Wi-Fi Router ಬಗ್ಗೆ ತಿಳಿಯೋಣ. ಮನೆಮನೆಗಳಲ್ಲಿ ಸ್ಮಾರ್ಟ್ ಸಾಧನಗಳ ಬಳಕೆ ಹೆಚ್ಚಾದಂತೆ ಅಂತರಜಾಲ ಸಂಪರ್ಕದ ಅನಿವಾರ್ಯತೆಗಳು ಕೂಡ ಹೆಚ್ಚಾಗತೊಡಗಿವೆ. ಪರಿಣಾಮವಾಗಿ ಈಗ ಮನೆಗಳಲ್ಲಿ ಬ್ರಾಡ್‌ಬ್ಯಾಂಡ್ ಬಳಕೆಯೂ ವೃದ್ಧಿಯಾಗಿದೆ. ವೈರ್ ಮೂಲಕ ಬರುವ ಅಂತರಜಾಲ ವ್ಯವಸ್ಥೆಯನ್ನು ಮನೆಯೊಳಗಿರುವ ಎಲ್ಲ ಸ್ಮಾರ್ಟ್ ಸಾಧನಗಳಿಗೆ ಸಂಪರ್ಕಿಸಿದರೆ ಕೆಲಸ ಸುಲಭವಾಗುತ್ತದೆ. ಇಂಥ ಸನ್ನಿವೇಶದಲ್ಲಿ ನಾವು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿರುವ ಶಬ್ದವೇ ವೈಫೈ ರೌಟರ್ ಅಥವಾ ರೂಟರ್. ಇದರ ಉಪಯೋಗ ಏನು, ಬಳಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ.
ಏನಿದು ವೈಫೈ ರೌಟರ್?
ರೌಟರ್ (ಅಮೆರಿಕನ್ ಉಚ್ಚಾರ) ಅಥವಾ ರೂಟರ್ (ಬ್ರಿಟಿಷ್ ಉಚ್ಚಾರ) ಎಂಬುದೊಂದು ಸ್ಮಾರ್ಟ್ ಸಾಧನ. ಈ ಲೇಖನದ ವ್ಯಾಪ್ತಿಯಲ್ಲಿ ಇದನ್ನು ವಿವರಿಸುವುದಾದರೆ, ನಮ್ಮ ಮನೆಗೆ ಲಭ್ಯವಾಗುವ ಅಂತರಜಾಲದ ರೇಡಿಯೋ ತರಂಗಗಳನ್ನು (ವೈಫೈ) ವಿವಿಧ ಸಾಧನಗಳಿಗೆ ನಿಸ್ತಂತುವಾಗಿ ವಿತರಿಸಿ, ನಿರ್ದಿಷ್ಟ ವ್ಯಾಪ್ತಿಯಲ್ಲಿ ಅಂತರಜಾಲದಲ್ಲಿ ದತ್ತಾಂಶ (ಡೇಟಾ) ವಿನಿಮಯಕ್ಕೆ ಅನುಕೂಲ ಮಾಡಿಕೊಡುವ ಪುಟ್ಟ ಸಾಧನ. ವೈಫೈ ರೌಟರ್ ಅನ್ನು WLAN (ವೈರ್‌ಲೆಸ್ ಲೋಕಲ್ ಏರಿಯಾ ನೆಟ್‌ವರ್ಕ್) ಎಂದೂ ಕರೆಯಲಾಗುತ್ತದೆ.
ಸಾಮಾನ್ಯವಾಗಿ ಅಂತರಜಾಲ ಸೇವದಾತರಿಂದ (ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳು) ನಾವು ಕೇಬಲ್ ಮೂಲಕವಾಗಿ ಬರುವ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದಾಗ, ಅವರೇ ಮಾಡೆಮ್ ಎಂಬ ಸಾಧನವೊಂದನ್ನು ಒದಗಿಸುತ್ತಾರೆ. ಅದರಲ್ಲಿಯೇ ಈ ರೌಟರ್ ವ್ಯವಸ್ಥೆ ಅಡಕವಾಗಿರುತ್ತದೆ. ಮಾಡೆಮ್‌ಗೆ ಬರುವ ಅಂತರಜಾಲದ ರೇಡಿಯೋ ತರಂಗಗಳನ್ನು ಅದರಲ್ಲಿರುವ ರೌಟರ್ ಅನಾಯಾಸವಾಗಿ ವೈಫೈ ವ್ಯವಸ್ಥೆಯ ಮೂಲಕ ಹಂಚುತ್ತದೆ.
ಅಂತರಜಾಲಕ್ಕೆ ಸಂಪರ್ಕಿಸುವುದಕ್ಕಾಗಿ ಈ ರೌಟರ್‌ಗೊಂದು ಹೆಸರು ಮತ್ತು ಪಾಸ್‌ವರ್ಡ್ ಇರುತ್ತದೆ. ಈ ಮೂಲಕ ಅದು ದುರ್ಬಳಕೆಯಾಗದಂತೆ ರಕ್ಷಿಸಿಕೊಳ್ಳಬಹುದು. ರೌಟರ್ ಎಂಬ ಪುಟ್ಟ ಸಾಧನದಲ್ಲಿ ಇನ್‌ಪುಟ್ ಸಾಕೆಟ್, ಕೆಲವು LAN ಔಟ್‌ಪುಟ್ ಪೋರ್ಟ್‌ಗಳು, ಆಂಟೆನಾಗಳು ಹಾಗೂ ಕೆಲವು ಬಟನ್‌ಗಳಿರುತ್ತವೆ.
ಮನೆಯಲ್ಲಿ ಹೇಗೆ ಉಪಯೋಗ?
ಒಂದು ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರಲ್ಲಿಯೂ ಸ್ಮಾರ್ಟ್‌ಫೋನ್ ಇರುವುದು ಈಗ ಸಾಮಾನ್ಯ. ಅಲ್ಲದೆ ಒಂದು ಡೆಸ್ಕ್‌ಟಾಪ್ ಕಂಪ್ಯೂಟರ್, ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಕೂಡ ಹೆಚ್ಚಿನ ಮನೆಗಳಲ್ಲಿರುತ್ತವೆ. ಇನ್ನು ಕೆಲವರ ಮನೆಯಲ್ಲಿ ಸಿಸಿಟಿವಿ, ಪ್ರಿಂಟರ್, ಸ್ಮಾರ್ಟ್ ರೆಫ್ರಿಜರೇಟರ್, ಸ್ಮಾರ್ಟ್ ಮೈಕ್ರೋವೇವ್ ಒವೆನ್, ವೈರ್‌ಲೆಸ್ ಸ್ಪೀಕರ್/ಹೋಂ ಥಿಯೇಟರ್ ಸಿಸ್ಟಂ, ಸ್ಮಾರ್ಟ್ ಫ್ಯಾನ್, ಸ್ಮಾರ್ಟ್ ಬಲ್ಬ್ – ಮುಂತಾದ ಅತ್ಯಾಧುನಿಕ ಗ್ಯಾಜೆಟ್‌ಗಳೂ ಇರಬಲ್ಲವು. ಇವೆಲ್ಲವನ್ನೂ ಮೊಬೈಲ್ ಫೋನ್‌ನಲ್ಲಿರುವ ಇಂಟರ್ನೆಟ್ ಡೇಟಾದ ಮೂಲಕ ಸಂಪರ್ಕಿಸುವುದು ಅಸಾಧ್ಯ. ಪ್ರತಿಯೊಂದಕ್ಕೂ ರೀಚಾರ್ಜ್ ಮಾಡುವುದು ದುಬಾರಿ.
ಇವೆಲ್ಲವನ್ನೂ ನಿಸ್ತಂತು (ವೈರ್‌ಲೆಸ್) ಆಗಿ ಸಂಪರ್ಕಿಸುವುದರಿಂದ, ಎಲ್ಲ ಗ್ಯಾಜೆಟ್‌ಗಳಿಗೆ ಪ್ರತ್ಯೇಕ ಸಿಮ್ ಕಾರ್ಡ್ ಖರೀದಿಸಿ, ಅದಕ್ಕೆ ಮಾಸಿಕ, ವಾರ್ಷಿಕ ಶುಲ್ಕ ಪಾವತಿಸಬೇಕಾಗಿರುವುದಿಲ್ಲ. ಇತ್ತೀಚೆಗೆ ಒಳ್ಳೆಯ ವೇಗದ ಕೇಬಲ್ ಮೂಲಕ ದೊರೆಯುವ ಬ್ರಾಡ್‌ಬ್ಯಾಂಡ್ ಸಂಪರ್ಕಗಳು ಸ್ಫರ್ಧಾತ್ಮಕ ದರದಲ್ಲಿ ದೊರೆಯುವ ಕಾರಣದಿಂದಾಗಿ, ಮಾಸಿಕ ₹500ರ ಆಸುಪಾಸಿನಲ್ಲಿ ಕನಿಷ್ಠ 10ರಿಂದ 15 ಸ್ಮಾರ್ಟ್‌ಫೋನ್ ಮತ್ತಿತರ ಗ್ಯಾಜೆಟ್‌ಗಳನ್ನು ಅಂತರಜಾಲಕ್ಕೆ ಸಂಪರ್ಕಿಸಬಹುದಾಗಿದೆ. ಮನೆಯಲ್ಲಿರುವಾಗ ಇದು ಭರ್ಜರಿ ಉಪಯೋಗಕ್ಕೆ ಬರುತ್ತದೆ. ಹೊರಗೆ ಹೋಗಬೇಕಾದಾಗ ಮಾತ್ರ ಕನಿಷ್ಠ ಡೇಟಾ ರೀಚಾರ್ಜ್ ಮಾಡಿಸಿಕೊಂಡರೆ ಹೆಚ್ಚಿನ ಹಣ ಉಳಿತಾಯ ಮಾಡಬಹುದು.
ಗಮನಿಸಬೇಕಾಗಿರುವುದು
ಅಂತರಜಾಲದಲ್ಲಿ ತೀರಾ ಹೆಚ್ಚು ಕೆಲಸ ಇರುತ್ತದೆ, ಹೆಚ್ಚಿನ ತರಂಗಾಂತರಗಳ ಅಗತ್ಯವಿದೆ ಎಂದಾದರೆ, ಕೆಲಸ ಸುಲಲಿತವಾಗಿ ಸಾಗಲು LAN ಅಥವಾ ಲೋಕಲ್ ಏರಿಯಾ ನೆಟ್‌ವರ್ಕ್ ಎಂಬ ಕೇಬಲ್ ಬಳಸಿಯೇ ರೌಟರ್ ಮತ್ತು ಕಂಪ್ಯೂಟರ್ ಸಂಪರ್ಕಿಸುವುದು ಸೂಕ್ತ. ಯಾಕೆಂದರೆ, ವೈಫೈ ಯಾವತ್ತಿದ್ದರೂ ನಂಬಲರ್ಹವಾಗಿರುವುದಿಲ್ಲ ಮತ್ತು ವೈಫೈ ಸಂಪರ್ಕಕ್ಕೆ ಅದರದ್ದೇ ಆದ ಇತಿಮಿತಿಗಳಿರುತ್ತವೆ. ಕೇಬಲ್ ಮೂಲಕ ಸಂಪರ್ಕಿಸಿದರೆ ಅಂತರಜಾಲದ ವೇಗವೂ ಹೆಚ್ಚಿರುತ್ತದೆ. ಸ್ಮಾರ್ಟ್ ಟಿವಿಗೂ ಲ್ಯಾನ್ ಕೇಬಲ್ ಮೂಲಕವೇ ಸಂಪರ್ಕಿಸಿದರೆ ಟಿವಿ, ಒಟಿಟಿ ಅಥವಾ ಯೂಟ್ಯೂಬ್‌ನಂಥ ಚಾನೆಲ್‌ಗಳನ್ನು ಅಡಚಣೆರಹಿತವಾಗಿ ವೀಕ್ಷಿಸಬಹುದು.
ಅಂತರಜಾಲ ಸೇವಾದಾತರು ಒದಗಿಸುವ ಮಾಡೆಮ್‌ಗಳಲ್ಲಿ ಕೆಲವು ಹಳತಾಗಿ, ಈಗಿನ ಬೇಡಿಕೆಗಳಿಗೆ ತಕ್ಕಂತೆ ಕೆಲಸ ಮಾಡಲಾರವು. ಅಂಥವರು ಹೊಸ ರೌಟರ್ ಖರೀದಿಸಬಹುದು. ಗೃಹ ಬಳಕೆಗೆ, ಕಚೇರಿ ಅಥವಾ ದೊಡ್ಡ ಅಪಾರ್ಟ್‌ಮೆಂಟ್ ಬಳಕೆಯ ಸಾಮರ್ಥ್ಯಗಳಿಗೆ ತಕ್ಕಂತೆ ಸೂಕ್ತವಾಗುವ ರೌಟರ್ ಆಯ್ಕೆ ಮಾಡಿಕೊಳ್ಳಬಹುದು.
ರೌಟರ್‌ಗಳಲ್ಲಿ ವೈವಿಧ್ಯ
ವೈಫೈ ಕೆಲಸ ಮಾಡುವುದು ರೇಡಿಯೋ ತರಂಗಗಳಿಂದ. ಸಾಮಾನ್ಯವಾಗಿ 2.4 ಗಿಗಾಹರ್ಟ್ಸ್ ಹಾಗೂ 5 ಗಿಗಾಹರ್ಟ್ಸ್ ಎಂಬ ಎರಡು ತರಂಗಾಂತರದ ವೇಗ ಬಳಸಲಾಗುತ್ತದೆ. ಸಿಂಗಲ್ ಬ್ಯಾಂಡ್‌ನಲ್ಲಿ ಕಡಿಮೆ ಎಂದರೆ 2.4Ghz ವೇಗ ಇದ್ದು, ವ್ಯಾಪ್ತಿ ಹೆಚ್ಚಿರುತ್ತದೆ. ಇದರ ಜೊತೆಗೆ, 5Ghz ಬ್ಯಾಂಡ್ ಇರುವ ರೌಟರ್‌ಗಳನ್ನು ಡ್ಯುಯಲ್ ಬ್ಯಾಂಡ್ ರೌಟರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ವೇಗ ಜಾಸ್ತಿ, ಆದರೆ ವ್ಯಾಪ್ತಿ ಕಿರಿದು. ಎರಡೂ ಇರುವ ಡ್ಯುಯಲ್ ಬ್ಯಾಂಡ್ ರೌಟರ್‌ಗಳೇ ಈಗ ಹೆಚ್ಚು ಚಾಲ್ತಿಯಲ್ಲಿವೆ. ಅದೇ ರೀತಿ, ರೌಟರ್‌ನಲ್ಲಿ ಆಂಟೆನಾಗಳು ಹೆಚ್ಚಿದ್ದರೆ, ಅಂತರಜಾಲದ ಸಿಗ್ನಲ್‌ಗಳು ಗೋಡೆ ಮತ್ತಿತರ ಅಡಚಣೆಗಳನ್ನು ದಾಟಿ ನಿರ್ದಿಷ್ಟ ಗ್ಯಾಜೆಟ್‌ಗಳನ್ನು ತಲುಪಲು ಅನುಕೂಲ.
ಕೆಲವು ರೌಟರ್‌ಗಳಲ್ಲಿ ಯುಎಸ್‌ಬಿ ಪೋರ್ಟ್ ಇರುತ್ತದೆ. ಅದರ ಮೂಲಕ ನೀವೊಂದು ಪೋರ್ಟೆಬಲ್ ಹಾರ್ಡ್ ಡ್ರೈವ್ ಅಥವಾ ಕಂಪ್ಯೂಟರನ್ನು ಸಂಪರ್ಕಿಸಿದರೆ, ವೈಫೈ ಸಂಪರ್ಕದ ಮೂಲಕವಾಗಿ ಎಲ್ಲ ಗ್ಯಾಜೆಟ್‌ಗಳಿಂದಲೂ ಈ ಹಾರ್ಡ್ ಡ್ರೈವ್‌ನಲ್ಲಿ ಶೇಖರವಾಗಿರುವ ಫೈಲ್‌ಗಳನ್ನು ನೋಡಬಹುದು ಇಲ್ಲವೇ ತಿದ್ದುಪಡಿ ಮಾಡಬಹುದು. ಇದು ಒಂದು ರೀತಿಯಲ್ಲಿ ಸರ್ವರ್ ಕಂಪ್ಯೂಟರ್ ಆಗಿ ಕೆಲಸ ಮಾಡುತ್ತದೆ. ಚಿತ್ರ, ವಿಡಿಯೊ, ಆಡಿಯೊ ಮತ್ತಿತರ ಫೈಲ್‌ಗಳನ್ನು ಪರಸ್ಪರ ಹಂಚಿಕೊಳ್ಳಲು ಇದು ಅನುಕೂಲ.