ಆ್ಯಪಲ್ ತನ್ನ ಹೊಚ್ಚ ಹೊಸ ಐಒಎಸ್ 14 ಕಾರ್ಯಾಚರಣೆ ವ್ಯವಸ್ಥೆಯೊಂದಿಗೆ ಐಫೋನ್ 12 ಎಂಬ 2020ರ ಫ್ಲ್ಯಾಗ್‌ಶಿಪ್ ಫೋನನ್ನು ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಬಿಡುಗಡೆಗೊಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ಆಂಡ್ರಾಯ್ಡ್-ಪ್ರಿಯರನ್ನು ಸೆಳೆದುಕೊಳ್ಳುವ ಗುರಿಯೊಂದಿಗೆ ಮಾಡಲಾಗಿರುವ ಕೆಲವೊಂದು ವೈಶಿಷ್ಟ್ಯಗಳು ಗಮನ ಸೆಳೆಯುತ್ತವೆ. ರಿವ್ಯೂಗೆ ದೊರೆತ 256 GB ಡೇಟಾ ಸಂಗ್ರಹಣಾ ಸಾಮರ್ಥ್ಯದ, ಕಡು ನೀಲಿ ಬಣ್ಣದ ಆಕರ್ಷಕ ಐಫೋನ್ 12, ಎರಡು ವಾರ ಬಳಸಿದಾಗ ಹೇಗನಿಸಿತು? ಇಲ್ಲಿದೆ ಗ್ಯಾಜೆಟ್ ರಿವ್ಯೂ.
ಆಕರ್ಷಕ ವಿನ್ಯಾಸ
ಐಫೋನ್ 12 ಅನ್‌ಬಾಕ್ಸ್ ಮಾಡಿ ನೋಡಿದ ತಕ್ಷಣ ಎರಡು ಅಂಶಗಳು ಗಮನ ಸೆಳೆದವು. ಒಂದನೆಯದು, ಚಾರ್ಜಿಂಗ್ (ಪವರ್) ಅಡಾಪ್ಟರ್ ಕೊಟ್ಟಿಲ್ಲವಲ್ಲಾ ಎಂಬುದು. ಎರಡನೆಯದು, ಹತ್ತು ವರ್ಷಗಳ ಹಿಂದೆ ತನ್ನ ವಿನ್ಯಾಸದಿಂದಾಗಿಯೇ ಗಮನ ಸೆಳೆದು ಈಗಲೂ ಅಭಿಮಾನಕ್ಕೆ ಪಾತ್ರವಾಗಿರುವ ಐಫೋನ್ 4 ನಂತೆಯೇ ಇರುವ ವಿನ್ಯಾಸ. 6.1 ಇಂಚಿನ ಅಗಲವಾದ ಹಾಗೂ ಬೆಝೆಲ್ ತೀರಾ ಕಡಿಮೆ ಇರುವ ಸ್ಕ್ರೀನ್ ಗಮನ ಸೆಳೆಯುತ್ತದೆ. ಫ್ರಂಟ್ ಕ್ಯಾಮೆರಾ ಇರುವಲ್ಲಿ ‘ನಾಚ್’ (Notch) ಮಾತ್ರ ಇದೆ. ಇದರಲ್ಲಿ ಫಿಂಗರ್‌ಪ್ರಿಂಟ್ ಐಡಿ ಇಲ್ಲ ಹಾಗೂ ಹೋಂ ಬಟನ್ ಕೂಡ ಇಲ್ಲ.
ಬಾಗಿದ ವಿನ್ಯಾಸದ ಮೂಲೆಗಳು ಮತ್ತು ಶಾರ್ಪ್ ಆಗಿರುವ ಸ್ಕ್ರೀನ್ ಅಂಚುಗಳು ಅದರ ರೂಪಕ್ಕೆ ಮತ್ತಷ್ಟು ಆಕರ್ಷಣೆಯನ್ನೂ ಹೊಸ ಹೊಳಪನ್ನೂ ನೀಡಿದ್ದರೆ, ಕೈಯಲ್ಲಿ ಹಿಡಿಯುವುದಕ್ಕೂ ಉತ್ತಮ ಗ್ರಿಪ್ ಇದೆ. ಕೆಳ ಭಾಗದಲ್ಲಿ ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಹಾಗೂ ಸ್ಟೀರಿಯೋ ಸ್ಪೀಕರ್‌ಗಳಿದ್ದು, 3.5 ಮಿಮೀ ಹೆಡ್‌ಫೋನ್ ಜಾಕ್ ಇಲ್ಲ. ಐಪಿ68 ರೇಟಿಂಗ್ ಇರುವ ಧೂಳು ಮತ್ತು ಜಲನಿರೋಧಕತೆಯ ಕವಚವಿದ್ದು, ಹಿಂಭಾಗದಲ್ಲಿ ಆ್ಯಪಲ್‌ನ ಹೊಚ್ಚ ಹೊಸ ಮ್ಯಾಗ್‌ಸೇಫ್ (MagSafe) ತಂತ್ರಜ್ಞಾನ ಬೆಂಬಲಿಸುವ ಅಯಸ್ಕಾಂತೀಯ ಚಾರ್ಜಿಂಗ್ ವ್ಯವಸ್ಥೆ ಇದೆ. ಹಿಂಭಾಗದ ಗ್ಲಾಸ್ ಫಿನಿಶ್ ಹಾಗೂ ಆ್ಯಪಲ್ ಲೋಗೋ ಆಕರ್ಷಕವಾಗಿದ್ದು, ಚೌಕದೊಳಗೆ ಎರಡು ಕ್ಯಾಮೆರಾಗಳು ಮತ್ತು ಫ್ಲ್ಯಾಶ್ ಇದೆ. ಗಾಜಿನ ಫಿನಿಶ್ ಇರುವ ಹಿಂಭಾಗದ ಕವಚಕ್ಕೆ ಗೀರುಗಳಾಗುವ, ಬೆವರಿನ ಕಲೆಗಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಫೋನ್ ಕವರ್ ಬಳಸುವುದು ಸೂಕ್ತ ಅನ್ನಿಸಿತು.
ಐಫೋನ್ 12ರಲ್ಲಿ ‘ಸಿರಾಮಿಕ್ ಶೀಲ್ಡ್’ ಹೆಸರಿನ ರಕ್ಷಾ ಕವಚವೊಂದನ್ನು ಅಳವಡಿಸಲಾಗಿದೆ. ಅಂದರೆ, ಕೆಳಗೆ ಬಿದ್ದರೆ ಹಾನಿಯಾಗದಿರುವ ಸಾಧ್ಯತೆಗಳು ಹಿಂದಿನದಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು ಅಂತ ಆ್ಯಪಲ್ ಹೇಳಿಕೊಳ್ಳುತ್ತದೆ. ಜೊತೆಗೆ ವಿಮಾನದಲ್ಲಿ ಬಳಸುವ ಅತ್ಯುತ್ತಮ ಗುಣಮಟ್ಟದ ಅಲ್ಯುಮೀನಿಯಂ ಅಂಚುಗಳು ಆಕರ್ಷಕವಾಗಿವೆ. ಇನ್‌ಬಿಲ್ಟ್ ಕನ್ನಡ ಕೀಬೋರ್ಡ್ ಇದೆಯಾದರೂ, ಆಂಡ್ರಾಯ್ಡ್ ಬಳಸಿದವರಿಗೆ ಹೆಚ್ಚು ಆಪ್ತವಾಗಿದ್ದ, ಕನ್ನಡಿಗ ಶ್ರೀಧರ್ ನಾಗರಾಜ್ ಒದಗಿಸಿದ ಜಸ್ಟ್ ಕನ್ನಡ ಆ್ಯಪ್ ಈಗ ಐಫೋನ್‌ಗಳಿಗೂ ಲಭ್ಯವಾಗಿರುವುದರಿಂದ, ಐಫೋನ್ ಮತ್ತಷ್ಟು ಆಪ್ತವಾಗುತ್ತದೆ.
ಏನು ಹೆಚ್ಚುಗಾರಿಕೆ?
ಐಫೋನ್ 11ರಲ್ಲಿ ಎಲ್‌ಸಿಡಿ (ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ) ಸ್ಕ್ರೀನ್ ಇದ್ದರೆ, ಐಫೋನ್ 12ರಲ್ಲಿ OLED (ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್) ಡಿಸ್‌ಪ್ಲೇ ಇದೆ. ಸೂಪರ್ ರೆಟಿನಾ XDR ತಂತ್ರಜ್ಞಾನದ, ಅತ್ಯಾಧುನಿಕ ಮತ್ತು ನಿಖರವಾಗಿರುವ ಚಿತ್ರ-ವಿಡಿಯೊಗಳನ್ನು ತೋರಿಸಲು 2532×1170 ಪಿಕ್ಸೆಲ್ ಸಾಮರ್ಥ್ಯದ OLED ಡಿಸ್‌ಪ್ಲೇ ಸಮರ್ಥವಾಗಿದೆ. ಐಫೋನ್ 12 ಪ್ರೋ ಎಂಬ ಮತ್ತೊಂದು ಪ್ರೀಮಿಯಂ ಫೋನ್‌ನಲ್ಲಿರುವುದೂ ಇದೇ OLED ಸ್ಕ್ರೀನ್. ಚಿತ್ರಗಳು ಹೆಚ್ಚು ಶಾರ್ಪ್ ಆಗಿ ಗೋಚರಿಸುತ್ತವೆ. ಎಲ್‌ಸಿಡಿಗಿಂತ ಒಲೆಡ್ ಯಾವತ್ತೂ ಶ್ರೇಷ್ಠವೇ. ವಿಡಿಯೊ ಪ್ಲೇ ಮಾಡುವಾಗ, ಮೊಬೈಲ್ ಗೇಮ್ಸ್ ಆಡುವಾಗ ಇದರ ಶ್ರೇಷ್ಠತೆ ಅನುಭವಕ್ಕೆ ಬರುತ್ತದೆ.
ಇದರಲ್ಲಿ ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆ ಇಲ್ಲ. ಬದಲಾಗಿ, ಫೇಸ್ ಐಡಿ ಅಂದರೆ ಮುಖ ಗುರುತಿಸಿ ಸ್ಕ್ರೀನ್ ಅನ್‌ಲಾಕ್ ಮಾಡುವ ವ್ಯವಸ್ಥೆಯಂತೂ ಭಾರಿ ವೇಗವಾಗಿ ಕೆಲಸ ಮಾಡುತ್ತದೆ. 5ಜಿ ನೆಟ್‌ವರ್ಕ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಡ್ಯುಯಲ್ ಸಿಮ್ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದು, ಒಂದು ಸಿಮ್ ಕಾರ್ಡ್ ಹಾಗೂ ಮತ್ತೊಂದು ಇ-ಸಿಮ್ (ಎಲೆಕ್ಟ್ರಾನಿಕ್ ಸಿಮ್ ಕಾರ್ಡ್ – ಕೋಡ್ ಮೂಲಕ ಸಕ್ರಿಯಗೊಳಿಸುವ, ಅಂತರ್‌ನಿರ್ಮಿತವಾಗಿರುವ ಚಿಪ್) ಇದೆ.
ಸ್ಕ್ರೀನ್‌ನ ರೀಫ್ರೆಶ್ ರೇಟ್ ಈಗಿನ ಅತ್ಯಾಧುನಿಕ ಆಂಡ್ರಾಯ್ಡ್ ಫೋನ್‌ಗಳಲ್ಲಿರುವ 90Hz ಅಥವಾ 120Hz ನಷ್ಟಿಲ್ಲ. ಐಫೋನ್‌ನಲ್ಲಿ 60Hz ರೀಫ್ರೆಶ್ ರೇಟ್ ಇದ್ದರೂ ಇತರ ಪೂರಕ ತಾಂತ್ರಿಕತೆಗಳಿಂದಾಗಿ ವೇಗವಾಗಿಯೇ ಕೆಲಸ ಮಾಡುತ್ತದೆ. ಶಕ್ತಿಶಾಲಿ ಗೇಮ್ಸ್ ಸುಲಲಿತವಾಗಿ ಆಟವಾಡಬಹುದಾಗಿದೆ.
ಇದರ ಸ್ಟೀರಿಯೋ ಸ್ಪೀಕರ್‌ಗಳು ಚೆನ್ನಾಗಿವೆ. ಹಾಡುಗಳು ಸ್ಪಷ್ಟವಾಗಿಯೂ, ಶಬ್ದವೂ ಸಾಕಷ್ಟು ಜೋರಾಗಿಯೇ ಇದ್ದು, ಕೊಠಡಿಯಲ್ಲಿ ಆವರಿಸುವಷ್ಟು ತೀವ್ರವಾಗಿದೆ. 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಡ್ಯುಯಲ್ (ಅವಳಿ) ಕ್ಯಾಮೆರಾಗಳು ಹಿಂಭಾಗದಲ್ಲಿ ಚೌಕಾಕಾರದ ಫಲಕದಲ್ಲಿದೆ.
ಆ್ಯಪಲ್ iOS 14ರಲ್ಲಿ ತನ್ನ ಮೊಬೈಲ್ ಆಪರೇಟಿಂಗ್ ಸಿಸ್ಟಂ ಅನ್ನು ಭರ್ಜರಿಯಾಗಿ ಬದಲಾಯಿಸಿರುವುದರಿಂದ, ಐಫೋನ್ 12 ಸಾಕಷ್ಟು ಸುಧಾರಣೆಗಳೊಂದಿಗೆ ಗಮನ ಸೆಳೆಯುತ್ತದೆ. ಮುಖ್ಯವಾಗಿ ಆಂಡ್ರಾಯ್ಡ್ ಮಾದರಿಯಲ್ಲಿ, ಆ್ಯಪ್‌ಗಳನ್ನು ನಿರ್ದಿಷ್ಟ ಫೋಲ್ಡರ್‌ಗಳಲ್ಲಿ ಇರಿಸಬಹುದು, ವಿಜೆಟ್‌ಗಳೆಲ್ಲ ಹೊಸ ರೂಪದಲ್ಲಿವೆ.
ಕಂಟ್ರೋಲ್ ಸೆಂಟರ್‌ಗೆ ಹೇಗೆ ಹೋಗುವುದೆಂದು ಆರಂಭದಲ್ಲಿ ಗೊಂದಲವಾಯಿತು. ಹಿಂದಿನ ಆವೃತ್ತಿಗಳಲ್ಲಿ ಕೆಳಭಾಗದಿಂದ ಮೇಲೆ ಸ್ವೈಪ್ ಮಾಡಿದಾಗ ಶಾರ್ಟ್‌ಕಟ್ ಬಟನ್‌ಗಳಿರುವ ಕಂಟ್ರೋಲ್ ಸೆಂಟರ್ ಕಾಣಿಸುತ್ತಿತ್ತು. ಆದರೆ ಐಫೋನ್ 12ರಲ್ಲಿ ಮೇಲ್ಭಾಗದ ಬಲ ಮೂಲೆಯಿಂದ ಕೆಳಕ್ಕೆ ಸ್ವೈಪ್ ಮಾಡಿದರೆ ಕಂಟ್ರೋಲ್ ಸೆಂಟರ್ ತೆರೆಯುತ್ತದೆ. ಅದೇ ರೀತಿ, ಇತ್ತೀಚೆಗೆ ತೆರೆದು ನೋಡಿದ ಆ್ಯಪ್‌ಗಳನ್ನು, ಸ್ಕ್ರೀನ್‌ಗಳನ್ನು ನೋಡಬೇಕಿದ್ದರೆ, ಕೆಳಭಾಗದಿಂದ ನಿಧಾನವಾಗಿ ಸ್ವೈಪ್ ಮಾಡಬೇಕಾಗುತ್ತದೆ. ಇದು ಕೂಡ ಒಂದು ಟ್ರಿಕ್.
ಐಫೋನ್ 12ರಲ್ಲಿರುವ ಎ14 ಬಯೋನಿಕ್ ಚಿಪ್‌ಸೆಟ್ ಇದರ ವೇಗದ ಕಾರ್ಯಾಚರಣೆಗೆ ಸಹಕರಿಸುತ್ತಿದೆ. ಐಫೋನ್ 11 ಅಥವಾ ಐಫೋನ್ ಎಸ್ಇ 2020 ಮಾಡೆಲ್‌ಗಳಲ್ಲಿರುವ ಎ13 ಗಿಂತ ಸ್ವಲ್ಪ ವೇಗ, ಆದರೆ ಇದಕ್ಕೂ ಹಳೆಯ ಐಫೋನ್ ಬಳಸಿದವರಿಗೆ (ಐಫೋನ್ 5ಎಸ್ ನನ್ನಲ್ಲಿದ್ದು ಅದಕ್ಕೆ ಹೋಲಿಸಿದಾಗ) ಈ ಅದ್ಭುತ ವೇಗದ ಅನುಭವ ಆಗುವುದು ಖಚಿತ.
ಬ್ಯಾಟರಿ
ಹಿಂದಿನ ಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಸ್ವಲ್ಪ ಕಡಿಮೆಯಿದ್ದುದು ನಿರಾಸೆಯಾಗಿತ್ತು. ಆದರೆ ಐಫೋನ್ 12ರಲ್ಲಿ ಒಮ್ಮೆ ಚಾರ್ಜ್ ಮಾಡಿದ ಬಳಿಕ 24 ಗಂಟೆ ಬಳಕೆಗೆ ಯಾವುದೇ ಅಡೆತಡೆಯಾಗಿಲ್ಲ. ಇದರಿಂದಲೇ 2.30 ಗಂಟೆ ಫೇಸ್‌ಬುಕ್ ಲೈವ್ ಕೂಡ ಮಾಡಿ ನೋಡಿದ್ದೆ. ಅದರ ಲಿಂಕ್ ಕೆಳಗಿದೆ. ಪೂರ್ಣ ಪ್ರಮಾಣದಲ್ಲಿ ಇದ್ದ ಚಾರ್ಜ್, ಲೈವ್ ಮುಗಿದಾಗ ಶೇ.40 ಅಷ್ಟೇ ಮುಗಿದಿತ್ತು. ವಿಡಿಯೊ ಗುಣಮಟ್ಟ (ಝೂಮ್ ಮಾಡಿ, ಟ್ರೈಪಾಡ್‌ನಲ್ಲಿ ಇರಿಸಲಾಗಿತ್ತು) ಚೆನ್ನಾಗಿಯೇ ಬಂದಿದೆ. 2815 mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆಯಾದರೂ, ಆಂಡ್ರಾಯ್ಡ್‌ಗೆ ಹೋಲಿಸಿದರೆ ಚಾರ್ಜ್ ಉಳಿತಾಯ ಸಾಮರ್ಥ್ಯ ಹೆಚ್ಚಿದೆ. ಸತತವಾಗಿ ಸುಮಾರು 17 ಗಂಟೆ ವಿಡಿಯೊ ನೋಡಬಹುದು ಮತ್ತು ಸುಮಾರು 65 ಗಂಟೆಯ ಆಡಿಯೋ ಆಲಿಸಬಹುದು.
ಕ್ಯಾಮೆರಾ
ಸಂಪರ್ಕಿಸಿದವರೆಲ್ಲ ಮೊದಲು ಕೇಳುವ ಪ್ರಶ್ನೆ ಐಫೋನ್ ಕ್ಯಾಮೆರಾ ಹೇಗಿದೆ ಅಂತನೇ. ಐಫೋನ್ 12ರಲ್ಲಿರುವ ಅವಳಿ ಕ್ಯಾಮೆರಾವಂತೂ ಒಳಾಂಗಣ, ರಾತ್ರಿ ಹಾಗೂ ಹೊರಾಂಗಣಗಳಲ್ಲಿ ಹಿಂದಿನ ಫೋನ್‌ಗಳಿಗಿಂತ ಅದ್ಭುತ ಚಿತ್ರಗಳನ್ನು ಮೂಡಿಸಿದೆ. 12 ಮೆಗಾಪಿಕ್ಸೆಲ್ ಸಾಮರ್ಥ್ಯದ ವೈಡ್ ಹಾಗೂ ಅಲ್ಟ್ರಾ-ವೈಡ್ ಲೆನ್ಸ್‌ಗಳಿವೆ. ಇದರಿಂದ ವಿಶಾಲ ಪ್ರದೇಶವನ್ನು ಫೊಟೋ, ವಿಡಿಯೊದಲ್ಲಿ ಸೆರೆಹಿಡಿಯಲು ಅನುಕೂಲ. ರಾತ್ರಿ ವೇಳೆ ನೈಟ್ ಮೋಡ್ ಬಳಸಿ ತೆಗೆಯುವ ಚಿತ್ರಗಳು, ವಿಶೇಷವಾಗಿ ಸೆಲ್ಫೀ ಕೂಡ ನೈಟ್ ಮೋಡ್ ಬೆಂಬಲಿಸುತ್ತಿದ್ದು, ಅದ್ಭುತವಾಗಿ ಚಿತ್ರಗಳು ಮೂಡಿಬರುತ್ತವೆ. 2 ಪಟ್ಟು ಆಪ್ಟಿಕಲ್ ಜೂಮ್ ಇರುವುದರಿಂದ, ಸ್ವಲ್ಪ ಮಟ್ಟಿಗೆ ದೂರದಲ್ಲಿರುವ ವಸ್ತುಗಳನ್ನು ಹೆಚ್ಚು ಶಾರ್ಪ್ ಆಗಿ ಸೆರೆಹಿಡಿಯಬಹುದು. ಚಿತ್ರಗಳ ಸಹಜ ಬಣ್ಣವಂತೂ ಗಮನ ಸೆಳೆದಿದೆ. ಮಂದ ಬೆಳಕಿನಲ್ಲಿ ಚಿತ್ರಗಳ ಸ್ಪಷ್ಟತೆಯೂ ಕಣ್ಣಿಗೆ ರಾಚುವಂತಿದೆ.
ಐಫೋನ್ 12ರಲ್ಲಿ ಪ್ರಜಾವಾಣಿ ಲೈವ್ ಮಾಡಿದ ಕಾರ್ಯಕ್ರಮದ ವಿಡಿಯೊ ಇಲ್ಲಿದೆ. ಒಳಾಂಗಣದಲ್ಲಿ ನಡೆದ ಕಾರ್ಯಕ್ರಮವಿದು. ಹೆಚ್ಚುವರಿ ತಂತ್ರಗಾರಿಕೆ ಬಳಸಿಲ್ಲ.
ಚಾರ್ಜಿಂಗ್
ಇದರಲ್ಲಿ ಚಾರ್ಜಿಂಗ್ ಕೇಬಲ್ ಅಂತ ಒಂದು ಕಡೆ ಟೈಪ್-ಸಿ ಹಾಗೂ ಮತ್ತೊಂದು ಕಡೆ ಲೈಟ್ನಿಂಗ್ ಪೋರ್ಟ್ ಇರುವ ಕೇಬಲ್ ನೀಡಲಾಗಿದೆ. ಪವರ್ ಅಡಾಪ್ಟರ್ ನೀಡಿಲ್ಲರುವುದು ಕೊರತೆ ಎನಿಸಿತಾದರೂ, ಹಿಂದಿನ ಐಫೋನ್‌ಗಳ ಲೈಟ್ನಿಂಗ್ ಚಾರ್ಜರ್ ಉಪಯೋಗವಾಗುತ್ತದೆ. ಬಾಕ್ಸ್‌ನಲ್ಲಿರುವ ಕೇಬಲ್ ಬಳಸಬೇಕಿದ್ದರೆ, ಪ್ರತ್ಯೇಕ ಅಡಾಪ್ಟರ್ ಖರೀದಿಸಬೇಕಾಗುತ್ತದೆ. ಇದರ ಹೊರತಾಗಿ, ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ ಈ ಫೋನ್. ಫೋನನ್ನು ಆ್ಯಪಲ್‌ನದೇ ಮ್ಯಾಗ್‌ಸೇಫ್ ಎಂಬ ಸಾಧನದ ಮೇಲಿಟ್ಟರೆ ಚಾರ್ಜ್ ಆಗಿಬಿಡುತ್ತದೆ. ಈ ಚಾರ್ಜರ್ ಬೆಲೆ 4500 ರೂ. ಆಗಿದ್ದರೂ, ವೈರ್ ಇಲ್ಲದೆಯೇ 15 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇದು 7.5 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲಿಸುವ ಕ್ವಿ-ತಂತ್ರಜ್ಞಾನಕ್ಕಿಂತ ಹೆಚ್ಚು ಅನುಕೂಲಕರ ಮತ್ತು ಬೇಗನೇ ಚಾರ್ಜ್ ಆಗುತ್ತದೆ. ಕ್ವಿ ತಂತ್ರಜ್ಞಾನದ ವೈರ್‌ಲೈಸ್ ಚಾರ್ಜಿಂಗನ್ನೂ ಬೆಂಬಲಿಸುತ್ತದೆ. ಹಿಂಭಾಗದಲ್ಲಿ ವೃತ್ತಾಕಾರದ ಅಯಸ್ಕಾಂತೀಯ ಚಾರ್ಜಿಂಗ್ ಪ್ರದೇಶವಿದ್ದು, ಚಾರ್ಜರ್‌ಗೆ ಖಚಿತವಾಗಿ ಅಂಟಿಕೊಳ್ಳುತ್ತದೆ.
ಒಟ್ಟಾರೆ ಹೇಗಿದೆ
ಎ14 ಬಯೋನಿಕ್ ಪ್ರೊಸೆಸರ್ ಈ ಫೋನ್‌ನ ಕಾರ್ಯಕ್ಷಮತೆಗೆ ಮೂಲಾಧಾರ. ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನಗಳು ಆಕರ್ಷಕ ಫೋಟೊ ಮತ್ತು ವಿಡಿಯೊ ಒದಗಿಸುತ್ತದೆ. ಸುಂದರ ವಿನ್ಯಾಸವೂ ಐಫೋನ್ 12ರ ಪ್ಲಸ್ ಪಾಯಿಂಟ್. ಅಡಾಪ್ಟರ್ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಖಾಸಗಿತನದ ಸುರಕ್ಷತೆ ಮತ್ತು ಪ್ರತಿಷ್ಠೆಯೂ ಮಿಳಿತವಾಗಿರುವ ಪ್ರೀಮಿಯಂ ಐಷಾರಾಮಿ ಫೋನ್ ಇದು.
ಹಗುರ, ಸ್ಲಿಮ್ ಆಗಿದ್ದು, ಒಂದು ಕೈಯಲ್ಲಿ ಹಿಡಿಯುವುದೂ ಸುಲಭ. 5ಜಿ ತಂತ್ರಜ್ಞಾನಕ್ಕೆ ಸಿದ್ಧವಾಗಿದೆ. ಕಪ್ಪು, ಬಿಳಿ, ಕೆಂಪು, ಹಸಿರು ಹಾಗೂ ನೇವಿ ಬ್ಲೂ ಬಣ್ಣಗಳಲ್ಲಿ ಲಭ್ಯವಿರುವ ಡ್ಯುಯಲ್ ಸಿಮ್ ಬೆಂಬಲಿಸುವ ಐಫೋನ್ 12 ಬೆಲೆ 64 ಜಿಬಿ ಮಾದರಿ 79,900 ರೂ.ನಿಂದ ಆರಂಭವಾಗುತ್ತದೆ. 128GB ಗೆ ಸುಮಾರು 84,900 ರೂ., 256GBಗೆ ಸುಮಾರು 94,900 ಬೆಲೆ ಇದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು