ಈ ಫೋನ್‌ನ ಸಿಗ್ನಲ್ಲೇ ಸಿಗ್ತಿಲ್ಲ, ನೆಟ್‌ವರ್ಕ್ ಸರಿ ಇಲ್ಲ. ಈ ವರ್ಷ ಬೇರೆ ಕಂಪನಿಯ ನೆಟ್‌ವರ್ಕ್‌ಗೆ ವರ್ಗಾವಣೆ ಮಾಡಬೇಕು ಅಂತ ಹೊಸ ವರ್ಷದ ಸಂಕಲ್ಪ ಮಾಡಿಕೊಂಡಿದ್ದೀರಾ? ಅದನ್ನು ಸಾಧಿಸಲು ಇಲ್ಲಿದೆ ಮಾರ್ಗ.
ಟೆಲಿಕಾಂ ಸೇವಾ ಪೂರೈಕೆದಾರರಾದ ಬಿಎಸ್ಸೆನ್ನೆಲ್, ಜಿಯೋ, ಏರ್‌ಟೆಲ್, ವೊಡಾಫೋನ್, ಐಡಿಯಾ ಮುಂತಾದವುಗಳು ಗ್ರಾಹಕರನ್ನು ಸೆಳೆಯಲು ಮಾತ್ರವಷ್ಟೇ ಅಲ್ಲದೆ, ಉಳಿಸಿಕೊಳ್ಳಲು ಕೂಡ ಸಾಕಷ್ಟು ಹೆಣಗಾಡುತ್ತಿವೆ. ಮನೆಯಲ್ಲೋ, ಕಚೇರಿಯಲ್ಲೋ ಮಾತನಾಡುವಾಗ ಕರೆ ಕಟ್ ಆಗುವುದು, ಇಂಟರ್ನೆಟ್ ಸಿಗದಿರುವುದು, ಸಿಗ್ನಲ್ಲೇ ಕಾಣಿಸದಿರುವುದು – ಈ ಕಿರಿಕಿರಿಗಳಿಂದ ಬೇಸತ್ತು ಹೋಗಿದ್ದರೆ, ನೆಟ್‌ವರ್ಕ್ ಬದಲಾಯಿಸಲು ಮನಸ್ಸು ಮಾಡಿ. ರೋಸಿ ಹೋದರೂ, ಪೋರ್ಟ್ ಮಾಡಿಸಿಕೊಳ್ಳುವುದು ತುಂಬಾ ಕಷ್ಟ, ಆಗದ ಹೋಗದ ಸಂಗತಿ ಅಂತ ಸುಮ್ಮನಿರುವವರೇ ಜಾಸ್ತಿ. ಆದರೆ ಇದು ತುಂಬಾ ಸುಲಭದ ವಿಷಯ.
ಬೇರೆ ಕಂಪನಿಯ ಸಿಮ್ ಕಾರ್ಡ್ ತೆಗೆದುಕೊಂಡರೆ, ಮೊಬೈಲ್ ನಂಬರ್ ಬದಲಾಗುತ್ತದೆ. ಈಗಾಗಲೇ ಬ್ಯಾಂಕುಗಳಿಗೆ, ಇತರ ಸಂಸ್ಥೆಗಳಿಗೆ, ಸ್ನೇಹಿತರಿಗೆ ಕೊಟ್ಟಿರುವ ಸಂಖ್ಯೆಗಳೆಲ್ಲ ಬದಲಾಯಿಸಬೇಕಾಗುತ್ತದೆ. ಇದರ ಉಸಾಬರಿ ಬೇಡವೆಂದುಕೊಂಡರೆ, ಇರುವ ನಂಬರನ್ನೇ ಉಳಿಸಿಕೊಂಡು, ನೆಟ್‌ವರ್ಕ್ ಸೇವಾ ಪೂರೈಕೆದಾರರನ್ನು ಮಾತ್ರವೇ ಬದಲಾಯಿಸಿಕೊಳ್ಳಲು ಕೇಂದ್ರ ಟೆಲಿಕಾಂ ಪ್ರಾಧಿಕಾರವು ಗ್ರಾಹಕರ ಕೈಗೆ ಅತ್ಯುತ್ತಮ ಅಸ್ತ್ರವನ್ನೊಂದು ಕೊಟ್ಟಿದೆ. ಅದುವೇ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ).
2018ರಲ್ಲಿ ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಸರ್ಚ್ ಮಾಡಿದ ವಿಷಯಗಳಲ್ಲಿ ‘ಹೌ ಟು ಪೋರ್ಟ್ ಮೈ ಮೊಬೈಲ್ ನಂಬರ್’ ಎಂಬ ವಿಷಯವೂ ಒಂದು. ಇದು ಗೂಗಲ್ ಬಿಡುಗಡೆ ಮಾಡಿದ ವರದಿಯಲ್ಲಿದೆ. ಇದರರ್ಥ, ಜನರಿಗೆ ತಮ್ಮ ನಂಬರನ್ನು ಉಳಿಸಿಕೊಂಡು, ಬೇರೊಂದು ಕಂಪನಿಯ ನೆಟ್‌ವರ್ಕ್ ಸೇವೆ ಪಡೆಯುವುದು (ಉದಾಹರಣೆಗೆ, ಈಗಿರುವ ಏರ್‌ಟೆಲ್ ಸಿಮ್ ಕಾರ್ಡ್‌ನ ನಂಬರನ್ನು ಜಿಯೋಗೆ ಅಥವಾ ಜಿಯೋದಿಂದ ವೊಡಾಫೋನ್‌ಗೆ ವರ್ಗಾಯಿಸುವುದು) ಹೇಗೆಂಬುದರ ಕುರಿತು ಇನ್ನೂ ಸಂದೇಹಗಳಿದ್ದೇ ಇವೆ ಅಂತ. ಇನ್ನೂ ಗೂಗಲ್ ಸರ್ಚ್ ಮಾಡುತ್ತಿರುವವರಿಗಾಗಿ ಅಥವಾ ಹೀಗೂ ಮಾಡಬಹುದು, ಕಷ್ಟವೇನಿಲ್ಲ ಅಂತ ಗೊತ್ತಿಲ್ಲದವರಿಗಾಗಿ ಇಲ್ಲಿದೆ ಮಾಹಿತಿ.
ಪೋರ್ಟ್ ಮಾಡುವುದು ಹೇಗೆ….
ಆಯಾ ಕಂಪನಿಗಳ ವೆಬ್‌ಸೈಟುಗಳಲ್ಲಿ ಹೋಗಿ ನೋಡಿದರೆ ಅಥವಾ ನಿಮ್ಮ ರೀಚಾರ್ಜಿಂಗ್ ಮಳಿಗೆಗಳಲ್ಲಿ ವಿಚಾರಿಸಿ ನೋಡಿದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವ ಕಂಪನಿಯು ಅತ್ಯುತ್ತಮ ಟ್ಯಾರೀಫ್ ಪ್ಲ್ಯಾನ್ ಒದಗಿಸುತ್ತದೆ ಅಂತ ಕೇಳಿ ನೋಡಿಕೊಳ್ಳಿ. ನಿಮ್ಮ ಕಚೇರಿಯಲ್ಲಿ, ಮನೆಯಲ್ಲಿ ಅದರ ನೆಟ್‌ವರ್ಕ್ ಸರಿಯಾಗಿ ಸಿಗುತ್ತದೆಯೇ ಅಂತ ನೋಡಿಕೊಳ್ಳಿ. ಹೀಗೆ ನೀವು ಮೊಬೈಲ್ ಸೇವಾ ಪೂರೈಕೆದಾರ ಕಂಪನಿಯನ್ನು ಆಯ್ಕೆ ಮಾಡಿಕೊಂಡ ಬಳಿಕ, ಅದರ ಕಸ್ಟಮರ್ ಕೇರ್‌ಗೆ ಕರೆ ಮಾಡಿ, ನಿಮ್ಮ ಆಸಕ್ತಿಯನ್ನು ಅವರಿಗೆ ಹೇಳಿ. ಅವರು ಯೂನೀಕ್ ಪೋರ್ಟಿಂಗ್ ಕೋಡ್ (ಯುಪಿಸಿ) ಕೇಳುತ್ತಾರೆ. ಅತ್ಯುತ್ತಮ ಪ್ಲ್ಯಾನ್ ಯಾವುದಿದೆ ಅಂತ ಅವರಲ್ಲೇ ಕೇಳಿದರೆ, ವೆಬ್ ತಾಣಗಳಲ್ಲಿಲ್ಲದ ಮತ್ತಷ್ಟು ಆಕರ್ಷಕ ಯೋಜನೆಯನ್ನು ಅವರು ನಿಮ್ಮ ಮುಂದಿಡಬಹುದಾಗಿದೆ.
ಕೆಲವು ಕಂಪನಿಗಳು ಮನೆ ಬಾಗಿಲಿಗೆ ಬಂದು ಪೋರ್ಟಿಂಗ್ ಮಾಡಿಸಿಕೊಳ್ಳುತ್ತವೆ. ಅದಕ್ಕೆ ಸಂಬಂಧಿಸಿದ ಪೋರ್ಟಿಂಗ್ ಫಾರ್ಮ್ ಹಾಗೂ ಕಸ್ಟಮರ್ ಅಕ್ವಿಸಿಶನ್ ಫಾರ್ಮ್ (ಸಿಎಎಫ್) ಭರ್ತಿ ಮಾಡಿ ನೀಡಬೇಕಾಗುತ್ತದೆ. ಅದಕ್ಕೆ ಕಂಪನಿಯ ಎಕ್ಸಿಕ್ಯೂಟಿವ್‌ಗಳೇ ಸಹಾಯ ಮಾಡುತ್ತಾರೆ. ಈಗ ಯುಪಿಸಿ ಪಡೆಯಬೇಕಿದ್ದರೆ, PORT ಅಂತ ಬರೆದು ಒಂದು ಸ್ಪೇಸ್ ಹಾಕಿ, ನಿಮ್ಮ ಮೊಬೈಲ್ ನಂಬರನ್ನು 1900 ಎಂಬ ಸಂಖ್ಯೆಗೆ ಎಸ್ಎಂಎಸ್ ಕಳುಹಿಸಬೇಕಾಗುತ್ತದೆ. ಆಗ ನಿಮಗೆ ಯೂನೀಕ್ ಪೋರ್ಟಿಂಗ್ ಕೋಡ್ ಎಸ್ಸೆಮ್ಮೆಸ್ ಮೂಲಕ ದೊರೆಯುತ್ತದೆ. ಇದನ್ನು ಅವರಿಗೆ ಕೊಟ್ಟರಾಯಿತು. ಜತೆಗೆ, ಹೊಸ ಸರ್ವಿಸ್ ಪ್ರೊವೈಡರ್ ಕಂಪನಿಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಐಡೆಂಟಿಟಿ ಪ್ರೂಫ್ ಕೂಡ ನೀಡಬೇಕಾಗುತ್ತದೆ. ಅವರು ತಕ್ಷಣ ಹೊಸ ಸಿಮ್ ಕಾರ್ಡ್ ನೀಡುತ್ತಾರೆ. ಹೊಸ ಸಿಮ್ ಅಂದರೆ ಹೊಸ ನಂಬರ್ ಅಂತ ಭಯ ಬೀಳಬೇಕಾಗಿಲ್ಲ. ನಿಮ್ಮ ನಂಬರನ್ನೇ ಆ ಸಿಮ್ ಕಾರ್ಡ್‌ಗೆ ಊಡಿಸಲಾಗಿರುತ್ತದೆ. ಸಾಮಾನ್ಯ ಸಮಯ 7 ದಿನಗಳೊಳಗೆ ನಿಮ್ಮ ಅದೇ ಮೊಬೈಲ್ ಸಂಖ್ಯೆಯು ಹೊಸ ಟೆಲಿಕಾಂ ಕಂಪನಿಯ ನೆಟ್‌ವರ್ಕ್‌ನಲ್ಲಿ ಆ್ಯಕ್ಟಿವೇಟ್ ಆಗುತ್ತದೆ. ಅಷ್ಟರವರೆಗೆ ನೀವು ಹಳೆಯ ಸಿಮ್ ಕಾರ್ಡನ್ನೇ ಬಳಸುತ್ತಿರಬಹುದು.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 31 ಡಿಸೆಂಬರ್ 2018