ಬೆಂಗಳೂರು, ಸೆ.11: ಜೆ.ಎಸ್.ಡಬ್ಲ್ಯೂ ಫೌಂಡೇಷನ್ ಮತ್ತು ಕರ್ನಾಟಕ ಸರ್ಕಾರದ ಬೆಂಬಲ ಪಡೆದ ‘ರೂಮ್ ಟು ರೀಡ್ ಇಂಡಿಯಾ’ ಕರ್ನಾಟಕದಲ್ಲಿ ರಾಜ್ಯವ್ಯಾಪಿ `ರೀಡ್-ಅ-ಥಾನ್’ ಆಯೋಜಿಸಿದೆ. ಈ ಕಾರ್ಯಕ್ರಮವು ಮಕ್ಕಳು, ಪೋಷಕರು, ಸಮುದಾಯಗಳು, ಸರ್ಕಾರಿ ಸಂಸ್ಥೆಗಳು ಮತ್ತು ಕಾರ್ಪೊರೇಟ್‌ಗಳನ್ನು ಕರ್ನಾಟಕ ರಾಜ್ಯದಾದ್ಯಂತ ಒಗ್ಗೂಡಿಸುತ್ತಿದ್ದು ರಾಜ್ಯದಲ್ಲಿ ಪ್ರಾರಂಭಿಕ ಕಲಿಕೆ ಮತ್ತು ಸಾಕ್ಷರತೆಯ ಫಲಿತಾಂಶಗಳನ್ನು ಮುಂದುವರಿಸಲು ಏಕೀಕೃತ ಪ್ರಯತ್ನ ನಡೆಸಲಿದೆ.
ಈ ಸಹಯೋಗವು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಭವಿಷ್ಯಕ್ಕೆ ತಳಹದಿಯ ಕೌಶಲ್ಯಗಳೊಂದಿಗೆ ಸನ್ನದ್ಧವಾಗಿಸುವ ಗುರಿ ಹೊಂದಿದೆ. ಶಾಲೆಗಳು, ಸಮುದಾಯಗಳು ಮತ್ತು ಸರ್ಕಾರಿ ಕಛೇರಿಗಳಲ್ಲಿ ವಿವಿಧ ಕ್ಷೇತ್ರದ ಪಾಲುದಾರರನ್ನು ಒಗ್ಗೂಡಲು ವಿಶಿಷ್ಟ ವೇದಿಕೆಯನ್ನು ಈ ರೀಡ್-ಅ-ಥಾನ್ ಒದಗಿಸುತ್ತದೆ. ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಅವರ ಬೆಂಬಲವನ್ನು ಪಡೆಯುವ ಗುರಿ ಹೊಂದಿದೆ. ಈ ವರ್ಷದ ರೀಡ್-ಅ-ಥಾನ್ ಏಕಕಾಲಕ್ಕೆ ಓದುವುದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗಳಲ್ಲಿ ಹೊಸ ದಾಖಲೆ ನಿರ್ಮಿಸುವ ಗುರಿ ಹೊಂದಿದೆ.
ರೂಮ್ ಟು ರೀಡ್ ಇಂಡಿಯಾದ ಕಂಟ್ರಿ ಡೈರೆಕ್ಟರ್ ಪೂರ್ಣಿಮಾ ಗಾರ್ಗ್ ಈ ಕಾರ್ಯಕ್ರಮದ ಪರಿಣಾಮದ ಕುರಿತು ಒತ್ತಿ ಹೇಳಿದ್ದು, “ಈ ವರ್ಷದ ಅಭಿಯಾನವು `ಮೇಕ್ ರೂಮ್ ಫಾರ್ ಅರ್ಲಿ ಲರ್ನಿಂಗ್’ ಎಂಬ ವಿಷಯ ಹೊಂದಿದ್ದು ಪ್ರತಿಯೊಂದು ಕಡೆಯೂ ಪ್ರಾರಂಭಿಕ ಕಲಿಕಾರ್ಥಿಗಳಿಗೆ ಕಲಿಯುವ ಮತ್ತು ಬೆಳೆಯುವ ಅವಕಾಶ ನೀಡುವಲ್ಲಿ ನಮ್ಮ ಬದ್ಧತೆಯನ್ನು ಮರು ದೃಢೀಕರಿಸುವ ಶಕ್ತಿಯುತ ಅವಕಾಶ ಪ್ರಸ್ತುತಪಡಿಸುತ್ತದೆ. ದೇಶಾದ್ಯಂತ ಪ್ರಾರಂಭಿಕ ಕಲಿಕಾರ್ಥಿಗಳು ಮತ್ತಿತರೆ ಭಾಗೀದಾರರು ಬೇರೆ ಎಲ್ಲವನ್ನೂ ಬದಿಗಿಟ್ಟು ರೀಡ್-ಅ-ಥಾನ್ ಅವಧಿಯ 3೦ ನಿಮಿಷ ಒಟ್ಟಿಗೇ ಓದುತ್ತಾರೆ. ಇದು ಮಕ್ಕಳಲ್ಲಿ ಓದುವುದು ಮತ್ತು ಕಲಿಯುವುದರ ಪ್ರಾಮುಖ್ಯತೆ ಕುರಿತು ಬಲವಾದ ಸಂದೇಶ ನೀಡುತ್ತದೆ” ಎಂದರು.
ಭಾರತವು ಆವಿಷ್ಕಾರ ಮತ್ತು ಅಭಿವೃದ್ಧಿಯಲ್ಲಿ ನಾಯಕತ್ವ ಸ್ಥಾನಕ್ಕೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪಾಲುದಾರರ ಈ ಸಹಯೋಗವು ಭವಿಷ್ಯದ ತಲೆಮಾರುಗಳನ್ನು ಸಬಲೀಕರಿಸುವ ಗುರಿಯನ್ನು ಹೊಂದಿದೆ.