Galaxy Watch 5 Pro Review: ಫಿಟ್ನೆಸ್ ಕಾಳಜಿಯುಳ್ಳವರಿಗೆ ಪರಿಪೂರ್ಣ ಸ್ಮಾರ್ಟ್‌ವಾಚ್

0
182

Galaxy Watch 5 Pro Review: ಸ್ಮಾರ್ಟ್‌ವಾಚ್‌ಗಳು ಈಗಿನ ಟ್ರೆಂಡ್. ವಿಶೇಷವಾಗಿ ಜನರು ಸಮಯ ತಿಳಿದುಕೊಳ್ಳುವುದರ ಹೊರತಾಗಿ ಫಿಟ್ನೆಸ್ ಬಗ್ಗೆಯೂ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಈ ಟ್ರೆಂಡ್ ಆಧಾರದಲ್ಲಿಯೇ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ವಾಚ್ ಸರಣಿಯ 5ನೇ ಆವೃತ್ತಿಯಲ್ಲಿ ಫಿಟ್ನೆಸ್ – ಆರೋಗ್ಯ ಕ್ಷಮತೆ ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚು ಒತ್ತು ನೀಡಿದ್ದು, ಇತ್ತೀಚೆಗೆ ಗ್ಯಾಲಕ್ಸಿ ವಾಚ್ 5 ಹಾಗೂ ಗ್ಯಾಲಕ್ಸಿ ವಾಚ್ 5 ಪ್ರೊ – ವಾಚುಗಳನ್ನು ಮಾರುಕಟ್ಟೆಗೆ ಇಳಿಸಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ ಈ ಸರಣಿಯ ಗ್ಯಾಲಕ್ಸಿ ವಾಚ್ 5 ಪ್ರೊ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ವಿನ್ಯಾಸ
45ಮಿಮೀ ವ್ಯಾಸ, 10.5 ಮಿಮೀ ದಪ್ಪನೆಯ ಗ್ಯಾಲಕ್ಸಿ ವಾಚ್ 5 ಪ್ರೊ, ವೃತ್ತಾಕಾರದ ಡಿಸ್‌ಪ್ಲೇ ಹೊಂದಿದೆ. ವಾಚ್ 5ನಲ್ಲಿ (40 ಮಿಮೀ ಹಾಗೂ 44 ಮಿಮೀ -ಎರಡು ಮಾದರಿ) 410 mAh ಬ್ಯಾಟರಿ ಇದ್ದರೆ, ವಾಚ್ 5 ಪ್ರೊ ಮಾದರಿಯಲ್ಲಿ ಹೆಚ್ಚು ಸಾಮರ್ಥ್ಯದ ಎಂದರೆ 590 mAh ಬ್ಯಾಟರಿ ಇದ್ದು, ವಾಚು 46.5 ಗ್ರಾಂ ತೂಕವಿದೆ. ಸ್ಮಾರ್ಟ್‌ವಾಚ್‌ನಲ್ಲಿ ಹಿಂಭಾಗದಲ್ಲಿ ಬಯೋಆ್ಯಕ್ಟಿವ್ ಸೆನ್ಸರ್‌ಗಳಿದ್ದು, ಆರೋಗ್ಯದ ಬಗ್ಗೆ ಗಮನ ನೀಡಲು ರೂಪುಗೊಂಡಿದೆ.

ಗ್ಯಾಲಕ್ಸಿ ವಾಚ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಸ್ಯಾಮ್‌ಸಂಗ್ ‘ಪ್ರೊ’ ಮಾದರಿಯನ್ನು ಪರಿಚಯಿಸಿದೆ. ಶಕ್ತಿಶಾಲಿಯಾದ ಡಿಸ್‌ಪ್ಲೇ (ಸ್ಕ್ರೀನ್), ಟೈಟಾನಿಯಂ ವಾಚ್ ಕೇಸ್ ಮತ್ತು ಹಿಂದಿನ ವಾಚ್‌ಗಳಿಗಿಂತ ಹೆಚ್ಚು ಸಾಮರ್ಥ್ಯದ ಬ್ಯಾಟರಿ – ಈ ವಿಶೇಷತೆಗಳೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 5 ಗಮನ ಸೆಳೆದಿದೆ. ‘ಪ್ರೊ’ ಮಾದರಿಯನ್ನು ಹೊರಾಂಗಣದ ಚಟುವಟಿಕೆಯನ್ನೇ ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ ಎಂಬ ಭಾವನೆ ಬರುತ್ತಿದೆ. ಯಾಕೆಂದರೆ, ಇದರಲ್ಲಿ ಹೈಕಿಂಗ್, ಬೈಕಿಂಗ್‌ಗೆ ಪೂರಕವಾದ ಹಾಗೂ ವಾಪಸ್ ಬರುವ ಮಾರ್ಗ ಮುಂತಾದವುಗಳನ್ನು ತೋರಿಸುವ ವ್ಯವಸ್ಥೆಯಿದೆ.

ವೈಶಿಷ್ಟ್ಯಗಳು
ಡಿಸ್‌ಪ್ಲೇ: 1.4 ಇಂಚು ಸೂಪರ್ AMOLED ಟಚ್ ಸ್ಕ್ರೀನ್
ಪ್ರೊಸೆಸರ್: ಸ್ಯಾಮ್‌ಸಂಗ್ ಎಕ್ಸಿನೋಸ್ W920 ಡ್ಯುಯಲ್-ಕೋರ್
ಬಾಡಿ: ಟೈಟಾನಿಯಂ ಬಾಡಿ, ಸಫೈರ್ ಕ್ರಿಸ್ಟಲ್ ಗಾಜು
RAM/ಸ್ಟೋರೇಜ್: 1.5GB/16GB
ಸೆನ್ಸರ್‌ಗಳು: ಅಕ್ಸೆಲೆರೋಮೀಟರ್, ಬ್ಯಾರೋಮೀಟರ್, ಸ್ಯಾಮ್‌ಸಂಗ್ ಬಯೋ ಆ್ಯಕ್ಟಿವ್ ಸೆನ್ಸರ್, ಚರ್ಮದ ಉಷ್ಣತಾ ಮಾಪಕ, ಗೈರೋ ಸೆನ್ಸರ್, ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಲೈಟ್ ಸೆನ್ಸರ್
ಬ್ಯಾಟರಿ: 590 mAh, ಸಾಮಾನ್ಯ ಬಳಕೆಯಲ್ಲಿ 2 ದಿನಕ್ಕೆ ಸಾಕು
ಬಣ್ಣಗಳು: ಕಪ್ಪು ಟೈಟಾನಿಯಂ ಹಾಗೂ ನಸುಗಪ್ಪು (ಗ್ರೇ) ಟೈಟಾನಿಯಂ

ಗೂಗಲ್‌ನ ವೇರ್ ಒಎಸ್ 3.0 ಆಧಾರಿತವಾಗಿ ಅಭಿವೃದ್ಧಿಪಡಿಸಲಾದ ಕಾರ್ಯಾಚರಣಾ ವ್ಯವಸ್ಥೆಯಿದ್ದು, ಗೂಗಲ್ ಮ್ಯಾಪ್ಸ್, ಗೂಗಲ್ ಅಸಿಸ್ಟೆಂಟ್, ಗೂಗಲ್ ಪೇ, ಮೆಸೇಜ್ ಮುಂತಾದ ಆ್ಯಪ್‌ಗಳು ವಾಚ್‌ನಲ್ಲಿ ಅಡಕವಾಗಿವೆ. ಅದೇ ರೀತಿ ಸ್ಯಾಮ್‌ಸಂಗ್‌ನ ಆ್ಯಪ್‌ಗಳನ್ನೂ ಒದಗಿಸಲಾಗಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ವಾಚ್ 4 ಮಾದರಿಯಲ್ಲಿ ಬೆಝೆಲ್ (ಡಯಲ್‌ನ ಸುತ್ತಲಿನ ಖಾಲಿಭಾಗ) ತಿರುಗಿಸುವ ಆಯ್ಕೆ ಇತ್ತು. ಈ ಬಾರಿ, ಇದೇ ವೈಶಿಷ್ಟ್ಯವನ್ನು ಸ್ಪರ್ಶ ಆಧಾರಿತವಾಗಿ (ಅಂದರೆ ಭೌತಿಕವಾದ ರಿಂಗ್ ಬದಲಾಗಿ, ಡಿಸ್‌ಪ್ಲೇಯ ಗಾಜಿನ ಭಾಗವನ್ನೇ ವಿಸ್ತರಿಸಿ) ಒದಗಿಸಲಾಗಿದೆ. ಇದರರ್ಥ ಹಾರ್ಡ್‌ವೇರ್ ಬದಲು ಸಾಫ್ಟ್‌ವೇರ್ ಮೂಲಕವೇ ಇದು ಕೆಲಸ ಮಾಡುತ್ತದೆ.

1.4 ಇಂಚಿನ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಆಕರ್ಷಕವಾಗಿದ್ದು, ಸ್ವಲ್ಪ ದಪ್ಪವೂ ಇದೆ. ಅಕ್ಷರಗಳು, ವರ್ಣಗಳು ಪ್ರಖರವಾಗಿ ಕಾಣಿಸುತ್ತವೆ. ಸ್ಪರ್ಶ ಆಧಾರಿತ ಕೆಲಸ ಕಾರ್ಯಗಳು (ಟ್ಯಾಪ್, ಸ್ವೈಪ್) ಸುಲಲಿತವಾಗಿ ನಡೆಯುತ್ತವೆ. ಮೇಲ್ಭಾಗದಲ್ಲಿ ವಾಚ್‌ನ ಸ್ಪೀಕರ್ ಇದ್ದರೆ, ಬಲಭಾಗದ ನ್ಯಾವಿಗೇಶನ್ ಬಟನ್‌ಗಳ ನಡುವೆ ಮೈಕ್ ಇದೆ.

ಈ ವರ್ಷದ ವಾಚ್ ಮಾದರಿಯಲ್ಲಿ ಡಿ-ಬಕಲ್ ಸ್ಪೋರ್ಟ್ ಬ್ಯಾಂಡ್ ವಿಶೇಷವಾಗಿ ಅಳವಡಿಸಲಾಗಿದೆ. ಇದರಲ್ಲಿ ಕೈಯ ಗಾತ್ರಕ್ಕೆ ಅನುಗುಣವಾಗಿ ಸುಲಭವಾಗಿ ಬದಲಾಯಿಸಬಲ್ಲ ಆಯಸ್ಕಾಂತೀಯ ಲಾಕ್ ಇದ್ದು, ಆಕರ್ಷಕವೂ, ಗಟ್ಟಿಯಾಗಿಯೂ ಇದೆ. ಬಲಭಾಗದಲ್ಲಿ ಹೋಂ/ಪವರ್ ಕೀ ಹಾಗೂ ಬ್ಯಾಕ್ ಕೀ ಇದೆ. ಇವುಗಳಿಗೆ ಡಬಲ್ ಟ್ಯಾಪ್ ಮಾಡುವಾಗ ಯಾವ ಆ್ಯಪ್ ತೆರೆಯಬೇಕೋ ಅದನ್ನು ಹೊಂದಿಸಿಕೊಳ್ಳಬಹುದು.

ವಾಚ್ ಕೇಸ್‌ನ ಹಿಂಭಾಗದಲ್ಲಿ ಸ್ಯಾಮ್‌ಸಂಗ್ ಬಯೋಆ್ಯಕ್ಟಿವ್ ಸೆನ್ಸರ್‌ಗಳಿವೆ. ಇದರಲ್ಲಿರುವ ಬಯೋಎಲೆಕ್ಟ್ರಿಕಲ್ ಕಿರಣಗಳು ಹೃದಯ ಬಡಿತ, ರಕ್ತದ ಒತ್ತಡ, ರಕ್ತದ ಆಮ್ಲಜನಕ ಪ್ರಮಾಣವನ್ನು ಅಳೆಯಲು ನೆರವಾಗುತ್ತದೆ.

ಸ್ಕ್ರೀನ್‌ನ ಮೇಲಿನಿಂದ ಕೆಳಗೆ ಸ್ವೈಪ್ ಮಾಡಿದಾಗ ಸೆಟ್ಟಿಂಗ್ ಸಹಿತ ವಿವಿಧ ಶಾರ್ಟ್‌ಕಟ್‌ಗಳು ಕಾಣಿಸುತ್ತವೆ. ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿದಾಗ, ಇನ್‌ಸ್ಟಾಲ್ ಮಾಡಿದ ಆ್ಯಪ್‌ಗಳು ಗೋಚರಿಸುತ್ತವೆ. ಎಡದಿಂದ ಬಲಕ್ಕೆ ಸ್ವೈಪ್ ಮಾಡಿದಾಗ ನೋಟಿಫಿಕೇಶನ್‌ಗಳು ಕಾಣಿಸಿದರೆ, ನೋಟಿಫಿಕೇಶನ್ ಅನ್ನು ಮೇಲಕ್ಕೆ ಸ್ವೈಪ್ ಮಾಡಿದರೆ ಅದು ಕ್ಲಿಯರ್ ಆಗುತ್ತದೆ. ಬಲದಿಂದ ಎಡಕ್ಕೆ ಸ್ವೈಪ್ ಮಾಡಿದರೆ, ವರ್ಕ್ಔಟ್, ಅಲಾರಂ, ಹವಾಮಾನ ಮುಂತಾಗಿ ಪದೇ ಪದೇ ಬಳಸುವ ಆ್ಯಪ್‌ಗಳಿಂದ ಮಾಹಿತಿ ಗೋಚರಿಸುತ್ತದೆ.

ಹೇಗೆ ಕೆಲಸ ಮಾಡುತ್ತದೆ?
ಗ್ಯಾಲಕ್ಸಿ ವಾಚ್ 5 ಪ್ರೊ, ಪ್ರಧಾನವಾಗಿ ಎರಡು ಸ್ಯಾಮ್‌ಸಂಗ್ ಆ್ಯಪ್‌ಗಳ ಮೂಲಕ ಕೆಲಸ ಮಾಡುತ್ತದೆ: ಗ್ಯಾಲಕ್ಸಿ ವೇರೆಬಲ್ ಹಾಗೂ ಸ್ಯಾಮ್‌ಸಂಗ್ ಹೆಲ್ತ್. ಮೊಬೈಲ್‌ನಲ್ಲಿಯೂ ಈ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ, ವಾಚ್ ಜೊತೆಗೆ ಸಿಂಕ್ರನೈಸ್ ಮಾಡಿದರೆ ಅನುಕೂಲಗಳು ಹೆಚ್ಚು. ಗ್ಯಾಲಕ್ಸಿ ವೇರೆಬಲ್ ಆ್ಯಪ್ ಮೂಲಕವಾಗಿ ವಾಚ್ ಹೆಸರು, ಬ್ಯಾಟರಿ ಮಟ್ಟ, ವಾಚ್ ಫೇಸ್‌ಗಳ ಬದಲಾವಣೆ, ಸೆಟ್ಟಿಂಗ್ಸ್ ಮುಂತಾದ ಕೆಲಸಗಳನ್ನು ನಿರ್ವಹಿಸಬಹುದು.

ನಡೆದ ಹೆಜ್ಜೆ, ನಿದ್ರೆಯ ಲೆಕ್ಕಾಚಾರ, ಹೃದಯ ಬಡಿತ, ರಕ್ತದ ಆಮ್ಲಜನಕ ಮುಂತಾದವುಗಳನ್ನು ಸ್ಯಾಮ್‌ಸಂಗ್ ಹೆಲ್ತ್ ಮೂಲಕವಾಗಿ ಅಳೆದು, ಅದರ ಮಾಹಿತಿಯನ್ನು ಕಾಪಿಟ್ಟುಕೊಳ್ಳಬಹುದು. ಮತ್ತು ಇದು ವೈದ್ಯರಿಗೆ ನಿಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ಈ ವಾಚ್, ಆರೋಗ್ಯದ ಆ್ಯಪ್ ಮೂಲಕವಾಗಿ ನಮ್ಮಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಉತ್ತೇಜಿಸಲು ನೆರವಾಗುತ್ತದೆ. ಎಷ್ಟು ಹೆಜ್ಜೆ ನಡೆದಿರಿ, ಎಷ್ಟು ಕ್ಯಾಲೊರಿ ವ್ಯಯವಾಯಿತು ಎಂಬಿತ್ಯಾದಿ ಮಾಹಿತಿಯನ್ನು ಪ್ರತಿ ವಾರ ವರದಿ ನೀಡುತ್ತದೆ. ಜೊತೆಗೆ, ಹೆಚ್ಚು ಹೊತ್ತು ಕುಳಿತಿರಬಾರದು, ಗಂಟೆಗೊಮ್ಮೆಯಾದರೂ ಚಟುವಟಿಕೆಯಿಂದಿರಬೇಕು ಎಂಬ ನಿಯಮವನ್ನು ಉತ್ತೇಜಿಸಲು, ಎದ್ದ ತಕ್ಷಣ ಪ್ರೋತ್ಸಾಹಕರವಾಗಿ ‘ಗ್ರೇಟ್, ನೀವು ಚಟುವಟಿಕೆಯ ಗುರಿಯನ್ನು ತಲುಪಿದ್ದೀರಿ’ ಎಂದು ನೆನಪಿಸುತ್ತದೆ.

ಜಿಪಿಎಕ್ಸ್ ಟ್ರ್ಯಾಕಿಂಗ್
ಹೈಕಿಂಗ್, ಬೈಕಿಂಗ್ ಮಾಡುವವರಿಗೆ ನೆರವಾಗುವಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 5 ಪ್ರೊ ಮಾದರಿಯಲ್ಲಿ ವಿಶೇಷ ವ್ಯವಸ್ಥೆಯಿದೆ. ಜಿಪಿಎಸ್ ಎಕ್ಸ್‌ಚೇಂಜ್ (ಜಿಪಿಎಕ್ಸ್) ಫಾರ್ಮ್ಯಾಟ್ ಫೈಲ್ ಎಂಬುದು ಟ್ಯ್ರಾಕುಗಳು, ನಾವು ಕ್ರಮಿಸಿದ ಮಾರ್ಗಗಳು, ನಿಂತ ಸ್ಥಳಗಳನ್ನೆಲ್ಲಾ ದಾಖಲಿಸಿಕೊಂಡು, ದಾರಿ ತಪ್ಪಿದರೆ ಮರಳುವುದಕ್ಕೆ ಗೂಗಲ್ ಮ್ಯಾಪ್ ಮೂಲಕ ಅನುಕೂಲ ಮಾಡಿಕೊಡುತ್ತದೆ. ಆದರೆ, ಉಚಿತ ಸೇವೆಗಳ ಹೊರತಾಗಿ, ಜಿಪಿಎಕ್ಸ್ ಫೈಲ್‌ಗಾಗಿ ಬೇರೆ ಆ್ಯಪ್‌ಗಳನ್ನು ಖರೀದಿಸಬೇಕಾಗುತ್ತದೆ.

ಆ್ಯಪಲ್ ವಾಚ್ ಅಥವಾ ಗ್ಯಾಲಕ್ಸಿ ವಾಚ್?
ಈಗ ಇತ್ತೀಚೆಗೆ ಬಿಡುಗಡೆಯಾದ ಆ್ಯಪಲ್ ವಾಚ್ ಸೀರೀಸ್ 8 ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 5 ಪ್ರೊ – ಇವೆರಡನ್ನು ಹೋಲಿಸಿ ನೋಡುವುದು ಸರಿಯಾಗದು. ಯಾಕೆಂದರೆ, ಇವೆರಡೂ ಆಯಾ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಉತ್ತಮ ದರ್ಜೆಯ ವಾಚುಗಳೇ. ಆಂಡ್ರಾಯ್ಡ್ ಬಳಕೆದಾರರಿಗೆ ಗ್ಯಾಲಕ್ಸಿ ವಾಚ್‌ನಲ್ಲಿ ಹೆಚ್ಚು ಕೆಲಸಗಳನ್ನು ಮಾಡಬಹುದು, ಆ್ಯಪಲ್‌ನ ಐಒಎಸ್ ಬಳಕೆದಾರರಿಗೆ ಆ್ಯಪಲ್ ವಾಚ್ ಉತ್ತಮವಾಗಿ ಕೆಲಸ ಮಾಡಬಲ್ಲುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 5 ಪ್ರೊ – ಬ್ಯಾಟರಿಯೂ ಎರಡು ದಿನಗಳಿಗೆ ಯಾವುದೇ ಸಮಸ್ಯೆಯಿಲ್ಲದಂತೆ ಉಳಿಯುತ್ತದೆ. ಅನಿವಾರ್ಯವಾದರೆ ಸ್ಯಾಮ್‌ಸಂಗ್ ಫೋನ್‌ನಿಂದಲೇ ಚಾರ್ಜ್ ಮಾಡಿಕೊಳ್ಳುವ ಆಯ್ಕೆಯೂ ಇದೆ. ಒಟ್ಟಾರೆಯಾಗಿ ಹೇಳುವುದಾದರೆ, ಮಾರುಕಟ್ಟೆಯಲ್ಲಿರುವ ಸಾಕಷ್ಟು ಸ್ಮಾರ್ಟ್ ವಾಚ್‌ಗಳಲ್ಲಿ ಗ್ಯಾಲಕ್ಸಿ ವಾಚ್ ಎದ್ದುಕಾಣುವಂತಹಾ ಆಕರ್ಷಣೆ ಹೊಂದಿದೆ.

ಗ್ಯಾಲಕ್ಸಿ ವಾಚ್ 5 ಪ್ರೊ – ಕಪ್ಪು ಟೈಟಾನಿಯಂ ಹಾಗೂ ನಸುಗಪ್ಪು ಟೈಟಾನಿಯಂ – ಹೀಗೆ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, GPS ಮಾತ್ರ ಇರುವ ಆವೃತ್ತಿ ಬೆಲೆ ₹44,999 ಹಾಗೂ GPS + LTE ಆವೃತ್ತಿ ಬೆಲೆ ₹49,999.

My Gadget Review (Avinash B) published in Prajavani on 07/08 October 2022

1 COMMENT

LEAVE A REPLY

Please enter your comment!
Please enter your name here