Samsung M31s Review: ಉತ್ತಮ ಬ್ಯಾಟರಿ, ಕ್ಯಾಮೆರಾ, ವಿನ್ಯಾಸ

0
598

ಕೊರೊನಾ ಕಾಲದಲ್ಲಿಯೂ ಹೊಸ ಫೋನ್‌ಗಳ ಆಗಮನದ ಸುಗ್ಗಿ ಮರಳಿ ಆರಂಭವಾಗಿದೆ. ಈ ಹಂತದಲ್ಲಿ 6000mAh ಬ್ಯಾಟರಿ, ನಾಲ್ಕು ಲೆನ್ಸ್‌ಗಳಿರುವ ಕ್ಯಾಮೆರಾ, ಪಂಚ್ ಹೋಲ್ ಇರುವ, ಬೆಝೆಲ್-ರಹಿತ ಸ್ಕ್ರೀನ್ – ಇವೆಲ್ಲ ಈಗಿನ ಟ್ರೆಂಡ್. ಇದರ ಆಧಾರದಲ್ಲಿ, ಚೈನಾ ಸ್ಮಾರ್ಟ್ ಫೋನ್‌ಗಳ ನಿಷೇಧದ ಕೂಗಿನ ನಡುವೆ ಕೊರಿಯಾದ ಸ್ಯಾಮ್‌ಸಂಗ್ ಈಗ ಮಧ್ಯಮ ಶ್ರೇಣಿಯ ಫೋನ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಇಳಿಸಿದೆ. ರಿವ್ಯೂಗೆ ಬಂದಿರುವ, ಜುಲೈ ಅಂತ್ಯಕ್ಕೆ ಬಿಡುಗಡೆಗೊಂಡ ಸ್ಯಾಮ್‌ಸಂಗ್ ಎಂ31ಎಸ್ ಹೇಗಿದೆ? ಇಲ್ಲಿದೆ ವಿವರ.

ವಿನ್ಯಾಸ
ಎಂ ಸರಣಿಯ ಫೋನ್‌ಗಳ ಮೂಲಕ ಸ್ಯಾಮ್‌ಸಂಗ್ ಮಧ್ಯಮ ವರ್ಗದವರ ಕೈಗೆ ಅತ್ಯಾಧುನಿಕ ಸ್ಪೆಸಿಫಿಕೇಶನ್ ಇರುವ ಫೋನ್‌ಗಳನ್ನು ಒದಗಿಸುತ್ತಿದ್ದು, ಚೀನಾ ಮೂಲದ ಫೋನ್ ಕಂಪನಿಗಳಾದ ಶವೊಮಿ, ಒಪ್ಪೋ, ರಿಯಲ್‌ಮಿಗಳ ಹಿನ್ನಡೆಯ ಲಾಭ ಪಡೆದುಕೊಳ್ಳಲು ಯತ್ನಿಸಿದೆ. ಚೀನಾ ಫೋನ್‌ಗಳಿಂದಾಗಿಯೇ ಕಳೆದ ಒಂದುವರೆ ವರ್ಷದ ಹಿಂದೆ ಕಳೆದುಕೊಂಡಿದ್ದ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸ್ಯಾಮ್‌ಸಂಗ್ ಎಲ್ಲ ಪ್ರಯತ್ನಗಳನ್ನೂ ಮಾಡಿದೆ. ಇದರ ಫಲವೇ ಎಂ ಸರಣಿಯ ಫೋನ್‌ಗಳು.

ಪ್ರೀಮಿಯಂ ಲುಕ್ ಇರುವ ಸ್ಯಾಮ್‌ಸಂಗ್ ಎಂ31ಎಸ್ ನೋಡಿದ ತಕ್ಷಣ ಗಮನ ಸೆಳೆಯುವುದು ಅದರ ಹಿಂಭಾಗದಲ್ಲಿರುವ 4 ಸೆನ್ಸರ್‌ಗಳಿರುವ ಕ್ಯಾಮೆರಾ. 64 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಸೆನ್ಸರ್ ಇದ್ದರೆ, ಬೆಝೆಲ್ ರಹಿತ ಸ್ಕ್ರೀನ್, ಇನ್ಫಿನಿಟಿ ಒ (ಇಂಗ್ಲಿಷಿನ O ಅಕ್ಷರ) ಎಂದು ಕರೆಯಲಾಗುವ ಪಂಚ್ ಹೋಲ್ (ಮುಂಭಾಗದ ಕ್ಯಾಮೆರಾ ಇರುವ ರಂಧ್ರದಂತಹಾ ಭಾಗ) ಇರುವ 6.5 ಇಂಚಿನ FHD+ ಸೂಪರ್ AMOLED ಸ್ಕ್ರೀನ್ ಇದೆ.

ಪವರ್ ಬಟನ್‌ನಲ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರುವುದು ಮತ್ತೊಂದು ವಿಶೇಷ. ಹಿಂಭಾಗದ ಕವಚವಂತೂ ಗಾಜಿನಂತೆ ಫಿನಿಶ್ ಇರುವ ಪ್ಲಾಸ್ಟಿಕ್ ಬಾಡಿ (ಗ್ಲಾಸ್ ಮತ್ತು ಪ್ಲಾಸ್ಟಿಕ್ ಸೇರಿ ಗ್ಲಾಸ್ಟಿಕ್ ಅಂತ ಕರೆಯಲಾಗುತ್ತದೆ) ಗ್ರೇಡಿಯಂಟ್ ಬಣ್ಣದಲ್ಲಿ ನೋಡಲು ಆಕರ್ಷಕವಾಗಿದೆ. ಇದರ ಚಾರ್ಜರ್‌ನಲ್ಲೂ ವಿಶೇಷತೆಯಿದೆ. 6000 mAh ಭರ್ಜರಿ ಎನಿಸುವ ಬ್ಯಾಟರಿ ಸಾಮರ್ಥ್ಯವಿದ್ದು, ರಿವರ್ಸ್ ಚಾರ್ಜಿಂಗ್‌ಗೆ ಅನುಕೂಲ ಮಾಡಬಲ್ಲ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇದರಲ್ಲಿದೆ. ಇಯರ್ ಫೋನ್ ಅಳವಡಿಸಲು 3.5 ಮಿಮೀ ಆಡಿಯೋ ಜಾಕ್ ಇದೆ.

ಹೇಗಿದೆ?
ರಿವ್ಯೂಗೆ ಬಂದಿರುವುದು 6GB RAM/128GB ಸ್ಟೋರೇಜ್ ಸಾಮರ್ಥ್ಯವಿರುವ ಗ್ಯಾಲಕ್ಸಿ ಎಂ 31 ‘ಎಸ್’ ಫೋನ್. ಹಿಂದಿನ ಗ್ಯಾಲಕ್ಸಿ ಎಂ 31 ಫೋನ್‌ನ ಬಹುತೇಕ ವೈಶಿಷ್ಟ್ಯಗಳು ಇದರಲ್ಲಿದ್ದು, 6.5 ಇಂಚಿನ AMOLED ಸ್ಕ್ರೀನ್ ಮೂಲಕ ಫೋಟೋ, ವಿಡಿಯೊ ನೋಡಲು ಹೆಚ್ಚು ಅನುಕೂಲ. ಆ್ಯಪ್‌ನಿಂದ ಮತ್ತೊಂದು ಆ್ಯಪ್‌ಗೆ ಸ್ವಿಚ್ ಆಗುವುದು ಸುಲಲಿತ. ಗೆಲಾಕ್ಸಿ ನೋಟ್ 10+ ನಲ್ಲಿರುವಂಥದ್ದೇ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಗುಣಮಟ್ಟವಂತೂ ಅದ್ಭುತವಾಗಿದ್ದು, ಪ್ರೀಮಿಯಂ ಫೋನ್‌ನ ನೋಟ ಹೊಂದಿದೆ. ಸದಾ ಆನ್ ಇರುವ ಡಿಸ್‌ಪ್ಲೇ ಮೋಡ್ ಇದರ ಮತ್ತೊಂದು ವಿಶೇಷ. ಆಂಡ್ರಾಯ್ಡ್ 10 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಒನ್‌ಯುಐ 2.1, ಎಕ್ಸಿನೋಸ್ 9611 ಪ್ರೊಸೆಸರ್ ಇದರಲ್ಲಿದ್ದು, ವೇಗದ ಚಲನೆಯ ಗೇಮ್‌ಗಳಿಗೆ ಅನುಕೂಲಕರವಾಗಿದೆ. ರಿವರ್ಸ್ ಚಾರ್ಜಿಂಗ್ ಇರುವುದರಿಂದ, ಈ ಫೋನ್ ಬ್ಯಾಟರಿಯಿಂದ ಬೇರೊಂದು ಟೈಪ್-ಸಿ ಬೆಂಬಲ ಇರುವ ಫೋನ್ ಅಥವಾ ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ.

ಕ್ಯಾಮೆರಾ
64 ಮೆಗಾಪಿಕ್ಸೆಲ್ ಸೆನ್ಸರ್ ಇರುವ ಪ್ರಧಾನ ಸೆನ್ಸರ್, 5 MP ಡೆಪ್ತ್ ಸೆನ್ಸರ್, 5 MP ಮ್ಯಾಕ್ರೋ ಸೆನ್ಸರ್ ಹಾಗೂ 12MP ಅಲ್ಟ್ರಾವೈಡ್ ಸೆನ್ಸರ್ ಜೊತೆಯಾಗಿವೆ. ಈ ಕಾರಣಕ್ಕಾಗಿ ಚಿತ್ರಗಳು, ವಿಡಿಯೊಗಳಂತೂ ಉತ್ತಮ ಗುಣಮಟ್ಟದಲ್ಲಿರುತ್ತವೆ. ಈ ಕ್ವಾಡ್ ಕ್ಯಾಮೆರಾ ಸೆಟಪ್, ದೃಶ್ಯಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ, ಅದಕ್ಕನುಗುಣವಾಗಿ ಫ್ರೇಮ್ ಹೊಂದಿಸುವುದರಿಂದ, ಉತ್ತಮ ಗುಣಮಟ್ಟದ ಚಿತ್ರ ಪಡೆಯಲು ಸಾಧ್ಯವಾಗುತ್ತದೆ. ಒಳ್ಳೆಯ ಬೆಳಕಿನಲ್ಲಿ 4ಕೆ ವಿಡಿಯೊದ ಸ್ಪಷ್ಟತೆ ಚೆನ್ನಾಗಿದೆ. ನೈಟ್ ಮೋಡ್ ಮೂಲಕ ತೆಗೆದ ಚಿತ್ರಗಳ ಎಫೆಕ್ಟ್ ಕೂಡ ಸೊಗಸಾಗಿರುತ್ತವೆ.

ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ, ಗ್ರೂಪ್ ಸೆಲ್ಫೀಗಳಿಗೆ ಪೂರಕವಾಗಿದ್ದು, ಹೆಚ್ಚು ಜನರನ್ನು ಒಂದೇ ಫ್ರೇಮ್‌ನಲ್ಲಿ ಕವರ್ ಮಾಡುವಂತಹಾ ವೈಡ್ ಆ್ಯಂಗಲ್ ಮೂಲಕ ಸೆಲ್ಫೀ ತೆಗೆಯಬಹುದಾಗಿದೆ. ಒಳ್ಳೆಯ ಬೆಳಕಿದ್ದಾಗ ಉತ್ತಮ ಗುಣಮಟ್ಟದ ಫೋಟೋಗಳು ದೊರೆತಿವೆ. ಮತ್ತೊಂದು ವಿಶೇಷವೆಂದರೆ, ಸೆಲ್ಫೀ ತೆಗೆದುಕೊಳ್ಳಲು, ಬಟನ್ ಪ್ರೆಸ್ ಮಾಡಬೇಕಿಲ್ಲ, ನಮ್ಮ ಕೈಯೆತ್ತಿ ಸನ್ನೆ ಮಾಡಿದರೆ ಸಾಕಾಗುತ್ತದೆ. ಇದು ತೀರಾ ಅನುಕೂಲಕರ ವ್ಯವಸ್ಥೆ.

ಇದರಲ್ಲಿರುವ ಸಿಂಗಲ್ ಟೇಕ್ ಎಂಬ ವೈಶಿಷ್ಟ್ಯ ತುಂಬ ಆಸಕ್ತಿಕರ. ಅದನ್ನು ಒತ್ತಿದರೆ, 10 ಸೆಕೆಂಡುಗಳ ಕಾಲ ಹಲವು ಚಿತ್ರಗಳು, ವಿಡಿಯೊಗಳು ಕೂಡ ದಾಖಲಾಗುತ್ತವೆ. ಅದರಲ್ಲಿ ಉತ್ತಮವಾದುದನ್ನು ನಾವು ಆಯ್ಕೆ ಮಾಡಿ, ಫಿಲ್ಟರ್‌ಗಳನ್ನು ಅನ್ವಯಿಸಿ ಉಳಿಸಿಕೊಳ್ಳಬಹುದು.

ಬ್ಯಾಟರಿ
ಈ ಫೋನ್‌ನ ಪ್ರಮುಖ ಸಾಮರ್ಥ್ಯವೆಂದರೆ, 6000 mAh ಬ್ಯಾಟರಿ. ಸಾಮಾನ್ಯ ಬಳಕೆಗೆ ಎರಡು ದಿನವೂ ಬಂದಿದ್ದರೆ, ಫೇಸ್‌ಬುಕ್, ವಾಟ್ಸ್ಆ್ಯಪ್ ಹಾಗೂ ಕೆಲವೊಂದು ಸೈಟ್ ವೀಕ್ಷಣೆ ಮಾಡಿದರೆ ಒಂದುವರೆ ದಿನಕ್ಕೆ ಅಡ್ಡಿಯಿಲ್ಲ. ಪ್ರೀಮಿಯಂ ಫೋನ್‌ಗಳಿಗೆ ಲಭ್ಯವಿರುವ ವೇಗದ ಚಾರ್ಜಿಂಗ್ ವ್ಯವಸ್ಥೆಯನ್ನು M31s ಗೂ ಸ್ಯಾಮ್‌ಸಂಗ್ ಒದಗಿಸಿದೆ. ಬಾಕ್ಸ್‌ನಲ್ಲೇ 25W ಸಾಮರ್ಥ್ಯದ ಚಾರ್ಜರ್ ಇದ್ದು, ಒಂದೂ ಮುಕ್ಕಾಲು ಗಂಟೆಯಲ್ಲಿ ಶೇ.1ರಿಂದ ಶೇ.100ರವರೆಗೆ 6000mAh ಬ್ಯಾಟರಿ ಚಾರ್ಜ್ ಆಗಿದೆ. ಚೀನಾ ಫೋನ್‌ಗಳು ಡಿಸ್‌ಪ್ಲೇಯಲ್ಲಿ ಗರಿಷ್ಠ ಅಂದರೆ 90 ಅಥವಾ 120 Hz ರಿಫ್ರೆಶ್ ರೇಟ್ ನೀಡಿದರೆ, ಸ್ಯಾಮ್‌ಸಂಗ್ ಗೆಲಾಕ್ಸಿ ಎಂ31ಎಸ್‌ನಲ್ಲಿ 60Hz ಇದೆ. ರಿಫ್ರೆಶ್ ರೇಟ್ ಜಾಸ್ತಿ ಇದ್ದಷ್ಟೂ ಗೇಮಿಂಗ್‌ಗೆ ಹೆಚ್ಚು ಪೂರಕ.

M31 ಗೆ ಹೋಲಿಸಿದರೆ M31s ಫೋನ್‌ನ ಡಿಸ್‌ಪ್ಲೇ ಸ್ವಲ್ಪ ದೊಡ್ಡದು ಹಾಗೂ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಉತ್ತಮವಾಗಿದೆ. ಹಿಂಭಾಗದ ಪ್ಲಾಸ್ಟಿಕ್ ಕವಚಕ್ಕೆ ಗೀರುಗಳಾಗಬಾರದೆಂದಿದ್ದರೆ ರಕ್ಷಣಾತ್ಮಕ ಕವರ್ ಅನ್ನು ನಾವೇ ಖರೀದಿಸಬೇಕಾಗುತ್ತದೆ. ಒಂದು ಕೈಯಲ್ಲಿ ಬಳಕೆ ಮಾಡುವ ವ್ಯವಸ್ಥೆಯಿದೆಯಾದರೂ, ಬ್ಯಾಟರಿ ದೊಡ್ಡದಿರುವುದರಿಂದ ತೂಕ ಹಾಗೂ ಗಾತ್ರ ಸ್ವಲ್ಪ ಹೆಚ್ಚು ಅನ್ನಿಸಬಹುದು.

ಹೆಚ್ಚು ಕಾಲ ಬರುವ ಬ್ಯಾಟರಿ, ದೊಡ್ಡ ಸ್ಕ್ರೀನ್, ಉತ್ತಮ ಕ್ಯಾಮೆರಾ ಇರುವ, ವಿಶೇಷತಃ ಚೀನಾ ಮೂಲದ ಕಂಪನಿಗಳ ಫೋನ್‌ಗಳು ಬೇಡ ಎನ್ನುವವರಿಗೆ ಸ್ಯಾಮ್‌ಸಂಗ್ ಎಂ31ಎಸ್ 20 ಸಾವಿರ ರೂ. ಒಳಗಿನ ಮಧ್ಯಮ ಬಜೆಟ್ ಶ್ರೇಣಿಯ ಫೋನ್‌ಗಳಲ್ಲಿ ಉತ್ತಮ ಆಯ್ಕೆ ಎನ್ನಬಹುದು. ಇದರ ಬೆಲೆ 19499 ರೂ.

My Article Published in Prajavani Online in 28 Aug 2020

LEAVE A REPLY

Please enter your comment!
Please enter your name here