ವಾಟ್ಸಪ್ ಸಂದೇಶ: ಸಾವಧಾನದಿಂದಿರಿ, ಸುರಕ್ಷಿತವಾಗಿರಿ

0
277

WhatsApp Securityಫೇಸ್‌ಬುಕ್ ಪ್ರೈವೆಸಿ ಬಗೆಗಿನ ಆತಂಕವಿನ್ನೂ ಮರೆಯಾಗಿಲ್ಲ. ಈಗ ಅತ್ಯಧಿಕ ಬಳಸುತ್ತಿರುವ ವಾಟ್ಸಪ್ ಮೆಸೆಂಜರ್‌ನಲ್ಲಿಯೂ ನಮ್ಮ ಖಾಸಗಿ ಮಾಹಿತಿಯನ್ನು ಕದಿಯುವ ನೆಟ್ ಲೂಟಿಕೋರರು ಭಾರಿ ಪ್ರಮಾಣದಲ್ಲಿ ಸಕ್ರಿಯರಾಗಿದ್ದಾರೆ. ಇಂಟರ್ನೆಟ್ ಕ್ರಾಂತಿಯಾದ ಬಳಿಕ ಟೆಕ್ಕೀಗಳು, ಸುಶಿಕ್ಷಿತರಷ್ಟೇ ಅಲ್ಲದೆ, ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರವೇ ಬಳಸಲು ತಿಳಿದುಕೊಂಡಿರುವವರೂ ಫೇಸ್‌ಬುಕ್, ವಾಟ್ಸಪ್‌ನಲ್ಲಿ ಸಕ್ರಿಯರಾಗಿದ್ದಾರೆ. ಸಂದೇಶಗಳಲ್ಲಿ ಬರುವ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸದೆ, ತಮ್ಮ ಸ್ನೇಹಿತ ಕಳುಹಿಸಿದನೆಂದು ನಂಬಿ ಲಿಂಕ್ ಕ್ಲಿಕ್ ಮಾಡುವ ಮೂಲಕ ತಮಗರಿವಿಲ್ಲದಂತೆಯೇ ತಮ್ಮ ಖಾಸಗಿ ಮಾಹಿತಿಯನ್ನು ಬಿಟ್ಟುಕೊಡುವವರ ಸಂಖ್ಯೆಯೂ ಅಷ್ಟೇ ಹೆಚ್ಚಾಗಿದೆ. ಸುಶಿಕ್ಷಿತರೆನ್ನಿಸಿಕೊಂಡವರು ಕೂಡ ಇಂಥ ಫೇಕ್ ಮೆಸೇಜ್‌ಗಳನ್ನು ಗ್ರೂಪುಗಳಲ್ಲಿ ಫಾರ್ವರ್ಡ್ ಮಾಡುತ್ತಿರುವುದು ಮತ್ತೊಂದು ದುರಂತ.

ಉದಾಹರಣೆಗೆ, “ಪುಟಾಣಿ ಮಕ್ಕಳು ಆ್ಯಕ್ಸಿಡೆಂಟ್‌ನಿಂದಾಗಿ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರ್ಜಂಟ್ ಎ ಪಾಸಿಟಿವ್ ರಕ್ತ ಬೇಕಾಗಿದೆ. ಈ ಲಿಂಕ್ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ” ಅಂತಲೋ, ಈ ಲಿಂಕ್‌ನಲ್ಲಿರುವ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಅಂತಲೋ ಒಂದು ಮೆಸೇಜ್ ಫಾರ್ವರ್ಡ್ ಆಗಿರುತ್ತದೆ. ಅದು ಬಂದದ್ದು ನಿಮ್ಮದೇ ಸುಶಿಕ್ಷಿತ ಸ್ನೇಹಿತರಿಂದ. ಕಳೆದ ವರ್ಷವೂ ಇದನ್ನೇ ನೀವು ನೋಡಿದ್ದಿರಲೂಬಹುದು. ಆದರೂ ನೀವು ಲಿಂಕ್ ಕ್ಲಿಕ್ ಮಾಡುತ್ತೀರಿ. ಇದು ಫೀಶಿಂಗ್ ಲಿಂಕ್ ಆಗಿರಲೂಬಹುದು. ಅಂದರೆ, ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಆ ಸರ್ವರ್‌ನಲ್ಲಿ ಕೋಡ್ ಮಾಡಲಾದ ತಂತ್ರಾಂಶದ ಮೂಲಕ ನಿಮ್ಮ ಫೋನ್‌ಗೆ ಸಂಬಂಧಪಟ್ಟ ಸಂಖ್ಯೆ, ಇಮೇಲ್ ವಿಳಾಸ, ನಿಮ್ಮ ಹೆಸರು ಮುಂತಾದವುಗಳನ್ನು ಸೆಳೆದುಕೊಳ್ಳುವ ಸಾಮರ್ಥ್ಯವಿರುವ ಕು-ತಂತ್ರಾಂಶಗಳವು.

ಅದೇ ರೀತಿ ಮತ್ತೊಂದು. ಇತ್ತೀಚೆಗೆ ಜಿಯೋ ಫೋನ್ ಕೊಡುಗೆಗಳ ಬಗ್ಗೆ ಸಾಕಷ್ಟು ಸಂದೇಶಗಳು ಹರಿದಾಡುತ್ತಿವೆ. ಒಂದು ವರ್ಷ ಕಾಲ ಉಚಿತವಾಗಿ ಇಂಟರ್ನೆಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಅಂತ ಲಿಂಕ್ ಬಂದಿರುತ್ತದೆ. ಅದನ್ನು ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಹೆಸರು, ಫೋನ್ ನಂಬರು, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ನಮೂದಿಸುವಂತೆ ಸೂಚಿಸಲಾಗುತ್ತದೆ. ನಾವು ಯಾವುದೇ ರೀತಿಯಲ್ಲೂ ಸಂಶಯಿಸದೆ ಕೇಳಿದ್ದನ್ನೆಲ್ಲ ಬಿಟ್ಟುಕೊಟ್ಟಿರುತ್ತೇವೆ. ಇವೇ ಅಲ್ಲವೇ ನಿಮ್ಮ ಪ್ರೈವೆಸಿ ವಿಷಯಗಳು? ನಿಮಗೆ ಮತ್ತು ಕೆಲವೊಂದು ಸ್ನೇಹಿತರಿಗಷ್ಟೇ ಗೊತ್ತಿರಬೇಕಾದ ಖಾಸಗಿ ಮಾಹಿತಿಯನ್ನು ನಾವು ಅದ್ಯಾವುದೋ ಗೊತ್ತುಗುರಿಯಿಲ್ಲದ ವೆಬ್ ತಾಣಕ್ಕೆ ಕೊಟ್ಟಿರುತ್ತೇವೆ.

ಬ್ಯಾಂಕ್ ಖಾತೆಗೆ, ಫೋನ್‌ಗೆ, ಪ್ಯಾನ್ ಕಾರ್ಡ್‌ಗೆ, ವಿಮಾ ಪಾಲಿಸಿಗೆ… ಆಧಾರ್ ಲಿಂಕ್ ಮಾಡಿ ಎಂದು ಪದೇ ಪದೇ ಸಂದೇಶಗಳು ಬಂದು ಗೊಂದಲಕ್ಕೊಳಗಾದವರೇ ಹೆಚ್ಚು. ಅದರ ಜತೆಗೆ, ಆಧಾರ್ ಲಿಂಕ್ ಮಾಡದೇ ಹೋದರೆ, ನಿಮ್ಮ ವಾಟ್ಸಪ್ ಸ್ಥಗಿತವಾಗುತ್ತದೆ ಅಂತಲೋ, ನಿಮ್ಮ ಖಾತೆ ನಿಷ್ಕ್ರಿಯವಾಗುತ್ತದೆ ಅಂತಲೋ ವಾಟ್ಸಪ್ ಮಾತ್ರವಲ್ಲದೆ, ಫೇಸ್‌ಬುಕ್, ಟೆಲಿಗ್ರಾಂ, ವಿಚಾಟ್ ಮುಂತಾದ ಬೇರೆ ಕಿರು ಸಾಮಾಜಿಕ ಅಪ್ಲಿಕೇಶನ್‌ಗಳಲ್ಲಿಯೂ ಸಾಕಷ್ಟು ಸಂದೇಶಗಳು ಬರುತ್ತಲೇ ಇರುತ್ತವೆ. ಇದೇ ರೀತಿಯಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಹೆಸರಲ್ಲಿಯೂ ಅದೆಷ್ಟೋ ನಕಲಿ ಸಂದೇಶಗಳು ಹರಿದಾಡುತ್ತಿವೆ. ಇವು ನಿಮ್ಮ ಬ್ಯಾಂಕ್ ಲಾಗಿನ್ ಮಾಹಿತಿಯನ್ನು ಕದಿಯುವ ಲಿಂಕ್‌ಗಳನ್ನು ಹೊಂದಿರುತ್ತವೆ. ಜತೆಗೆ, ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳುವ, ವಾರದೊಳಗೆ ಶುಗರ್‌ನಿಂದ ಮುಕ್ತಿ ದೊರಕಿಸುವ ನಕಲಿ ಸಂದೇಶಗಳೂ ಬರುತ್ತಿರುತ್ತವೆ. ಇತ್ತೀಚೆಗಂತೂ ಹೆಸರು, ವಿಳಾಸ ಸಹಿತವಾಗಿ, ಓದಿದರೆ ನಂಬಿಕ ಬರುವ ರೀತಿಯಲ್ಲಿ ಬರೆದಿರುವ ಸಂದೇಶಗಳ ಹಾವಳಿಯೂ ಹೆಚ್ಚಾಗಿದೆ. ಈ ರೀತಿಯಾಗಿ ಬರುವ ಸಂದೇಶಗಳನ್ನು ನಂಬಲು ಹೋಗಬೇಡಿ.

ಜಿಯೋ ಆಫರ್ ಅಂತ ದುರಾಸೆ ಹುಟ್ಟಿಸುವ ಮೂಲಕ ಮಾನವ ಸಹಜವಾದ ಆಸೆಗೆ ಕಿಡಿ ಹಚ್ಚಿದರೆ, ಆಧಾರ್ ಲಿಂಕ್ ಅಂತ ಹೇಳುತ್ತಾ ನಮ್ಮ ಆತಂಕವನ್ನು ವೆಬ್ ಹ್ಯಾಕರ್‌ಗಳು, ಸೈಬರ್ ಕ್ರಿಮಿನಲ್‌ಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆಧಾರ್ ದೃಢೀಕರಣಕ್ಕೆ ಹೋದಾಗಲೂ ಬೆರಳಚ್ಚನ್ನು ಎರಡೆರಡು ಬಾರಿ ಪಡೆದುಕೊಂಡು, ಒಂದನೇ ಬಾರಿ ನಿಮಗೆ ಸಿಮ್ ಕಾರ್ಡ್ ನೀಡಲು, ಎರಡನೇ ಬಾರಿಯದನ್ನು ಮತ್ತೊಂದು ಸಿಮ್ ಆ್ಯಕ್ಟಿವೇಶನ್ ಮಾಡಿ, ಬೇರೆಯವರಿಗೆ (ಅದು ದೇಶದ್ರೋಹಿ ಚಟುವಟಿಕೆ ಮಾಡುವವರಿಗೋ ಅಥವಾ ಬೇರೆ ಯಾವುದಾದರೂ ಅಕ್ರಮ ಚಟುವಟಿಕೆಯಲ್ಲಿ ನಿರತರಾಗುವವರಿಗೋ) ಮಾರಾಟ ಮಾಡುವ ದಂಧೆಯೊಂದು ಕಳೆದ ವಾರವಷ್ಟೇ ಬೆಂಗಳೂರಲ್ಲಿ ಬಯಲಾಗಿದೆ ಎಂಬುದು ನೆನಪಿನಲ್ಲಿರಲಿ.

ನಮ್ಮ ಪ್ರೈವೆಸಿಗೆ ಧಕ್ಕೆಯಾಗೋದಿಕ್ಕೆ ಪ್ರಧಾನ ಕಾರಣ ನಾವೇ. ಯಾಕೆಂದರೆ, ಇಂಟರ್ನೆಟ್ ಬಳಕೆಯ ಬಗೆಗಿನ ಕೆಲವೊಂದು ಮೂಲಭೂತ ನಿಯಮಗಳನ್ನು ಅನುಸರಿಸದೇ ಇರುವುದು. ಮೊದಲನೆಯದಾಗಿ, ಅಂತರಜಾಲದಲ್ಲಿ ಯಾವುದೇ ರೀತಿಯ ಸಂವಹನ ನಡೆಸುವಾಗ ಅಥವಾ ಖಾತೆಗೆ ಸೈನ್-ಅಪ್ ಆಗುವಾಗ ಅಲ್ಲಿ ಏನು ಬರೆದಿರುತ್ತಾರೆಂಬುದನ್ನು ನೋಡುವ ಉಸಾಬರಿಗೇ ಹೋಗುವುದಿಲ್ಲ. ‘ಯಸ್’ ಅಂತ ಇರುವ ಎಲ್ಲ ಬಟನ್‌ಗಳನ್ನು ಕ್ಲಿಕ್ ಮಾಡುತ್ತಾ ಹೋಗುತ್ತೇವೆ. ಫೋನ್ ನಂಬರ್, ಇಮೇಲ್ ವಿಳಾಸ, ಮನೆ ಅಡ್ರೆಸ್, ಪತಿ/ಪತ್ನಿಯ ಹೆಸರು, ಮಕ್ಕಳ ಹೆಸರು, ಜನ್ಮ ದಿನಾಂಕ ಕೇಳಿದರೆ ಎಗ್ಗಿಲ್ಲದೆ ಬರೆದುಬಿಡುತ್ತೇವೆ. ಅದೇ ರೀತಿಯಾಗಿ, ನಮ್ಮ ಫೋನ್‌ನಲ್ಲಿ ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗಲೂ ಎಚ್ಚರಿಕೆ ವಹಿಸುವುದಿಲ್ಲ. ಅಧಿಕೃತ ಆ್ಯಪ್ ಸ್ಟೋರ್‌ಗಳಿಂದಷ್ಟೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಬೇಕೇ ಹೊರತು, ಅನ್ಯರಿಂದ ಶೇರ್-ಇಟ್ ಮೂಲಕ ಅಥವಾ ಬ್ಲೂಟೂತ್ ಮೂಲಕ ಪಡೆದುಕೊಂಡ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಾರದು. ವಿಶೇಷವಾಗಿ ಮಕ್ಕಳು (ಎಪಿಕೆ ಫೈಲ್ ರೂಪದಲ್ಲಿರುವ) ಗೇಮ್‌ಗಳನ್ನು ಈ ರೀತಿಯಾಗಿ ಪರಸ್ಪರರ ಮೊಬೈಲ್‌ಗೆ ವಿನಿಮಯ ಮಾಡಿಕೊಂಡು ಆಡುತ್ತಾರೆ. ಇವುಗಳನ್ನು ಅಳವಡಿಸಿಕೊಳ್ಳುವಾಗ ನಿಮ್ಮ ಮೊಬೈಲ್‌ನಲ್ಲಿ ಈಗಾಗಲೇ ಊಡಿಸಿಟ್ಟಿರುವ ಮಾಹಿತಿಗೆ (ನಿಮ್ಮ ಎಸ್ಸೆಮ್ಮೆಸ್, ಕಾಂಟ್ಯಾಕ್ಟ್ ಲಿಸ್ಟ್, ಫೋನ್ ನಂ., ಇಮೇಲ್ ವಿಳಾಸ ಸಹಿತವಾದ ನಿಮ್ಮ ಖಾಸಗಿ ಮಾಹಿತಿ) ಪ್ರವೇಶಾವಕಾಶ ಕೇಳುತ್ತವೆ. ಮಕ್ಕಳು ಮತ್ತು ದೊಡ್ಡವರು ಕೂಡ ಇವ್ಯಾವುದನ್ನೂ ನೋಡದೆ, ಎಲ್ಲಕ್ಕೂ ‘ಯಸ್’ ಒತ್ತಿಬಿಟ್ಟಿರುತ್ತಾರೆ. ಇದರಿಂದಾಗಿ ನಿಮ್ಮ ಮಾಹಿತಿ ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚು.

ವಾಟ್ಸಪ್‌ನಲ್ಲಿ ಬರುವ ಎಲ್ಲ ಸಂದೇಶಗಳೂ ನಿಜವಾಗಿರುವುದಿಲ್ಲ. ವೀಡಿಯೋ, ಫೋಟೋಗಳು ಕೂಡ ತಿರುಚಿ ಬರುವುದೇ ಜಾಸ್ತಿ. ಈಗಂತೂ ಚುನಾವಣಾ ಸೀಸನ್. ರಾಜಕೀಯ ಮುಖಂಡರ ಕುರಿತಾದ ತಿರುಚಿದ ಸಂದೇಶಗಳು, ಮಾರ್ಫ್ ಮಾಡಿದ ವೀಡಿಯೋಗಳು, ಫೋಟೋಶಾಪ್‌ನಲ್ಲಿ ತಿದ್ದುಪಡಿ ಮಾಡಿದ ಫೋಟೋಗಳು ಹರಿದಾಡುವುದೇ ಹೆಚ್ಚು. ಸುಳ್ಳು ಸುದ್ದಿ ಹರಡುವುದು, ವ್ಯಕ್ತಿ ನಿಂದನೆಗೆ ಕಾರಣವಾಗುವ ಸಂದೇಶ ಕಳುಹಿಸುವುದು… ಇವೆಲ್ಲವೂ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಶಿಕ್ಷಾರ್ಹ ಅಪರಾಧಗಳೇ. ಇತ್ತೀಚೆಗೆ ಆನ್‌ಲೈನ್ ಸುದ್ದಿ ಜಾಲತಾಣ ನಡೆಸುತ್ತಿದ್ದವರೊಬ್ಬರು ಬಂಧಿತರಾಗಿರುವುದು ನೆನಪಿರಲಿ. ಚುನಾವಣಾ ಸಮಯವಾಗಿರುವುದರಿಂದ ಪಕ್ಷ-ಪಾತಿಗಳು ಎದುರಾಳಿಗಳನ್ನು ಬಗ್ಗು ಬಡಿಯಲು ಕಾಯುತ್ತಲೇ ಕೂತಿರುತ್ತಾರೆ. ಅನಗತ್ಯವಾಗಿ ನೀವು ಸಿಲುಕಿಕೊಳ್ಳಬಾರದು ಎಂಬುದು ವಿಜಯ ಕರ್ನಾಟಕದ ಕಳಕಳಿ.

ಖಚಿತವಿಲ್ಲದ ಸುದ್ದಿ, ಮಾಹಿತಿಗಳನ್ನು ಫಾರ್ವರ್ಡ್ ಮಾಡುವುದರಿಂದ ದೂರವಿರಿ. ನೀವೂ ಅನುಸರಿಸಿ, ನೀವಿರುವ ಗ್ರೂಪುಗಳ ಸದಸ್ಯರಿಗೂ ತಿಳಿಸಿ. ಇದು ವಾಟ್ಸಪ್ ಮಾತ್ರವಲ್ಲದೆ, ನಾವು ಹೆಚ್ಚಾಗಿ ಬಳಸುತ್ತಿರುವ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮುಂತಾದ ಆ್ಯಪ್‌ಗಳಿಗೂ ಅನ್ವಯಿಸುತ್ತದೆ. ತೀರಾ ಪರಿಚಿತರು ಕಳುಹಿಸಿದರೆ, “ನೀವು ಮಾಡಿ ನೋಡಿದ್ದೀರಾ” ಅಥವಾ “ನಿಮಗೆ ಅವರು ಗೊತ್ತೇ?” ಅಂತ ಪ್ರಶ್ನೆ ಹಾಕಿ. “ಯಾರೋ ಫಾರ್ವರ್ಡ್ ಮಾಡಿದ್ದು” ಎಂಬ ಉತ್ತರ ಬಂದ್ರೆ, ನೀವಂತೂ ಫಾರ್ವರ್ಡ್ ಮಾಡಲು ಹೋಗದಿರಿ. ಸಾಮಾಜಿಕ ಜಾಲತಾಣಗಳನ್ನೂ ಸ್ವಚ್ಛವಾಗಿಸಲು ಪ್ರಯತ್ನಿಸೋಣ.

ಮಾಹಿತಿ@ತಂತ್ರಜ್ಞಾನ ಅಂಕಣ for 09 ಏಪ್ರಿಲ್ 2018 by ಅವಿನಾಶ್ ಬಿ.

LEAVE A REPLY

Please enter your comment!
Please enter your name here