ಹೆಚ್ಚಿನ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್‌ನಿಂದ ಇತ್ತೀಚೆಗೊಂದು ಇಮೇಲ್ ಬಂದಿರಬಹುದು. ನಿಮ್ಮ ‘ಗೂಗಲ್ ಪ್ಲೇ ಮ್ಯೂಸಿಕ್’ ಆ್ಯಪ್‌ನಲ್ಲಿರುವ ಹಾಡುಗಳ ಎಲ್ಲ ಫೈಲ್‌ಗಳನ್ನು ತಕ್ಷಣವೇ ವರ್ಗಾಯಿಸಿಕೊಳ್ಳಿ, ಫೆ.24ರ ಬಳಿಕ ಅವುಗಳು ನಿಮಗೆ ಸಿಗಲಾರವು ಅಂತ.
ಇದು ಸಾಮಾನ್ಯವಾಗಿ ಬೆದರಿಸುವ ಇಮೇಲ್ ಅಂತ ನಿರ್ಲಕ್ಷಿಸಬೇಡಿ. ನೀವು ಸಂಗೀತಪ್ರಿಯರಾಗಿದ್ದರೆ, ಗೂಗಲ್ ಪ್ಲೇ ಮ್ಯೂಸಿಕ್ ಆ್ಯಪ್ ಮೂಲಕವಾಗಿ ಸಾಕಷ್ಟು ಹಾಡುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ ಅಥವಾ ಅಲ್ಲಿಂದಲೇ ಖರೀದಿಸಿ ನಿಮ್ಮ ಮೊಬೈಲ್ ಫೋನ್‌ನಲ್ಲಿ ಇರಿಸಿಕೊಂಡಿದ್ದರೆ ತಕ್ಷಣವೇ ಕಾರ್ಯಪ್ರವೃತ್ತರಾಗಿ.
ನೀವು ಸಂಗ್ರಹಿಸಿಟ್ಟಿರುವ ಅಮೂಲ್ಯವಾದ ಹಾಡುಗಳು ಕಳೆದುಹೋಗದಂತೆ, ಮತ್ತು ಹೋದಲ್ಲೆಲ್ಲಾ ದೊರೆಯುವಂತೆ ಮಾಡಬೇಕಿದ್ದರೆ ನೀವು ಅದನ್ನು ಗೂಗಲ್‌ನದೇ ಮತ್ತೊಂದು ಉತ್ಪನ್ನ (ಆ್ಯಪ್) ‘ಯೂಟ್ಯೂಬ್ ಮ್ಯೂಸಿಕ್’ಗೆ ವರ್ಗಾಯಿಸಿಕೊಳ್ಳಬೇಕಾಗುತ್ತದೆ.
ಗೂಗಲ್ ಪ್ಲೇ ಮ್ಯೂಸಿಕ್’ ಆ್ಯಪ್, ಬಹುತೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮೊದಲೇ ಅಳವಡಿಕೆಯಾಗಿ ಬರುತ್ತದೆ. ಹಾಡು ಕೇಳುವುದಕ್ಕೆ, ಅಪರೂಪದ ಹಾಡುಗಳನ್ನೆಲ್ಲ ಸಂಗ್ರಹಿಸಿಡುವುದಕ್ಕೆ ಈ ಆ್ಯಪ್ ಬಳಸಲಾಗುತ್ತದೆ. ಇದನ್ನು ನಮ್ಮ ಖಾತೆಗೆ ಸಂಯೋಜಿಸಿದರೆ (ಅಂದರೆ ಲಾಗಿನ್ ಆಗಿ ಜೋಡಿಸಿದರೆ) ಎಲ್ಲ ಹಾಡುಗಳೂ ಕ್ಲೌಡ್‌ನಲ್ಲಿ (ಅಂತರಜಾಲ ಸರ್ವರ್‌ನಲ್ಲಿ) ಸೇವ್ ಆಗಿರುತ್ತವೆ ಮತ್ತು ಯಾವಾಗ ಬೇಕಿದ್ದರೂ, ಯಾವುದೇ ಸಾಧನಗಳಲ್ಲಿ ಲಾಗಿನ್ ಆಗಿಯೂ ನಾವು ಈ ಹಾಡುಗಳನ್ನು ಕೇಳಬಹುದು. ಫೋನ್ ಬದಲಾಯಿಸಿದಾಗ ಇಂಥ ವ್ಯವಸ್ಥೆ ಉಪಯೋಗಕ್ಕೆ ಬರುತ್ತದೆ.
‘ಪ್ಲೇ ಮ್ಯೂಸಿಕ್’ ಅನ್ನು ಗೂಗಲ್ ಈಗಾಗಲೇ ನಿಲ್ಲಿಸಿದ್ದರೂ, ಸಂಗೀತ ಆಲಿಸುವುದಕ್ಕೇನೂ ಅಡ್ಡಿಯಿರಲಿಲ್ಲ. ಆದರೆ, ಈಗ ಫೆ.24ರೊಳಗೆ ನಮಗೆ ಬೇಕಾದ ಹಾಡುಗಳನ್ನು ಸೇವ್ ಮಾಡಿಟ್ಟುಕೊಳ್ಳಬೇಕು ಅಂತ ಗಡುವು ವಿಧಿಸಲಾಗಿದೆ. ಇಲ್ಲವೆಂದಾದರೆ ಅವೆಲ್ಲವನ್ನೂ ಅಳಿಸಿಹಾಕಲಾಗುತ್ತದೆ ಅಂತ ಗೂಗಲ್ ಹೇಳಿದೆ. ಪರ್ಯಾಯವಾಗಿ ‘ಯೂಟ್ಯೂಬ್ ಮ್ಯೂಸಿಕ್’ಗೆ ಹಾಡುಗಳನ್ನು ವರ್ಗಾಯಿಸುವ ವ್ಯವಸ್ಥೆಯನ್ನೂ ಗೂಗಲ್ ಸುಲಭ ಮಾಡಿಕೊಟ್ಟಿದೆ.
ನೀವು ಪ್ಲೇ ಮ್ಯೂಸಿಕ್ ತೆರೆದಾಕ್ಷಣವೇ ಸಂದೇಶವೊಂದು ಕಾಣಿಸುತ್ತದೆ ಮತ್ತು ಹಾಡುಗಳನ್ನೆಲ್ಲ ಯೂಟ್ಯೂಬ್ ಮ್ಯೂಸಿಕ್‌ಗೆ ವರ್ಗಾಯಿಸಲು ‘Transfer to Youtube Music’ ಎಂಬ ಲಿಂಕ್ ತೋರಿಸುತ್ತದೆ. ಕೆಲವೇ ಕ್ಷಣದ ಕೆಲಸವಷ್ಟೇ ಇದು.
ಕಂಪ್ಯೂಟರಿನಿಂದ ಮಾಡುವುದಿದ್ದರೆ, music.google.com ತಾಣಕ್ಕೆ ಹೋಗಿ, ನಿಮ್ಮ ಖಾತೆಯ ಮೂಲಕ ಲಾಗಿನ್ ಆಗಿಯೂ ಅದರಲ್ಲಿರುವ ಹಾಡುಗಳನ್ನು ಕಂಪ್ಯೂಟರಿಗೆ ವರ್ಗಾಯಿಸಿಕೊಳ್ಳಬಹುದು ಅಥವಾ ನೇರವಾಗಿ ‘ಯೂಟ್ಯೂಬ್ ಮ್ಯೂಸಿಕ್’ಗೆ ವರ್ಗಾಯಿಸಬಹುದು. ನೀವು ರಚಿಸಿರುವ ಪ್ಲೇ-ಲಿಸ್ಟ್‌ಗಳು, ಹಾಡುಗಳು, ಆಲ್ಬಂಗಳು, ಲೈಕ್‌ಗಳು, ಬಿಲ್ಲಿಂಗ್ ಮಾಹಿತಿ ಎಲ್ಲವೂ ಕೂಡ ಗೂಗಲ್‌ನದೇ ಉತ್ಪನ್ನವಾಗಿರುವ ಹೊಸ ತಾಣಕ್ಕೆ ವರ್ಗಾವಣೆಯಾಗುತ್ತದೆ.
ಅಲ್ಲದೆ, ‘Manage Your Music’ ಎಂಬುದನ್ನು ಆಯ್ಕೆ ಮಾಡಿದರೆ, ಹಾಡುಗಳ ಲೈಬ್ರರಿಯಲ್ಲಿರುವ ಎಲ್ಲ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಎಲ್ಲ ಡೇಟಾ ಅಳಿಸುವ ಆಯ್ಕೆಯೂ ಅಲ್ಲಿ ಕಾಣಿಸುತ್ತದೆ.
ಹಾಗಂತ, ನಿಮ್ಮದೇ ಸಾಧನದಲ್ಲಿ ಸಂಗ್ರಹವಾಗಿರುವ ಹಾಡುಗಳೇನೂ ಅಳಿಸಿಹೋಗುವುದಿಲ್ಲ ಎಂಬುದನ್ನೂ ಗಮನಿಸಿ. ಕೇವಲ ಹಾಡುಗಳ ಪ್ಲೇಯರ್ ಆಗಿ ಈ ಆ್ಯಪ್ ಬಳಸುತ್ತಿರುವವರ ಮೊಬೈಲ್‌ನಲ್ಲಿರುವ ಡೇಟಾ ಡಿಲೀಟ್ ಆಗುವುದಿಲ್ಲ. ಈ ಎಚ್ಚರಿಕೆಯು ಮುಖ್ಯವಾಗಿ, ಹಾಡುಗಳನ್ನು ‘ಗೂಗಲ್ ಪ್ಲೇ ಮ್ಯೂಸಿಕ್’ ಮೂಲಕ ತಮಗಿಷ್ಟದ ಹಾಡುಗಳನ್ನು ಖರೀದಿಸಿದವರಿಗಾಗಿ ಮತ್ತು ಆನ್‌ಲೈನ್‌ನಲ್ಲೇ ಸಂಗ್ರಹಿಸಿಟ್ಟುಕೊಂಡವರಿಗಾಗಿ. ನಿಮಗಿಷ್ಟವಾದ ಹಾಡುಗಳೇ ಬೇಕೆಂದಾದರೆ ‘ಯೂಟ್ಯೂಬ್ ಮ್ಯೂಸಿಕ್’ಗೆ ಹಣ ಪಾವತಿಸಿ ಪ್ರೀಮಿಯಂ ಸದಸ್ಯತ್ವ ಪಡೆಯಬಹುದು.
ಹಾಡು ಕೇಳುಗರ ಸಂಖ್ಯೆ ಹೆಚ್ಚಾಗಿದ್ದು, ವಿಡಿಯೊ ತಾಣವಾಗಿರುವ ಯೂಟ್ಯೂಬ್ ಅನ್ನು ಹಾಡುಗಳ ತಾಣದೊಂದಿಗೆ ಬೆಸೆಯುವುದಕ್ಕೆ ಪೂರಕವಾಗಿ ಈ ಹೊಸ ಆ್ಯಪ್ ಬಂದಿದೆ. ಇದರಲ್ಲಿ ನಾವು ಯೂಟ್ಯೂಬ್‌ನಲ್ಲಿ ಮಾಡಿಕೊಂಡಿರುವ ಪ್ಲೇ-ಲಿಸ್ಟ್‌ಗಳೂ ಕಾಣಿಸುತ್ತವೆ.