ಪುಸ್ತಕ, ಪೋಸ್ಟರ್, ಆಮಂತ್ರಣ ವಿನ್ಯಾಸಕ್ಕೂ ಲಭ್ಯವಿದೆ Unicode ಬೆಂಬಲಿತ ಅಕ್ಷರಶೈಲಿ ವೈವಿಧ್ಯ

0
299

ತಂತ್ರಜ್ಞಾನದ ಪ್ರಗತಿಯ ಜತೆಗೇ ಹೆಜ್ಜೆ ಹಾಕುತ್ತಾ ಭಾಷೆಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿರುವುದು Unicode ಶಿಷ್ಟತೆ. ಇದೇನು ಯೂನಿಕೋಡ್? ಅರ್ಥವಾಗುತ್ತಿಲ್ಲ ಎನ್ನುವವರಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಹೇಳುವುದಾದರೆ, ಯೂನಿಕೋಡ್ ಬೆಂಬಲಿಸುವ ಅಕ್ಷರದಲ್ಲಿ ಪಡಿಮೂಡಿಸಿದ ಯಾವುದೇ ಲೇಖನವನ್ನು ಓದಲು, ಬರೆಯಲು ಪ್ರತ್ಯೇಕವಾದ ತಂತ್ರಾಂಶದ ಅಗತ್ಯವೇ ಇರುವುದಿಲ್ಲ.

ಸ್ನೇಹಿತರೊಬ್ಬರು ಕಳುಹಿಸಿದ ಪಠ್ಯ (ಮೈಕ್ರೋಸಾಫ್ಟ್ ವರ್ಡ್ ಫೈಲ್‌ನಲ್ಲಿ ಅಥವಾ ನೇರವಾಗಿ ಇಮೇಲ್‌ನಲ್ಲಿ) ನಿಮ್ಮ ಕಂಪ್ಯೂಟರ್‌ನಲ್ಲಿ ಅಥವಾ ಮೊಬೈಲ್ ಫೋನ್‌ನಲ್ಲಿ ಓದಲಾಗುತ್ತಿಲ್ಲ. ಅದೇನೋ ಅರ್ಥಹೀನ, ಚಿತ್ರವಿಚಿತ್ರ ಆಕಾರದಲ್ಲಿರುವ (ಜಂಕ್) ಅಕ್ಷರಗಳಷ್ಟೇ ಕಾಣಿಸುತ್ತವೆ ಎಂದು ಅವರಿಗೆ ಹೇಳಿದರೆ, ‘ನನ್ನ ಕಂಪ್ಯೂಟರಿನಲ್ಲಿ ಸರಿಯಾಗಿಯೇ ಕಾಣಿಸುತ್ತಿದೆ’ ಅನ್ನುತ್ತಾರೆ ಅವರು. ಇದರ ಪರಿಹಾರಕ್ಕಾಗಿ, ಅವರು ಯಾವ ಫಾಂಟ್ ಅಥವಾ ಅಕ್ಷರಶೈಲಿ ಬಳಸಿ ಆ ಪಠ್ಯ (Text) ರಚಿಸಿದ್ದಾರೋ, ಅದೇ ಫಾಂಟ್ ಅನ್ನು ನಮ್ಮ ಕಂಪ್ಯೂಟರಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಆಗ ಇದೇ ಜಂಕ್ ಮಾದರಿಯ ಅಕ್ಷರಗಳು ನಮ್ಮ ಕಂಪ್ಯೂಟರಿನಲ್ಲೂ ಸರಿಯಾಗಿಯೇ ಕಾಣಿಸುತ್ತವೆ. ಹಿಂದೆ ನುಡಿ, ಬರಹ, ಆಕೃತಿ, ಶ್ರೀಲಿಪಿ ಮುಂತಾದ ಸಂಸ್ಥೆಗಳು ಒದಗಿಸಿದ್ದ ಫಾಂಟ್‌ಗಳನ್ನು ಬಳಸಿದವರಿಗೆ ಇದರ ಅನುಭವ ಆಗಿರಬೇಕು.

ಆದರೆ, ಯೂನಿಕೋಡ್ ಶಿಷ್ಟತೆಯ (Standard) ಅಕ್ಷರಶೈಲಿಯನ್ನು ಉಪಯೋಗಿಸಿ ಬರೆದ ಪಠ್ಯ ಓದುವುದಕ್ಕೆ ಇಂಥ ಕಸರತ್ತು ಯಾವುದೂ ಬೇಕಾಗುವುದಿಲ್ಲ. ಮೊಬೈಲಿನಲ್ಲಿ, ಲ್ಯಾಪ್‌ಟಾಪ್-ಕಂಪ್ಯೂಟರ್‌ಗಳಲ್ಲಿ, ಟ್ಯಾಬ್ಲೆಟ್‌ನಲ್ಲಿ – ಹೀಗೆ ಎಲ್ಲೇ ಆದರೂ ಅದನ್ನು ನಿರ್ಭಿಡೆಯಿಂದ, ನಿರಾತಂಕವಾಗಿ ಓದಬಹುದು. ವಿಂಡೋಸ್, ಐಒಎಸ್, ಆಂಡ್ರಾಯ್ಡ್ – ಯಾವುದೇ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕೂಡ ನಾವು ಯಾವುದೇ ಪಠ್ಯವನ್ನು, ಯಾವುದೇ ವಿಶೇಷ ತಂತ್ರಜ್ಞಾನ ಅಳವಡಿಸದೆಯೇ ಓದಲು ಸಾಧ್ಯವಾಗಿರುವುದು ಯೂನಿಕೋಡ್ ಎಂಬ ಜಾಗತಿಕ ಅಥವಾ ಸಾರ್ವತ್ರಿಕ ಶಿಷ್ಟತೆಯು ಜಾರಿಗೆ ಬಂದ ಬಳಿಕ.

ಒಟ್ಟಿನಲ್ಲಿ ಹೇಳುವುದಾದರೆ, ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳ, ಫ್ರೆಂಚ್, ಅರೆಬಿಕ್, ಚೀನೀ ಮುಂತಾಗಿ ಯೂನಿಕೋಡ್ ಬೆಂಬಲಿಸುವ ಯಾವುದೇ ಭಾಷೆಯಲ್ಲಿರುವ ಪಠ್ಯವನ್ನು ಓದುವುದಕ್ಕೆ ಪ್ರತ್ಯೇಕ ಫಾಂಟ್ ಅಥವಾ ತಂತ್ರಾಂಶ ಅಳವಡಿಸಿಕೊಳ್ಳುವ ಅವಶ್ಯಕತೆಯಿಲ್ಲದ ಸಾರ್ವತ್ರಿಕ (ಯೂನಿವರ್ಸಲ್) ವ್ಯವಸ್ಥೆಯೇ ಯೂನಿಕೋಡ್.

ಅಕ್ಷರ ವಿನ್ಯಾಸ ವೈವಿಧ್ಯ

ಗೂಗಲ್ ಒದಗಿಸುತ್ತಿರುವ ವೈವಿಧ್ಯಮಯ ಶೈಲಿಯ ಯೂನಿಕೋಡ್ ಬೆಂಬಲಿಸುವ ಕನ್ನಡ ಫಾಂಟುಗಳು

ಆದರೆ ಯೂನಿಕೋಡ್ ವ್ಯವಸ್ಥೆ ಜಾರಿಗೆ ಬಂದ ಆರಂಭದಲ್ಲಿ ಮುದ್ರಕರು, ಪ್ರಕಾಶಕರಾಗಲೀ, ಮಾಧ್ಯಮಗಳು, ಪುಟ ವಿನ್ಯಾಸಕಾರರೆಲ್ಲ ಯೂನಿಕೋಡ್ ಬಳಸಲು ಹಿಂಜರಿಯುತ್ತಿದ್ದರು. ಇದಕ್ಕೆ ಪ್ರಧಾನ ಕಾರಣವೆಂದರೆ, ಯೂನಿಕೋಡ್ ಬೆಂಬಲಿಸುವ ಸುಂದರವಾದ ಅಕ್ಷರ ವಿನ್ಯಾಸಗಳ ಸಂಖ್ಯೆ ಸೀಮಿತವಾಗಿದ್ದುದು. ಯಾವುದೇ ಪುಟವನ್ನು ಆಕರ್ಷಕಗೊಳಿಸಲು ಅಥವಾ ಸುಂದರವಾದ ಆಮಂತ್ರಣ ಪತ್ರಿಕೆಯನ್ನೋ, ಉತ್ತಮವಾದ ಜಾಹೀರಾತನ್ನೋ ಕೊಡಬೇಕಿದ್ದರೆ, ವೈವಿಧ್ಯಮಯವಾದ ಅಕ್ಷರ ವಿನ್ಯಾಸಗಳ ಅಗತ್ಯವಿದೆ. ಅಂಥ ವೈವಿಧ್ಯವು ಯೂನಿಕೋಡ್‌ನಲ್ಲಿ ಇರಲಿಲ್ಲವೆಂಬುದೇ ತೊಡಕಾಗಿತ್ತು. ಆರಂಭದಲ್ಲಿ ಕನ್ನಡಕ್ಕೆ ಇದ್ದುದು ತುಂಗಾ ಹೆಸರಿನ ಫಾಂಟ್ ಅಥವಾ ಅಕ್ಷರಶೈಲಿ. ಆದರೆ, ASCII (American Standards Code for Information Interchange) ಶಿಷ್ಟತೆಯಲ್ಲಿ ಕೆಲಸ ಮಾಡುತ್ತಿದ್ದ ನುಡಿ, ಬರಹ, ಶ್ರೀಲಿಪಿ ಮುಂತಾದ ವ್ಯವಸ್ಥೆಯಲ್ಲಿ ವೈವಿಧ್ಯಮಯವಾದ ಸುಂದರ, ಆಕರ್ಷಕವಾದ ಅಕ್ಷರ ವಿನ್ಯಾಸಗಳಿದ್ದವು. ಇದಕ್ಕಾಗಿಯೇ ಅವು ಮುದ್ರಕರ, ವಿನ್ಯಾಸಕಾರರ ಜನಪ್ರಿಯ ಆಯ್ಕೆಯಾಗಿದ್ದವು.

ಆದರೆ, ಈಗ ಕಾಲ ಬದಲಾಗಿದೆ. ಯೂನಿಕೋಡ್ ಬೆಂಬಲಿಸುವ ಅಕ್ಷರಶೈಲಿಗಳು ಅಥವಾ ಫಾಂಟ್‌ಗಳು ಸಾಕಷ್ಟು ಬಂದಿವೆ. ಇದರ ಬಗೆಗೆ ಪ್ರಕಾಶಕರಿಗಾಗಲೀ, ಡಿಸೈನರುಗಳಿಗಾಗಲೀ ಮಾಹಿತಿ ಇಲ್ಲದಿರುವುದಷ್ಟೇ ತೊಡಕಾಗಿದೆ.

ಬಂದಿವೆ ಆಕರ್ಷಕ ಫಾಂಟ್ಸ್
ಯೂನಿಕೋಡ್ ಬೆಂಬಲಿಸುವ ವೈವಿಧ್ಯಮಯ ಫಾಂಟುಗಳ ಅಭಿವೃದ್ಧಿಗೆ ಕನ್ನಡ ಪ್ರೇಮಿ ತಂತ್ರಜ್ಞರು ಸಾಕಷ್ಟು ಫಾಂಟ್‌ಗಳನ್ನು ಅಭಿವೃದ್ದಿಪಡಿಸಿದ್ದಾರೆ. ತಂತ್ರಜ್ಞಾನ ದಿಗ್ಗಜ ಸಂಸ್ಥೆ ಗೂಗಲ್ ಕೂಡ ಇಂತಹ ಕೆಲವೊಂದು ಫಾಂಟ್‌ಗಳನ್ನು ಮುಕ್ತವಾಗಿ ಒದಗಿಸುತ್ತಿದೆ. ಉದಾಹರಣೆಗೆ, ಬಾಲು ತಮ್ಮ 2, ನೋಟೋ ಸಾನ್ಸ್ ಕನ್ನಡ, ಟಿರೋ ಕನ್ನಡ, ಅನೇಕ ಕನ್ನಡ, ಅಕಯ ಕನಡಕ, ಬೆಣ್ಣೆ, ಹುಬ್ಬಳ್ಳಿ, ನೋಟೋ ಸೆರಿಫ್ ಕನ್ನಡ – ಮುಂತಾದ ಯೂನಿಕೋಡ್ ಬೆಂಬಲಿತ ಕನ್ನಡ ಫಾಂಟುಗಳೆಲ್ಲವೂ ವೈವಿಧ್ಯಮಯ ವಿನ್ಯಾಸದಿಂದ ಗಮನ ಸೆಳೆಯುತ್ತಿದ್ದು, ಗೂಗಲ್ ಇದನ್ನು ಎಲ್ಲರಿಗೂ ಉಚಿತವಾಗಿ ನೀಡುತ್ತಿದೆ. (fonts.google.com ಗೆ ಹೋಗಿ, ಕನ್ನಡ ಭಾಷೆ ಆಯ್ಕೆ ಮಾಡಿಕೊಂಡರೆ ಇವುಗಳು ಕಾಣಿಸುತ್ತವೆ ಮತ್ತು ನಮ್ಮ ಸಿಸ್ಟಂಗೆ ಡೌನ್‌ಲೋಡ್ ಮಾಡಿಕೊಂಡರೆ, ಅಥವಾ ಅಲ್ಲೇ ಯಾವುದಾದರೂ ಪದ, ವಾಕ್ಯವನ್ನು ಟೈಪ್ ಮಾಡಿಕೊಂಡು, ನಮಗೆ ಬೇಕಾದ ಅಕ್ಷರ ವಿನ್ಯಾಸ, ಗಾತ್ರ ಆಯ್ಕೆ ಮಾಡಿಕೊಂಡು, ಯಾವುದಾದರೂ ಅಕ್ಷರವನ್ನು ಸುಂದರವಾಗಿ ಪಡಿಮೂಡಿಸಬಹುದು).

ನುಡಿ, ಬರಹಗಳು ಕೂಡ ಯೂನಿಕೋಡ್ ಫಾಂಟ್‌ಗಳನ್ನು ಬಳಸಲಾರಂಭಿಸಿರುವುದು ಅದರ ಮಹತ್ವವನ್ನು ಸಾರುತ್ತದೆ. ಜೊತೆಗೆ, ಅಕ್ಷರ, ಕೇದಗೆ, ಸಂಪಿಗೆ, ನವಿಲು, ಮಲ್ಲಿಗೆ, ಲೋಹಿತ್ ಕನ್ನಡ, ಶ್ರೀರಾಜು, ಉಮಾ ಮುಂತಾದ ಯೂನಿಕೋಡ್ ಬೆಂಬಲಿತ ಫಾಂಟುಗಳು ಕೂಡ ಸಾಕಷ್ಟು ಸಮಯದಿಂದ ಬಳಕೆಯಲ್ಲಿವೆ. ಕೆಲ ತಿಂಗಳ ಹಿಂದೆ ಎಟಿಎಸ್ ಬೆಂಗಳೂರು, ಎಟಿಎಸ್ ಬಂಡೀಪುರ ಹಾಗೂ ತೀರಾ ಇತ್ತೀಚೆಗೆ ಕಿಟೆಲ್ ಕನ್ನಡ ಫಾಂಟ್‌ಗಳು ಮುಕ್ತವಾಗಿ ಲಭ್ಯ ಆಗಿವೆ. ಇವೆಲ್ಲವೂ ಸುಂದರ ಹಾಗೂ ವೈವಿಧ್ಯಮಯ ಶೈಲಿಗಳಿಂದ ಗಮನ ಸೆಳೆಯುತ್ತಿದ್ದು, ಸಾಕಷ್ಟು ಪ್ರಚಾರ ದೊರೆಯುವ ಅಗತ್ಯವಿದೆ. ಕೆಲವು ಫಾಂಟುಗಳಲ್ಲಿ ಒತ್ತಕ್ಷರದ ರೆಂಡರಿಂಗ್‌ನಲ್ಲಿ ಸಣ್ಣಪುಟ್ಟ ತೊಡಕುಗಳಿವೆಯಾದರೂ, ಹೆಚ್ಚಿನವುಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಅಕ್ಷರ ಗೋಚರವಾಗುತ್ತದೆ. ಯೂನಿಕೋಡ್ ಬೆಂಬಲಿತ ಫಾಂಟ್ಸ್ ಬಳಸಿಯೇ ಪುಸ್ತಕಗಳು, ಜಾಹೀರಾತುಗಳು, ಆಮಂತ್ರಣ ಪತ್ರಿಕೆಗಳು ಮುದ್ರಣ ಕಾಣುತ್ತಿವೆ.

ಯೂನಿಕೋಡ್ ಬೆಂಬಲಿಸುವ ವೈವಿಧ್ಯಮಯ ವಿನ್ಯಾಸದ ಫಾಂಟ್‌ಗಳನ್ನು ಸ್ವಯಂಪ್ರೇರಣೆಯಿಂದ ಅಭಿವೃದ್ಧಿಪಡಿಸಿರುವುದು ನಮ್ಮ ಹೆಮ್ಮೆಯ ಕನ್ನಡ ತಂತ್ರಜ್ಞರು. ಇದಕ್ಕೆ ನೂರಾರು ಗಂಟೆಗಳ ಶ್ರಮವಿರುತ್ತದೆ, ಸಂಪನ್ಮೂಲದ ಸಮಸ್ಯೆಯೂ ಇರುತ್ತದೆ, ಮತ್ತು ಫಾಂಟ್ ಡೆವಲಪ್ ಮಾಡುವುದಕ್ಕೆ ಸಾಕಷ್ಟು ಪರಿಣತಿಯೂ ಬೇಕು.

ಪ್ರಜಾವಾಣಿ ಪತ್ರಿಕೆಯು ತಜ್ಞರ ಮೂಲಕವಾಗಿ ತನ್ನದೇ ಆದ ಯೂನಿಕೋಡ್ ಫಾಂಟ್ ಅಭಿವೃದ್ಧಿಪಡಿಸಿಕೊಂಡು ಈಗಾಗಲೇ ಪತ್ರಿಕೆಯ ಮುದ್ರಣಕ್ಕೆ ಬಳಸುತ್ತಿದೆ ಮತ್ತು ಇದರ ಬಳಕೆಯು ಸುದ್ದಿ-ಮಾಹಿತಿಯ ರವಾನೆಗೆ, ಅನುಕೂಲ ಕಲ್ಪಿಸಿದೆ. ಪ್ರಜಾವಾಣಿ ಪತ್ರಿಕೆಯ ಸುಂದರ ವಿನ್ಯಾಸದ ಅನನ್ಯತೆಗೆ ಕಾರಣವೇ ಈ ಸ್ವಂತದ್ದಾದ ಫಾಂಟ್.

ಯೂನಿಕೋಡ್‌ನ ಲಾಭ
ಯೂನಿಕೋಡ್‌ನ ಅತ್ಯಂತ ದೊಡ್ಡ ಲಾಭವೆಂದರೆ, ಯಾವುದೇ ಒಂದು ಫೈಲ್ ಅಥವಾ ಸಿಸ್ಟಂನಲ್ಲಿ ನಮಗೆ ಬೇಕಾದ ಲೇಖನವನ್ನು, ಪದವನ್ನು ಹುಡುಕುವುದು ಮತ್ತು (ಬೇಕಿದ್ದರೆ) ಬದಲಿಸುವುದು (Find and Replace). ಇದರ ಜೊತೆಗೆ, ಪಠ್ಯದಿಂದ ಧ್ವನಿಗೆ (Text to Speech), ಧ್ವನಿಯಿಂದ ಪಠ್ಯಕ್ಕೆ (Speech to Text) ಬದಲಿಸುವ ವ್ಯವಸ್ಥೆಯನ್ನು ಯೂನಿಕೋಡ್ ಸಮರ್ಥವಾಗಿ ಬೆಂಬಲಿಸುವ ಕಾರಣದಿಂದಲೇ ಇಂದು ಓದಲು ಕಷ್ಟವಿರುವವರು (ದೃಷ್ಟಿ ದೋಷವಿರುವವರು) ಫೋನ್ ಮೂಲಕ ಯಾವುದೇ ಪುಟವನ್ನು, ಫೋನ್‌ಗೆ ಬಂದ ಎಸ್ಎಂಎಸ್ ಸಂದೇಶವನ್ನು ಯಾವುದೇ ಸಮಸ್ಯೆಯಿಲ್ಲದೆ ಕೇಳಿಸಿಕೊಳ್ಳುತ್ತಾರೆ. ಅಲ್ಲದೆ, ಬರೆಯಲು ಕಷ್ಟವಾದವರು ಫೋನ್‌ಗೆ ಹೇಳುವ ಮೂಲಕವೇ ಅಕ್ಷರ ಮೂಡಿಸಲು ಸಾಧ್ಯವಾಗಿರುವುದು. ಇದೇ ಆಧಾರದಲ್ಲಿ ಆಧುನಿಕ ಧ್ವನಿ ಸಹಾಯಕ (ವಾಯ್ಸ್ ಅಸಿಸ್ಟೆನ್ಸ್) ತಂತ್ರಜ್ಞಾನ ಬೆಳೆದಿದ್ದು, ಗೂಗಲ್ ಅಸಿಸ್ಟೆಂಟ್, ಆ್ಯಪಲ್ ಸಿರಿ, ಅಮೆಜಾನ್ ಅಲೆಕ್ಸಾ, ಸ್ಯಾಮ್‌ಸಂಗ್ ಬಿಕ್ಸ್‌ಬಿಗಳನ್ನು ಜನ ಸುಲಭವಾಗಿ ಬಳಸುತ್ತಿದ್ದಾರೆ. ಇಷ್ಟಲ್ಲದೆ, ಯಾವುದೇ ಒಂದು ಫಲಕದ ಮೇಲಿರುವ ಅಥವಾ ಪಿಡಿಎಫ್/ಫೊಟೋ ರೂಪದಲ್ಲಿರುವ ಕನ್ನಡ ಅಕ್ಷರಗಳನ್ನು ಫೋನ್ ಮೂಲಕ ಸೆರೆಹಿಡಿದು ಅದನ್ನು ಪಠ್ಯ ರೂಪಕ್ಕೆ ಪರಿವರ್ತಿಸಲು ನೆರವಾಗುವ ಒಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಬೆಂಬಲಿಸುವುದು ಕೂಡ ಯೂನಿಕೋಡ್ ಶಿಷ್ಟತೆಯನ್ನೇ. ASCII ಫಾಂಟ್‌ನಲ್ಲಿ ಈ ಪರಿಯ ಅನುಕೂಲಗಳ ಲಭ್ಯತೆ ಕಷ್ಟ.

ಪ್ರಕಾಶಕರು, ವಿನ್ಯಾಸಕಾರರು ಕೂಡ ತಮ್ಮ ತಂತ್ರಜ್ಞಾನದ ಜ್ಞಾನವನ್ನು ಹೆಚ್ಚಿಸಿಕೊಂಡು, ಯೂನಿಕೋಡ್‌ನಲ್ಲಿ ಹೊಸ ಅಕ್ಷರಶೈಲಿಗಳನ್ನು ಅಳವಡಿಸಿಕೊಂಡರೆ ಮುದ್ರಣ ಕಾರ್ಯಕ್ಕೂ, ಅದೇ ಪಠ್ಯವನ್ನು ವೆಬ್ ತಾಣಗಳಲ್ಲಿ ಬಳಸುವುದಕ್ಕೂ ಅನುಕೂಲಕರ. ಯಾವುದೇ ಫಾಂಟ್ ಕನ್ವರ್ಟರ್ ಅಗತ್ಯವಿಲ್ಲದೆ ಈ ಕೆಲಸ ಮಾಡಬಹುದಾಗಿದೆ. ಇದರ ಜೊತೆಗೆ, ಕರ್ನಾಟಕ ಸರಕಾರವು ಕೂಡ ಯೂನಿಕೋಡ್ ಬೆಂಬಲಿಸುವ ವೈವಿಧ್ಯಮಯ ವಿನ್ಯಾಸದ ಫಾಂಟ್‌ಗಳ ಅಭಿವೃದ್ಧಿಗೆ, ಅದರ ಪ್ರಚಾರಕ್ಕೆ ಗಮನ ಹರಿಸಬೇಕಾಗಿದೆ.

My Tech Article published in Prajavani on 29 Nov 2022

LEAVE A REPLY

Please enter your comment!
Please enter your name here