AI Images: ಸ್ಮಾರ್ಟ್‌ಫೋನ್ ಇರುವವರೆಲ್ಲರೂ ಈಗ ಫೋಟೊಗ್ರಾಫರುಗಳೇ ಆಗಿಬಿಟ್ಟಿದ್ದಾರೆ ಎಂಬುದು ಈ ಕಾಲದ ವಾಸ್ತವವಾದರೆ, ಇತ್ತೀಚಿನ ಎರಡು ವಾರಗಳಲ್ಲಿ ಫೇಸ್‌ಬುಕ್ ಸಹಿತ ಸಾಮಾಜಿಕ ಮಾಧ್ಯಮಗಳಲ್ಲಿ ಸುಂದರವಾದ, ಆಕರ್ಷಕವಾದ ದೃಶ್ಯಗಳು, ದೇವಾನುದೇವತೆಗಳ ಚಿತ್ರಗಳ ಹಂಚುವಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿರಬಹುದು. ಅತ್ಯಂತ ಇಷ್ಟದ ಕಾರ್ಟೂನು ಪಾತ್ರಗಳಾದ ಟಾಮ್ ಮತ್ತು ಜೆರ‍್ರಿ ಮೈಸೂರು ಅರಮನೆಗೆ ಭೇಟಿ ನೀಡಿರುವುದು, ಭಾರತಕ್ಕೆ ಬಂದು ಭಾರತೀಯ ಉಡುಗೆಯಲ್ಲಿ ದೇವರಿಗೆ ಕೈ ಮುಗಿಯುವ ಟಾಮ್ ಮತ್ತು ಜೆರ‍್ರಿ, ತುಂಟ ಬಾಲಕೃಷ್ಣ, ಬಾಲಕ ಶಿವ, ದೇವ-ದೇವಿಯರು – ಹೀಗೆ ರಾಶಿ ರಾಶಿ ಚಿತ್ರಗಳು ಕಾಣಿಸಲಾರಂಭಿಸಿವೆ.
ಆಹಾ, ಎಷ್ಟೊಂದು ಚೆನ್ನಾಗಿವೆ ಇವು ಅಂತ ಖುಷಿಪಟ್ಟವರು ಇದನ್ನು ಪುನಃ ಶೇರ್ ಮಾಡುತ್ತಿರುತ್ತಾರೆ. ಆದರೆ, ಕೊಂಚ ಕುತೂಹಲ ಇದ್ದವರು, ಇದರ ಹಿಂದೆ ಏನೋ ತಂತ್ರಜ್ಞಾನವಿರಬೇಕು ಎಂದು ಆಲೋಚಿಸಿದ್ದಾರೆ. ಇತ್ತೀಚೆಗೆ ಹೆಚ್ಚು ಹೆಚ್ಚು ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಎಐ) ಎಂಬ ತಂತ್ರಜ್ಞಾನದ ಫಲವಿದು. ಮತ್ತು ಈ ತಂತ್ರಜ್ಞಾನವೀಗ ಜನ ಸಾಮಾನ್ಯರ ಕೈಗೆ ಕೂಡ ದೊರೆಯುತ್ತಿದೆ ಎಂಬುದು ಹೊಸ ವಿದ್ಯಮಾನ.
ಎಐ ಇಮೇಜ್ ಜನರೇಟರ್‌ಗಳು
ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು ಅಲ್ಲಿ ಸಿದ್ಧವಾಗಿರುತ್ತದೆ. ಇದುವೇ ಈ ಕಾಲದ ಎಐ ಜನರೇಟರ್ ತಂತ್ರಜ್ಞಾನದ ಕೊಡುಗೆ.
ಈ ಅತ್ಯಾಧುನಿಕ ತಂತ್ರಜ್ಞಾನವು ಜನ ಸಾಮಾನ್ಯರ ಕೈಗೂ ಸುಲಭವಾಗಿ ಸಿಗುತ್ತಿದೆ. ಹೇಗೂ ಅಂತರ್ಜಾಲ ಸಂಪರ್ಕವಷ್ಟೇ ಅಲ್ಲದೆ ಸ್ಮಾರ್ಟ್ ಮೊಬೈಲ್ ಫೋನ್‌ಗಳು ಕೂಡ ಕೈಗೆಟಕುತ್ತಿವೆ. ಅಂಗೈಯಲ್ಲೇ ಪ್ರಪಂಚ ದಕ್ಕಿರುವಾಗ, ಸುತ್ತಮುತ್ತಲಿನ ಪರಿವೆಯೇ ಇಲ್ಲದೆ ಕಾಲ ಕಳೆಯುವವರಿಗೇನೂ ಕೊರತೆಯಿಲ್ಲ.
ನಾವೂ ಮಾಡಬಹುದು
ಜನ ಸಾಮಾನ್ಯರೂ ಇದನ್ನು ರಚಿಸಬಹುದು. ಕಲಾವಿದನೊಬ್ಬ ರಚಿಸಿದ ವರ್ಣ ಚಿತ್ರಕ್ಕಿಂತಲೂ ಹೆಚ್ಚು ಸುಂದರವಾಗಿ, ಆಕರ್ಷಕವಾಗಿ ಈ ಚಿತ್ರಗಳು ಕಾಣಿಸುತ್ತವೆ. ಅಷ್ಟೇ ಅಲ್ಲ, ಈ ಎಂಜಿನ್‌ಗಳು ರಚಿಸಿದ ಚಿತ್ರಗಳನ್ನು ‘ನಾನೇ ತೆಗೆದಿರುವ ಫೋಟೊ ಇದು’ ಅಂತೆಲ್ಲ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಷ್ಟು ನೈಜತೆಯಿದೆ ಈ ಫೋಟೊ ಸೃಷ್ಟಿಗೆ. ಉದಾಹರಣೆಗೆ, ತಾಜ್‌ಮಹಲ್ ಎದುರು ಮಗು ಆಟವಾಡುತ್ತಿರುವುದು, ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದ ಎದುರು ಬಾಲಕನೊಬ್ಬ ಭಿಕ್ಷೆ ಬೇಡುತ್ತಿರುವುದು, ವಿಧಾನಸೌಧದೆದುರು ಅರ್ಜುನ ಆನೆ, ಹಂಪಿಯ ಕಲ್ಲಿನ ರಥ… ಹೀಗೆ ನೋಡಲು ಇದು ನೈಜ ಛಾಯಾಚಿತ್ರದಂತೆಯೇ ಇರುತ್ತದೆ. ಇದು ಅಸಲಿ ಛಾಯಾಚಿತ್ರವೋ ಅಥವಾ ಎಐ ಸೃಷ್ಟಿಸಿದ ನಕಲಿ ಚಿತ್ರವೋ ಎಂಬ ವ್ಯತ್ಯಾಸವು ಫಕ್ಕನೇ ತಿಳಿಯುವುದು ಕಷ್ಟ.
ಎಚ್ಚರಿಕೆ ಅಗತ್ಯ
ಇದಕ್ಕೆ ಅಂತರ್ಜಾಲದಲ್ಲಿ ಸಾಕಷ್ಟು ವೆಬ್ ತಾಣಗಳು, ಆ್ಯಪ್‌ಗಳು ದೊರೆಯುತ್ತವೆ. ಆದರೆ, ಹೆಚ್ಚಿನವುಗಳು ಲಾಗಿನ್ ಆಗಬೇಕೆಂದು (ಇಮೇಲ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು) ಕೇಳುತ್ತವೆ. ಇಂಥ ತಾಣಗಳಲ್ಲೆಲ್ಲ ನಮ್ಮ ಮಾಹಿತಿಯನ್ನು ಕೊಟ್ಟು ಕೈಸುಟ್ಟುಕೊಂಡ ಅದೆಷ್ಟೋ ಪ್ರಕರಣಗಳು ನಮ್ಮ ಮುಂದಿರುವಾಗ, ಯಾವ್ಯಾವುದೋ ವೆಬ್ ಸೈಟ್ ಅಥವಾ ಆ್ಯಪ್‌ಗಳಲ್ಲಿ ವೈಯಕ್ತಿಕ ಮಾಹಿತಿ ನೀಡುವಾಗ ಎಚ್ಚರಿಕೆ ವಹಿಸದಿದ್ದರೆ, ಬ್ಯಾಂಕ್ ಖಾತೆಯಿಂದ ಹಣ ಹೋಗಬಹುದು ಅಥವಾ ನಮ್ಮ ಮೊಬೈಲ್ ಸಾಧನ, ಇಮೇಲ್ ಹ್ಯಾಕ್ ಆಗಬಹುದು.
ಈ ಎಚ್ಚರಿಕೆಯೊಂದಿಗೆ, ನಾವೇ ಈ ರೀತಿಯ ಚಿತ್ರಗಳನ್ನು ತಯಾರಿಸಬಹುದಾದ, ಹೆಚ್ಚು ಪ್ರಚಲಿತದಲ್ಲಿರುವ ಎಐ ಚಿತ್ರ ಜನರೇಟ್ ಮಾಡಿಕೊಡುವ ಎಂಜಿನ್‌ಗಳಲ್ಲಿ ಹೆಚ್ಚು ಇಷ್ಟವಾಗಿದ್ದು, ಮೈಕ್ರೋಸಾಫ್ಟ್‌ನವರು ರೂಪಿಸಿದ ಬಿಂಗ್ ಎಐ ಎಂಜಿನ್ (bing.com/images/create). ಇದರೊಂದಿಗೆ ಗೂಗಲ್‌ನ ಎಐ ಇಮೇಜ್ ಜನರೇಷನ್ ಎಂಬುದು ಸದ್ಯಕ್ಕೆ ಕೆಲವು ಅದೃಷ್ಟಶಾಲಿಗಳಿಗಷ್ಟೇ ಲಭ್ಯವಿದೆ. ಉಳಿದಂತೆ Canva, wepic.com, Getimg.ai ಮುಂತಾದವು ಇವೆ.
ಹೇಗೆ ರಚಿಸುವುದು?
ಈ ತಾಣಗಳಲ್ಲಿ ನಮ್ಮ ಕಲ್ಪನೆಯಲ್ಲಿ ಒಂದು ವಾಕ್ಯ ರಚಿಸಬೇಕು. ಉದಾಹರಣೆಗೆ, ಚಳಿಗಾಲದ ಸುಂದರ ಪ್ರಕೃತಿಯ ಮಧ್ಯೆ ಶಿರಾಡಿ ಘಾಟಿಯಲ್ಲಿ ರೈಲು ಪ್ರಯಾಣ – ಅಂತ ಬರೆದು ಅದರಿಂದ ಛಾಯಾಚಿತ್ರ, ಕಾರ್ಟೂನ್, ಕ್ಯಾನ್ವಾಸ್ (ವರ್ಣಚಿತ್ರ) ಮುಂತಾದವುಗಳನ್ನು ರಚಿಸಬೇಕಿದ್ದರೆ ಅದನ್ನೂ ಉಲ್ಲೇಖಿಸಬಹುದು. ಎಂಟರ್ ಕೊಟ್ಟ ತಕ್ಷಣ ಕೆಲವೇ ಕ್ಷಣಗಳಲ್ಲಿ ಇಂತಹ ಚಿತ್ರವೊಂದು ನಮ್ಮೆದುರು ಸಿದ್ಧವಾಗಿರುತ್ತದೆ. ಚಿತ್ರದಲ್ಲಿ ಏನಿರಬೇಕೆಂದು ನಾವು ಅಲ್ಲಿ ನೀಡುವ ಪ್ರಾಂಪ್ಟ್ ಹೆಸರಿನ ವಾಕ್ಯದಲ್ಲಿ ಪ್ರಮುಖ ಪದಗಳನ್ನು (ಕೀವರ್ಡ್ಸ್) ಅಳವಡಿಸುವ ಜಾಣ್ಮೆ ಇದ್ದರಾಯಿತು. ನಾವು ಕೊಡುವ ಪ್ರಾಂಪ್ಟ್‌ಗಳ ಆಧಾರದಲ್ಲಿ ನಮಗೆ ಚಿತ್ರ ದೊರೆಯುತ್ತದೆ. ಪೇಂಟಿಂಗ್ ರೂಪದಲ್ಲಿಯೋ, ಕ್ಯಾರಿಕೇಚರ್ ರೂಪದಲ್ಲಿಯೋ ಈ ಚಿತ್ರಗಳನ್ನು ಪಡೆಯವ ಆಯ್ಕೆಯೂ ಇರುತ್ತದೆ. ಬಿಂಗ್ ತಾಣದಲ್ಲಿ, ‘ಕಸ್ಟಮೈಸ್’ ಎಂಬ ಬಟನ್ ಮೂಲಕ ಅಥವಾ ನಮಗೆ ತಿಳಿದಿರುವ ಫೋಟೊ ಎಡಿಟಿಂಗ್ ತಂತ್ರಾಂಶಗಳ ಮೂಲಕ ಅದನ್ನು ನಮಗೆ ಬೇಕಾದಂತೆ ತಿದ್ದುಪಡಿ ಮಾಡಬಹುದು. ಹಾಗಂತ, ಕನ್ನಡ ವಾಕ್ಯಗಳಿಗೆ ಅಷ್ಟೊಂದು ಸರಿಯಾದ ಚಿತ್ರ ದೊರೆಯಲಾರದು. ಕನ್ನಡ ಅಥವಾ ಬೇರಾವುದೇ ಪ್ರಾದೇಶಿಕ ಭಾಷೆಯನ್ನು ಎಐ ಇನ್ನಷ್ಟೇ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ ಎಂಬುದು ಇದಕ್ಕೆ ಕಾರಣ (ಅನುವಾದದ ಎಂಜಿನ್ ಇನ್ನೂ ಪರಿಪೂರ್ಣವಲ್ಲ). ಸದ್ಯಕ್ಕೆ ಆಂಗ್ಲ ಭಾಷೆಯ ವಾಕ್ಯವನ್ನು ಅದು ಸರಿಯಾಗಿ ಅರ್ಥೈಸಿಕೊಳ್ಳುತ್ತದೆ.
ಎಲ್ಲರಿಗೂ ಕೈಗೆಟಕುತ್ತಿರುವ ಈ ಆಧುನಿಕ ತಂತ್ರಜ್ಞಾನದ ಸಕಾರಾತ್ಮಕ ಬಳಕೆಯಿದು ಎನ್ನಬಹುದಾದರೂ, ಅದನ್ನು ಬಳಸಿಯೇ ಹ್ಯಾಕರ್‌ಗಳು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಹೀಗಾಗಿ, ಅಂತರ್ಜಾಲದಲ್ಲಿರುವ ಎಲ್ಲ ಚಿತ್ರಗಳೂ ಅಸಲಿ ಆಗಿರಲಾರದು. ನಮ್ಮದೇ ಪ್ರೊಫೈಲ್ ಚಿತ್ರ, ನಮ್ಮ ಧ್ವನಿ, ನಮ್ಮ ವಿಡಿಯೊವನ್ನೂ ನಕಲಿಯಾಗಿ ತಯಾರಿಸಿ, ನಮ್ಮನ್ನೇ ವಂಚಿಸಬಹುದು. ಅಂತರ್ಜಾಲದಲ್ಲಿರುವ ಎಲ್ಲವನ್ನೂ ನಂಬಬಾರದು ಎಂಬುದು ಈ ಕಾಲದ ಅರಿವು.
Article by me (Avinash B) Published in Prajavani on 13 and 14 Dec 2023
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…