ಶ್!!! ಇದು ಪ್ರೈವೇಟ್ ವಿಷ್ಯ!

ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಖ್ಯಾತ ಬ್ರ್ಯಾಂಡ್‌ನ ಹೊಸ ಫೋನ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲೆಂದು ಬ್ರೌಸ್ ಮಾಡುತ್ತಿದ್ದೆ. ಅದು ಹೇಗಿದೆ, ಏನು ವಿಶೇಷತೆ ಅಂತೆಲ್ಲ ತಿಳಿದುಕೊಂಡ ಬಳಿಕ ಬ್ರೌಸರ್ ಮುಚ್ಚಿ, ಬೇರೊಂದು ಅಂತರ್ಜಾಲ ತಾಣವನ್ನು ನೋಡಲೆಂದು ತೆರೆದೆ. ಮತ್ತದೇ ಫೋನ್ ಬ್ರ್ಯಾಂಡ್ ಕುರಿತ ಜಾಹೀರಾತು! ಅರರೆ, ಏನಾಶ್ಚರ್ಯ… ನನಗಿದು ಬೇಕಿತ್ತು, ಅದರ ಬಗ್ಗೆ ತಿಳಿದುಕೊಳ್ಳಲು/ಖರೀದಿಸಲು ಇಚ್ಛಿಸಿದೆ ಎಂಬ ವಿಷಯ ಇಂಟರ್ನೆಟ್ಟಿಗೆ ತಿಳಿದದ್ದು ಹೇಗೆ? ನನ್ನ ಮನಸ್ಸನ್ನು ಓದುವ ಶಕ್ತಿ ಅದಕ್ಕಿದೆಯೇ?

ಮತ್ತೊಂದು ಪ್ರಕರಣ. ಯಾವುದೋ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಸ್ಕ್ರೀನ್‌ನಲ್ಲಿ ಪಾಪ್-ಅಪ್ ವಿಂಡೋದಲ್ಲಿ ಕಾಣಿಸಿಕೊಳ್ಳುವ ಸೂಚನೆಗಳನ್ನು ಓದುವಷ್ಟು ತಾಳ್ಮೆ ಇಲ್ಲ. This App wants to read your contacts and your SMS, This app wants to access your photos, videos, this app wants to controll your calls… ಹೀಗೆ ಹಲವು ಸೂಚೆನಗಳು. ಧಾವಂತದಲ್ಲಿ ಯಸ್ ಯಸ್, ಓಕೆ ಅಂತೆಲ್ಲಾ ಕ್ಲಿಕ್ ಮಾಡಿರುತ್ತೇವೆ. ನಮ್ಮೊಳಗಿನ ಒಳಗನ್ನು ಆ್ಯಪ್‌ಗೆ ತೆರೆದಿಟ್ಟಿರುತ್ತೇವೆ.

ಕಳೆದ ವಾರ ಸುದ್ದಿ ಮಾಡಿದ ಪ್ರೈವೆಸಿ ಅಥವಾ ಖಾಸಗಿತನ ಎಂದರೆ ಇದೇ. ಅದು ನಮ್ಮ ಮೂಲಭೂತ ಹಕ್ಕು ಅಂತ ಸುಪ್ರೀಂ ಕೋರ್ಟು ಯಾವಾಗ ತೀರ್ಪು ನೀಡಿತೋ, ದೇಶದ ನೂರಾ ಮೂವತ್ತೈದು ಕೋಟಿ ಜನರ ಮೇಲೂ ಪರಿಣಾಮ ಬೀರಬಲ್ಲ ಐತಿಹಾಸಿಕ ತೀರ್ಪಿದೆಂದು ಮಾಧ್ಯಮಗಳು ಸಾರಿದವು. ಆದರೆ ಇವೆಲ್ಲ ನಮಗೆ ಸಂಬಂಧಿಸಿದ್ದಲ್ಲ ಎಂದುಕೊಂಡವರೇ ಹೆಚ್ಚು. ನೆನಪಿಸಿಕೊಳ್ಳಿ, ‘ವಿಕಿಲೀಕ್ಸ್’ ಗೋಪ್ಯ ಮಾಹಿತಿ ಸೋರಿಕೆಯ ಸರಣಿಯೊಂದು ದೇಶ-ವಿದೇಶದ ಸರಕಾರಗಳನ್ನು ಕಂಗೆಡಿಸಿತ್ತು. ಇಂಥ ಖಾಸಗಿತನದ ಉಲ್ಲಂಘನೆಯಿಂದ ಸರಕಾರಗಳು ಬಿದ್ದು ಹೋಗಿವೆ, ಯುದ್ಧವೂ ಸಂಭವಿಸಿದೆ, ರಾಜಕೀಯ ಪಕ್ಷಗಳು ಹೊಡೆದಾಡಿಕೊಂಡಿವೆ. ಆದರೆ ಪ್ರೈವೆಸಿಯು ದೊಡ್ಡವರ ವಿಚಾರ ಅಂತ ನಾವು ನಿರುಮ್ಮಳವಾಗಿರುವಂತಿಲ್ಲ. ಇಂಟರ್ನೆಟ್ ಕ್ರಾಂತಿಯೆಂಬ ಮಾಹಿತಿಸ್ಫೋಟದ ಯುಗದಲ್ಲಿ ನಮ್ಮ ಏಕಾಂತದ ಉಲ್ಲಂಘನೆಯು ಮನೆ ಬಾಗಿಲಲ್ಲೇ ಬಂದು ನಿಂತಿದೆ.

ಡಿಜಿಟಲ್ ಯುಗದ ಅನಿವಾರ್ಯ ಅನಿಷ್ಟ
ಮೇಲಿನ ಉದಾಹರಣೆಗಳಲ್ಲಿ, ನನಗಿಷ್ಟವಾದ ಉತ್ಪನ್ನವನ್ನೇ ಬ್ರೌಸರ್ ಮತ್ತೆ ತೋರಿಸಿದ್ದು ಹೇಗೆ? ಇಲ್ಲಿ ಏನನ್ನು ಜಾಲಾಡಿದೆ ಎಂಬುದು ನನ್ನ ಖಾಸಗಿ ವಿಷಯ. ಅದರ ಜಾಡನ್ನು ಇಂಟರ್ನೆಟ್ ಟ್ರ್ಯಾಕ್ ಮಾಡಿಬಿಟ್ಟಿದೆ. ಪ್ರೈವೆಸಿಗೂ, ಗೂಢಚರ್ಯೆಗೂ ಹತ್ತಿರದ ನೆಂಟಸ್ತನ. ಕಂಪ್ಯೂಟರಿನ ಐಪಿ ವಿಳಾಸವು ನನಗರಿವಿಲ್ಲದಂತೆಯೇ ಗೂಗಲ್‌ಗೆ ಅಥವಾ ಫೇಸ್‌ಬುಕ್‌ಗೆ ಗೊತ್ತಾಗುತ್ತದೆ. ನಮ್ಮ ಕಂಪ್ಯೂಟರಿನಲ್ಲಿ ಮಕ್ಕಳೋ, ಫ್ರೆಂಡ್ಸೋ ಸೇರಿಕೊಂಡು ಪೋರ್ನ್ ಜಾಹೀರಾತು ಕ್ಲಿಕ್ ಮಾಡಿದ್ದಿದ್ದರೆ ಅಥವಾ ಫೇಸ್‌ಬುಕ್ ಫೀಡ್‌ನಲ್ಲಿ ಬಂದ ಜಾಹೀರಾತನ್ನು ಕ್ಲಿಕ್ ಮಾಡಿಬಿಟ್ಟರೆ, ಇದು ನಮ್ಮ ಆಸಕ್ತಿಯ ವಿಷಯ ಅನ್ನೋದನ್ನು ಅದು ಅರಿತುಕೊಂಡುಬಿಡುತ್ತದೆ. ಇಂಥದ್ದೇ ಜಾಹೀರಾತುಗಳನ್ನು ಅದು ಹೆಚ್ಚು ತೋರಿಸುತ್ತದೆ. ಇದು ಡಿಜಿಟಲ್ ಲೋಕದ ಕೃತಕ ಜಾಣ್ಮೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತೊಂದು ರೂಪವಷ್ಟೆ.

ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ಸೂಚನೆಗಳಲ್ಲಿ, Allow? ಅಂತ ಕ್ವೆಶ್ಚನ್ ಮಾರ್ಕ್ ಸಹಿತ ಕೇಳುವಾಗ, ಫೋನ್‌ನಲ್ಲಿ ಶೇಖರವಾಗಿರುವ ನಂಬರ್, ಎಸ್ಸೆಮ್ಮೆಸ್, ಫೋಟೋ/ವೀಡಿಯೋಗಳು, ಕರೆಯ ಇತಿಹಾಸ ಮುಂತಾದ ಖಾಸಗಿ ಮಾಹಿತಿಗಳನ್ನು ನಾವು ಅದಕ್ಕೆ ನೀಡದಿದ್ದರೆ, ಆ್ಯಪ್ ಕೆಲಸವನ್ನೇ ಮಾಡುವುದಿಲ್ಲ. ಆಧಾರ್ ಮಾಹಿತಿ ಕದಿಯುವುದಕ್ಕಾಗಿಯೇ ಆ್ಯಪ್ ಒಂದನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಳವಡಿಸಿ ಸಿಕ್ಕಿಬಿದ್ದವನ ಕತೆ ತಿಂಗಳ ಹಿಂದೆ ಓದಿದ್ದೀರಲ್ಲ?

ಗುರುತು ಪರಿಚಯವಿಲ್ಲದವರಿಂದ ಕರೆಯೊಂದು ಬರುತ್ತದೆ. ಆದರೆ, ಟ್ರೂಕಾಲರ್ ಆ್ಯಪ್ ಅಳವಡಿಸಿಕೊಂಡವರಲ್ಲಿ, ಕರೆ ಮಾಡುವ ವ್ಯಕ್ತಿಯ ಅಥವಾ ಸಂಸ್ಥೆಯ ಹೆಸರು ಸ್ಕ್ರೀನ್ ಮೇಲೆ ಕಾಣಿಸುತ್ತದೆ! ಹೇಗೆ? ಅವರ ಸ್ನೇಹಿತರು ಟ್ರೂಕಾಲರ್ ಅಳವಡಿಸಿಕೊಂಡು ತಮ್ಮ ಕಾಂಟ್ಯಾಕ್ಟ್ಸ್ ಪಟ್ಟಿಯಲ್ಲಿ ಹೆಸರು ಸೇವ್ ಮಾಡಿಕೊಂಡಿರುತ್ತಾರೆ. ಆ್ಯಪ್ ಇನ್‌ಸ್ಟಾಲ್ ಮಾಡುವಾಗ, ‘This App wants to use/see your Contacts, allow?’ ಅಂತ ಕೇಳಿರುತ್ತದೆ, ಓಕೆ ಕೊಟ್ಟಿರುತ್ತೇವೆ. ಪಟ್ಟಿಯಲ್ಲಿದ್ದ ಎಲ್ಲ ಹೆಸರುಗಳನ್ನು ಟ್ರೂಕಾಲರ್ ಸಂಗ್ರಹಿಸಿ, ತನ್ನ ಸರ್ವರ್‌ನಲ್ಲಿ ಸೇರಿಸಿಕೊಂಡಿರುತ್ತದೆ. ಕರೆ ಮಾಡಿದವರ ಹೆಸರು ಕಾಣಿಸಿಕೊಳ್ಳಲು ಇದೇ ಕಾರಣ.

ಮಹಿಳಾ ಸುರಕ್ಷತೆಗಾಗಿ ಅದೆಷ್ಟೋ ಆ್ಯಪ್‌ಗಳಿವೆ. ಅಪಾಯ ಸಂದರ್ಭದಲ್ಲಿ ಬಟನ್ ಅದುಮಿದರೆ ಮೊದಲೇ ಸೇವ್ ಮಾಡಿಟ್ಟುಕೊಂಡ ನಂಬರ್‌ಗೆ ಕರೆ ಹೋಗುತ್ತದೆ, ಪೂರ್ವ ನಿರ್ಣಯಿತ ವ್ಯಕ್ತಿಗಳಿಗೆ ಸ್ಥಳದ ಸಹಿತ ಲೊಕೇಶನ್ ಮ್ಯಾಪ್ ಕೂಡ ಹೋಗುತ್ತದೆ. ಇದು ಗೊತ್ತಾಗುವುದು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್) ತಂತ್ರಜ್ಞಾನದ ಮೂಲಕ.

ಆಧಾರ್ ಕಾರ್ಡ್, ಲೈಸೆನ್ಸ್, ಪಾಸ್‌ಪೋರ್ಟ್ ಮುಂತಾದ ಅಧಿಕೃತ ದಾಖಲೆಗಳನ್ನು, ಇತರ ಡಿಜಿಟಲ್ ಫೈಲುಗಳನ್ನು ಅಂತರ್ಜಾಲದಲ್ಲಿ ‘ಸುರಕ್ಷಿತ’ವಾಗಿ ಇರಿಸುವ ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥೆಯಿದೆ. ಅದಕ್ಕೆ ಹಲವಾರು ಆ್ಯಪ್‌ಗಳೂ ಇವೆ. ಅಂತೆಯೇ, ನಮ್ಮ ನಡಿಗೆಯನ್ನು ಲೆಕ್ಕ ಹಾಕುವ, ವ್ಯಾಯಾಮವೆಷ್ಟು ಮಾಡಿದೆವು, ಎಷ್ಟು ಕ್ಯಾಲೊರಿ ಬರ್ನ್ ಆಯಿತು ಅಂತೆಲ್ಲ ತಿಳಿಸುವ ‘ಆರೋಗ್ಯ’ಕರ ಆ್ಯಪ್‌ಗಳು, ಸ್ಮಾರ್ಟ್‌ವಾಚ್‌ಗಳೆಂಬ ಸಾಧನಗಳೂ ಇವೆ. ಇವೆಲ್ಲವೂ ನಮ್ಮ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸುತ್ತವೆ, ಜಗತ್ತಿನ ಎಲ್ಲೋ ಇರುವ ಸರ್ವರ್‌ನಲ್ಲಿ ಸೇವ್ ಆಗಿರುತ್ತದೆ ಮತ್ತು ಅಭೇದ್ಯವೇನಲ್ಲ ಎಂಬುದು ನಮಗೆ ಅರಿವಿರಬೇಕು. ಯಾವಾಗ ಮಾಹಿತಿ ತಂತ್ರಜ್ಞಾನ ಕ್ರಾಂತಿಯು ಕಳೆದೆರಡು ದಶಕಗಳಲ್ಲಿ ನಮ್ಮೆಲ್ಲ ಬೇಕು ಬೇಡಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವಂತೆ ಮಾಡಿತೋ, ಆವಾಗಲೇ ನಮ್ಮ ಪ್ರೈವೆಸಿ ಅಥವಾ ಖಾಸಗಿತನವೆಂಬುದು ಬಟಾಬಯಲಾಯಿತು.

2000 ರೂ. ನೋಟುಗಳು ಬಂದಾಗ, ಕೋಟಿಗಟ್ಟಲೆ ಕೂಡಿಟ್ಟಿದ್ದ ವಂಚಕರ ಮನೆಯಿಂದ ಅವುಗಳನ್ನೆಲ್ಲ ಐಟಿ ಇಲಾಖೆ ಪತ್ತೆ ಹಚ್ಚಿದ ಸಂದರ್ಭದಲ್ಲಿ, ‘ಅದರೊಳಗಿರಿಸಿದ ಚಿಪ್‌ನಿಂದಾಗಿ ಹೊಸ ನೋಟುಗಳ ಇರುವಿಕೆ ತಿಳಿಯುತ್ತದೆ’ ಅಂತ ಗುಲ್ಲೆದ್ದಿದ್ದು ನೆನಪಿದೆಯೇ? ಇದು ಸುಳ್ಳಾದರೂ, ವಾಸ್ತವದಲ್ಲಿ ಜಿಪಿಎಸ್ ಆಧಾರಿತ ಚಿಪ್‌ಗಳಿಂದ ಇಂಥದ್ದು ಅಸಾಧ್ಯವೇನಲ್ಲ.

ನಮ್ಮ ಫೋನ್ ನಂಬರ್, ವಿಳಾಸ ಇರಬಹುದು; ಫೋನ್ ಒಳಗಿರುವ ಆ್ಯಪ್‌ಗಳಿರಬಹುದು, ಯಾವುದೆಲ್ಲ ವೆಬ್ ತಾಣಗಳನ್ನು ಸಂದರ್ಶಿಸುತ್ತೇವೆ ಎಂಬುದರ ಬ್ರೌಸಿಂಗ್ ಇತಿಹಾಸವೇ ಇರಬಹುದು; ಬ್ಯಾಂಕಿಂಗ್ ಖಾತೆಯ ಪಾಸ್‌ವರ್ಡ್ ಕೂಡ ಆಗಿರಬಹುದು. ಆಧಾರ್ ಕಾರ್ಡ್ ಮಾಡಿಸುವಾಗ ನಮ್ಮ ಕಣ್ಣು ಪಾಪೆ (ಐರಿಸ್), ಹೆಬ್ಬೆರಳ ಗುರುತನ್ನೂ ಸ್ಕ್ಯಾನ್ ಮಾಡಿಸಿ ದಾಖಲಿಸಿಟ್ಟಿರುತ್ತಾರೆ. ಅವೆಲ್ಲ ವ್ಯಕ್ತಿಯೊಬ್ಬನ ಅನನ್ಯ ಗುರುತು, ಪ್ರೈವೆಸಿ ವಿಚಾರ.

ಫೇಸ್‌ಬುಕ್‌ನಲ್ಲೇ ನೋಡಿ, ನಾವು ಹುಟ್ಟಿದಂದಿನಿಂದ ಹಿಡಿದು, ಶಾಲೆ ಕಾಲೇಜು, ಉದ್ಯೋಗ, ವಿವಾಹ, ಗೃಹಪ್ರವೇಶ, ಹೊಸ ಕಾರು ಕೊಂಡಿದ್ದು, ಹೊಸ ಗಾಡಿ ಖರೀದಿಸಿದ್ದು… ಎಲ್ಲವನ್ನೂ ಹಾಕಿರುತ್ತೇವೆ. ನಮ್ಮ ಪೂರ್ಣ ಜನ್ಮ ವೃತ್ತಾಂತವೇ ಅಲ್ಲಿರುತ್ತದೆ. ಯಾರೊಂದಿಗೆ ಚಾಟ್ ಮಾಡಿದ್ದೇವೆ ಎಂಬುದರ ಮಾಹಿತಿಯೂ ಇರುತ್ತದೆ, ಯಾರಿಗೆ, ಯಾವ ಪೋಸ್ಟಿಗೆ, ಫೋಟೋಗೆ ಲೈಕ್ ಮಾಡುತ್ತೇವೆ ಎಂಬುದು ಬಟಾಬಯಲಾಗುತ್ತದೆ. ಆವಾಗೆಲ್ಲ ನಾವು ಪ್ರೈವೆಸಿ ಬಗ್ಗೆ ತಲೆಯೇ ಕೆಡಿಸಿಕೊಂಡಿರುವುದಿಲ್ಲ. ಸರಕಾರವೊಂದು ನಮ್ಮೆಲ್ಲ ಮಾಹಿತಿಯನ್ನು ಕಾಪಿಡಲು, ಭ್ರಷ್ಟಾಚಾರ ತಡೆಯಲು ಮಾಹಿತಿ ಕೇಳುತ್ತದೆಯೆಂದಾದರೆ (ಆಧಾರ್ ಮೂಲಕ) ಹಿಂದು ಮುಂದು ನೋಡುತ್ತೇವೆ. ಇದರ ಪರ-ವಿರೋಧಕ್ಕೆ ರಾಜಕೀಯ ಕಾರಣಗಳು ಒಂದೆಡೆಯಾದರೆ, ಈ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಹಣಕ್ಕಾಗಿ ಏನು ಮಾಡಲೂ ಹೇಸಲಾರರು ಎಂಬುದು ಅದೆಷ್ಟೋ ಸಂದರ್ಭಗಳಲ್ಲಿ ಸಾಬೀತಾಗಿರುವುದರಿಂದ, ನಮ್ಮ ಖಾಸಗಿ ಮಾಹಿತಿಯು ಎಷ್ಟು ಸುರಕ್ಷಿತ ಎಂಬ, ವಿಶ್ವಾಸಾರ್ಹತೆಯ ಕೊರತೆಯ ಎಳೆಯೊಂದು ಎಲ್ಲರ ಮನದೊಳಗಿರುವ ಆತಂಕಕ್ಕೆ ಕಾರಣ.

ಆಫ್‌ಲೈನ್‌ನಲ್ಲೂ…
ಅದು ಭ್ರಮಾವಾಸ್ತವಿಕವಾದ ಆನ್‌ಲೈನ್ ಜಗತ್ತಿನ ವಿಷಯವಾಯಿತು. ಆದರೆ ವಾಸ್ತವ ಜಗತ್ತಿನಲ್ಲಿ?

ವಿಶೇಷವಾಗಿ ನಗರ ಪ್ರದೇಶಗಳಲ್ಲಿರುವವರಿಗೆ ಹೀಗೊಂದು ಅನುಭವವಾಗಿರಬಹುದು. ಆವತ್ತೊಂದಿನ ಹೆಲ್ಮೆಟ್ ಹಾಕಿಕೊಳ್ಳದೆಯೋ ಅಥವಾ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿಯೋ ವಾಹನ ಓಡಿಸಿದ್ದರೆ, ಕೆಲವು ದಿನಗಳಲ್ಲೇ ನಮ್ಮ ಮನೆಬಾಗಿಲಿಗೇ ಟ್ರಾಫಿಕ್ ಪೊಲೀಸರ ನೋಟೀಸ್ ಬಂದಿರುತ್ತದೆ, ದಂಡ ಕಟ್ಟಬೇಕೆಂದು! ಸಿಗ್ನಲ್‌ನಲ್ಲಿ ಪೊಲೀಸರು ಇಲ್ಲದೇ ಇದ್ದರೂ ನಮಗೆ ಹೇಗೆ ಈ ನೋಟಿಸ್ ಬಂತು? ನಮ್ಮ ವಾಹನದ ಸಂಖ್ಯೆಯು ಆ ಸಿಗ್ನಲ್‌ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಮೂಲಕ ದಾಖಲಾಗಿರುತ್ತದೆ. ಆರ್‌ಟಿಒದಲ್ಲಿ ಈ ವಾಹನದ ಸಂಖ್ಯೆಯ ಹೆಸರು, ವಿಳಾಸಗಳೆಲ್ಲವೂ ಇರುತ್ತದೆಯಲ್ಲವೇ? ಹೀಗಾಗಿ ಆ ವಾಹನದ ಮಾಲೀಕನ ವಿಳಾಸಕ್ಕೆ ನೋಟೀಸ್ ಕಳುಹಿಸಲಾಗುತ್ತದೆ!

ಅದೆಷ್ಟೋ ರಾಜಕಾರಣಿಗಳನ್ನು ಕಂಗೆಡಿಸಿದ, ಸರಕಾರಗಳನ್ನೂ ಉರುಳಿಸಿದ ವಿಷಯ ‘ಟೆಲಿಫೋನ್ ಕದ್ದಾಲಿಕೆ’. ಕರೆಯನ್ನು ಗುಪ್ತವಾಗಿ ದಾಖಲಿಸಿಕೊಳ್ಳುವ ಕಳ್ಳಕಿವಿ ವ್ಯವಸ್ಥೆ. ಈಗಲೂ ಅದರ ಚಟಪಟ ಸದ್ದು ಆಗಾಗ್ಗೆ ಕೇಳಿಬರುತ್ತಲೇ ಇದೆ.

ನಾವು ಯಾರಿಗೂ ಫೋನ್ ನಂಬರನ್ನೇ ಕೊಟ್ಟಿರುವುದಿಲ್ಲ, ಆದರೂ ಮಾರಾಟ ಕಂಪನಿಗಳಿಂದ, ಇನ್ಶೂರೆನ್ಸ್ ಕಂಪನಿಗಳಿಂದ, ಕರೆ ಬರುತ್ತಿರುತ್ತದೆ. ಹೇಗೆ? ಉದಾಹರಣೆಗೆ, ಯಾವುದೋ ಅಂಗಡಿಗೆ/ಮಾಲ್‌ಗೆ ಹೋಗಿರುತ್ತೇವೆ. ಅಲ್ಲಿ ಐನೂರು ರೂ. ಮೌಲ್ಯದ ಸಾಮಗ್ರಿ ಖರೀದಿಸಿದರೆ ಕೂಪನ್ ತುಂಬಲು ಕೊಡುತ್ತಾರೆ, ಅದೃಷ್ಟಶಾಲಿ ನೀವಾಗಬಹುದು, ಕಾರು ಗೆಲ್ಲುವ ಅವಕಾಶ ಅಂತೆಲ್ಲ ಆಸೆ ತೋರಿಸುತ್ತಾರೆ. ಅಲ್ಲಿ ಹೆಸರು, ವಿಳಾಸ, ಫೋನ್ ನಂಬರ್, ಇಮೇಲ್ ವಿಳಾಸ ಎಲ್ಲ ಕೊಟ್ಟಿರುತ್ತೇವೆ. ಅಲ್ಲಿಗೆ ನಮ್ಮ ಖಾಸಗಿತನವನ್ನು ಆ ಕಂಪನಿಗೆ ಧಾರೆ ಎರೆದಂತಾಯಿತು.

ಅಪಾಯ ಹೇಗೆ?
ನಾವು ಎಲ್ಲ ವಿವರಗಳನ್ನೂ ನೀಡಿರುವ ಆ್ಯಪ್ ಅಥವಾ ಬೇರಾವುದೇ ಸಂಸ್ಥೆಯ ಸರ್ವರನ್ನು ಸೈಬರ್ ವಂಚಕರು ಹ್ಯಾಕ್ ಮಾಡಬಹುದು ಅಥವಾ ಕಂಪನಿಯ ಒಳಗಿನವರೇ ಇನ್ನೊಬ್ಬರ ಆಮಿಷಕ್ಕೊಳಗಾಗಿ ಅನ್ಯರಿಗೆ ಲೀಕ್ ಮಾಡಬಹುದು, ಇಲ್ಲವೇ ಆ ಕಂಪನಿಯನ್ನು ಮತ್ತೊಂದು ಕಂಪನಿ ಖರೀದಿಸಿದಾಗ, ಅದರ ಡೇಟಾಬೇಸ್ (ಮಾಹಿತಿ ಸಂಚಯ) ಕೂಡ ಹೊಸ ಕಂಪನಿಗೆ ವರ್ಗಾವಣೆಯಾಗುತ್ತದೆ. (ವಾಟ್ಸಾಪ್ ಅನ್ನು ಫೇಸ್‌ಬುಕ್ ಖರೀದಿಸಿದ್ದು ಒಂದು ಉದಾಹರಣೆ. ಕೋರ್ಟ್ ತೀರ್ಪಿಗೆ ಕಾರಣಗಳಲ್ಲೊಂದಾದ ಅಂಶಗಳಲ್ಲಿ ಇದೂ ಒಂದು.) ಈ ಮಾಹಿತಿ ಸೋರಿ ಹೋದರೆ ನಮಗೆ ನಿರಂತರ ಜಾಹೀರಾತು ಕರೆಗಳ ಕಿರಿಕಿರಿಯಾಗಬಹುದು, ನಮ್ಮ ಆಧಾರ್ ಸಂಖ್ಯೆ, ಫೋನ್ ನಂಬರ್ ಮುಂತಾದ ಗುರುತಿನ ಮಾಹಿತಿ ಪಡೆದು ಉಗ್ರರು ಹೊಸ ಸಿಮ್ ಖರೀದಿಸಿ ರಾಷ್ಟ್ರದ್ರೋಹಿ ಕೃತ್ಯಗಳಿಗೆ ಬಳಸಬಹುದು ಅಥವಾ ಸೈಬರ್ ವಂಚಕರು ಬ್ಯಾಂಕ್ ಖಾತೆಗೂ ಕನ್ನ ಹಾಕಬಹುದು. ನಕಲಿ ರೇಷನ್ ಕಾರ್ಡ್, ನಕಲಿ ವೋಟರ್ ಐಡಿ ಎಲ್ಲ ಮಾಡಿಕೊಳ್ಳಬಹುದು. ನಾವು ಇಡುವ ಪ್ರತಿಯೊಂದು ಡಿಜಿಟಲ್ ಹೆಜ್ಜೆಯ (ಡಿಜಿಟಲ್ ಫೂಟ್‌ಪ್ರಿಂಟ್) ಜಾಡು ಸಂಗ್ರಹಿಸಿಯೋ, ಮಾರಾಟ ಮಾಡಿಯೋ, ವಿಶ್ಲೇಷಿಸಿಯೋ, ನಾವಿರುವ ಸ್ಥಳವನ್ನು ಗುರುತಿಸಿ ಅಲ್ಲಿಗಷ್ಟೇ ಸೀಮಿತವಾದ ಜಿಯೋ ಟಾರ್ಗೆಟೆಡ್ (ನಾವಿರೋ ಸ್ಥಳವನ್ನು ಗುರಿಯಾಗಿಸಿಕೊಂಡು) ಜಾಹೀರಾತುಗಳು ಕೂಡ ಇವೆ. ಈ ಅಪಾಯದ ಕುರಿತ ಜನರ ಆತಂಕವೇ ಈಗಿನ ಬೆಳವಣಿಗೆಗೆ ಕಾರಣ.

ಏನು ಪರಿಹಾರ?
ವಾಟ್ಸಾಪ್‌ನಲ್ಲೋ, ಫೇಸ್‌ಬುಕ್‌ನಲ್ಲೋ, ಇಮೇಲ್ ಮೂಲಕವೋ ಸಂದೇಶಗಳು ಹರಿದಾಡುತ್ತಿರುತ್ತವೆ… ಉಚಿತ ಟಾಕ್ ಟೈಮ್ ಪಡೆಯಲು, ಐಫೋನ್ ಗೆಲ್ಲಲು, ಜೀವಮಾನ ಪರ್ಯಂತ ವ್ಯಾಲಿಡಿಟಿ ಪಡೆಯಲು… ಈ ಲಿಂಕ್ ಕ್ಲಿಕ್ ಮಾಡಿ ಅಂತ. ಕ್ಲಿಕ್ ಮಾಡಿದರೆ, ಲಾಗಿನ್ ಆಗಲು ಕೇಳುತ್ತದೆ. ನಮ್ಮ ಇಮೇಲ್ ಐಡಿ ಸಿಕ್ಕಿಬಿಟ್ಟರೆ ಮತ್ತೆ ನಮ್ಮನ್ನು ಟ್ರೇಸ್ ಮಾಡುವುದು ಸುಲಭ. ನಮ್ಮ ಇಮೇಲ್ ಐಡಿ ಹಾಗೂ ಫೋನ್ ನಂಬರ್ ಕದಿಯಲೆಂದೇ ದೊಡ್ಡ ಕಂಪನಿಗಳ ಹೆಸರಲ್ಲಿ ಸೃಷ್ಟಿಸಲಾಗಿರುವ ನಕಲಿ ಲಿಂಕ್‌ಗಳಿವು ಎಂಬ ವಿವೇಚನೆ ನಮಗೆ ಬೇಕು.

ನಾವು ಎಚ್ಚರಿಕೆಯಿಂದಿರೋಣ. ಸಾಮಾಜಿಕ ಜಾಲತಾಣಗಳಲ್ಲಾದರೆ ಫೋನ್ ನಂಬರ್, ಇಮೇಲ್ ವಿಳಾಸ, ನಮ್ಮ ಪೋಸ್ಟ್‌ಗಳು ಯಾರಿಗೆ ಕಾಣಿಸಬೇಕು ಅಂತೆಲ್ಲ ನಾವೇ ನಿರ್ಧರಿಸಬಹುದಾದ ಪ್ರೈವೆಸಿ ಸೆಟ್ಟಿಂಗ್‌ಗಳಿವೆ. ಆದರೂ ಅವು ಎಲ್ಲೋ ಒಂದು ಸರ್ವರ್‌ನಲ್ಲಿ ಇದ್ದೇ ಇರುತ್ತವೆ ಎಂಬುದು ಗಮನದಲ್ಲಿರಬೇಕು. ನಮ್ಮ ಗೋಪ್ಯ ಮಾಹಿತಿಗಳನ್ನು ರಕ್ಷಿಸು ಅನವರತ ಅಂತ ಸರಕಾರಕ್ಕಷ್ಟೇ ಮೊರೆ ಹೋಗಬೇಕಾಗಿದೆ.

ತಪ್ಪು ಮಾಡಬಾರದು ಎಂಬುದು ಸಮಾಜದ ಅಲಿಖಿತ ನಿಯಮ (ಈ ತಪ್ಪಿನ ವ್ಯಾಖ್ಯಾನ, ವ್ಯಾಪ್ತಿ-ವಿಸ್ತಾರದ ಚರ್ಚೆಗೆ ಬೇರೆಯೇ ಪುಟ ಬೇಕಾದೀತು). ಸಮಾಜಕ್ಕೆ ತೊಂದರೆಯಾಗುವ ಯಾವುದಾದರೂ ಅದು ತಪ್ಪು ಅನ್ನುವುದನ್ನು ಗಣನೆಗೆ ತೆಗೆದುಕೊಂಡರೂ, ಪ್ರೈವೆಸಿ ಎಂಬುದು ಯಾವ ಪ್ರಾಣಿಯ ಮಾಂಸ ಸೇವಿಸಬೇಕು, ಯಾವ ರೀತಿಯ ಉಡುಗೆ ತೊಡಬೇಕು, ಗರ್ಭಪಾತ ಮಾಡಿಸಿಕೊಳ್ಳುವುದು, ದಯಾಮರಣ, ಸಲಿಂಗ ಸಂಗ… ಮದ್ಯಪಾನ ನಿಷೇಧ ಎಲ್ಲವನ್ನೂ ವ್ಯಾಪಿಸಿರುತ್ತದೆ. ಸ್ವೇಚ್ಛಾಚಾರ ಮತ್ತು ಖಾಸಗಿತನದ ಹಕ್ಕಿನ ಮಧ್ಯೆ ಅತ್ಯಂತ ಸೂಕ್ಷ್ಮ ಪರದೆಯೊಂದಿದೆ. ಪ್ರೈವೆಸಿ ಮೂಲಭೂತ ಹಕ್ಕು ಆಗುವುದರಿಂದ ಇದರ ರಕ್ಷಣೆಗೆ ಕಠಿಣ ಕಾನೂನು ರೂಪಿಸಲು ಸರಕಾರ ಈಗಾಗಲೇ ತಯಾರಿ ಆರಂಭಿಸಿದೆ. ನಮ್ಮ ಹಕ್ಕು ಹೇಗೆ ರಕ್ಷಣೆಯಾಗುತ್ತದೆ ಎಂಬುದಕ್ಕೆ ಕಾಲನ ಉತ್ತರದ ನಿರೀಕ್ಷೆಯಲ್ಲಿ….

ಏನಿದು ಪ್ರೈವೆಸಿ?
ಕನ್ನಡದಲ್ಲಿ ಪ್ರೈವೆಸಿಗೆ ಖಾಸಗಿತನ, ಗೋಪ್ಯತೆ, ಏಕಾಂತ ಎಂಬ ಅರ್ಥಗಳಿವೆ. ಆಕ್ಸ್‌ಫರ್ಡ್ ನಿಘಂಟು ವಿವರಿಸುವ ಪ್ರಕಾರ, ವ್ಯಕ್ತಿಯೊಬ್ಬ ಅನ್ಯರ ಲಕ್ಷ್ಯಕ್ಕೆ ಈಡಾಗದಿರುವುದು ಅಥವಾ ಅನ್ಯರಿಂದ ತೊಂದರೆಗೀಡಾಗದಿರುವ ಸ್ಥಿತಿ. ಒಟ್ಟಿನಲ್ಲಿ ಸಾರ್ವಜನಿಕರ ಗಮನಕ್ಕೆ ಬಾರದಿರುವ ಸ್ಥಿತಿ.

ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆ ಲೀಡ್ By ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

3 days ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

4 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

5 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago