರೊಳಗೆ ಸಮ್ಮಿಳಿತವಾಗಿರುವ ಫೇಸ್‌ಬುಕ್, ವಾಟ್ಸಾಪ್ ಮುಂತಾದ ಕೆಲವು ಸೋಷಿಯಲ್ ಮೀಡಿಯಾ ಆ್ಯಪ್‌ಗಳಿದ್ದರೆ, ಜಗತ್ತೇ ನಮ್ಮ ಕೈಯಲ್ಲಿರುವಂತೆ ಆಡುತ್ತೇವೆ ನಾವು. ಆಡಿದ್ದೇ ಆಟ, ಮಾಡಿದ್ದೇ ಮಾಟ, ಸೇರಿದ್ದೇ ಕೂಟ. ಮನಸ್ಸಿಗೆ ತೋಚಿದ್ದನ್ನು ಗೀಚುತ್ತೇವೆ, ಕಣ್ಣಿಗೆ ಕಂಡದ್ದನ್ನು ಕ್ಲಿಕ್ಕಿಸುತ್ತೇವೆ; ವಿವೇಚನೆ ಉಪಯೋಗಿಸದೆ, ಚಿತ್ರ/ಬರಹ/ವೀಡಿಯೋಗಳನ್ನು ಇಂಟರ್ನೆಟ್ಟೆಂಬ ಮಾಯಾಜಾಲಕ್ಕೆ
ಏರಿಸಿಬಿಡುತ್ತೇವೆ. ಹೀಗಾಗಿ ದಾರಿಯಲ್ಲಿ ನಡೆದು ಹೋಗುವ ನಾವು ನೀವು, ಅದ್ಯಾವಾಗ ಫೇಸ್‌ಬುಕ್-ವಾಟ್ಸಾಪ್‌ಗಳ ಒಳಸುಳಿಯೊಳಗೆ ಸಿಲುಕುತ್ತೇವೆ ಎಂಬುದನ್ನು ಹೇಳಲಾರದಂತಹಾ ಪರಿಸ್ಥಿತಿ. ಎಲ್ಲರ ಕೈಯಲ್ಲೂ ಕ್ಯಾಮೆರಾ ಮೊಬೈಲ್ ಮತ್ತು ಇಂಟರ್ನೆಟ್. ಯಾರು ಯಾರನ್ನು ಯಾವಾಗ ಬೇಕಾದರೂ ಸೆರೆ ಹಿಡಿಯಬಹುದು. ಹೀಗಾಗಿ ನಾವಿಡುವ ಪ್ರತಿಯೊಂದು ಹೆಜ್ಜೆಯೂ ಸಾರ್ವತ್ರಿಕವಾಗುತ್ತದೆ, ಸಾರ್ವಜನಿಕವಾಗುತ್ತದೆ. ನಾವು ಭ್ರಮಾ ವಾಸ್ತವದ ಜಗತ್ತಿನಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದೇವೆ ಹೌದು, ಆದರೆ ನಮ್ಮ ಆನ್‌ಲೈನ್ ವರ್ತನೆಯಿಂದಾಗುವ ದುಷ್ಪರಿಣಾಮಗಳೇನು ಎಂಬುದರ ಅರಿವೇ ನಮಗಿರುವುದಿಲ್ಲ.

ಏನೋ ಮಸ್ತಕದಲ್ಲಿ ಹೊಳೆಯಿತು, ಅದನ್ನು ಮುಖಪುಸ್ತಕದಲ್ಲಿ ಗೀಚಿಬಿಡುತ್ತೇವೆ; ಲೈಕ್‌ಗಳು, ಕಾಮೆಂಟ್‌ಗಳು ಬಂದಾಗ ಸಂಭ್ರಮಿಸುತ್ತೇವೆ; ಶೇರ್ ಆದಾಗಲಂತೂ ಹಿರಿಹಿರಿ ಹಿಗ್ಗುತ್ತೇವೆ. ಆದರೆ ನಾವು ಮಾಡಿದ ಈ ಪೋಸ್ಟ್, ಅದೆಷ್ಟು ಜನರಿಗೆ ನೋವುಂಟು ಮಾಡಿತು, ಅದೆಷ್ಟು ಮಂದಿಗೆ ಮುಜುಗರವುಂಟು ಮಾಡಿತು ಎಂದೆಲ್ಲಾ ಯೋಚಿಸುವ ಗೊಡವೆಗೆ ಹೋಗುತ್ತಿಲ್ಲ. ತಮಾಷೆಗಾಗಿಯೋ, ನಮ್ಮ ಗುಂಪಿನಲ್ಲಿದ್ದವರ ಆನಂದಕ್ಕಾಗಿಯೋ ನಮ್ಮವರದೇ ಆದ ಯಾವುದೋ ಒಂದು ಫೋಟೋ ಅಥವಾ ಮಾತನ್ನು ಬಹಿರಂಗವಾಗಿ ಪ್ರಕಟಿಸಿಬಿಡುತ್ತೇವೆ. ಆದರೆ, ಇದು ಕ್ಷಣ ಮಾತ್ರದಲ್ಲಿ ಕೋಟಿ ಕೋಟಿ ಮೈಲುಗಳನ್ನು ದಾಟಿ ಯಾರನ್ನು ಬೇಕಾದರೂ ತಲುಪಬಲ್ಲುದು ಮತ್ತು ಇದರಿಂದಾಗಿ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಹೋಗದು ಎಂಬುದನ್ನು ಮರೆತುಬಿಡುತ್ತೇವೆ. ಆಗಿನ ವಿಚಾರ, ಆಗಲೇ ಮರೆತುಬಿಟ್ಟು, ಹೊಸ ಮಾಹಿತಿಗಾಗಿ ನಾವೇನೋ ನಮ್ಮೊಳಗಿನ ಮೆಮೊರಿ ಕಾರ್ಡಿನ ಅಂಶಗಳನ್ನು ಡಿಲೀಟ್ ಮಾಡಿ ಹೊಸದಾದ ಅಂಶಗಳಿಗೆ ಜಾಗ ಮಾಡಿಕೊಟ್ಟಿರುತ್ತೇವೆ. ಆದರೆ, ಇದರಿಂದ ಹಿಂಸೆ ಅನುಭವಿಸಿದವರು ನಾವು ಮಾಡಿದ ಅವಸರದ ಕಾರ್ಯದಿಂದ ಜೀವನಪೂರ್ತಿ ಯಾತನೆ ಅನುಭವಿಸುವ ಸ್ಥಿತಿ ಬರಬಹುದೆಂಬ ಸಣ್ಣ ಆಲೋಚನೆಯ ಛಾಪೂ ನಮ್ಮ ಮನಸ್ಸಿನಲ್ಲಿರುವುದಿಲ್ಲ. ಈ ರೀತಿ ಯೋಚನೆ ಮಾಡುವ ಶಿಷ್ಟಾಚಾರವೇ ಮರೆಯಾಗುತ್ತಿರುವುದು ದುರಂತ.

ಪ್ರಯಾಣಿಸುತ್ತಿರುವಾಗಲೋ, ಯಾವುದಾದರೂ ಹೋಟೆಲ್‌ನ ಪಾರ್ಟಿಗಳಲ್ಲೋ, ಕಚೇರಿ ಕೂಟಗಳಲ್ಲೋ ಪಾಲ್ಗೊಂಡಿದ್ದ ಫೋಟೋಗಳನ್ನು ಬಹಿರಂಗವಾಗಿ ಪ್ರಕಟಿಸಿಬಿಟ್ಟರೆ, ನಾಲ್ಕು ಗೋಡೆಗಳೊಳಗೆ ಸೀಮಿತವಾಗಬೇಕಿದ್ದ ಆ ಫೋಟೋಗಳು ಎಲ್ಲೆಡೆ ಹರಿದಾಡುವ ಮೂಲಕ ನಮ್ಮ ಬದುಕಿನ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲವೇ? ಇದೇ ಫೋಟೋಗಳನ್ನು ವಿರೋಧಿಯಾಗಿ ಬದಲಾಗಿದ್ದ ಆತ್ಮೀಯನೊಬ್ಬ ಇನ್ನೆಂದಾದರೂ, ಬೇರೆ ಯಾವುದೋ ಸಂದರ್ಭಕ್ಕೆ ಜೋಡಿಸಿ, ಅವಮಾನಿಸಲು, ತೇಜೋವಧೆ ಮಾಡಲು ಬಳಸುವ ಸಾಧ್ಯತೆಗಳಿವೆ. ಇಂಥದ್ದೇ ಫೋಟೋಗಳು ಸಾರ್ವಜನಿಕ ಜೀವನದಲ್ಲಿರುವವರ, ನಾವು ಆರಾಧಿಸುತ್ತಿರುವ ನಟ-ನಟಿಯರ ಬದುಕಿನಲ್ಲಿ ಎಬ್ಬಿಸಿದ ಬಿರುಗಾಳಿಯ ಬಗ್ಗೆ ನಾವು ದಿನ ಬೆಳಗಾದರೆ ಟಿವಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್‌ನಲ್ಲಿ ನೋಡಿದ್ದೇವೆ; ಯಾವುದೋ ಸಂದರ್ಭದ ಫೋಟೋಗಳನ್ನು ಮತ್ಯಾವುದೋ ಸಂದರ್ಭಕ್ಕೆ ಥಳುಕು ಹಾಕಿದ ಪರಿಣಾಮ, ಅದೆಷ್ಟೋ ವಿವಾಹ ಬಂಧಗಳು ಮುರಿದುಬಿದ್ದ ಘಟನಾವಳಿಗಳನ್ನೂ ನಾವು ನೋಡಿದ್ದೇವೆ.

ಬಹಿರಂಗ ತೇಜೋವಧೆ ಸಂಸ್ಕೃತಿ
ಸಾಮಾಜಿಕ ಮಾಧ್ಯಮಗಳಿಗೂ ಮುಖ್ಯವಾಹಿನಿಯ ಮಾಧ್ಯಮಗಳಿಗೂ ಗಳಸ್ಯ ಕಂಠಸ್ಯ. ಟಿವಿ ಸುದ್ದಿ ವಾಹಿನಿಗಳಿಗಂತೂ ವಿವಾದವೇ ಜೀವಾಳವೆಂಬಂತಹಾ (ಇದನ್ನು ಟಿಆರ್‌ಪಿ ಅಂತ ಹೇಳಬಹುದೇ?) ಪರಿಸ್ಥಿತಿ ಸೃಷ್ಟಿಯಾಗಿದೆ. ಇಂತಹಾ ಸಂದರ್ಭದಲ್ಲಿ, ನಮ್ಮ ಪುಟ್ಟದೊಂದು ಕಾಮೆಂಟ್, ಬ್ರೇಕಿಂಗ್ ನ್ಯೂಸ್ ಆಗಿಬಿಟ್ಟು ಮಾಧ್ಯಮಗಳಲ್ಲಿ ರಾರಾಜಿಸಬಲ್ಲುದು ಎಂಬ ಪರಿಜ್ಞಾನ ನಮಗಿರಬೇಕಾಗುತ್ತದೆ. ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಲೈಂಗಿಕ ಹಗರಣದಿಂದ ಹೆಸರುವಾಸಿಯಾಗಿದ್ದ ಮೋನಿಕಾ ಲೆವಿನ್‌ಸ್ಕಿ ‘ಸಾಮಾಜಿಕ ಮಾಧ್ಯಮದ ಮೂಲಕ ತೇಜೋವಧೆಯ ಮೊದಲ ಬಲಿಪಶು ನಾನೇ’ ಅಂತ ಒಂದೊಮ್ಮೆ ಹೇಳಿಕೊಂಡಿದ್ದುದು ನೆನಪಿದೆಯೇ? ಅಂದು ಬ್ಲಾಗ್‌ಗಳಲ್ಲಿ, ಸಾಮಾಜಿಕ ತಾಣಗಳಲ್ಲೆಲ್ಲಾ ಮೋನಿಕಾ ಅವರನ್ನು ಮನಬಂದಂತೆ ಝಾಡಿಸಲಾಗಿತ್ತು.

ಈಗೀಗಲಂತೂ ಈ ಟ್ರೆಂಡ್ ಹೆಚ್ಚಾಗತೊಡಗಿದೆ ‘ಪಬ್ಲಿಕ್ ಶೇಮಿಂಗ್’ ಅಂದರೆ ಬಹಿರಂಗ ತೇಜೋವಧೆ. ತಪ್ಪು ಮಾಡಿದವರನ್ನು ಸಾಕ್ಷಿ ಸಮೇತ ಸಾಮಾಜಿಕ ಮಾಧ್ಯಮಗಳಲ್ಲಿ ಬೆತ್ತಲಾಗಿಸಿ, ಅವರ ಮಾನ ಮರ್ಯಾದೆ ಹರಾಜು ಮಾಡುವುದು ಮೂಲ ಉದ್ದೇಶವಾಗಿದ್ದರೂ, ಇದು ನ್ಯಾಯಕ್ಕಾಗಿ ಪೊಲೀಸ್, ಕಾನೂನು ಮತ್ತು ಮಾಧ್ಯಮಗಳೆಂಬ ವ್ಯವಸ್ಥೆಯನ್ನು ಮೀರಿ, ನಮ್ಮ ಸಮಾಜವೇ ಕಂಡುಕೊಂಡ ಪರ್ಯಾಯ ಮಾರ್ಗ. ಆದರೆ, ಅದು ಕೂಡ ಉದ್ದೇಶಿತ ಗುರಿಯಿಂದ ವಿಮುಖವಾಗುತ್ತಿದೆ.

ಇತ್ತೀಚೆಗೆ ನಡೆದ ಒಂದು ಘಟನೆಯನ್ನೇ ನೆನಪಿಸಿಕೊಳ್ಳಿ. ಫೆಬ್ರವರಿಯಲ್ಲಿ ಸುನೀತಾ ಕೃಷ್ಣನ್ ಎಂಬ ಹೈದರಾಬಾದ್ ಯುವತಿ ‘ಶೇಮ್ ದಿ ರೇಪಿಸ್ಟ್’ (ಅತ್ಯಾಚಾರಿಗಳ ತೇಜೋವಧೆ) ಆಂದೋಲನವನ್ನೇ ನಡೆಸಿದರು. ಸಾಮೂಹಿಕ ಅತ್ಯಾಚಾರದ ವೀಡಿಯೋವನ್ನು ಅತ್ಯಾಚಾರಿಗಳೇ ಸೆರೆಹಿಡಿದಿದ್ದರು ಮತ್ತು ಅದನ್ನು ಅತ್ಯಾಚಾರ ಪೀಡಿತರಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಲು ಉಪಯೋಗಿಸುತ್ತಿದ್ದರು. ಸುನೀತಾ ಕೃಷ್ಣನ್ ತಮಗೆ ದೊರೆತ ಇಂತಹಾ ವಿಡಿಯೋಗಳಲ್ಲಿ, ಸಂತ್ರಸ್ತೆಯ ಮುಖ ಮತ್ತು ದೇಹವನ್ನು ಮಬ್ಬಾಗಿಸಿ, ಅತ್ಯಾಚಾರಿಗಳ ಮುಖ ಸ್ಪಷ್ಟವಾಗಿ ಕಾಣುವಂತೆ ಎಡಿಟ್ ಮಾಡಿ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಹಾಗೂ ವಾಟ್ಸಾಪ್‌ಗಳಲ್ಲಿ ಹರಿಯಬಿಟ್ಟಿದ್ದರು. ಇದು ಆನ್‌ಲೈನ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಮತ್ತು ಅತ್ಯಾಚಾರಿಗಳ ಬಂಧನಕ್ಕೂ ಕಾರಣವಾಗಿತ್ತು. ಅತ್ಯಾಚಾರಿಗಳ ತೇಜೋವಧೆಯಾಯಿತು, ಅದರ ಜತೆಗೆ, ಆ ದೃಶ್ಯವು ಬೇರೆಯೇ ಕಾರಣಗಳಿಗಾಗಿ ಎಲ್ಲರೂ ನೋಡುವಂತಾಯಿತು ಮತ್ತು ಸ್ವತಃ ಸುಪ್ರೀಂ ಕೋರ್ಟ್ ಕೂಡ ಈ ದೃಶ್ಯವನ್ನು ನೋಡಿ ಬೆಚ್ಚಿ ಬಿದ್ದಿತ್ತು. ಆದರೆ, ಈ ರೀತಿ ಮಾಡುವುದು ವಿಹಿತವೇ? ಎಂಬುದು ಪ್ರಶ್ನಾರ್ಹ. ಅದರಲ್ಲಿನ ಸಂತ್ರಸ್ತೆ ಆ ವಿಡಿಯೋದಲ್ಲಿರುವ ಬೆಚ್ಚಿ ಬೀಳಿಸುವ ಕರಾಳ ನೆನಪಿನಲ್ಲೇ ಜೀವನಪೂರ್ತಿ ಕಳೆಯಬೇಕಾಗಬಹುದು.

ಉಪಯೋಗ-ದುರುಪಯೋಗ ನಮ್ಮ ಕೈಯಲ್ಲಿ
ಹದಿಹರೆಯದ ಕುದಿ ಹೃದಯದ ಇಂದಿನ ವಾಟ್ಸಾಪ್-ಫೇಸ್‌ಬುಕ್ ಜನಾಂಗ ಹಿಂದಿನೆಲ್ಲಾ ಪೀಳಿಗೆಗಳಿಂದ ಉಲ್ಲಾಸ, ಉತ್ಸಾಹಭರಿತವಾಗಿದೆ, ಹೆಚ್ಚು ಸಂತೋಷ ಅನುಭವಿಸುತ್ತಿದೆ ಎಂಬುದು ಇತ್ತೀಚೆಗೆ ನಡೆದ ಅಧ್ಯಯನ ವರದಿಯೊಂದರ ಸಾರಾಂಶ. ಯೂರೋಪಿಯನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ಎಂಬುದರಲ್ಲಿ ಪ್ರಕಟವಾಗಿತ್ತು ಈ ವರದಿ. ಹಿಂದಿನ ಹದಿಹರೆಯದ ಮಕ್ಕಳಲ್ಲಿ ಕೆಲವರು ದಾರಿ ತಪ್ಪಿ ಮದ್ಯಪಾನ, ಧೂಮಪಾನ, ಮಾದಕ ದ್ರವ್ಯ, ತಂಬಾಕು – ಇವುಗಳ ದಾಸರಾಗುತ್ತಿದ್ದರೆ, ಇಂದಿನ ಪೀಳಿಗೆಯವರು ಸಾಮಾಜಿಕ ಜಾಲ ತಾಣಗಳ ಸೆಳವಿನ ಚಾಳಿಯಿಂದಾಗಿ ಅವುಗಳತ್ತ ಮುಖ ಮಾಡಲೂ ಪುರುಸೊತ್ತಿಲ್ಲದಂತಾಗಿದ್ದಾರೆ. ಇದೊಂದು ಸಕಾರಾತ್ಮಕ ಬೆಳವಣಿಗೆಯಾದರೂ, ಅತಿಯಾದ ಅಮೃತ ಯಾವತ್ತೂ ವಿಷವೇ ಎಂಬುದು ಅಷ್ಟೇ ಸತ್ಯ. ಸಾಮಾಜಿಕ ಮಾಧ್ಯಮಗಳಿಗೆ ಅಷ್ಟು ಪ್ರಭಾವವಿದೆ. ಅಂದಿನ ಮಕ್ಕಳು ವಾಸ್ತವಿಕ ಸಮಾಜದೊಂದಿಗೆ ಹೆಚ್ಚು ಬೆರೆಯುತ್ತಿದ್ದರು, ಇಂದಿನವರು ಅವಾಸ್ತವಿಕ ಸಮಾಜದಲ್ಲಿ ಮುಳುಗಿಹೋಗುತ್ತಿದ್ದಾರೆ, ಮಾನವೀಯ ಮೌಲ್ಯಗಳ ಅರಿವಿನ ಕೊರತೆ ಅವರನ್ನು ಬಾಧಿಸುತ್ತಿದೆ ಎಂದರೆ ತಪ್ಪಲ್ಲ. ಹೊರಗೆ ಹೋಗಿ ಸ್ನೇಹಿತರೊಂದಿಗೆ ಆಟವಾಡುವುದು, ಬೆರೆಯುವುದು … ಇವೆಲ್ಲ ಅನುಭವಿಸಿ ಅನುಭವಿಸಿ ಪಕ್ವವಾಗುವ ಜೀವನಾವಶ್ಯಕ ನಡವಳಿಕೆಗಳಾಗಿರುವುದರಿಂದ, ನಿಜ ಸಮಾಜದಲ್ಲಿ ಅವರ ಪಾಲ್ಗೊಳ್ಳುವಿಕೆ, ಬೆರೆಯುವಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಆತಂಕವೇನೂ ಸುಳ್ಳಲ್ಲ.

ಹೀಗಾಗಿ ಮನೆಯ ಚಾವಡಿಯೊಳಗಿನ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಾಗ ಎಚ್ಚರವಿಡಲೇಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದ ಮಾತ್ರಕ್ಕೆ ಅದು ಬುದ್ಧಿ ಉಪಯೋಗಿಸದ ಸ್ವೇಚ್ಛೆಯಲ್ಲ ಎಂಬುದು ಅರಿವಿರಲಿ; ಆತ್ಮಸಂಯಮ ಅತಿಮುಖ್ಯ. ‘ನಾನಿಂದು ಕುಟುಂಬ ಸಮೇತನಾಗಿ ರಜಾ ಕಾಲದ ಟೂರ್‌ಗೆ ಹೊರಡುತ್ತಿದ್ದೇನೆ…. Yey!!! ನಾಲ್ಕು ದಿನ ಬರಲ್ಲ, ಅಲ್ಲಿವರೆಗೆ ಫೇಸ್‌ಬುಕ್‌ನಲ್ಲಿಯೂ ಇರಲ್ಲ’ ಅಂತ ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಬರೆದುಕೊಂಡರೇನಾಗಬಹುದು? ಇದೇ ಸಮಯಕ್ಕಾಗಿ ಕಾದು ಕುಳಿತ ಕಳ್ಳ-ಕಾಕರು ನಿಮ್ಮ ಮನೆಗೆ ನುಗ್ಗಲು ಸ್ಕೆಚ್ ಹಾಕಬಹುದು!

ಅಲಿಖಿತ, ಸ್ವಯಂಪ್ರೇರಿತ ಶಿಷ್ಟಾಚಾರಗಳು

* ಸೈಬರ್ ಸಂಹಿತೆಯ 66ಎ ತೆಗೆದುಹಾಕಿದ್ದಾರೆ, ಏನೂ ಬರೆದರೂ ನಡೆಯುತ್ತೆ ಎಂಬ ಮನಸ್ಥಿತಿ ಬಿಡಿ, ಮಾನಹಾನಿಕರವಾಗಿ ಬರೆದರೆ, ಫೋಟೋ/ವೀಡಿಯೊ ಪ್ರಕಟಿಸಿದರೆ ಬೇರೆ ಕಾಯ್ದೆಗಳಡಿ ಶಿಕ್ಷೆ ಶತಃಸಿದ್ಧ.
* ಸ್ನೇಹದ ಕೋರಿಕೆ (ಫ್ರೆಂಡ್ ರಿಕ್ವೆಸ್ಟ್) ಬಂದಾಗ ಆಲೋಚಿಸಿ, ಮಾಹಿತಿ ತಿಳಿದುಕೊಂಡು ಸ್ನೇಹ ಹಸ್ತ ಚಾಚಿರಿ.
* ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ನಿಮ್ಮ ಕುರಿತಾದ ಮಾಹಿತಿಗಳಿಗೆ ‘Only friends can view’ ಎಂಬುದನ್ನು ಕ್ಲಿಕ್ ಮಾಡಿಕೊಳ್ಳಿ.
* ನಿಮ್ಮ ಫೋನ್ ಸಂಖ್ಯೆ ಹಾಗೂ ಇಮೇಲ್ ವಿಳಾಸಗಳು ‘Only for me’ ಕಾಣಿಸುವಂತೆ ಹೊಂದಿಸಿಕೊಳ್ಳಿ.
* ಬೇರೆಯವರ ಚಿತ್ರ ಕ್ಲಿಕ್ ಮಾಡುವ ಮುನ್ನ ಮತ್ತು ಅದನ್ನು ಹಂಚುವ ಮುನ್ನ ಅವರ ಅನುಮತಿ ತೆಗೆದುಕೊಳ್ಳಿ
* ಅನ್ಯರಿಗೆ ವೃಥಾ ನೋವಾಗುವಂತಹಾ, ಅನವಶ್ಯ ನಿಂದಿಸುವ ಪೋಸ್ಟ್‌ಗಳು ಬೇಡ
* ಅನಗತ್ಯವಾದ, ನಿಮಗೆ ಗೊತ್ತಿಲ್ಲದ ಗುಂಪುಗಳಿಗೆ ಸೇರಿಕೊಳ್ಳಬೇಡಿ.
* ನಿಮ್ಮ ಪುಟದಲ್ಲಿ ಪ್ರಕಟವಾಗುವ ಕಾಮೆಂಟ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ, ವ್ಯಕ್ತಿ ನಿಂದನೆ ಇದ್ದರೆ ತೆಗೆದುಬಿಡಿ.
* ಯಾವುದೇ ಫೋಟೋಗಳಿಗೆ ಅನುಮತಿಯಿಲ್ಲದೆ ಯಾರನ್ನೂ ಯಾವುದೇ ಕಾರಣಕ್ಕೂ ಟ್ಯಾಗ್ ಮಾಡಬೇಡಿ.
* ಅನಗತ್ಯವಾಗಿ ಆಟವಾಡಲು ಕರೆಯಬೇಡಿ. ನೀವೇನು ಮಾಡುತ್ತಿದ್ದೀರಿ ಎಂಬುದರ ಮೇಲೆ ಗಮನವಿರಲಿ. ಏನು ಬರೆದಿದೆ ಎಂಬುದನ್ನು ನೋಡದೆ ಕ್ಲಿಕ್ ಮಾಡುತ್ತಾ ಹೋದರೆ, ನಿಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ಎಲ್ಲರಿಗೂ ಗೇಮ್ ಆಹ್ವಾನ ಹೋಗಬಹುದು.
* ಅಶ್ಲೀಲ, ಅಸಭ್ಯವಾದುದನ್ನೇನೂ ಪೋಸ್ಟ್ ಮಾಡಬೇಡಿ. ಇದರಿಂದ ನಮ್ಮದೇ ವ್ಯಕ್ತಿತ್ವ ಬಯಲಾಗುತ್ತದೆ ಎಂಬುದು ನೆನಪಿರಲಿ.
* ಕಚೇರಿ ವಿಷಯಗಳನ್ನು, ಪರ್ಸನಲ್ ವಿಷಯಗಳನ್ನು ಪೋಸ್ಟ್ ಮಾಡಬೇಡಿ. ಎಲ್ಲರೂ ನೀವೇನು ಪೋಸ್ಟ್ ಮಾಡುತ್ತೀರಿ ಎಂಬುದನ್ನು ಕಾಯುತ್ತಿರುತ್ತಾರೆ!
* ತಪ್ಪು ಬರೆದರೆ, ನಿಂದನಾತ್ಮಕ ಬರಹ ಎಂದು ಫೇಸ್‌ಬುಕ್, ಟ್ವಿಟರ್ ಮುಂತಾದ ಜಾಲತಾಣಗಳಿಗೆ ಯಾರು ಬೇಕಾದರೂ ವರದಿ ಮಾಡುವ ವ್ಯವಸ್ಥೆಯಿದೆ. ಈ ರೀತಿ ಯಾರಾದರೂ ವರದಿ ಸಲ್ಲಿಸಿದರೆ, ಖಾತೆಯೇ ಬ್ಲಾಕ್ ಆಗಬಹುದು.
* ಸಾಮಾಜಿಕ ಮಾಧ್ಯಮ ಎಂಬುದೊಂದು ಟೂಲ್. ಏತಕ್ಕಾಗಿ ಈ ಮಾಧ್ಯಮ ಬಳಸುತ್ತೀರೆಂಬ ಅರಿವು ಇರಲಿ.
* ನಮ್ಮ ಭಾಷೆ, ನಮ್ಮ ಬರಹ, ನಾವೇನನ್ನು ಹಂಚುತ್ತೇವೆ ಎಂಬ ಅಂಶಗಳು ನಮ್ಮ ವ್ಯಕ್ತಿತ್ವವನ್ನು ಜಗತ್ತಿಗೆ ತೆರೆದಿಡಬಲ್ಲುದು, ಎಚ್ಚರಿಕೆಯಿಂದ ಬಳಸಿ.
* ಒಟ್ಟಿನಲ್ಲಿ, ಏನೇ ಆದರೂ ಬರೆಯುವಾಗ, ಫೋಟೋ ಹಾಕುವಾಗ ಸಾಮಾನ್ಯ ಜ್ಞಾನ (ಕಾಮನ್ ಸೆನ್ಸ್) ಬಳಸಿ.

ಅವಿನಾಶ್ ಬಿ. ವಿಜಯ ಕರ್ನಾಟಕ ಸಾಪ್ತಾಹಿಕ ಲೀಡ್ ಏಪ್ರಿಲ್ 27, 2015

LEAVE A REPLY

Please enter your comment!
Please enter your name here