Clubhouse ಹೊಸತೇನಲ್ಲ: ಈ ಆನ್‌ಲೈನ್ ಹರಟೆಕಟ್ಟೆ ಫೇಸ್‌ಬುಕ್, ಟ್ವಿಟರಲ್ಲೂ ಇದೆ

0
381

ಸ್ಮಾರ್ಟ್ ಫೋನ್‌ಗಳು ಬಂದ ಬಳಿಕ ನಾವು ಮಾತನಾಡುವುದನ್ನು ಮರೆತಿದ್ದೇವೆ.

ಇದು ಅಚ್ಚರಿಯಾದರೂ, ಯೋಚಿಸಿ ನೋಡಿದಾಗ ಹೌದಲ್ಲಾ ಅನ್ನಿಸದಿರದು. ಹೌದು. ಮಾತನಾಡುವುದಕ್ಕಾಗಿಯೇ ಇರುವ ಸಂಚಾರಿ ದೂರವಾಣಿಯನ್ನು ಕಚೇರಿಯ ಅಥವಾ ಬೇರಾವುದೇ ತುರ್ತು ಕಾರ್ಯಗಳಲ್ಲಿ ಮಾತ್ರವೇ ಮಾತನಾಡುತ್ತೇವೆ. ಅದರಲ್ಲಿಯೂ ಕೇವಲ ಪಠ್ಯ ಸಂವಹನದಲ್ಲಿ ಆಗುವುದನ್ನು ಅದರಲ್ಲೇ ಮುಗಿಸುತ್ತೇವೆ.

ಸ್ಮಾರ್ಟ್ ಫೋನ್‌ಗಳು ಬಂದಿವೆ, ಮಾತುಕತೆ ಕಡಿಮೆಯಾಗಿದೆ, ಚಿತ್ರ-ವಿಡಿಯೊ ಕಂಟೆಂಟ್‌ಗಳು ಹೆಚ್ಚಾಗಿವೆ. ಮಾತನಾಡುವವರು ಇದ್ದಾರೆ, ಆದರೆ ಕೇಳಿಸಿಕೊಳ್ಳುವವರು ಕಡಿಮೆಯಾಗಿದ್ದಾರೆ, ಜನರ ಏಕಾಗ್ರತೆಗೆ ಭಂಗವಾಗಿದೆ. ಈಗಿನ ವರ್ಚುವಲ್ ಸಮಾಜದ ನೆಗೆಟಿವ್ ಎಫೆಕ್ಟ್ ಇವು.

ಇದನ್ನೇ ಬಂಡವಾಳವಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳು ಹೊಸತನದ ಪ್ರಯೋಗದಲ್ಲಿ ನಿರತವಾಗಿವೆ. ಇದರ ಪರಿಣಾಮವೇ ಈಗ ಕೇಳಿ ಬರುತ್ತಿರುವ ಕ್ಲಬ್ ಹೌಸ್ ಎಂಬ ಆ್ಯಪ್. ಡೆಸ್ಕ್‌ಟಾಪ್‌ನಿಂದ ಇದಕ್ಕೆ ನೇರವಾಗಿ ಲಾಗಿನ್ ಆಗುವುದು ಸದ್ಯಕ್ಕೆ ಅಸಾಧ್ಯ. ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ ಅಥವಾ ತಂತ್ರಾಂಶಗಳನ್ನು ಬಳಸಬೇಕಾಗುತ್ತದೆ. ಇದು ಮಾತುಗಾರರಿಗೆ ಮತ್ತು ಶ್ರೋತೃಗಳಿಗಷ್ಟೇ ಮೀಸಲಾದ ತಾಣ. ಇದು ಕ್ಲಬ್ ಹೌಸ್‌ನಲ್ಲಿ ಏನಾಗುತ್ತಿದೆ ಎಂದು ಚಿತ್ರ ಅಥವಾ ವಿಡಿಯೊ ನೋಡುತ್ತಲೇ ತಮ್ಮ ಅನ್ಯ ಕಾರ್ಯ ಮಾಡಿಕೊಳ್ಳಬಹುದು ಎಂದುಕೊಳ್ಳುವವರಿಗಲ್ಲವೇ ಅಲ್ಲ. ಇಲ್ಲಿ ಕೇಳಿಸಿಕೊಳ್ಳುವ ತಾಳ್ಮೆ, ಏಕಾಗ್ರತೆ ಬೇಕು, ಜೊತೆಗೆ ಮಾತನಾಡುವ ಜ್ಞಾನವೂ ಬೇಕು.

2020ರಲ್ಲಿ ಆ್ಯಪಲ್ ಐಫೋನ್‌ಗಳಿಗೆ ಆ್ಯಪ್ ಸ್ಟೋರ್ ಮೂಲಕ ಮಾತ್ರವೇ ದೊರೆಯುತ್ತಿದ್ದ ಕ್ಲಬ್‌ಹೌಸ್ ಎಂಬ ಆ್ಯಪ್ 2021ರ ಜೂನ್ ತಿಂಗಳಲ್ಲಿ ಆಂಡ್ರಾಯ್ಡ್ ಫೋನ್‌ಗಳಿಗೂ ಲಭ್ಯವಾದ ತಕ್ಷಣ, ಆ್ಯಂಡ್ರಾಯ್ಡ್ ಬಳಕೆದಾರರು ಹೆಚ್ಚಿರುವ ಭಾರತದಲ್ಲಿಯೂ ಇದೇನು ಹೊಸತೊಂದು ಬಂದಿತಲ್ಲಾ ಎಂಬ ಕುತೂಹಲ ಉಂಟಾಯಿತು. ಹೊಸದನ್ನು ಯಾವತ್ತಿಗೂ ಅಪ್ಪಿಕೊಳ್ಳುವ ಭಾರತೀಯರು ಕ್ಲಬ್‌ಹೌಸ್‌ನೊಳಗೆ ಸೇರಿಕೊಂಡರು. ಇದು ಸದ್ಯಕ್ಕೆ ಸ್ನೇಹಿತರ ಆಹ್ವಾನದ ಆಧಾರದಲ್ಲಿ ಸೇರಬಹುದಾದ ಸಾಮಾಜಿಕ ಶ್ರೋತೃಗಳ ತಾಣ.

ಹೊಸತೇನಲ್ಲ
ಧ್ವನಿಯನ್ನೇ ಬಳಸಿ ಚಾಟ್ ಮಾಡುವುದು ಹೊಸತೇನಲ್ಲ. ಕ್ಲಬ್‌ಹೌಸ್ ಬಿಡುಗಡೆಯಾಗಿ ಸುಮಾರು 14 ತಿಂಗಳುಗಳೇ ಕಳೆದಿವೆ. ನಮ್ಮ ಗಮನಕ್ಕೆ ಬಂದಿದ್ದು ಆಂಡ್ರಾಯ್ಡ್ ಫೋನ್‌ಗಳಿಗೆ ಈ ಆ್ಯಪ್ ಲಭ್ಯವಾದ ಬಳಿಕವಷ್ಟೇ. ಉಳಿದಂತೆ ಫೇಸ್‌ಬುಕ್‌ನಲ್ಲಿ ಲೈವ್ ಚಾಟ್ ರೂಮ್ಸ್ ಈಗಷ್ಟೇ ಬಿಡುಗಡೆಯಾಗಿದ್ದರೆ, ಟ್ವಿಟರ್‌ನಲ್ಲಿ ಟ್ವಿಟರ್ ಸ್ಪೇಸಸ್ ಕೂಡ ಕೆಲವು ದಿನಗಳಿಂದ ಕಾಣಿಸಿದೆ. ಇವು ಕೆಲವರಾದರೂ ತಿಳಿದುಕೊಂಡಿರುವ ಧ್ವನಿ ಆಧಾರಿತ ಚಾಟ್ ವ್ಯವಸ್ಥೆಗಳು. ಅದೇ ರೀತಿ ವಾಟ್ಸ್ಆ್ಯಪ್, ಗೂಗಲ್ ಮೀಟ್, ಝೂಮ್ ಮುಂತಾದ ಸಂವಹನ ವ್ಯವಸ್ಥೆಯಲ್ಲಿಯೂ ವಿಡಿಯೊ ಆಫ್ ಮಾಡಿ, ಹಲವರೊಂದಿಗೆ ಹರಟುವ ಅವಕಾಶಗಳು ಈಗಲೂ ಇವೆ. ಸ್ಪಾಟಿಫೈ ಆ್ಯಪ್‌ನಲ್ಲಿ ಗ್ರೀನ್‌ರೂಮ್ ಚಾಟಿಂಗ್ ವ್ಯವಸ್ಥೆಯಿದೆ. ಉಳಿದಂತೆ ಲಿಂಕ್ಡ್ ಇನ್, ಸ್ಲ್ಯಾಕ್, ರೆಡಿಟ್ ಕೂಡ ಈ ವ್ಯವಸ್ಥೆಯನ್ನು ಪರಿಚಯಿಸುವ ಪ್ರಯತ್ನದಲ್ಲಿವೆ.

ಪ್ರೈವೆಸಿ
ಆದರೆ ಗಮನಿಸಬೇಕು. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಿಗಿಂತ ಇಲ್ಲಿ ಖಾಸಗಿತನ ಬಗ್ಗೆ ಆತಂಕ ವ್ಯಕ್ತಪಡಿಸುವವರಿಗೊಂದು ಹೆಚ್ಚುವರಿ ಆತಂಕವಿದೆ. ವಾಟ್ಸ್ಆ್ಯಪ್ ಅಥವಾ ಟೆಲಿಗ್ರಾಂ ಸಂದೇಶವಾಹಕ ಆ್ಯಪ್‌ಗಳ ಮಾದರಿಯಲ್ಲೇ ಇಲ್ಲೂ ನೀವು ನಿಮ್ಮ ಫೋನ್ ನಂಬರನ್ನು, ಹೆಸರನ್ನು ಖಾಸಗಿತನದ ಬಗ್ಗೆ ಕಾಳಜಿ ಮರೆತು ಕ್ಲಬ್‌ಹೌಸ್‌ಗೆ ಧಾರೆ ಎರೆಯಬೇಕಾಗುತ್ತದೆ.

ಇಷ್ಟಾದರೂ, ಇಲ್ಲಿ ಕೂಡ ಹಿಂಬಾಲಕರ ಸಂಖ್ಯೆ ವೃದ್ಧಿಗಾಗಿ ಫೇಕ್ ಪ್ರೊಫೈಲ್‌ಗಳೂ ರಚನೆಯಾಗುತ್ತವೆ. ಅವನು ಅವನಲ್ಲ, ಅವಳು ಅವಳಲ್ಲದಿರುವ ಸಾಧ್ಯತೆಗಳಿರುವುದರಿಂದ ‘ಫಾಲೋ’ ಮಾಡುವಾಗ ಎಚ್ಚರ ವಹಿಸಬೇಕಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ…
ಕ್ಲಬ್‌ಹೌಸ್ ಎಂಬುದು ಆಡಿಯೊ ಮೂಲಕ ಸಂವಹನ ನಡೆಸುವ ತಾಣ. ಕ್ಲಬ್ ಹೌಸ್‌ಗೆ ನೋಂದಾಯಿಸುವಾಗಲೇ, ನಿಮ್ಮ ಆಸಕ್ತಿಯ ಕ್ಷೇತ್ರಗಳನ್ನು ಅಲ್ಲಿ ಆಯ್ಕೆ ಮಾಡಿಕೊಂಡರೆ, ಅದಕ್ಕೆ ಸಂಬಂಧಿಸಿದವರನ್ನು ಹಿಂಬಾಲಿಸಲು ನಿಮಗೆ ಶಿಫಾರಸುಗಳು ಬರುತ್ತಿರುತ್ತವೆ. ಅಥವಾ ನಿಮ್ಮದೇ ಸ್ನೇಹಿತ ವಲಯವನ್ನು ಹಿಂಬಾಲಿಸುತ್ತಾ, ಹೊಸಬರ ಜೊತೆಗೂಡಬಹುದು. ಕ್ಲಬ್ ರೂಂನಲ್ಲಿ ಒಂದು ವಿಷಯದ ಚರ್ಚೆ ಆರಂಭಿಸುವವರು, ವರ್ಚುವಲ್ ‘ವೇದಿಕೆ’ಗೆ ಬಂದು ಮಾತನಾಡುವಂತೆ ಶ್ರೋತೃಗಳ ವರ್ಚುವಲ್ ‘ಗ್ಯಾಲರಿ’ಯಲ್ಲಿರುವವರನ್ನು ಆಹ್ವಾನಿಸಬಹುದು. ಅಥವಾ ವೇದಿಕೆಯಲ್ಲಿ ಏನೇನೋ ಒದರಿದರೆ, ಆತ/ಆಕೆಯನ್ನು ವೇದಿಕೆಯಿಂದ ಹೊರಹಾಕಬಹುದು. ಶ್ರೋತೃಗಳ ಗ್ಯಾಲರಿಯಲ್ಲಿ ಕುಳಿತವರೂ ತಮಗೇನಾದರೂ ಮಾತನಾಡಬೇಕಿದ್ದರೆ ಕೈ (ಚಿಹ್ನೆ) ಎತ್ತಿ, ಮಾಡರೇಟರ್‌ಗಳ ಗಮನ ಸೆಳೆಯಬಹುದು. ಅಥವಾ ಮಾಡರೇಟರ್‌ಗಳೇ, ವೇದಿಕೆಗೆ ಬಲವಂತವಾಗಿ ವೇದಿಕೆಗೆ ಕರೆತಂದು, ಅಭಿಪ್ರಾಯ ಹಂಚಿಕೊಳ್ಳುವಂತೆ ಮಾಡಬಲ್ಲರು. ಜೊತೆಗೆ, ಕೊಠಡಿಯ ಚರ್ಚೆ ಇಷ್ಟವಾಗಲಿಲ್ಲವೆಂದಾದರೆ, ಸದ್ದಿಲ್ಲದೇ ಹೊರನಡೆಯುವ (ಲೀವ್ ಕ್ವಯೆಟ್‌ಲೀ) ಎಂಬ ಆಯ್ಕೆಯಿದೆ.

ಇಲ್ಲಿ ಚಾಟ್ ರೂಂನಂತೆಯೇ ಚರ್ಚೆಗಳಿಗಾಗಿಯೇ ಕೊಠಡಿ (ರೂಂ) ನಿರ್ಮಿಸಿಕೊಳ್ಳುವ ಆಯ್ಕೆಯಿದೆ. ಅದನ್ನು ಮುಕ್ತವಾಗಿರಿಸಬಹುದು, ನಮ್ಮ ಹಿಂಬಾಲಕರಿಗೆ ಮಾತ್ರವೇ ಸೀಮಿತಗೊಳಿಸಬಹುದು ಅಥವಾ ರಹಸ್ಯ ಚರ್ಚೆ ನಡೆಸಬೇಕಿದ್ದರೆ ಮುಚ್ಚಿದ ಬಾಗಿಲ ಕೊಠಡಿಗಳೂ ಇಲ್ಲಿವೆ. ವಿಶೇಷವೆಂದರೆ, ಇಲ್ಲಿ ನಡೆಯುವ ಮಾತುಕತೆಗಳ ದಾಖಲೆಯು ಸೇವ್ ಆಗುವುದಿಲ್ಲ. ಅಂದರೆ ಧ್ವನಿ ಫೈಲ್‌ಗಳನ್ನು ಮತ್ತೆ ನೋಡುವ ಎಂದುಕೊಂಡರೆ ನಿರಾಸೆಯಾಗುತ್ತದೆ. ಇದಕ್ಕಾಗಿ, ಬಾಹ್ಯ ರೆಕಾರ್ಡರ್ ಸಾಧನಗಳನ್ನು ಬಳಸಬೇಕಾಗಬಹುದು.

ಒಳಿತೆಷ್ಟೋ, ಕೆಡುಕೂ ಅಷ್ಟೇ…
ಕ್ಲಬ್‌ಹೌಸ್‌ನಲ್ಲಿ ಖಾತೆ ತೆರೆದು, ನಮ್ಮ ಫೋನ್ ನಂಬರನ್ನು ಅದಕ್ಕೆ ಕೊಟ್ಟು, ನಮಗೆ ಬೇಕಾದ ಒಂದು ಹೆಸರಿಟ್ಟುಕೊಂಡು, ಹಾಗೇ ಸುತ್ತಾಡುತ್ತಾ ಬಂದರೆ, ಸಾಕಷ್ಟು ಕೊಠಡಿ (ರೂಮ್)ಗಳು ನಮಗೆ ಗೋಚರಿಸುತ್ತವೆ. ಹರಟೆಕಟ್ಟೆ, ಅರಳಿಕಟ್ಟೆ, ಪ್ರೇಮಿಗಳ ತಾಣ, ನಾಟಕದ ಬಗ್ಗೆ ಚರ್ಚೆ, ಬೆಂಗಳೂರು ಕ್ಲಬ್, ನೈಟ್ ಕ್ಲಬ್, ಕ್ರಿಪ್ಟೋಕರೆನ್ಸಿ ಕ್ಲಬ್, ಕಾಡುಹರಟೆ, ಪ್ರವಾಸ, ಕವನ, ಕಾದಂಬರಿ, ನಾಟಕ, ಸಂಗೀತ, ಉದ್ಯಮಿಗಳ ಬಳಗ, ಸಂಡೇ ಫನ್‌ಡೇ, ಇಂಗ್ಲಿಷ್ ಕಲಿಕೆ, ಸ್ಟಾರ್ಟಪ್ ಗೈಡ್, ತುಳುನಾಡು ರಾಜ್ಯ – ಹೀಗೆ ವಿಭಿನ್ನ ಹೆಸರಿನ ರೂಮ್‌ಗಳು ಕಾಣಿಸುತ್ತವೆ. ಸಮಯವಿರುವವರು ಸಮಯ ಕೊಲ್ಲಲು ಇಲ್ಲಿ ಬರುತ್ತಾರೆ, ಇದ್ದ ಸಮಯದ ಸದುಪಯೋಗಪಡಿಸಿಕೊಳ್ಳೋಣ ಅಂತಂದುಕೊಂಡವರೂ ಬರುತ್ತಾರೆ.

ನಮ್ಮ ಇಷ್ಟಗಳನ್ನು ಕ್ಲಬ್‌ಹೌಸ್‌ಗೆ ತಿಳಿಸಿರುತ್ತೇವೆ, ಅದರ ಅಧಾರದಲ್ಲಿ ಈ ರೀತಿಯ ಚರ್ಚಾ ಕೊಠಡಿಗಳು ನಮಗೆ ಗೋಚರಿಸುತ್ತವೆ. ನಾವು ಸದಸ್ಯರೇ ಅಲ್ಲದ ಕ್ಲಬ್‌ನೊಳಗೂ ತೂರಿಕೊಂಡುಬಿಡಬಹುದು, ಅವರೇನು ಮಾತಾಡುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳಬಹುದು, ಆದರೆ ಇದನ್ನು ಕದ್ದಾಲಿಕೆ ಅಂತ ಕರೆಯಲಾಗದು!

ಒಟ್ಟಿನಲ್ಲಿ ಸಮಾನ ಮನಸ್ಕರು ಸೇರಿಕೊಂಡು, ಆ ಕಾರ್ಯಕ್ರಮಕ್ಕೆ ತಮಗೆ ಬೇಕಾದಂತೆ ಹೆಸರಿಟ್ಟುಕೊಳ್ಳಬಹುದು. ಇಲ್ಲಿ ಹಾಳುಹರಟೆ ಮಾಡಬಹುದು, ಜ್ಞಾನವನ್ನು ಹಂಚಿಕೊಳ್ಳಬಹುದು, ಬೋಧನೆ ಮಾಡಬಹುದು, ದುರ್ಬೋಧನೆ ಮಾಡಲೂ ಇಲ್ಲಿ ಅವಕಾಶವಿದೆ. ಒಳಿತನ್ನು ಬೋಧಿಸಬಹುದು, ಪಾಠ ಮಾಡಬಹುದು, ಯಕ್ಷಗಾನ ತಾಳಮದ್ದಳೆ, ಧಾರ್ಮಿಕ ಪ್ರವಚನ, ಅಂತ್ಯಾಕ್ಷರಿ ಆಟ, ಭಾಷಣ ಸ್ಫರ್ಧೆ ಏರ್ಪಡಿಸಬಹುದು; ಆಗಷ್ಟೇ ಬಿಡುಗಡೆಯಾದ ಒಂದು ಹೊಸ ಉತ್ಪನ್ನದ ಬಗ್ಗೆ ಚರ್ಚಿಸಿ ಹೆಚ್ಚು ಜ್ಞಾನ ಪಡೆಯಬಹುದು. ಅಷ್ಟೇ ಅಲ್ಲ, ಕೋವಿಡ್ ಕಾಲದಲ್ಲಿ, ಲಾಕ್‌ಡೌನ್ ನಿರ್ಬಂಧಗಳಿರುವ ಈ ಸಮಯದಲ್ಲಿ ಕ್ಲಬ್‌ಹೌಸ್ ಮೂಲಕವೇ ರಾಜಕೀಯ ಸಮಾವೇಶಗಳನ್ನು ಏರ್ಪಡಿಸಬಹುದು! ಅಂತೆಯೇ, ರಾಜಕೀಯ ಮುಖಂಡರನ್ನು ನಿರ್ದಯವಾಗಿ ನಿಂದಿಸಬಹುದು ಅಂತ ತಿಳಿದುಕೊಂಡವರೂ ತಮ್ಮದೇ ಕ್ಲಬ್ ಮಾಡಿಕೊಂಡು ಇಲ್ಲಿ ಸಮಯ ಕಳೆಯುತ್ತಾರೆ. ಎಷ್ಟೇ ಆಕ್ರೋಶ ಹೊರಗೆಡಹಿದರೂ, ಎಷ್ಟೇ ಪ್ರೀತಿಯಿಂದ ಮಾತನಾಡಿದರೂ – ಇಲ್ಲಿ ಮುಖಭಾವವನ್ನು ನೋಡಲಾಗುವುದಿಲ್ಲವಲ್ಲ, ಅಷ್ಟರ ಮಟ್ಟಿಗೆ ಸೇಫ್! ಯಾಕೆಂದರೆ ಧ್ವನಿ ಮಾತ್ರ ಇರುತ್ತದೆ. ಈ ಕ್ಲಬ್‌ನಲ್ಲಿ ಸಮಯ ಮಿತಿ ಇಲ್ಲ, ಸದಸ್ಯರ ಮಿತಿಯೂ ಇಲ್ಲ. ಆಕಾಶವಾಣಿಯಲ್ಲಿ ತಾಳಮದ್ದಳೆ, ಸಂಗೀತ ಮುಂತಾದವನ್ನು ಕೇಳಿದಂತೆಯೇ ಇಲ್ಲಿ ಧ್ವನಿ ಸ್ಪಷ್ಟ, ಆದರೆ ಯಾರೆಂಬುದು ಕಾಣಿಸುವುದಿಲ್ಲ. ಅಷ್ಟೆ.

ಆದರೆ, ಇದೇ ಕ್ಲಬ್ ಹೌಸನ್ನು ಒಳಿತಿಗಾಗಿಯೂ ಬಳಸಿಕೊಳ್ಳಬಹುದು. ತರಗತಿಯಲ್ಲಿ ಪಾಠವನ್ನು ಗಮನವಿಟ್ಟು ಕೇಳಿದರೆ ಅಥವಾ ಹಿರಿಯರು ಹೇಳುವುದನ್ನು ಏಕಾಗ್ರತೆಯಿಂದ ಆಲಿಸಿದರೆ ನಮಗೆ ಆ ವಿಷಯ ಎಷ್ಟು ಬೇಗ ಮನದಟ್ಟಾಗಿ, ಶಾಶ್ವತವಾಗಿ ನೆನಪುಳಿಯುತ್ತದೆಯಲ್ಲವೇ? ಅದೇ ರೀತಿ, ಯಾವುದೇ ಚಿತ್ರ ಅಥವಾ ವಿಡಿಯೊಗಳ ಡಿಸ್ಟ್ರಾಕ್ಷನ್ ಇಲ್ಲದೆ ಗಮನವಿಟ್ಟು ಕೇಳಿದರೆ, ಜ್ಞಾನ ವೃದ್ಧಿಯಾಗಲು, ವಿದ್ಯಾರ್ಥಿಗಳಿಗೆ ಏಕಾಗ್ರತೆ ಸುಧಾರಿಸಲು ಒಳ್ಳೆಯ ಟೂಲ್ ಆಗಿಯೂ ಇದನ್ನು ಉಪಯೋಗಿಸಬಹುದು. ಜನರು ಕೇಳುವುದನ್ನಿಂದು ಮರೆತಿದ್ದಾರೆ. ಹೇಳುವವರು ಮಾತ್ರ ಜಾಸ್ತಿ ಆಗಿದ್ದಾರೆ. ನಾವು ಮರೆತಿರುವ ಶ್ರವಣ ಸುಖವನ್ನು ಈ ಕ್ಲಬ್‌ಹೌಸ್ ನಮಗೆ ಒದಗಿಸುತ್ತದೆ. ಒಳ್ಳೆಯದನ್ನಷ್ಟೇ ಕೇಳಿಸಿಕೊಳ್ಳೋಣ ಎಂದು ಪಣತೊಟ್ಟು ಕ್ಲಬ್‌ಹೌಸ್ ಸೇರಿಕೊಳ್ಳಬಹುದು.

ಕಾಲಯಾಪನೆಗೆ ಮತ್ತೊಂದು ಸಾಧನ ಬೇಕೇ?
ಈಗಾಗಲೇ ನಾವಿರುವ ಸಾಮಾಜಿಕ ಜಾಲತಾಣಗಳಿಗೇ ಸಮಯ ನೀಡಲಾಗುತ್ತಿಲ್ಲ, ಇನ್ನೊಂದು ಬೇಕಾ ಅಂತಂದುಕೊಳ್ಳುವವರೂ ಇದ್ದಾರೆ. ಫೇಸ್‌ಬುಕ್, ಟ್ವಿಟರ್, ವಾಟ್ಸ್ಆ್ಯಪ್‌ಗಳಲ್ಲೇ ದಿನದ ಬಹುಭಾಗ ಕಳೆಯುವವರಿಗೆ ಕೇಳಿಸಿಕೊಳ್ಳುವಷ್ಟು ಸಮಯವಿದೆಯೇ? ಅದಕ್ಕೂ ಹೆಚ್ಚಾಗಿ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ತಾಳ್ಮೆ ಇರುತ್ತದೆಯೇ? ಈ ಕಾರಣಕ್ಕಾಗಿಯೇ, ಕ್ಲಬ್‌ಹೌಸ್ ಸೇರಿಕೊಂಡ ಕೆಲವೇ ದಿನಗಳಲ್ಲಿ ಹಲವರು ತಮ್ಮ ಕ್ಲಬ್ ಮುಚ್ಚಿ ಹೊರಬಂದಿದ್ದಾರೆ. ಹಾಗಂತ ಇಲ್ಲಿ ಎಲ್ಲವೂ ನೇರಾನೇರ, ಫೇಕ್ ಸುದ್ದಿಗಳ ಫಾರ್ವರ್ಡ್ ಇರುವುದಿಲ್ಲ. ಆದರೆ, ಅರೆ ಜ್ಞಾನ ಹೊಂದಿದವರ ವಾಗ್ವಾದ ಇರಬಹುದು, ಜ್ಞಾನಿಗಳಿಂದ ಸುಜ್ಞಾನ ಬೋಧನೆಯೂ ಇರಬಹುದು.

ಯಾವುದೇ ಆಧುನಿಕ ತಂತ್ರಜ್ಞಾನವನ್ನು ಎಷ್ಟು ಬೇಕೋ ಅಷ್ಟು ಬಳಸಿದರಷ್ಟೇ ಅದರ ಪ್ರಯೋಜನ. ಇಲ್ಲವಾದಲ್ಲಿ, ಫೇಸ್‌ಬುಕ್-ವಾಟ್ಸ್ಆ್ಯಪ್‌ಗಳಲ್ಲಿ ಕಳೆದುಹೋಗಿರುವ ಮಂದಿ, ಅದರಲ್ಲಿ ಪ್ರಸಾರ ಅಥವಾ ಫಾರ್ವರ್ಡ್ ಆಗುವ ಫೇಕ್ ಸುದ್ದಿಗಳಿಂದ ಮನಸ್ಸು ಕೆಡಿಸಿಕೊಳ್ಳುತ್ತಲೇ, ಸುಜ್ಞಾನ ನೀಡುವ ಪುಸ್ತಕ ಓದುವುದರತ್ತ ತಿರುಗಿ ನೋಡಲು ಹೇಗೆ ಮನಸ್ಸು ಮಾಡುತ್ತಿಲ್ಲವೋ, ಅಷ್ಟಕ್ಕೇ ತಮ್ಮ ಜ್ಞಾನವನ್ನು ಸೀಮಿತಗೊಳಿಸಿಕೊಳ್ಳುವ ಅಪಾಯವಿದೆ.

ಆತಂಕ-ಅಡ್ಡಿ
ನಮ್ಮ ಫೋನ್ ಸಂಖ್ಯೆಯನ್ನು ಆ್ಯಪ್ ಕಂಪನಿಯ ಕೈಗೊಪ್ಪಿಸಬೇಕಾಗುತ್ತದೆ
ಫೇಕ್ ಪ್ರೊಫೈಲ್ ಸೃಷ್ಟಿಸಬಹುದು
ಕೇಳಿಸಿಕೊಳ್ಳುವ ವ್ಯವಧಾನ ಇರಬೇಕು
ಲೈವ್ ಆಗಿರುವುದರಿಂದ ಚಾಟ್ ರೆಕಾರ್ಡ್ ಮಾಡಲಾಗದು
ಧ್ವನಿಯನ್ನು ಈ ಆ್ಯಪ್ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ
ಇಲ್ಲಿ ಕೂಡ ಭಯೋತ್ಪಾದನೆ, ಅಕ್ರಮ, ದೇಶದ್ರೋಹಿ ಚಟುವಟಿಕೆಗಳು ನಡೆಯುವ ಸಾಧ್ಯತೆಗಳು ನಿರಾಕರಿಸಲಾಗದು
ಮುಚ್ಚಿದ ಬಾಗಿಲ ಚರ್ಚೆಯಲ್ಲಿ ಸಮಾಜವಿರೋಧಿ ವಿಷಯಗಳು ಚರ್ಚೆಯಾಗಬಹುದು
ಯಾರು ಬೇಕಿದ್ದರೂ ಕೊಠಡಿ ತೆರೆಯಬಹುದು – ಮುಕ್ತ, ಸೋಷಿಯಲ್ ಹಾಗೂ ಕ್ಲೋಸ್ಡ್ ಎಂಬ ಮೂರು ಕೊಠಡಿಗಳ ಆಯ್ಕೆಯಿರುತ್ತದೆ
ನಾವು ಹೊಕ್ಕ ರೂಮ್ ಒಳಗೆ ನಮಗಿಷ್ಟದವರನ್ನು ನಾವು ಕರೆಯುವ ಆಯ್ಕೆಯಿದೆ

ಕ್ಲಬ್‌ಹೌಸ್ ಹೊಸತೇನಲ್ಲ
ಕ್ಲಬ್‌ಹೌಸ್ ಬಿಡುಗಡೆಯಾಗಿ 14 ತಿಂಗಳು ಕಳೆದಿದೆ
ಇತ್ತೀಚೆಗಷ್ಟೇ ಆಂಡ್ರಾಯ್ಡ್ ಫೋನ್‌ಗಳಿಗೆ ಲಭ್ಯವಾಗಿದ್ದು
ಅಧಿಕೃತ ಬಿಡುಗಡೆ ಕಾರ್ಯಕ್ರಮ ಇದುವರೆಗೂ ನಡೆದಿಲ್ಲ. ಜುಲೈ ಮೊದಲ ವಾರ ಬಿಡುಗಡೆಯಾಗಲಿದೆ
ಈಗ ಆಹ್ವಾನ (ಸ್ನೇಹಿತರಿಂದ) ಪಡೆದವರು ಮಾತ್ರ ಸೇರಿಕೊಳ್ಳಬಹುದು
ಈ ಚಾಟ್ ರೂಂ ಹೊಸತೇನಲ್ಲ. ಫೇಸ್‌ಬುಕ್ ಲೈವ್ ಚಾಟ್ ರೂಮ್ಸ್, ಟ್ವಿಟರ್ ಸ್ಪೇಸಸ್ ಕೂಡ ಈಗಾಗಲೇ ಇದೆ
ಸ್ಪಾಟಿಫೈನಲ್ಲಿ ಗ್ರೀನ್ ರೂಮ್ ಎಂಬ ಆಡಿಯೋ ಚಾಟಿಂಗ್ ವ್ಯವಸ್ಥೆಯಿದೆ

ಲಿಂಕ್ಡ್ ಇನ್, ರೆಡಿಟ್ ಹಾಗೂ ಸ್ಲ್ಯಾಕ್‌ಗಳು ಕೂಡ ಆಡಿಯೋ ಚಾಟಿಂಗ್ ವ್ಯವಸ್ಥೆಯ ಪ್ರಯೋಗದಲ್ಲಿವೆ

What is Clubhouse – my Article Published in Prajavani on 28 Jun 2021

LEAVE A REPLY

Please enter your comment!
Please enter your name here