ಇದು ಪುಂಗಿ ಅಲ್ಲ. 🙂 ನನಗಂತೂ ಹೆಮ್ಮೆಯ ವಿಚಾರ. ಬಹುಶಃ ಕನ್ನಡ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲು ಇರಬಹುದೇನೋ. ಪತ್ರಿಕೆಯಲ್ಲಿ, ಓದುಗರನ್ನು ತಟ್ಟುವ ಅಂಕಣವೊಂದು ನಿರಂತರವಾಗಿ ಐದು ವರ್ಷಗಳ ಕಾಲ ಪ್ರಕಟವಾಗುತ್ತದೆ ಎಂದರೆ ಅದು ಹೆಮ್ಮೆಯೇ ಅಲ್ಲವೇ?
ರಾಜಕೀಯ, ಕ್ರೀಡೆ, ನಾಟಕ, ಯಕ್ಷಗಾನ, ಭರತನಾಟ್ಯ ಸಂಗೀತ, ಸಿನಿಮಾ, ವಾಣಿಜ್ಯ ಮುಂತಾದ ಹತ್ತು ಹಲವಾರು ವಿಭಾಗಗಳಲ್ಲಷ್ಟೇ ಲೇಖನಗಳನ್ನು ಬರೆಯುತ್ತಿದ್ದ ನಾನು ಐದು ವರ್ಷದ ಹಿಂದೆ ಮಾಹಿತಿ ತಂತ್ರಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದು ಆಕಸ್ಮಿಕವೇ.
ವಿಜಯ ಕರ್ನಾಟಕಕ್ಕೊಂದು ವೆಬ್‌ಸೈಟ್ ಬೇಕೆಂಬ ಆಡಳಿತ ಮಂಡಳಿಯ ತುಡಿತದಿಂದಾಗಿ ಮರಳಿ ವಿಕ ಸೇರಿಕೊಂಡಿದ್ದ ದಿನಗಳವು. ವೆಬ್‌ಸೈಟ್ ನಿಭಾಯಿಸುತ್ತಿದ್ದಾನೆ ಎಂದರೆ ಈತ ವೆಬ್ ಡಿಸೈನರ್ ಅಂತ ಕೆಲವರು, ದೊಡ್ಡ ಟೆಕ್ಕೀ ಅಂತ ಹಲವರು ಅಂದುಕೊಂಡಿದ್ದರೂಂತ ಈಗ ಜ್ಞಾಪಕಕ್ಕೆ ಬರುತ್ತಿದೆ. ಹೆಚ್ಚಿನವರು ನಾನು ಸಂಪಾದಕೀಯ ವಿಭಾಗದವನೇ ಅಲ್ಲವೆಂತಲೂ ತಿಳಿದುಕೊಂಡಿದ್ದರಂತೆ!
ನಾನು ಓದಿದ್ದು ಬಯೋಲಜಿ. ಟೆಕ್ನಾಲಜಿ ಅಲ್ಲವಾದರೂ, ಅದರ ಕುರಿತು ಅತೀವ ಆಸಕ್ತಿ, ಬೆರಗು, ಕುತೂಹಲ ಇದ್ದಿದ್ದು ಹೌದು. ಆಗಿನ್ನೂ ಪೇಜರ್ ಎಂಬ ಸಂದೇಶ ಕಳುಹಿಸುವ ಪುಟ್ಟ ಮಾಹಿತಿ ಕ್ರಾಂತಿಯ ದಿನಗಳಲ್ಲಿ ನಾನು ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸಿದ್ದೆ. ಎರಡ್ಮೂರು ವರ್ಷದ ಬಳಿಕವಷ್ಟೇ ಮೊಬೈಲ್ ಫೋನುಗಳೆಂಬ ಬೆರಗಿನ ಸಾಧನಗಳು ನಮ್ಮ ದೇಶದಲ್ಲಿ ಕಣ್ಣು ಬಿಡಲಾರಂಭಿಸಿದವು, ಪೇಜರ್ ಮೂಲೆಗುಂಪಾಯಿತು. 2000 ಇಸವಿ ಸುಮಾರಿಗೆ Trium ಎಂಬ ಕಂಪನಿ ಹೊರತಂದಿದ್ದ ಒಂದು ಬೇಸಿಕ್ ಮೊಬೈಲ್ ಫೋನ್ ಖರೀದಿಸಿದ್ದೆ – ಇನ್‌ಕಮಿಂಗ್ ಕರೆಗಳಿಗೂ ಹತ್ತಾರು ರೂ. ಶುಲ್ಕ ಇದ್ದಿದ್ದ ಆ ದಿನಗಳಲ್ಲಿ! ಜೆಟಿಎಂ ಎಂಬ ಕಂಪನಿಯು ಕೂಡ ಆಗಷ್ಟೇ ಸ್ಪೈಸ್ ಆಗಿ ಪರಿವರ್ತನೆಗೊಂಡಿತ್ತೆಂಬ ನೆನಪು. ‘ಜೆಟಿಎಂನಿಂದ ಉದಯ ಟಿವಿ ಮೊಬೈಲ್ ಆಗಿದೆ’ ಅಂತ ನಟ ಶ್ರೀನಾಥ್ ಅವರ ಜಾಹೀರಾತು ಈಗಲೂ ನೆನಪಿದೆ. ಆ ಬಳಿಕ ರಿಲಾಯನ್ಸ್ ಎಲ್ಲರ ಕೈಗೂ ಮೊಬೈಲ್ ದೊರಕಿಸಿಕೊಡುವ 500 ರೂ. ಮೌಲ್ಯದ ಸಿಡಿಎಂಎ ಮೊಬೈಲ್ ಕ್ರಾಂತಿ ಹುಟ್ಟು ಹಾಕಿತು. ಅದೇ ಹೊತ್ತಿಗೆ ನೋಕಿಯಾ ಕೂಡ ಕಾಲಿಟ್ಟಿತು. ಜಾವಾ ಮೊಬೈಲ್ ಫೋನ್‌ಗಳ ಕಾಲವದು. ಇಂಥ ಮೊಬೈಲ್ ಕ್ರಾಂತಿಯ ದಿನಗಳಲ್ಲಿ ನೋಕಿಯಾದ ಹಲವು ಸೆಟ್‍ಗಳನ್ನು ಖರೀದಿಸಿ, ಬಳಸಿ ನೋಡುತ್ತಿದ್ದೆ. ನಾನು ಹೆಮ್ಮೆ ಪಡುತ್ತಿದ್ದ 5100 ಮಾಡೆಲ್ ಈಗಲೂ ನೆನಪಿದೆ. ಟಾರ್ಚ್ ಲೈಟ್, ಎಫ್ಎಂ ರೇಡಿಯೋ, ಸ್ಪೀಕರ್ ಫೋನ್, ಕ್ಯಾಮೆರಾ ಮುಂತಾದ ಸೌಕರ್ಯಗಳಿದ್ದ ಅದ್ಭುತ ಚಿರತೆಯನ್ನು ನೆನಪಿಸುವ ವಿನ್ಯಾಸವಿದ್ದ ಫೋನ್ ಅದು.
ಬಳಿಕ ಚೆನ್ನೈಗೆ ಹೋದ ಎರಡ್ಮೂರು ವರ್ಷಗಳ ನಂತರ, ಟಚ್ ಸ್ಕ್ರೀನ್ ಕಾಲ ಬಂತು. 5300 ಎಂಬ ನೋಕಿಯಾದ ಸ್ಮಾರ್ಟ್‌ಫೋನ್ (ಸಿಂಬಿಯಾನ್ ಕಾರ್ಯಾಚರಣಾ ವ್ಯವಸ್ಥೆ) ಮಾಡೆಲ್ ಖರೀದಿಸಿ ರುಚಿ ನೋಡಿದ್ದೆ. ಕೊನೆಗೆ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಬಂದಾಗ HTC Fire S ಮೊಬೈಲ್ ಫೋನ್ ಬಳಸಿ ಆಂಡ್ರಾಯ್ಡ್‌ನತ್ತ ಮೊದಲ ಬಾರಿ ಆಕರ್ಷಿತನಾಗಿದ್ದೆ. ಆ ಬಳಿಕ ಬದಲಾಯಿಸಿದ ಆಂಡ್ರಾಯ್ಡ್ ಫೋನುಗಳಿಗೆ ಲೆಕ್ಕವೇ ಇಲ್ಲ. ಅಷ್ಟು ದುಬಾರಿಯ ದಿನಗಳಲ್ಲಿ ಮೊಬೈಲ್ ಖರೀದಿಸದೇ ಬಿಟ್ಟಿದ್ದರೆ ಒಂದು ಮನೆಯನ್ನೇ ಕಟ್ಟಿಸಬಹುದಿತ್ತು ಅಂತ ನನ್ನ ಹೆಂಡತಿ ಯಾವಾಗ್ಲೂ ಕುಟುಕುತ್ತಿರುತ್ತಾಳೆ. ಅಂಥ ಮೊಬೈಲ್ ಹುಚ್ಚು. ಜಗತ್ತು 2ಜಿಯಿಂದ 3ಜಿಗೆ ಹೊರಳಿದಾಗ, ದೇಶದಲ್ಲೇ ಮೊದಲು 3ಜಿ ಸೇವೆ ಆರಂಭಿಸಿದ್ದು ಬಿಎಸ್ಸೆನ್ನೆಲ್ ಮತ್ತು ಅದು ಕೂಡ ಚೆನ್ನೈಯಲ್ಲಿ ಮೊದಲ ಬಿಡುಗಡೆ. ನಾನು 3ಜಿ ಸಿಮ್ ಕಾರ್ಡ್ ಖರೀದಿಸಿದ ಕೆಲವೇ ಮೊದಲಿಗರಲ್ಲಿ ನಾನೂ ಒಬ್ಬ!
ಅದರ ನಡುವಿನ ದಿನಗಳಲ್ಲಿ ಎಂದರೆ 2005-2010ರ ಅವಧಿಯಲ್ಲಿ ಬ್ಲಾಗುಗಳು ಮಹತ್ತರವಾಗಿ ಪ್ರಗತಿ ಕಂಡ ಕಾಲ. ಆರ್ಕುಟ್ ಎಂಬ ಸಾಮಾಜಿಕ ಸಮುದಾಯ, ಬ್ಲಾಗರ್/ವರ್ಡ್‌ಪ್ರೆಸ್ ಎಂಬ ಬ್ಲಾಗ್ ವೇದಿಕೆಗಳ ಗತ ವೈಭವ. ನುಡಿ/ಬರಹ/ಶ್ರೀಲಿಪಿ ಫಾಂಟ್‌ಗಳಿದ್ದರಷ್ಟೇ ಕನ್ನಡವನ್ನು ಆನ್‌ಲೈನ್‌ನಲ್ಲಿ ನೋಡಬಹುದಾಗಿದ್ದ ಆ ಕಾಲವಿನ್ನೂ ನೆನಪಿದೆ. ಆಗಷ್ಟೇ ಯುನಿಕೋಡ್ ಸೈಟುಗಳು ಕಣ್ಣು ಬಿಡಲಾರಂಭಿಸಿದ್ದವು. ಮೈಕ್ರೋಸಾಫ್ಟ್‌ನಿಂದ ಕನ್ನಡದಲ್ಲಿ ಮೊದಲ ಯುನಿಕೋಡ್ ಸುದ್ದಿ ಜಾಲತಾಣವು (News Portal) ಸ್ಥಾಪನೆಯಾದಾಗ ನಾನು ಅದರ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದುದು ಬಹುಶಃ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ ಮೊದಲ ಮೆಟ್ಟಿಲು ಎನ್ನಬಹುದು.
ಆ ಬಳಿಕ ಯಾಹೂ ಕನ್ನಡ ಜಾಲ ತಾಣ ರೂಪಿಸುವಲ್ಲಿ, ಅದರ CMS ಟೆಸ್ಟಿಂಗ್‌ನಲ್ಲಿ ಮತ್ತು ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಹೆಗಲಿಗೇರಿತು. ಜತೆಗೆ ತಮಿಳು, ತೆಲುಗು ಹಾಗೂ ಮಲಯಾಳಂ ತಾಣಗಳವರೊಂದಿಗೆ ಸಮನ್ವಯ ಸಾಧಿಸುತ್ತಾ ಮುನ್ನಡೆದಾಗ, ನಾನೊಬ್ಬ ಸಂಪಾದಕ ಎನ್ನುವುದಕ್ಕಿಂತಲೂ, ಟೆಸ್ಟರ್ ಎಂದೇ ಹೆಸರಾಗಿದ್ದೆ! ತಂತ್ರಜ್ಞಾನದ ಆಗುಹೋಗುಗಳಲ್ಲಿದ್ದ ಕುತೂಹಲವೇ ಇದಕ್ಕೆ ಕಾರಣ ಮತ್ತು ಅದನ್ನು ರೂಪಿಸುವಲ್ಲಿ, ಬದಲಾವಣೆ ತರುವಲ್ಲಿ ನನಗಿದ್ದ ಖುಷಿಯೂ ಕೂಡ. ಆ ನಂತರ, ಯಾಹೂ ಕನ್ನಡ ತಾಣದ ತಳಹದಿಯಲ್ಲೇ ವೆಬ್‌ದುನಿಯಾ ಕನ್ನಡ ತಾಣವೂ ಹುಟ್ಟಿಕೊಂಡಾಗ ಏಕಕಾಲದಲ್ಲಿ ಮೂರೂ ತಾಣಗಳ ಸಂಪಾದಕೀಯ ಮುಖ್ಯಸ್ಥನಾಗಿ ಮತ್ತು ಅದರ ಹುಟ್ಟಿಗೆ ಕಾರಣನಾದ ವ್ಯಕ್ತಿಯಾಗಿದ್ದು ಅನ್ಯತ್ರ ಅಲಭ್ಯವಾದ ಭಾಗ್ಯ. ತಮಿಳು ತಲೆಗಳ ನಡುವೆ ಕನ್ನಡ ಕಟ್ಟಿದ ಕಾಯಕದ ಹೆಮ್ಮೆ ನನ್ನದು.
ಒಮ್ಮೆ ವಿಜಯ ಕರ್ನಾಟಕ ತೊರೆದು ಚೆನ್ನೈ ಸೇರಿ ಈ ಅನುಭವ ಪಡೆದ ನನಗೆ ಮತ್ತೆ ಅದೇ ಸಂಸ್ಥೆಯಿಂದಲೇ ಕರೆ ಬಂದಾಗ ಹೊಸ ಸಾಧನೆಯ ಮೆಟ್ಟಿಲು ಸಿಕ್ಕಿತೆಂದು ಖುಷಿ ಪಟ್ಟಿದ್ದೆ. ವೆಬ್‌ಸೈಟ್ ರೂಪುಗೊಳ್ಳಲು ಸುಮಾರು ಆರು ತಿಂಗಳು ಅವಿರತ ಶ್ರಮ.
ಈ ಕಾಯಕದ ನಡುವೆಯೇ, ಅಂದಿನ ಸಂಪಾದಕ ಸುಗತ ಶ್ರೀನಿವಾಸರಾಜು ಅವರು ನನ್ನ ಬರವಣಿಗೆಯನ್ನು ನೋಡಿ, ಅದರ ದಿಕ್ಕನ್ನು ತಂತ್ರಜ್ಞಾನದತ್ತ ಹೊರಳಿಸಿದರು. ಆಗಷ್ಟೇ ಅವರು ಸಂಪಾದಕರಾಗಿ ಬಂದಿದ್ದರು ಮತ್ತು ಅವರೂ ನನ್ನನ್ನು ಬಹುಶಃ ಟೆಕ್ಕೀ ಅಂತ ತಿಳಿದುಕೊಂಡಿದ್ದರೋ ಏನೋ… ಅಂತೂ ಅದೊಂದು ಶುಭ ಘಳಿಗೆಯಲ್ಲಿ, ತಂತ್ರಜ್ಞಾನದ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಯ ಕುರಿತ ಕಾಲಂ ಒಂದು ಶುರು ಮಾಡಿ ಅಂದುಬಿಟ್ಟರು. ನನ್ನಿಂದಾದೀತೋ ಎಂಬ ಅಳುಕಿತ್ತು. ಸರಿ ಅಂತ ಒಪ್ಪಿಕೊಂಡು, ಸ್ವಲ್ಪ ಸಮಯ ಕೊಡಿ ಅಂತ ಕೇಳಿಕೊಂಡೆ. ಕಾಲಂಗೆ ಹೆಸರೂ ನೀವೇ ಕೊಡಿ ಅಂದುಬಿಟ್ರು ಅವರು. ಯೋಚಿಸಿದ ಬಳಿಕ, ಮಾಹಿತಿ@ತಂತ್ರಜ್ಞಾನ ಅಂತ ಹೇಳಿದಾಗ, ಒಪ್ಪಿಕೊಂಡು ಬಿಟ್ರು. ಯಾಕೆಂದರೆ, ನಮ್ಮ ಆನ್‌ಲೈನ್ ವ್ಯಕ್ತಿತ್ವವನ್ನು ರೂಪಿಸುವುದು ಇಮೇಲ್‌ಗಳು. ಉದಾಹರಣೆಗೆ ಅವಿನಾಶ್@ವಿಜಯಕರ್ನಾಟಕ ಅಂತ ಅಲ್ಲವೇ? ಅಂದರೆ, ವಿಜಯ ಕರ್ನಾಟಕದಲ್ಲಿ ಅವಿನಾಶ್ ಅಂತಾಗುತ್ತದೆ. ನಿಮ್ಮ ಇಮೇಲ್ ವಿಳಾಸವೂ XYZ@gmail.com ಅಂತ ಇರುತ್ತದೆ. ಅಂದರೆ ಜಿಮೇಲ್‌ನಲ್ಲಿ XYZ ಅಂತ. ಅದೇ ರೀತಿ, ತಂತ್ರಜ್ಞಾನದ ಕುರಿತು ಮಾಹಿತಿ ನೀಡುವ ಮಾಹಿತಿ@ತಂತ್ರಜ್ಞಾನ ಅಂತ. ಆದರೆ ಮೊದಲೇ ಹೇಳಿದ್ದೆ, ನಾನೇನೂ ಟೆಕ್ಕಿಯಲ್ಲ, ಹೀಗಾಗಿ, ಇದು ಜನಸಾಮಾನ್ಯರಿಗಾಗಿ ಈ ಮಾಹಿತಿ ಅಂತ.
ಅದು 2012ರ ಆಗಸ್ಟ್ 27 ಸೋಮವಾರ. ಸ್ಯಾಮ್ಸಂಗ್ ಹಾಗೂ ಆ್ಯಪಲ್ ಕಂಪನಿಗಳ ನಡುವೆ ಸ್ಮಾರ್ಟ್ ಫೋನ್ ಫೀಚರ್‌ಗಳನ್ನು ನಕಲು ಮಾಡಿದ ಬಗೆಗೊಂದು ಯುದ್ಧ ನಡೆಯುತ್ತಿತ್ತು. ಅದನ್ನೇ ಎತ್ತಿಕೊಂಡು ಪುಟ್ಟ ಅಂಕಣ ಬರೆದೆ. ಹಿಂದೆ ಅದೆಷ್ಟೋ ಲೇಖನಗಳನ್ನು ಬರೆದಿದ್ದರೂ ಅಂಕಣವಾಗಿ ಅದು ನನ್ನ ಮೊದಲ ಹೆಜ್ಜೆ. ಅಲ್ಲಿಂದ ಇಂದಿನವರೆಗೂ, ಪತ್ರಿಕೆಯಲ್ಲಿ ಭರಪೂರ ಮಾಹಿತಿ ನೀಡುವುದಕ್ಕಾಗಿ ಮತ್ತು ಬೇರೆ ವಿಶೇಷ ಪುಟದ ಅಗತ್ಯವಿದ್ದಾಗಲಷ್ಟೇ ನನ್ನ ಅಂಕಣವು ಮಿಸ್ ಆಗಿದ್ದಿರಬಹುದು ಅಥವಾ ಸೋಮವಾರದ ಬದಲು ಮಂಗಳವಾರ, ಬುಧವಾರ ಹೀಗೆ ಪ್ರಕಟವಾಗಿರಬಹುದು. ನಾನಾಗಿ ಎಂದಿಗೂ ತಪ್ಪಿಸಿಕೊಂಡವನಲ್ಲ. ಇದು ನಿರಂತರ ಬರವಣಿಗೆಯ ಯಜ್ಞ ಸಾಗಿದ ಕಥೆ.
ಆರಂಭದಲ್ಲಿ ಗೊತ್ತುಗುರಿ ನಿರ್ಧಾರವಾಗದೇ ಇದ್ದ ಈ ಅಂಕಣವು ಜನಸಾಮಾನ್ಯರಿಗಾಗಿ ಮಾಹಿತಿ ತಂತ್ರಜ್ಞಾನದ ಸುಲಭ ನೀಡುವ ಅಂಕಣವಾಗಿ ಪರಿವರ್ತನೆಯಾಗಲು ಕಾರಣ ವಿಕ ಓದುಗರ ನಿರೀಕ್ಷೆಗಳೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವು ಲೇಖನಗಳು ಬಂದ ಬಳಿಕ ಭೇಟಿಯಾದ ಹಲವರು, ವಿಶೇಷವಾಗಿ ಸಹೋದ್ಯೋಗಿಗಳು ಅದು ಹೇಗೆ-ಇದು ಹೇಗೆ ಅಂತ ಕೇಳಲಾರಂಭಿಸಿದಾಗ, ಇದೇ ಮಾಹಿತಿಯನ್ನು ಉಳಿದವರಿಗೂ ಹಂಚೋಣ ಅನ್ನಿಸಿತು. ಹೆಚ್ಚಿನ ಅಂಕಣಗಳು ಹುಟ್ಟಿದ್ದು ನನ್ನ ಪ್ರಯೋಗಗಳ ಫಲದಿಂದಾಗಿಯೇ. ಮೊಬೈಲ್ ಫೋನ್ ಅಥವಾ ಕಂಪ್ಯೂಟರಿನಲ್ಲಿ ನನ್ನ ಕೆಲಸ ಸುಲಭವಾಗಿಸಿಕೊಳ್ಳುವುದಕ್ಕಾಗಿ ನಾನು ಪ್ರಯೋಗ ಮಾಡಿ ನೋಡಿದ ತಂತ್ರಗಳು, ನನ್ನ ಒಡನಾಡಿಗಳು ಮಾಡುತ್ತಿದ್ದ ಕಾರ್ಯತಂತ್ರಗಳನ್ನು ಕೂಡ ‘ಅದು ಹೇಗೆ’ ಅಂತ ಕೇಳಿ ತಿಳಿದುಕೊಂಡು ಬರೆಯುತ್ತಿದ್ದೆ. ಜನಸಾಮಾನ್ಯರಿಗೆ ಗೊತ್ತಿಲ್ಲದ ಮತ್ತು ಅವರವರ ಫೋನುಗಳಲ್ಲಿ ಇರಬಹುದಾದ ವೈಶಿಷ್ಟ್ಯಗಳು ಮತ್ತು ಅವುಗಳನ್ನು ಹೇಗೆ ಬಳಸುವುದು ಎಂಬ ಮಾಹಿತಿ… ಇದನ್ನೇ ನೀಡುತ್ತಾ ಬಂದೆ. ಮೊಬೈಲ್‌ನಲ್ಲಿ ಹಾಗೂ ಕಂಪ್ಯೂಟರ್‌ಗಳಲ್ಲಿ ಕನ್ನಡ ಬರೆಯುವ ಬಗ್ಗೆಯಂತೂ ಸಾಕಷ್ಟು ಬಾರಿ ಬರೆದಿದ್ದೆ. ಬ್ಯಾಟರಿ ಉಳಿತಾಯ ಮಾಡುವುದು ಹೇಗೆ, ವಾಟ್ಸಾಪ್‌ನಲ್ಲಿ ಏನೇನು ವಿಶೇಷತೆಗಳಿವೆ, ಅದನ್ನು ಹೇಗೆ ಎನೇಬಲ್ ಮಾಡಿಕೊಳ್ಳುವುದು, ಕಂಪ್ಯೂಟರ್ ಅಥವಾ ಮೊಬೈಲ್ ಸ್ಲೋ ಆದರೆ ಏನು ಮಾಡಬೇಕು, ಫೇಸ್‌ಬುಕ್ ಮತ್ತು ಇತರ ತಾಣಗಳಲ್ಲಿ ನಮ್ಮ ಖಾಸಗಿತನ ಕಾಪಾಡಿಕೊಳ್ಳುವುದು ಹೇಗೆ… ಹೀಗೆ ಸಾಲು ಸಾಲು ಮಾಹಿತಿಗಳು ಜನ ಸಾಮಾನ್ಯರಿಗೆ ಅತ್ಯಗತ್ಯ ಗೊತ್ತಿರಬೇಕಾದ ಮತ್ತು ಅವರಿಗೆ ಹೇಳಿಕೊಟ್ಟರೆ ಅವರೇ ಸುಲಭವಾಗಿ ಮಾಡಬಹುದಾದ ವಿಚಾರಗಳು. ಸಣ್ಣಪುಟ್ಟ ಸಮಸ್ಯೆಗಳಿಗೆ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ರಿಪೇರಿ ಅಂಗಡಿಗಳಿಗೆ ಹೋಗಬೇಕಾಗಿಲ್ಲ, ನಾವೇ ಮಾಡಿಕೊಳ್ಳಬಹುದು ಅಂತ ಜನರಿಗೆ ತಿಳಿಸಿಕೊಡುವುದಷ್ಟೇ ನನ್ನ ಉದ್ದೇಶ. ನಾನೇ ಮಾಡಿ ನೋಡುವುದರಿಂದ ಬೇರೆಯವರೂ ಮಾಡಬಹುದೆಂಬ ಧೈರ್ಯ ನನ್ನದು.
ಅದೊಂದು ದಿನ, ಅಂಕಣಕಾರರ ಫೋಟೋ ಹಾಕಬೇಕೆಂಬ ಪದ್ಧತಿ ಆರಂಭವಾದ ಬಳಿಕವಷ್ಟೇ ಜನರು ನನ್ನನ್ನು ಹೋದಲ್ಲೆಲ್ಲಾ ಗುರುತಿಸಲಾರಂಭಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಫೋನ್‌ಗಳೂ ಬರಲಾರಂಭಿಸಿದವು. ಅಂಕಣ ಪ್ರಕಟವಾಗದಿದ್ದಾಗ ನಿರಾಶೆ ವ್ಯಕ್ತಪಡಿಸಿದವರಿದ್ದಾರೆ, ಹಲವು ಮಂದಿ ಕರೆ ಮಾಡಿ ನನ್ನಿಂದ ಮಾಹಿತಿ ಪಡೆದುಕೊಂಡವರಿದ್ದಾರೆ. ಮಂಡ್ಯ ಹಾಗೂ ಬಳ್ಳಾರಿಯಿಂದ ಮೊಬೈಲ್ ಅಂಗಡಿ ಇಟ್ಟುಕೊಂಡವರಿಬ್ಬರು ‘ಸರ್, ನಾವು ನಿಮ್ಮ ಅಭಿಮಾನಿಗಳು, ನಿಮ್ಮ ಅಂಕಣದ ಕಟಿಂಗ್ ಇಟ್ಟುಕೊಂಡಿದ್ದೇವೆ. ನಮ್ಮ ಕಸ್ಟಮರ್‌ಗಳ ಕೆಲವು ಸಮಸ್ಯೆಗಳನ್ನು ನಿಮ್ಮ ಮಾಹಿತಿಯಿಂದಲೇ ಪರಿಹರಿಸಿಕೊಟ್ಟಿದ್ದೇವೆ’ ಅಂತ ಹೇಳಿದಾಗ ಮನಸ್ಸು ತುಂಬಿಬಂದದ್ದು ಹೌದು. ನನ್ನ ಶ್ರಮ ಜನಸಾಮಾನ್ಯರಿಗೆ ತಲುಪುತ್ತದೆ, ಅವರಿಗೆ ಪ್ರಯೋಜನವಾಗುತ್ತದೆ ಎಂದಾಗ ಯಾರಿಗೆ ತಾನೇ ಸಂತೋಷವಾಗಲಾರದು?
ನೆನಪಾದ ಎರಡು ಕಾಮೆಂಟ್‌ಗಳು…
ಹೀಗೇ ನೆಂಟರಿಷ್ಟರ, ಪರಿಚಿತರ ಮನೆಗೆ, ಫಂಕ್ಷನ್‌ಗಳಿಗೆ ಹೋದಾಗ, ‘ಓ, ನಿಮ್ಮನ್ನು ಪ್ರತೀ ಸೋಮವಾರ ವಿಜಯ ಕರ್ನಾಟಕದಲ್ಲಿ ನೋಡುತ್ತೇವೆ’ ಎಂದವರಿದ್ದಾರೆ. ಒಂದಿಬ್ಬರು ಹಿರಿಯರು ಹೇಳಿದ ಮಾತು – ‘ಮೊಬೈಲ್-ಕಂಪ್ಯೂಟರ್ ಬಗ್ಗೆ ತುಂಬ ಚೆನ್ನಾಗಿ ಬರೀತೀರಿ. ಆದ್ರೆ ನಮಗಂತೂ ಅರ್ಥವೇ ಆಗುವುದಿಲ್ಲ’ ಅಂತ ಅಂದಾಗ, ಅವರ ಮಾತಿನಲ್ಲಿ ವಾಚ್ಯಾರ್ಥ ಅಲ್ಲ, ಭಾವಾರ್ಥ ಇದೆ ಎಂಬುದು ತಿಳಿಯಿತು. ಆಧುನಿಕ ತಂತ್ರಜ್ಞಾನ ಅರಗಿಸಿಕೊಳ್ಳುವುದು ಹಿರಿಯರಿಗೆ ಸ್ವಲ್ಪ ಕಷ್ಟ ಎಂಬುದು ದಿಟ. ಇಂದು ಇದ್ದ ತಂತ್ರಜ್ಞಾನ ನಾಳೆ ಇರುವುದಿಲ್ಲ. ನಾನು ಮೂರು ವರ್ಷಗಳ ಹಿಂದೆ ಬರೆದಿದ್ದನ್ನು ಮತ್ತೆ ಪ್ರಕಟಿಸಿದರೆ, ಅದು ಔಟ್‌ಡೇಟೆಡ್ ಈಗ.
ಮತ್ತೊಬ್ಬರು ಕೇಳಿದ್ದರು, ನೀವು ಇನ್ಫೋಸಿಸ್‌ನಲ್ಲಿರೋದಂತೆ, ಇಷ್ಟೆಲ್ಲ ಬರೆಯಲು ಹೇಗೆ ಟೈಮ್ ಸಿಗುತ್ತದೆ ಅಂತ! ನಾನು ವಿಜಯ ಕರ್ನಾಟಕದ ಉದ್ಯೋಗಿ ಅಂತ ಹೇಳಿದರೂ ಅವರು ನಂಬಿರಲಿಲ್ಲ!
ನಿರಂತರ ಐದು ವರ್ಷಗಳಿಂದ ನನ್ನ ಬರವಣಿಗೆಗೆ ಪ್ರಧಾನ ಕಾರಣ ವಿಜಯ ಕರ್ನಾಟಕದ ಸಂಪಾದಕರು. ನನ್ನ ವಿಕ ಪ್ರಥಮ ಇನ್ನಿಂಗ್ಸ್‌ನಲ್ಲಿ ಈಶ್ವರ ದೈತೋಟ, ವಿಶ್ವೇಶ್ವರ ಭಟ್ ಅವರು ನನ್ನನ್ನು ಬೆಳೆಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಇ.ರಾಘವನ್, ಸುಗತ ಶ್ರೀನಿವಾಸ ರಾಜು, ತಿಮ್ಮಪ್ಪ ಭಟ್, ಲವಲವಿಕೆ ಸಂಪಾದಕ ಶ್ರೀವತ್ಸ ನಾಡಿಗ್ ತುಂಬು ಸಹಕಾರ ನೀಡಿದ್ದಾರೆ. ಇವರೆಲ್ಲರೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಟ್ರೆಂಡಿಂಗ್ ವಿಷಯಗಳ ಕುರಿತಾಗಿ, ಜನ ಸಾಮಾನ್ಯರಿಗೆ ಅರ್ಥವಾಗಿಸುವ ಲೇಖನಗಳನ್ನು ಬರೆಸಿದ್ದಾರೆ. ಅದಕ್ಕೆ ತಕ್ಕಂತೆ ವಿಜಯ ಕರ್ನಾಟಕ ಸಿಇಒ ರಂಜೀತ್ ಕಾಟೆ ಅವರೂ ನನ್ನ ಮೇಲೆ ವಿಶ್ವಾಸ ತೋರಿದ್ದಾರೆ.
ಈ ತಂತ್ರಜ್ಞಾನ ಬರವಣಿಗೆಯ ಯಾನದಲ್ಲಿ, ರಾಜ್ಯಾದ್ಯಂತ ಓದುಗರು ಕಾಲ್ ಮಾಡಿ, ಅದು ಹೇಗೆ, ಇದು ಹೇಗೆ ಅಂತೆಲ್ಲಾ ಕೇಳಿದ್ದನ್ನೇ ನಾನು ಅಂಕಣವಾಗಿ ಪರಿವರ್ತಿಸಿದ್ದೇನೆ. ಅವರಿಗೆ ಅಗತ್ಯ ಕಂಡಿರುವ ತಂತ್ರಜ್ಞಾನದ ಮಾಹಿತಿಯು ರಾಜ್ಯದಲ್ಲಿರುವ ಉಳಿದೆಲ್ಲರಿಗೂ ಉಪಯೋಗವಾಗಬಹುದೆಂಬ ಆಶಾವಾದ. ಈ ಡಿಜಿಟಲ್ ಇಂಡಿಯಾ ಕ್ರಾಂತಿಯ ಸಂದರ್ಭದಲ್ಲಿ ಜನ ಸಾಮಾನ್ಯರೂ ವೆಬ್‌ಸೈಟ್ ಮಾಡಿಕೊಳ್ಳುವುದು ಹೇಗೆಂಬುದನ್ನು ಕಳೆದ ವಾರ ಹೇಳಿಕೊಟ್ಟಿದ್ದೇನೆ. ಇದಕ್ಕೆ ಹಿನ್ನೆಲೆಯೆಂದರೆ ನಾನಾಗಿ ಅನ್ಯರ ಸಹಾಯವಿಲ್ಲದೆ ರೂಪಿಸಿಕೊಂಡಿರುವ avinasha.net ವೆಬ್‌ಸೈಟು. ಅದು ನನ್ನ ಬ್ಲಾಗನ್ನೇ (avisblog.wordpress.com) ಪರಿವರ್ತಿಸಿದ್ದು!
ಈ ಪರಿಯಾಗಿ ಪ್ರಶ್ನೆ ಕೇಳುತ್ತಲೇ ಅಂಕಣಕ್ಕೆ ಐಡಿಯಾ ಕೊಟ್ಟು ಬರವಣಿಗೆಗೆ ಸ್ಫೂರ್ತಿಯಾಗುತ್ತಿರುವ ಎಲ್ಲ ಉತ್ಸಾಹೀ ಓದುಗರಿಗೆ, ಸಹೋದ್ಯೋಗಿಗಳಿಗೆ ಕೃತಜ್ಞತೆಗಳು.