ವೈಫೈ ಡಾಂಗಲ್‌ನಿಂದ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿ

0
429

ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿರುವುದು ಇಂಟರ್ನೆಟ್ ಸ್ಪೀಡ್. ಝೂಮ್, ಸ್ಕೈಪ್, ಗೂಗಲ್ ಮೀಟ್, ಮೈಕ್ರೋಸಾಫ್ಟ್ ಟೀಮ್ಸ್ – ಇತ್ಯಾದಿಗಳ ಮೂಲಕ ಕಚೇರಿ ವಿಡಿಯೊ ಕಾನ್ಫರೆನ್ಸ್, ಮೀಟಿಂಗ್, ಫೈಲ್ ವರ್ಗಾವಣೆಗೆಲ್ಲ ಅತ್ಯುತ್ತಮ ಇಂಟರ್ನೆಟ್ ಸಂಪರ್ಕ ಬೇಕೇ ಬೇಕು. ಇದರೊಂದಿಗೆ, ಆನ್‌ಲೈನ್ ಶಿಕ್ಷಣ, ಮನರಂಜನೆಗಾಗಿ ಸ್ಟ್ರೀಮಿಂಗ್ ಆ್ಯಪ್‌ಗಳ ಮೂಲಕ ಚಲನಚಿತ್ರ, ವಿಡಿಯೊ ವೀಕ್ಷಿಸುವವರೂ ಬಫರಿಂಗ್ ಆಗುವ ವಿಡಿಯೊಗಳಿಂದ ರೋಸಿ ಹೋಗುತ್ತಾರೆ.

ಏರ್‌ಟೆಲ್, ಜಿಯೋ, ವೊಡಾಫೋನ್, ಬಿಎಸ್ಸೆನ್ನೆಲ್ ಮುಂತಾದ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳ (ಐಎಸ್‌ಪಿ) ಕಸ್ಟಮರ್ ಕೇರ್‌ಗೆ ದೂರು ನೀಡಿದರೆ ಸೂಕ್ತ ಸ್ಪಂದನೆಯಿಲ್ಲ; ಇಂಟರ್ನೆಟ್ ಬಳಕೆ ಜಾಸ್ತಿಯಾಗಿರುವುದರಿಂದಾಗಿ ಡೇಟಾ ದಟ್ಟಣೆ ಹೆಚ್ಚಾಗಿದೆ ಎಂಬ ಸಮಜಾಯಿಷಿಯೊಂದಿಗೆ ಬೂಸ್ಟರ್, ರಿಪೀಟರ್ ಬಳಸಿ ಎಂಬ ಸಲಹೆಯೂ ಬರುತ್ತದೆ.

ಬ್ರಾಡ್‌ಬ್ಯಾಂಡ್ ಬಳಸುವವರಿಗೆ ಹೋಲಿಸಿದರೆ ಯುಎಸ್‌ಬಿ ಡಾಂಗಲ್ ಅಥವಾ ವೈಫೈ ಡಾಂಗಲ್ ಬಳಕೆದಾರರ ಇಂಟರ್ನೆಟ್ ವೇಗದ್ದೇ ಸಮಸ್ಯೆ. ನೆಟ್‌ವರ್ಕ್ ಸಿಗ್ನಲ್ ಪಡೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.

  • ವೈಫೈ ಡಾಂಗಲ್ ಅಥವಾ ವೈರ್‌ಲೆಸ್ ರೂಟರ್ ಅನ್ನು ಮುಕ್ತವಾದ, ಸಿಗ್ನಲ್ ಸುಲಭಗ್ರಾಹ್ಯವಾಗುವ ಜಾಗದಲ್ಲಿ ಇರಿಸಬೇಕಾಗುತ್ತದೆ. ಇದು ಸಿಗ್ನಲ್ ಸ್ವೀಕರಿಸುವುದಕ್ಕೂ, ಅದರ ಇಂಟರ್ನೆಟ್ ಸಂಪರ್ಕವನ್ನು ಬೇರೆ ಸಾಧನಗಳಿಗೆ ವಿತರಿಸುವುದಕ್ಕೂ ಅನುಕೂಲ.
  • ವೈಫೈ ರೂಟರ್ ಮತ್ತು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಎಷ್ಟು ಸಾಧ್ಯವೋ ಅಷ್ಟು ಸಮೀಪ ಇರಬೇಕು. ಮಧ್ಯೆ ಗೋಡೆಯಂತಹಾ ಅಡಚಣೆಯಿರುವುದು ಅಥವಾ ಮಹಡಿಯ ಅಡಚಣೆಯೂ ವೈಫೈ ಸಿಗ್ನಲ್ ದುರ್ಬಲವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಗಮನದಲ್ಲಿರಲಿ.
  • ಕಚೇರಿಯ ಕೆಲಸದಲ್ಲಿ ಅತ್ಯಂತ ಮಹತ್ವದ್ದಾಗಿರುವ ಆನ್‌ಲೈನ್ ಮೀಟಿಂಗ್ ಅಥವಾ ದೊಡ್ಡ ಫೈಲ್ ವರ್ಗಾವಣೆಗಳ ಸಂದರ್ಭದಲ್ಲಿ ಮನೆಯಲ್ಲಿರುವ ಇದೇ ವೈಫೈಯನ್ನು ಬೇರೆಯವರು ಬಳಸದಂತೆ ನೋಡಿಕೊಳ್ಳಿ. ಯಾಕೆಂದರೆ, ವೈಫೈ ರೂಟರ್‌ಗೆ ಸಂಪರ್ಕಗೊಂಡಿರುವ ಸಾಧನಗಳ ಸಂಖ್ಯೆಯು ಕೂಡ (ಅವರೂ ಇಂಟರ್ನೆಟ್ ಬಳಸಿದಲ್ಲಿ) ಇಂಟರ್ನೆಟ್ ವೇಗ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ವೈಫೈ ರೂಟರ್ ಅನ್ನು ಮೈಕ್ರೋವೇವ್, ಕಾರ್ಡ್‌ಲೆಸ್ ಫೋನ್ ಮುಂತಾದ ಬೇರೆ ಎಲೆಕ್ಟ್ರಾನಿಕ್ ಸಾಧನಗಳ ಸಮೀಪದಲ್ಲಿರಿಸಿದರೆ ತರಂಗಾಂತರಗಳ ಸಂಘರ್ಷವೇರ್ಪಟ್ಟು ಸಿಗ್ನಲ್‌ಗೆ ಅಡಚಣೆಯಾಗಬಹುದು.
  • ಕೆಲವು ವೈಫೈ ರೂಟರ್‌ಗಳಲ್ಲಿ ಆಂಟೆನಾಗಳಿರುತ್ತವೆ. ಅವುಗಳಲ್ಲಿ ಒಂದನ್ನು ಲಂಬವಾಗಿಯೂ, ಒಂದನ್ನು ಅಡ್ಡವಾಗಿಯೂ ತಿರುಗಿಸಿಟ್ಟರೆ ಸಂಪರ್ಕ ಏರ್ಪಡಿಸಲು ಅನುಕೂಲ.
  • ರೂಟರ್‌ನಿಂದ ಲಭ್ಯವಾಗುವ ಇಂಟರ್ನೆಟ್ ಸಂಪರ್ಕವು ಯಾವ ಜಾಗದಲ್ಲಿ ಗರಿಷ್ಠ ಲಭ್ಯವಾಗುತ್ತದೆ ಎಂಬುದನ್ನು ತಿಳಿಯಲು ಕ್ಲೌಡ್‌ಚೆಕ್ ಮುಂತಾದ ಆ್ಯಪ್‌ಗಳ ನೆರಲನ್ನೂ ಪಡೆಯಬಹುದಾಗಿದೆ.
  • ಹೊಸದಾಗಿ ಖರೀದಿಸುವುದಿದ್ದರೆ ಅತ್ಯಾಧುನಿಕ ವೈಫೈ-6 ತಂತ್ರಜ್ಞಾನದ ವೈಫೈ ರೂಟರ್‌ಗಳು ಸೂಕ್ತ.
  • ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಸರ್ವಿಸ್ ಪ್ರೊವೈಡರ್. ನೀವು ಇರುವ ಏರಿಯಾದಲ್ಲಿ ಯಾವ ಕಂಪನಿಯ ವೈಫೈ ಡಾಂಗಲ್ ಅತ್ಯುತ್ತಮವಾಗಿ ಇಂಟರ್ನೆಟ್ ಸಂಪರ್ಕ ಒದಗಿಸಬಹುದು ಅಂತ ಮೊದಲೇ ತಿಳಿದುಕೊಳ್ಳಿ. ಅವರಿಂದ ಡೆಮೋ ಮಾಡಿಸಿಯೇ ವೈಫೈ ರೂಟರ್ ಖರೀದಿಸುವುದು ಒಳ್ಳೆಯದು.

My article published in Prajavani on Jul 10, 2020

LEAVE A REPLY

Please enter your comment!
Please enter your name here