ಇಂಟರ್ನೆಟ್ ಜಾಲಾಟಕ್ಕೆ ಸುರಕ್ಷಿತ ಮಾರ್ಗ: ಪ್ರೈವೇಟ್ ವಿಂಡೋ ಬಳಸುವುದು ಹೇಗೆ?

0
293

Incognitoಇಂಟರ್ನೆಟ್ ಸೌಕರ್ಯದಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ಈ ದಿನಗಳಲ್ಲಿ ಕಂಪ್ಯೂಟರ್ ವೈರಸ್ ದಾಳಿ, ಖಾಸಗಿತನದ ಭಂಗ (ಪ್ರೈವೆಸಿ ಬ್ರೀಚ್) ಮುಂತಾದವುಗಳಿಂದಾಗಿ ಜಾಗತಿಕವಾಗಿ ಕಂಪ್ಯೂಟರ್ ಬಳಕೆದಾರರು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದ ವರದಿಯನ್ನು ಕೇಳುತ್ತಲೇ ಬಂದಿದ್ದೇವೆ. ಇಂಟರ್ನೆಟ್ ಮೂಲಕ ಜಾಲ ತಾಣಗಳನ್ನು ಜಾಲಾಡಲು (ಬ್ರೌಸಿಂಗ್) ವೆಬ್ ಬ್ರೌಸರ್ ಎಂಬ ಆ್ಯಪ್ ಅಥವಾ ತಂತ್ರಾಂಶದ ಅಗತ್ಯವಿದೆ ಎಂಬುದು ಎಲ್ಲರಿಗೂ ಗೊತ್ತು. ಇಂಟರ್ನೆಟ್ ಸಂಪರ್ಕವು ಈ ಬ್ರೌಸರ್ ಮೂಲಕವೇ ಏರ್ಪಡುವುದರಿಂದ ಸಾಕಷ್ಟು ಕಂಪನಿಗಳು ತಮ್ಮದೇ ಬ್ರೌಸರ್‌ಗಳನ್ನು ಬಿಡುಗಡೆಗೊಳಿಸಿವೆ. ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್/ಎಡ್ಜ್, ಗೂಗಲ್‌ನ ಕ್ರೋಮ್, ಮೋಝಿಲಾದ ಫೈರ್‌ಫಾಕ್ಸ್, ಒಪೆರಾ, ಸಫಾರಿ ಮುಂತಾದ ಬ್ರೌಸರುಗಳು ಇಂದು ಬಳಕೆದಾರರ ಖಾಸಗಿ ಮಾಹಿತಿಯ ಭದ್ರತೆಗಾಗಿ ತಮ್ಮದೇ ಆದ ಸುರಕ್ಷತಾ ವ್ಯವಸ್ಥೆಯನ್ನೂ ರೂಪಿಸಿವೆ. ಅದರ ಒಂದು ಭಾಗವೇ ಇನ್‌ಕಾಗ್ನಿಟೋ ಅಥವಾ ಪ್ರೈವೇಟ್ ಮೋಡ್ ಎಂಬ ವ್ಯವಸ್ಥೆ. ಅದೇನು ಮತ್ತು ಅದನ್ನು ನಾವೇಕೆ ಬಳಸಬೇಕು ಎಂಬುದನ್ನು ನೋಡೋಣ ಬನ್ನಿ.

Incognito Browsing afeಹೇಗೆ?: ಇನ್‌ಕಾಗ್ನಿಟೋ ವಿಂಡೋ ಅಥವಾ ಪ್ರೈವೇಟ್ ವಿಂಡೋ ಎಂಬುದು ಯಾವುದೇ ಬ್ರೌಸರ್‌ನಲ್ಲಿರಬಹುದಾದ ಸುರಕ್ಷಿತ ಬ್ರೌಸಿಂಗ್‌ಗೆ ಅವಕಾಶ ಮಾಡಿಕೊಡುವ ಒಂದು ವ್ಯವಸ್ಥೆ. ಇದನ್ನು ಬಳಸುವುದೆಂದರೆ ಕ್ಲಿಷ್ಟಕರ ರಾಕೆಟ್ ವಿಜ್ಞಾನವೇನಲ್ಲ. ಅತ್ಯಂತ ಸುಲಭ. ಉದಾಹರಣೆಗೆ, ಒಪೆರಾ ಹಾಗೂ ಗೂಗಲ್ ಕ್ರೋಮ್ ಬ್ರೌಸರ್‌ಗಳಲ್ಲಾದರೆ, ಕೀಬೋರ್ಡ್‌ನ ‘ಶಿಫ್ಟ್ ಕೀ’ ಹಾಗೂ ‘ಕಂಟ್ರೋಲ್ ಕೀ’ ಒಟ್ಟಿಗೇ ಒತ್ತಿಹಿಡಿದು, ಇಂಗ್ಲಿಷಿನ ‘ಎನ್’ ಬಟನ್ ಒತ್ತಿದರೆ ಹೊಸದೊಂದು ಬ್ರೌಸರ್ ವಿಂಡೋ ತೆರೆದುಕೊಳ್ಳುತ್ತದೆ. ಅದೇ ರೀತಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಮೋಝಿಲಾ ಫೈರ್‌ಫಾಕ್ಸ್‌ನಲ್ಲಾದರೆ, ಶಿಫ್ಟ್ + ಕಂಟ್ರೋಲ್ + ಪಿ ಬಟನ್ ಒತ್ತಿದಾಗ ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಇಲ್ಲವಾದಲ್ಲಿ, ಬ್ರೌಸರ್‌ನ ಮೇಲ್ಭಾಗದಲ್ಲಿರುವ ‘ಫೈಲ್’ ಅಥವಾ ‘ಟೂಲ್ಸ್’ ಮೆನು ಕ್ಲಿಕ್ ಮಾಡಿದರೆ, ಕಾಣಿಸಿಕೊಳ್ಳುವ ಡ್ರಾಪ್‌ಡೌನ್ ಮೆನುವಿನಲ್ಲಿ ಈ ಆಯ್ಕೆ ಗೋಚರಿಸುತ್ತದೆ. ಇದುವೇ ಇನ್‌ಕಾಗ್ನಿಟೋ ಅಥವಾ ಪ್ರೈವೇಟ್ ಅಥವಾ ಇನ್‌ಪ್ರೈವೇಟ್ ಬ್ರೌಸರ್. ಇದರಲ್ಲಿ ಮೇಲ್ಭಾಗದ ಎಡಮೂಲೆಯಲ್ಲಿ ಕನ್ನಡಕಧಾರಿ ಪತ್ತೆದಾರನೊಬ್ಬನ ಮುಖದ ಐಕಾನ್ ಕಾಣಿಸುತ್ತದೆ. ಏನೇ ಇಂಟರ್ನೆಟ್ ಜಾಲಾಡುವುದಿದ್ದರೂ ಈ ವಿಂಡೋದಲ್ಲಿಯೇ ಬ್ರೌಸಿಂಗ್ ಮಾಡಿದರಾಯಿತು. ಸ್ಮಾರ್ಟ್ ಮೊಬೈಲ್ ಫೋನ್‌ನಲ್ಲಿರುವ ಬ್ರೌಸರುಗಳಲ್ಲಿಯೂ ಈ ವ್ಯವಸ್ಥೆ ಇದೆ. ಅದಕ್ಕೆ ಬ್ರೌಸರ್ ಆ್ಯಪ್ ತೆರೆದು, ಅದರ ಸೆಟ್ಟಿಂಗ್ ಮೆನುವಿನಲ್ಲಿ ಈ ಆಯ್ಕೆ ಕಾಣಿಸುತ್ತದೆ.

ಪ್ರೈವೇಟ್ ವಿಂಡೋವನ್ನು ಯಾಕೆ ಬಳಸಬೇಕು ಎಂಬುದನ್ನು ಬಹಳ ಸುಲಭವಾಗಿ ಹೇಳಬಹುದಾದರೆ, ನಿಮ್ಮನ್ನು ಹಾಗೂ ನಿಮ್ಮ ಕಂಪ್ಯೂಟರನ್ನು ಇದು ಹ್ಯಾಕರ್‌ಗಳಿಂದ, ಕಂಪ್ಯೂಟರ್ ವೈರಸ್ ತಂತ್ರಾಂಶಗಳಿಂದ, ನಿಮ್ಮ ಖಾಸಗಿತನಕ್ಕೆ ಧಕ್ಕೆಯಾಗದಂತೆ ಬಹುಪಾಲು ಇದು ರಕ್ಷಿಸಬಲ್ಲುದು. ಅಂದರೆ, ಯಾರಿಗೂ ತಿಳಿಯದಂತೆ, ನಿಮ್ಮನ್ನು ಯಾರೂ ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡದಂತೆ ಬ್ರೌಸಿಂಗ್ ಮಾಡಬಹುದು ಎಂದೂ ತಿಳಿದುಕೊಳ್ಳಬಹುದು. ವಿದೇಶಗಳಲ್ಲೆಲ್ಲ ಇದನ್ನು ‘ಪೋರ್ನ್ ಮೋಡ್’ ಅಂತಲೂ ಕರೀತಾರೆ ಎಂಬುದು ಗೊತ್ತೇ? ಅಂದರೆ ಪೋರ್ನ್ (ಅಶ್ಲೀಲ) ವೆಬ್ ತಾಣಗಳನ್ನು ಈ ಮೋಡ್‌ನಲ್ಲಿ ವೀಕ್ಷಿಸಿದರೆ, ಬ್ರೌಸಿಂಗ್ ಮಾಡಿದ್ದು ಯಾರಿಗೂ ತಿಳಿಯುವುದಿಲ್ಲವೆಂಬ ಭರವಸೆ. ಇದಕ್ಕಾಗಿಯೇ ಈ ಹೆಸರು. ಆದರೆ ಇದನ್ನೇ ನಮ್ಮ ಅನುಕೂಲಕ್ಕಾಗಿ, ನಮ್ಮ ಭದ್ರತೆಗಾಗಿ ಬಳಸಿಕೊಳ್ಳಬಹುದು.

ಇನ್‌ಕಾಗ್ನಿಟೋ ಮೋಡ್‌ನ ಮುಖ್ಯ ಉದ್ದೇಶವೆಂದರೆ, ನಮ್ಮ ಅಂತರ್ಜಾಲದ ಜಾಲಾಟ ಚಟುವಟಿಕೆಗಳ ಜಾಡನ್ನು ಆ ಕಂಪ್ಯೂಟರ್ ಬಳಸುತ್ತಿರುವ ಬೇರೆಯವರಿಗೆ ತಿಳಿಯದಂತೆ ಮಾಡುವುದು. ಬ್ರೌಸರ್ ಮುಚ್ಚಿದಾಗ (ಕ್ಲೋಸ್ ಮಾಡಿದಾಗ) ನಿಮ್ಮ ಬ್ರೌಸಿಂಗ್ ಚರಿತ್ರೆಯಾಗಲೀ ಸರ್ಚ್ ಹಿಸ್ಟರಿಯಾಗಲೀ ಸ್ವಯಂಚಾಲಿತವಾಗಿ ಅಳಿಸಿಹೋಗುತ್ತದೆ. ಅಂದರೆ ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ಕುಕೀಸ್/ಟೆಂಪರರಿ ಇಂಟರ್ನೆಟ್ ಫೈಲ್ಸ್ ಯಾವುದು ಕೂಡ ನಿಮ್ಮ ಕಂಪ್ಯೂಟರಲ್ಲಿ ಸ್ಟೋರ್ ಆಗುವುದಿಲ್ಲ.

ಆದರೆ, ನಿಮ್ಮ ಇಂಟರ್ನೆಟ್ ಸೇವಾದಾತರು (ಇಂಟರ್ನೆಟ್ ಸರ್ವಿಸ್ ಪ್ರೊವೈಡರ್) ಇಲ್ಲವೇ, ಆನ್‌ಲೈನ್‌ನಲ್ಲಿ ನಿಮ್ಮ ಮೇಲೆ ಹದ್ದಿನ ಕಣ್ಣಿಡುವವರಿಂದ ಏನನ್ನೂ ಬಚ್ಚಿಡಲಾಗುವುದಿಲ್ಲ ಎಂಬುದು ನೆನಪಿರಲಿ.

ಪ್ರಮುಖ ಉಪಯೋಗಗಳು:
ನಿಮ್ಮ ಆಸಕ್ತಿಗಳ ಕುರಿತ ಟ್ರ್ಯಾಕಿಂಗ್ ತಡೆ: ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿಸಲು ನೀವು ಸರ್ಚ್ ಮಾಡುತ್ತೀರಿ. ಈ ಸಂದರ್ಭದಲ್ಲಿ ನಾವು ಪ್ರೈವೇಟ್ ಅಥವಾ ಇನ್‌ಕಾಗ್ನಿಟೋ ವಿಂಡೋವನ್ನೇ ಬಳಸುವುದು ಸೂಕ್ತ. ಯಾಕೆಂದರೆ, ನೀವು ಏನನ್ನು ಸರ್ಚ್ ಮಾಡಿದ್ದೀರಿ ಎಂಬುದನ್ನು ಆಧರಿಸಿ, ನಿಮಗೆ ಅದರ ಕುರಿತಾದ ಜಾಹೀರಾತುಗಳು ಮತ್ತೆ ಮತ್ತೆ ಕಾಣಿಸುವಂತಾಗುತ್ತದೆ. ಉದಾಹರಣೆಗೆ, ನೀವೊಂದು ಸ್ಯಾಮ್ಸಂಗ್ ಮೊಬೈಲ್ ಖರೀದಿಗೆ ಆಸಕ್ತಿ ತೋರಿಸಿ ಸರ್ಚ್ ಮಾಡಿದ ಬಳಿಕ, ಯಾವುದೇ ವೆಬ್ ಸೈಟ್ ತೆರೆದರೂ ನಿಮ್ಮ ಸೋಷಿಯಲ್ ಮೀಡಿಯಾ ಪುಟಗಳಲ್ಲಿಯೂ ಆ ವಸ್ತುವಿನ ಜಾಹೀರಾತು ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸುತ್ತದೆ. ಇದು ಕಿರಿಕಿರಿಯಾಗಬಹುದು. ಅದನ್ನು ತಡೆಯಲು ಪ್ರೈವೇಟ್ ವಿಂಡೋ ಸೂಕ್ತ. ಕೆಲವೊಮ್ಮೆ ನಿಮ್ಮ ಆಸಕ್ತಿಯ ಆಧಾರದಲ್ಲಿ ನಕಲಿ ವೆಬ್ ಸೈಟುಗಳು ಕೂಡ ಅತ್ಯಂತ ಕಡಿಮೆ ಬೆಲೆಗೆ ಲಭ್ಯವೆಂದು ಆ ವಸ್ತುವನ್ನು ತೋರಿಸುವ ಸಾಧ್ಯತೆಯೊಂದಿಗೆ ಬೇರೆ ವೆಬ್ ತಾಣಗಳಿಗೆ ಲಿಂಕ್ ಕ್ಲಿಕ್ ಮಾಡಿಸುವ ಆತಂಕ ಇರುತ್ತದೆ.

ಹಲವು ಖಾತೆಯ ಸೈನ್-ಇನ್‌ಗೆ: ನೀವು ಗಮನಿಸಿರಬಹುದು – ನಿಮ್ಮ ಒಂದು ಜಿಮೇಲ್ ಖಾತೆಗೆ ಲಾಗಿನ್ ಆಗಿದ್ದಾಗ, ಬೇರೆ ಟ್ಯಾಬ್‌ನಲ್ಲಿ ಮತ್ತೊಂದು ಜಿಮೇಲ್ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಇನ್‌ಕಾಗ್ನಿಟೋ ವಿಂಡೋ ಬಳಸಬಹುದು. ಎರಡು ಟ್ಯಾಬ್‌ಗಳಲ್ಲಿ ಎರಡು ಅಥವಾ ಹೆಚ್ಚು ಇಮೇಲ್ ಇಲ್ಲವೇ ಸೋಷಿಯಲ್ ಖಾತೆಗಳಿಗೆ ಸೈನ್ ಇನ್ ಆಗುವುದಕ್ಕೆ ಪ್ರೈವೇಟ್ ವಿಂಡೋ ನಿಮಗೆ ಅವಕಾಶ ಕಲ್ಪಿಸುತ್ತದೆ.

ಅನ್ಯರ ಕಂಪ್ಯೂಟರಲ್ಲಿ ಇಮೇಲ್/ಫೇಸ್‌ಬುಕ್ ಚೆಕ್ ಮಾಡಬೇಕೆಂದಾಗ: ಬೇರೆಯವರ ಮನೆಯಲ್ಲಿ ಅಥವಾ ವಿಶೇಷವಾಗಿ ಸೈಬರ್ ಕೆಫೆಗಳಲ್ಲಿ ನಿಮ್ಮ ಇಮೇಲ್ ಅಥವಾ ಫೇಸ್‌ಬುಕ್ ಖಾತೆಗಳಿಗೆ ಲಾಗಿನ್ ಆಗಿ ನೋಡಬೇಕೆಂದಿದ್ದರೆ, ಈ ಮೋಡ್ ಬಳಸಿ. ನೀವು ವಿಂಡೋವನ್ನು ಕ್ಲೋಸ್ ಮಾಡಿದ ಬಳಿಕ ಅದರ ಜಾಡು (ಕುಕೀಸ್) ಅಳಿಸಿಹೋಗುವುದರಿಂದ ನಿಮ್ಮ ಇಂಟರ್ನೆಟ್ ಚಟುವಟಿಕೆಯು ಸುರಕ್ಷಿತವಾಗಿರುತ್ತದೆ. ವಿಶೇಷವಾಗಿ ಬ್ಯಾಂಕಿಂಗ್ ವಹಿವಾಟು ಆನ್‌ಲೈನ್‌ನಲ್ಲಿ ಮಾಡುವಾಗ ಇದನ್ನೇ ಬಳಸಿ. ನೆನಪಿಡಿ, ಇದೇ ವಿಂಡೋದಲ್ಲಿ ಬ್ರೌಸ್ ಮಾಡುತ್ತಿರುವಾಗ ಪಾಪ್-ಅಪ್ ವಿಂಡೋ ಕಾಣಿಸಿಕೊಂಡರೆ, ಅದು ಮಾತ್ರ ಪ್ರೈವೇಟ್ ಆಗಿರುವುದಿಲ್ಲ.

ಸರ್ಚ್ ಮಾಡಲು: ಗೂಗಲ್ ಮೂಲಕ ನೀವು ಏನಾದರೂ ಸರ್ಚ್ ಮಾಡುವುದಿದ್ದರೆ ಈ ವಿಂಡೋ ಬಳಸುವುದು ಸೂಕ್ತ. ನಿಮ್ಮ ಆಸಕ್ತಿಯನ್ನು ಹಾಗೂ ಸರ್ಚ್ ಇತಿಹಾಸವನ್ನು ಆಧರಿಸಿಯೇ ಸರ್ಚ್ ರಿಸಲ್ಟ್ ಕಾಣಿಸುವುದರಿಂದ ಅದು ನಿಖರವಾಗಿರಲಾರದು. ಇನ್‌ಕಾಗ್ನಿಟೋ ಬಳಸಿದಾಗ ದೊರೆಯುವ ಸರ್ಚ್ ಫಲಿತಾಂಶ ಹೆಚ್ಚು ನಿಖರವಾಗಿರುತ್ತದೆ. ಅಲ್ಲದೆ, ನೀವು ಏನನ್ನು ಸರ್ಚ್ ಮಾಡಿದಿರಿ ಎಂಬುದು ಅದೇ ಕಂಪ್ಯೂಟರ್ ಬಳಸುವ ಇತರರಿಗೆ ತಿಳಿಯದಂತಿರಲು ಈ ಮೋಡ್ ಬಳಸಬಹುದು.

ವಿಜಯ ಕರ್ನಾಟಕದಲ್ಲಿ ಮಾಹಿತಿ@ತಂತ್ರಜ್ಞಾನ ಅಂಕಣ: ಅವಿನಾಶ್ ಬಿ. 23 ಅಕ್ಟೋಬರ್ 2017

LEAVE A REPLY

Please enter your comment!
Please enter your name here