ಟ್ರೂಕಾಲರ್‌ನಲ್ಲಿ ‘ಪ್ರೈವೆಸಿ’ಯೇ? ಮರೆತುಬಿಡಿ! ನಿಮ್ಮ ಸ್ನೇಹಿತರಿಂದಲೇ ನಿಮ್ಮ ನಂಬರ್ ಬಯಲು!

0
584

ಆರೋಗ್ಯ ಸೇತು, ಆಧಾರ್ ಮುಂತಾದ ಸರ್ಕಾರಿ ಆ್ಯಪ್/ಯೋಜನೆಗಳಿಗೆ ವಿವರ ನೀಡುವ ಬಗ್ಗೆ ಹಿಂದು-ಮುಂದು ನೋಡುವ ನಾವು, ನಮಗೆ ಗೊತ್ತಿಲ್ಲದ ಯಾವುದೋ ವಿದೇಶೀ ಕಂಪನಿಯ ಆ್ಯಪ್‌ಗಳಿಗೆ ನಮ್ಮ ಫೋನ್ ನಂಬರ್, ಇಮೇಲ್ ವಿಳಾಸ, ನಾವಿರುವ ಸ್ಥಳ, ಕೆಲಸ ಮಾಡುವ ಕಂಪನಿ, ತಂದೆ-ತಾಯಿ, ಕುಟುಂಬಿಕರು, ಸ್ನೇಹಿತರು ಮುಂತಾಗಿ ನಮ್ಮೆಲ್ಲ ಖಾಸಗಿ ವಿವರಗಳನ್ನು ನೀಡಿರುತ್ತೇವೆ. ನೆನಪಿಡಬೇಕಾದ ಅಂಶವೆಂದರೆ, ನಮ್ಮ ಆನ್‌ಲೈನ್ ಸುರಕ್ಷೆಯು ನಮ್ಮದೇ ಕೈಯಲ್ಲಿದೆ ಎಂದುಕೊಳ್ಳುವುದೂ ತಪ್ಪಾಗುತ್ತದೆ. ಒಂದು ಬಾರಿ ಯಾವುದೇ ವೆಬ್ ಅಪ್ಲಿಕೇಶನ್‌ಗಳಿಗೆ ಅಥವಾ ಆ್ಯಪ್‌ಗಳಿಗೆ ನಮ್ಮ ವಿವರಗಳನ್ನು ಕೊಟ್ಟುಬಿಟ್ಟೆವೋ, ನಮ್ಮ ಗೌಪ್ಯತೆ ಅಥವಾ ಖಾಸಗಿತನ (ಪ್ರೈವೆಸಿ) ಬಗ್ಗೆ ಚಿಂತೆ ಮಾಡುವುದನ್ನು ಬಿಡಬೇಕಾಗುತ್ತದೆ. ಯಾಕೆಂದರೆ, ವಾಟ್ಸ್ಆ್ಯಪ್, ಫೇಸ್‌ಬುಕ್ ಮಾತ್ರವಷ್ಟೇ ಅಲ್ಲ, ಬಹುತೇಕ ಎಲ್ಲ ಆ್ಯಪ್‌ಗಳಿಗೆ ನಾವು ನಮ್ಮ ಇಮೇಲ್ ವಿಳಾಸ, ಫೋನ್ ನಂಬರ್, ನಾವಿರುವ ಸ್ಥಳ (ಜಿಪಿಎಸ್ ಮಾಹಿತಿ), ನಮ್ಮ ವಿಳಾಸ ಇತ್ಯಾದಿಗಳನ್ನು ನಮಗರಿವಿಲ್ಲದೆಯೇ ಕೊಟ್ಟಿರುತ್ತೇವೆ.

ಕಳೆದ ವಾರ ಭಾರಿ ಸದ್ದು ಮಾಡಿದ್ದು ಟ್ರೂಕಾಲರ್ ಎಂಬ, ಫೋನ್ ನಂಬರುಗಳನ್ನು ಗುರುತಿಸುವ (ಕಾಲರ್ ಐಡಿ) ಆ್ಯಪ್. ಇದರಲ್ಲಿರುವ ದತ್ತಾಂಶ ಸಂಚಯದಿಂದ 4.75 ಕೋಟಿ ಭಾರತೀಯರ ಖಾಸಗಿ ಮಾಹಿತಿಗಳನ್ನು ಯಾವುದೋ ಬೇರೆ ಕಂಪನಿಗೆ ಕೇವಲ 1 ಸಾವಿರ ಡಾಲರ್‌ಗೆ ಸೈಬರ್ ಕ್ರಿಮಿನಲ್‌ಗಳು ಮಾರಾಟ ಮಾಡಿದ್ದಾರೆ ಎಂಬ ಸುದ್ದಿಯದು. ಇದಕ್ಕೆ ಟ್ರೂಕಾಲರ್ ಸ್ಪಷ್ಟೀಕರಣ ನೀಡಿತಾದರೂ, ಹೀಗಾಗಿರುವುದು ಇದೇ ಹೊಸತೇನಲ್ಲ. 2013ರಲ್ಲಿಯೇ ಟ್ರೂಕಾಲರ್ ಮಾಹಿತಿ ಬಹಿರಂಗವಾದ ಬಗ್ಗೆ ಭಾರಿ ಸುದ್ದಿಯಾಗಿತ್ತು, ಜನರು ಆತಂಕಕ್ಕೀಡಾಗಿದ್ದರು, ಕೆಲವರಂತೂ ಸರ್ಕಾರಕ್ಕೇ ಬೈದರು – ಕೊನೆಗೆ ಅದನ್ನು ಮರೆತೇಬಿಟ್ಟರು, ಮತ್ತೆ ಟ್ರೂಕಾಲರ್ ಅನ್ನೇ ನೆಚ್ಚಿಕೊಂಡರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಾವು ಈ ಆ್ಯಪ್‌ಗೆ ನಮ್ಮ ಫೋನ್ ನಂಬರ್, ಇಮೇಲ್, ಫೇಸ್‌ಬುಕ್ ಐಡಿ, ಲಿಂಗ, ನಗರ ಮುಂತಾದ ಖಾಸಗಿ ಮಾಹಿತಿಯಷ್ಟೇ ಅಲ್ಲ, ನಮ್ಮ ಸ್ನೇಹಿತರ ನಂಬರನ್ನೂ ಸೇರಿಸಿರುತ್ತೇವೆ!

ಇದನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ, ಟ್ರೂಕಾಲರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಬೇಕು. ನಮ್ಮ ಫೋನ್‌ಗೆ ಕರೆ ಬರುವ ಸಂಖ್ಯೆಯನ್ನು ಗುರುತಿಸಿ, ಅದು ಯಾರು ಅಂತ ತಿಳಿಸಿಕೊಡುವುದು ಈ ಟ್ರೂಕಾಲರ್ ಆ್ಯಪ್ ಮಾಡುವ ಕೆಲಸ. ಇದರಿಂದ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡುವುದು (ನಿರ್ಬಂಧಿಸುವುದು) ಸಾಧ್ಯವಾಗಲೆಂಬ ಒಳ್ಳೆಯ ಉದ್ದೇಶದ ಆ್ಯಪ್ ಇದು. ಅಂತೆಯೇ, ನಮ್ಮ ಕಾಂಟ್ಯಾಕ್ಟ್ ಪಟ್ಟಿಯಲ್ಲಿಲ್ಲದ ಫೋನ್ ನಂಬರುಗಳಿಂದ ಕರೆ ಬಂದಾಗ, ಅದ್ಯಾರು ಅಂತ ತಿಳಿಯುವುದು ಮನುಷ್ಯನ ಸಹಜ ಕುತೂಹಲ. ಈ ಕುತೂಹಲವನ್ನೇ ಟ್ರೂಕಾಲರ್ ಬಂಡವಾಳ ಮಾಡಿಕೊಂಡಿದೆ ಎಂದುಕೊಳ್ಳಬಹುದು. ಈ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗಲೇ ಅದಕ್ಕೆ ನಾವು ನಮ್ಮ ಕಾಂಟ್ಯಾಕ್ಟ್ ಲಿಸ್ಟ್ (ನಮ್ಮ ಫೋನ್‌ನಲ್ಲಿ ಸೇವ್ ಆಗಿರುವ ನಮ್ಮ ಸ್ನೇಹಿತರು-ಬಂಧು ಬಳಗದವರ ಫೋನ್ ನಂಬರುಗಳುಳ್ಳ ಪಟ್ಟಿ)ಯನ್ನು ಓದಲು ಅನುಮತಿ ಕೊಟ್ಟಿರುತ್ತೇವೆ. ನಮ್ಮ ಫೋನ್‌ನಲ್ಲಿರುವ ಎಲ್ಲ ಸಂಪರ್ಕ ಸಂಖ್ಯೆಗಳನ್ನು ಟ್ರೂಕಾಲರ್ ಪಡೆದುಕೊಂಡು, ತನ್ನ ದತ್ತಾಂಶ ಸಂಚಯಕ್ಕೆ (ಡೇಟಾಬೇಸ್‌ಗೆ) ಸೇರಿಸಿಕೊಳ್ಳುತ್ತದೆ.

ಹೀಗಾಗಿ, ನಾನು ಟ್ರೂಕಾಲರ್ ಬಳಸುತ್ತಿಲ್ಲ, ನನ್ನ ಮಾಹಿತಿಯು ಅದರ ಡೇಟಾಬೇಸ್‌ನಲ್ಲಿಲ್ಲ ಎಂದುಕೊಂಡು ಸುಮ್ಮನಿರುವಂತಿಲ್ಲ. ಸ್ನೇಹಿತರು ನಮ್ಮ ಫೋನ್ ನಂಬರ್ ಮತ್ತು ಇತರ ಸಂಪರ್ಕ ಮಾಹಿತಿಯನ್ನು ಟ್ರೂಕಾಲರ್‌ಗೆ ಅದಾಗಲೇ ಧಾರೆಯೆರೆದಿರುತ್ತಾರೆ! ಈ ಖಾಸಗಿ ವಿಷಯಗಳನ್ನು ಆ ಕಂಪನಿಯು ಬೇರೆಯವರಿಗೆ ಹಣಕ್ಕೆ ಮಾರಾಟ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅದಲ್ಲದೆ, ಆ ಕಂಪನಿಯ ಡೇಟಾಬೇಸ್ ಅನ್ನೇ ಸೈಬರ್-ಕ್ರಿಮಿನಲ್‌ಗಳು ಹ್ಯಾಕ್ ಮಾಡಿ ವಶಪಡಿಸಿಕೊಂಡು, ಅದನ್ನೂ ಮಾರಾಟ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ, ಆನ್‌ಲೈನ್‌ಗೆ ಅಥವಾ ಆ್ಯಪ್‌ಗಳಿಗೆ ನಾವೇ ನೀಡುವ ನಮ್ಮ ಮಾಹಿತಿ ಸುರಕ್ಷಿತವಲ್ಲ ಎಂದಷ್ಟೇ ಇದುವರೆಗೆ ನಾವು ತಿಳಿದಿದ್ದ ವಿಷಯ. ನಮ್ಮಲ್ಲಿ ಟ್ರೂಕಾಲರ್ ಇಲ್ಲದಿದ್ದರೂ, ನಮ್ಮ ಫೋನ್ ನಂಬರನ್ನು ಸ್ನೇಹಿತರು ಅದಕ್ಕೆ ನೀಡಿರುತ್ತಾರೆ ಎಂಬುದು ವಾಸ್ತವ. ಹೀಗಾಗಿ, ನಮ್ಮ ಪ್ರೈವೆಸಿ, ನಮ್ಮ ಸ್ನೇಹಿತರ ಕೈಯಲ್ಲಿದ್ದಂತಾಯಿತು! ಒಟ್ಟಾರೆಯಾಗಿ ಹೇಳಬಹುದಾದರೆ, ಆನ್‌ಲೈನ್‌ನಲ್ಲಿರುವ ನಮ್ಮ ಖಾಸಗಿ ಮಾಹಿತಿ ಸುರಕ್ಷಿತ ಅಂತ ನೆಮ್ಮದಿಯಿಂದ ಇರುವಂತಿಲ್ಲ.

ಪ್ರಜಾವಾಣಿಯಲ್ಲಿ ಪ್ರಕಟ

LEAVE A REPLY

Please enter your comment!
Please enter your name here