Samsung Galaxy M32: ದೊಡ್ಡ ಬ್ಯಾಟರಿಯ ಸ್ಮಾರ್ಟ್ ವೈಶಿಷ್ಟ್ಯಗಳ ಫೋನ್

0
363

ಸ್ಯಾಮ್‌ಸಂಗ್ ಇತ್ತೀಚೆಗಷ್ಟೇ ಗ್ಯಾಲಕ್ಸಿ ಎಂ32 ಸಾಧನವನ್ನು ಬಿಡುಗಡೆ ಮಾಡಿದೆ. 5ಜಿ ತಂತ್ರಜ್ಞಾನವಿನ್ನೂ ಭಾರತಕ್ಕೆ ಬರಬೇಕಿರುವುದರಿಂದ, ಈ ಹಂತದಲ್ಲಿ 4ಜಿ ಗ್ರಾಹಕರನ್ನು ಸೆಳೆಯಲು ಈ ಹೊಸ ಉತ್ಪನ್ನ ಬಿಡುಗಡೆಯಾಗಿದೆ. ಪ್ರಜಾವಾಣಿಗೆ ವಿಮರ್ಶೆಗಾಗಿ ದೊರೆತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 ಸಾಧನ ಹೇಗಿದೆ? ನೋಡೋಣ.ಕೈಗೆಟಕುವ ದರ ವಿಭಾಗದಲ್ಲಿಯೂ ಸ್ಯಾಮ್‌ಸಂಗ್ ಇತ್ತೀಚೆಗೆ ವಿನೂತನ ಆಯ್ಕೆಗಳನ್ನು ಒದಗಿಸುತ್ತಿದೆ. ಚೀನಾದ ಪ್ರತಿಸ್ಫರ್ಧಿಗಳಿಗೆ ಸ್ಯಾಮ್‌ಸಂಗ್‌ನ ಎಂ ಸರಣಿಯ ಫೋನ್‌ಗಳು ಕಠಿಣ ಸವಾಲು ನೀಡುತ್ತಲೇ ಬಂದಿದ್ದು, ಹೊಸದಾಗಿ ಬಂದಿರುವ ಎಂ32 ಕೂಡ ಬೆಲೆ ಮತ್ತು ಸ್ಪೆಸಿಫಿಕೇಶನ್ ಮೂಲಕ ಗಮನ ಸೆಳೆಯುತ್ತಿದೆ. ಮೊದಲ ನೋಟದಲ್ಲಿ ಗಮನ ಸೆಳೆಯುವುದು, ಭರ್ಜರಿ 6000mAh ಬ್ಯಾಟರಿ, ಸ್ಲಿಮ್, ಹಗುರ ಸಾಧನ ಮತ್ತು ನಾಲ್ಕು ಸೆನ್ಸರ್‌ಗಳಿರುವ ಪ್ರಧಾನ ಕ್ಯಾಮೆರಾ.

ವಿನ್ಯಾಸ
ಪ್ಲಾಸ್ಟಿಕ್ ಬಾಡಿ ಇದ್ದರೂ ಆಕರ್ಷಕವಾಗಿದೆ ಮತ್ತು ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಹಿಂಭಾಗದಲ್ಲಿರುವ ಗ್ರೇಡಿಯೆಂಟ್ ಫಿನಿಶ್ ಇರುವ ವಿಶಿಷ್ಟ ಬಣ್ಣಗಾರಿಕೆಯು ಬೆಳಕು ಬಿದ್ದಾಗ ಬದಲಾಗುವುದನ್ನು ನೋಡಲು ಇಷ್ಟವಾಗುತ್ತದೆ. ಹಿಂಭಾಗದಲ್ಲಿ ನಾಲ್ಕು ಸೆನ್ಸರ್‌ಗಳಿರುವ ಕ್ಯಾಮೆರಾ ಮಾಡ್ಯೂಲ್ ಆಕರ್ಷಕವಾಗಿದ್ದರೆ, ಎಡ ಭಾಗದಲ್ಲಿ ಪವರ್ ಬಟನ್‌ನಲ್ಲೇ ಇರುವ ಕೆಪಾಸಿಟಿವ್ ಫಿಂಗರ್ ಪ್ರಿಂಟ್ ಕೂಡ ವೇಗವಾಗಿ ಕೆಲಸ ಮಾಡುತ್ತದೆ. ಕೈಯಲ್ಲಿ ಅನುಕೂಲಕರವಾಗಿ ಕೂರುವ ಈ ಫೋನ್, 6000mAh ಬ್ಯಾಟರಿ ಇದ್ದಾಗ್ಯೂ 196 ಗ್ರಾಂ ಹಗುರವಾಗಿದೆ. ಯುಎಸ್‌ಬಿ ಟೈಪ್ ಸಿ ಚಾರ್ಜರ್ ಜೊತೆಗೆ 15W ವೇಗದ ಚಾರ್ಜಿಂಗ್ ಅಡಾಪ್ಟರ್ ನೀಡಲಾಗಿದೆ. 3.5ಮಿಮೀ ಇಯರ್‌ಫೋನ್ ಜಾಕ್ ಇದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5.0 ಗಾಜಿನ ಡಿಸ್‌ಪ್ಲೇ ಮೇಲೆ ಗೀರು ಆಗುವುದನ್ನು ತಡೆಯುತ್ತದೆ.

6.4 ಇಂಚಿನ ಎಸ್-ಅಮೋಲೆಡ್ (sAMOLED) ಎಫ್‌ಹೆಚ್‌ಡಿ ಪ್ಯಾನೆಲ್ ಸ್ಕ್ರೀನ್ ಇದ್ದು, 90Hz ರೀಫ್ರೆಶ್ ರೇಟ್ ಇದೆ. ಮೀಡಿಯಾಟೆಕ್ ಹೀಲಿಯೋ ಜಿ80 ಪ್ರೊಸೆಸರ್ ಜೊತೆಗೂಡಿರುವುದರಿಂದ ಕಾರ್ಯಾಚರಣೆಯು ಸುಲಲಿತವಾಗಿದೆ. ಪಂಚ್-ಹೋಲ್ ನಾಚ್ ಸೆಲ್ಫೀ ಕ್ಯಾಮೆರಾ ಕೂಡ ಮಧ್ಯಭಾಗದಲ್ಲಿದೆ. ರಿವ್ಯೂಗೆ ದೊರೆತ ಸಾಧನದಲ್ಲಿ 4GB RAM ಹಾಗೂ 64GB ಸ್ಟೋರೇಜ್ ಇದೆ.

ಕ್ಯಾಮೆರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 ಫೋನ್‌ನ ಪ್ರಧಾನ ಕ್ಯಾಮೆರಾದಲ್ಲಿ 64 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಸೆನ್ಸರ್ ಇದ್ದು, 8MP ವೈಡ್ ಆ್ಯಂಗಲ್ ಲೆನ್ಸ್ ಹಾಗೂ ತಲಾ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್‌ಗಳಿವೆ. ಸೆಲ್ಫೀಗೆ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಂಭಾಗದ ಕ್ಯಾಮೆರಾ ಸೆಟಪ್. ಪ್ರಧಾನ ಕ್ಯಾಮೆರಾವು ಹೊರಾಂಗಣದಲ್ಲಿ ಅದ್ಭುತವಾಗಿ ಬಣ್ಣಗಳ ಮಿಳಿತದೊಂದಿಗೆ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸಮೀಪದ ವಸ್ತುಗಳು ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳಿಂದಾಗಿ ಅತ್ಯುತ್ತಮವಾಗಿ ಸೆರೆಯಾಗುತ್ತವೆ. ವ್ಯೂಫೈಂಡರ್ ಮೇಲೆ ತಟ್ಟಿದರೆ, ವಸ್ತುಗಳ ಮೇಲೆ ಕ್ಯಾಮೆರಾ ಫೋಕಸ್ ಆಗುತ್ತದೆ. ಬೆಳಕು ಕಡಿಮೆ ಇರುವಲ್ಲಿ ನೈಟ್ ಮೋಡ್ ಮೂಲಕ ಚಿತ್ರೀಕರಣ ಮಾಡಬಹುದಾಗಿದ್ದು, ಸ್ವಲ್ಪ ಮಸುಕಾಗಿರುತ್ತದೆ. 20MP ಸಾಮರ್ಥ್ಯದ ಲೆನ್ಸ್ ಮೂಲಕ ಸೆಲ್ಫೀ, ಈಗಿನ ಅಗತ್ಯಕ್ಕೆ ತಕ್ಕಂತೆ ಚಿತ್ರಗಳಿಗೆ ಹೆಚ್ಚು ಸೌಂದರ್ಯ ಒದಗಿಸುತ್ತದೆ.

ಕಾರ್ಯಾಚರಣೆ ಹೇಗಿದೆ
ಆಂಡ್ರಾಯ್ಡ್ 11 ಆಧಾರಿತ ಒನ್‌ಯುಐ 3.1 ಕಾರ್ಯಾಚರಣಾ ವ್ಯವಸ್ಥೆಯಿದ್ದು, ಹಲವು ಅನಗತ್ಯ ಆ್ಯಪ್‌ಗಳಿವೆ. ಹಲವು ಆ್ಯಪ್‌ಗಳನ್ನು ತೆರೆದು ಕೆಲಸ ಮಾಡಿದಾಗ ಕಾರ್ಯಾಚರಣೆ ಸುಲಲಿತವಾಗಿದೆ. ಫೇಸ್ ರೆಕಗ್ನಿಶನ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್‌ಗಳು ವೇಗವಾಗಿ ಕೆಲಸ ಮಾಡುತ್ತವೆ.

ಅನಗತ್ಯ ಎನಿಸುವ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ, ಸ್ಯಾಮ್‌ಸಂಗ್‌ನ ಕೆಲವು ಆ್ಯಪ್‌ಗಳನ್ನು ಡೀಪ್-ಸ್ಲೀಪ್ ಮೋಡ್‌ಗೆ ಹಾಕಿ ಮತ್ತು ಸಿಸ್ಟಂನ ಆನಿಮೇಶನ್‌ಗಳನ್ನು ಕಡಿಮೆ ಮಾಡಿದಾಗ, ಸಾಧನದ ಕಾರ್ಯಾಚರಣೆಯು ಮತ್ತಷ್ಟು ವೇಗ ಪಡೆಯಿತು. ಈ ಸಂದರ್ಭದಲ್ಲಿ ಹೆಚ್ಚು ಸಾಮರ್ಥ್ಯ ಬೇಡುವ, ಗರಿಷ್ಠ ಗ್ರಾಫಿಕ್ಸ್ ಇರುವ ಗೇಮ್ಸ್ ಆಡುವುದಕ್ಕೂ ಅನುಕೂಲವಾಯಿತು.

ಸಿಸ್ಟಂ ಇಂಟರ್ಫೇಸ್ ಅನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳುವ ಆಯ್ಕೆಯಿದೆ. ಕನ್ನಡ ಟೈಪ್ ಮಾಡಲು ಅಂತರ್-ನಿರ್ಮಿತ ಕೀಬೋರ್ಡ್ ಇದೆ.

ಸ್ಮಾರ್ಟ್ ವೈಶಿಷ್ಟ್ಯಗಳು
ಫೋನ್ ಎತ್ತಿಕೊಂಡಾಗ ಅಥವಾ ಸ್ಕ್ರೀನ್ ಮೇಲೆ ಡಬಲ್-ಟ್ಯಾಪ್ ಮಾಡಿದಾಗ ಸ್ಕ್ರೀನ್ ಆನ್/ಆಫ್ ಆಗುವುದು, ಸ್ಕ್ರೀನ್ ಲಾಕ್ ಸಮಯ ಹೊಂದಿಸಿದ್ದರೂ, ನಾವು ಸ್ಕ್ರೀನ್ ಮೇಲೆ ಕಣ್ಣಿರಿಸಿದಷ್ಟೂ ಹೊತ್ತು ಸ್ಕ್ರೀನ್ ಆಫ್ ಆಗದಂತಿರುವುದು, ಸ್ಕ್ರೀನ್ ಮೇಲೆ ಕೈಯಿಟ್ಟಾಗ ಮ್ಯೂಟ್ ಆಗುವುದು, ಸ್ಕ್ರೀನ್ ಮೇಲೆ ಕೈಯ ಅಂಚಿನಿಂದ ಆಡಿಸಿದರೆ ಸ್ಕ್ರೀನ್ ಶಾಟ್ ತೆಗೆಯುವುದು – ಈ ವೈಶಿಷ್ಟ್ಯಗಳಿವೆ.

ದೊಡ್ಡ ಸಾಮರ್ಥ್ಯದ ಬ್ಯಾಟರಿ ವೇಗವಾಗಿ ರೀಚಾರ್ಜ್ ಆಗಲು 15W ಬೆಂಬಲಿತ ಅಡಾಪ್ಟರ್ ನೀಡಲಾಗಿದ್ದು, ಪೂರ್ತಿ ಚಾರ್ಜ್ ಆಗಲು ಎರಡುವರೆ ಗಂಟೆ ಬೇಕಾಗುತ್ತದೆ. ಆದರೆ, 25W ಚಾರ್ಜರ್‌ಗೂ ಬೆಂಬಲ ಇರುವುದರಿಂದ, ಆ ಅಡಾಪ್ಟರ್ ಬದಲಿಸಿದಲ್ಲಿ ಇನ್ನಷ್ಟು ವೇಗವಾಗಿ ಚಾರ್ಜ್ ಆಗುತ್ತದೆ.

ಒಟ್ಟಾರೆ ಹೇಗಿದೆ…
₹14,999 ಬೆಲೆಯಲ್ಲಿ ಲಭ್ಯವಿರುವ 4GB ಸಾಮರ್ಥ್ಯದ ಸ್ಯಾಮ್‌ಸಂಗ್ ಎಂ32, ತನ್ನ ವಿನ್ಯಾಸ, ಪ್ರಧಾನ ಕ್ಯಾಮೆರಾದ ಸಾಮರ್ಥ್ಯ, ಡಿಸ್‌ಪ್ಲೇ ಗುಣಮಟ್ಟ ಮತ್ತು ಬ್ಯಾಟರಿ ವಿಚಾರಗಳಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತದೆ. (6GB ಫೋನ್‌ಗೆ ₹15,999) ದಿನಪೂರ್ತಿ ಬ್ಯಾಟರಿ, ಸುಲಲಿತವಾದ ಬಳಕೆದಾರ ಇಂಟರ್‌ಫೇಸ್ ಇದರ ಪ್ಲಸ್ ಪಾಯಿಂಟ್ಸ್. ಒಟಿಟಿ ಸೇವೆಗಳಲ್ಲಿ ಹೆಚ್‌ಡಿ ಅಥವಾ ಹೆಚ್‌ಡಿಆರ್ ಸ್ಟ್ರೀಮಿಂಗ್ ಬೆಂಬಲ ಇಲ್ಲದಿರುವುದು ಕೆಲವರಿಗಷ್ಟೇ ತೊಡಕಾಗಬಹುದು.

Samsung Galaxy M32 Review Published in Prajavani on 03 Jul 2021

LEAVE A REPLY

Please enter your comment!
Please enter your name here