ಅಂಗೈಯಲ್ಲಿ ಯೋಗ: ವ್ಯಾಯಾಮ ಹೇಳಿಕೊಡುವ ಆ್ಯಪ್‌ಗಳು

0
527

Avinash-Columnಭಾರತದ ಪ್ರಯತ್ನದ ಫಲವಾಗಿ ಜೂನ್ ಇಪ್ಪತ್ತೊಂದನೇ ತಾರೀಕನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಲಾಗಿದೆ. ಯೋಗದ ಅಗತ್ಯದ ಕುರಿತಾಗಿ ಜಾಗೃತಿ ಈಗ ಜನರಲ್ಲಿ ಹೆಚ್ಚಾಗಿದೆ. ಹೊಸ ವರ್ಷಾರಂಭದಲ್ಲಿ ರೆಸೊಲ್ಯುಶನ್ (ಪ್ರತಿಜ್ಞೆ) ಕೈಗೊಳ್ಳುವಂತೆ, ಕೆಲವರು, ಪ್ರತಿ ದಿನವೂ ಕನಿಷ್ಠ ಅರ್ಧ ಗಂಟೆ ವ್ಯಾಯಾಮಕ್ಕೆ ಮೀಸಲಿಡಬೇಕೆಂದು ಹಲವರು ಅದಾಗಲೇ ಹೇಳಿಕೊಂಡಿದ್ದಾರೆ.

ದೇಶಾದ್ಯಂತ ಈಗ ಕಾಡುತ್ತಿರುವ ಮಧುಮೇಹ (ಡಯಾಬಿಟಿಸ್) ಹಾಗೂ ಬೊಜ್ಜು (ಒಬೆಸಿಟಿ) – ಇವೆರಡಕ್ಕೆ ಪ್ರಧಾನ ಕಾರಣವೇ ದೇಹಕ್ಕೆ ದಣಿವು ಇಲ್ಲದಿರುವುದು ಎನ್ನುವುದನ್ನು ವೈದ್ಯರು ಪದೇ ಪದೇ ಹೇಳುತ್ತಲೇ ಇದ್ದಾರೆ. ಈ ಕಾರಣಕ್ಕಾಗಿಯೇ ಟೆಕ್ಕೀಗಳು ಅನ್ನಿಸಿಕೊಳ್ಳುವ ಸಾಫ್ಟ್‌ವೇರ್ ಉದ್ಯೋಗಿಗಳು, ಮಾತ್ರವಲ್ಲದೆ ದಿನದ ಬಹುಪಾಲು ಕಂಪ್ಯೂಟರ್ ಎದುರು ಕುಳಿತೇ ಕೆಲಸ ಮಾಡುವ ಕಾಯಕ ಯೋಗಿಗಳೆಲ್ಲರೂ ಬೆಳಗ್ಗಿನ ವಾಕಿಂಗ್‌ಗೇನೋ ಮೊರೆ ಹೋಗುತ್ತಾರೆ. ಆದರೆ, ದೇಹದ ಪ್ರತಿಯೊಂದು ಅಂಗಗಳಿಗೆ, ಸ್ನಾಯು ಖಂಡಗಳಿಗೆ ವ್ಯಾಯಾಮ ದೊರೆಯದಿದ್ದರೆ, ತಿಂದ ಆಹಾರದ ಕ್ಯಾಲೊರಿ ಬರ್ನ್ ಆಗುವುದಿಲ್ಲ. ಇದನ್ನೇ ಸುಲಭವಾಗಿ, ಆಡುಭಾಷೆಯಲ್ಲಿ ಹೇಳುವುದಾದರೆ ತಿಂದದ್ದು ಜೀರ್ಣವಾಗುವುದಿಲ್ಲ. ಬೆವರು ಸುರಿಸಿ ದುಡಿಯಬೇಕು ಎಂಬ ಮಾತಿಗೆ ಈಗ ಮಾನ್ಯತೆ ದೊರೆಯುತ್ತಿದೆ.

ಯೋಗಾಭ್ಯಾಸವು ಮೈ ಹಾಗೂ ಮನಸ್ಸಿಗೆ ಪುಳಕ ನೀಡುವ ಕಾರ್ಯವನ್ನು ಹೇಗೆ ಮಾಡುತ್ತದೆಯೋ, ಅದನ್ನು ಮಾಡಲು ಸೂಕ್ತವಾದ ತರಬೇತಿಯೂ ಬೇಕಾಗುತ್ತದೆ. ಯಾವಾಗ ಶ್ವಾಸ ಹೊರ ಬಿಡಬೇಕು, ಯಾವಾಗ ಒಳಗೆಳೆದುಕೊಳ್ಳಬೇಕು ಎಂಬ ಮೂಲಭೂತ ವಿಷಯವಷ್ಟೇ ಅಲ್ಲದೆ, ಯೋಗ ಎಂದರೆ ಕೇವಲ ದೈಹಿಕ ಶ್ರಮವಲ್ಲ, ಮಾನಸಿಕ ಕ್ಷಮತೆಯೂ ಸೇರಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಈಗ ಅಂಗೈಯೊಳಗೆ ಜಗತ್ತು ಇರುವುದರಿಂದ, ಸ್ಮಾರ್ಟ್ ಫೋನ್ ಹಾಗೂ ಅದಕ್ಕೆ ಸಂಬಂಧಿಸಿದ ಒಂದು ಆ್ಯಪ್ ಇದ್ದರೆ, ದೈಹಿಕ ವ್ಯಾಯಾಮವನ್ನು ನಾವೇ ಮಾಡಬಹುದು. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಸುತ್ತಿರುವವರಿಗಾಗಿ ಇಲ್ಲಿ ಕೆಲವು ಆ್ಯಪ್‌ಗಳಿವೆ. ತಜ್ಞರ ತರಬೇತಿಯಿಂದಲೇ ಇದನ್ನು ಮಾಡಬೇಕಾಗುತ್ತದೆ.

ಮುಖ್ಯವಾಗಿ ಕಂಡಿದ್ದು, Yoga.com ಎಂಬ ಆ್ಯಪ್. ಸುಮಾರು 10 ಲಕ್ಷದಷ್ಟು ಮಂದಿ ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದು, ಬಳಸಿದವರು ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಒಳಗೆ ಹೊಕ್ಕು ನೋಡಿದರೆ, ನಿರ್ದಿಷ್ಟ ಯೋಗಾಸನಗಳ ವಿವರಣೆ ಇದೆ. ಕೆಲವು ಆಸನಗಳ ಪೂರ್ಣ ಮಾಹಿತಿ ಬೇಕಿದ್ದರೆ, ಹಣ ಪಾವತಿಸಬೇಕಾಗುತ್ತದೆ. 289 ಭಂಗಿಗಳು, 37 ಪೂರ್ವ ನಿಗದಿತ ಯೋಗ ಕಾರ್ಯಕ್ರಮಗಳು ಇದರಲ್ಲಿವೆ.

ಎರಡನೆಯದು, ಅವಸರದ ಯುಗದಲ್ಲಿರುವವರಿಗಾಗಿಯೇ ರೂಪಿಸಲಾದ ಆ್ಯಪ್. ಇದರ ಹೆಸರು 7 Minutes Yoga For Beginners. ಯೋಗಾಭ್ಯಾಸ ಆರಂಭಿಸುವವರಿಗೆ ಅಂತ ಇದನ್ನು ಬಿಂಬಿಸಲಾಗಿದ್ದರೂ, ವ್ಯಾಯಾಮವಿಲ್ಲದೆ ಜಡ್ಡುಗಟ್ಟಿರುವ ಶರೀರವು ಫ್ಲೆಕ್ಸಿಬಲ್ ಆಗುವವರೆಗೆ ತೀರಾ ನಿಧಾನವಾಗಿ ಇದನ್ನು ಮಾಡಬೇಕಾಗುತ್ತದೆ. ಪ್ರತಿದಿನ ಜಾಗಿಂಗ್, ಕೈಕಾಲುಗಳನ್ನು ಆಡಿಸುವುದು, ಕೈಗಳನ್ನು ಮೇಲಕ್ಕೆತ್ತುವುದು ಮುಂತಾದ ಒಂದಿಷ್ಟು ವಾರ್ಮ್-ಅಪ್ (ಶರೀರವನ್ನು ವ್ಯಾಯಾಮಕ್ಕೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ನಮ್ಯವಾಗಿಸಲು) ವ್ಯಾಯಾಮಗಳ ಬಳಿಕ, ಈ ಏಳು ನಿಮಿಷದ ವ್ಯಾಯಾಮವನ್ನು ಆರಂಭಿಸಿದರೆ ಒಳಿತು. ಇದರಲ್ಲಿ 6 ಆಸನಗಳನ್ನು ಏಳು ನಿಮಿಷದ ಅಂತರದಲ್ಲಿ ಮಾಡಿಸಲಾಗುತ್ತದೆ.

ಇದಲ್ಲದೆ, ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಪ್ರತಿಷ್ಠಾನ ಹೊರತಂದಿರುವ Yoga Tools from Sadguru ಎಂಬ ಆ್ಯಪ್ ಇದೆ. ಇದರಲ್ಲಿ ಐದು ನಿಮಿಷಗಳ 7 ಉಪ – ಯೋಗಾಭ್ಯಾಸಗಳಿವೆ.

Daily Yoga – Fitness On-the-Go, Surya Namaskar Yoga, Yoga Asanas, Yoga, Yoga Asans in Hindi ಎಂಬ ಹಲವು ಆ್ಯಪ್‌ಗಳು ಉಚಿತವಾಗಿ ಲಭ್ಯ ಇವೆ. ಎಲ್ಲದರಲ್ಲಿಯೂ ಹೇಗೆ ಮಾಡುವುದೆಂಬ ಕುರಿತು ವೀಡಿಯೋಗಳಿವೆ. ಇಲ್ಲಿ ಹೆಸರಿಸಿದವು ಬಳಸಿದವರು ಚೆನ್ನಾಗಿದೆ ಅಂತ ಹೆಚ್ಚು ರೇಟಿಂಗ್ ನೀಡಿದವುಗಳೇ.

ಮಾಹಿತಿ@ತಂತ್ರಜ್ಞಾನ-132, ವಿಜಯ ಕರ್ನಾಟಕ ಅಂಕಣ 29 ಜೂನ್ 2015: ಅವಿನಾಶ್ ಬಿ.

LEAVE A REPLY

Please enter your comment!
Please enter your name here