iPhone ನಲ್ಲಿ ಕನ್ನಡ ಕೀಬೋರ್ಡ್ ಅಳವಡಿಸಿಕೊಳ್ಳುವುದು ಹೇಗೆ?

0
352

iPhoneಆ್ಯಪಲ್ ಬಳಕೆದಾರರಿಗೆ (ಆ್ಯಪಲ್ 5ಎಸ್ ನಂತರದ ಮೊಬೈಲ್ ಫೋನ್) ಈಗ ಕನ್ನಡ ಕೀಬೋರ್ಡ್ ಲಭ್ಯವಾಗಿದೆ ಎಂಬುದನ್ನು ಕಳೆದ ವಾರ ಓದಿದ್ದೀರಿ. ಇದು ಪ್ರಕಟವಾದ ಬಳಿಕ ಅದನ್ನು ಹೇಗೆ ಇನ್‌ಸ್ಟಾಲ್ ಮಾಡಿಕೊಳ್ಳುವುದು, ಏನು ಮಾಡಬೇಕು ಅಂತೆಲ್ಲ ಓದುಗರು ಫೋನ್/ಇಮೇಲ್ ಮೂಲಕ ಕೇಳಿಕೊಂಡಿದ್ದಾರೆ. ಆ್ಯಪಲ್ ಐಫೋನ್ 8 ಆವೃತ್ತಿ ಇತ್ತೀಚೆಗೆ ಬಿಡುಗಡೆಯಾದ ಬಳಿಕ ಹಳೆಯ ಆವೃತ್ತಿಗಳ ಬೆಲೆಯೂ ಇಳಿಕೆಯಾಗಿರುವುದರಿಂದ ಹೆಚ್ಚಿನವರು ಆ್ಯಪಲ್ ಐಫೋನ್‌ಗಳ ಒಡೆತನ ಹೊಂದಿ ಹೆಮ್ಮೆ ಪಟ್ಟುಕೊಂಡಿದ್ದಾರಾದರೂ, ಕನ್ನಡ ಕೀಬೋರ್ಡ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಅದಕ್ಕೀಗ ಆ್ಯಪಲ್‌ನ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 11 ಮೂಲಕ ಪರಿಹಾರ ಸಿಕ್ಕಿದೆ. ಇದರಲ್ಲಿ ಕನ್ನಡ ಕೀಲಿಮಣೆ ಅಳವಡಿಸಿಕೊಳ್ಳುವುದು ಹೇಗೆ ಅಂತ ಕೇಳಿದವರಿಗೆ ಹಾಗೂ ಐಒಎಸ್ 11 ಅಳವಡಿಸಿಕೊಂಡರೆ ಬೇರೇನು ಲಾಭವಿದೆ ಅಂತ ಕೇಳಿದವರಿಗೆ ಇದೋ ಇಲ್ಲಿದೆ ಮಾಹಿತಿ.

ಹೇಗೆ ಅಳವಡಿಸಿಕೊಳ್ಳುವುದು: ಹೊಸ ಐಫೋನ್ 8, 8 ಪ್ಲಸ್ ಹಾಗೂ ಎಕ್ಸ್ ಮಾದರಿಗಳಲ್ಲಿ ಐಒಎಸ್ 11 ಅಂತರ್-ನಿರ್ಮಿತವಾಗಿ ಬರುತ್ತದೆ. ಐಫೋನ್ ಆವೃತ್ತಿ 5ಎಸ್, ಐಫೋನ್ ಎಸ್ಇ, 6 ಹಾಗೂ 6 ಪ್ಲಸ್, 7 ಹಾಗೂ 7 ಪ್ಲಸ್ ಆವೃತ್ತಿಗಳಿಗೆ ಹೊಸ ಕಾರ್ಯಾಚರಣಾ ವ್ಯವಸ್ಥೆ ವೈಫೈ ಇಂಟರ್ನೆಟ್ ಸಂಪರ್ಕದ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಫೋನ್‌ಗಳಲ್ಲೇ ಹೊಸ ಆವೃತ್ತಿ ಬಗ್ಗೆ ನೋಟಿಫಿಕೇಶನ್ ಬರುತ್ತದೆ. ಇಲ್ಲವಾದರೆ, ‘ಸೆಟ್ಟಿಂಗ್ಸ್’ನಲ್ಲಿ ‘ಜನರಲ್’ ಕ್ಲಿಕ್ ಮಾಡಿದರೆ, ‘ಸಾಫ್ಟ್‌ವೇರ್ ಅಪ್‌ಡೇಟ್’ ಕ್ಲಿಕ್ ಮಾಡಿದಾಗ, ಐಒಎಸ್ 11 ಇರುವುದು ತಿಳಿಯುತ್ತದೆ. ಡೌನ್‌ಲೋಡ್ ಬಳಿಕ ಇನ್‌ಸ್ಟಾಲ್ ಮಾಡಿಕೊಳ್ಳಲು ಅಲ್ಲಿರುವ ಬಟನ್ ಒತ್ತಿ. ಇದರ ಗಾತ್ರ 1.89 ಜಿಬಿಯಷ್ಟಿದೆ. ಇದಕ್ಕೆ ವೈಫೈ ಸಂಪರ್ಕದ ವೇಗವನ್ನು ಆಧರಿಸಿ ಸುಮಾರು ಒಂದು ಗಂಟೆ ಬೇಕಾಗಬಹುದು. ನಂತರ ಇನ್‌ಸ್ಟಾಲ್ ಮಾಡಿಕೊಳ್ಳಲು ಐಫೋನ್‌ನ ಪಾಸ್‌ವರ್ಡ್ ನೀಡಬೇಕಾಗುತ್ತದೆ.

ಅಳವಡಿಸಿಕೊಂಡ ಬಳಿಕ, ಸೆಟ್ಟಿಂಗ್ಸ್‌ನಲ್ಲಿ ‘ಜನರಲ್’ಗೆ ಹೋಗಿ, ಸ್ವಲ್ಪ ಕೆಳಗೆ ನೋಡಿದರೆ ‘ಕೀಬೋರ್ಡ್’ ಎಂಬಲ್ಲಿ ಕ್ಲಿಕ್ ಮಾಡಿ, ನಂತರ ‘ಕೀಬೋರ್ಡ್ಸ್’ ಒತ್ತಿದ ಬಳಿಕ ‘ಆ್ಯಡ್ ನ್ಯೂ ಕೀಬೋರ್ಡ್’ ಅಂತ ಒತ್ತಿ. ವಿಭಿನ್ನ ಭಾರತೀಯ ಭಾಷೆಗಳ ಕೀಬೋರ್ಡ್ ಕಾಣಿಸುತ್ತವೆ. ಕನ್ನಡ ಆಯ್ಕೆ ಮಾಡಿಕೊಳ್ಳಿ. ಅಷ್ಟೇ. ಕನ್ನಡ ಕೀಲಿಮಣೆ ನಿಮ್ಮದಾಯಿತು. ಯಾವುದಾದರೂ ಟೈಪ್ ಮಾಡುವ ಆ್ಯಪ್ (ಉದಾ. ಎಸ್ಸೆಮ್ಮೆಸ್) ಬಳಸಿದಾಗ ಕಾಣಿಸಿಕೊಳ್ಳುವ ಆನ್-ಸ್ಕ್ರೀನ್ ಕೀಬೋರ್ಡ್‌ನಲ್ಲಿ ಗ್ಲೋಬ್ ಬಟನ್ ಕ್ಲಿಕ್ ಮಾಡುವ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಕೀಬೋರ್ಡ್‌ಗಳನ್ನು ಬದಲಾಯಿಸಿಕೊಳ್ಳಬಹುದು. ಇದು ಇನ್‌ಸ್ಕ್ರಿಪ್ಟ್ ಕೀಬೋರ್ಡ್ ಲೇಔಟ್‌ನಲ್ಲಿದೆ. ಸ್ವಲ್ಪ ದಿನ ಪ್ರಯತ್ನಿಸಿ ನೋಡಿದರೆ ಟೈಪಿಂಗ್ ಕಷ್ಟವಾಗಲಾರದು.

ಹೊಸತು ಏನಿದೆ?: ಐಒಎಸ್ 11 ಹೊಸ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಏನಿದೆ ಅಂತ ನನ್ನಲ್ಲಿರುವ 5ಎಸ್ ಮಾದರಿಯಲ್ಲಿ ಅಳವಡಿಸಿಕೊಂಡು ನೋಡಿದ್ದೇನೆ. ಮೊದಲು ಅನ್ನಿಸಿದ್ದು ನ್ಯಾವಿಗೇಶನ್, ಬ್ರೌಸಿಂಗ್ ಅಂತೂ ಅದ್ಭುತ ಅನ್ನಿಸುವಷ್ಟು ವೇಗ ಮತ್ತು ಅನುಕೂಲಕರ ಆಗಿದೆ.

ಕಂಟ್ರೋಲ್ ಸೆಂಟರ್: ಐಫೋನ್‌ನ ಸ್ಕ್ರೀನ್‌ನ ಕೆಳಭಾಗದಿಂದ ಮೇಲ್ಭಾಗಕ್ಕೆ ಸ್ವೈಪ್ ಮಾಡಿದಾಗ ‘ಕಂಟ್ರೋಲ್ ಸೆಂಟರ್’ ಕಾಣಿಸುತ್ತದೆ. ಅದು ಈಗ ನವೀಕರಣಗೊಂಡಿದೆ. ಅಲ್ಲಿಂದಲೇ ಟಾರ್ಚ್, ವೈಫೈ, ಬ್ಲೂಟೂತ್, ಹಾಡು ಮತ್ತು ಇತರ ಶಾರ್ಟ್‌ಕಟ್‌ಗಳಿವೆ. ಬ್ರೈಟ್‌ನೆಸ್ ಹಾಗೂ ವಾಲ್ಯೂಮ್‌ಗಳನ್ನು ಕೇವಲ ಸ್ಕ್ರೀನ್‌ನಲ್ಲಿ ಬೆರಳಿಂದ ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡುವ ಮೂಲಕ ಹೊಂದಿಸಬಹುದು. ಅದೇ ರೀತಿ, ನಮಗೆ ಬೇಕಾದ ಶಾರ್ಟ್‌ಕಟ್ ಕೀಲಿಗಳನ್ನು ಇಲ್ಲಿ ಅಳವಡಿಸಬಹುದು. ಅದನ್ನು ಮಾಡಲು ಸೆಟ್ಟಿಂಗ್ಸ್‌ನಲ್ಲಿ ‘ಕಂಟ್ರೋಲ್ ಸೆಂಟರ್’ ಎಂಬಲ್ಲಿ ಹೋದರಾಯಿತು. ಐಒಎಸ್ 11ರಲ್ಲಿ ಮತ್ತೊಂದು ಅನುಕೂಲಕರ ಸಂಗತಿಯೆಂದರೆ, ನಿಮ್ಮ ಸ್ಕ್ರೀನ್‌ನಲ್ಲಿ ನೀವು ಏನೆಲ್ಲಾ ಮಾಡುತ್ತೀರಿ ಎಂಬುದನ್ನು ರೆಕಾರ್ಡ್ ಮಾಡಬಹುದಾಗಿದೆ. ‘ಕಂಟ್ರೋಲ್ ಸೆಂಟರ್‌’ನಲ್ಲಿ, ‘ಕಸ್ಟಮೈಸ್ ಕಂಟ್ರೋಲ್’ ಅಂತ ಕ್ಲಿಕ್ ಮಾಡಿದರೆ, ಸ್ಕ್ರೀನ್ ರೆಕಾರ್ಡರ್ ಕಾಣಿಸುತ್ತದೆ. ಅದನ್ನು ಒತ್ತಿದರೆ, ಕಂಟ್ರೋಲ್ ಸೆಂಟರ್‌ನಲ್ಲಿ ಶಾರ್ಟ್‌ಕಟ್ ಅಳವಡಿಸಿಕೊಳ್ಳಬಹುದು.

ಫೈಲ್ಸ್ ಆ್ಯಪ್: ಹೊಸದಾಗಿರುವ ಫೈಲ್ಸ್ ಎಂಬ ಫೈಲ್ ಮ್ಯಾನೇಜರ್ ಆ್ಯಪ್ ಮೂಲಕ ಐಕ್ಲೌಡ್ ಎಂಬ ಆನ್‌ಲೈನ್ ಸ್ಟೋರೇಜ್ ತಾಣವೂ ಸೇರಿದಂತೆ, ಇತರ ಸ್ಟೋರೇಜ್ ತಾಣಗಳು, ನಮ್ಮ ಫೋನ್‌ನ ಆಂತರಿಕ ಸ್ಟೋರೇಜ್‌ನಲ್ಲಿರುವ ಫೈಲುಗಳನ್ನು ಬ್ರೌಸ್ ಮಾಡಬಹುದು. ಫೈಲುಗಳನ್ನು ವ್ಯವಸ್ಥಿತವಾಗಿಡಲು ಇದು ಸಹಾಯಕಾರಿ. ಫೈಲ್ ಮ್ಯಾನೇಜರ್‌ನಂತಹಾ ಥರ್ಡ್ ಪಾರ್ಟಿ ಆ್ಯಪ್ ಅಗತ್ಯ ಇನ್ನು ಇರುವುದಿಲ್ಲ.

ಡಿಎನ್‌ಡಿ: ಡು ನಾಟ್ ಡಿಸ್ಟರ್ಬ್ ಎಂಬ ಶಾರ್ಟ್‌ಕಟ್ ಮೂಲಕ, ವಾಹನ ಚಲಾಯಿಸುತ್ತಿರುವಾಗ ಸಂದೇಶ ಮತ್ತಿತರ ನೋಟಿಫಿಕೇಶನ್‌ನಿಂದ ಕಿರಿಕಿರಿಯಾಗದಂತೆ ಹೊಂದಿಸಿಕೊಳ್ಳಬಹುದು. ಸೆಟ್ಟಿಂಗ್ಸ್‌ನಲ್ಲಿ ಡುನಾಟ್ ಡಿಸ್ಟರ್ಬ್ ಎಂಬಲ್ಲಿ ಕ್ಲಿಕ್ ಮಾಡಿದಾಗ, ಎಷ್ಟು ಹೊತ್ತು ಈ ವ್ಯವಸ್ಥೆ ಆನ್ ಇರಬೇಕು, ಕರೆ ಸ್ವೀಕರಿಸಬೇಕೇ, ಕರೆ ಮಾಡಿದವರಿಗೆ ‘ಕಾರು ಚಲಾಯಿಸುತ್ತಿದ್ದೇನೆ, ಆ ಮೇಲೆ ಮಾತನಾಡುವೆ’ ಅಂತ ಎಸ್ಎಂಎಸ್ ಸಂದೇಶ ಸ್ವಯಂಚಾಲಿತವಾಗಿ ಕಳುಹಿಸಬೇಕೇ ಇತ್ಯಾದಿ ಆಯ್ಕೆಗಳನ್ನು ಸೆಟ್ ಮಾಡಿಕೊಳ್ಳಬಹುದು.

ಅದೇ ರೀತಿ, ಫೋಟೋಸ್ ಆ್ಯಪ್‌ನಲ್ಲಿ ಸಾಕಷ್ಟು ಮಹತ್ತರ ಬದಲಾವಣೆಗಳಾಗಿವೆ. ನ್ಯಾವಿಗೇಶನ್ ಅಂತೂ ನವಿರಾದ ಅನುಭವ ನೀಡುತ್ತದೆ. ಫೋಟೋಗಳ ಎಡಿಟಿಂಗ್ ಆಯ್ಕೆಯೂ ಉತ್ತಮವಾಗಿದೆ. ಆ್ಯಪಲ್‌ನ ಡಿಜಿಟಲ್ ಸಹಾಯಕಿ ‘ಸಿರಿ’ ಆ್ಯಪ್ ಹಾಗೂ ಮ್ಯೂಸಿಕ್ ಆ್ಯಪ್ ಮತ್ತಷ್ಟು ಎಫೆಕ್ಟ್‌ಗಳೊಂದಿಗೆ ಸುಧಾರಣೆ ಕಂಡಿದೆ. ಆ್ಯಪ್ ಸ್ಟೋರ್‌ನ ಇಂಟರ್‌ಫೇಸ್ ಆಕರ್ಷಕ ಮತ್ತು ವ್ಯವಸ್ಥಿತವಾಗಿದೆ.

ಇನ್ನು, ಕ್ಯಾಮೆರಾ ಕೂಡ ಸಾಕಷ್ಟು ಸುಧಾರಣೆಯಾಗಿದೆ. ಅತ್ಯುತ್ತಮ ಎಡಿಟಿಂಗ್ ವೈಶಿಷ್ಟ್ಯಗಳೊಂದಿಗೆ, ಯಾವುದೇ ಕ್ಯುಆರ್ ಕೋಡ್‌ಗಳನ್ನು ಕೂಡ ಓದಿ, ಸಂಬಂಧಪಟ್ಟ ವೆಬ್ ತಾಣಗಳಿಗೆ ಒಯ್ಯಬಲ್ಲುದು. ಪನೋರಮಾ ಫೋಟೋಗಳನ್ನು ತೆಗೆಯಬಹುದು. ಜತೆಗೆ, ಟೈಮ್-ಲ್ಯಾಪ್ಸ್ ಹಾಗೂ ಸ್ಲೋ-ಮೋಶನ್ ವೀಡಿಯೋಗಳನ್ನೂ ರೆಕಾರ್ಡ್ ಮಾಡಿಕೊಳ್ಳಬಹುದಾಗಿದೆ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ 29 ಸೆಪ್ಟೆಂಬರ್ 2017, ಶುಕ್ರವಾರ

LEAVE A REPLY

Please enter your comment!
Please enter your name here